ಬಾಲ್ಯದ ಪ್ರಸಂಗಗಳು - ಇನ್ನಷ್ಟು.

 


ಹೈಸ್ಕೂಲ್ ಹಂತದಲ್ಲಿ ನಾನು ಟಿ ಆರ್ ಶ್ರೀನಿವಾಸರಾವ್ ಆಪ್ತರು. ಅವನದು ಎಲ್ಲಕ್ಕೂ ಎಡಗೈ ಬಳಕೆ ( ಲೊಡ್ಡೇ ಎಂದು ಕರೆಯುತ್ತಿದ್ದದ್ದು ಉಂಟು) ಒಟ್ಟಿಗೆ ಸ್ಕೂಲಿಗೆ ಹೋಗಿ ಬರುವುದು. ಒಂದೇ ಬೆಂಚಿನಲ್ಲಿ ಕೂಡುವುದು... ಹೀಗೆ. ಪ್ರತಿದಿನ ದಾರಿಯಲ್ಲಿರುವ ಅವರ ಮನೆಗೆ ಹೋಗಿ ಅಲ್ಲಿಂದ ಸ್ಕೂಲಿಗೆ ಹೋಗುವುದು ಒಂದು ಅಭ್ಯಾಸ. ಅವರ ಮನೆಗೆ ಹೋದಾಗಲೆಲ್ಲ... ಅವರ ಒಬ್ಬ ಅಕ್ಕನನ್ನು ನೋಡುತ್ತಿದ್ದೆ... ಮಾತನಾಡುತ್ತಿರಲಿಲ್ಲ... ಮುಖ ನೋಡಿ ನಗುವುದು ಮಾತ್ರ. ಕೆಲವು ಸಲ ಕೈಯಲ್ಲಿ ಒಂದು ಹಾರ್ಲಿಕ್ಸ್ ಬಾಟಲ್ಲು... ಅದರಲ್ಲಿ ಮಜ್ಜಿಗೆ.. ಅದನ್ನು ಅಲ್ಲಾಡಿಸುತ್ತಾ ಕುಳಿತಿರುವುದನ್ನು ಗಮನಿಸಿದ್ದೆ. ಒಂದು ದಿನ ತಿಳಿದದ್ದು ಅವರು ಬುದ್ಧಿಮಾಂದ್ಯರೆಂದು, ( ಆಗ ಅದರ ಅರಿವೇ ಇರಲಿಲ್ಲ). ಹಾಗಾಗಿ ಮಜ್ಜಿಗೆಯಿಂದ ಬೆಣ್ಣೆ ತೆಗೆಯಲು ಅವರ ಕೈಗೆ ಬಾಟಲ್ ಕೊಟ್ಟರೆ ಸ್ವಲ್ಪ ಸಮಯದ ನಂತರ ಬೆಣ್ಣೆ ಕಟ್ಟಿರುತ್ತಿತ್ತು.... ಅವರನ್ನು ನೋಡಿದಾಗಲೆಲ್ಲ  ನನಗೆ ಒಂದು ಹೇಳಲಾಗದ ಭಾವ.... ಸಧ್ಯ ನನ್ನಕ್ಕ ಹಾಗಿಲ್ಲ ಅಂದುಕೊಂಡದ್ದು ಉಂಟು. ಟಿ.ಆರ್ ಶ್ರೀನಿವಾಸ್ ರಾವ್   ನನ್ನು  ಕೊನೆಯ ಬಾರಿ ಭೇಟಿ ಮಾಡಿದ್ದು 72  - 73 ರಲ್ಲಿ... ಆಗ ಅವನು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ನಂತರ ನನ್ನ ಹೊಸ ಫ್ಯಾಕ್ಟರಿಯ ಸಂಭ್ರಮ (ಜಂಜಾಟ ಎಂತಲೂ ಹೇಳಬಹುದು) ದಲ್ಲಿ ನಾನೇ ಒಂದು ಸ್ವಯಂ ನಿರ್ಮಿತ ದ್ವೀಪದಲ್ಲಿದ್ದೆ. ಈಗ ಎರಡು ಮೂರು ವರ್ಷದಿಂದ ಅವನನ್ನು ಹುಡುಕಲು ಪ್ರಯತ್ನ ಮಾಡುತ್ತಲೇ ಇದ್ದೆ, ಯಾವ ಪ್ರಯತ್ನವೂ ಫಲಿಸಿರಲಿಲ್ಲ. ಎರಡು ಮೂರು ದಿನಗಳ ಹಿಂದೆ... ಸಿಂಡಿಕೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡಿ ರಿಟೈರಾದ ನನ್ನ ಅಕ್ಕನ ಅಳಿಯ ಎಂ ಆರ್ ಪ್ರಕಾಶ್ ಅವರ ಮೂಲಕ ತಿಳಿಯಲು ಪ್ರಯತ್ನಪಟ್ಟೆ... ಅವರ ಪ್ರಯತ್ನದಿಂದ ತಿಳಿದ ವಿಷಯ ಅವನು ನಮ್ಮಿಂದ ದೂರವಾಗಿ ಎರಡು ದಶಕಗಳೇ ಕಳೆದು ಹೋಗಿರಬಹುದು  ಎಂದು... ಯಾಕೋ ಮನಸ್ಸಿಗೆ ತುಂಬ ನೋವಾಯಿತು... ಒಂದು ದಿನವೆಲ್ಲ ಅವನ ನೆನಪು ಕಾಡಿತ್ತು. ಇದೇ ಜೀವನ ಅಲ್ಲವೇ? ಈ ನೆನಪಿನ ಮಾಲೆಯ ಮೂಲಕ ಅವನಿಗೆ ಶ್ರದ್ಧಾಂಜಲಿ.

ನನ್ನೂರು ದೊಡ್ಡಜಾಲದಲ್ಲಿ ಇನ್ನೂ ಕರೆಂಟ್ ಇಲ್ಲದಿದ್ದ ಕಾಲ... ಆದರೆ ಒಂದೆರಡು ತೋಟದಲ್ಲಿ ಪಂಪ್ ಸೆಟ್ಟುಗಳು ಬಾವಿಯಲ್ಲಿ ನೀರೆತ್ತಲು ಉಪಯೋಗಿಸುತ್ತಿದ್ದದ್ದು. ಅಂತಹ ಒಂದು ಮನೆ ಚಿಕ್ಕೀರಣ್ಣೋರ ರಾಮಪ್ಪನದು. ಕರೆಂಟ್ ಬಿಲ್ ಕಟ್ಟುವುದು ಮನಿಯಾರ್ಡರ್ ಕಳಿಸುವ ಮೂಲಕ. ಹತ್ತಿರದ ಪೋಸ್ಟ್ ಆಫೀಸ್ ಇದ್ದದ್ದು ವಿದ್ಯಾನಗರದಲ್ಲಿ.. ನಾನು ಹೋಗುತ್ತಿದ್ದ ಶಾಲೆಯ ಜಾಗದಲ್ಲೇ. ಅದೇನು ವಿಶ್ವಾಸವೋ 5/6 ಕ್ಲಾಸಿನಲ್ಲಿ ಓದುತ್ತಿದ್ದ ನನಗೆ ಆ ಕೆಲಸವನ್ನು ಕೊಟ್ಟು ಆರಾಮವಾಗಿರುತ್ತಿದ್ದ ಮನುಷ್ಯ ರಾಮಪ್ಪ. ಆಗ ಬಿಲ್ಲು ಮೂರು ರೂಪಾಯಿ ಜೊತೆಗೆ ಒಂದಷ್ಟು ಪೈಸೆಗಳು. ಇಂಥ ಒಂದು ಸಮಯದಲ್ಲಿ ಒಂದೊಂದು ರೂಪಾಯಿನ ಮೂರು ನೋಟುಗಳು ಜೊತೆಗೆ ಮನಿ ಆರ್ಡರ್ ಚಾರ್ಜ್ ಸೇರಿಸಿ ಸಾಕಾಗು ವಷ್ಟು ಚಿಲ್ಲರೆ ಹಣ, ಎಲೆಕ್ಟ್ರಿಕ್ ಬಿಲ್ಲು ನನ್ನ ಕೈಗೆ ಬಂತು... ಹುಷಾರಪ್ಪ ಎನ್ನುವ ಒಂದು ಸಲಹೆಯೊಂದಿಗೆ. ಇದು ಯಾವಾಗಲೂ ಇರುತ್ತಿದ್ದದ್ದೆ. ಹಣ ಬಿಲ್ಲು ನನ್ನ ಚಡ್ಡಿ ಜೇಬಿಗೆ ಸೇರಿತು... ಶಾಲೆ ಸೇರಿ ಆಯ್ತು... ಪೋಸ್ಟ್ ಆಫೀಸಿಗೆ ಹೋಗಿ ಮನಿಯಾರ್ಡರ್ ಫಾರ್ಮ್ ತೆಗೆದುಕೊಂಡು ತುಂಬಲು (  ಅದಾಗಲೇ ತುಂಬಲು ಪೋಸ್ಟ್ ಮಾಸ್ಟರ್ ಅವರಿಂದ ಹೇಳಿಸಿಕೊಂಡು ಕಲಿತಿದ್ದೆ )  ಬಿಲ್ಲಿಗಾಗಿ ಜೇಬಿಗೆ ಕೈ ಹಾಕಿದಾಗ ಕೈಗೆ ಸಿಕ್ಕಿದ್ದು ಒಂದು ರೂಪಾಯಿಯ ಒಂದು ನೋಟು ಮತ್ತು ಚಿಲ್ಲರೆ ಮಾತ್ರ... ಬಿಲ್ಲೂ ಇಲ್ಲ ಜೊತೆಗೆ ಎರಡು ನೋಟೂ ಇಲ್ಲ. ಎಷ್ಟು ಹುಡುಕಿದರೂ ಸಿಗದು... ಭಯ, ದುಃಖ.. ಜೊತೆಗೆ ಅಳು... ಯಾರಿಗೂ ನನ್ನ ದಡ್ಡತನ ಹೇಳಿಕೊಳ್ಳುವಂತಿಲ್ಲ... ಒಳಗೆ ಅದುಮಿ ಸಹಿಸಲಾಗದು. ಶಾಲೆ ಮುಗಿಸಿ ಮನೆಗೆ ಬಂದು ಏನೂ ತೋಚದೆ ಅಮ್ಮನಿಗೆ ಹೇಳಿದೆ... ಶಾಮಣ್ಣನಿಗೆ (ನನ್ನಪ್ಪ) ಹೇಳಕೂಡದೆಂದು  ವಿನಂತಿಸಿಕೊಂಡು... ಅಮ್ಮ ಬೈದಳು.. ದಾರಿಯಲ್ಲಿ  ಎಲ್ಲಿ ಹೋಗಿದ್ದೆ ಎಂದು ಕೇಳಿದಳು... ನನಗೆ ನೆನಪಾಯಿತು ನಾವು ಕಾರೆ ಹಣ್ಣು ಕೀಳಲು ಕೆರೆಯ ಏರಿಯ ಬದಿಯಲ್ಲಿ ಓಡಾಡಿದ್ದು... ಇದನ್ನು ಅಮ್ಮನಿಗೆ ಹೇಳುವಂತಿಲ್ಲ... ನಮ್ಮೆಲ್ಲ ಸ್ನೇಹಿತರ ಮಧ್ಯೆ ಆಗಿದ್ದ ಒಂದು ಒಡಂಬಡಿಕೆ...

ಅಮ್ಮ ನಿಂದ ಬೈಗುಳ ಮುಂದುವರಿದಿತ್ತು... ಎರಡು ರೂಪಾಯಿ ಹೊಂದಿಸುವುದು ಎಲ್ಲಿಂದ ಎನ್ನುವ ಮಾತು ಬರುತ್ತಿತ್ತು... ಅದೇ ಹೊತ್ತಿಗೆ ರಾಮಪ್ಪನ ಹೆಂಡತಿ ನಮ್ಮ ಮನೆಗೆ ಬಂದಳು..." ಯಾಕಮ್ನೋರೆ ರಂಗಣ್ಣನ್ನ ಅಷ್ಟು ಬೈತೀರಾ" ಅನ್ನುವ ಪ್ರಶ್ನೆಯೊಂದಿಗೆ.... ಅಮ್ಮನಿಗೆ ಸಂದಿಗ್ಧ.. ಏನೋ ಸಬೂಬು ಹೇಳಿದಳು.. ನನ್ನನ್ನು ಕೇಳಿದಾಗ ತಡೆಯಲಾರದೆ ಹಣ ಕಳೆದುಕೊಂಡ ವಿಷಯ ಹೇಳಿಯೇ ಬಿಟ್ಟೆ..." ಅಯ್ಯೋ ಹೌದಾ... ಏನಪ್ಪ ಮಾಡೋದು ಈಗ" ಎನ್ನುವ ಉದ್ಗಾರದೊಡನೆ ಸ್ವಲ್ಪ ಹೊತ್ತು ಇದ್ದು ಆಕೆ ಹೊರಟು ಹೋದರು. ರಾತ್ರಿ ಕಳೆದು ಬೆಳಗಾಯಿತು... ತಳಮಳ ಮುಂದುವರೆದಿತ್ತು... ಅಸಹಾಯಕತೆ ... ರಾಮಪ್ಪನ ಮನೆಯಿಂದ ಬುಲಾವ್ ಬಂತು... ನನಗೆ ಅವರ ಮುಂದೆ ಏನು ಹೇಳಲಿ, ಎದುರಿಸುವುದು ಹೇಗೆ ಎನ್ನುವ ಚಿಂತೆ... ಜೊತೆಗೆ ಅಳು... ಅಮ್ಮ ಹೇಳಿದ್ದು " ಹೋಗು ನಿಜ ಹೇಳು ದೇವರಿದ್ದಾನೆ".  ಒಂದು ಮಾತೂ ಬಯ್ಯದ ರಾಮಪ್ಪ ಎರಡು  ರೂಪಾಯಿಗಳನ್ನು ಕೊಟ್ಟು... ಯಾರನ್ನೋ ವಿಚಾರಿಸಿ ಹಳೆಯ ಬಿಲ್ಲನ್ನು ಕೊಟ್ಟು..."  ಹೋಗಪ್ಪ ಕಟ್ಟು ಹೋಗು" ಅಂತ ಹೇಳಿ... ನಿಧಾನವಾಗಿ ಎಲ್ಲೆಲ್ಲಿ ಹೋಗಿದ್ದೆ ಅಂತ ಬಾಯಿ ಬಿಡಿಸಿದ್ದು.. ಕಾರೆಹಣ್ಣಿನ ವಿಷಯ ಹೇಳಲೇ ಬೇಕಾಗಿ ಬಂತು... ತಕ್ಷಣ ಅವರು ಹೇಳಿದ್ದು.. ಹೋಗಿ ಆ ಜಾಗ ಎಲ್ಲ ಹುಡುಕು ಅಂತ....(ನಂತರ ತಿಳಿದದ್ದು...ರಾಮಪ್ಪನ ಈ ವರ್ತನೆಗೆ, ಆತನ ಹೆಂಡತಿ ನನ್ನ ಪರವಾಗಿ ಮಾಡಿದ್ದ ರಾಯಭಾರದ ಪರಿಣಾಮ ಎಂದು)

 ಮನೆಗೆ ಹೋಗಿ ಅಮ್ಮನಿಗೆ ಹೇಳಿ ಬೇಗ ತಯಾರಾಗಿ... ಓಡಿದೆ.. ಗಿಡಗಳ ಸಂದಿಯಲ್ಲೆಲ್ಲಾ ತಡಕಾಡಿದೆ.. ಇನ್ನೂ ಕೆಳಗೆ ಹೋಗಿ ಸುತ್ತಾಡಿದಾಗ ಸಿಕ್ಕಿದ್ದು ಬಿಲ್ಲು... ಮತ್ತಷ್ಟು ಪ್ರಯತ್ನದ ನಂತರ ಒಂದು ರೂಪಾಯಿ ನೋಟು... ಆಮೇಲಿನ ಪ್ರಯತ್ನವೆಲ್ಲ ವ್ಯರ್ಥ.   

ಮನಿ ಆರ್ಡರ್ ಮಾಡಿಯಾಯಿತು ... ಮನೆಗೆ ಬಂದು ಅಮ್ಮನಿಗೆ ಹೇಳಿ.. ತಕ್ಷಣ ಹೋಗಿ ಸಿಕ್ಕ ಒಂದು ರೂಪಾಯಿ ಮತ್ತು ಬಿಲ್ಲು ರಸೀತಿ ಎಲ್ಲವನ್ನು ವಾಪಸ್ಸು ತಲುಪಿಸಿ ಆಯ್ತು. ರೂಪಾಯಿ ಕಳೆದರೂ.. ವಾಪಸ್ಸು ತಂದುಕೊಟ್ಟ ಒಂದು ರೂಪಾಯಿಯ ಕಾರಣ ನನಗೆ "ಭೇಷ್" ಸಿಕ್ಕಿದರೂ.... ಅಪರಾಧಿ ಭಾವ ಉಳಿದಿತ್ತು.



 ವಿದ್ಯಾನಗರದ ಸ್ಕೂಲಿನಲ್ಲಿ ಓದುತ್ತಿದ್ದಾಗ... ಪ್ರತಿ ದಿನ ಪ್ರಾರ್ಥನೆಯ ನಂತರ... ಅಂದಿನ ದಿನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಓದಿ ಹೇಳುತ್ತಿದ್ದವರು.. ಸುಬ್ಬರಾವ್ ಮೇಷ್ಟ್ರು... ಒಂದು ದಿನದ ಸುದ್ದಿ... ಬೇಲೂರು ಶ್ರೀನಿವಾಸ ಅಯ್ಯಂಗಾರ್ ಎಂಬುವವರ ಕೊಲೆಯ ಪ್ರಕರಣ. ಬೆಂಗಳೂರಿನ ಗಾಂಧಿನಗರದಲ್ಲಿ ಅವರ ರಂಗ ವಿಲಾಸ ಮನೆಯಲ್ಲಿ ನಡೆದದ್ದು.( ರಂಗ ವಿಲಾಸ ಕೊಲೆಯ ಮೊಕದ್ದಮೆ ಎಂದು ಪ್ರಖ್ಯಾತವಾಗಿತ್ತು ... ಇದು ತಿಳಿದಿದ್ದು ನಂತರದ ದಿನಗಳಲ್ಲಿ.. ಅದೇ ಪೇಪರ್ ನಾನೇ ಓದುವ  ಮೂಲಕ). ಅಂದು ಅದೇನೂ ನನ್ನ ಮೇಲೆ ಯಾವ ಪರಿಣಾಮವನ್ನು ಬೀರಿರಲಿಲ್ಲ. ಒಂದೆರಡು ದಿನದ ನಂತರ ಆ ವಿಷಯದ ಬಗ್ಗೆ ಹೇಳುತ್ತಾ... ಮನೆಯಲ್ಲಿನ ಒಬ್ಬರು... ಅಂಗಲಾಚಿ ಬೇಡಿದರೂ ಬಿಡದೆ ಮಚ್ಚಿನಿಂದ ಕೊಚ್ಚಿ ಸಾಯಿಸಿದ ಅವರ ಕ್ರೂರತನ... ಹಾಗೂ ಕೊಲೆಗಾರರು ತಲೆಮರೆಸಿಕೊಂಡಿರುವ... ಪೊಲೀಸರು ಅವರಿಗಾಗಿ ಹುಡುಕುತ್ತಿರುವ ಸಂಗತಿ ಕೇಳಿ ಭಯವಾಯಿತು. ಅಂಗಲಾಚಿ ಬೇಡುವ ಹಾಗೂ ಅವರನ್ನು ಹೊಡೆಯುವ ದೃಶ್ಯ ಕಣ್ಣ ಮುಂದೆ ಬರುತ್ತಿತ್ತು... ಅದು ಮತ್ತಷ್ಟು ಭಯಕ್ಕೆ ಕಾರಣವಾಗಿತ್ತು. ಸಾಕಷ್ಟು ದಿನ ರಾತ್ರಿಯಾದ ನಂತರ ನಮ್ಮ ಮನೆಯಲ್ಲೇ ಒಬ್ಬನೇ ಓಡಾಡಲು ಭಯಪಡುತ್ತಿದ್ದೆ. ಅದರಲ್ಲೂ ಅಡುಗೆ ಮನೆಯಲ್ಲಿ ಇದ್ದ ರಾಗಿಯ ಕಣಜದ ಹಿಂದೆ ಕೊಲೆಗಡುಕರು ಅಡಗಿದ್ದು ನನ್ನನ್ನು ಕೊಚ್ಚಿದರೆ ಎಂಬ ಭಯ... ಕಣಜದ ಪಕ್ಕ ಹೋಗಲು  ಧೈರ್ಯವೇ ಬರುತ್ತಿರಲಿಲ್ಲ.  ಊರಿನಲ್ಲಿ ಯಾರಾದರೂ ಜಗಳವಾಡಿದರೆ... ಕೊಲೆಯ ಚಿತ್ರಣವೇ ನನ್ನ ಕಣ್ಣ ಮುಂದೆ ಬಂದು... ಭಯದಿಂದ ಅಲ್ಲಿರಲು ಆಗದೆ ಮನೆಗೆ ಓಡುತ್ತಿದ್ದೆ.

ಬೆಂಗಳೂರಿನ ಹೈಸ್ಕೂಲ್ ಜೀವನದಲ್ಲಿ ಮೊದಲು ಪರಿಚಯವಾದ ವ್ಯಕ್ತಿ ಎಂ ಕೆ ಸತ್ಯನಾರಾಯಣ. ಆ ವಯಸ್ಸಿನಲ್ಲೇ ಅವನು ತಿರುಪತಿ ವೆಂಕಟೇಶ್ವರನ ಚಿತ್ರವನ್ನು ತುಂಬಾ ಚೆನ್ನಾಗಿ ಬಿಡಿಸುತ್ತಿದ್ದ. ಹಳ್ಳಿಯಿಂದ ಬಂದ ನನಗೆ ಆತನ ಸ್ನೇಹಮಯ ಒಡನಾಟ ತುಂಬಾ ಪ್ರಿಯವಾಗಿತ್ತು. ಕ್ರಿಕೆಟ್ ಎಂದರೆ ಏನೇನೂ ತಿಳಿಯದ ನನಗೆ... ಸತ್ಯನಾರಾಯಣನ ಕ್ರಿಕೆಟ್ ಜ್ಞಾನದ ಬಗ್ಗೆ... ಸೋಜಿಗ. ಕ್ರಿಕೆಟ್ ಆಟದ ಬಗ್ಗೆ.. ಓವರ್, ರನ್, ಸ್ಕೋರ್ ಹೇಳುವುದು,  ವಿಕೆಟ್, ಎಲ್ ಬಿ ಡಬ್ಲ್ಯೂ, ಸಿ ಬಿ ಡಬ್ಲ್ಯೂ, ವಿಕೆಟ್ ಕೀಪರ್, ಸ್ಲಿಪ್, ನೋಬಾಲ್, ಹೀಗೆ ಸಾಕಷ್ಟು ವಿಷಯಗಳನ್ನು ಹೇಳಿದರೂ ನನಗೆ ಅರ್ಥವಾಗಿದ್ದು ಅಷ್ಟಕಷ್ಟೇ. ಎಲ್ಲವೂ ಅಯೋಮಯ... ಹೇಳಿದ್ದಕ್ಕೆಲ್ಲ ಹೂಗುಟ್ಟುವುದಷ್ಟೇ ನನ್ನ ಕೆಲಸ. ಒಂದು ಹಂತದಲ್ಲಿ  ಎಂಟು ವಿಕೆಟ್ ಬಿತ್ತು ಎಂದು ಹೇಳಿದಾಗ.. ನನಗಾದ ಗೊಂದಲ ಹೇಳತೀರದು. ನನಗೆ ಅರ್ಥವಾಗಿದ್ದಿದ್ದು ಈ ಕಡೆ ಮೂರು ಹಾಗೂ ಆ ಕಡೆ ಮೂರು ನೆಟ್ಟ ವಿಕೆಟ್ಗಳು... ಆರೇ ವಿಕೆಟ್ ಇರುವಾಗ ಎಂಟು ವಿಕೆಟ್ ಬೀಳಲು ಹೇಗೆ ಸಾಧ್ಯ?  ಈ ಪ್ರಶ್ನೆಯನ್ನು ಸತ್ಯನಾರಾಯಣನ ಮುಂದಿಟ್ಟಾಗ ಅವನ ಓತಪ್ರೋತ ವಿವರಣೆಯು ನನ್ನ ಗೊಂದಲಕ್ಕೆ ಉತ್ತರ ಕೊಡಲಿಲ್ಲ... ಬಹಳ ದಿನಗಳ ಕಾಲ ಆ ಗೊಂದಲ ಹಾಗೇ ಇತ್ತು. ವರ್ಷದ ನಂತರ ಕ್ರಿಕೆಟ್ ಪ್ರಿಯ ಟಿಆರ್ ಶ್ರೀನಿವಾಸರಾವ್ ಹೇಳಿದ ಔಟಾದ ಆಟಗಾರರನ್ನು ವಿಕೆಟ್ಟೆಂದು ಪರಿಗಣಿಸುವ ವಿಷಯ ತಿಳಿಯಿತು... ಅಂತಹ ಮಂದಮತಿ ನಾನು.


ನಮ್ಮ ಊರಿನಲ್ಲಿ ಬಟ್ಟೆ ಹೊಲಿಯಲು ಇದ್ದವರು ಮಿಷಿನ್ ಐನೋರು ಎಂದು ಪ್ರಸಿದ್ಧವಾದ ಅಚ್ಚಪ್ಪನವರು... ಅವರ ನಿಜವಾದ ಹೆಸರು CV ಲಕ್ಷ್ಮೀನಾರಾಯಣರಾವ್ ಎಂದು... ಇವರು ನನ್ನ ಆತ್ಮೀಯ ಸ್ನೇಹಿತರಾದ ಮುಕುಂದ ಮತ್ತು ಮೂರ್ತಿಯ ಅಪ್ಪ.

ಚಾಗಲೇಟಿ ಇಂದ ಒಂದು ಹೊಲಿಗೆ ಯಂತ್ರದೊಡನೆ ಬಂದ ಅಚ್ಚಪ್ಪನವರು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಎಂದು ನಾನು ಕೇಳಿ ತಿಳಿದದ್ದು. ಬಟ್ಟೆ ಅಂಗಡಿ, ದಿನಸಿ ಸಾಮಾನುಗಳು, ಬೀಡಿ, ಸಿಗರೇಟ್ ಎಲ್ಲವನ್ನು ಮಾರುತ್ತಿದ್ದದ್ದು. ಅವರು ಒಂದು ಕಬ್ಬಿಣದ ತಟ್ಟೆಗೆ ಉದ್ದ ಹಿಡಿ ಮಾಡಿಸಿಕೊಂಡಿದ್ದು.. ಅಂಗಡಿಯೊಳಗೆ ಬರಲು ನಿಷಿದ್ಧ ಇದ್ದ ಕೆಲ ಜಾತಿಯ ಜನಗಳಿಗೆ ಅದರ ಮೂಲಕ ದೂರದಿಂದ ಸಾಮಾನುಗಳನ್ನು ಹಾಕುತ್ತಿದ್ದ ಚಿತ್ರ ನನ್ನ ಕಣ್ಮುಂದಿದೆ. ಹಾಗೆಯೇ ಮಕ್ಕಳಿಗೆ ಬಟ್ಟೆಯನ್ನು ಹೊಲಿಯಲು ಅವರು ತೆಗೆದುಕೊಳ್ಳುತ್ತಿದ್ದ ಅಳತೆ. ನಾನು ಅಂಗಿಯನ್ನು ಮೇಲೆತ್ತಿಕೊಂಡು ನಿಂತರೆ (ಹೊಟ್ಟೆ ಬಿಟ್ಟುಕೊಂಡು) ಅವರು ಚಡ್ಡಿ ಅಳತೆ ತೊಗೊಳೋರು. ಸಾಮಾನ್ಯವಾಗಿ ಬಂದ ಹಿರಿಯರೆಲ್ಲ ಹೇಳುತ್ತಿದ್ದದ್ದು... ಎಲ್ಲ ಬಟ್ಟೆಯನ್ನು ಉಪಯೋಗಿಸಿ ಆದಷ್ಟು ದೊಡ್ಡದಾಗಿ ಚೆಡ್ಡಿಯನ್ನು ಹೊಲಿದರೆ ಬಹಳ ದಿವಸ ಉಪಯೋಗ ಬರುತ್ತದೆ ಎಂದು... ಈಗಿನ ಮಕ್ಕಳ ಬಟ್ಟೆಯನ್ನು ಹಾಕುವ ಚಿಂತನೆಗೂ ನಮ್ಮ ಕಾಲಕ್ಕೂ ಅಜಗಜಾಂತರ ವ್ಯತ್ಯಾಸ... ತಂದೆ ತಾಯಿಯರ ಚಿಂತನೆಯಲ್ಲೂ ಸಹ..

ಬೆಂಗಳೂರಿನ ಅರಸೋಜಿ ರಾವ್ ಛತ್ರಕ್ಕೆ ಮದುವೆಗೆ ಬಂದಾಗ.. ಜಾರೋ ಬಂಡೆ ಆಡಿ ಆಡಿ..  ಚಡ್ಡಿಯನ್ನು ಹರಿದುಕೊಂಡು ನಮ್ಮಪ್ಪನಿಂದ ಒದೆ ತಿಂದದ್ದು ಚೆನ್ನಾಗಿ ನೆನಪಿದೆ.

 



ಆಗ ನಾವು ಗವಿಪುರದಲ್ಲಿ ಇದ್ದದ್ದು. ಗಂಗಾಧರೇಶ್ವರ ದೇವಸ್ಥಾನ ನಮಗೆ ತುಂಬಾ ಹತ್ತಿರ. ಅದರ ಅರ್ಚಕರು ನಮ್ಮ ಹಳ್ಳಿಯ ಅರ್ಚಕರ ಅಣ್ಣ ಆದಕಾರಣ... ಹಾಗೂ ನಮ್ಮ ಊರಿನ ವೀರಭದ್ರ ದೇವಸ್ಥಾನದ ಪುನಃ ಪ್ರತಿಷ್ಠಾಪನ ಕಾರ್ಯಕ್ಕೆ ಬಂದಿದ್ದರಿಂದ ನಮಗೆ ತುಂಬಾ ಹತ್ತಿರ. ನಾನು ಆ ಕಾಲದಲ್ಲಿ ದೇವರಿಗೆ ಗರ್ಭಗುಡಿಯಲ್ಲೇ ಪೂಜೆ ಮಾಡಿದ್ದುಂಟು. ಹಾಗಾಗಿ ದೇವಸ್ಥಾನದ ವಿಷಯವು ಒಂದಷ್ಟು ಗೊತ್ತು. ಒಂದಷ್ಟು ಮಕ್ಕಳು ಮನೆಗೆ ಬಂದಿದ್ದವು... ಅದರಲ್ಲಿ ನನ್ನ ದೊಡ್ಡಕ್ಕನ ಮಗಳು ರತ್ನ ಒಬ್ಬಳು. ಮಕ್ಕಳೆಲ್ಲ ದೇವಸ್ಥಾನಕ್ಕೆ ಹೋದೆವು.. ಅಲ್ಲಿರುವ ಕಲ್ಲಿನ ದೊಡ್ಡ ತ್ರಿಶೂಲ, ಢಮರುಗ ಹಾಗೂ ಚಕ್ರವನ್ನು ತೋರಿಸುತ್ತಾ.. ಪ್ರಳಯ ಕಾಲದಲ್ಲಿ ಢಮರುಗ ಶಬ್ದ ಮಾಡುತ್ತೆ,  ಚಕ್ರ ತಿರುಗಿ ಜನರನ್ನು ಕತ್ತರಿಸುತ್ತೆ ಹಾಗೂ ತ್ರಿಶೂಲ ಚುಚ್ಚಿ ಸಾಯಿಸುತ್ತೆ ಎಂದು ಎಲ್ಲವನ್ನೂ ತಿಳಿದವನಂತೆ ಕಥೆ ಹೇಳಿದ್ದೆ ( ಬುರುಡೆ ಬಿಟ್ಟಿದ್ದೆ ಎಂದರೂ ಸರಿಯೇ) ದೇವಸ್ಥಾನದಲ್ಲೆಲ್ಲ ಓಡಾಡಿ, ಗವಿಗಳಲ್ಲಿ ಸುತ್ತು ಬಂದು.. ಹೊರಗಿನ ಜಗಲಿಯ ಮೇಲೆ ಆಟ ಆಡುತ್ತಿದ್ದೆವು. ಮಂಗಳಾರತಿಯ ಸಮಯ... ಆಗ ಕೇಳಿಸಿದ್ದು ಘಂಟೆಗಳ ಜೊತೆಗೆ ಢಕ್ಕೆಯನ್ನು ಹೊಡೆಯುವ ಸದ್ದು (ಎಲೆಕ್ಟ್ರಿಕ್ ಚಾಲಿತ ಜಾಗಟೆ, ಗಂಟೆ, ಢಕ್ಕೆ ಇನ್ನೂ ಬಂದಿರಲಿಲ್ಲ). ಅದೇನು ಸ್ಪೂರ್ತಿಯೋ ನನಗೆ.. ಈಗ ಪ್ರಳಯ ಆಗುತ್ತೆ ಅಂತ ಕಾಣುತ್ತೆ... ಅದಕ್ಕೆ ಈ ಶಬ್ದ ಎಂದು ಹೇಳಿದೆ. ಕೆಲ ಮಕ್ಕಳಿಗೆ ಗಾಬರಿ.. ರತ್ನಂಗೆ ಮಾತ್ರ ಭಯವೋ ಭಯ.. ಜೋರಾಗಿ ಅಳಲಿಕ್ಕೆ ಶುರು ಮಾಡಿದಳು.. ಮನೆಗೆ ಹೋಗೋಣ ಎಂಬ ಹಠ... ಈಗ ನನಗೆ ಭಯ ಶುರುವಾಯಿತು... ಮನೆಯಲ್ಲಿನ ಬೈಗುಳಗಳನ್ನು ನೆನೆದು. ಗಂಗಾಧರೇಶ್ವರನ ದಯ.. ಮಂಗಳಾರತಿ ಮುಗಿದು ಎಲ್ಲ ಶಬ್ದಗಳು ನಿಂತವು... ಎಲ್ಲವೂ ಸುಖಾಂತ.


ಚಿಕ್ಕ ವಯಸ್ಸಿನ... ಯಾವ ನೋವುಗಳು ಯೋಚನೆಯು ಇಲ್ಲದ ಸಮಯ ...ಬಲು ಸುಂದರ.. ಅದರ ನೆನಪಂತೂ ಮತ್ತೆ ಮತ್ತೆ ಮೆಲಕು ಹಾಕುವಂತಹದ್ದು... ಮತ್ತಷ್ಟು ಮೆಲುಕು ಹಾಕುವ ಆಸೆಯೊಂದಿಗೆ.... ನಮಸ್ಕಾರ


D C Ranganatha Rao

9741128413

Comments

  1. What a sweet memories of childhood. Hopefully everyone will have a refreshing childhood memories. Nice article sir.

    ReplyDelete
  2. ಬಾಲ್ಯದ ಸವಿ ನೆನಪು ನಂತರ ಕಾಲೇಜಿನ ಬಿಸಿ ನೆನಪು ಕೂಡ ಹಂಚಿಕೊಳ್ಳಿ , ಚೆನ್ನಾಗಿರುತ್ತ್ತೆ

    ReplyDelete
  3. 👏👏👌ಸವಿ ಸವಿ ನೆನಪು ತುಂಬಾ ಚೆನ್ನಾಗಿದೆ

    ReplyDelete
  4. ನಾಗೇಂದ್ರ ಬಾಬು15 September 2024 at 06:57

    ನಿಮ್ಮ ಹಾಗೂ ನಮ್ಮ ಕಾಲದ ಬಾಲ್ಯಕ್ಕೂ
    ಈಗಿನ ಹೊಸ ಜನಾಂಗದ ಬಾಲ್ಯಕ್ಕೂ ಅಜ ಗಜಾ ಅಂತರ ಬದಲಾವಣೆ ಆಗಿದೆ...ವರ್ಷದೊಳಗೆ ಅಳು ಊಟ, ಕಥೆ ಎಲ್ಲದಕ್ಕೂ ಮೊಬೈಲ್ ಮೊರೆ ಹೋಗಿ ಬಾಲ್ಯದ ಸಣ್ಣ ಸಣ್ಣ ಖುಷಿ ಗಳಿಂದ ವಂಚಿತ ಆಗುತ್ತಿದ್ದಾರೆ ...ನಮ್ಮ ಬಾಲ್ಯದ ನೆನಪು ಗಳನ್ನು ಮೆಲುಕು ಹಾಕುವಂತೆ ಮಾಡಿದ ನಿಮ್ಮ ಬರಹಕ್ಕೆ ಧನ್ಯವಾದಗಳು

    ReplyDelete
  5. ಸವಿ ನೆನಪು ತುಂಬಾ ಚೆನ್ನಾಗಿದೆ

    ReplyDelete
  6. Very nice narration about child hood.keep writing sir.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ