ನನಸಾಗದ ಕನಸುಗಳು... ಕೈಗೂಡದ ಆಸೆಗಳು.

 










ನನ್ನ ಲೇಖನಕ್ಕೆ ಪ್ರತಿಕ್ರಯಿಸುತ್ತ... ಸ್ನೇಹಿತ ನಾಗೇಂದ್ರ ಬಾಬು ಬರೆದ ಒಂದು ಸಾಲು ಹೀಗಿತ್ತು...
  ' ನಿಮ್ಮ ಮುಂದಿನ ಲೇಖನ...ನಿಮಗೆ ಇಚ್ಛೆ ಇದ್ದು ಅನುಭವಕ್ಕೆ ಬಾರದ ಘಟನೆ ಬಗ್ಗೆ ಬರಲಿ ಎಂದು ನನ್ನ ಅಪೇಕ್ಷೆ....' 
ಎಲ್ಲೋ ಒಂದು ಎಳೆ ಮನಸ್ಸಿನಲ್ಲಿದ್ದರೂ ಬರೆಯಲು ಬೇಕಾದಷ್ಟು ಸ್ಪೂರ್ತಿ ಇರಲಿಲ್ಲ... ಮೇಲಿನ ಸಾಲು ಓದಿದ ಮೇಲೆ.. ಮನಸ್ಸು ಮಥಿಸಿತು... ಆಗ ಹೊಳೆದದ್ದೇ ಶೀರ್ಷಿಕೆ   " ನನಸಾಗದ ಕನಸುಗಳು... ಕೈಗೂಡದ ಆಸೆಗಳು." ಪರಿಣಾಮವೇ ಈ ಲೇಖನ... 

Dreams that came true ಎಂಬ ಹೆಸರಿನ ಇಂಗ್ಲೀಷ್ ಪಾಠ ಹೈಸ್ಕೂಲ್ ನಲ್ಲಿ ಇತ್ತು. ವೈಜ್ಞಾನಿಕ ಆವಿಷ್ಕಾರಗಳು.. ಶುರುವಾದದ್ದು ಕನಸು/ ಕಲ್ಪನೆಗಳ ಮೂಲಕ... ಜಾನ್ ಲೋಗೀ ಬೇರ್ಡ್..
ಟೆಲಿವಿಷನ್  ಕನಸನ್ನು ನನಸಾಗಿದ್ದ ವಿಷಯ ಆ ಪಾಠದಲ್ಲಿತ್ತು. 
ಎಷ್ಟೋ ಕನಸುಗಳು / ಕಲ್ಪನೆಗಳು / ಆಸೆಗಳು ನಾನಾ ಕಾರಣಗಳಿಂದ ಕೈಗೂಡದೆ ಇರುವುದು.. ಎಲ್ಲರ ಜೀವನದಲ್ಲೂ ಸಾಮಾನ್ಯ. ಅವಶ್ಯಕತೆಯೇ ಅನ್ವೇಷಣೆಗೆ ಅಮ್ಮ ( necessity is the mother of invention) ಎನ್ನುವ ಮಾತಿನಂತೆ, ಮನುಷ್ಯನಿಗೆ ಅನುಕೂಲವಾಗಲು ಬೇಕಾದ ಪರಿಕರಗಳನ್ನು ಅನ್ವೇಷಿಸುವುದೇ ಸಾಮಾನ್ಯ ಗುಣ. ದುರ್ದೈವವೆಂದರೆ ಈ ಅನ್ವೇಷಣೆಗಳ ನೈಜ ಉಪಯೋಗಕ್ಕಿಂತ ಅಡ್ಡ ಪರಿಣಾಮ ಬೀರುವ ಭಾಗವೇ ಹೆಚ್ಚು ಉಪಯೋಗವಾಗುತ್ತಿದೆ.

ನಮ್ಮ ಮಾಜಿ ರಾಷ್ಟ್ರಪತಿ APJ ಅಬ್ದುಲ್ ಕಲಾಮ್ ಅವರು ಮಕ್ಕಳಿಗೆ ಕೊಡುತ್ತಿದ್ದ ಸಂದೇಶ   ' dream big' ... ಕನಸು ಬರೀ ನಿದ್ದೆಗೆ ಸಿಮೀತವಾಗಿಯಲ್ಲ. ನನಸು ಮಾಡಲು ನಿದ್ದೆಯನ್ನು ಕೆಡಿಸುವಂಥದ್ದು. ಇದು ಧನಾತ್ಮಕ  ಮುಖ. ಇನ್ನೊಂದು ಮುಖವಿರುವುದು
ಅಷ್ಟೇ ಸತ್ಯ.. ಕನಸು ಕಂಡು ನನಸಾಗದ / ನನಸು ಮಾಡಲಾಗದ ಋಣಾತ್ಮಕ ಮುಖ. 
 ನನ್ನ ಆ ಮುಖದ ಅನಾವರಣ ಇದೋ ನಿಮ್ಮ ಮುಂದೆ.

ಅಮ್ಮನ  ಸೌಖ್ಯ :

ನನ್ನಮ್ಮ ಮಕ್ಕಳನ್ನು ಮುಂದೆ ತರಲು ಸಾಕಷ್ಟು ಕಷ್ಟಗಳನ್ನು ಪಟ್ಟವಳು. ತನ್ನಲ್ಲಿದ್ದ ಚೂರುಪಾರು ಚಿನ್ನವನ್ನು ಮಕ್ಕಳ ಓದಿಗಾಗಿ ಕೊಟ್ಟವಳು. ಅವಳನ್ನು ಸುಖವಾಗಿ ಇರುವಂತೆ ಮಾಡುವುದು ನನ್ನ ಮಹದಾಸೆಯಾಗಿತ್ತು. ಇದ್ದ ಕೆಲಸವನ್ನು ಬಿಟ್ಟು... ಸಣ್ಣ ಕಾರ್ಖಾನೆ ಶುರು ಮಾಡಿ... ಹಣಕಾಸಿನ ಮುಗ್ಗಟ್ಟು ಇದ್ದ ಸಮಯ.    ಅಮ್ಮನಿಗೆ ಹಣ ಕೊಡಬೇಕಾದಾಗ.. ನನ್ನಲ್ಲಿರುವ ಸ್ವಲ್ಪವೇ ಹಣವನ್ನು ಬೊಗಸೆಯಲ್ಲಿ ಅವಳ ಮುಂದೆ ಹಿಡಿದಾಗ... ಬಹಳಷ್ಟು ಸಲ ತೆಗೆದುಕೊಳ್ಳುತ್ತಿದ್ದದ್ದು ಕಡಿಮೆ ಮುಖಬೆಲೆಯ ನೋಟನ್ನೆ. 
ನನ್ನ ಮಡದಿಯ ಒತ್ತಾಸೆಯಿಂದ.. ಅಮ್ಮನಿಗೆ ಮಾಡಿಸಿಕೊಟ್ಟದ್ದು ಚಿನ್ನದ ಎರಡು ಗುಂಡು ಮಾತ್ರ, ಅದೂ ಅನಿವಾರ್ಯ ಪರಿಸ್ಥಿತಿಯಲ್ಲಿ.
ಹಣಕಾಸಿನ ಕೊರತೆ ಇಲ್ಲದೆ ಸುಖಪಡುವ ಯೋಗ ಅವಳಿಗೆ ಬರಲಿಲ್ಲ... ಅವಳೇ ಹೇಳುತ್ತಿದ್ದಂತೆ        'ರಾಜಯೋಗ ದರಿದ್ರ ರಾಶಿ' ಸತ್ಯವೇ ಆಯಿತು. 
ನಾನು ಒಂದು ಹಂತಕ್ಕೆ ಬಂದು... ಹಣಕಾಸಿನ ಸ್ಥಿರತೆ ಪಡೆಯುವಷ್ಟರಲ್ಲಿ ನನ್ನಮ್ಮ ನಮ್ಮನ್ನು ಬಿಟ್ಟು ದೂರ ಹೋಗಿದ್ದಳು. ಇದ್ದುದರಲ್ಲಿ ತೃಪ್ತಿಯಿಂದ/ ಸಂತೋಷದಿಂದ ಇರುತ್ತಿದ್ದ ಅಮ್ಮನಿಗೆ... ಏನು ಮಾಡಲೂ ಹಣಕಾಸಿನ ಲೆಕ್ಕಾಚಾರ ಹಾಕಬೇಕಾಗಿದ್ದ ಪರಿಸ್ಥಿತಿಯಿಂದ ಹೊರತಂದು ಒಂದಷ್ಟು ನೆಮ್ಮದಿ ಕೊಡಬೇಕು ಎನ್ನುವ ನನ್ನ ಆಸೆ ಆಸೆಯಾಗಿಯೇ ಉಳಿದುಹೋಯಿತು. ಈ ಒಂದು ಕೊರಗು ನನ್ನನ್ನು ಬಹಳ ಕಾಡುತ್ತದೆ.

ಅಪ್ಪನ ಊಟದ ಶಿಸ್ತು 

ನಮ್ಮಪ್ಪ, ನಾ ಕಂಡಂತೆ ದಿನದಲ್ಲಿ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದದ್ದು. ರಾತ್ರಿಯ ಊಟ ಮಾಡಿದ್ದು ನಾನು ನೋಡಿದ ನೆನಪಿಲ್ಲ. ಯಾವುದೇ ಕಾರಣದಿಂದ ಮಧ್ಯಾಹ್ನದ ಊಟ ತಪ್ಪಿದ್ದರೆ ಅಥವಾ ರಾತ್ರಿಯ ಸಮಯದಲ್ಲೇ ಊಟ ಮಾಡಬೇಕಾದ ಅನಿವಾರ್ಯತೆ ಇದ್ದಾಗ ಮಾತ್ರ... ಮಧ್ಯಾಹ್ನದ ಊಟದ ಬದಲು ರಾತ್ರಿ ಮಾಡುತ್ತಿದ್ದದ್ದು. ಅವರು ಶಿಸ್ತಿನಿಂದ ಇದ್ದುದರಲ್ಲೇ ತೃಪ್ತಿಯಿಂದ ಊಟ ಮಾಡುತ್ತಿದ್ದ,  ರೀತಿ ನನಗೆ ಇಷ್ಟವಾಗುತ್ತಿತ್ತು. ನಮ್ಮಪ್ಪನಂತೆ ನಾನು ಸಹ ದಿನಕ್ಕೆ ಒಂದು ಹೊತ್ತು ಊಟ ಮಾಡಬೇಕೆಂದು ನಿರ್ಧಾರ ಮಾಡಿ, ದಶಕವೇ ಕಳೆದಿದೆ.. ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಈಗ ವಾರಕ್ಕೆ ಮೂರು ದಿನ ಮಾತ್ರ ಒಂದು ಹೊತ್ತು ಊಟ ಮಾಡಿದರೂ.. ರಾತ್ರಿ ಏನಾದರೂ ತಿನ್ನಲು ಬೇಕೇ ಬೇಕು. ಇದು ಬಹು ಮುಖ್ಯವಾದ, ಇನ್ನೂ  ಸಾಧಿಸಲಾಗದ ಒಂದು ಆಸೆ

ಇಂಜಿನಿಯರಿಂಗ್ ಪದವೀಧರ ಆಗುವ ಆಸೆ:

ಹೈಸ್ಕೂಲ್ ಎರಡನೆಯ ವರ್ಷದಲ್ಲಿ optional subjects ಆಯ್ಕೆ ಮಾಡುವ ಒಂದು ಸವಾಲು ನನ್ನ ಮುಂದೆ. ಒಂದು ಪ್ರತೀತಿ ಇತ್ತು ಲೆಕ್ಕದಲ್ಲಿ ಗಟ್ಟಿ ಇರುವವರು ಸೈನ್ಸ್ ಓದಲು ಅರ್ಹರು ಎಂದು.. ಯಾರ ಸಲಹೆ/ ಸೂಚನೆಯೋ,  ನಾನು ಆಯ್ಕೆ ಮಾಡಿದ್ದು PCM. ಮುಂದೆ ಏನು ಎಂದು ತಿಳಿಯದ.. ಯೋಚಿಸದ ನಿರ್ಧಾರ. ಹೈಸ್ಕೂಲ್ ಆದ ನಂತರ ಕಾಲೇಜು... ಪಿಯುಸಿ ಯಲ್ಲಿ PCM ನಲ್ಲಿ 300 ಕ್ಕೆ 226 ಅಂಕ ಗಳಿಸಿದ್ದೆ. ಇಂಜಿನಿಯರಿಂಗ್  ಸೀಟ್ ಸಿಗುತ್ತೆ ಅನ್ನುವ ಕನಸು ಹೊತ್ತು... ಅಪ್ಲಿಕೇಶನ್ ಹಾಕಿದೆ.  ಆಗೆಲ್ಲ CET ಪರೀಕ್ಷೆ ಇರಲಿಲ್ಲ.... ಒಂದು ಇಂಟರ್ವ್ಯೂ ಅಂತ ಮಾಡಿ ಸೆಲೆಕ್ಷನ್ ಆಗುತ್ತಿತ್ತು. ಅಲ್ಲಿ ಒಂದಷ್ಟು ಪ್ರಭಾವ, ಶಿಫಾರಸು ನಡೆಯುತ್ತಿದ್ದದ್ದು ಜನಜನಿತ. ಆ ಎರಡೂ ಇಲ್ಲದವ ನಾನು. ಕಡಿಮೆ ಅಂಕ ತೆಗೆದವರಿಗೆ ಸೀಟು ಕೊಟ್ಟು, ಹೆಚ್ಚು ಅಂಕ ತೆಗೆದವರಿಗೆ ಕೊಡದಿದ್ದಾಗ..  ಕೆಲವು   ಶಕ್ತಿಯುತ ಜನರು ಹೈ ಕೋರ್ಟ್ ನಲ್ಲಿ  ರಿಟ್ ಹಾಕಿ ಸೀಟ್ ಅನ್ನು ಪಡೆಯುತ್ತಿದ್ದದ್ದೂ ಉಂಟು..  ರಿಟ್ ಅಯ್ಯಂಗಾರ್ ಎನ್ನುವವರು ಆಗಿನ ಕಾಲಕ್ಕೆ ಈ ವಿಚಾರದಲ್ಲಿ ಸುಪ್ರಸಿದ್ದರು.
ನನಗೆ ಮೊದಲ ಲಿಸ್ಟ್ ನಲ್ಲೆ ಸೀಟು ಸಿಕ್ಕಿತ್ತು... ಆದರೆ ಅದು ಹಾಸನದಲ್ಲಿ.  ಹಾಸನದಲ್ಲಿ ಓದಿಸ ಬೇಕಾದರೆ ಬರುವ ಖರ್ಚನ್ನು ನಿಭಾಯಿಸುವಂಥ ಪರಿಸ್ಥಿತಿ ಮನೆಯಲ್ಲಿ ಇರಲಿಲ್ಲ.   ಬೆಂಗಳೂರಿಗೆ ಬದಲಾಯಿಸಿಕೊಳ್ಳಲು... ಮೊದಲು ಹಾಸನದಲ್ಲಿ ಸೇರಿ ನಂತರ ಪ್ರಯತ್ನ ಮಾಡಬೇಕಿತ್ತು... ಆ ಧೈರ್ಯವೂ ಇರಲಿಲ್ಲ.  ಹಾಗಾಗಿ ಅದನ್ನು ಬಿಟ್ಟು... ಡಿಪ್ಲೊಮಾ ಓದಿದರೆ ಬೇಗ ಕೆಲಸ ಸಿಗುತ್ತೆ ಅನ್ನುವ ಕಾರಣದಿಂದ S.J.polytechnic ಸೇರಿದ್ದಾಯಿತು. 

ಆನಂತರ ಎಷ್ಟೋ ಸಲ ಅನ್ನಿಸಿದ್ದಿದೆ... ಭಿಕ್ಷಾನ್ನ ಮಾಡಿ, ವಾರಾನ್ನ ಮಾಡಿ, ಸಣ್ಣ ಪುಟ್ಟ ಕೆಲಸ ಮಾಡಿ ಓದು ಮುಂದುವರಿಸಿದವರು ಬಹಳಷ್ಟು ಜನ ಇದ್ದಾರೆ... ನನಗೆ ಪಾಠ ಹೇಳಿ ಕೊಡುವ ಅಭಿರುಚಿ ಇದ್ದಿದ್ದನ್ನು ಉಪಯೋಗಿಸಿಕೊಂಡು ಸಂಪಾದನೆ  ಮಾಡಬಹುದಿತ್ತೇನೋ... ಯೋಚಿಸಿ ನಿರ್ಧಾರ ಮಾಡುವ ವ್ಯವಹಾರ ಚಾತುರ್ಯ... ಅದಕ್ಕೆ ಬೇಕಾದ ಧೈರ್ಯ , ಸಾಧಿಸಲೇಬೇಕು ಎನ್ನುವ ಕೆಚ್ಚು ಇರಲಿಲ್ಲ ಎಂದು.
ಶಹಾಬಾದಿನಲ್ಲಿದ್ದಾಗ.. ಬಿ ಎಸ್ಸಿ ಮಾಡುವ ಆಸೆ ಹುಟ್ಟಿ ಎರಡು ವರ್ಷ ಮಣ್ಣು ಹೊತ್ತು.. ಏನೋ ಕಾರಣ ಕೊಟ್ಟು ನಿಲ್ಲಿಸಿದೆ. ಹಾಗಾಗಿ ಓದಿನ ಪದವಿ ಎನ್ನುವುದು ಕೈಗೆಟುಕಿಲ್ಲ. ಸಮಾಧಾನದ ಸಂಗತಿ ಎಂದರೆ.. ವೃತ್ತಿ ಜೀವನದಲ್ಲಿ ಅಕ್ಷರಶಃ ಇಂಜಿನಿಯರ್ ಆಗಿ ಕೆಲಸ ಮಾಡಿದ ತೃಪ್ತಿ ಇದೆ. 
ಎಚ್ ನರಸಿಂಹಯ್ಯನವರು ತಮಾಷೆಯಾಗಿ ಹೇಳಿದ ಮಾತು 'ಆನರ್ಸ್ ಇದ್ರೆ ಸಾಲ್ದಪ್ಪ ಮ್ಯಾನರ್ಸೂ ಇರಬೇಕು...' ಅನ್ನುವ ಮಾತನ್ನು ಮುಂದಿಟ್ಟುಕೊಂಡು ಸಂತೋಷ ಪಡುತ್ತೇನೆ.

ದೊಡ್ಡಪ್ಪನ ಮುಂದೆ ಕೀಬೋರ್ಡ್ ವಾದನ:

ನಾನು ಕೆಲಸದಿಂದ ನಿವೃತ್ತನಾಗಬೇಕೆಂದು ನಿರ್ಧರಿಸಿದಾಗ.. ಮುಂದಿನ ದಿನಗಳಲ್ಲಿ ಕಲಿಯಲೆಂದು ಕೀಬೋರ್ಡ್ ಕೊಂಡು ತಂದೆ.. ಕಲಿಯುವುದು ತನ್ನದೇ ವೇಗದಲ್ಲಿ ( ಆಮೆಯ ವೇಗ ) ಮುಂದುವರಿಯುತ್ತಿತ್ತು. 
ನಾವು ದೊಡ್ಡಪ್ಪ ಎಂದು ಕರೆಯುತ್ತಿದ್ದ... ನನ್ನ ದೊಡ್ಡ ಮಾವನವರು.. ಹೆಚ್. ಪಿ. ನರಸಿಂಹಮೂರ್ತಿಯವರು.. ಸಂಗೀತ ಪ್ರಿಯರು... ಮೊದಲ ಹಂತಗಳಲ್ಲೇ ನಾ ನುಡಿಸಿದ್ದನ್ನು ಕೇಳಿ.. ಸಲಹೆಗಳನ್ನು ಕೊಟ್ಟು ಪ್ರೋತ್ಸಾಹಿಸಿದವರು.  ಒಂದು ಹಂತ ದಾಟಿದ ನಂತರ ಅವರ ಮುಂದೆ ನನ್ನ ಕಲೆಯನ್ನು ಪ್ರದರ್ಶಿಸುವ ಆಸೆ ತುಂಬಾ ಇತ್ತು..  ಅದೇಕೋ ತಿಳಿಯದು ಅವರು ನಮ್ಮ ಮನೆಗೆ ಬಂದಾಗ ಆಗಲೆಂದು ನನ್ನ ಅನಿಸಿಕೆ.   ಸಂಗೀತ ಕೇಳಲಿಕ್ಕಾಗಿಯೇ  ಬರುವೆನೆಂಬ ಭರವಸೆ   ಅವರೂ ಕೊಟ್ಟಿದ್ದರೂ ಅದಕ್ಕೆ  ಕಾಲ ಕೂಡಿ ಬರಲೇ ಇಲ್ಲ. ಅವರ ಶಕ್ತಿ ಕುಂದಿತು.  ಇಲ್ಲೂ ನನಗನ್ನಿಸುವುದು ನನ್ನಲ್ಲಿನ ಇಚ್ಛಾಶಕ್ತಿಯ ಕೊರತೆ... ನಾನೇ ಅವರ ಮನೆಗೆ ಹೋಗಿ ಈ ಕೆಲಸ ಮಾಡಬಹುದಿತ್ತು. 

ಹಳ್ಳಿಯಲ್ಲಿ ನೆಲೆಸುವ ಆಸೆ:

ಹಳ್ಳಿಯ ವಾತಾವರಣದಲ್ಲಿ ಬೆಳೆದವನಾದ್ದರಿಂದ... ಆ ಜೀವನ ಇಷ್ಟ. trekking ಹೋದ ಸಮಯದಲ್ಲಿ... ನಾವಿರುತ್ತಿದ್ದ ಕೆಲ ಹಳ್ಳಿಗಳ (base camp) ತೋಟಗಳಲ್ಲಿ ಓಡಾಡಿದ.. ಕೆಲ ಕೆಲಸಗಳನ್ನು ಮಾಡಿದ, ಅಲ್ಲಿನ ಜನರೊಡನೆ ಒಡನಾಡಿದಾಗ.. ಅಲ್ಲಿಯೇ ಎಲ್ಲಾದರೂ ಇರಬೇಕೆಂಬ ಆಸೆ..  ಕೈಗೂಡುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

ವಾಕಿಂಗ್ ಗಾಗಿ ಮಾತ್ರೆ:

ಇದು ನನ್ನ ಆಸೆಯಲ್ಲದಿದ್ದರೂ.. ನಾನು ಇಷ್ಟಪಟ್ಟ... ತಮಾಷೆ. ಶ್ರೀನಿವಾಸ್ ನಮ್ಮ ಜೊತೆಯಲ್ಲಿ ಬೆಳಗೆದ್ದು ವಾಕಿಂಗ್ ಮಾಡುತ್ತಿದ್ದವರು.... ಒಳ್ಳೆಯ ಮಾತುಗಾರ, ಹಾಸ್ಯದ ಹೊನಲು ಹರಿಸುತ್ತಿದ್ದವ. ಆತನ  ಉವಾಚ.  "ಬೆಳಗಾಗೆದ್ದು ಬಂದು ಇಲ್ಲಿ ವಾಕಿಂಗ್ ಮಾಡುವ ಕಷ್ಟ ತಪ್ಪಿಸಕ್ಕೆ ಒಂದು ಉಪಾಯ... ಯಾರಾದ್ರೂ ಒಂದ್ ಮಾತ್ರೆ ಕಂಡುಹಿಡಿದ್ರೆ... ಒಂದು ಮಾತ್ರೆ ತಗೊಂಡ್ರೆ ಒಂದು ಕಿಲೋಮೀಟರ್ ವಾಕ್ ಮಾಡ್ದಂಗೆ ಅಂದ್ರೆ ....ನಾಲ್ಕೈದು ಮಾತ್ರೆ ತಗೊಂಡು ಹಾಯಾಗಿ ಹೊದ್ದುಕೊಂಡು ಮಲ್ಕೊಂಡ್ರೆ.. ನಿದ್ದೆಗೆ ನಿದ್ದೆ.. ವಾಕಿಂಗ್  ಗೆ ವಾಕಿಂಗ್ ಎರಡೂ ಆಗತ್ತೆ...ಎಂಥ ಮಜಾ ಅಲ್ವಾ?"

ನನಸಾಗಲಾರದ ತಿಕ್ಕಲು ಕನಸುಗಳು/ ಕಲ್ಪನೆಗಳು:

1. ಒಂದು ನೇರವಾಗಿ ನಿಂತಿರುವ ಕೋಲನ್ನು  ನೆಲಮಟ್ಟಕ್ಕೆ ಹೊರಳಿಸಿ  ತಂದು... ಮತ್ತೆ ಮೊದಲಿನಂತೆ ನಿಲ್ಲಿಸುವಂತೆ... ನನ್ನ ದೇಹವನ್ನು ಹೊರಳಿಸುವ ಕನಸು ಆಗಾಗ ಬೀಳುತ್ತಿತ್ತು... ಎಚ್ಚರದಲ್ಲಿ  ಶರೀರವನ್ನು ಬಗ್ಗಿಸದೇ ಕೋಲಿನಂತೆ ಹೊರಳಿಸಲು ಸಾಧ್ಯವಾಗಿಲ್ಲ.

2. ಕಾಲಿನಲ್ಲಿ ಚಕ್ರವಿದೆಯೇನೋ ಎನ್ನುವಂತೆ ಜಾರುವ, ಎರಡು ಕೈ ಆಡಿಸುತ್ತಾ ಪಕ್ಷಿಯಂತೆ ತೇಲುವ ಕನಸು ಕೂಡ ನನಸಾಗಿಲ್ಲ.

3. ನನ್ನ ತೋರುಬೆರಳು ಹಾಗೂ ಮಧ್ಯಬೆರಳನ್ನು ಪಿಸ್ತೋಲ್ ತರ ಉಪಯೋಗಿಸಿ... ದುರಹಂಕಾರದಿಂದ ವಾಹನ ಚಲಾಯಿಸುವವರ ಮೇಲೆ ಅದನ್ನು ಪ್ರಯೋಗಿಸಿ... ಅವರ ವಾಹನವನ್ನು ಅಲ್ಲೇ ಸ್ಥಿರ ಗೊಳಿಸುವ ಶಕ್ತಿಯ  ಕಲ್ಪನೆಯಂತೂ ಸಾಕಾರವಾಗುವ ಯಾವ ಲಕ್ಷಣಗಳೂ ಇಲ್ಲ.

4. ಸ್ವಂತ ಮನೆ ಕಟ್ಟಿಸಿಕೊಂಡು ವಾಸ ಮಾಡಲು ಆರಂಭಿಸಿದಾಗ ನನ್ನ ಮಗಳಿಗೆ ಏಳು ವರ್ಷ. ಆ ದಿನಗಳಲ್ಲಿ ಒಂದು ಕನಸು ಬೀಳುತ್ತಿತ್ತು ...
ಬೆಳಿಗ್ಗೆ ಎದ್ದು ಮುಂದಿನ ಬಾಗಿಲನ್ನು ತೆಗೆದಾಗ.. ಅಲ್ಲಿ ಒಂದು ಮಗು ಮಲಗಿದ್ದಂತೆ...
ಎಷ್ಟೋ ದಿನಗಳು ಬೆಳಗೆದ್ದು ಮುಂದಿನ ಬಾಗಿಲು ತೆಗೆದು ಆಸೆಯಿಂದ.. ನೋಡಿದ್ದುಂಟು.. ಸ್ವಲ್ಪ ನಿರಾಸೆ ಆಗಿದ್ದೂ ಸತ್ಯ.

5. ಅದೊಂದು ಕಾಲ... ಯೌವ್ವನ ತುಳುಕುತ್ತಿತ್ತು. ಸಿನಿಮಾ ನೋಡುವುದು ದೊಡ್ಡ ಮನರಂಜನೆ. ಸಿನಿಮಾದ ನಾಯಕ ನಾಯಕಿಯರ ಮರ ಸುತ್ತುವಿಕೆ, ಸರಸ ಸಲ್ಲಾಪ ನೋಡುವಾಗ ಏನೋ ಕಲ್ಪನೆ..ಹಾಗೇ ಪುಳಕ. ಕನಸಲ್ಲಿ ಅಪರಿಚಿತ ಮುಖದ ನಾಯಕಿಯನ್ನು ಕಂಡ ಕನಸುಗಳು ಉಂಟು. ಎಚ್ಚರವಾಗಿ ಪಕ್ಕದಲ್ಲಿ ನಾಯಕಿ ಇಲ್ಲದ್ದು ಕಂಡು ನಾಚಿದ್ದೂ ಉಂಟು.

ಆಸೆ/ಕನಸುಗಳಿಗೆ ಕೊನೆ ಮೊದಲಿಲ್ಲ, ತಲೆ ಬುಡವಿಲ್ಲ... ಆಸೆಯೇ ಇಲ್ಲದಿದ್ದರೆ ಜೀವನದಲ್ಲಿ ಸ್ವಾರಸ್ಯವೇ ಇಲ್ಲ... ಗುರಿಯೂ ಇಲ್ಲ.  ನಮ್ಮ ಬೇಕು ಬೇಡಗಳು 'greed based' ಅಂದರೆ ದುರಾಸೆಯ ಮೂಲ ಆಗದೆ 'need based' ಅಂದರೆ ಅಗತ್ಯಗಳ ಮೂಲ ಆಗಿದ್ದರೆ... ನಿರಾಸೆ ಇಲ್ಲದೆ ತೃಪ್ತಿಯು ತಾನೇ ತಾನಾಗಿ ನೆಲೆಸುತ್ತದೆ.
ಆದರೆ ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ.
ವಯಸ್ಸಾದಂತೆ, ಜೀವನ ಪಕ್ವವಾದಂತೆ, ಮನಸ್ಸು ವಾಸ್ತವದೆಡೆಗೆ ವಾಲುತ್ತದೆ
ಅದಕ್ಕೆ ತಕ್ಕಂತೆ ನಮ್ಮ ಬೇಕುಗಳು ಬದಲಾಗುತ್ತವೆ... ಹಾಗಾಗಿ ಕನಸುಗಳು ಕಡಿಮೆಯಾಗುತ್ತವೆ. 
ಜೀವನದ ಆ ಘಟ್ಟವನ್ನು ತಲುಪಿದ್ದೇನೆ ಎಂಬ ಅನಿಸಿಕೆ ನನ್ನದು.

ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಈ ಸಾಲುಗಳು ನನಗೆ ಪ್ರೇರಣೆ

ಹುಲ್ಲಾಗು ಬೆಟ್ಟದಡಿ ಮನೆಗೆ
ಮಲ್ಲಿಗೆಯಾಗು, 
ಕಲ್ಲಾಗು ಕಷ್ಟಗಳ ಮಳೆಯ ವಿಧಿಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.
 
ಹಾಗಾಗಿ ಆದಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗುವ ಪ್ರಯತ್ನ ಸತತವಾಗಿ ಜಾರಿಯಲ್ಲಿದೆ. 

ಆಸೆ ಆಕಾಂಕ್ಷೆಗಳನ್ನು ಹೊತ್ತ ಕನಸಿನ ಲೋಕದಿಂದ ಹೊರಬಂದು ವಾಸ್ತವ ಸ್ಥಿತಿಯನ್ನು ಒಪ್ಪಿಕೊಂಡು / ಅಪ್ಪಿಕೊಂಡು ಬಾಳುವ ಮನಸ್ಥಿತಿಯನ್ನು ಎಲ್ಲರಿಗೂ ಆದಷ್ಟು ಚಿಕ್ಕ ವಯಸ್ಸಿನಲ್ಲಿಯೇ ದೇವರು  ದಯ ಪಾಲಿಸಲಿ ಎಂದು ಆಶಿಸುತ್ತಾ....

ನಮಸ್ಕಾರ.   

D C Ranganatha Rao
9741128413
    

Comments

  1. ನಿಜ , ಎಲ್ಲರಲ್ಲೂ ನನಸೇ ಆಗದಂತಹ ಸೊಗಸಾದ ಕನಸುಗಳಿರುತ್ತವೆ. ಅವನ್ನ ಬರೀ ನೆನೆದರೂ ಸಂತೋಷವೇ.. ನನಸಾಗಬೇಕೆಂದುಕೊಂಡ ಕನಸುಗಳು ಕನಸಾಗೇ ಉಳಿದಾಗ ಮಾತ್ರ ವಿಶಾದ.. ಎಂದಿನಂತೆ ಆಪ್ತ ಬರಹ.

    ReplyDelete
  2. ನಾಗೇಂದ್ರ ಬಾಬು14 December 2024 at 09:52

    ವಾಹ್...ನನ್ನ ಒಂದು ಸಣ್ಣ ಸೂಚನೆ ಇಷ್ಟು ಬೇಗ ನಿಮ್ಮ ಯೋಚನೆಯಿಂದ ಮತ್ತೊಂದು ಒಳ್ಳೆಯ ಲೇಖನ ಮೂಡಿ ಬಂದಿದೆ
    ಇದರಲ್ಲೂ ಒಂದು ಸಾಮ್ಯತೆ ಇದೆ...ನಾನು ಕೂಡ ಡಿಪ್ಲೊಮಾ ಆದ ನಂತರ (SJP ಯಲ್ಲೇ) BMS engg evening coolage ಗೆ
    ಸೇರಿ ಕಾರಣಾಂತರಗಳಿಂದ ಪೂರ್ಣ ಗೊಳಿಸಲಾಗದ ಬಗ್ಗೆ ನನಗೂ ಕೂಡ ಬೇಸರವಿದೆ, ಕಾಮಿಕ್ ಹೀರೋ ಫಾಂಟ್ ಮ್
    ನಂತೆ ಆಗಬೇಕೆಂದು ಕಂಡ ಕನಸು...ಇನ್ನೂ ಹತ್ತಾರು....ಆದರೆ ಕಲ್ಪನೆ ಇಲ್ಲದೇ ಆಚಾನಕ್ಕಾಗಿ ದೊರೆತ USA ಅವಕಾಶ ನಂತರ ಅನೇಕ ವಿದೇಶಿ ಪ್ರವಾಸ ಇವೆಲ್ಲ ಅಚ್ಚರಿ ಹಾಗೂ ಸಂತೃಪ್ತಿ ನೀಡಿದೆ...ಈ ನಿಮ್ಮ ಲೇಖನ ಓದುಗರನ್ನು ಅವರವರ ಕಲ್ಪನಾ ಲೋಕಕ್ಕೆ ಕರೆದುಕೊಂಡು ಹೋಗಿ ಒಂದು ನವಿರಾದ ಸಂತಸಕ್ಕೆ ಕಾರಣ ವಾಗ ಬಹುದು
    ಧನ್ಯವಾದಗಳು
    ಬಾಬು

    ReplyDelete
  3. ಭಾವಕ ಜೀವಿಗಳಿಗೆ ಜೀವನದಲ್ಲಿ ಈ ರೀತಿಯ ದ್ವಂದ್ವ ಗೋಜಲು ಸಮಸ್ಯೆ ಸಾಮಾನ್ಯ. ಇದೇನು ವರವೋ ಶಾಪವೋ ಗೊತ್ತಾಗುವುದಿಲ್ಲ.

    ವಿಚಿತ್ರ ಕನಸುಗಳು, ಅಪಕ್ವ ಯೋಚನೆಗಳು,
    ದೃಢವಾದ ಪ್ರಯತ್ನ ಸೋಲು ವಿಫಲತೆ ಅದೇಕೋ.

    ಅಸ್ಪಷ್ಟ ನಿರ್ಧಾರ, ಬಾಲಿಷ ಚಿಂತನೆ, ಇನ್ನು ಏನೇನೋ... ಹೇಳಲಾಗುವುದಿಲ್ಲ.

    ಇದು ಬಹುತೇಕ ಮಧ್ಯಮ ವರ್ಗದ ಸಾಮಾನ್ಯ ಅನುಭವ. ಹೇಗೋ ಜೀವನದ ಬಂಡಿ ಮುಂದೆ ಸಾಗುತ್ತದೆ.

    ಕನಸು ನನಸಾಗಬಹುದು ಆಗದೇ ಇರಬಹುದು. ಬಂದದ್ದನ್ನು ಯಥಾವತ್ತಾಗಿ ಸ್ವೀಕರಿಸಿ ಜೀವನ ಸಾಗಿಸುವುದೇ ಜಾಣತನ.

    ಗುರು ಪ್ರಸನ್ನ
    ಚಿಂತಾಮಣಿ.



    ReplyDelete
  4. ಬಹುಶಃ ಎಲ್ಲರ ಜೀವನದಲ್ಲೂ ನನಸಾಗದ ಆಸೆ ಗಳು ಬಹಳಷ್ಟು ಇರುತ್ತವೆ. ಭಗವಂತ ಏನು ಕೊಡುತ್ತನೋ ಅದರಲ್ಲಿ ತೃಪ್ತಿ ಪಟ್ಟು ಕೊಂಡರೆ ಜೀವನ ಸುಖ ಮಯ ಬಾಗಿ ಇರುತ್ತೇ

    ReplyDelete
  5. Superb sir tumba chenagide nimma baravanige

    ReplyDelete
  6. ನನಸಾಗದ ಕನಸ್ಸುಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರಾ, ನಮ್ಮ ಆಸೆಯಂತೆ ಎಲ್ಲಾ ನಡೆಯುವುದಿಲ್ಲ, ಆದರೆ ಪ್ರಯತ್ನ ಗುರಿ ಮುಖ್ಯ ಅಲ್ಲವೇ. ಹಾಗೆ ಕೈಗೂಡದಿದ್ದರೆ ಚಿಂತಿಸದೆ, ಇರುವುದರಲ್ಲೆ ತೃಪ್ತಿ ಪಡೆದು ಜೀವನ ಮಾಡುವುದು ಶ್ರೇಯಸ್ಕರ. ಮತ್ತೊಂದು ದಾರಿ ಹುಡುಕಿ ಅದರಲ್ಲಿ ಯಶಸ್ಸು ಕಾಣುವುದು ಒಳ್ಳೆಯದು. ಅದನ್ನೇ ನೀವು ಮಾಡದ್ದೀರಾ, ಶುಭವಾಗಲಿ.

    ReplyDelete
  7. ಇನ್ನೊಂದು ವಿಷಯ ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ಬಯಸದೆ ಬಂದ ಭಾಗ್ಯ ಎಂಬಂತೆ ನಾನು ಕನಸ್ಸು ಕಾಣದ್ದು ನನಸಾಗಿದೆ ಭಗವಂತನ ಇಚ್ಛೆ, ನಿಮ್ಮಲ್ಲರ ಸಹಕಾರ ಸಾಧ್ಯವಾಗಿದೆ. ಧನ್ಯವಾದಗಳು🙏
    ರತ್ನಪ್ರಭಾ
    ಆಪ್ತಸಮಾಲೋಚಕರು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ