ನೀರು ತುಂಬುವ ಹಬ್ಬ ...




ಬೆಳಗಿನ walk ನಲ್ಲಿ ಕನ್ನಡದ "ವಾಕ್ ಪ್ರವಾಹ " ಜೋರಿತ್ತು.. ಹಾಗೇ ವಿಷಯ ದೀಪಾವಳಿ ಹಾಗೂ ನೀರು ತುಂಬುವ ಹಬ್ಬದ ಬಗ್ಗೆ ತಿರುಗಿತು... ಅವರವರ ವಿಶ್ಲೇಷಣೆಗಳು.. ಅನುಭವಗಳು ಹೊರಬಂದವು. ಈ ಮಧ್ಯೆ ಗೆಳೆಯ ವಾಸುದೇವ ಒಂದು ಬಾಣ ಬಿಟ್ಟರು... ಗುರಿ ನನ್ನ ಕಡೆಗೆ ನೇರವಾಗಿತ್ತು. " ಇನ್ನ ರಂಗಣ್ಣನ ಕಡೆಯಿಂದ ಬರುತ್ತೆ ಒಂದು ಬ್ಲಾಗು... ನೀರು ತುಂಬುವ ಹಬ್ಬ ನಮ್ಮ ಹಳ್ಳೀಲಿ ಹಂಗೆ ಹಿಂಗೆ.. ಅಂತ ಎಲ್ಲಾ".. ಅದರಲ್ಲಿ ಹಾಸ್ಯ ವ್ಯಂಗ್ಯ ಪ್ರೀತಿ ಎಲ್ಲ ತುಂಬಿತ್ತು ಅಂತ ನನಗನ್ನಿಸ್ತು.. ಆದರೆ ನನಗೆ ಸಿಕ್ಕಿದ್ದು ಮಾತ್ರ ಸ್ಪೂರ್ತಿ... ಹೌದಲ್ಲ ಈ ಸಂಧರ್ಬಕ್ಕೆ ಬ್ಲಾಗ್ ಬರೆಯಲು ಒಂದು ವಿಷಯ ಸಿಕ್ತು ಅಂತ... ಮನಸ್ಸು ಸಹಜವಾಗಿ ಅದರ ಬಗ್ಗೆ ಒಂದು ಯೋಚನೆ ಮಾಡ್ತು.


ನೀರು ತುಂಬುವ ಹಬ್ಬ... ದೀಪಾವಳಿಯ ಸಂಭ್ರಮದ ಮೊದಲ ದಿನ... ಸಂಜೆ ಎಂದರೂ ಸರಿಯೇ...

ಮೊದಲು ನೆನಪಿಗೆ ಬರುವುದೇ.. ನಮ್ಮ ದೊಡ್ಡಜಾಲದ ಮನೆಯಲ್ಲಿದ್ದ ವಿಶಾಲವಾದ ಬಚ್ಚಲು ಮನೆಯ ಹಂಡೆ.. ಕಂಠವಿಲ್ಲದ, ಅರ್ಧ ಹೊರ ಮೈ ಮಸಿಯಿಂದ ಕೂಡಿದ... ಇನ್ನರ್ಧ ಮಾತ್ರ ಥಳ ಥಳ ಹೊಳೆಯುತ್ತಾ, ದೊಡ್ಡದಾದ ಬೊಚ್ಚು ಬಾಯಿಯ ಒಲೆಯ ಮೇಲೆ ಕೂತಿರುತ್ತಿದ್ದ ದೃಶ್ಯ . ಅದಕ್ಕೆ ಸುಣ್ಣದ ಪಟ್ಟೆ ಬಳಿದು ಮೇಲೆ ಅರಿಶಿನ ಕುಂಕುಮ ಇಟ್ಟು, ತುಂಬಿ ತುಳುಕುವಷ್ಟು ನೀರು ಹಾಕಿ.. (ಜೊತೆಗೆ ಕೆಲಸೊಪ್ಪುಗಳನ್ನು ಹಾಕಿರುತ್ತಿದ್ದ ನೆನಪು). ಪಕ್ಕದಲ್ಲಿ ಬಚ್ಚಲು ಮನೆಯ ಬಿಂದಿಗೆಗಳು, ತಂಬಿಗೆ, ಬೋಸಿ ತಪ್ಪಲೆ (ಹಂಡೆಯಿಂದ ಬಿಸಿ ನೀರನ್ನು ತೋಡಿಕೊಳ್ಳುವ ವಿಶೇಷ ಪಾತ್ರೆ) ಎಲ್ಲವೂ ಸಿಂಗರಿಸಿಕೊಂಡು ಹೊಳೆಯುತ್ತಾ ನೀರು ತುಂಬಿಕೊಂಡು ಕುಳಿತಿರುತ್ತಿದ್ದವು. 



ಒಲೆಯ ಹಾಳಾದ ಕೆಲ ಭಾಗದಲ್ಲಿ ಮಣ್ಣನ್ನು ಮೆತ್ತಿ ಸಮಮಾಡಿ ಸಗಣಿಯಿಂದ ಸಾರಿಸಿ.. ರಂಗೋಲಿ ಕೆಮ್ಮಣ್ಣು ಇಟ್ಟು ಸಿಂಗರಿಸುತ್ತಿದ್ದದ್ದು. ಇದು ಬೆಳಿಗ್ಗೆ ಬೇಗನೆ ಒಲೆ ಹಚ್ಚಲು ತಯಾರಿ.  

ಅಮ್ಮ, ದೇವರ ಮುಂದೆ ದೀಪ ಬೆಳಗಿಸಿ ಒಂದು ಬಟ್ಟಲಲ್ಲಿ ಹರಳೆಣ್ಣೆ ಹಾಗೂ ಇನ್ನೊಂದರಲ್ಲಿ ಸೀಗೆಕಾಯಿ ಪುಡಿ.. ಜೊತೆಗೆ ಅರಿಶಿಣ ಕುಂಕುಮದ ತಟ್ಟೆಯನ್ನು ಇಟ್ಟು... ಬೆಳಿಗ್ಗೆ ಮಕ್ಕಳಿಗೆ ಎಣ್ಣೆ ಶಾಸ್ತ್ರ ಮಾಡಲು ತಯಾರಿ ಮಾಡುತ್ತಿದ್ದಳು.

ಸಾಮಾನ್ಯವಾಗಿ ರಾತ್ರಿ ಪಾಯಸದ ಊಟದೊಂದಿಗೆ ಅಂದಿನ ಕಾರ್ಯಕ್ರಮ ಸಮಾಪ್ತಿ.

ಮಾರನೆಯ ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲು ಏಳಬೇಕು ಎಂಬುದು ಒಂದು ಪದ್ಧತಿ..  ಅಮ್ಮ ಸಾರಿಸಿ ಗುಡಿಸಿ ರಂಗೋಲಿ.. ಅದರಲ್ಲೂ ಮಣೆಯ ಕೆಳಗೆ ಹಾಕುವ ಒಂದು ವಿಶೇಷ ಹಸೆಮಣಿ ರಂಗೋಲಿ ಹಾಕಿ ,


ಅದರ ಮೇಲೆ ಮಣೆಯನ್ನಿಟ್ಟು, ಮಕ್ಕಳನ್ನು ಕೂಡಿಸಿ.. ಹಣೆಗೆ ಕುಂಕುಮ ಇಟ್ಟು, ಹೂವನ್ನು ಎಣ್ಣೆಯಲ್ಲಿ ಅದ್ದಿ ಆಶೀರ್ವಚನ ಹೇಳುತ್ತಾ, ನೆತ್ತಿಗೆ ಇಟ್ಟು ಶಾಸ್ತ್ರ ಮಾಡಿ... ನಂತರ ಕೈತುಂಬ ಎಣ್ಣೆಯನ್ನು ತೆಗೆದು ನಮ್ಮ ತಲೆಗೆ ಹಚ್ಚಿ, ತಟ್ಟಿ... ಎರಡು ಕೈಯಲ್ಲಿ ಬಲವಾಗಿ ಉಜ್ಜಿ ಎಣ್ಣೆಯನ್ನು ತಲೆಗೆ ಇಳಿಸುತ್ತಿದ್ದದ್ದು... ತನ್ನ ಎರಡು ಕೈ ತೋರು ಬೆರಳುಗಳಿಂದ ಹರಿಶಿಣವನ್ನು ಮುಟ್ಟಿ.. ಕೆನ್ನೆಗೆ ಹಚ್ಚಿ... ಅಂಗೈಯಲ್ಲಿ ಉಳಿದ ಎಣ್ಣೆಯನ್ನು ನನ್ನ ಕೈಗೆ, ಪಾದಕ್ಕೆ ಹಚ್ಚಿ, ಅದೇ ಕೈಬೆರಳುಗಳನ್ನು ನೆಲಕ್ಕೆರಡು ಬಾರಿ ಮುಟ್ಟಿಸಿದರೆ ಎಣ್ಣೆ ಹಚ್ಚುವ ಮೊದಲಘಟ್ಟ ಮುಗಿದಂತೆ.


ನಂತರ ಪಟಾಕಿ ಹೊಡೆಯುವ ಸಂಭ್ರಮ.  ಇದರ ಮಧ್ಯೆ ಠುಸ್ ಎಂದ ಪಟಾಕಿಗಳನ್ನು ತಂದು ನೀರೊಲೆಗೆ ಹಾಕಿ ಅದು ಹೊತ್ತಿ ಉರಿಯುವುದನ್ನು ನೋಡುವ ಸಂಭ್ರಮ. ಅಪ್ಪ ಆ ಸಮಯಕ್ಕೆ ಬಂದರೆ ಒಲೆ ಉರಿಸುತ್ತಿದ್ದೇವೆ ಎಂದು ತೋರಿಕೆ.. ಒಲೆಯ ಮುಂದೆ ಕೂತಾಗ ಕಾಲುಗಳು ಬಿಸಿಯಾಗಿ ಅದನ್ನು ಕೈಯಿಂದ ಒರೆಸಿಕೊಂಡು ಸಮ ಮಾಡಿಕೊಳ್ಳುವುದು... ಕೆಲವು ಸಲ ಸೌದೆ ಸಿಡಿದು ಅದರ ಕಿಡಿಗಳು ಮೈ ಮೇಲೆ ಬಿದ್ದದ್ದು ಉಂಟು... ಆಗ ಗಾಬರಿ.... ಅದಕ್ಕೆ ತಕ್ಕಾಗಿ ನಮ್ಮ ಸ್ಥಳ ಪಲ್ಲಟ. ಮತ್ತೊಂದು ನೆನಪು ...ಈ ಒಲೆಯಲ್ಲೇ ನಾವು ಆಲೂಗಡ್ಡೆ, ಈರುಳ್ಳಿ, ಗೆಣಸು, ಅವರೇಕಾಯಿ, ರಾಗಿತೆನೆ ಇವುಗಳನ್ನೆಲ್ಲ ಕೆಂಡದಲ್ಲಿ ಹಾಕಿ ಸುಟ್ಟು ತಿನ್ನುತ್ತಿದ್ದದ್ದು. ತೆಂಗಿನ ಚಿಪ್ಪಿನಲ್ಲಿ ಈ ಒಲೆಯ ಬೂದಿಯನ್ನು ಹಾಕಿ ಕಾರೆಕಾಯಿಗಳನ್ನು  ಮುಚ್ಚಿಟ್ಟು ಹಣ್ಣು ಮಾಡುತ್ತಿದ್ದದ್ದು.

ಹಂಡೆಯಲ್ಲಿನ ನೀರು ಕಾದು ಕುದಿಯುವ ಮಟ್ಟಕ್ಕೆ ಬಂದಾಯ್ತು ...ಈಗ ಸ್ನಾನದ ಕಾರ್ಯಕ್ರಮ... ಅಮ್ಮ ಮತ್ತೆ ಎಣ್ಣೆಯ ಬಟ್ಟಲನ್ನು ಹಿಡಿದು ಬರುವಳು...



 ವಿಶಾಲವಾದ ತೊಟ್ಟಿಲಿನಂತಿದ್ದ ಬಚ್ಚಲಿನಲ್ಲಿ ನಾನು ಗೊಮ್ಮಟೇಶ್ವರನ ರೂಪದಲ್ಲಿ ನಿಂತು ಮೈಗೆಲ್ಲಾ ಎಣ್ಣೆ ತಿಕ್ಕಿಸಿಕೊಳ್ಳುವುದು.. ಅಮ್ಮ ನೀರನ್ನು ಹದ ಮಾಡುವ ತನಕ ನನಗೆ ಬಚ್ಚಲಲ್ಲೇ ಆಟ ಆಡುವ ಸಂಭ್ರಮ.. ಅದರಲ್ಲಿ ಬಹು ಮುಖ್ಯವಾದದ್ದು ಹೊಟ್ಟೆಯ ಮೇಲೆ ತೋರುಬೆರಳಿಂದ ಏನಾದರೂ ಬರೆಯುವುದು, ಅಳಿಸುವುದು ಮತ್ತೆ ಬರೆಯುವುದು. 

ಬಿಸಿ ಬಿಸಿ ನೀರನ್ನು ಕಾಲ ಮೇಲೆ ಭುಜದ ಮೇಲೆ ಹಾಕಿ.. ಹದವಾಗಿದೆಯೇ ಎಂದು ವಿಚಾರಿಸಿ ತಲೆಯ ಮೇಲೆ ಸುರಿದಾಗ ಮಾತ್ರ ಕುಣಿಯುವಷ್ಟು ಬಿಸಿ.    ಬಿಸಿ ಬಿಸಿ ಎಂದು ಕೂಗಾಟ.. ಕೆಲವು ಸಲ ಅಮ್ಮನಿಂದ ಬೈಗುಳ ಸಹ. ಸೀಗೆಕಾಯಿ ಪುಡಿ ಹಾಕಿ ತಲೆಯನ್ನು ತಿಕ್ಕುವಾಗ, ಕೂದಲೇ ಕಿತ್ತು ಬಂತೇನೋ ಅನ್ನುವಷ್ಟು ನೋವು... ಜೊತೆಗೆ ಎಷ್ಟು ಭದ್ರವಾಗಿ ಕಣ್ಣು ಮುಚ್ಚಿದರೂ ಸೀಗೆಕಾಯಿ ನೀರು ಕಣ್ಣೊಳಗೆ ಹೋಗಿ ಉರಿಯಾಗಿ.. ಮತ್ತೊಂದು ಸುತ್ತಿನ ಅರಚಾಟ... ಈಗ ಮಾತ್ರ ಅಮ್ಮ ಸಮಾಧಾನ ಮಾಡುತ್ತಾ ಕಣ್ಣಿಗೆ ನೀರು ಹಾಕಿ ತೊಳೆದು.. "ಕಣ್ ಬಿಟ್ ನೋಡು" ಎಂದು ಕಣ್ಣನ್ನು ಬಿಡಿಸಿ ಸರಿ ಮಾಡುವುದು ಒಂದು ಘಟ್ಟ.   ಇದರ ಮಧ್ಯೆ ಚಳಿ ಆಯ್ತೆಂದು ಮೈ ಮೇಲೆ ಒಂದಷ್ಟು ಬಿಸಿನೀರು ಸುರಿದುಕೊಳ್ಳುವ ಹುನ್ನಾರ.

ಸಂಪೂರ್ಣ ಮೈಯನ್ನು ಸೀಗೆಕಾಯಿ ಹಾಕಿ ತಿಕ್ಕಿ ತಲೆಯಿಂದ ನೀರು ಸುರಿದರೆ ಮತ್ತೊಂದು ಹಂತ. ತಲೆಯಲ್ಲಿನ ಎಣ್ಣೆ ಪೂರ್ತಿಯಾಗಿ ಹೋಗಿದೆ ಎಂದು ತಿಳಿಯಲು ಅಮ್ಮ ತಲೆಯ ಮೇಲೆ ಕೈ ಆಡಿಸಿ ಬೆರಳಿನಿಂದ ಚಿಟಕಿ ಹೊಡೆಯುವುದು.... ಶಬ್ದ ಬಂದರೆ ಎಣ್ಣೆ ಹೋದಂತೆ. ಕೊನೆಯದಾಗಿ ಮತ್ತೊಮ್ಮೆ ಆಶೀರ್ವಚನ ಹೇಳುತ್ತಾ ಒಂದೆರಡು ತಂಬಿಗೆ ನೀರನ್ನು ತಲೆಯಿಂದ ಕೆಳಕ್ಕೆ ಸುರಿದರೆ ಸ್ನಾನ ಮುಗಿದಂತೆ.. ಮೈಗೆ ಮಡಿಪಂಚೆಯನ್ನು ಸುತ್ತಿ ಅಪ್ಪಿ ಮುದ್ದಿಸಿ.. ದೇವರ ಮನೆಗೆ ಕರೆತಂದು ಹಣೆಗೆ ಕುಂಕುಮವಿಟ್ಟು.. ದೇವರಿಗೆ ಅಡ್ಡ ಬಿದ್ದರೆ ಅಭ್ಯಂಜನ( ಅಭ್ಯಂಗನ ಸಹ ಬಳಕೆಯಲ್ಲಿದೆ) ಸ್ನಾನ ಮುಗಿದಂತೆ. ಆ ಅಪ್ಪುಗೆಯ ಹಿತದ ಅನುಭವ ನನ್ನ ಮೈಯ ಕಣಕಣದಲ್ಲೂ ಇದೆ... ಅಮ್ಮ ಮಾತ್ರ ಈಗಿಲ್ಲ. ಆ ನೆನಪು ಕಣ್ತುಂಬಿಸುತ್ತದೆ.

ದೊಡ್ಡವನಾದಂತೆ ಮೈಗೆ ಎಣ್ಣೆ ಹಚ್ಚಿ ಕೊಳ್ಳುವುದು, ಮೈ ಕೈ ಉಜ್ಜಿಕೊಳ್ಳುವುದು ನನ್ನ ಕೆಲಸ... ಅಮ್ಮ ತಲೆಯನ್ನು ಮಾತ್ರ ಉಜ್ಜುತ್ತಿದ್ದದ್ದು.

ಇನ್ನು ಪುಟ್ಟ ಕಂದಮ್ಮಗಳ ಅಭ್ಯಂಜನದ ಸಂತೋಷ ಅನುಭವಿಸಿಯೇ ತೀರಬೇಕು. ಆ ಅನುಭವ ಕೊಟ್ಟವಳು ಮಗಳು ಚೈತ್ರ.  ಅಪ್ಪ ಅಮ್ಮನಾಗಿ ನಾನು ಮತ್ತು ವಿಜಯ ಆ ಕೆಲಸವನ್ನು ನಿಭಾಯಿಸಿದಾಗ.

ಕುವೆಂಪು ಅವರ ಮಲೆನಾಡಿನ ಚಿತ್ರಗಳು ಪುಸ್ತಕದ ”ಅಜ್ಜಯ್ಯನ ಅಭ್ಯಂಜನ” ದ ಅಜ್ಜನ ಚಿತ್ರಣ ನನಗೆ ಇಷ್ಟ.

ಕಾಲಚಕ್ರ ಉರುಳುತ್ತಾ.. ಬೆಂಗಳೂರಿಗೆ ಬಂದ ನಂತರ, ಕಿರಿದಾದ ಬಚ್ಚಲು ಮನೆಯಲ್ಲಿ ಸಂಭ್ರಮವೂ ಕಿರಿದೇ. 



ಒಂದು ವಿಶೇಷವೆಂದರೆ ಮನೆಗೆ ರೇಡಿಯೋ ಬಂದ ನಂತರ.. ಬೆಳಗಿನ ಜಾವ ಎಣ್ಣೆ ಒತ್ತುವ ಸಮಯಕ್ಕೆ ಆಕಾಶವಾಣಿಯಿಂದ ಬರುತ್ತಿದ್ದ ನಾದಸ್ವರದ ಮಧುರ ಸಂಗೀತ.

70ರ ದಶಕದಲ್ಲಿ... ಕರ್ನಾಟಕದಲ್ಲಿ ವಿದ್ಯುತ್  ಪೂರೈಕೆ ಹೆಚ್ಚಿದ್ದರಿಂದ..AEH (all electric home) ಮಾಡಿಸಲು ಉತ್ತೇಜನವಿತ್ತು ಹಾಗಾಗಿ ಮನೆಗೆ ನೀರು ಕಾಯಿಸಲು ಹಿತ್ತಾಳೆಯ ಬಾಯ್ಲರ್ ಬಂದಿತು. ಹಂಡೆ ನೀರೊಲೆ ಹಿಂದಕ್ಕೆ ಸರಿಯಿತು. ಈಗ ಬಾಯ್ಲರ್ ನ ನೀರು ನಲ್ಲಿಯಿಂದ ಬಕೆಟ್ಟಿಗೆ ಬೀಳುತ್ತಿತ್ತು.          ಮತ್ತೂ ಮುಂದೆ ಹೋದಂತೆ ಗೀಜರ್ ಬಂತು... ಸೋಲಾರ್ ಹೀಟರ್ ಬಂತು... ನೀರು ತುಂಬುವ ಹಬ್ಬದ ರೂಪವೇ ಬದಲಾಯಿತು. ಅಭ್ಯಂಜನ ಸ್ನಾನದ ದಿಕ್ಕೂ ಬದಲಾಯಿತು... ಆ ಸಂಭ್ರಮವೂ ಮರೆಯಾಯಿತು.  

ವಯಸ್ಸಾದಂತೆ ತಲೆಯ ಕೂದಲು ಮಾಯ...  ಕೈತುಂಬ ಎಣ್ಣೆ ಹಚ್ಚಲು ಸಾಧ್ಯವಿಲ್ಲ... ಹಾಗಾಗಿ ಎಲ್ಲವೂ ಶಾಸ್ತ್ರ ರೂಪಕ್ಕೆ ತಿರುಗಿದೆ. ಇನ್ನು ಪಟಾಕಿ ಹೊಡೆಯುವ ಇಚ್ಛೆಯೂ ಇಲ್ಲ... 

ಏನಿದ್ದರೂ ಮೊಮ್ಮಕ್ಕಳು ಪಟಾಕಿ ಹಚ್ಚಿ ಸಂಭ್ರಮಿಸುವುದನ್ನು ನೋಡುವ ಹುಮ್ಮಸ್ಸು ಮಾತ್ರ.

ಕಾಲಾಯ ತಸ್ಮೈ ನಮಃ.

ದೀಪಾವಳಿ ಬೆಳಕಿನ ಹಬ್ಬ.. ಹಿಂದುಗಳ ಪ್ರಮುಖ ಹಬ್ಬ ಬೆಳಕು ಜ್ಞಾನದ ಸಂಕೇತ.   ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಂಡು, ಬೆಳೆಸಿ,ಪಸರಿಸುವ, ಹಾಗೂ ನಾವೆಲ್ಲ ಒಂದಾಗಿ ಇರುವ ಜ್ಞಾನವನ್ನು ಆ ಭಗವಂತ ನಮಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ... ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಜೊತೆ ಜೊತೆಗೆ ಈ ವರ್ಷ ಕನ್ನಡ ರಾಜ್ಯೋತ್ಸವವೂ ದೀಪಾವಳಿಯ ಹಬ್ಬದ ಸಂಭ್ರಮದ ಜೊತೆಗೂಡಿದೆ. ಕನ್ನಡ ನಮ್ಮ ಜೀವನಶೈಲಿ ಆಗಿರಲಿ ಎಂದು ಆಶಿಸುತ್ತಾ.. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.



ಸಿರಿಗನ್ನಡಂ ಗೆಲ್ಗೆ... ಬಾಳ್ಗೆ


ಡಿ. ಸಿ. ರಂಗನಾಥ ರಾವ್

9741128413






    

Comments

  1. ದೀಪಾವಳಿಯ ಶುಭಾಶಯಗಳು. 💐. ಹಳೆಯದನೆಲ್ಲ ನೆನಪಿಸಿದಕ್ಕೆ ಧನ್ಯವಾದಗಳು 🙏

    ReplyDelete
  2. Super sir. I just recalled my childhood

    ReplyDelete
  3. ನೀರು ತುಂಬುವ ಹಬ್ಬ ಶೀರ್ಷಿಕೆ ಯು ಉತ್ತಮ ವಾಗಿ ಮೂಡಿ ಬಂದಿದೆ.ಧನ್ಯವಾದಗಳು.ತಮ್ಮ ದೊಡ್ಡಜಾಲ ಊರಿನಲ್ಲಿ ದೀಪಾವಳಿ ಹಬ್ಬದಲ್ಲಿ ನೀರು ತುಂಬುವ ಹಬ್ಬದಲ್ಲಿ ಎಣ್ಣೆ ಹಚ್ಚಿಸಿಕೊಳ್ಳುವ ಬಗ್ಗೆ,ಶೀಗೆಪುಡಿ ಸ್ನಾನದ ಬಗ್ಗೆ ವಿವರಣೆ ಪೋಟೋ ಗಳೊಡನೆ ಉತ್ತಮ ವಾಗ್ಮಿ ಬಂದಿದೆ.ಇತ್ತೀಚೆಗೆ ಪಟಾಕಿ ಹಚ್ಚುವುದೇ ದೀಪಾವಳಿ ಹಬ್ಬವಾಗಿದೆ.ಧನ್ಯವಾದಗಳು. ದೇವೇಂದ್ರಪ್ಪ ಬೆಂಗಳೂರು

    ReplyDelete
  4. ಶೀರ್ಷಿಕೆ ಯು ಉತ್ತಮ ವಾಗಿ ಮೂಡಿ ಬಂದಿದೆ.ದೊಡ್ಡಜಾಲದಲ್ಲಿ ಚಿಕ್ಕವರಾಗಿದ್ದಾಗ ನೀರು ತುಂಬುವ ಹಬ್ಬ ಆಚರಣೆ ವಿವರಣೆ ಚೆನ್ನಾಗಿದೆ.ಇತ್ತೀಚಿನ ದಿನಗಳಲ್ಲಿ ಪಟಾಕಿ ಹಚ್ಚುವುದೇ ದೀಪಾವಳಿ ಹಬ್ಬ ವಾಗಿದೆ . ಮತ್ತೊಮ್ಮೆ ಧನ್ಯವಾದಗಳು. ದೇವೇಂದ್ರಪ್ಪ ಬೆಂಗಳೂರು

    ReplyDelete
  5. DCR sir, by going through the article I remembered my golden young days when my mother and mysuuramma was struggling to catch hold of me for oil bath. They were golden days. Thanks for getting back to those memories through your article. I love and respect your love and affection for kannada language. Dhanyavadagalu sir 🙏🙏

    ReplyDelete
  6. ನಾಗೇಂದ್ರ ಬಾಬು2 November 2024 at 21:16

    ಹಂಡೆ, ಸೌದೆ ಒಲೆ ಈಗ ನಗರಗಳಲ್ಲಿ ಪೂರ್ತಿಯಾಗಿ ಹಾಗೂ ಹಳ್ಳಿಗಳಲ್ಲಿ ಬಹುತೇಕ
    ಮರೆಯಾಗಿ ನೀರು ತುಂಬುವ ಹಬ್ಬ ಪ್ರಾಮುಖ್ಯತೆ ಕಳೆದುಕೊಂಡಿದೆ...ನಿಮ್ಮ ಈ ಲೇಖನ ನಮ್ಮನ್ನು ಸುಮಾರು ನಲವತ್ತು ವರ್ಷಗಳ ಹಿಂದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ...ಸ್ವಲ್ಪ ಪಟಾಕಿಯನ್ನು
    ಮೂರು ನಾಲ್ಕು ಮಂದಿ ಹಂಚಿಕೊಂಡು ಮೂರು ದಿನಗಳ ಕಾಲ ಸಂರಕ್ಷಣೆ ಮಾಡಿಕೊಂಡು ಗೆಳೆಯರ ಜೊತೆ ಸಿಡಿಸಿ ಸಂಭ್ರಮ ಪಡುತ್ತಿದ್ದ ಖುಷಿ ಈಗ ಸಹಸ್ರಾರು ರೂಪಾಯಿಗಳ ಪಟಾಕಿ ಸಿಡಿಸಿದರು ಸಿಗುವುದಿಲ್ಲ ...ಹಾಗೆಯೇ ರಾಜ್ಯೋತ್ಸವದ ಆಚರಣೆ ನನಗೂ ಕೂಡ ವಿಶೇಷ...ಸುಮಾರು ಇಪ್ಪತ್ತೈದು ವರ್ಷಗಳ ಕಾಲ ನಮ್ಮ ಸಂಸ್ಥೆ ಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಅವಕಾಶದಲ್ಲಿ ತೊಡಗಿಸಿ ಕೊಂಡಿರುವ ಬಗ್ಗೆ ಕೂಡ ನೆನಪು ಹಸಿರಾಯಿತು
    ಧನ್ಯವಾದಗಳು
    ಬಾಬು

    ReplyDelete
  7. ಹಳೆಯ ಕಾಲದ ಬದುಕು, ಬದಲಾದ ಜೀವನ ಶೈಲಿ ಹಾಗೂ ಭಾವ ನಿಮ್ಮ ಬರವಣಿಗೆಯಲ್ಲಿ ಸುಂದರವಾಗಿ ಮೂಡಿ ಬಂದಿದೆ.

    ReplyDelete
  8. ಲೇಖನ ಓದುವಾಗ ಹದವಾದ ಬಿಸಿ ಬಿಸಿ ನೀರು, ಮೈ ಮೇಲೆ ಬಿದ್ದಂತಾಯಿತು.
    ಲೇಖನ ಸಚಿತ್ರವಾಗಿ ಸಕಾಲಿಕವಾಗಿ ಮೂಡಿಬಂದಿದೆ. ಲೇಖಕರ ವಿಷಯ ನಿರೂಪಣೆಯ ಬಗ್ಗೆ ಎರಡು ಮಾತಿಲ್ಲ.
    ನಾವೇ ಸ್ನಾನ ಮಾಡುತ್ತಿದ್ದೇವೇನೋ ಎಂದೆನಿಸುತ್ತದೆ.
    ನಾನು ಚಿಕ್ಕಂದಿನಲ್ಲಿ ವಾಸವಾಗಿದ್ದ ಬಾಡಿಗೆ ಮನೆಗಳು ಹಂಡೆಯನ್ನು ಹೊಂದಿದ್ದವು. ಹೀಗಾಗಿ ನಮಗೆ ನೀರು ತುಂಬುವ ಹಬ್ಬದ ಗಮ್ಮತ್ತು ಚೆನ್ನಾಗಿ ತಿಳಿದಿದೆ.
    ಈಗ ಕಟ್ಟಿಸಿರುವ ಹೊಸ ಮನೆಯಲ್ಲೂ ಸಹ ಹಂಡೆಯನ್ನು ಇರಿಸಿದ್ದೇವೆ.
    ಹಂಡೆಯ ನೀರಿನ ಮುಂದೆ ಎಲೆಕ್ಟ್ರಿಕ್ ಬಾಯ್ಲರ್ ಗೀಸರ್ ಗ್ಯಾಸ್ ಗೀಸರ್ ಇದ್ಯಾವುದೂ ಸಾಟಿಯೇ ಅಲ್ಲ.

    ಕೊನೆ ಹನಿ:

    ಈ ರೀತಿಯ ಅಭ್ಯಂಜನ ಯುಗಾದಿ, ಸಂಕ್ರಾಂತಿ, ಹುಟ್ಟಿದ ಹಬ್ಬಗಳಲ್ಲೂ ಸಹ ಸಿಕ್ಕುತ್ತಿತ್ತು. ಆದರೆ ಬಿಸಿ ಬಿಸಿ ಸ್ಥಾನದ ಜೊತೆಗೆ ಡಂ ಡಂ ಎನ್ನುವ ಪಟಾಕಿಯ ಸೊಗಸೇ ಬೇರೆ😅

    ವಂದನೆಗಳೊಂದಿಗೆ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  9. ಅಣ್ಣ, ನಮ್ಮ ಅಮ್ಮನಿಗೆ ಓದಿ ಹೇಳಿದೆ.ಅವಳು ಸಹ ಹೀಗೆ ಜಿಡ್ಡು ಹೋಗಿದೆಯೋಅಂತ ತಲೆ ಸವರಿ ಚಿಟಿಕೆ ಹೊಡೆಯುತ್ತಿದ್ದಳು.ನಮ್ಮ ಅಜ್ಜಿ ಸಹ ಹಾಗೇ ಮಾಡುತ್ತಿದ್ದಳು. ಜಿಡ್ಡು ಹೋಗಿಲ್ಲದಿದ್ದರೆ ಮತ್ತೆ ಸಿಗೇಕಾಯಿ ಹಾಕುತ್ತಿದ್ದರು.ಅಕಸ್ಮಾತ್ ಸೀಗೆಕಾಯಿ ಹಿಂದಿನ ಬಾರಿ ಹೋಗಿಲ್ಲದಿದ್ದರೆ ಈ ಬಾರಿ ಗ್ಯಾರಂಟಿ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ