ಆಪ್ತ ಸಮಾಲೋಚಕನಾಗಿ...

 



ಹೊಸ ಸಣ್ಣ ಕಾರ್ಖಾನೆಯನ್ನು ಶುರು ಮಾಡಿ... ಕಷ್ಟಗಳನ್ನು ಅನುಭವಿಸಿ ಅದರಿಂದ ಹೊರಬಂದು ಹೊಸ ಜೀವನವನ್ನು ಕಟ್ಟಿಕೊಂಡು.. ಎಲ್ಲ ಕೋಟಲೆಗಳನ್ನು ನಿವಾರಿಸಿಕೊಂಡು.. ಹೊಟ್ಟೆಯೂ ತುಂಬಿದಾಗ... ಮನಸ್ಸಿನಲ್ಲಿ ಒಂದು ಭಾವ ಮೂಡಿತು ಏನಾದರೂ ಮಾಡಬೇಕೆಂದು... ಅದು ಹಣ ಸಂಪಾದನೆಯ ಗುರಿ ಆಗಿರಬಾರದು... ಸಾಧ್ಯವಾದರೆ ಸಮಾಜದ ಋಣ ಭಾರವನ್ನು ತೀರಿಸುವ ದಾರಿಯಲ್ಲಿರಬೇಕು. ಏನು ಮಾಡಬೇಕೆಂಬ ಗೊತ್ತು ಗುರಿಯಿಲ್ಲದೆ... ಬರೀ ಚಿಂತನೆಯ/ ಸ್ನೇಹಿತರ ಜೊತೆ ಮಾತುಕತೆಯ ರೂಪದಲ್ಲೇ ಕೆಲ ದಿನ ಇತ್ತು. ಹೀಗೊಂದು ಸಂಜೆ ನನ್ನ ಸ್ನೇಹಿತ ಆನಂದ್ ಅವರ ಫ್ಯಾಕ್ಟರಿಯಲ್ಲಿ  ಕೂತು ಹರಟೆ ಹೊಡೆಯುತ್ತಿದ್ದಾಗ.. ಮತ್ತೆ ಬಂತು ಈ ವಿಷಯ... ಕಾಕತಾಳಿಯವಾಗಿ.. ಅವರ ತಲೆಯಲ್ಲಿದ್ದ ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ ನಡೆಯುವ ಆಪ್ತ ಸಮಾಲೋಚಕರ ತರಬೇತಿ ಶಿಬಿರದ ಬಗ್ಗೆ ಹೇಳಿದರು. ಆಪ್ತ ಸಮಾಲೋಚನೆ ಎಂಬುವ ವಿಷಯದಲ್ಲಿ ಏನೇನೂ ಜ್ಞಾನವಿಲ್ಲದಿದ್ದರೂ, ಯಾಕೆ ಪ್ರಯತ್ನ ಮಾಡಬಾರದು ಎಂಬ ಪ್ರಶ್ನೆ ನಮ್ಮ ಮುಂದೆ ಬಂತು. ತಕ್ಷಣ ಅವರು ಯಾರಿಗೋ ಫೋನ್ ಮಾಡಿ ವಿಚಾರಿಸಿದಾಗ.. ಈಗಾಗಲೇ ಒಂದು ಕ್ಲಾಸ್ ಆಗಿದೆ ಎಂದು ತಿಳಿಯಿತು. ನಾವಿಬ್ಬರೂ ಒಂದು ನಿರ್ಧಾರಕ್ಕೆ ಬಂದು ಹೇಗಾದರಾಗಲಿ, ಹೋಗಿ ಸೇರಿಕೊಳ್ಳೋಣ, ಸಲ್ಪ ಸಮಯ ನೋಡಿ, ಇಷ್ಟವಾದರೆ ಮುಂದುವರಿಸುವುದು ಇಲ್ಲದಿದ್ದರೆ....              ದೈವೇಚ್ಚೆ 1992 ರಲ್ಲಿ ಶುರುವಾದ ಈ ಕಾಯಕ ಇಂದೂ ಮುಂದುವರೆದಿದೆ.

ತರಬೇತಿಯ ಕೊನೆಯ ಹಂತದಲ್ಲಿದ್ದಾಗ ಬಂದಿದ್ದೇ ಡಿಸೆಂಬರ್ 6ನೇ ತಾರೀಕು. ಅಂದು ನಮ್ಮ ಮನೆಯವರೊಂದಿಗೆ ಮನೆದೇವರು ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನಕ್ಕೆ ಹೋಗಿದ್ದೆವು. ಅಲ್ಲಿಂದ ವಾಪಸ್ ಬರುವಾಗ ಸುತ್ತಲಿನ ವಾತಾವರಣ ಅಸಹಜವಾಗಿತ್ತು.. ನಂತರ ತಿಳಿದಿದ್ದು ಅಯೋಧ್ಯೆಯಲ್ಲಿನ ಕಟ್ಟಡದ ನೆಲಸಮ ಆಗಿದೆ ಎಂದು. ಪ್ರಸನ್ನ ಆಪ್ತ ಸಲಹಾ ಕೇಂದ್ರ ಹಿಂದೂ ಸೇವಾ ಪ್ರತಿಷ್ಠಾನದ ಒಂದು ಭಾಗ, ಹಾಗೆ ತರಬೇತಿ ಶಿಬಿರ ನಡೆಯುತ್ತಿದ್ದದ್ದು ವಿಶ್ವ ಹಿಂದೂ ಪರಿಷತ್ತಿನ ಧರ್ಮಶ್ರೀ ಕಟ್ಟಡದಲ್ಲಿ... ರಾಜಕೀಯ ಕಾರಣಗಳಿಗಾಗಿ ಧರ್ಮಶ್ರೀಯನ್ನು ಮುಚ್ಚಲಾಗಿತ್ತು,  ನಮ್ಮ ತರಬೇತಿಯೂ ಹಠಾತ್ ಕೊನೆಗೊಂಡಿತ್ತು.  ಹಾಗಾಗಿ ನಾನು ಮತ್ತು ಆನಂದ್ ಇಬ್ಬರೂ ಅರೆಬೆಂದ( half baked counselors) ಆಪ್ತ ಸಮಾಲೋಚಕರಾಗಿ ರೂಪುಗೊಂಡೆವು. ಕಾಲಕ್ರಮೇಣ ಒಂದಷ್ಟು ಪರಿಣಿತಿಯನ್ನು ಪಡೆದು ನಮ್ಮ ಕಾಯಕ ಮುಂದುವರಿಸಿ... ತರಬೇತಿಯ ಶಿಬಿರಗಳಲ್ಲಿ ಪಾಠ ಮಾಡುವ ಮಟ್ಟಕ್ಕೆ ಬೆಳೆದೆವು ಎಂಬುದು  ಸಂತೋಷದ ಸಂಗತಿ.

ಈ ಪಯಣದಲ್ಲಿ ನಾನು ಭಾಗವಾಗಿದ್ದ ಕೆಲವು ಘಟನೆಗಳ ನೆನಪು ಈ ಲೇಖನ.

ಗಂಡಸರನ್ನು ಕಂಡ್ರೆ ಇಷ್ಟ ಇಲ್ಲ

ಸುಮಾರು 45 ವರ್ಷದ ಹೆಂಗಸು ಆಪ್ತ ಸಮಾಲೋಚನೆಗಾಗಿ ಬಂದಿದ್ದು.. ಒಂದಷ್ಟು ತನ್ನ ಸಮಸ್ಯೆಗಳನ್ನು ಹೇಳಿಕೊಂಡದ್ದು... ಮುಖ್ಯವಾಗಿ ಗಂಡನ ಮೇಲಿನ ಅಸಮಾಧಾನ ಎದ್ದು ಕಾಣುತ್ತಿತ್ತು. ಮೊದಲ ಹಂತದ ಸಮಾಧಾನವನ್ನು ಹೇಳಿ ಮತ್ತೆ ಬರಲು ಸೂಚಿಸಿ ಕಳಿಸಿ.... ಮುಂದಿನ ವಾರ ಬಂದವರು ಇನ್ನೊಂದಷ್ಟು ಅಂತರಾಳದ ಮಾತುಗಳನ್ನು ಹೇಳಿಕೊಂಡು... ಗಂಡಸರುಗಳಿಂದಾದ ಅನ್ಯಾಯ ಅಪಮಾನ ಮುಂತಾಗಿ... ಹಾಗೇ ಮುಂದುವರಿದು ಗಂಡಸರ ಮೇಲಿನ ಅಪನಂಬಿಕೆಯ ಹಾಗೂ ಅಇಷ್ಟದ ಬಗ್ಗೆ ಹೇಳಿಕೊಂಡು.... ಮುಂದೆ ಹೇಳಿದ ವಾಕ್ಯ " ನನಗೆ ಗಂಡಸರನ್ನು ಕಂಡರೆ ಆಗುವುದಿಲ್ಲ.. ಅವರೊಡನೆ ಮಾತನಾಡುವುದೂ ಇಷ್ಟವಿಲ್ಲ" ಎಂದು. ನನಗೆ ಕೊಂಚ ಗಲಿಬಿಲಿ... ಸಾವರಿಸಿಕೊಂಡು ಕೇಳಿದೆ... "ಅಲ್ಲಮ್ಮ ನಾನೂ ಒಬ್ಬ ಗಂಡಸು.. ನನ್ನತ್ರ ಎಲ್ಲ ಮಾತಾಡಿದರಲ್ಲ"... ಅದಕ್ಕೆ ತುಂಬ ಸಮಾಧಾನದಿಂದ ಕೊಟ್ಟ ಉತ್ತರ.. "ನೀವು ಪರ್ವಾಗಿಲ್ಲ ಬಿಡಿ ಸರ್ ..." ಅಂದ್ರೆ ನಾನು ಗಂಡಸು(?)... ಮುಖಮುಖ ನೋಡಿದೆ.. ಆಕೆ ನನಗೇ ಸಮಾಧಾನ ಮಾಡಿದರು... "ಹಾಗಲ್ಲ ಸರ್... ನೀವು ನಾನು ಹೇಳಿದ್ದನ್ನ ಸಮಾಧಾನವಾಗಿ ಕೇಳಿದಿರಿ.. ಹಾಗೆ ಒಂದಷ್ಟು ಬುದ್ಧಿವಾದ ಹೇಳಿದಿರಿ...." ಅಬ್ಬ.. ನನಗೆ ಆಗ ನಿಜವಾಗಲೂ ಸಮಾಧಾನ ಆಯ್ತು.

7ನೇ ತರಗತಿಯ ಹುಡುಗನ ಅಮ್ಮ 

ಜೂನ್ ತಿಂಗಳು... ಒಬ್ಬ ಅಮ್ಮ ತನ್ನ 7ನೇ ಕ್ಲಾಸಿನ ಮಗನನ್ನು ಕರೆತಂದು... ಪಕ್ಕದಲ್ಲಿ ಕೂಡಿಸಿಕೊಂಡು ಉದ್ದುದ್ದನೆಯ ದೂರುಗಳನ್ನು ಮಗನ ಮೇಲೆ ಹೇಳಿ... ಬುದ್ಧಿವಂತನೆಂದೂ ಸರಿಯಾಗಿ ಓದಿದರೆ ಇನ್ನೂ ಜಾಸ್ತಿ ನಂಬರು ತೊಗೊಳ್ಳಬಹುದೆಂದೂ.. ಎಲ್ಲ ಸೌಕರ್ಯಗಳನ್ನು ಕೊಟ್ಟಿದ್ದೇವೆಂದೂ.. ಆದರೆ ಅವನು ಮಾತ್ರ ಸರಿಯಾಗಿ ಓದದೆ ಕಾಲ ಕಳೆಯುತ್ತಾನೆಂದು.... ಸ್ವಲ್ಪ ಬುದ್ಧಿ ಹೇಳಿ ಎಂದು.....

ಸಾಮಾನ್ಯವಾಗಿ ತಂದೆ ತಾಯಿಯರು ಹೇಳುವ ಮಾತಿದು... ತಾವು ಸಾಧಿಸಲಾಗದಿದ್ದುದ್ದನ್ನು... ತಮ್ಮ ಮಕ್ಕಳ ಮೂಲಕ ಕಾಣುವ ಬಯಕೆ..

ಹುಡುಗನೊಡನೆ ಒಂಟಿಯಾಗಿ ಮಾತನಾಡಿದೆ,  "ಯಾವಾಗಲೂ ಓದು ಓದು ಅಂತ ವರಾತ ಮಾಡ್ತಾರೆ.. ಎಷ್ಟು ಓದಿದರೂ ಸಾಲ್ದು ಬೈತಾರೆ.. ಹೇಗಿದ್ರು ಬೈತಾರೆ ಅದಕ್ಕೆ ನಾನು ಅವ್ರ್ ಹೇಳಿದಾಗೆಲ್ಲ ಓದಲ್ಲ" ತರ್ಕ ಬದ್ಧವಾಗಿ ಅವನು ಹೇಳಿದ್ದರಲ್ಲೂ ಒಂದು ಅರ್ಥವಿತ್ತು. ಆದರೆ ವಾಸ್ತವಿಕಕ್ಕೆ ಸ್ವಲ್ಪ ದೂರವಿತ್ತು ಅನಿಸಿ.. ಇದು ಓದುವ ಸಮಯ.. ಏಕೆ ಓದಬೇಕು... ಏನಾಗಬೇಕು ಎಂಬ ಗುರಿ ಅವನ ಮನಸ್ಸಿನಲ್ಲಿದೆ... ಅದನ್ನು ತಲುಪಬೇಕಾದರೆ ಮಾಡಬೇಕಾದ್ದು... ಎಲ್ಲವನ್ನು ವಿಚಾರಿಸಿ, ಓದುವ ಕ್ರಮವನ್ನು ಹೇಳಿ..... ಅಮ್ಮನಿಗೆ ಸ್ವಲ್ಪ ತಾಳ್ಮೆ ಹಾಗೂ ಅವನ ಮೇಲೆ ಓದಲು ಒತ್ತಡ ಹಾಕದಂತೆ, ಹೇಳಿ ಕಳಿಸಿದೆ... ಮತ್ತೊಮ್ಮೆ ಬಂದಾಗ ಪರಿಸ್ಥಿತಿ ಹತೋಟಿಯಲ್ಲಿದೆ ಎಂದೆನಿಸಿತು... ಸಂತೋಷವೂ ಸಹ ..ನನ್ನ ಪ್ರಯತ್ನ ಸರಿಯಾದ ಹಾದಿಯಲ್ಲಿದೆ ಎಂದು.

ಕಾಲ ಉರುಳಿತು.. ಮಾರ್ಚ್ ಕೊನೆಯ ದಿನಗಳು... ಪರೀಕ್ಷೆಯ ಫಲಿತಾಂಶ ಬರುವ ಸಮಯ... ಬಂದರು ಮತ್ತೊಮ್ಮೆ ಆ ತಾಯಿ ಮಗ. ತಾಯಿಯ ಮುಖದಲ್ಲಿ ನೋವು ಎದ್ದು ಕಾಣುತ್ತಿತ್ತು... ಕೆಲ ಕ್ಷಣದಲ್ಲಿ ಆಕೆಯ ಕಣ್ಣಲ್ಲಿ ನೀರು.... ಅದನ್ನು ನೋಡಿ ನನಗನಿಸಿದ್ದು ಮಗ ಪಾಸಾಗಿಲ್ಲವೆಂದು... ಮಗನ ಮುಖದಲ್ಲಿ ತಾತ್ಸಾರ ಭಾವ... ಅವನನ್ನು ಪ್ರಶ್ನಾರ್ಥಕ ಭಾವದಿಂದ ನೋಡಿದೆ... ಅಮ್ಮನ ಕಡೆ ಕೈ ತೋರಿಸುತ್ತಾ.." ಇವರಿಗೆ ಎಷ್ಟು ಮಾಡಿದರೂ ಸಮಾಧಾನ ಇಲ್ಲ.. ನಿಮ್ಮ ಮಾತು ಕೇಳೀನೂ ಬೈಸ್ಕೊಂಡೆ" ಅಂತ ನನ್ನನ್ನೂ ದೂರಿದ. ಪರಿಸ್ಥಿತಿ ಹದಕ್ಕೆ ಬಂದ ನಂತರ ತಿಳಿದದ್ದು.. ಮಗ 92% ತೆಗೆದಿದ್ದಾನೆ ಇನ್ ಸ್ವಲ್ಪ ಪ್ರಯತ್ನ ಮಾಡಿದ್ದರೆ ಜಾಸ್ತಿ ತೇಗೀಬಹುದಿತ್ತು... ನನ್ನ ಸ್ನೇಹಿತೆಯ ಮಗನನ್ನು ಮೀರಿಸಬಹುದಿತ್ತು.... 

ಕೊನೆಯೆಲ್ಲಿದೆ? 

ಮಗ ಮಾಡಿದ್ದಕ್ಕೆ ಭೇಷ್ ಎನ್ನ ಬೇಕಿತ್ತು... ನಂತರ ಏನಾದರೂ ಹೇಳಿದ್ದರೆ ಅದಕ್ಕೊಂದು ಬೆಲೆ ಇರುತ್ತಿತ್ತು... ತಿಪ್ಪೆ ಸಾರಿಸಿದಂತೆ ಒಂದು ಸಮಾಧಾನ ಹೇಳಿ ಕಳಿಸಿದೆ.

ಆತ್ಮಹತ್ಯೆ ಪ್ರಯತ್ನದ ಪ್ರಸಂಗ

ಗಂಡ ಹೆಂಡತಿಯ ಮಧ್ಯೆ ವಿರಸ.. ಕೆಲವು ಸಕಾರಣ, ಕೆಲವು ವಿನಾಕಾರಣ... ಪರಿಸ್ಥಿತಿ ಹದಗೆಟ್ಟಿತ್ತು. ಎರಡು ಬಾರಿ ಅವರುಗಳೊಡನೆ ಮಾತನಾಡಿ ಹೊಂದಾಣಿಕೆಯ ಮಾರ್ಗ ಗಳನ್ನು ಹೇಳಿಯಾಗಿತ್ತು. ಈ ಸಲ ಬಂದಾಗ ಆಕೆಯ ಮನಸ್ಸು ತುಂಬಾ ವ್ಯಗ್ರ ಗೊಂಡಿತ್ತು. ಕೋಪ ತಾರಕಕ್ಕೇರಿ ಆಕೆ ಕೈಯಲ್ಲಿನ ಬಳೆ, ಮಾಂಗಲ್ಯ ಸರ  ಗಂಡನ ಮೇಲೆ ಕಿತ್ತೆಸೆದು.. ಹೊರಗೋಡಿದರು.... ಹೇಗೋ ಸಂಭಾಳಿಸಿ ಮನೆಗೆ ಕಳಿಸಿದ್ದಾಯಿತು.

ಎರಡು ದಿನದ ನಂತರ ಬಂದ ಸುದ್ದಿ... ಆಕೆ ಆತ್ಮಹತ್ಯೆಯ ಪ್ರಯತ್ನ ಮಾಡಿ, ಆಸ್ಪತ್ರೆಯಲ್ಲಿದ್ದಾಳೆಂದೂ... ಅರೆಪ್ರಜ್ಞಾವಸ್ಥೆಯಲ್ಲಿ ಬಡಬಡಿಸುವಾಗ ನನ್ನ ಹೆಸರನ್ನು ಆಗಾಗ ಹೇಳುತ್ತಿದ್ದಾಳೆಂದೂ ತಿಳಿದು, ನನಗೆ ಗಾಬರಿ, ಭಯ, ಆತಂಕ ಆಗಿದ್ದು ಸುಳ್ಳಲ್ಲ.... ಪೊಲೀಸ್ ಕೇಸ್ ಆದರೆ.... ಆಗುವ ಪರಿಣಾಮಗಳನ್ನು ನೆನೆದು ... ಮನಸ್ಸಿಗಾದ ಗಲಿಬಿಲಿಗೆ.. ನನಗೇ ಸಮಾಧಾನ ಹೇಳುವವರು ಬೇಕಿತ್ತು. ಎಂಥ ವಿಪರ್ಯಾಸ ಅಲ್ಲವೇ? 

ಡಾ. ಸಿ. ಆರ್. ಚಂದ್ರಶೇಖರ್ ಅವರಿಗೆ ಫೋನ್ ಮಾಡಿ ನನ್ನ ಕಳವಳವನ್ನು ಹೇಳಿಕೊಂಡೆ... ಅದರಲ್ಲೂ ಪೊಲೀಸ್ ಕೇಸ್ ಎಂಬ ವಿಷಯ..." ಯಾವುದೇ ಆತಂಕ ಬೇಡ, ಅವರು ನಮ್ಮಲ್ಲಿಗೆ ಆಪ್ತ ಸಮಾಲೋಚನೆಗೆ ಬಂದಿದ್ದರು ಎಂಬುವ ದಾಖಲೆಗಳು ನಮ್ಮಲ್ಲಿವೆ... ನೀವು ಆಪ್ತ ಸಮಾಲೋಚಕರಾಗಿ ಅವರೊಡನೆ ಮಾತನಾಡಿದ್ದೀರಿ... ಹಾಗಾಗಿ ಏನೂ ಯೋಚನೆ ಮಾಡಬೇಕಾಗಿಲ್ಲ"... ಒಂದಷ್ಟು ಸಾಂತ್ವನ ಸಿಕ್ಕರೂ ಮನಸ್ಸಿನ ಮೂಲೆಯಲ್ಲೆಲ್ಲೋ ಆತಂಕ ಮನೆ ಮಾಡಿತ್ತು. ಹೇಗೋ ಅದು ಪೊಲೀಸ್ ಇಲಾಖೆಯವರೆಗೆ ಹೋಗಲಿಲ್ಲ ಎನ್ನುವುದೇ ಒಂದು ಸಮಾಧಾನ... ಜೊತೆ ಜೊತೆಗೆ ಆ ಘಟನೆಯಿಂದ ತಿರುವು ಸಿಕ್ಕಿ ಆ ದಂಪತಿಗಳು ಸಾಕಷ್ಟು ಸಂಯಮದಿಂದ ಜೊತೆಯಲ್ಲಿದ್ದಾರೆ ಎನ್ನುವುದೇ ಹೆಚ್ಚಿನ ಸಂತೋಷ.

ಗೌಪ್ಯತೆ ಕಾಪಾಡುವುದು

ವ್ಯಕ್ತಿಗಳ ಹಾಗೂ ಅವರು ಹೇಳಿದ ಕೆಲವು ಮನದಾಳದ ಮಾತುಗಳನ್ನು ಗುಟ್ಟಾಗಿಡುವುದು ಅವರ ದೃಷ್ಟಿಯಿಂದ ಅನಿವಾರ್ಯ... ಅದು ಆಪ್ತ ಸಮಾಲೋಚಕರ ನೀತಿ ಸಂಹಿತೆಯೂ ಹೌದು. ಅದಕ್ಕೆ ಆಪ್ತ ಸಮಾಲೋಚನೆಗೆ  ಬಂದ ವ್ಯಕ್ತಿಗಳ ವಿಶ್ವಾಸವನ್ನು ಗಳಿಸುವುದು ಮೊದಲ ಹಂತ. ಒಬ್ಬ ಹೆಣ್ಣು ಮಗಳು, ಮೂರ್ನಾಲ್ಕು ಭೇಟಿಯ ನಂತರ... ಮೀನಾ ಮೇಷ ಎಣಿಸಿ.. ಕೆಲವು ವೈಯಕ್ತಿಕ  ವಿಷಯಗಳನ್ನು ಹಂಚಿಕೊಂಡಿದ್ದು..... ಅದು ಸಮಾಜದ ದೃಷ್ಟಿಯಿಂದ ತಪ್ಪು ಎನ್ನುವಂತದ್ದು. ನಂತರ ಆಕೆಗೆ ಆತಂಕ ಆಗಿರಬಹುದು, ಅನುಮಾನ ಬಂದಿರಬಹುದು.... ಈ ವಿಷಯಗಳು ಗುಟ್ಟಾಗಿಯೇ ಇರುತ್ತವೆಯೇ ಎಂದು. ಇದನ್ನು ಮೂರ್ನಾಲ್ಕು ಬಾರಿ ಒತ್ತಿ ಒತ್ತಿ ಕೇಳಿ ಸಮಾಧಾನ ಮಾಡಿಕೊಂಡಾಯ್ತು.

ಹೊರಗೆ ಹೋಗಲು ಅನುವಾಗಿ ಬಾಗಿಲು ತೆಗೆದು ಆಚೆ ಕಾಲಿಟ್ಟು, ಇನ್ನೊಬ್ಬರು ಒಳಗೆ ಬರಬೇಕು.. ಅಷ್ಟರಲ್ಲಿ ಮತ್ತೊಮ್ಮೆ ಆಕೆ ಒಳಗೆ ಬಂದು ಸಪ್ಪೆ ಮುಖದಲ್ಲಿ ನಿಂತರು.

ಕೂಡಲು ಹೇಳಿ...ಏನೆಂದು ಕೇಳಿದಾಗ ಬಂದ ಉತ್ತರ. "ಸರ್ ನೀವು ಈ ವಿಷಯಾನ ನಿಮ್ಮನೆಯವರ ಜೊತೆಯಲ್ಲೂ ಮಾತಾಡಲ್ವಾ?"... ಪಾಪ ಆಕೆಯ ಆತಂಕ/ ಅನುಮಾನ ಸಹಜವಾಗಿದ್ದು, ಅದನ್ನು ಪರಿಹರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಒಂದು ಕ್ಷಣ ಯೋಚಿಸಿ ಹೇಳಿದೆ " ನೋಡಮ್ಮ ಈ ವಿಚಾರವಾಗಿ, ನೀನು ಯಾವ ಯೋಚನೆಯನ್ನು ಮಾಡಬೇಡ. ನೀ ಹೇಳಿರುವ ವೈಯುಕ್ತಿಕ ವಿಷಯಗಳನ್ನು ನಾನು ಯಾರೊಂದಿಗೂ ಚರ್ಚಿಸುವುದಿಲ್ಲ, ನನ್ನ ಹೆಂಡತಿಯೊಂದಿಗೂ... ಇದು ನನ್ನ ಜೊತೆಯಲ್ಲೇ ಸುಟ್ಟು ಬೂದಿಯಾಗುತ್ತದೆ"... ತಕ್ಕಮಟ್ಟಿಗೆ ಸಮಾಧಾನವಾದಂತೆ ಕಂಡಿತು, ಹೊರ ಹೋದರು. ಸಮಾಧಾನದ ಸಂಗತಿ ಎಂದರೆ ನಂತರದ ದಿನಗಳಲ್ಲಿ ಎಲ್ಲ ವಿಷಯಗಳನ್ನು ಇನ್ನೂ ಮನಸ್ಸು ಬೆಚ್ಚಿ ಮಾತನಾಡಿ.. ಸಮಸ್ಯೆಗೆ ಪರಿಹಾರ ಕಂಡುಕೊಂಡು... ಸುಖವಾಗಿದ್ದೇನೆ ಎಂದು ತಿಳಿಸಿದ್ದು.

ಮನಸ್ಸು ಯಾವ ಸಮಯದಲ್ಲಿ ಯಾವ ವಿಷಯವನ್ನು ಯಾವ ದಿಕ್ಕಿನಲ್ಲಿ ಯೋಚಿಸುತ್ತೆ ಅನ್ನುವುದೇ ಒಂದು ನಿಗೂಢವಾದ ಸಂಗತಿ. 

ಮನಸ್ಸಿನಂತೆ ಮಹಾದೇವ ಎನ್ನುತ್ತಾರೆ, ಮನಸ್ಸು ಮರ್ಕಟ ಎನ್ನುತ್ತಾರೆ, ಮನೋಬಲದ ಮುಂದೆ ಬೇರೆ ಯಾವುದೂ ಇಲ್ಲ ಎನ್ನುತ್ತಾರೆ. ಹೀಗಿದ್ದರೂ, ಕಾರಣಾಂತರದಿಂದ ಮನಸ್ಸು ಕುಗ್ಗಿದಾಗ ಮಾತ್ರ, ಅದನ್ನು ಮೇಲೆತ್ತಲು ಬೇಕಾದ ಶಕ್ತಿಯನ್ನು  ಕ್ರೋಢೀಕರಿಸಿಕೊಳ್ಳುವುದು ಸವಾಲಿನ ಕೆಲಸ. ಅದಕ್ಕೆ ಸೂಕ್ತವಾದ ಶಕ್ತಿ ಯನ್ನು ತುಂಬಲು.. ಹಿಂದಿನ ಕಾಲದಲ್ಲಿ ದೊಡ್ಡ ಕುಟುಂಬವಿರುತ್ತಿತ್ತು... ಹಿರಿಯರಿರುತ್ತಿದ್ದರು..ಅವರೊಡನೆ ಮಾತಾಡಿ ಒಂದಷ್ಟು ನೆಮ್ಮದಿ ಪಡೆಯಬಹುದಿತ್ತು. ಕೂಡು ಕುಟುಂಬಗಳು ಕಡಿಮೆಯಾಗುತ್ತಾ ಬಂದಂತೆ.... ಹೊರಗಿನಿಂದ ಸಹಾಯ ಪಡೆದುಕೊಳ್ಳುವ ಅನಿವಾರ್ಯತೆ ಬಂತು. ಸಂಸಾರ ಗುಟ್ಟು -  ವ್ಯಾಧಿ ರಟ್ಟು ಅನ್ನುವ ಮಾತಿನಂತೆ.. ಸಂಸಾರದ ಗುಟ್ಟೇ ವ್ಯಾಧಿ ಆದಾಗ, ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲೇಬೇಕು.  ಈ ಅನಿವಾರ್ಯತೆಗೆ ತೆರೆದುಕೊಂಡ ದಾರಿಯೇ ಆಪ್ತ ಸಮಾಲೋಚನೆ. 

ನಾನು ಒಬ್ಬ ಆಪ್ತ ಸಮಾಲೋಚಕ ನಾಗಿ... ಕೆಲವು ವ್ಯಕ್ತಿಗಳಿಗಾದರೂ ಅಳಿಲ ಮರಳ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿಯೊಂದಿಗೆ ಲೇಖನಕ್ಕೆ ವಿರಾಮ ಕೊಡುತ್ತೇನೆ.

ನಮಸ್ಕಾರ


D C Ranganatha Rao

9741128413

    

    

Comments

  1. 👌👌👌👌

    ReplyDelete
  2. ನಾಗೇಂದ್ರ ಬಾಬು16 November 2024 at 10:46

    ನಿಮ್ಮ ಅಳಿಲುಸೇವೆ ಕೆಲವರಿಗೆ ಆನೆ ಬಲ
    ನೀಡಿರಬಹುದು ...ಮೊನ್ನೆ ಎಲ್ಲಿಯೂ ಓದಿದ
    ನೆನಪು ನಮ್ಮ ಅತಿ ದೊಡ್ಡ ವೈರಿ ಬಾಯಿ...
    ನಡೆದ ಘಟನೆಗಿಂತ ಹೆಚ್ಚಾಗಿ ಕಾಡುವುದು ಅದರ ಬಗ್ಗೆ ಇತರರು ಆಡುವ ಅಥಾವ ಆಡಬಹುದಾದಾ ಮಾತುಗಳು ಹೆಚ್ಚಿನ ಆಘಾತ ಮಾಡುತ್ತದೆ ಅಂತಹ ಸಮಯದಲ್ಲಿ
    ಆಪ್ತವಾದ ಹಿತ ನುಡಿಗಳ ಮೂಲಕ ಬದಲಾವಣೆ ಮಾಡಿದ ನಿಮ್ಮ ಸಮಾಜ ಸೇವೆ
    ಮೆಚ್ಚತಕ್ಕದ್ದು ...ಶುಭವಾಗಲಿ
    ಧನ್ಯವಾದಗಳು
    ಬಾಬು
    .

    ReplyDelete
  3. ಆಪ್ತ ಸಮಾಲೋಚಕರಾಗಿ ನಿಮ್ಮ ಸೇವೆ ಸ್ವಸ್ಥ ಸಮಾಜಕ್ಕೆ ಬಹಳ ಉಪಯುಕ್ತ, ಇಂದಿನ ದಿನಗಳ ಅನಿವಾರ್ಯವೂ ಹೌದು. ನಿಮ್ಮ ಬರಹ ಆಪ್ತವಾಗಿತ್ತು. 🙏

    ReplyDelete
  4. This is our luck to have like you counceller sir thanks .😊👍

    ReplyDelete
  5. ನಮಸ್ಕಾರ🙏

    ಹೊಸ ವಿಧಾನದ ಲೇಖನ ಇಷ್ಟ ಆಯ್ತು, ನಿಮ್ಮ ಬಾಲ್ಯದ ನೆನಪು ಮುಗಿಸಿ, ಈಗ ಪ್ರಬುದ್ಧರಾಗಿ ಜನರ ಕಷ್ಟ, ನೋವು, ದುಃಖಗಳನ್ನು ಶಮನ ಮಾಡುವ ಆಪ್ತಸಮಾಲೋಚಕರು ಕಾರ್ಯ ಸಮಾಜಕ್ಕೆ ನೀವು ಕೊಡುತ್ತಿರುವ ಕೊಡುಗೆ, ಧನ್ಯವಾದಗಳು🙏

    ರತ್ನಪ್ರಭಾ
    ಆಪ್ತಸಮಾಲೋಚಕರು
    (ನಿಮ್ಮ ಶಿಷ್ಯೆ)

    ReplyDelete
  6. ನಮಸ್ಕಾರ🙏

    ಈ ಲೇಖನ ತುಂಬಾ ಇಷ್ಟ ಆಯ್ತು. ಬಾಲ್ಯದ ತುಂಟಾಟ ಮುಗಿದು, ಈಗ ಪ್ರಬುದ್ಧರಾಗಿ ಬರೆದ ಕೇಸ್ ಸ್ಟಡಿ ಜನರಿಗೆ ಉಪಯುಕ್ತವಾಗುವ ವಿಷಯ. ಇನ್ನೂ ಹೆಚ್ಚಿನ ಲೇಖನದ ವಿಷಯಗಳು ಬರೆದರೆ ಜನ ಸಾಮಾನ್ಯರಿಗೆ ತಲುಪುತ್ತದೆ.
    ವೈವಿಧ್ಯತೆಯ ಲೇಖನಗಳು ಹರಿದು ಬರಲೆಂದು ಹಾರೈಸುತ್ತೇನೆ

    ರತ್ನಪ್ರಭಾ
    ಆಪ್ತಸಮಾಲೋಚಕರು
    ನಿಮ್ಮ ಶಿಷ್ಯೆ

    ReplyDelete
  7. ಮಾನ್ಯರೇ

    ಪ್ರಪ್ರಥಮವಾಗಿ ತಾವು ನನಗೆ ಪರಿಚಯವಾದ್ದದ್ದೇ ಈ ಆಪ್ತ ಸಮಾಲೋಚನೆಯಿಂದ. ತಮ್ಮ ಸಲಹೆ ಮಾರ್ಗದರ್ಶನ ಸೂಚನೆಗಳಿಂದ ನನ್ನ ಮಾನಸಿಕ ಸಮಸ್ಯೆಗೆ ಬಹಳಷ್ಟು ಪರಿಹಾರ ದೊರಕಿದೆ. ಅದಕ್ಕಾಗಿ ಧನ್ಯವಾದಗಳು.

    ಹೀಗೆಯೇ ನಿಮ್ಮ ಸಮಾಜಮುಖಿ ಸೇವೆ ಮುಂದುವರಿದು ಹಲವಾರು ಜನರಿಗೆ ಉಪಯೋಗವಾಗಲಿ ಎಂದು ಆಶಿಸುತ್ತೇನೆ.

    ವಂದನೆಗಳೊಂದಿಗೆ

    ಗುರು ಪ್ರಸನ್ನ
    ಚಿಂತಾಮಣಿ

    ReplyDelete
  8. ತಮ್ಮ' ಆಪ್ತ ಸಮಾಲೋಚಕನಾಗಿ ' ಶೀರ್ಷಿ ಮಕ್ಕಳ ಮಕ್ಕಳಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ಶೀರ್ಷಿಕೆಯಲ್ಲಿ ಅನೇಕ ಉದಾಹರಣೆಗಳು ಹಾಗೂ ಯಶಸ್ಸುಗಳನ್ನು ನೀಡಿದ್ದೀರಿ.ನಾನೂ ಸಹ ತಮ್ಮ ಉಪಯೋಗ ಪಡೆದು ನನ್ನ ಮಕ್ಕಳು ಮತ್ತು ಸಂಭಂದಿಕರ ಮಕ್ಕಳುಗಳ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಿರುತ್ತದೆ.ತಮಗೆ ಅನಂತ ಅನಂತ ಧನ್ಯವಾದಗಳು.ತಮಗೆ ಉತ್ತಮ ಆರೋಗ್ಯ, ಸಂತೋಷ ಹಾಗೂ, ನೆಮ್ಮದಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.ತಮ್ಮಿಂದ ಇನ್ನೂ ಹೆಚ್ಚಿನ ಜನರಿಗೆ ಅನುಕೂಲವಾಗಲೆಂದು ಆಶಿಸುತ್ತೇನೆ.ದೇವೇಂದ್ರಪ್ಪ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ