ಸರಸ್ವತಿ ಪೂಜೆ

 


ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ//

ಯಾಕುಂದೇಂದು ತುಷಾರ ಹಾರ ಧವಳಾ ಯಾ ಶುಭ್ರ ವಸ್ತ್ರಾನ್ವಿತ ಯಾ ವೀಣಾ ವರದಂಡ ಮಂಡಿತಕರ ಯಾ ಶ್ವೇತ ಪದ್ಮಾಸನಾ ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿಃ ದೇವೈ ಸದಾ ಪೂಜಿತಾ ಸಾಮಾಂಪಾತು ಸರಸ್ವತಿ ಭಗವತಿ  ನಿಃಶೇಷ ಜಾಡ್ಯಾಪಃ//

ಇದು ಪ್ರತಿದಿನ ಸಂಜೆ ಮನೆಯ ದೀಪ ಹಚ್ಚಿದ ಮೇಲೆ ಓದಲು ಕುಳಿತಾಗ ಕೈ ಮುಗಿದು ಮಾಡುತ್ತಿದ್ದ ಮೊದಲ ಪ್ರಾರ್ಥನೆ. ಅದರ ಅರ್ಥವೂ ತಿಳಿಯದಿದ್ದ ಕಾಲ.. ಆದರೆ ಶ್ರದ್ಧೆ ಭಕ್ತಿ ನಂಬಿಕೆ ಮಾತ್ರ ಗಟ್ಟಿಯಾಗಿತ್ತು.  ಈ ಕರಿಷ್ಯಾಮಿ ಪದ ನನಗೆ ಒಂದು ಅನುಮಾನ ಮೂಡಿಸುತ್ತಿತ್ತು. ನಮ್ಮಪ್ಪನನ್ನು ಅಜ್ಜಿ " ಶಾಮಿ" ಎಂದು ಕರೆಯುತ್ತಿದ್ದದ್ದು.. ನಮ್ಮಪ್ಪ ಅಷ್ಟೇನೂ  ಬೆಳ್ಳಗಿಲ್ಲದಿದ್ದದ್ದು... ಎರಡು ಸೇರಿ ಕರಿಶ್ಯಾಮಿ ಆಗಿ ಇಲ್ಲಿ ಹೇಗೆ ಬಂತು ಎಂದು. ಅದಕ್ಕೆ ಉತ್ತರ ಸಿಕ್ಕಿದ್ದು ನಾನು ಹೈಸ್ಕೂಲ್ ನಲ್ಲಿ ಸಂಸ್ಕೃತ ಓದಲು ಆಯ್ಕೆ ಮಾಡಿದಾಗ .... ಸಂಸ್ಕೃತದ ಪಂಡಿತರು ವೆಂಕಟದಾಸಶರ್ಮ ಅವರಿಂದ.


ಸರಸ್ವತಿ ಪೂಜೆ ನವರಾತ್ರಿ ಸಂಭ್ರಮದ ಒಂದು ಮುಖ್ಯ ಭಾಗ...  ಮನೆಯಲ್ಲಿ ಬೊಂಬೆಗಳನ್ನು ಜೋಡಿಸುವಾಗಲೇ... ನನ್ನೆಲ್ಲ ಪುಸ್ತಕಗಳನ್ನು ಸರಸ್ವತಿ ಪೂಜೆಗೆ ಇಡುತ್ತಿದ್ದದ್ದು.. ಅದರ ಹಿಂದಿನ ಕಾರಣ ಸುಮಾರು 12 ದಿನಗಳ ಕಾಲ ಪುಸ್ತಕ, ಓದು ಎನ್ನುವ ಜಂಜಾಟವೇ ಇಲ್ಲದ್ದು. 

ಸರಸ್ವತಿ ಪೂಜೆಯ ದಿನ... ದೇವರಿಗೆ ನಮಸ್ಕಾರ ಮಾಡಿ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗುವ ಆಶೀರ್ವಾದ ಬೇಡುವುದು. ಅಂದು ಮಾಡುತ್ತಿದ್ದ ಸಿಹಿ ದೋಸೆ.. ಮೇಲೆ ಹಾಕಿದ ತುಪ್ಪದ ಸವಿ.. ವಾವ್...

ನನ್ನೂರು ದೊಡ್ಡಜಾಲದ... ಹಾಲ್ ಎಂದೇ ಕರೆಸಿಕೊಳ್ಳುತ್ತಿದ್ದ ದೊಡ್ಡಮನೆ.. ಹನುಮಂತರಾಯಪ್ಪನದು. (ಈ ಹಾಲಿನಲ್ಲೇ ನನ್ನ ಮೂವರು ಅಕ್ಕಂದಿರ ಮದುವೆಯಾದದ್ದು) ಆ ಹಾಲಿನ ವಿಶಾಲ ಹಜಾರದಲ್ಲಿ ಜೋಡಿಸಿದ್ದ ಹಲವಾರು ಪಟಗಳಲ್ಲಿ ಉಯ್ಯಾಲೆ ಆಡುತ್ತಿದ್ದ ಹೆಣ್ಣು ಹಾಗೂ ಈ ಕೆಳಗಿನ ಸರಸ್ವತಿಯ ಪಟವೂ ಒಂದು. ಸಾಕಷ್ಟು ಸಲ ನೋಡಿದ್ದರಿಂದ ಇದು ನನಗೆ ತುಂಬಾ ಪರಿಚಿತ.



 ಎಷ್ಟೋ ದಿನಗಳ ನಂತರ ತಿಳಿದದ್ದು ಇದು ರಾಜಾ ರವಿವರ್ಮರ ಕಲಾಕೃತಿಯೆಂದು. ಆ ಕಾಲಕ್ಕೆ ಅಂತಹ ಕಲಾಕೃತಿಯನ್ನು ಆಯ್ದು ಮನೆಯಲ್ಲಿ ಇಟ್ಟಿದ್ದ ಹನುಮಂತರಾಯಪ್ಪನ ಕಲಾಭಿರುಚಿ ಮೆಚ್ಚತಕ್ಕದ್ದು ಅಲ್ಲವೇ?

ನವರಾತ್ರಿಯ ಎಲ್ಲ ದಿನಗಳು.. ನಮ್ಮೂರಿನ ಒಂದಷ್ಟು ಮನೆಗಳಲ್ಲಿ ಇಟ್ಟಿರುವ ಬೊಂಬೆಯನ್ನು  ನೋಡಿ ಬರುವುದು ತುಂಬಾ ಇಷ್ಟವಾದ ಸಂಗತಿ. ,  ಅದಕ್ಕೂ ಮುಖ್ಯವಾಗಿ ಅಲ್ಲಿ ಕೊಡುವ ತಿಂಡಿ - ತಿನಿಸಿನ ಆಕರ್ಷಣೆ ಜಾಸ್ತಿ ಇತ್ತು.    ಕೆಲವರು ಹಾಡು ಹಾಡಿಸಿ, ಡ್ಯಾನ್ಸ್ ಮಾಡಿಸಿ ( ಸಾಮಾನ್ ಯಾವುದು ಬೇಕಾದರೆ ಅದು ಒಂದೊಂದೇ ಕಾಸು ಎನ್ನುವ ಹಾಡಿಗೆ ಡ್ಯಾನ್ಸ್ ಮಾಡುವುದು) ನಂತರವೇ ಚಿಕ್ಕ ಚಿಕ್ಕದಾದ ಚಕ್ಲಿ, ಕೋಡ್ಬಳೆ, ನಿಪ್ಪಟ್ಟು, ಕಡ್ಲೆ ಹಿಟ್ಟು, ಪೆಪ್ಪರ್ಮೆಂಟು, ಬೊಂಬೆಯ ರೂಪದಲ್ಲಿ ಇರುತ್ತಿದ್ದ ಬಿಸ್ಕತ್ತು... ಹೀಗೆ ಏನಾದರೂ ಸರಿ..ಕೈಯಲ್ಲಿರುತ್ತಿದ್ದ ಒಂದು ಚೀಲದಲ್ಲಿ ತುಂಬಿ ತರುವುದು... ಅದನ್ನು ಹರಡಿಕೊಂಡು ನೋಡಿ ಸಂತೋಷಪಟ್ಟು ತಿನ್ನುವುದು ಇನ್ನೊಂದು ಘಟ್ಟ.

ನನ್ನೂರು ದೊಡ್ಡಜಾಲದ ಭಜನೆಯಲ್ಲಿ ಪಟೇಲ್ ರಂಗಪ್ಪನವರ ಮಗ ರಾಮಾಂಜಿನಪ್ಪ  “ಗಗ ಪಾಪ ಧಪ ಸಾಸಾ ರಿಸಧಧ ಪಾದಪ ಗಗರೀ" ಯಿಂದ ಶುರುಮಾಡಿ ಹಾಡುತ್ತಿದ್ದ "ವರ ವೀಣಾ ಮೃದುಪಾಣೀ.."ಹಾಡು ಚಿರಪರಿಚಿತ.

ಹಳ್ಳಿಯಲ್ಲಿದ್ದಾಗ... ಪರೀಕ್ಷೆಗೆ ಮುಂಚೆ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವುದು ಒಂದು ಸಂಪ್ರದಾಯವೇ ಆಗಿತ್ತು...ಆಗಿನ ಹಾಡು ಮಾತ್ರ ಸಾಮಾನ್ಯವಾಗಿ " ಶಾರದೆಯೇ ಕರಗಳ ಜೋಡಿಸಿ ವರಗಳ ಬೇಡುವೆನೆ... ಬೊಮ್ಮನ ರಾಣಿ , ಪರಮ ಕಲ್ಯಾಣಿ, ಸುರನರ ವಂದಿತೆ ವೀಣಾ ಪಾಣಿ....."

ನನ್ನ ಗೆಳೆಯ D M ಚನ್ನಕೃಷ್ಣ ಯಾವಾಗಲೂ ಹೇಳುತ್ತಿದ್ದದ್ದು  " ಸರಸ್ವತಿ ಪೊರೆ ಭಾರತೀ ಶ್ರೀ"

ಅದು ಒಂದು ಸಂಭ್ರಮವೇ. ಆದರೆ ಪೂಜೆ ಮಾಡಿ ವರಗಳ ಬೇಡಿದವರಿಗೆಲ್ಲ ಪಾಸು ಮಾಡಲು ಒಪ್ಪಲಿಲ್ಲ ನಮ್ಮ ಸರಸ್ವತಿ... ಕಾರಣವೇನೋ ಆಕೆಗೇ ಗೊತ್ತು.



ನವರಾತ್ರಿಯ ಸಡಗರ ಹಾಗೂ ಜಂಬೂಸವಾರಿಯನ್ನು ಮೈಸೂರಿಗೆ ಹೋಗಿ  ನೋಡಿ ಬಂದವರ... ವಿವರಣೆಯನ್ನು ಕೇಳಿ.. ನನಗೂ ಹೋಗಬೇಕೆಂಬ ಆಸೆ ಗರಿಗೆದರಿದ್ದು ಸತ್ಯ. ಆಸೆ ಈಡೇರ ಬೇಕಾದರೆ ದಶಕಗಳೇ ಕಳೆದವು. ಅಂತೂ ಜಂಬುಸವಾರಿಯನ್ನು ಕಣ್ತುಂಬ ನೋಡಿ ಸಂತೋಷಿಸಿದ್ದಾಯಿತು. ಆದರೆ ಜನಜಂಗುಳಿಯ ಮಧ್ಯೆ ಪರದಾಡಿದ್ದು ಸತ್ಯ. ಸಂತೆಯೊಳಗೊಂದು ಮನೆಯ ಮಾಡಿ ಗದ್ದಲಕಂಜಿದೊಡೆಂತಯ್ಯಾ.. ಎಂಬ ವಚನ ಎಷ್ಟು ಸಮಯೋಚಿತವಾಗಿದೆ ಅಲ್ಲವೇ?

ಅಂದಿನ ಮಹಾರಾಜರು ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಆನೆಯ ಮೇಲೆ ಕೂತು ಜಂಬೂಸವಾರಿ ಮಾಡುವ ಚಿತ್ರ... ಪ್ರಜಾವಾಣಿಯಲ್ಲಿ ಬಂದದ್ದು... ಅದರಲ್ಲೂ ಅವರು ಹಾಕಿಕೊಂಡ ಪೇಟ ಮತ್ತು ಕಪ್ಪು ಕನ್ನಡಕ ನನ್ನ ಮನದ ಚಿತ್ರಣದಲ್ಲಿ ಗಟ್ಟಿಯಾಗಿದೆ.

 ನಾನು ಈಚಿನ ದಿನಗಳಲ್ಲಿ ಭಾಗಿಯಾಗುತ್ತಿರುವ ಸ್ನೇಹ ಸೇವಾ ಟ್ರಸ್ಟ್ ನ  ಮಕ್ಕಳ ಕೇಂದ್ರಿತ ಕಾರ್ಯಕ್ರಮಗಳಲ್ಲಿ, ಪರೀಕ್ಷೆಗಳಿಗೆ ಮುಂಚೆ ಆಚರಿಸುವ ಸರಸ್ವತಿ ಪೂಜೆಯೂ ಒಂದು.    ಅಂದು ಎಲ್ಲ  ಮಕ್ಕಳು... ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಸಿಂಗರಿಸಿಕೊಂಡು, ಸಡಗರ ಸಂಭ್ರಮದಿಂದ ಭಾಗವಹಿಸುವುದನ್ನು ನೋಡುತ್ತಾ ನನ್ನ ಬಾಲ್ಯದ ದಿನಗಳಿಗೆ ಜಾರಿದ ಕ್ಷಣಗಳೂ ಉಂಟು.

ಬೆಂಗಳೂರಿನ ಶಂಕರ ಮಠದ ನವರಾತ್ರಿಯ ವಿಶೇಷ ದಿನಗಳ ಅಲಂಕಾರ, ಭಕ್ತಿ ತುಂಬಿದ ಸಡಗರದ ವಾತಾವರಣ, ಶಾರದೆಯ ದರ್ಶನದ ನಂತರ ಕೊಡುವ ಪ್ರಸಾದವು ಅಚ್ಚು ಮೆಚ್ಚು.

ಶೃಂಗೇರಿಯ ಶಾರದಾಂಬೆಯ ದೇವಸ್ಥಾನದ ಪರಿಸರ... ನದಿಯಲ್ಲಿನ ಮೀನುಗಳು..... ತೆಪ್ಪದಲ್ಲಿ ನರಸಿಂಹ ವನಕ್ಕೆ ಹೋಗಲು ನದಿ ದಾಟಿದ ಕ್ಷಣಗಳು ಸೊಗಸು.

 " ಎಂಥ ಅಂದ ಎಂಥ ಚಂದ ಶಾರದಮ್ಮ... ನಿನ್ನ ನೋಡಲೆರಡು ಕಣ್ಣುಗಳು ಸಾಲದಮ್ಮ"  ಚಿ. ಉದಯಶಂಕರ್ ಅವರು ಬರೆದ,  ರಾಜಕುಮಾರ್ ಅವರು ಹಾಡಿದ ಈ ಹಾಡು ಕೇಳಿದಾಗ ಪುಳಕಿತಗೊಳ್ಳುತ್ತೇನೆ. 

ನನ್ನ ಮೊದಲ ಚಾರಣ ಶುರುವಾಗಿದ್ದೇ ಶೃಂಗೇರಿಯ ಶಾರದಾಂಬ ಸನ್ನಿಧಿಯಿಂದ ....ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಿಯವರೆಗೆ...  ಅದೊಂದು ಅದ್ಭುತ ಅನುಭವ.

ಸರಸ್ವತಿ ಪೂಜೆಯ ನೆನಪುಗಳು ಮರು ಕಳಿಸಲು ಒಂದು ಬಲವತ್ತರವಾದ ಕಾರಣವಿದೆ.

ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಂತೆ...E - ಪುಸ್ತಕದ ತಯಾರಿಯ ಕೆಲಸ ಮುಗಿದು... ನನ್ನ ಕಿರಿಯ ಸ್ನೇಹಿತ ಅಮೋಘ ಹಾಕಿದ ಶ್ರಮದಿಂದ ಸುಂದರವಾಗಿ ರೂಪುಗೊಂಡಿದೆ ಎಂದೇ ನನ್ನ ಅನಿಸಿಕೆ. ಅವನು ರೂಪಿಸಿದ ಪುಟಗಳನ್ನು ನೋಡಿ... ನನ್ನ ಅಭಿಪ್ರಾಯವನ್ನು ತಿಳಿಸುವುದೇ ನನಗೆ ಶ್ರಮದಾಯಕವಾಗಿತ್ತು ಅಂದಾಗ ಅಮೋಘನ ಶ್ರಮದ ಅಗಾಧತೆಯ ಪರಿಚಯವಾಗುತ್ತೆ.

ಬರೆಯುವುದು ಒಂದು ಘಟ್ಟವಾದರೆ... ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಎಷ್ಟು ದೊಡ್ಡ ಕೆಲಸ ಎಂಬುದರ ಅರಿವಾಯಿತು. ನನ್ನ ಮೆಚ್ಚಿನ ಡಾಕ್ಟರ್ ಸಿಆರ್ ಚಂದ್ರಶೇಖರ್ ಅವರ ಪುಸ್ತಕಗಳು ಆಗಾಗ ಪ್ರಕಟವಾಗುವ ವೇಗವನ್ನು ನೋಡಿದಾಗ... ಅದರ ಹಿಂದಿರುವ  ಹಾಗೂ ಅದಕ್ಕೆ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಶ್ರಮ ಮೆಚ್ಚುವಂಥದ್ದು.

ಇಲ್ಲಿಯವರೆಗೆ ಸರಸ್ವತಿ ಪೂಜೆಗೆ ನಾನು ಓದಬೇಕಾದ ಪುಸ್ತಕಗಳನ್ನು ಇಟ್ಟು ಪೂಜೆ ಮಾಡಿ ಪಾಸು ಮಾಡಲು ಪ್ರಾರ್ಥನೆ ಮಾಡುತ್ತಿದ್ದದ್ದು... 

ಆದರೆ ಈ ಸಲದ ಸರಸ್ವತಿಯ ಪೂಜೆ ವಿಶೇಷ... ಸರಸ್ವತಿಯ  E - ಪೂಜೆಗೆ ಇಡುತ್ತಿರುವುದು E - ಪುಸ್ತಕ..." ಸಿಹಿ ಕಹಿ ನೆನಪುಗಳು" ಬ್ಲಾಗ್ ಲೇಖನಗಳ ಸಂಗ್ರಹ. ಪ್ರಾರ್ಥನೆಯೂ ವಿಶೇಷ   "ತಾಯಿ ಈ ಪುಸ್ತಕದ ಲೋಕಾರ್ಪಣೆ ಮಾಡಿಕೊಡು" ಎಂದು.

ಸರಸ್ವತಿಯ ಆಶೀರ್ವಾದವನ್ನು ಹೊತ್ತು  " ಸಿಹಿ ಕಹಿ ನೆನಪುಗಳು" E-ಪುಸ್ತಕವನ್ನು ಓದುಗರ ಮುಂದೆ ಇಡುತ್ತಿದ್ದೇನೆ... ಕೆಳಗಿನ ಲಿಂಕ್ ಅನ್ನು ಒತ್ತಿ ಪುಸ್ತಕವನ್ನು ಓದಿ... ಸಾಧ್ಯವಾದಷ್ಟು ನಿಮ್ಮ ಹೆಸರಿನೊಂದಿಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

https://drive.google.com/file/d/1RY-a2g0Escouk7JJsDuZkXc1UuGJAdgl/view?usp=drivesdk

ಪುಸ್ತಕದ ರೂಪದಲ್ಲಿ ನಿಮ್ಮ ಬರಹಗಳು ಬರಲಿ ಎಂದು ಸಲಹೆ ಮಾಡಿದ, ಸ್ಪೂರ್ತಿ ನೀಡಿದ ಎಲ್ಲರಿಗೂ ನನ್ನ ವಂದನೆಗಳು. 

ಸರಸ್ವತಿಯು ಎಲ್ಲರಿಗೂ ಸುಜ್ಞಾನವನ್ನು ಕೊಡಲೆಂದು ಪ್ರಾರ್ಥಿಸುತ್ತಾ...

ನಮಸ್ಕಾರ


D C Ranganatha Rao

9741128413


    

    

Comments

  1. This comment has been removed by a blog administrator.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ