ಚಾಕು ಚೂರಿ ಕತ್ರಿಗೆ ಸಾಣೆ...
ಚಾಕು ಚೂರಿ ಕತ್ರಿಗೆ ಸಾಣೆ.. ಚೂಪು ಮಾಡಿಕೊಡ್ತೀವಿ ಅಂತ ಕೂಗುತ್ತಾ ಹೆಗಲ ಮೇಲೆ ಮಿಷಿನ್(!) ಹೊತ್ತು ಬರುತ್ತಿದ್ದದ್ದು ನಾವು ಚಿಕ್ಕವರಿದ್ದಾಗ... ಕ್ರಮೇಣ ಅದು ಸೈಕಲ್ ಮೇಲೆ ಬರಲು ಶುರು.
ಈಗಂತೂ ಬನ್ನಿ ಅಮ್ಮ, ಬನ್ನಿ ಸಾರ್ ಅಂತ ರೆಕಾರ್ಡ್ ಮಾಡಿದ್ದನ್ನು ನಮಗೆ ಕೇಳಿಸುತ್ತಾ ಟಿ ವಿ ಎಸ್ ಗಾಡಿಯ ಮೇಲೆ ಬರುವವರೆಗೂ ಬದಲಾಗಿದೆ.
ಚಾಕು, ಚೂರಿ, ಕತ್ರಿ, ಮಚ್ಚು, ಕೊಡಲಿ, ರಂಪ, ಗರಗಸ, ಹೀಗೆ ಯಾವುದೇ ಕತ್ತರಿಸುವ ಸಾಧನವನ್ನು ಚೂಪು (ಹರಿತ) ಮಾಡಿ ಸುಸ್ಥಿತಿಯಲ್ಲಿ ಇದ್ದರೆ ಕೆಲಸ ಹಗುರ. ತಕ್ಷಣ ನೆನಪಿಗೆ ಬರುವುದು ಚಂದಮಾಮದಲ್ಲಿ ಓದಿದ್ದ ಒಂದು ಕಥೆ... ಒಂದು ಗುರುಕುಲ.. ಮಳೆಗಾಲ ಸಮೀಪಿಸುತ್ತಿದ್ದಂತೆ... ಉರುವಲಿಗಾಗಿ ಸೌದೆ ಶೇಖರಿಸುವುದು ಅನಿವಾರ್ಯ... ಗುರುಕುಲದ ಮಕ್ಕಳು ಆ ಕೆಲಸ ಮಾಡಬೇಕು. ಇದ್ದುದರಲ್ಲಿ ಇಬ್ಬರು ದೊಡ್ಡ ಮಕ್ಕಳಿಗೆ ಆ ಕೆಲಸವನ್ನು ವಹಿಸಲಾಯಿತು... ಒಬ್ಬ ಶ್ರಮಜೀವಿ ಕಷ್ಟಪಟ್ಟು ಕೆಲಸ ಮಾಡುವವ, ಮತ್ತೊಬ್ಬ ಅಷ್ಟೇನೂ ಶಕ್ತನಲ್ಲ ಆದರೆ ಜಾಣ. ಮೊದಲೆರಡು ದಿನಗಳು ಶ್ರಮಜೀವಿ ನಾಲ್ಕೈದು ದಿನಕ್ಕೆ ಆಗುವಷ್ಟು ಸೌದೆ ಕತ್ತರಿಸಿ ಜೋಡಿಸಿದ ಆದರೆ ಇನ್ನೊಬ್ಬ ಮಾತ್ರ ಎರಡೇ ದಿನಕ್ಕಾಗುವಷ್ಟು. ನಂತರದ ದಿನಗಳಲ್ಲಿ ನಮ್ಮ ಶ್ರಮಜೀವಿ ಕತ್ತರಿಸಿ ಜೋಡಿಸಿದ್ದು ಕಡಿಮೆಯಾಗುತ್ತಾ ಬಂದು, ಒಂದು ದಿನಕ್ಕಾಗುವಷ್ಟೂ ಜೋಡಿಸಲಾಗಲಿಲ್ಲ.. ಆದರೆ ಶಕ್ತನಲ್ಲದ ಹುಡುಗ ಎಲ್ಲ ದಿನಗಳೂ ಒಂದೇ ಸಮನೆ ಎರಡೇ ದಿನಕ್ಕಾಗುವಷ್ಟು ಸೌದೆಯನ್ನು ಜೋಡಿಸಿದ. ಈ ವಿಷಯ ಗುರುಗಳ ತನಕ ಹೋಯಿತು. ಗುರುಗಳಿಗೆ ಗೊತ್ತು ಕಾರಣ ಏನೆಂದು.. ಶ್ರಮಜೀವಿಯನ್ನು ಕರೆದು ಕೇಳಿದಾಗ ಅವನ ಉತ್ತರ.. ನಾನು ಅಷ್ಟೇ ಶ್ರಮವನ್ನು ಹಾಕುತ್ತಿದ್ದೇನೆ, ಒಂದು ಕ್ಷಣವೂ ಸೋಮಾರಿತನ ಪಟ್ಟಿಲ್ಲ ಆದರೆ ಸೌದೆ ಮಾತ್ರ ಅಷ್ಟು ಕತ್ತರಿಸಲಾಗಿಲ್ಲ. ಇನ್ನೊಬ್ಬ ಮಾತ್ರ ಕಡಿಮೆಯಾದರೂ ಪ್ರತಿ ದಿನವೂ ಅಷ್ಟನ್ನೇ ಕತ್ತರಿಸುತ್ತಿದ್ದಾನೆ.
ಈಗ ಗುರುಗಳು ಶ್ರಮಜೀವಿಗೆ..." ಅವನು ಕೆಲಸ ಶುರು ಮಾಡುವ ಮುಂಚೆ ಏನೇನು ಮಾಡುತ್ತಾನೆ ಎಂದು ಗಮನಿಸು" ಎಂದು ಹೇಳುತ್ತಾರೆ. ಗಮನಿಸಿದಾಗ ಇನ್ನೊಬ್ಬ ಹುಡುಗ ಪ್ರತಿದಿನ ಕೆಲಸ ಮಾಡುವ ಮುಂಚೆ ತನ್ನ ಕೊಡಲಿಯನ್ನು ಕಲ್ಲಿಗೆ ಉಜ್ಜಿ ಚೂಪು ಮಾಡಿಕೊಳ್ಳುತ್ತಾನೆ. ಶ್ರಮಜೀವಿ ಹುಡುಗನು ತನ್ನ ಕೊಡಲಿಯನ್ನು ಚೂಪು ಮಾಡಿಕೊಂಡು ಕೆಲಸ ಮಾಡಿದಾಗ ಜಾಸ್ತಿ ಸೌದೆ ಕಡಿಯಲು ಸಾಧ್ಯವಾಯಿತು. ಗುರುಗಳು ನಂತರ ಹೇಳಿದ್ದು " ಬರೀ ಶ್ರಮ ಹಾಕಿ ಕೆಲಸ ಮಾಡುವುದಲ್ಲ... ಜಾಣತನವೂ ಬೇಕು ನಾವು ಉಪಯೋಗಿಸುವ ಉಪಕರಣಗಳು ಸುಸ್ಥಿತಿಯಲ್ಲಿರಬೇಕು" ಎಷ್ಟು ಸತ್ಯ ಅಲ್ವಾ?
ಚಾಕು, ಮಚ್ಚು,ಕುಡುಗೋಲು, ಕೊಡಲಿ ಗಳನ್ನು ಸಾಣೆ ಹಿಡಿಯುವುದನ್ನು ನೋಡಿದ್ದು ನಮ್ಮೂರಲ್ಲೇ... ರಾಮಲಿಂಗಣ್ಣಯ್ಯ ರೈತರಿಗೆ ಮಾಡಿಕೊಡುತ್ತಿದ್ದದ್ದು. ಅವರಲ್ಲಿದ್ದ ಒಂದು ಸಾಧನ.. ಮಜ್ಜಿಗೆ ಕಡೆಯುವಾಗ ಹಗ್ಗವನ್ನು ಸುತ್ತುತ್ತಿದ್ದ ರೀತಿಯಲ್ಲೇ ಅದಕ್ಕೆ ಹಗ್ಗವನ್ನು ಸುತ್ತಿ... ಬಂದ ರೈತ ಆ ಹಗ್ಗವನ್ನು ಎರಡು ಕೈಯಿಂದ ಹಿಂದೆ ಮುಂದೆ ಎಳೆಯಬೇಕು ಆಗ ಆ ಸಾಣೆಕಲ್ಲು ಸುತ್ತಿ, ಅದಕ್ಕೆ ಒತ್ತಿ ಹಿಡಿದು ಎಲ್ಲವನ್ನು ಸಾಣೆ ಹಿಡಿಯುತ್ತಿದ್ದದ್ದು. ಚರ್ರ್ ಚರ್ರ್ ಶಬ್ದ.. ಜೊತೆಗೆ ಅಲ್ಲಿಂದ ಸಿಡಿಯುತ್ತಿದ್ದ ಬೆಂಕಿಯ ಕಣಗಳು.. ನಮಗೆ ಕುತೂಹಲ ಉಂಟುಮಾಡುತ್ತಿತ್ತು.. ನೋಡಲು ಹತ್ತಿರ ಹೋದರೆ ಬೈಗುಳ ಬೀಳುತ್ತಿತ್ತು.
ಹಜಾಮರ ನಾಣಿ ( ನಾವು ಕರೆಯುತ್ತಿದ್ದ ಹೆಸರು... ಯಾವ ಅಗೌರವವೂ ಇಲ್ಲ) ತನ್ನ ಕತ್ತಿಯನ್ನು ಕೈಯಲ್ಲಿ ಹಿಡಿಯುವ ವಿಶೇಷ ಕಲ್ಲಿನ ಮೇಲೆ ಆಡಿಸಿ ಕೆಲಸ ಶುರು ಮಾಡುತ್ತಿದ್ದದ್ದು.
ಬೆಂಗಳೂರಿನ ಸಲೂನ್ ಗಳಲ್ಲಿ ತೂಗು ಹಾಕಿರುತ್ತಿದ್ದ ಒಂದು ಬೆಲ್ಟ್ ಮೇಲೆ ಕತ್ತಿಯನ್ನು ಹರಿತಗೊಳಿಸುತ್ತಿದ್ದದ್ದು ಆಗ ಇತ್ತು... ಈಗ ಉಪಯೋಗಿಸಿ ಎಸೆಯುವ ಅರ್ಧ ಬ್ಲೇಡಿನ ತುಂಡು ಕತ್ತಿಯ ಭಾಗವಾಗಿದೆ... ಅದನ್ನು ಹರಿತಗೊಳಿಸುವ ಅವಶ್ಯಕತೆಯೇ ಇಲ್ಲ.
ದಿನ್ನೆಗೆ (ಕಾಡಿಗೆ) ಸೌದೆ ತರಲು ಹೋಗುವಾಗ ದಾರಿಯಲ್ಲಿ ಮಚ್ಚನ್ನು ಮಸೆಯಲು ಇದ್ದ ಕಲ್ಲಿನ ಮೇಲೆ... ಸ್ವಲ್ಪ ಮರಳಿನ ಪುಡಿಯನ್ನು ಹಾಕಿ, ಮಚ್ಚನ್ನು ಮಸೆದುಕೊಂಡು ಹೋಗುತ್ತಿದ್ದದ್ದು. ಆ ಕಲ್ಲು... ಕಬ್ಬಿಣದ ಅಂಶ, ಮರಳ ಅಂಶ ಜೊತೆಗೆ ಆ ಕಲ್ಲಿನ ಅಂಶವೂ ಸೇರಿ... ವಿಶೇಷ ಬಣ್ಣವನ್ನೇ ತಳೆದಿತ್ತು. ಮಸೆದ ನಂತರ, ಹರಿತವಾಗಿದೆಯೇ ಎಂದು ಪರೀಕ್ಷಿಸುತ್ತಿದ್ದದ್ದು ಬೆರಳನ್ನು ಆ ಜಾಗದ ಮೇಲೆ ನಿಧಾನವಾಗಿ ಓಡಿಸಿ.... ಅದು ಒಂದು ವಿಶೇಷ ಕಲೆಯೇ... ಕಲೆ ಕೈಗೂಡುವ ಮುನ್ನ ಪರೀಕ್ಷಿಸಲು ಹೋಗಿ ಕೈಯಲ್ಲಿ ರಕ್ತ ಬರಿಸಿಕೊಂಡದ್ದೂ ಇದೆ.
ಮಚ್ಚಿನ ಜೊತೆ ಜೊತೆಯಲ್ಲೇ ನೆನಪಿಗೆ ಬರುವುದು ಒಂದು ಬೀಭತ್ಸ ಘಟನೆ..
ಮಳೆ ಕೈಕೊಟ್ಟಿತ್ತು, ಮಳೆಗಾಗಿ ಶಿವಸಪ್ತಾಹ, ಏನೇನೋ ಪೂಜೆ. ಮರಿ ಬಲಿ ಕೊಡುವುದು ಅದರ ಭಾಗ. ನಮ್ಮ ಶಾಲೆಯ ಮುಂದೆ ಆ ಕಾರ್ಯಕ್ರಮ.. ನಮ್ಮ ಕಣ್ಣೆಲ್ಲ ಆ ಕಡೆ.. ಒಂದು ಕುರಿಮರಿಯ ಅರ್ತನಾದ ಕೇಳಿ ಬರುತ್ತಿದೆ, ಒಬ್ಬ ವ್ಯಕ್ತಿ.. ಯಾರೋ ನೆನಪಿಲ್ಲ... ಮಚ್ಚು ಹಿಡಿದು ನಿಂತಿದ್ದಾನೆ... ಕೆಲಲಲಲಲೋ ಕೆಕ್ಕೋ ಎಂದು ಕೂಗಿ.. ಮಚ್ಚು ಕುರಿಮರಿಯ ಕುತ್ತಿಗೆಯ ಮೇಲೆ ಬಿದ್ದು ರಕ್ತಚೆಲ್ಲಿದ್ದು.. ನೋಡಲಾರದೆ ಕಣ್ಣು ಮುಚ್ಚಿದ್ದು.. ಭಯ ಮತ್ತು ನೋವಿನ ಭಾವನೆಗಳು ಮನಸ್ಸಿಗೆ ಬಂದದ್ದು ನೆನೆದರೆ ಮನಸ್ಸಿಗೆ ಈಗಲೂ ಏನೋ ಕಷ್ಟ.
ಈಗ ನನಗೆ ನೆನಪಿಗೆ ಬರುವುದು ಸಾಣೆ ಕಲ್ಲು... ಗಂಧದ ಚಕ್ಕೆಯಿಂದ ಗಂಧ ತೇಯಲು ಉಪಯೋಗಿಸುತ್ತಿದ್ದದ್ದು... ನಮ್ಮಪ್ಪ ಮಂತ್ರ ಹೇಳಿಕೊಂಡು ಗಂಧ ತೇಯುತ್ತಿದ್ದದ್ದು ಕಣ್ಣಿಗೆ ಕಟ್ಟಿದಂತಿದೆ.
ಯಾವುದಾದರೂ ಕೆಲಸಕ್ಕೆ ಪರಿಪೂರ್ಣವಾಗಿ ಒಪ್ಪಿಸಿಕೊಂಡು ದುಡಿಯುವವರಿಗೆ... ಗಂಧದ ಚೆಕ್ಕೆ ತರ.. ತನ್ನ ಜೀವನ ಎಲ್ಲಾ ತೇದ್ ಬಿಟ್ಟ ಎನ್ನುವುದು ಒಂದು ಹೇಳಿಕೆ.
ಇನ್ನೊಂದು ಅಡುಗೆಯ ಮನೆಯಲ್ಲಿ ಖಾರ ಅರೆಯಲು ಉಪಯೋಗಿಸುತ್ತಿದ್ದ ಮಸ್ಕಲ್ಲು... ನಾನು ಮದರಾಸಿನಲ್ಲಿ (ಈಗಿನ ಚೆನ್ನೈ) ಇದ್ದಾಗ.. ಪಕ್ಕದ ಮನೆಯ ಕೋಮಲ ಎಂಬ ಹುಡುಗಿ ಹಾಡನ್ನು ಗುಣುಗುಣಿಸುತ್ತಾ ಖಾರ ಅರೆಯುತ್ತಿದ್ದ ಚಿತ್ರ ಈಗಲೂ ಹಸಿರಾಗಿದೆ.
ಚೂರಿಯನ್ನು ಹಣ್ಣು ಕತ್ತರಿಸಲು ಹಾಗೆ ಇನ್ನೊಬ್ಬರಿಗೆ ಚುಚ್ಚಲೂ ಉಪಯೋಗಿಸಬಹುದು... ಅದು ಅವರವರ ಭಾವಕ್ಕೆ ತಕ್ಕಹಾಗೆ... ಮನಸ್ಸಿನಂತೆ ಮಹದೇವ.
ಕತ್ತರಿಯದ್ದು ಒಂದು ವಿಶೇಷ ಗುಣ.. ಕತ್ತರಿಸಿ ತುಂಡು ತುಂಡು ಮಾಡಿ ಹಾಳುಮಾಡಬಹುದು... ಹಾಗೆಯೇ ವಿವೇಚನೆಯಿಂದ ಬಟ್ಟೆಯನ್ನು ಬೇಕಾದ ಹಾಗೆ ಕತ್ತರಿಸಿ ನಂತರ ಹೊಲೆದಾಗ... ತೊಡುವ ಬಟ್ಟೆ.. constructive destruction ಎನ್ನಲೇ?
ಪೆನ್ಸಿಲ್ ಚೂಪು ಮಾಡಲು....( ಜೀವಲು) ಉಪಯೋಗಿಸುತ್ತಿದ್ದದ್ದು ಹಳೆಯ ಬ್ಲೇಡುಗಳನ್ನು... ನಾಲಿಗೆಯನ್ನು ಬಾಯಿಂದ ಹೊರಗೆ ಹಾಕಿಕೊಂಡು (ಕಾರಣ ತಿಳಿಯದು,ಬಹುಶಃ ಏಕಾಗ್ರತೆಯ ದ್ಯೋತಕ) ಪೆನ್ಸಿಲ್ ಜೀವುವುದು ದೊಡ್ಡ ಕಾಯಕ
ಮನೆ ಮುಂದೆ ಮಚ್ಚನ್ನು (ಯಾವುದೇ ಸಾಧನವನ್ನು) ಮಸೆಯುವುದು ನಿಷಿದ್ಧ, ಸಮಂಜಸವಾದ ಕಾರಣ ತಿಳಿಯದು.
ಚಾಕು ಕತ್ತರಿಗಳನ್ನು ಕೈಗೆ ಕೊಡಬಾರದು.. ನೆಲದ ಮೇಲೆ ಇಡಬೇಕು.... ಇದೊಂದು ನಂಬಿಕೆ. ಕೊಡುವವರ ಕೈಯಲ್ಲಿ ಹಿಡಿ ಇರುತ್ತದೆ... ಇನ್ನೊಂದು ಭಾಗ ಚೂಪಾಗಿರುವುದರಿಂದ ಕೈಗೆ ತೆಗೆದುಕೊಂಡರೆ ಗಾಯ ಆಗುವ ಸಾಧ್ಯತೆ ಉಂಟು ಹಾಗಾಗಿ.. ಕೈಗೆ ಕೊಡುವುದು ಸುರಕ್ಷೆಯಲ್ಲ.
ಕತ್ತಿ ಮಸೆಯುತ್ತಾನೆ ಅನ್ನುವ ನಾಣ್ಣುಡಿ ದ್ವೇಷ ಸಾಧಿಸುತ್ತಾನೆ ಎನ್ನುವ ಅರ್ಥದಲ್ಲಿ ಉಪಯೋಗವಾಗತ್ತೆ .
ನನ್ನೂರು ದೊಡ್ಡಜಾಲದ ಸಕಲಕಲಾವಲ್ಲಭ ಸುಬ್ಬಣ್ಣಯ್ಯ( ಸುಬ್ಬರಾಯಾಚಾರ್) ಚಿನ್ನವನ್ನು ಪರೀಕ್ಷೆ ಮಾಡುತ್ತಿದ್ದ ಪರಿ ನನಗೆ ಯಾವಾಗಲೂ ಒಂದು ಅಚ್ಚರಿ. ಒಂದು ವಿಶಿಷ್ಟ ಕಲ್ಲಿನ ಮೇಲೆ ಚಿನ್ನದ ಒಡವೆಯನ್ನು ಉಜ್ಜಿ.. ಬೀರುವಿನಲ್ಲಿ ಗಾಜಿನ ಶೀಷೆಯಲ್ಲಿ ಇಟ್ಟಿರುತ್ತಿದ್ದ .. ಮುಚ್ಚಳ ತೆಗೆದ ತಕ್ಷಣ ಹಬೆಯಾಡುತ್ತಿದ್ದ , ದ್ರಾವಣ(acid ಎಂದು ನಂತರದಲ್ಲಿ ತಿಳಿದ)ವನ್ನು, ಚಿನ್ನ ಉಜ್ಜಿದ ಜಾಗದ ಮೇಲೆ ಗಾಜಿನ ಕಡ್ಡಿಯಿಂದ ಒಂದೆರಡು ತೊಟ್ಟು ಸವರಿ ಚಿನ್ನದ ಗುಣ ಮಟ್ಟ ವನ್ನು ನಿರ್ಧರಿಸುತ್ತಿದ್ದದ್ದು.
ಮರ ಕೆಲಸವನ್ನು ಮಾಡುತ್ತಿದ್ದ ನೇಯ್ಗೆಯವರ ತಾತ.. ಮರ ಕೊಯ್ಯುವ ರಂಪವನ್ನು ಅರದಿಂದ, ಚೂಪು ಮಾಡುತ್ತಿದ್ದದ್ದು ಹಾಗೂ ಉದ್ದನೆಯ ಮರದ ತುಂಡಿನ ಮೇಲೆ ಬೆಣಚುಕಲ್ಲಿನ ಪುಡಿ ಹಾಕಿ.. ಉಳಿಗಳನ್ನು ಮಸೆಯುತ್ತಿದ್ದದ್ದು ನೆನಪಿದೆ.
ಇನ್ನು ರೈತಾಪಿ ಜನರ ವ್ಯವಸಾಯದ ಪರಿಕರಗಳನ್ನು, ರಾಮಲಿಂಗಣ್ಣಯ್ಯ ... ಕುಲುಮೆಯಲ್ಲಿ ಕಾಸಿ, ತಟ್ಟಿ, ನೀರಲ್ಲಿ ಅದ್ದಿ ಹದ ಮಾಡಿ( ಚುರ್ರ್ ಎನ್ನುವ ಶಬ್ದದೊಂದಿಗೆ ಹೊಗೆಯಾಡುವುದು) ಚೂಪು ಮಾಡಿಕೊಡುತ್ತಿದ್ದದ್ದನ್ನು ನಾನು ಕುತೂಹಲದಿಂದ ನೋಡುತ್ತಿದ್ದೆ.
ಕತ್ತಿಯನ್ನು ಆಯುಧದ ರೂಪದಲ್ಲಿ ಇಲ್ಲವಾದರೂ.. ಕತ್ತಿ ವರಸೆಯ ಪ್ರದರ್ಶನ.. ಆಯುಧ ಪೂಜೆಗೆ ಇಟ್ಟ ಕತ್ತಿ... ನಾಟಕದಲ್ಲಿ ಕತ್ತಿಯ ಉಪಯೋಗ ಹೆಚ್ಚು ಪರಿಚಿತ.
ಆಗಿನ ಕಾಲದ MGR ವೀರಪ್ಪನ್ ಅವರುಗಳ ಕತ್ತಿ ವರಸೆಯ fighting.. (ಇದ್ದಕ್ಕಿದ್ದಂತೆ ಬೆಟ್ಟದ ಮೇಲೆ, ಇನ್ನೆಲ್ಲೋ ಸೇತುವೆಯ ಮೇಲೆ...) ಮಾಡಿದ ಸಿನಿಮಾ ನೋಡಿ ಅದರ ಬಗ್ಗೆ ನಮ್ಮದೇ ಸೀಮಿತ ಜ್ಞಾನದಲ್ಲಿ ಚರ್ಚಿಸಿದ್ದು ನೆನಪಿದೆ.
ಅದೊಂದು ಏಕಪಾತ್ರಾಭಿನಯ... ಅದಕ್ಕಾಗಿ ಕತ್ತಿ ಹಾಗೂ ಅದನ್ನು ಇಡುವ ಒರೆಯನ್ನು ಹೇಗೋ ತಯಾರು ಮಾಡಿಕೊಂಡು... ಅದಕ್ಕೆ ಚುನ್ನಾರಿಯನ್ನು ಹಚ್ಚಿ.. ಸೊಂಟಕ್ಕೆ ಕಟ್ಟಿಕೊಂಡು ಪಾತ್ರ ವಹಿಸುವಾಗ... ಶೂರತನ ಪ್ರದರ್ಶಿಸುತ್ತಾ..
ಪಿಡಿವೇ......ಮ್ ದುರ್ಮಧ ರಾಮ ಕೃಷ್ಣ ಖಳರ...ಮ್....
ಕೈ....ಕಾಲ್ಗಳಂ ಖಢ್ಗದಿಂ ಕಡಿವೇ......ಮ್
ಯಾ...ದವ ವಂಶವಂ ಕುರುಕುಲ ತಿಲಕಾಗ್ನಿಯಿಂ ....ಸುಡುವೇ....ಮ್....
ಎಂದು ಕಂದ ಪದ್ಯ ಹಾಡುತ್ತಾ. ..ಕತ್ತಿಯನ್ನು ಹೊರತೆಗೆದು ಝಳಪಿಸಿ.. ಮತ್ತೆ ಒರೆಯ ಒಳಗಿಡಲು ಹೋದಾಗ.. ಸಾಧ್ಯವಾಗದೆ ತಡ ಬಡಾಯಿಸಿದ್ದು... ಪ್ರೇಕ್ಷಕರು ಜೋರಾಗಿ ನಕ್ಕಿದ್ದು... ಒಂದು ವಿಧದ ಅವಮಾನ.. ಅದನ್ನು ಮುಚ್ಚಲು ಪ್ರಯತ್ನ ಮಾಡಿದ್ದು ಒಂದು ಮಾತಿನ ಮೂಲಕ.." ನನ್ನ ಕತ್ತಿಯು ರಕ್ತ ಕುಡಿಯದೆ ಒಳಗೆ ಸೇರುವುದಿಲ್ಲವೆಂದು ಮೊಂಡು ಮಾಡುತ್ತಿದೆ.. ಹ್ಹ ಹ್ಹ್ ಹ್ಹಹ್ಹಾ" ಎಂದು ಹೇಳಿ ಹೊರಟಿದ್ದು... ಆ ಸ್ಪೂರ್ತಿ ಹೇಗೆ ಬಂತು ..ಇಂದಿಗೂ ತಿಳಿಯದು.
ಕತ್ತಿಯ ಇನ್ನೊಂದು ನೆನಪು... ಪುಸ್ತಕದಲ್ಲಿದ್ದ ಝಾನ್ಸೀರಾಣಿ ಲಕ್ಷ್ಮೀ ಬಾಯಿಯ ಚಿತ್ರ .... ತನ್ನ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕುದುರೆಯ ಮೇಲೆ ಕೂತು ಒಂದು ಕೈಯ್ಯಲ್ಲಿ ಕುದುರೆಯನ್ನು ಓಡಿಸುತ್ತಾ ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿದ್ದ ಚಿತ್ರ.
ನಮ್ಮ ಬುದ್ಧಿ ಶಕ್ತಿಯೂ ಚಾಕು ಚೂರಿಯಂತೆ... ಆಗಾಗ ಹರಿತ ಮಾಡುತ್ತಿದ್ದರೆ ಕೆಲಸಕ್ಕೆ ಬರುತ್ತದೆ.. ಇಲ್ಲದಿದ್ರೆ ತುಕ್ಕು ಹಿಡಿದು ಮೊಂಡಾಗಿ ಕೆಲಸಕ್ಕೆ ಬಾರದೆ ಹೋಗುತ್ತದೆ. ಅದರಲ್ಲೂ ವಯಸ್ಸಾಗುತ್ತಾ... ನಮ್ಮ ಬುದ್ಧಿಯನ್ನು ಸಮಾಜಕ್ಕಾಗಿ, ನಮ್ಮ ಸುತ್ತು ಮುತ್ತಿನವರ ಸಂತೋಷಕ್ಕಾಗಿ ಉಪಯೋಗಿಸಿದರೆ, ನಮಗೂ ಆರೋಗ್ಯ... ಒಂದಷ್ಟು ಅಳಿಲು ಸೇವೆ ಸಹ.
ದೇವರೇ... ಅದಕ್ಕೆ ಬೇಕಾದ ಮನಸ್ಸು ಶಕ್ತಿಯನ್ನು ಸದಾ ಕೊಡು ಅಂತ ಪ್ರಾರ್ಥಿಸುತ್ತಾ..
ನನ್ನ ಚಾಕು ಚೂರಿ ಕತ್ರಿ ಮಚ್ಚು ಕತ್ತಿಯ ಕಂತೆ ಪುರಾಣಕ್ಕೆ ಇಲ್ಲಿಗೆ ಕತ್ರಿ ಹಾಕ್ತೀನಿ..
ನಮಸ್ಕಾರ
D C Ranganatha Rao
9741128413
ನೆನಪಿನ ಕತ್ತಿಗೆ ಸಾಣೆ
ReplyDeleteನನ್ನ ಒಂದು ಮೆಚ್ಚಿನ ಹಾಗೂ ಬಹಳ ನೆನಪಿಗೆ ಬರುವ ಒಂದು ವಿಷಯ ಇದು...ಬಹುತೇಕ ಮುಸ್ಲಿಂರೇ ಈ ಕಲೆಯಲ್ಲಿ ನಿಷ್ಣಾತರು ..
ReplyDeleteಅವರು ಕೂಗುತ್ತ ಇದ್ದ ರೀತಿ ಈಗಲೂ ಒಮ್ಮೊಮ್ಮೆ ನಾನು ಅನುಸರಿಸಿ ಆನಂದ ಪಡುತ್ತೇನೆ... ನಮ್ಮ ಏರಿಯಾಲ್ಲಿ ಇತ್ತೀಚೆಗೆ ಮತ್ತೆ ಅವರು ಕಾಣಿಸಿ ಕೊಳ್ಳುತ್ತಿದ್ದಾರೆ ...ಹತ್ತು ಹನ್ನೆರಡು ದಿನಗಳ ಹಿಂದೆ ನಮ್ಮ ಮನೆಯ ಚಾಕುಗಳು ಇವರಿಂದ ಹರಿತಗೊಂಡಿದೆ...
ಯಾವುದೇ ಆಯುಧಗಳು ತುಕ್ಕು ಹಿಡಿದರೆ ಹಾಳಾಗುತ್ತದೆ ..ಅದೇ ರೀತಿ ನಮ್ಮ ಬುದ್ಧಿ ಕೂಡ...ಅದರಿಂದಾಗಿ ಆಗಾಗ ಉತ್ತಮ ಪುಸ್ತಕ, ಉತ್ತಮ ವಿಚಾರ ನಿಮ್ಮoತ ಗೆಳೆಯರ ಲೇಖನ ಹಾಗೂ ಒಡನಾಟದಿಂದ ಮನಸ್ಸಿಗೆ ಸಾಣೆ ಹಿಡಿದು ನೆಮ್ಮದಿಯ ಬದುಕು ಸಾಗಿಸೋಣ ...ಸಿನಿಮಾ ಶೈಲಿಯ ಚಾಕು,ಚೂರಿ,ಮಚ್ಚು,ಲಾಂಗ್...ಬಿಟ್ಟು ಕೇವಲ ಗೃಹ ಬಳಕೆಯ ವಸ್ತುಗಳ ರೀತಿ ಉಪಯೋಗ ವಾಗಲಿ ಎಂದು ಆಶಿಸುತ್ತಾ ನಿಮ್ಮ ಲೇಖನಕ್ಕೆ
ಧನ್ಯವಾದಗಳು
ಬಾಬು
Eelege Mane nu sharp irabeku . especially to grate the coconut .good flow of the subject sir .
ReplyDelete👌👌👌
ReplyDeleteಹತ್ತಾರು ಆಯುಧ ಗಳ ಪರಿಚಯವಿದೆ. ಆಯುಧ ಗಳ ಉಪಯೋಗ ಕ್ರಮ ಸ್ಪಷ್ಟ ವಾಗಿದೆ. ಅರೆಯುವಕಲ್ಲು ಸುಂದರವಾಗಿ ಕಾಣುತ್ತದೆ. ಲೇಖನ ಓದಿದೆ ಚೆನ್ನಾಗಿದೆ. ನಮಸ್ಕಾರ
ReplyDeleteಮಾನ್ಯರೇ,
ReplyDeleteಚಾಕು ಮಚ್ಚು ರಂಪ, ವ್ಯವಸಾಯದ ಪರಿಕರಗಳನ್ನು ವಿವಿದ ರೀತಿಯಲ್ಲಿ ಸಾಣೆ ಹಿಡಿಯುವುದನ್ನು ಲೇಖಕರು ಬಳಸಿಕೊಂಡಿರುವುದು ಗಮನಾರ್ಹ. ಲೇಖಕರು ತಮ್ಮ ಪೆನ್ನಿಗೆ ಎಲ್ಲಿ ಸಾಣೆ ಹಿಡಿಸಿಕೊಂಡರೋ ತಿಳಿಯದು 😅
ಈಗ ಈ ವಿವಿಧ ಉಪಕರಣಗಳಿಗೆ ಬದಲಾಗಿ ಅನೇಕ ಯಂತ್ರಗಳು ಬಂದಿರುವುದು ಸಾಣೆ ಹಿಡಿಯುವ ಕಲೆ ಕ್ರಮೇಣವಾಗಿ ನಶಿಸಿ ಹೋಗುತ್ತಿದೆ.
ಲೇಖಕರು ತಮ್ಮ ಲೇಖನದಲ್ಲಿ ಪ್ರತಿ ಬಾರಿಯೂ ವಿಧವಿಧವಾದ ವಿಷಯಗಳ ಬಗ್ಗೆ ಪ್ರಸ್ತಾಪಿಸುವುದು ವಿಶೇಷ. ಮತ್ತು ಆ ಮೂಲಕ ನಮ್ಮ ಹಳೆಯ ನೆನಪುಗಳನ್ನು ಇಕ್ಕಿ ತೆಗೆಯುವ ಕಲೆಯೇ ಚೆನ್ನ.
ಕೊನೆ ಹನಿ:
ಮೇಲೆ ತಿಳಿಸಿರುವ ಎಲ್ಲಾ ಉಪಕರಣಗಳು ಕತ್ತರಿಸುತ್ತದೆ. ಆದರೆ ಸೂಜಿ ಮಾತ್ರ ಹೊಲೆಯುವ ಕಾರ್ಯ ಮಾಡಿ ವಿಭಿನ್ನವಾಗಿದೆ. ಪಾಪ ಅದಕ್ಕೆ ಸಾಣೆ ಹಿಡಿಸಿಕೊಳ್ಳುವ ಅದೃಷ್ಟ ಇಲ್ಲ 🤣.
ಆದರದೊಂದಿಗೆ,
ಗುರು ಪ್ರಸನ್ನ
ಚಿಂತಾಮಣಿ
ತಮ್ಮ ಚಾಕು,ಚೂರಿ,ಕೊಯ್ಲಿಗೆ ಸಾಣೆ ಶೀರ್ಷಿಕೆ ಉತ್ತಮವಾಗಿ ಮೂಡಿಬಂದಿದೆ.ಧನ್ಯವಾದಗಳು.ಯಾವುದೇ ಕೆಲಸ ಉತ್ತಮವಾಗಿ ಆಗಬೆಕೆಂದರೆ ಪೂರ್ವಸಿದ್ಧತೆ,ಜಾಣ್ಮೆಯೊಂದಿಗ ಉತ್ತಮ ಶ್ರಮ ಮುಖ್ಯವಾದ ಸಂದೇಶವಾಗಿರುತ್ತದೆ. ಮತ್ತೊಮ್ಮಧನ್ಯವಾದಗಳು.ದೇವೇಂದ್ರಪ್ಪ
ReplyDelete