ನೂರು - ಶತಕ - ಸಂಭ್ರಮ

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ ಹರ ಹರಾ ಶ್ರೀ ಚನ್ನ ಸೋಮೇಶ್ವರ.. ಸೋಮೇಶ್ವರ ಶತಕದ ಈ ಪದ್ಯ ನಮ್ಮ ಜೀವಿತಕಾಲದಲ್ಲೆಲ್ಲ ಅಳವಡಿಸಿಕೊಳ್ಳಬೇಕಾದ ಒಂದು ಸೂತ್ರ ಎಂದು ನನ್ನ ನಂಬಿಕೆ. ಮನುಷ್ಯನ ಜೀವಿತಕಾಲ ಅಂದಾಗ ಅದು ನೂರು ವರ್ಷ ಎನ್ನುವ ಒಂದು ಪ್ರತೀತಿ. ನೂರು ವರ್ಷಗಳನ್ನು ಕಾಣದವರೇ ಬಹಳ ಮಂದಿ.. ನೂರು ವರ್ಷಗಳನ್ನು ಪೂರೈಸಿ ತಮ್ಮ ಜೀವಿತಕಾಲದಲ್ಲಿ ಜನರ ಪ್ರೀತಿಯನ್ನು ಗಳಿಸಿದ .. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ರೂವಾರಿ ಸರ್ ಎಂ ವಿ... ವಿಶ್ವೇಶ್ವರಯ್ಯನವರು, ನಡೆದಾಡುವ ದೇವರೆಂದು ಪ್ರಸಿದ್ಧರಾದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು, ನಿಘಂಟು ತಜ್ಞ ಎಂದು ಹೆಸರಾದ ಶ್ರೀ ವೆಂಕಟಸುಬ್ಬಯ್ಯನವರು, ವೇದಪಾರಂಗತ ಪಂಡಿತ ಸುಧಾಕರ್ ಚತುರ್ವೇದಿಯವರು ತಕ್ಷಣ ನೆನಪಿಗೆ ಬಂದವರು. 108 ವರ್ಷ ಬದುಕಿದ್ದ ನಮ್ಮಪ್ಪನ ನೂರು ವರ್ಷದ "ಶಾಮಣ್ಣನ ಶತಾಬ್ದಿ ಸಂಭ್ರಮ"ದ ಆಚರಣೆ ಅತಿ ಸಂಭ್ರಮ ಯುಕ್ತವಾಗಿತ್ತು. 100 / ಶತಕ ನಮ್ಮ ಜೀವನದ ವಿವಿಧ ಘಟ್ಟದಲ್ಲಿ ಮೂಗು ತೂರಿಸಿದೆ. ಚಿಕ್ಕಂದಿನಲ್ಲಿ ನನ್ನಮ್ಮ ಯುಗಾದಿ ಹಾಗೂ ದೀಪಾವಳಿ ಹಬ್ಬದಲ್ಲಿ ನಮಗೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ.. ಅಭ್ಯಂಜನಕ್ಕೆ ಅಣಿ ಮಾಡುತ್ತಿದ್ದದ್ದು ಪದ್ಧತಿ... ಆಗೆಲ್...