ತಪ್ಪು- ಶಿಕ್ಷೆ- ಪಶ್ಚಾತ್ತಾಪ


ಮೊನ್ನೆ ಒಂದು ದಿನ... ಯೂಟ್ಯೂಬ್ ನಲ್ಲಿ ನನಗೆ ತುಂಬಾ ಪ್ರಿಯವಾದ ಮುಖೇಶ್ ಹಾಡಿದ ಗೋಳು ಗೀತೆಗಳ(sad songs) ಹುಡುಕಾಟದಲ್ಲಿದ್ದಾಗ... ಧುತ್ತೆಂದು ಮುಂದೆ ಬಂದಿದ್ದು..ZEE TVಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಒಂದು ಸಂಚಿಕೆ... ಅದು ಚಿತ್ರನಟ ಅನಂತನಾಗ್ ಅವರದ್ದಾದ್ದರಿಂದ... ಕುತೂಹಲ ಮೂಡಿ ಪೂರ್ಣ ಸಂಚಿಕೆಯನ್ನು  ಸುಮಾರು ಒಂದು ಗಂಟೆಗೂ ಮೀರಿ ತುಂಬಾ ಇಷ್ಟದಿಂದ ನೋಡಿದೆ. 


ಅದು  #ಅನಂತನಾಗ್ ಅವರ " ಸಿಹಿ ಕಹಿ  ನೆನಪುಗಳು" ಆಗಿತ್ತು ಎನ್ನುವ ಅನಿಸಿಕೆ( ಇದು ಒಂದು ತರಹ ತಿಕ್ಕಲುತನ ಎನ್ನಲೇ?) ನನ್ನದಾಯಿತು. #Ananthanag  ನಾನು ಮೆಚ್ಚಿದ ನಟರಲ್ಲಿ ಒಬ್ಬರು. ನನ್ನ ದೃಷ್ಟಿಯಲ್ಲಿ ಕನ್ನಡ ಚಿತ್ರರಂಗದ #versatile ನಟರು ಎಂದರೆ ಬಾಲಕೃಷ್ಣ ಹಾಗೂ #ಅನಂತ್ ನಾಗ್ ಅವರು. ಈ ನನ್ನ ಅಭಿಪ್ರಾಯವನ್ನು ಒಪ್ಪದೇ ಇರುವ, ವಿರೋಧಿಸುವ ಒಂದು ದೊಡ್ಡ ದಂಡೇ ನನ್ನ ಅತ್ತೆಯ ಮನೆ ಕಡೆ ಇದೆ... ನನ್ನ ಹೆಂಡತಿ ವಿಜಯ ಆ ಗುಂಪಿನ ಮಂಚೂಣಿಯಲ್ಲಿದ್ದಾಳೆ.. ಅವರಿಗೆಲ್ಲ ಅಣ್ಣಾವ್ರು  (ರಾಜಕುಮಾರ್) ಅಚ್ಚು ಮೆಚ್ಚು...ನನಗೂ #ರಾಜಕುಮಾರ್ ಎಂದರೆ ಇಷ್ಟವೇ... ವಿಷಯ ಪಲ್ಲಟವಾಯಿತು... ಇರಲಿ ಅದು ಒಂದು ಕಡೆ.

#ಅನಂತ್ ನಾಗ್ ಅವರು ನಿರರ್ಗಳವಾಗಿ ಹಾಡಿದ ಒಂದು ನೀಳ ಗೀತೆ... ಪ್ರಾರ್ಥನೆಯ ರೂಪದಲ್ಲಿ ಚಿಕ್ಕಂದಿನಲ್ಲಿ ಕಲಿತದ್ದು... ವಿಶೇಷವಾಗಿತ್ತು, ಜೊತೆಯಲ್ಲೇ ಹೇಳಿದ ಮಾತು " ಯಾವ ಚಿತ್ರದ ಮಾತುಗಳೂ ನೆನಪಿಲ್ಲ" ... ಚಿಕ್ಕಂದಿನಲ್ಲಿ ಕಲಿತ ಯಾವುದೇ ಕ್ಷೇತ್ರವಾಗಲಿ ಅದು ಮೆದುಳಿನಲ್ಲಿ ಅಚ್ಚಾಗಿರುತ್ತದೆ... ಹಾಗೂ ಅದನ್ನು ಬೆಳೆದಮೇಲೆ ಉಳಿಸಿಕೊಂಡಿರುತ್ತೇವೆ ಎಂಬುದು ಸತ್ಯ.  ನನ್ನ ನೆನಪಿನಲ್ಲಿರುವಂತೆ ಬೆಳಿಗ್ಗೆ ಏಳುವಾಗ ಎರಡೂ ಅಂಗೈಗಳನ್ನು ಉಜ್ಜಿಕೊಂಡು ಕರಾಗ್ರೇ ವಸತೇ ಲಕ್ಷ್ಮಿ ...ಹೇಳಿಕೊಂಡು, ಕಣ್ಣುಗಳ  ಮೇಲೆ, ಕೈ ಒತ್ತಿ, ಬಲ ಮಗ್ಗುಲಲ್ಲಿ ಏಳುವ ಅಭ್ಯಾಸ ಇಂದಿಗೂ ಹಾಗೇ ಇದೆ. ದೊಡ್ಡವರಿಗೆ ತೋರುವ ಗೌರವ, ನಡೆದುಕೊಳ್ಳುವ ರೀತಿ, ಊಟ ಮಾಡುವಾಗಿನ ಕೆಲವೊಂದು ಶಿಸ್ತು ಜೀವನದ ಭಾಗವಾಗಿ ಉಳಿದಿದೆ. 


ತಮ್ಮ ಶಂಕರ್ ನಾಗ್ #Shankar nag ನ ನೆನಪಿನಲ್ಲಿ ಭಾವುಕರಾದ ದೃಶ್ಯ ಮನತಟ್ಟುವಂತಿತ್ತು.

ಬಾಲ್ಯದ ವಿಷಯ ಮಾತಾಡುತ್ತಾ..  ಕನ್ನಡ ಮೀಡಿಯಂನಲ್ಲಿ ಕಲಿತು ಇಂಗ್ಲಿಷ್ ಮೀಡಿಯಂ ಗೆ ಬದಲಾದಾಗ ಪಟ್ಟ ಭವಣೆ ಹಾಗೂ ಅದಕ್ಕಾಗಿ ಪಡೆದ ಶಿಕ್ಷೆ...stand up on the bench ಮತ್ತು  ಮೊಳಕಾಲ ಮೇಲೆ ಬಾಗಿಲ ಬಳಿ ನಿಲ್ಲುವುದು.... ನೆನೆಸಿಕೊಂಡು ನಕ್ಕಿದ್ದು ಖುಷಿಯಾಯಿತು. ಆಗಿನ ಕಾಲಕ್ಕೆ ಅವು ಸಾಮಾನ್ಯವಾದ ಶಿಕ್ಷೆಗಳು.

ಪಡೆದ ಕೆಲ ಶಿಕ್ಷೆಗಳು (ಸಕಾರಣವಾಗಲಿ ವಿನಾಕಾರಣವಾಗಲಿ) ನೋವುಂಟು ಮಾಡುತ್ತವೆ. ಈಗ ನೆನಪಿಸಿಕೊಂಡು ನಗಲು ಚೆನ್ನ. ನನ್ನ ನೆನಪು ನಾ ಪಡೆದ ಶಿಕ್ಷೆ... ಹಾಗೂ ನನ್ನ ಮೇಲೆ ಅತಿ ಪ್ರಭಾವ ಬೀರಿದ ಬೇರೆಯವರು ಪಡೆದ ಶಿಕ್ಷೆಯ ಕಡೆಗೆ ಜಾರಿತು...

ಮುಗ್ಧ ಮನಸ್ಸಿನ ವಯಸ್ಸು... ಅಪ್ಪನನ್ನು ಕಂಡರೆ ಭಯ... ಎರಡರ ಪರಿಣಾಮ..." ತಟ್ಟೆಗೆ ಹಾಕಿಸಿಕೊಂಡ ಏನನ್ನಾದರೂ ತಿನ್ನದೇ ಉಳಿಸಿದರೆ ಅದನ್ನು ತಲೆಗೆ ಕಟ್ಟುತ್ತೆ" ಎನ್ನುವ ಶಿಕ್ಷೆಯ ಕಲ್ಪನೆಯ ಭಯವೇ ನನಗೆ ಸಾಕಾಗಿತ್ತು.. ಆದರೆ ಆ ಭಯವೇ ಇಂದಿಗೂ ನನಗೆ ಶ್ರೀರಕ್ಷೆಯಾಗಿದೆ... ಯಾವುದೇ ಕಾರಣಕ್ಕೂ ನನ್ನ ತಟ್ಟೆ/ ಎಲೆಗೆ ಬಿದ್ದ  ತಿನಿಸನ್ನು ತಿನ್ನದೇ ಬಿಸಾಡುವುದಿಲ್ಲ.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಒಂದು ದಿನ ಅನುಭವಿಸಿದ " ಪವನ ಬಗ್ಗುವ ಶಿಕ್ಷೆ"... ಬಹುಶಃ ಜೀವನದಲ್ಲೇ ಅದು ದೈಹಿಕವಾಗಿ ತುಂಬಾ ನೋವು ಅನುಭವಿಸಿದ ಶಿಕ್ಷೆ. ಅದು ಓದಿನ ಕಾರಣಕ್ಕಂತೂ ಅಲ್ಲ.... ಆದರೆ ಬೇರೇನೋ ಚೇಷ್ಟೆ/ ತರಲೆ ಮಾಡಿದ್ದೆನೋ ನೆನಪಿಲ್ಲ... ಎರಡು ಕೈಯನ್ನು ಕಾಲಕೆಳಗಿನಿಂದ ತೂರಿಸಿ ತಲೆ ಬಗ್ಗಿಸಿ ಕಿವಿಯನ್ನು ಹಿಡಿದು ಬಗ್ಗಿ ನಿಲ್ಲಬೇಕು. ಅಂದು ಸುರಿಸಿದ ಕಣ್ಣೀರು, ಮೂಗು ಬಾಯಿಂದ ಹೊರ ಬಂದ ದ್ರವಗಳು ಅಪಾರ.. ಜೊತೆಗೆ ಅವಮಾನ ಸಹ.. ಇಂದಿಗೂ ಆದ ದೇಹದ ನೋವಿನ ಅನುಭವ ಹಸಿರಾಗಿದೆ.

ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳುವುದು ಉತ್ತರ ಹೇಳದವರು... ಸರಿ ಉತ್ತರ ಹೇಳಿದವರ ಕಾಲ ಕೆಳಗೆ ನುಗ್ಗುವುದು ಒಂದು ಶಿಕ್ಷೆ... ಆಕಾಲಕ್ಕೆ. ಅಂತಹ ಒಂದು ಸಂದರ್ಭ... ನಮ್ಮ ಕ್ಲಾಸಿನಲ್ಲಿದ್ದ ಲಕ್ಷ್ಮಿಪತಿ... ನನಗಿಂತ ತುಂಬಾ ಎತ್ತರವಾಗಿದ್ದವನು... ಉತ್ತರ ಹೇಳಲಿಲ್ಲ ಪಕ್ಕದಲ್ಲಿದ್ದ ನಾನು ಸರಿಯಾದ ಉತ್ತರ ಹೇಳಿದ್ದರಿಂದ ಅವನು ನನ್ನ ಕಾಲ ಕೆಳಗೆ ನುಗ್ಗಬೇಕು. ಲಕ್ಷ್ಮಿಪತಿ ಬೇರೆಲ್ಲದರಲ್ಲೂ ಮಹಾ ಜಾಣ... ತಕ್ಕಮಟ್ಟಿನ ತರಲೆ ಸಹ.... ಕಾಲ ಕೆಳಗೆ ನುಗ್ಗುತ್ತಾ... ಬೆನ್ನನ್ನು ತಕ್ಷಣ ಮೇಲೆತ್ತಿದ... ಆಯತಪ್ಪಿ ನಾನು ಕೆಳಗೆ ಬಿದ್ದೆ... ತಲೆಗೆ ಏಟು ಬಿದ್ದ ನೆನಪು... ಶಿಕ್ಷೆ ಅವನಿಗೆ ಆದರೂ ಬಿದ್ದು ನೋವು ಮಾಡಿಕೊಂಡಿದ್ದು ನಾನು... ನಿಜವಾದ ಶಿಕ್ಷೆ ಯಾರಿಗೆ?

ನಮ್ಮಪ್ಪ ದೊಡ್ಡಜಾಲದ ಅಮಾನಿ ಕೆರೆಯ ಶ್ಯಾನುಭೋಗರು... ಹಾಗಾಗಿ ಕೆರೆಯ ನೀರು ಬಿಡುವ ಮೇಲುಸ್ತುವಾರಿ ಅವರದು... ಅದಕ್ಕೆ ಸಹಾಯಕರಾಗಿ ಇದ್ದವರು "ನೀರು ಗಂಟಿಗಳು..." ವೆಂಕಟ ಒಬ್ಬ ನೀರು ಗಂಟಿ.  ನೀರು ಗಂಟಿಗಳು ಮನೆಯೊಳಗೆ ಬರುತ್ತಿರಲಿಲ್ಲ ಆಚೆಯೇ ಕುಳಿತುಕೊಳ್ಳುವವರು... ತೆಂಗಿನಕಾಯಿ ಚಿಪ್ಪಿನಲ್ಲಿ ಕಾಫಿ ಕುಡಿಯುವವರು, ಅವರನ್ನು ನಾವು ಮುಟ್ಟಬಾರದು ಎಂಬ ಆಜ್ಞೆ  ಬೇರೆ. ವೆಂಕಟ ಏನು ತಪ್ಪು ಮಾಡಿದ್ದನೋ ತಿಳಿಯದು.. ನಮ್ಮಪ್ಪನ ಕೋಪಕ್ಕೆ ತುತ್ತಾಗಿದ್ದ... ಬೈಗುಳಗಳು ಜಾರಿಯಲ್ಲಿದ್ದವು.. ಕೋಪ ಮತ್ತೊಂದು ಹಂತಕ್ಕೆ ಹೋದಾಗ ನಮ್ಮಪ್ಪ ಅವನನ್ನು ಒದ್ದು ಎದುರು ಮನೆಯ ಜಗಲಿಯ ಮೇಲೆ ಕೂತಿದ್ದರು... ನಾನು ಓಡಿ ನಮ್ಮಪ್ಪನ ತೊಡೆಯ ಮೇಲೆ ಕೂತಿದ್ದೆ... ಅಲ್ಲಿಂದ ಹೊರಟಾಗ ನಮ್ಮಪ್ಪನ ಮಡಿಯ ಪ್ರಜ್ಞೆ ಎಚ್ಚೆತ್ತು ಸ್ನಾನ ಮಾಡಿ ಒಳಗೆ ಹೋಗು ಎಂದು ಕೂಗಿ ಹೇಳಿದ್ದು ನೆನಪಿದೆ... ಇಷ್ಟು ಕಠಿಣ ಶಿಕ್ಷೆ ಅವಶ್ಯವಿತ್ತಾ? ಈಗಿನ ಅಭಿಪ್ರಾಯ ಖಂಡಿತ ಇಲ್ಲ.

ಶಾಲೆಗೆ ಹೋಗಲು ತಯಾರಾಗುತ್ತಿದ್ದೆ.. ಮನೆಯ ಪಕ್ಕದ ದಾರಿಯಲ್ಲಿ ಏನೋ ಗದ್ದಲ... ಕುತೂಹಲದಿಂದ ನೋಡಿದಾಗ ಕಂಡ ದೃಶ್ಯ... ಒಬ್ಬ ಮನುಷ್ಯನ ಕೈಗಳನ್ನು ಹಿಂದೆ ಕಟ್ಟಿದ್ದಾರೆ.. ಮುಖಕ್ಕೆ ರಾಚುವ ಹಾಗೆ ನೀರನ್ನು ಎಸೆಯುತ್ತಿದ್ದಾರೆ.. ಜೊತೆಗೆ ಕೋಲಿನಿಂದ ಬಾರಿಸುತ್ತಿದ್ದಾರೆ... ಆತನ ಗೋಳು.. ಹೇಳುತ್ತಿದ್ದ ಸಮಾಜಾಯಿಷಿ ನನಗೇನೂ ಅರ್ಥವಾಗದ್ದು... ನಂತರ ತಿಳಿದ ವಿಷಯ ಆತ ಪಕ್ಕದೂರಿನ ಒಂದು ಮನೆಯಲ್ಲಿ ಭತ್ತವನ್ನು ಕದ್ದು ಮಾರಿದ್ದಾನೆ... ಯಾರಿಗೆ ಮಾರಿದ್ದಾನೆ ಎಂದು ತಿಳಿಯಲು ಈ ಶಿಕ್ಷೆ. 

ನಮ್ಮ ಹಳ್ಳಿಯಲ್ಲಿ  ಯಾರ ಮನೆಯಲ್ಲಾದರೂ ಕಾರ್ಯಕ್ರಮಗಳಿದ್ದರೆ.. ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುವ ಒಂದು ಸಂಪ್ರದಾಯವಿತ್ತು... ಅಂತಹ ಒಂದು ಕಾರ್ಯಕ್ರಮ ಕಾಫಿ ಪುಡಿ ಶಂಕರಣ್ಣನ ಮನೆಯಲ್ಲಿತ್ತು .. ಮೀಮಾಜಮ್ಮನಿಗೆ ( ಮೀನಾಕ್ಷಮ್ಮ ಅವರು ಶಂಕರಣ್ಣನ ಮಡದಿ ಹಾಗೂ ನಮ್ಮಮ್ಮನ ಗೆಳತಿ) ಅಡಿಗೆಗೆ ಸಹಾಯ ಮಾಡಲು ನನ್ನಮ್ಮ ಹೋಗಿದ್ದಳು.  ಆದರೆ ಅಂದು ಅವರ ಮನೆಗೆ ನಾನು ಹೋಗಬಾರದೆಂದು ನಮ್ಮಪ್ಪನ ಆಜ್ಞೆ..ಕಾರಣ ತಿಳಿಯದು. ಆದರೆ ಅಮ್ಮನನ್ನು ನೋಡಬೇಕೆಂಬ ಚಪಲ ನನ್ನನ್ನು ಅಲ್ಲಿಗೆ ಕರೆದೊಯ್ಯಿತು. ಊಟದ  ಸಮಯ.. ಎಲ್ಲರ ಜೊತೆಯಲ್ಲಿ ಕೂತು ನಾನು ಊಟ ಮಾಡಿ ಮನೆಗೆ ಬಂದೆ. ವಿಷಯ ತಿಳಿದ ನಮ್ಮಪ್ಪ ಕೋಪ ಮಾಡಿಕೊಂಡು ನನಗೆ ಕೊಟ್ಟ ಶಿಕ್ಷೆ ಅವರ ಕಾಲನ್ನು ಒತ್ತುವುದು.. ಬೇರೆ ದಾರಿ ಇಲ್ಲ... ಕಾಲೊತ್ತಿ ಶಿಕ್ಷೆ ಅನುಭವಿಸಿದ್ದು ಸತ್ಯ. ಶಂಕ್ರಣ್ಣನ ಮಗ SL  ಕಾಂತನ್ ಈಗಲೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವುದೇ ಹೆಮ್ಮೆ.

ಬೆಂಗಳೂರಿಗೆ ಬಂದು ರಾಷ್ಟ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಗೆ ಸೇರಿದ ಹೊಸತು... ಎರಡನೇ ಮಹಡಿಯಿಂದ ಆಟದ ಮೈದಾನಕ್ಕೆ ಇಳಿದುಹೋಗುತ್ತಿದ್ದೆ.. ನಮ್ಮ PT master ಬಿಜಿ ಗುರುಮೂರ್ತಿಯವರು ಎದುರಿಗೆ ಬಂದು, ಪಟೀರೆಂದು ಕೆನ್ನೆಗೆ ಬಾರಿಸಿದರು.. ಯಾಕೆ ಎಂದು ನನಗೆ  ತಿಳಿಯಲೇ ಇಲ್ಲ.. ಕೇಳುವ ಧೈರ್ಯವೂ ಇಲ್ಲ.... ಕಣ್ಣೀರು ಚೆಲ್ಲುತ್ತ  ಶಿಕ್ಷೆ ಅನುಭವಿಸಿದ್ದಾಯ್ತು.

ಇದೇ ಸಮಯದ ಇನ್ನೊಂದು ಘಟನೆ... ನಾವು ಗಾಂಧಿಬಜಾರಿನ ಒಂದು ವಠಾರದಲ್ಲಿ ವಾಸವಾಗಿದ್ದೆವು... ಅಲ್ಲಿನ ಒಂದು ರೂಂನಲ್ಲಿ ಇದ್ದವರು ಪಾರ್ಥಸಾರಥಿ ಹಾಗೂ ಸುಂದರ ರಾಜ್ ಅಣ್ಣ ತಮ್ಮಂದಿರು... ಬ್ರಹ್ಮಚಾರಿಗಳು. ಅವರ ರೂಮಿಗೆ ತುಂಬಾ ಹೋಗುತ್ತಿದ್ದೆ. ತುಂಬಾ ಸಲುಗೆಯಿಂದ ಇರುತ್ತಿದ್ದರು. ಒಂದು ದಿನ ಸುಂದರರಾಜ್ ಹೇಳಿದ್ದು... "ನಮ್ಮ ಅನಂತ ನಿಮ್ ಸ್ಕೂಲ್ಗೆ ಮೇಷ್ಟ್ರಾಗಿ ಬರ್ತಾನೆ" ನನಗೂ ಖುಷಿಯೇ. ಒಂದೆರಡು ದಿನದಲ್ಲಿ ನಮ್ಮ ಕ್ಲಾಸಿಗೆ ಬಂದವರು ಹೊಸ ಮೇಷ್ಟ್ರು.. ಅವರ ಹೆಸರನ್ನು ಕೇಳಿದಾಗ ಬೋರ್ಡ್ ಮೇಲೆ ಬರೆದದ್ದು " A R Dhanankar" ಎಂದು. ನನಗನಿಸಿದ್ದು ಹಾಗಾದರೆ ಇವರು  ನಾನು ಕೇಳಿದ ಅನಂತ ಅಲ್ಲ ಎಂದು. ಆದರೆ ಕೆಲ ದಿನಗಳ ನಂತರ ಅವರು ಗಾಂಧಿ ಬಜಾರಿನ ನಮ್ಮ  ವಠಾರಕ್ಕೆ ಬಂದ ಸಮಯದಲ್ಲಿ ತಿಳಿದದ್ದು ಇವರೇ ಅನಂತ ಎಂದು.. ಅವರ ಪೂರ್ತಿ  ಹೆಸರು ಅನಂತ ರಾವ್ ಧನಾಂಕರ್. ನನಗೆ ಖುಷಿ... ಕ್ಲಾಸ್ ನಲ್ಲಿ ನನ್ನನ್ನು ಗುರುತಿಸಿದ್ದು ಹೆಮ್ಮೆ.. ಪರಿಚಯ ಎಂದು ನಾನು ತೆಗೆದುಕೊಂಡ ಒಂದಷ್ಟು ಸಲಿಗೆ. ಈ ಸಲಿಗೆಯ ಪರಿಣಾಮವೇ ಇರಬೇಕು ನಾನೊಂದಷ್ಟು ಹೆಚ್ಚಾಗಿಯೇ ತರಲೆ ಮಾಡಿರಬೇಕು... ಅದರ ಪರಿಣಾಮ ಎರಡು ಕೈಗೆ ಸ್ಕೇಲಿನಿಂದ ಏಟು. ಬಂದಿದ್ದು ಮಾತ್ರ ಕೋಪ. ಮನೆಗೆ ಬಂದಾದ ಮೇಲೆ ಹೊಡೆಸಿಕೊಂಡಿದ್ದನ್ನು ಸುಂದರ ಅವರಿಗೆ ಹೇಳಿದೆ... ಅವರಿಗೆ ಏನನಸಿತೋ..." ಬರ್ಲಿ ತಾಳು ಅವನಿಗ್ ಮಾಡ್ತೀನಿ" ಅಂದರು. ಕಾಕತಾಳಿಯವಾಗಿ ಕೆಲ ಸಮಯಕ್ಕೆ ಸರ್ ಬರುವುದೇ... ಸುಂದರ್ ಅವರು ಸರ್ ಅನ್ನು ದಬಾಯಿಸಿದ್ದೆ... ನಮ್ಮ ಹುಡುಗನನ್ನು ಯಾಕೆ ಹೊಡೆದೆ ಎಂದು. ಸರ್ ಎಷ್ಟು ಒಳ್ಳೆಯವರು ಅನಿಸಿದ್ದು.. ಅವರು ನನ್ನನ್ನು ಹತ್ತಿರ ಎಳೆದುಕೊಂಡು ಸಮಾಧಾನ ಮಾಡಿ.. ಇನ್ಮೇಲ್ ಹೊಡೆಯಲ್ಲ ಕಣೋ ಅಂತ ಹೇಳಿ... ನೀನು ಜಾಣನಾಗಿರ್ಬೇಕು ಎಂದು ಪ್ರಸಂಗವನ್ನು ಮುಗಿಸಿದ್ದು. ವರ್ಷಗಳ ನಂತರ ಅವರು ಸಿಕ್ಕಾಗ ಈ ಪ್ರಸಂಗವನ್ನು ನೆನೆಸಿಕೊಂಡದ್ದು ಪ್ರಿಯವಾಗಿತ್ತು.

RD ಸತ್ಯವರ್ಮ ಅವರು ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಲೆಕ್ಚರರ್. ತುಂಬಾ ಖಡಕ್ ವ್ಯಕ್ತಿ. ಬೋರ್ಡ್ ನ ಮೇಲೆ ಅವರು ಬರೆಯುತ್ತಿದ್ದಾಗ ತರಗತಿಯಲ್ಲಿ ಗುಜುಗುಜು ಶಬ್ದವಾದಾಗ ತಲೆಯನ್ನು ತಿರುಗಿಸಿ ನೋಡಿದರೆ ನಾವೆಲ್ಲ ಗಪ್ ಚುಪ್. ಓದಿನ ಕೊನೆಯ ವರ್ಷ... ಕ್ಲಾಸ್ ಸೋಶಿಯಲ್ ಗೆ ಅವರನ್ನು ಕರೆಯಲು ಹೋದಾಗ..." ಈಗಲೇ ಇಷ್ಟು ಅಹಂಕಾರನಾ... ಇನ್ನು ಪರೀಕ್ಷೆ ಮುಗಿದಿಲ್ಲ.. ನಮ್ ಕೈಲಿಂದ ಬಿಡಿಸಿಕೊಂಡು ಹೋಗಿಲ್ಲ" ಬೈಸಿಕೊಂಡದ್ದು ಶಿಕ್ಷೆಯಷ್ಟೇ ಕಠಿಣವಾಗಿತ್ತು. ಏಕೆಂದರೆ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಅಂಕ ಕೊಡುವಾಗ ಅವರು ಪ್ರಭಾವ ಬೀರಬಹುದು ಎಂಬ ಭಯ ಕಾಡಿತ್ತು.  ಅವರು ಬಯ್ಯಲು ಒಂದು ಕಾರಣ ಇತ್ತು... ಸ್ಪೆಷಲ್ ಕ್ಲಾಸ್ ಇದೆ ಎಂದು ಒಂದು ಸಮಯ ಕೊಟ್ಟಿದ್ದು...  ಸುಮಾರು ಜನ, ಅದರಲ್ಲೂ ಕರೆಯಲು ಹೋದ ನಾವುಗಳು, ಆ ಕ್ಲಾಸಿಗೆ ಹೋಗದೆ ಇದ್ದದ್ದು ಅವರಿಗೆ ಕೋಪ ತರಿಸಿತ್ತು.


ಚಿಕ್ಕ ಪುಟ್ಟ ತಪ್ಪುಗಳು ಅದಕ್ಕೆ ಆದ ಶಿಕ್ಷೆಗಳು.. ಬಾಲ್ಯದ ದಿನಗಳಲ್ಲಿ ಲೆಕ್ಕವಿಲ್ಲದಷ್ಟು.

ಕೆಲ ತಪ್ಪುಗಳನ್ನು ಮಾಡಬಾರದಿತ್ತು... ಕೈಮೀರಿ ಆಗೇ ಹೋಯಿತು ಎಂದು ಪಶ್ಚಾತಾಪ ಪಟ್ಟಿದ್ದೂ ಉಂಟು.. ಹಾಗೆ ನಾ ಮಾಡಿದ್ದು ತಪ್ಪೇ ಅಲ್ಲ...ಎಂದು ಸಮರ್ಥಿಸಿಕೊಂಡಿದ್ದು ಉಂಟು.

70ರ ದಶಕದಲ್ಲಿ ಸಣ್ಣ ಕೈಗಾರಿಕೆಯ ಸ್ಥಾಪನೆಗೆ ಸರ್ಕಾರದಿಂದ ಸಾಕಷ್ಟು ಪ್ರೋತ್ಸಾಹದಾಯಕ ಯೋಜನೆಗಳು ಇದ್ದವು. ಅದರಲ್ಲಿ ಸಾಲದ ಯೋಜನೆ ಮುಖ್ಯವಾದುದ್ದು. ಸಾಕಷ್ಟು ಜನರು ಸಾಲ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಸಾಲ ತೆಗೆದುಕೊಂಡು... ಕೈಗಾರಿಕೆಯನ್ನು ನಡೆಸಲು ಬೇಕಾದ ಜಾಣ್ಮೆ,  ಅನುಭವ ಏನು ಇಲ್ಲದೆ ಸಾಲದ ಹೊರೆ ಹೊತ್ತು ಹೆಣಗಾಡುತ್ತಿದ್ದದ್ದು ನಮಗೆಲ್ಲ ಗೊತ್ತಿತ್ತು. ಹಾಗಾಗಿ ಯಾರಿಗಾದರೂ ಶಿಕ್ಷೆ ಕೊಡಬೇಕಾದರೆ ಅವರನ್ನು ಸಣ್ಣ ಕೈಗಾರಿಕೆ ಶುರು ಮಾಡಲು ಪುಸಲಾಯಿಸಿ  ಸಾಲ ತೆಗೆದುಕೊಳ್ಳುವ ಹಾಗೆ ಮಾಡಿದರೆ... ಅದು ಶಿಕ್ಷೆ ಕೊಟ್ಟಂತೆ ಎಂಬುದು ಒಂದು ಹಾಸ್ಯದ ಮಾತಾಗಿದ್ದು.

" ಇಂಥ ತಪ್ಪು ಇನ್ನು ಎಂದೆಂದಿಗೂ ಮಾಡಲ್ಲ" ಅಂತ ನನ್ನಕ್ಕ ಗಿರಿಜಾಂಬನಿಗೆ ಹೇಳಿದ್ದು ಲೆಕ್ಕವಿಲ್ಲದಷ್ಟು ಬಾರಿ. ಆದರೆ ಚೇಷ್ಟೇ/ ತರಲೇ ಮಾತ್ರ ಮತ್ತೆ ಮತ್ತೆ ಮಾಡುತ್ತಿದ್ದೆ. ಅಕ್ಕ ಶಾಂತವಾಗಿದ್ದಾಗ " ಇಂಥ ತಪ್ಪು" ಎಂಬುದರ ವಿಶ್ಲೇಷಣೆ " ಮತ್ತೆ ಅದೇ ಸಮಯದಲ್ಲಿ ಅದೇ ತಪ್ಪು ಮಾಡಲ್ಲ" ಎಂದು... ಆ ಸಮಯ ಮತ್ತೆ ಬರುವುದಿಲ್ಲ ಎಂಬುದೇ ಸತ್ಯ. ಈಗಲೂ ನನ್ನ ಅಕ್ಕನೊಂದಿಗೆ ಮಾತಾಡುವಾಗ " ಇಂಥ ತಪ್ಪು...." ನೆನಪಿಗೆ ಆಗಾಗ ಬರುತ್ತಲೇ ಇರುತ್ತದೆ.

ನಡೆವನೆಡವುವನಲ್ಲದೆ.... ಈ ಸಾಲು ಎಷ್ಟು ಅರ್ಥಪೂರ್ಣ... ತಪ್ಪು ಮಾಡುವುದು ಸಹಜ... ಅದನ್ನು ಸರಿ ಮಾಡಿಕೊಂಡು ಜೀವನ ನಡೆಸಿದರೆ ನೆಮ್ಮದಿ. ತಪ್ಪನ್ನು ಮುಚ್ಚಿಕೊಳ್ಳಲು ಸುಳ್ಳು ಹೇಳುವುದು ಸುಲಭದ ದಾರಿ... ಆದರೆ ಹೇಳಿದ ಸುಳ್ಳುಗಳನ್ನು ತಪ್ಪಿಲ್ಲದೆ ಮತ್ತೆ ಹೇಳುವುದು ಕಷ್ಟ ಕಷ್ಟ. ಸುಳ್ಳು ಹೇಳುವವನಿಗೆ ಜ್ಞಾಪಕ ಶಕ್ತಿ ಅಪಾರವಾಗಿರಬೇಕು ಎನ್ನುವುದು ಸತ್ಯ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸ ಬೇಕಾಗುವುದು ಕರ್ಮಫಲ ಎಂದು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುವುದು ಒಂದು ಕಲೆ.

ತಪ್ಪು ಮಾಡದವರು ಯಾರವ್ರೆ... ತಪ್ಪೇ ಮಾಡದವರು ಎಲ್ಲವ್ರೆ.. ಈ ಹಾಡು ವ್ಯಾವಹಾರಿಕವಾಗಿದೆ.

ನಾನು ಬರೆದಿದ್ದರಲ್ಲಿ ಏನಾದರೂ ತಪ್ಪಿದ್ದರೆ ಮನ್ನಿಸಿ ಎಂದು ಕೇಳುತ್ತಾ...

ನಮಸ್ಕಾರ

D C Ranganatha Rao 

9741128413 








    

Comments

  1. ನಾಗೇಂದ್ರ ಬಾಬು19 October 2024 at 12:18

    ತಪ್ಪಿಲ್ಲ ಬಿಡಿ...ನೀವು ಬರೆದದ್ದು ನಾವು ಓದಿದ್ದು ಯಾವುದು ತಪ್ಪಿಲ್ಲ....ನಮ್ಮ ಜಮಾನದ ಮಕ್ಕಳು ತಪ್ಪು ಮಾಡಿದ್ದು...ಹಿರಿಯರು,ಶಿಕ್ಷಕರು ಶಿಕ್ಷೆ ಕೊಟ್ಟಿದ್ದು...ಅದರಿಂದ ಕಲಿತ ಪಾಠ...ನಮ್ಮ ಶಿಕ್ಷೆ ನೋಡಿ ಖುಷಿಪಟ್ಟ ಗೆಳೆಯರು, ನಾವೂ ಕೂಡ ಅದೇ ರೀತಿ ಬೇರೆಯವರ ಶಿಕ್ಷೆಗೆ ನಕ್ಕಿದ್ದು ..ಯಾವುದು ತಪ್ಪಿಲ್ಲ...ಅಲ್ಲ ತಪ್ಪಿ,ರಲ್ಲಿ ಲಾ.. ಆದ್ರೆ ಈಗ ಹಾಗಿಲ್ಲ..ಮಕ್ಕಳಿಗೆ ಶಾಲೆ ಯಲ್ಲಿ ಶಿಕ್ಷೆ ಕೊಟ್ಟರೆ ತಪ್ಪು...ಅಕ್ಕಪಕ್ಕದವರಿಗೆ
    ತಿಳಿ ಹೇಳಿದರೆ ತಪ್ಪು...ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟರೆ ತಪ್ಪು....(ಮುಡಾ ಹಾಗೂ ಕೊಲೆ ಪ್ರಕರಣಗಳು) ಹಾಗಾಗಿ ಯಾವುದು ತಪ್ಪು ಯಾವುದು ಸರಿ ಎಂಬ ಗೊಂದಲದ ನಡುವೆ ನಿಮ್ಮ ಈ ಲೇಖನ ಉತ್ತಮವಾಗಿ ಮೂಡಿಬಂದಿದೆ
    ಧನ್ಯವಾದಗಳು
    ಬಾಬು

    ReplyDelete
    Replies
    1. ಚೆನ್ನಾಗಿದೆ ನಿಮ್ಮ ಬರವಣಿಗೆ

      Delete
  2. ಚೆನ್ನಾಗಿ ಬರೆದಿದ್ದೀರ sir.
    ತಪ್ಪು maadadavare ಇಲ್ಲ.
    ತಪ್ಪು ತಿದ್ದಿ ಕೊಂಡು ಮುಂದೆ ನಡೆಯ ಬೇಕು.
    ಈಗ ಟೀಚರ್ಸ್ ಏನಾದ್ರೂ ಹೊಡೆದರೆ ಸೀದಾ ಜೈಲ್

    ReplyDelete
  3. ಮಾನ್ಯರೇ

    ತಪ್ಪುಗಳಾದಾಗಲೇ ಸರಿ ಯಾವುದೆಂದು ಸರಿಯಾಗಿ ಮನವರಿಕೆ ಆಗುವುದು. ಹಲವಾರು ತಪ್ಪುಗಳಾದ ನಂತರವೇ ವಿಜ್ಞಾನದ ಆವಿಷ್ಕಾರಗಳು ಸಫಲವಾಗಿರುವುದು.

    ತಪ್ಪಿಗೆ ಶಿಕ್ಷೆಯು ಮುಖ್ಯ ಹಾಗೂ ಪಶ್ಚಾತಾಪದಿಂದ ಮನನೊಂದು ಪರಿವರ್ತನೆಯಾಗುವುದು ಸಹ ಒಂದು ಉತ್ತಮ ಮಾರ್ಗ ಎಂದು ನನ್ನ ಅನಿಸಿಕೆ.

    ಈಗಿನ ಮಕ್ಕಳಿಗೆ ಶಿಕ್ಷೆ ನೀಡುವುದು ಕಾನೂನಿನ ಪ್ರಕಾರ ಅಪರಾಧ ಆದರೂ ಗುರುಹಿರಿಯರುಗಳಿಂದ ಶಿಕ್ಷೆ ಪಡೆದ ವಿದ್ಯಾರ್ಥಿಗಳೇ ಹಿಂದಿನ ಉತ್ತಮ ನಾಗರಿಕರಾಗಿರುವುದು ನೂರಕ್ಕೆ ನೂರರಷ್ಟು ಸತ್ಯ.

    ಎಂದಿನಂತೆ ಲೇಖಕರು ವಿಷಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿ ಕೊಟ್ಟಿರುತ್ತಾರೆ. ಇದು ಅವರ ಬರಹದ ನೈಪುಣ್ಯಕ್ಕೆ ಹಿಡಿದ ಕನ್ನಡಿಯಾಗಿರುತ್ತದೆ.

    ಮುಗಿಸುವ ಮುನ್ನ:

    ಮಿಸ್ಟೇಕ್ಸ್ ಆರ್ ಕಾಮನ್
    ಬಟ್ ಟು ಕರೆಕ್ಟ್ ದೆಮ್ ಇಸ್ ಹ್ಯೂಮನ್

    ವಂದನೆಗಳೊಂದಿಗೆ,

    ಗುರು ಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ