ನೂರು - ಶತಕ - ಸಂಭ್ರಮ

 



ಕೆಲವಂ ಬಲ್ಲವರಿಂದ ಕಲ್ತು

ಕೆಲವಂ ಶಾಸ್ತ್ರಂಗಳಂ ಕೇಳುತಂ

ಕೆಲವಂ ಮಾಳ್ಪವರಿಂದ ಕಂಡು

ಕೆಲವಂ ಸುಜ್ಞಾನದಿಂ ನೋಡುತಂ

ಕೆಲವಂ ಸಜ್ಜನ ಸಂಗದಿಂದಲರಿಯಲ್

ಸರ್ವಜ್ಞನಪ್ಪಂ ನರಂ

ಪಲವುಂ ಪಳ್ಳ ಸಮುದ್ರವೈ 

ಹರ ಹರಾ ಶ್ರೀ ಚನ್ನ ಸೋಮೇಶ್ವರ..

ಸೋಮೇಶ್ವರ ಶತಕದ ಈ ಪದ್ಯ ನಮ್ಮ ಜೀವಿತಕಾಲದಲ್ಲೆಲ್ಲ ಅಳವಡಿಸಿಕೊಳ್ಳಬೇಕಾದ ಒಂದು ಸೂತ್ರ ಎಂದು ನನ್ನ ನಂಬಿಕೆ. ಮನುಷ್ಯನ ಜೀವಿತಕಾಲ ಅಂದಾಗ ಅದು ನೂರು ವರ್ಷ ಎನ್ನುವ ಒಂದು ಪ್ರತೀತಿ. ನೂರು ವರ್ಷಗಳನ್ನು ಕಾಣದವರೇ ಬಹಳ ಮಂದಿ.. ನೂರು ವರ್ಷಗಳನ್ನು ಪೂರೈಸಿ ತಮ್ಮ ಜೀವಿತಕಾಲದಲ್ಲಿ ಜನರ ಪ್ರೀತಿಯನ್ನು ಗಳಿಸಿದ .. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ರೂವಾರಿ ಸರ್ ಎಂ ವಿ... ವಿಶ್ವೇಶ್ವರಯ್ಯನವರು, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು,  ನಿಘಂಟು ತಜ್ಞ ಎಂದು ಹೆಸರಾದ   ಶ್ರೀ ವೆಂಕಟಸುಬ್ಬಯ್ಯನವರು, ವೇದಪಾರಂಗತ ಪಂಡಿತ ಸುಧಾಕರ್ ಚತುರ್ವೇದಿಯವರು ತಕ್ಷಣ ನೆನಪಿಗೆ ಬಂದವರು.

108 ವರ್ಷ ಬದುಕಿದ್ದ ನಮ್ಮಪ್ಪನ ನೂರು ವರ್ಷದ  "ಶಾಮಣ್ಣನ ಶತಾಬ್ದಿ ಸಂಭ್ರಮ"ದ ಆಚರಣೆ ಅತಿ ಸಂಭ್ರಮ ಯುಕ್ತವಾಗಿತ್ತು.

100 / ಶತಕ ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಮೂಗು ತೂರಿಸಿದೆ.

ಚಿಕ್ಕಂದಿನಲ್ಲಿ ನನ್ನಮ್ಮ ಯುಗಾದಿ ಹಾಗೂ ದೀಪಾವಳಿ ಹಬ್ಬದಲ್ಲಿ ನಮಗೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ.. ಅಭ್ಯಂಜನಕ್ಕೆ ಅಣಿ ಮಾಡುತ್ತಿದ್ದದ್ದು ಪದ್ಧತಿ... ಆಗೆಲ್ಲ ನಮ್ಮಮ್ಮ ಹರಸುತ್ತಿದ್ದದ್ದು.... "ಆಯುಷ್ಯವಂತನಾಗಿ, ಆರೋಗ್ಯವಂತನಾಗಿ, ಭಾಗ್ಯವಂತನಾಗಿ ಐಶ್ವರ್ಯವಂತನಾಗಿ ಸಕಲ ಜನಕ್ಕೂ ಅಧಿಕಾರಿಯಾಗಿ ನೂರು ಕಾಲ ಬಾಳು".. ಅದನ್ನು ಕೇಳಲು ಅಪ್ಯಾಯಮಾನವಾಗಿತ್ತಾದರೂ... ನಾವು ನಾಲ್ಕು ಜನ ಅಣ್ಣ ತಮ್ಮಂದಿರಿಗೆ ಹೇಳುತ್ತಿದ್ದದ್ದು ಇದನ್ನೇ... ಹಾಗಾಗಿ ನಮ್ಮಮ್ಮನೊಂದಿಗೆ ನನ್ನ ತಗಾದೆ  "ನಿನ್ನ ಆಶೀರ್ವಾದ ನಮ್ಮ ಅಣ್ಣ ತಮ್ಮಂದಿರ ಮಧ್ಯೆ ಜಗಳಕ್ಕೆ ಕಾರಣವಾಗುತ್ತೆ" ಅಂತ.  ಅದು ಹೇಗೋ ಅಂದಾಗ... "ಸರ್ವಜನಕ್ಕೂ ಅಧಿಕಾರಿಯಾಗಿ..." ನಮ್ಮೆಲ್ಲರಿಗೂ ಈ ಆಶೀರ್ವಾದ ನಮ್ಮ ನಮ್ಮಲ್ಲಿ ಮೇಲುಗೈ ಸಾಧಿಸಲು ಜಗಳವಾಗಲ್ವೆ?... ಅಧಿಕ ಪ್ರಸಂಗಿ ಅಂತ ಬೈದಳು.. ಅದೂ ಆಶೀರ್ವಾದವೇ...

ಒಂದು ಎರಡನೇ ತರಗತಿಯಲ್ಲಿ  ಒಂದರಿಂದ ನೂರರ ತನಕ ಒಂದೇ ಸಮನೆ ಹೇಳುವುದು... ನಮಗಿದ್ದ ಪಾಠದ ಭಾಗ.. ವಾರಕ್ಕೊಂದು ಸಲವಾದರೂ...  

ಪರೀಕ್ಷೆಯಲ್ಲಿ ಎಲ್ಲಾ ವಿಷಯಕ್ಕೂ 100 ಅಂಕ... ಸಾಮಾನ್ಯ. 

ನಮಸ್ಕಾರ ಮಾಡಿದಾಗ ದೊಡ್ಡವರು ಆಶೀರ್ವಾದ ಮಾಡ್ತಿದ್ದದ್ದು" ಶತಮಾನಂ ಭವತಿ ಶತಾಯುಷ್ಯೇ...."

 ದೇವರಿಗೆ ಪೂಜೆ ಮಾಡಿಸಲು ಅಷ್ಟೋತ್ತರ ಶತನಾಮ ಅರ್ಚನೆ.. ಅಷ್ಟೇಕೆ ಕೃಷ್ಣ ಶಿಶುಪಾಲನ ತಪ್ಪುಗಳನ್ನ ಮನ್ನಿಸಿದ್ದು ನೂರು ಬಾರಿ. 

ಕ್ರಿಕೆಟ್ಟಲ್ಲಂತೂ 100 ರನ್ನಿಗೆ ಎಲ್ಲಿಲ್ಲದ ಬೆಲೆ... ಅದು ಈಗ 200..300 ಸಹ ಆಗಿ ಹೋಗಿದೆ.. ಕಪಿಲ್ ದೇವ್ ಬಾರಿಸಿದ 100 ಜೊತೆಗೆ 75 ರನ್...1983ರ ವಿಶ್ವಕಪ್ ಆಟದಲ್ಲಿ ಭಾರತದ ಪರವಾಗಿ ತಿರುವು ಕೊಟ್ಟ ಶತಕ.

ಚರಿತ್ರೆಯಲ್ಲಿ ಶತಮಾನಗಳ ಲೆಕ್ಕದಲ್ಲಿ ದಿನಗಣನೆ.. ಹಾಗೆಯೇ ಶತಮಾನದ ಪುರುಷರ ಗಣನೆ.

ನೂರು ವರ್ಷ ಪೂರ್ಣ ಆಯಸ್ಸು..

ನೂರು ಸೇರು ಒಂದು ಪಲ್ಲ...

ನೂರು ಪೈಸೆ ... ಒಂದು ರೂಪಾಯಿ.



ಅಂಕಿ ಅಂಶಗಳ ವಿಚಾರಕ್ಕೆ ಬಂದಾಗ ಎಲ್ಲಕ್ಕೂ ನೂರೇ ಮೂಲ .. ಎಲ್ಲಾ ಶೇಕಡಾವಾರು ಅಥವಾ ಪ್ರತಿಶತ ಎಂದು ನೂರರ ಭಾಗದಲ್ಲಿ ಹೇಳುವುದು ವಾಡಿಕೆ. 

ಶತಪ್ರತಿಶತ ಅಂದರೆ ನೂರಕ್ಕೆ ನೂರು..



ನಾನು ಹೈ ಸ್ಕೂಲ್ ನಲ್ಲಿ ಓದುತ್ತಿದ್ದ ಸಮಯ.. ನಮ್ಮದು ಹೊಸದೇ ಆದ ಪಠ್ಯ ಕ್ರಮ.. ಅದರಲ್ಲಿ ಹೊಸತರ ಪ್ರಶ್ನೆಗಳು (new type questions).   R. ಶ್ರೀನಿವಾಸನ್ ನಮ್ಮ ಕ್ಲಾಸ್ ಟೀಚರ್ ಹಾಗೂ ಗಣಿತದ ಟೀಚರ್ . ತಿಂಗಳು ತಿಂಗಳು ಪರೀಕ್ಷೆಗಳು... ಆನಂತರ ಮಾರ್ಕ್ಸ್ ಹೇಳುವ.. ನಂತರ ಪೇಪರ್ ಕೊಡುವ ಒಂದು ಪದ್ಧತಿ. ಜಾಸ್ತಿ ಮಾರ್ಕ್ಸ್ ಬಂದವರಿಂದ ಮೊದಲುಗೊಂಡು ಕಡಿಮೆ ಮಾರ್ಕ್ಸ್ ತನಕ ಪೇಪರ್ ಹಂಚುವುದು.. ಜೊತೆಗೆ ಅವರ ಹೊಗಳಿಕೆ ಮತ್ತು ಬೈಗುಳ. ಹೀಗೊಂದು ಗಣಿತದ ಪರೀಕ್ಷೆಯ ಪೇಪರ್ ಕೊಡುವಾಗ  35 ನಂಬರಿಗೆ  ಇಳಿದರೂ ನನ್ನ ಹೆಸರು ಬರಲೇ ಇಲ್ಲ... ನನಗೆ ಗಾಬರಿ, ಭಯ, ಸ್ವಲ್ಪ ಅವಮಾನ ಸಹ... ಎಲ್ಲರಿಗೂ ಹಂಚಿದ್ದಾಯಿತು ನನ್ನೊಬ್ಬನ ಪೇಪರ್ ಅವರ ಕೈಯಲ್ಲೇ ಇದೆ.. ಸೊನ್ನೆ ಬಂದಿರಬಹುದಾ ಎಂದು ನನ್ನ ಯೋಚನೆ. RS ನನ್ನ ಕರೆದರು.. ಹೋಗಲು ಏನೋ ಅವ್ಯಕ್ತ ಭಯ ಸಂಕೋಚ.. ಒದೆ ಬೀಳಬಹುದು ಎಂಬ ಅನುಮಾನ.. ಪಕ್ಕಕ್ಕೆ ಕರೆದು ನಿಲ್ಲಿಸಿಕೊಂಡ RS ಎಲ್ಲರ ಕೈಯಲ್ಲಿ ಚಪ್ಪಾಳೆ ಹೊಡೆಸಿ ನನಗೆ ನೂರಕ್ಕೆ 100 ಮಾರ್ಕ್ಸ್ ಬಂದಿದೆ ಎಂದು ಹೇಳಿದ್ದು ತುಂಬಾ ಖುಷಿ ಕೊಟ್ಟಿತ್ತು... ಆ ಖುಷಿಯ ಸವಿ ನೆನಪು ಈಗಲೂ ಇದೆ. ದುರ್ದೈವ ಎಂದರೆ ಅದೇ ಮೊದಲು ಮತ್ತು ಅದೇ ಕೊನೆ ನೂರಕ್ಕೆ ನೂರು ಪಡೆದದ್ದು.









1957 ರ ತನಕ ಇದ್ದ  ಒಂದುರೂಪಾಯಿಗೆ 16 ಆಣೆ, ಒಂದು ಆಣೆಗೆ 12ಪೈಸಾ... ಕೊನೆಗೊಂಡು ಒಂದು ರೂಪಾಯಿಗೆ 100 ನಯಾಪೈಸದ ಹೊಸ ನಾಣ್ಯ ಚಲಾವಣೆಗೆ ಬಂತು. ನಂತರ "ನಯಾ" ಕಳೆದುಕೊಂಡು ಬರೀ ಪೈಸೆಯಾಗಿ ಉಳಿಯಿತು. ಕೆಲಕಾಲ ಎರಡೂ ನಾಣ್ಯಗಳು ಜೊತೆಯಲ್ಲೇ ನಡೆಯುತ್ತಿದ್ದವು ... 










ಆಗ ಒಂದು ಆಣೆ ಕೊಟ್ಟು ಒಂದು ಪೋಸ್ಟ್ ಕಾರ್ಡ್ ಕೊಂಡರೆ ಒಂದು ನಯಾ ಪೈಸೆಯ ನಾಣ್ಯವನ್ನು ವಾಪಸ್ ಕೊಡುತ್ತಿದ್ದರು... ಅದೇ ಒಂದು ಮೋಜು.

ನೂರೊಂದು ನೆನಪು ಎದೆಯಾಳದಲ್ಲಿ, ವಿರಹ ನೂರು ನೂರು ತರಹ, ನೂರು ಜನ್ಮಕೂ ನೂರಾರು ಜನ್ಮಕೂ.. ಜನಜನಿತ ಕನ್ನಡ ಹಾಡುಗಳು.

ನೂರು ಜುಟ್ಟು ಒಂದು ಕಡೆ ಬಾಳಬಹುದು ಮೂರು ಜಡೆ ಕಷ್ಟ ಎನ್ನುವುದು ಒಂದು ಹೇಳಿಕೆ. ಒಪ್ಪುವುದು ಬಿಡುವುದು ನಿಮ್ಮಿಷ್ಟ.

ಶತಾವಧಾನ ಒಂದು ಅದ್ಭುತ ಕಲೆ... ಶತಾವಧಾನಿ ಗಣೇಶ್ ಅವರ ಕಾರ್ಯಕ್ರಮವನ್ನು ನೋಡಿ ಆನಂದಿಸಿದ್ದೇನೆ.




ನನಗೆ ನೆನಪಿರುವಂತೆ ನೂರರ ಗರಿ ಗರಿ ನೋಟುಗಳನ್ನು ಮೊದಲು ಕೈಯಲ್ಲಿ ಹಿಡಿದದ್ದು... ಶಹಾಬಾದ್ ನಲ್ಲಿ... ಸಂಬಳದ ದಿನ.  ಕ್ಯಾಶಿಯರ್ ವಿಶ್ವನಾಥನ್ ನಮ್ಮನ್ನು ಗುರುತಿಸಿ ತಕ್ಷಣ ನಮ್ಮ ಕವರನ್ನು ತೆಗೆದುಕೊಡುತ್ತಿದ್ದ ಚಾಣಾಕ್ಷತನ ನನಗೆ ಮೆಚ್ಚುಗೆ.

ಇಷ್ಟೆಲ್ಲಾ ನೂರರ ಬಗ್ಗೆ ನೆನೆಸಿಕೊಳ್ಳಲು ಕಾರಣ... ಇದು " ಸಿಹಿ ಕಹಿ ನೆನಪುಗಳು" ಬ್ಲಾಗ್ ನ ನನ್ನ ನೂರನೆಯ ಲೇಖನ. ಮುಂದೇನು ಅಂದಾಗ ನೆನಪಿಗೆ ಬಂದಿದ್ದೆ... ನಮ್ಮ ಗಂಗಾರಾಮಯ್ಯ ಮೇಷ್ಟ್ರು ಕೇಳುತ್ತಿದ್ದ ನೂರು ಆದ್ಮೇಲೆ ಏನು ಎಂಬ ಪ್ರಶ್ನೆ.. ಅದಕ್ಕೆ ಉತ್ತರ ನೂರೊಂದು.. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ.. ಹಿಗ್ಗದೆಯೇ ಕುಗ್ಗದೆಯೇ ನುಗ್ಗಿ ನಡೆ ಮುಂದೆ.... ಇದು ನನಗೆ ಬಂದ ಯೋಚನಾಲಹರಿ.

ಬ್ಲಾಗ್ ಬರೆಯಲು ಸಲಹೆ ನೀಡಿ ಪ್ರೋತ್ಸಾಹಿಸಿದ ಸುಬ್ಬಯ್ಯ ಶೆಟ್ಟರನ್ನು ನೆನೆಯಲೇಬೇಕು... ಅದೇ ರೀತಿ 100 ರ  ಹಂತ ಮುಟ್ಟಲು ಕಾರಣರಾದ ಅನೇಕ ಓದುಗರು. ಈಗೀಗ ನನ್ನ ಬರಹವನ್ನು ಓದುವವರ ಸಂಖ್ಯೆ ನೂರನ್ನು ಸುಲಭವಾಗಿ ಮುಟ್ಟುತ್ತದೆ ಎಂಬುದು ನನಗೆ ಹೆಮ್ಮೆಯ ವಿಷಯ.

ಓದಿದವರು, ಓದಿದೆನೆಂದು ಹೆಬ್ಬೆಟ್ಟು ತೋರಿಸಿದವರು, ಓದಿ ಚೆನ್ನಾಗಿದೆ ಎಂದು ಹೇಳಿದವರು, ಓದಿ ತಮ್ಮ ನೆನಪುಗಳನ್ನು ಹಂಚಿಕೊಂಡವರು, ಫೋನ್ ಮೂಲಕ ಹಾಗೂ ಸಿಕ್ಕಾಗ ವೈಯುಕ್ತಿಕವಾಗಿ ಲೇಖನದ ಬಗ್ಗೆ ಒಳ್ಳೆಯ ಮಾತಾಡಿದ... ಎಲ್ಲರಿಗೂ ನಾನು ಋಣಿ.... ಇವರೆಲ್ಲ ನನಗೆ ಪ್ರೇರಣೆ ನೀಡಿದವರು.

ನನ್ನ ಲೇಖನದ ಅಂದವನ್ನು ಹೆಚ್ಚಿಸಲು, ಅರ್ಥಪೂರ್ಣವಾಗಿಸಲು ಸೂಕ್ತ ಚಿತ್ರಗಳನ್ನು ಸೇರಿಸಿ ಎಂದು ಹೇಳಿದ ಸುಬ್ಬಯ್ಯ ಶೆಟ್ಟರು, ನಿಮ್ಮ ಹೆಸರು ಸೇರಿಸಿ.. ಆಗ ಬರೆದವರು ಯಾರು ಎಂದು ಗುರುತಿಸಬಹುದು ಎಂದು ಹೇಳಿದ ಗುಂಡೂರಾಯರು, ತಮ್ಮ ವಿಮರ್ಶೆಯ ಮೂಲಕವೇ ಸೂಚನೆಯಿತ್ತ, ಚಿಂತಾಮಣಿಯ ಗುರುಪ್ರಸನ್ನ ಅವರು,  ವಿಷಯಗಳನ್ನು... ಅದರಲ್ಲೂ ಚಾರಣದ ಬಗ್ಗೆ ಬರೆಯಲು ಸೂಚಿಸಿದ ನಾಗೇಂದ್ರ ಬಾಬು ಇವರೆಲ್ಲರಿಗೂ ನನ್ನ ವಿಶೇಷ ವಂದನೆಗಳು.   

ಕೆಲ ಅಪರಿಚಿತರು ಫೋನ್ ಮಾಡಿ ಮೆಚ್ಚುಗೆ ಸೂಚಿಸಿದಾಗ ನಾನು ಬಲೂನಿನಂತೆ ಉಬ್ಬಿದ್ದು ಸತ್ಯ. 

ಕೆಲವರು ಬ್ಲಾಗ್ ನಲ್ಲಿ ತಮ್ಮ ಅಭಿಪ್ರಾಯ ಬರೆಯುವಾಗ ಹೆಸರು ಬರೆಯದ ಕಾರಣ ಅವರಿಗೆ ವೈಯಕ್ತಿಕವಾಗಿ ಧನ್ಯವಾದ ಹೇಳಲು ಆಗಿಲ್ಲ... ಅವರಲ್ಲಿ ನನ್ನದೊಂದು ವಿನಂತಿ... ದಯಮಾಡಿ ನಿಮ್ಮ ಹೆಸರನ್ನು ಬರೆಯಿರಿ.. ಅದು ನನಗೆ ತುಂಬಾ ಖುಷಿಕೊಡುತ್ತದೆ.

19ಕ್ಕೂ ಮಿಕ್ಕಿ ವಿದೇಶಗಳಲ್ಲಿರುವ ಜನರು ನನ್ನ ಲೇಖನವನ್ನು ಓದಿದ್ದಾರೆ ಎನ್ನುವುದು ಒಂದು ಹೆಮ್ಮೆಯ ವಿಷಯ

ಇನ್ನು ಲೇಖನವನ್ನು ಬೇರೊಬ್ಬರೊಂದಿಗೆ ಹಂಚಿಕೊಂಡವರನ್ನು ಹೇಗೆ ಮರೆಯಲಿ.. ಅವರಿಗೂ ನನ್ನ ನಮನಗಳು.


ಆಯ್ದ ಲೇಖನಗಳನ್ನು ಸೇರಿಸಿ ಒಂದು ಪುಸ್ತಕ ಪ್ರಕಟಿಸು ಎಂದು ಸಲಹೆ ಕೊಟ್ಟವರು ಕೆಲ ಸ್ನೇಹಿತರು... ಯಾಕೋ ಅದು ನನ್ನ ಮನಸ್ಸಿಗೆ ಒಪ್ಪಿಗೆಯಾಗದ್ದು. ನನ್ನ ಪುಸ್ತಕ  ಕೊಂಡು ಓದುವ ಮಟ್ಟಕ್ಕೆ ಬೆಳೆದ ಲೇಖಕ ನಾನಲ್ಲ ಎಂಬುದು ಒಂದು ಮುಖವಾದರೆ... ಪುಸ್ತಕ  ಪ್ರಕಟಿಸಿ ಅದನ್ನು ವಿತರಿಸಲು (ಮಾರಲು?) ಕಷ್ಟ ಪಟ್ಟವರನ್ನು ನೋಡಿದ್ದು ಇನ್ನೊಂದು  ಮುಖ.

ಕೊನೆಯದಾಗಿ.. ನನ್ನೆಲ್ಲಾ ಲೇಖನಗಳಿಗೆ ವಿಷಯವಾಗಿ... ಸ್ಪೂರ್ತಿದಾಯಕವಾಗಿ.. ನನ್ನ ನೆನಪುಗಳನ್ನು ಕೆದಕಿದ, ಜಾಗೃತಗೊಳಿಸಿದ .. ನಮ್ಮೊಂದಿಗಿರುವ ಎಲ್ಲ ವ್ಯಕ್ತಿಗಳಿಗೆ ಹಾಗೂ ನಮ್ಮನ್ನಗಲಿರುವ ಆ ಚೇತನಗಳಿಗೆ ನನ್ನ 100 ನಮಸ್ಕಾರಗಳು. ಅವರುಗಳ ನೆನಪು ನನ್ನ  ತಲೆಗೆ ಹೊಕ್ಕಿಲ್ಲದಿದ್ದರೆ.. ಈ ಲೇಖನಗಳು ಮೂಡುತ್ತಲೇ ಇರಲಿಲ್ಲ.

ನೂರಾಯಿತು... ನೂರೊಂದರ ಕಡೆಗೆ ನನ್ನ ನಡೆ.. ತಯಾರು ಮಾಡಬೇಕು.. ಅಲ್ಲಿಯತನಕ ನಿಮಗೆಲ್ಲಾ ನಮಸ್ಕಾರ.


D C Ranganatha Rao

9741128413



    

Comments

  1. ನಾಗೇಂದ್ರ ಬಾಬು28 September 2024 at 10:35

    ವಾಹ್...ಶತಕದ ಸಾಧನೆಗೆ ಅಭಿನಂದನೆಗಳು
    ನೂರು ವಿಷಯಗಳ ನೂರನೇ ಲೇಖನದಲ್ಲಿ
    ನೂರರ ವಿಶ್ಲೇಷಣೆ ಸರಳವಾಗಿ ಮೂಡಿ ಬಂದಿದೆ.... ಎಲ್ಲಾ ಲೇಖನಗಳಲ್ಲಿ ಯಾವುದೇ
    ಉತ್ಪ್ರೇಕ್ಷೆ ಅಥವ ಕಾಲ್ಪನಿಕ ಕಟ್ಟು ಕಥೆ ಇಲ್ಲದೇ
    ನಿಮ್ಮ ಸ್ವಂತ ಅನುಭವ ಹಾಗೂ ಅಪಾರ ನೆನಪಿನ ಶಕ್ತಿಯಿಂದ ಸುಂದರವಾಗಿ ಬರೆದಿದ್ದೀರಿ.....ನಿಮ್ಮ ತಂದೆಯವರಂತೆ ನೀವು
    ಕೂಡ ನೂರು ವಸಂತಕಾಲ ಸಂತಸ ಬರಿತ ಜೀವನ ನಡೆಸಿ ...ಇಂತಹ ಇನ್ನೂ ನೂರಾರು
    ಲೇಖನಗಳನ್ನು ಬರೆಯುತಿರಿ.....
    ಧನ್ಯವಾದಗಳು
    ಬಾಬು

    ReplyDelete
  2. ನಮಸ್ತೆ ಸರ್. ನೂರರ ಲೇಖನ .ನೂರು ನೂರು ಗಳ ನೆನಪಿನ ಬುತ್ತಿ
    ನೀವು ಕೂಡ ನೂರರ ಗುಣಿತದಲ್ಲಿ ಲೇಖನ ಬರೆಯುತ್ತಿರಿ,ಹಾಗೆ ದೇವರ ದಯೆಯಿಂದ ಆರೋಗ್ಯ ವಂತರಾಗಿ ನೂರನ್ನು ದಾಟಿ ಜೀವನ ನಡೆಸಿ

    ReplyDelete
  3. 👌👌👌👌🏽100 ಲೇಖನಗಳು ..ನಿಮ್ಮ ಅನುಭವಗಳೇ. ಅದ್ಬುತ..ನಿಮ್ಮ ನೆನಪಿನ ಶಕ್ತಿಗಳೇ ವಿಸ್ಮಯ

    ReplyDelete
  4. ಸುಂದರವಾಗಿ ಇದೆ, ಸುಲಲಿತವಾಗಿ ಓದಿಸಿತು. 100 ಈ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ರಂಗ.

    ReplyDelete
  5. Sundaravagi moodi bandide

    ReplyDelete
  6. Very nicely written! ....Shashidhar

    ReplyDelete
  7. ನೂರೊಂದು ನೆನಪಿನ ಬುತ್ತಿಯನ್ನು ಸವಿಯಲು ತಯಾರಾಗಿದ್ದೇವೆ, ನೂರರ ಲೇಖನ ತುಂಬ ಚೆನ್ನಾಗಿ ಬರೆದಿದ್ದೀರಾ, ಇನ್ನೂ ಹೆಚ್ಚು ಲೇಖನಗಳು ಮೂಡಿಬರಲಿ, ಪುಸ್ತಕ ಮುದ್ರಣವಾಗಲೆಂದು ಹಾರೈಸುತ್ತೇನೆ, ಅಭಿನಂದನೆಗಳು
    ನಮಸ್ಕಾರ
    ರತ್ನಪ್ರಭಾ

    ReplyDelete
  8. ಪ್ರಥವಮವಾಗಿ ಶತಕವೀರರಿಗೆ ಅಭಿನಂದನೆಗಳು. ಈ ರೀತಿ ನೂರು ಮುಮ್ಮಡಿಯಾಗಲಿ.

    ನೂರು ಎಂಬ ಪದದ ಬಗ್ಗೆ ವಿವಿಧ ರೀತಿಯಲ್ಲಿ ತಮ್ಮ ಅನುಭವ ಹಂಚಿಕೊಂಡಿರುವುದು ಶ್ಲಾಘನೀಯ ಹಾಗೂ ಸುಂದರ ಪ್ರಯತ್ನ. ನಾವು ನೋಡೇ ಇರದಂತಹ ನಾಣ್ಯಗಳನ್ನು
    ಪರಿಚಯಿಸಿದ್ಧೀರಿ. ಧನ್ಯವಾದಗಳು.
    ಆಡು ಮುಟ್ಟದ ಸೊಪ್ಪಿಲ್ಲ,ಹಾಗೆಯೇ ತಾವು ಹೊಂದಿರದ ಅನುಭವವಿಲ್ಲವೆನ್ನುತ್ತದೆ ನಿಮ್ಮ ಬ್ಯಾಗು(ಬ್ಲಾಗು)ಗಳು.

    ಅನುಭವ ಎಲ್ಲರಿಗೂ ಆಗಿರುತ್ತದೆ. ಆದರೆ ಅದನ್ನು ಸುಂದರವಾದ ಪದಗಳಿಂದ ಜೋಡಿಸಿ ಮುತ್ತಿನಹಾರವನ್ನಾಗಿಸುವ ಕಲೆ ಕೆಲವರಿಗಷ್ಟೇ ಇರುತ್ತದೆ. ಅಂತಹವರಲ್ಲಿ ನೀವೂ ಸಹಾ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ ಎನ್ನುವುದು ನಿಮ್ಮ ಲೇಖನಗಳನ್ನು ಓದಿದವರ ಅನಿಸಿಕೆ ಎಂದು ನನ್ನ ಭಾವನೆ.

    ಕಡೆಯದಾಗಿ:

    ಹಳೆಗನ್ನಡದ ಸೋಮೇಶ್ವರ ಶತಕದಂತೆ ರಂಗಣ್ಣನವರ ಶತಕವೆಂದು ನಿಮ್ಮ ಲೇಖನಗಳು ಪ್ರಸಿದ್ಧಿಯಾಗಲೆಂದು ಹಾರೈಕೆ.

    ವಂದನೆಗಳೊಡನೆ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ