ಈಶ್ವರ - ವಿಶ್ವೇಶ್ವರ
ಮೊನ್ನೆ ಭಾನುವಾರ ಆಕಸ್ಮಿಕವಾಗಿ, ಬಹುದಿನದ ಆಸೆ... ಮುದ್ದೇನಹಳ್ಳಿಯನ್ನು ನೋಡುವುದು..... ನೆರವೇರಿತು ...ಅದು ನನ್ನ ಸ್ನೇಹಿತ ವಾಸು ( NS ವಾಸುದೇವ್) ವಿನ ಕೃಪೆಯಿಂದ. ಬೆಂಗಳೂರು ಮಹಾನಗರ ಸಾರಿಗೆ ಏರ್ಪಡಿಸಿರುವ ಒಂದು ದಿನದ ಪ್ರವಾಸದ ಮೂಲಕ.
ಸಾಮಾನ್ಯ ಕಣ್ಣಿಗೆ ಕಾಣದ, ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ... ಪ್ರಪಂಚಕ್ಕೆ ಯೋಗ ಜ್ಞಾನವನ್ನು ಕೊಟ್ಟ ಆದಿ ಗುರು ಶಿವ... ಈಶ್ವರನ ದರ್ಶನ.... ಹಾಗೆ ನಮ್ಮ ಜೀವಿತ ಕಾಲದಲ್ಲೇ ಇದ್ದು ಜನಹಿತದ ಕೆಲಸಗಳನ್ನು ಮಾಡಿದ ತಮ್ಮ ಇಂಜಿನಿಯರಿಂಗ್ ಜ್ಞಾನದ ಮೂಲಕ ನೀರು ವಿದ್ಯುತ್ ಅಣೆಕಟ್ಟು ಹೀಗೆ ಅನೇಕ ವಿಧದ ಅನುಕೂಲತೆಗಳನ್ನು ಮಾಡಿದ, ಮೈಸೂರು ರಾಜ್ಯದ ದಿವಾನರಾಗಿ ಬ್ಯಾಂಕು, ಕಾರ್ಖಾನೆಗಳು, ವಿದ್ಯಾಸಂಸ್ಥೆಗಳನ್ನು ಹುಟ್ಟು ಹಾಕಿದ.. ನಮ್ಮ ನಾಡಿನಲ್ಲಿ ನಡೆದಾಡಿದ ವಿಶ್ವೇಶ್ವರನ ದರ್ಶನ... ಹೌದು ಅದು ಸರ್ MV ಎಂದೇ ಪ್ರಸಿದ್ಧರಾದ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ದರ್ಶನ. ಈಶ್ವರ, ವಿಶ್ವೇಶ್ವರ ಇಬ್ಬರ ದರ್ಶನ ನನಗೆ ತುಂಬಾ ಖುಷಿ ಕೊಟ್ಟಿತು.
ಅಂದು ಸುಮಾರು 11.15 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣವನ್ನು ಬಿಟ್ಟು ಮೊದಲು ತಲುಪಿದ್ದು ಕಣಿವೆ ಬಸವೇಶ್ವರನ ದೇವಸ್ಥಾನ.
ಹೆಸರೇ ಹೇಳುವಂತೆ ಒಂದು ಕಡೆ ಬೆಟ್ಟ ಮತ್ತೊಂದು ಕಡೆ ಕಣಿವೆ... ಮಳೆ ಬಂದ ಕಾರಣದಿಂದ ಎಲ್ಲವೂ ಹಸಿರು ಹಸಿರು... ನೋಡಲು ಕಣ್ತುಂಬಿ ಬಂದಂತ ವನಸಿರಿ. ಜೊತೆಗೆ ದೊಡ್ಡದಾದ ಉದ್ಭವ ಮೂರ್ತಿ ಎಂದು ಹೇಳಲಾದ ಬಸವಣ್ಣನ ವಿಗ್ರಹ.... ಸುಂದರ ಪರಿಸರದ ಜೊತೆ ಕಳೆದ ಕೆಲವು ಕ್ಷಣಗಳು ನೆನಪಿಡುವಂತದ್ದು.
ಮುಂದೆ ನಾವು ಹೋಗಿದ್ದು ಭೋಗಾ ನಂದೀಶ್ವರನ ದೇವಸ್ಥಾನ.. ಒಂದು ದೊಡ್ಡ ಜಾಗ ಸಾಕಷ್ಟು ದೇವಸ್ಥಾನಗಳು... ಸುಂದರ ನೋಟ
ಆದರೆ... ರಥದ ಕಲ್ಲಿನ ಗಾಲಿಗಳು ಮಣ್ಣಿನಲ್ಲಿ ಹೂತು ಹೋಗಿದ್ದನ್ನು ನೋಡಿ... ಹಳೆಯ ವೈಭವ ಹೇಗಿದ್ದಿರ ಬಹುದು ಎಂದು ಮನಸ್ಸಿಗೆ ಬಂತು... ಯಾರೋ ಹೇಳಿದ್ದು.... ದೇವರಿಗೂ ಶುಕ್ರದಶೆ ಇರುತ್ತೆ.... ಏಳು ಬೀಳುಗಳು ಸಹಜ... ಹಾಗಾಗಿ ಎಷ್ಟೋ ದೇವಸ್ಥಾನಗಳು ಪಾಳು ಬಿದ್ದಿರುವುದನ್ನು ನಮ್ಮ ರಾಜ್ಯದಲ್ಲಿಯೇ ಸಾಕಷ್ಟು ಕಡೆ ಕಾಣಬಹುದು. ಕಾಲನ ಹೊಡೆತಕ್ಕೆ ದೇವರು ಸಹ ಬಲಿಯಾಗಬೇಕೆನೋ?
ಮುಂದೆ ಹೋಗಿ ಸೇರಿದ್ದೇ ನನ್ನ ಬಹುದಿನದ ಕನಸಿನ ಊರು ಮುದ್ದೇನಹಳ್ಳಿ. ಸರ್ ಎಂ ವಿ ಅವರ ಕಾಲಕ್ಕೆ ಪುಟ್ಟ ಹಳ್ಳಿಯಾಗಿದ್ದು... ಈಗ ಸಾಕಷ್ಟು ಬೆಳೆದಿರುವ... ಮುಂದುವರೆದಿರುವ ಊರಾಗಿ ಪರಿವರ್ತನೆಯಾಗಿದೆ.
ಮೊದಲು ಕಂಡದ್ದು ಸರ್ ಎಂವಿ ಯವರು ವಾಸಿಸುತ್ತಿದ್ದ ಮನೆ...
ಈಗ ಅದನ್ನು ಸಾಕಷ್ಟು ಮುತುವರ್ಜಿಯಿಂದ ಕಾಪಾಡಿ ಸುಸ್ಥಿತಿಯಲ್ಲಿಟ್ಟಿದ್ದಾರೆ. ಮನಸ್ಸಿಗೆ ಏನೋ ಆನಂದ... ಹೇಳಲು ಆಗದ ಒಂದು ಭಾವ. ಮನೆಯ ಫೋಟೋ ತೆಗೆಯಲು ಪ್ರಯತ್ನ ಪಡುತ್ತಿದ್ದೆ.. ಯಾಕೋ ನನ್ನ ಫೋನಿನಲ್ಲಿದ್ದ ಕ್ಯಾಮೆರಾ ಸೂಕ್ತವಲ್ಲವೇನೋ ಅನಿಸಿತು... ಆಗ ಸಹಾಯಕ್ಕೆ ಬಂದದ್ದೇ... ನಮ್ಮ ಬಸ್ಸಿನಲ್ಲಿ ಅಪ್ಪ ಅಮ್ಮನ ಜೊತೆ ಬಂದಿದ್ದ ಕೆ ಆರ್ ನಗರ ಮೂಲದ ಒಬ್ಬ ಹೆಣ್ಣು ಮಗಳು. ಅಕ್ಕ ಪಕ್ಕದಲ್ಲಿ ಕುಳಿತಿದ್ದರಿಂದ ನಾಲ್ಕಾರು ಮಾತುಗಳನ್ನು ಆಡಿದ್ದೆವು... ಆಕೆ ತನ್ನ ಕ್ಯಾಮೆರಾದಲ್ಲಿ ಫೋಟೋ ತೆಗೆದು ನನಗೆ ಕಳಿಸಿದ್ದು... ಅದೇ ಈ ಚಿತ್ರ. ಆಗ್ಗೆ ಹೆಸರು ತಿಳಿಯದ ಆ ಹೆಣ್ಣು ಮಗಳ (ಫೋಟೋ ಕಳಿಸಿದಾಗ ತಿಳಿದದ್ದು ಆಕೆಯ ಹೆಸರು ತನುಜ ಗೌಡ ಎಂದು) ಔದಾರ್ಯ ಮೆಚ್ಚುವಂಥದ್ದು.
SirMV ಅವರ ನೆನಪಿನಲ್ಲಿ ಇದ್ದ ಚಿಕ್ಕದಾದರೂ ಚೊಕ್ಕ ವಾಗಿದ್ದ ವಸ್ತು ಸಂಗ್ರಹಾಲಯ ಅವರ ವಿವಿಧ ಮುಖಗಳನ್ನು ತೆರೆದಿಟ್ಟಿತು. ಅವರು ಅಲಂಕರಿಸಿದ ಭಾರತ ರತ್ನ ಪ್ರಶಸ್ತಿಯ ಪುಟ್ಟದಾದ ಪದಕ ಜೊತೆಗೆ ಕೊಟ್ಟ ಅಭಿನಂದನಾ ಪತ್ರ ಮನಸೆಳೆಯಿತು. ಅವರಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಪ್ರಜಾವಾಣಿಯ ಮುಖಪುಟದಲ್ಲಿ ಬಂದ ಸುದ್ದಿ ಆಕರ್ಷಕವಾಗಿತ್ತು.
ಅವರು ತಮ್ಮ ಪರಿಚಯದವರಿಗೆ ( ಹೆಸರು ತಲೆಯಲ್ಲಿ ಉಳಿದಿಲ್ಲ).... ಇಂಗ್ಲೀಷಿನಲ್ಲಿ ಬರೆದ ಪತ್ರದ ಕೆಲ ಸಾಲುಗಳುಗಳು ಹೆಮ್ಮೆ ಪಡುವಂತಹವು . ಅದರ ಭಾವಾನುವಾದ " ನಿಮಗೆ ಕೊಟ್ಟಿರುವ ಕೆಲಸದ ಆಹ್ವಾನವನ್ನು ಒಪ್ಪಿಕೊಳ್ಳುತ್ತೀರಿ ಎನ್ನುವ ಭರವಸೆ ನನ್ನದು... ಸಂಬಳದ ವಿಚಾರಕ್ಕೆ ಬಹಳ ಪ್ರಾಮುಖ್ಯತೆ ಕೊಡಬಾರದು. ಇದು ನಿಮ್ಮ ತಾಯ್ನಾಡಿಗೆ ಸೇವೆ ಸಲ್ಲಿಸಲು ಸಿಕ್ಕ ಅವಕಾಶ ಎಂದು ದಯವಿಟ್ಟು ಭಾವಿಸಿ"... ಎಂಥ ಮನೋಭಾವ.
ಅವರ ವಿವಿಧ ಮುಖ ಅನಾವರಣ ಗೊಳ್ಳುತ್ತಿದ್ದಂತೆ ನೆನಪಿಗೆ ಬಂದದ್ದು ಅವರು ಬೀದಿಯ ದೀಪದ ಕೆಳಗೆ ಓದಿದ್ದು.... ಮುಂದೆ ಕೆಲಸ ಮಾಡುವಾಗ... ರಾತ್ರಿಯ ವೇಳೆ ಸ್ವಂತ ಕೆಲಸಕ್ಕೆ ಹಾಗೂ ಸರ್ಕಾರಿ ಕೆಲಸಕ್ಕೆ ಬೇರೆ ಬೇರೆ ದೀಪ ಉಪಯೋಗಿಸುತ್ತಿದ್ದ (ಈಗಿನ ಕಾಲಕ್ಕೆ.. ಸ್ವಲ್ಪ ಅತಿರೇಕ ಎನಿಸಿದರೂ) ವಿಷಯಗಳು.
ಅಲ್ಲಿಂದ ಮುಂದೆ ಅವರ ಸಮಾಧಿ ಸ್ಥಳಕ್ಕೆ( ಬಹುಶಃ ದಹನ ಮಾಡಿದ ಜಾಗ) ಭೇಟಿ ಕೊಟ್ಟಾಗ ಕಂಡ ಒಂದು ಶಿಲಾ ಶಾಸನ... ಸರ್ ಎಂ ವಿ ಅವರ ವ್ಯಕ್ತಿತ್ವವನ್ನು ತಿಳಿಯಲು ಸಹಾಯ ಮಾಡಿತು.
ಮನಸ್ಸು ನೆನಪಿನಾಳಕ್ಕೆ ಜಾರಿತು.... ಬೇಸಿಗೆ ರಜ ಇರಬಹುದು ನಾನು ದೊಡ್ಡಜಾಲಕ್ಕೆ ಬಂದಿದ್ದೆ... ವಿಷಯ ಹೇಗೆ ತಿಳಿಯಿತೋ... ನೆನಪಿಲ್ಲ... ವಿಶ್ವೇಶ್ವರಯ್ಯನವರ ಪಾರ್ಥಿವ ಶರೀರ ( ಅಂದಿನ ಭಾಷೆಯಲ್ಲಿ ಹೆಣ) ಮುದ್ದೇನಹಳ್ಳಿಗೆ ಹೋಗುವಾಗ ನಮ್ಮೂರ ಹತ್ತಿರದ ರಸ್ತೆಯಲ್ಲೇ ಹೋಗುತ್ತದೆಂದು. ನಾವೆಲ್ಲ ಒಂದಷ್ಟು ಜನ ಹುಡುಗರು, ಸಾಕಷ್ಟು ಮುಂಚೆ ಹೋಗಿ ದೇವನಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕಾಯುತ್ತಾ ನಿಂತಿದ್ದೆವು... ಆ ಕಾಯುವ ಸಮಯದಲ್ಲಿ ನಡೆದ ಮಾತುಗಳಲ್ಲಿ ವಿಶ್ವೇಶ್ವರಯ್ಯನವರಿಗೆ 100 ವರ್ಷ ತುಂಬಿದ ಸಂದರ್ಭದಲ್ಲಿ ನಮ್ಮೂರ ಪಕ್ಕದ ಹುತ್ತನಹಳ್ಳಿಯ(?) ಹಿರಿಯರು, ತಮಗೂ ನೂರು ವರ್ಷವಾಯಿತೆಂದು ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಿಸಿಕೊಂಡ ವಿಷಯ, ಬ್ರಿಟನ್ನಿನ ರಾಣಿ ನಂದಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ನಾವೆಲ್ಲ ಅದೇ ಜಾಗದಲ್ಲಿ ನಿಂತು ಬಾವುಟಗಳನ್ನು ಬೀಸಿ ಸ್ವಾಗತಿಸಿದ ವಿಷಯ ಚರ್ಚಿತವಾಯಿತು.
ಅಷ್ಟರಲ್ಲಿ ಬಂದಿದ್ದು ಒಂದಷ್ಟು ವಾಹನಗಳು, ಜೊತೆಗೆ ಹೂವಿನಿಂದ ಅಲಂಕರಿಸಿದ್ದ ಒಂದು ದೊಡ್ಡ ಲಾರಿ ಯಂತಹ ವಾಹನ... ಕೆಲ ಹೊತ್ತು ವಾಹನವನ್ನು ಅಲ್ಲಿ ನಿಲ್ಲಿಸಿದಾಗ ಕಂಡಿದ್ದು... ಅದರ ಮೇಲೆ ವಿಶ್ವೇಶ್ವರಯ್ಯನವರ ಪಾರ್ಥಿವ ಶರೀರ... ಕೆಳಗಿನಿಂದ ನಮಗೆ ಮುಖವೂ ಕಾಣದು.... ಹಾಗೇ ಕೈಮುಗಿದು "ವಿಶ್ವೇಶ್ವರಯ್ಯ.. ಅಮರ್ ರಹೇ" ಎಂದು ಹೇಳುತ್ತಾ.... ಈ ಮಧ್ಯದಲ್ಲಿ ವಾಹನದ ಮುಂದಿನ ಭಾಗದಲ್ಲಿ ಕುಳಿತಿದ್ದವರ ಕಡೆ ಕೈ ತೋರಿಸಿ..." ಇವರೇ ಡಾಕ್ಟರ್. ರಾಧಾಕೃಷ್ಣನ್" ಎಂದು ನಾನು ಹೇಳಿದಾಗ.. ಯಾರೋ ನನ್ನ ಕೈ ಮೇಲೆ ಪಟ್ಟಂತ ಹೊಡೆದು ಹಾಗೆಲ್ಲ ದೊಡ್ಡವರಿಗೆ ಕೈ ತೋರಿಸಬಾರದು ಎಂದದ್ದು ನೆನಪಿದೆ.
ಡಾಕ್ಟರ್ ರಾಧಾಕೃಷ್ಣನ್ ಅವರ ಪೇಟ ಕನ್ನಡಕ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಕಾಕತಾಳಿಯವೇನೋ.... ಇದು ಸೆಪ್ಟಂಬರ್ ತಿಂಗಳು. ಸೆಪ್ಟಂಬರ್ 5 ಅವರ ಹುಟ್ಟಿದ ದಿನ..teachers day ಎಂದು ಆಚರಿಸಲಾಗುತ್ತದೆ.
ಸೆಪ್ಟಂಬರ್ 15, ಸರ್ ಎಂ ವಿ ಅವರ ಹುಟ್ಟಿದ ದಿನ.... ಇದನ್ನು engineers day ಎಂದು ಆಚರಿಸಲಾಗುತ್ತದೆ.
Sir MV ಇಂಜಿನಿಯರ್ ಗಳ ಸಾಲಿನಲ್ಲಿ ಮೊದಲಿನವರಾದರೆ... ಆ ಸಾಲಿನ ಬಾಲದ ಕೊನೆಯಲ್ಲೆಲ್ಲೋ ನನಗೂ ಒಂದು ಸ್ಥಾನವಿದೆ ಎಂದು ಹೆಮ್ಮೆ.
ಇನ್ನೊಂದು ಮಾಸಲು ನೆನಪು... ಆಗಿನ್ನು ಬೆಂಗಳೂರಿಗೆ ಬಂದು ನನ್ನ ಚಿಕ್ಕಪ್ಪ ನಂಜಣ್ಣಯ್ಯನ ಜಯನಗರದ ಮನೆಯಲ್ಲಿ ಇದ್ದೆ... ಸಂಜೆ ಇಬ್ಬರು ಸಹಾಯಕರೊಡನೆ ವಾಕಿಂಗ್ ಮಾಡುತ್ತಿದ್ದದ್ದು ವಿಶ್ವೇಶ್ವರಯ್ಯನವರು ಎಂದು ಕೇಳಿದ್ದು.
ಚೆನ್ನಾಗಿ ನೆನಪಿರುವುದು ನಾನು ಎಸ್ ಎಸ್ ಎಲ್ ಸಿ ಓದುತ್ತಿದ್ದ ಸಮಯ..1963.. ನನ್ನ ಸ್ನೇಹಿತ ಹೆಚ್ ವಿ ರಂಗನಾಥ ಅವರ ಅಪ್ಪ ವೆಂಕಟರಾಮಯ್ಯ ನವರು ಸರ್ ಎಂವಿ ಯವರ ಫೋಟೋಗಳನ್ನು ಎಲ್ಲಾ ಆಫೀಸುಗಳಲ್ಲಿ ಹಾಕಲು ಓಡಾಡುತ್ತಿದ್ದ ವಿಷಯ ಗೊತ್ತು. (ಆಗಿನ್ನು ನಮ್ಮಿಂದ ದೂರವಾಗಿದ್ದ ವಿಶ್ವೇಶ್ವರಯ್ಯನವರ ಫೋಟೋ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕೆಂಬ ಸುತ್ತೋಲೆಯನ್ನು ಸರ್ಕಾರ ಹೊರಡಿಸಿತ್ತೇನೋ).
ಎಲ್ಲ ನೆನಪುಗಳನ್ನು ಹೊತ್ತು ಹೊರಡುವಾಗ ಕಂಡದ್ದು ದಪ್ಪ ಸೀಬೆಹಣ್ಣು.. ಕೊಂಡು ಅದಕ್ಕೆ ಹಣ ಕೊಡುವಾಗ online ಮೂಲಕ ಪಾವತಿಸಿ ...ನಗರದಿಂದ ದೂರದ ಹಳ್ಳಿಯಲ್ಲೂ ಆನ್ಲೈನ್ ಮುಖಾಂತರ ಹಣ ಸಂದಾಯ ಮಾಡಲು ಬೇಕಾದ ಸೌಕರ್ಯಗಳನ್ನು ಮಾಡಿರುವ.. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಮೆಚ್ಚುತ್ತಾ..... ಮುಂದಕ್ಕೆ ಸಾಗಿದ್ದು... ಈಶ ಫೌಂಡೇಶನ್ ಕಡೆಗೆ.
ಹಾವಿನ ಹಾದಿಯ ರಸ್ತೆಯನ್ನು ದಾಟಿ ಆ ಜಾಗವನ್ನು ತಲುಪಿದಾಗ ಕಂಡದ್ದು ಸಾಲು ಬೆಟ್ಟಗಳ ಹಿನ್ನೆಲೆ.
ವಿಶಾಲವಾದ ಜಾಗ. ಅದನ್ನು ಸಮತಟ್ಟು ಮಾಡದೆ ಅಲ್ಲಿನ ಮೇಲ್ಮೈಗೆ ತಕ್ಕಂತೆ ಕಲ್ಲು ಹಾಸುಗಳನ್ನು ಅಳವಡಿಸಿ ಮಧ್ಯೆ ಮಧ್ಯೆ ಹುಲ್ಲು ಹಾಸುಗಳನ್ನು ಅಳವಡಿಸಿದ ನೆಲ. ಬೆಟ್ಟದ ಹಿನ್ನೆಲೆಗೆ ಒಗ್ಗುವಂತೆ ನಿರ್ಮಿಸಿದ ನೂರೆಂಟು ಅಡಿಯ ಎತ್ತರದ ಆದಿ ಗುರುವಿನ ಮೂರ್ತಿ.
ಕಪ್ಪು ಬಣ್ಣದ ಮೂರ್ತಿಯನ್ನು ಕಂಡೊಡನೆ ಎದ್ದು ಕಾಣುತ್ತಿದ್ದದ್ದು ಹಣೆಯಲ್ಲಿನ ಬಿಳಿಯ ಬಣ್ಣದ ತಿಲಕ ಹಾಗೂ ತಲೆಯಲ್ಲಿನ ಚಂದ್ರ.
ಒಳಹೋಗುವ ಬಾಗಿಲಿನಲ್ಲಿ ಇದ್ದ ನಾಗದೇವರು ಹಾಗೂ ಮೂರ್ತಿಯ ಕೆಳಭಾಗದಲ್ಲಿ ಇದ್ದ ಶಿವಲಿಂಗವನ್ನು ದರ್ಶನ ಮಾಡಿ ನಂತರ ಆ ಪರಿಸರದಲ್ಲಿ ಓಡಾಡಿದ ಅನುಭವ ಅವಿಸ್ಮರಣೀಯ. ಕತ್ತಲಾವರಿಸುತ್ತಿದ್ದಂತೆ ಕುಳಿರ್ ಗಾಳಿ... ಛಳಿ... ವಿಗ್ರಹದ ಮೇಲೆ ಮಂದ ಬೆಳಕು.. ರೋಮಾಂಚನಗೊಳಿಸಿತು.
ನಂತರದ ಲೇಸರ್ ಶೋ... ಆದಿ ಯೋಗಿಯ ಕಥಾರೂಪಕವಾಗಿ ಪ್ರದರ್ಶಿಸಿದ್ದು ಸೊಗಸಾಗಿತ್ತು.
ಶುರುವಾದ ಎಲ್ಲವೂ ಕೊನೆಗೊಳ್ಳಲೇಬೇಕು... ಈಶ್ವರ- ವಿಶ್ವೇಶ್ವರ ದರ್ಶನ , ಈಶ್ವರನ ಲೇಸರ್ ಶೋ ಮುಗಿಸಿ ಬೆಂಗಳೂರಿಗೆ ಬಂದು ಸೇರುವಲ್ಲಿಗೆ ಮುಕ್ತಾಯವಾಯಿತು.
ಮನಸ್ಸು ಋಷಿಯಿಂದ ತೇಲುತ್ತಿತ್ತು.
ಗೌರಿ ಗಣೇಶನ ಹಬ್ಬದ ಸಂಭ್ರಮ ಶುರುವಾಗಿದೆ. ಎಲ್ಲರಿಗೂ ಸನ್ಮಂಗಳವಾಗಲಿ ಎಂದು ಆ ಈಶ್ವರನಲ್ಲಿ ಪ್ರಾರ್ಥಿಸುತ್ತಾ..... ನಮಸ್ಕಾರ..
D C Ranganatha Rao
9741128413
ನನ್ನ ಅಕ್ಕ ಹಾಗು ಫ್ರೆಂಡ್ಸ್ ಹೀಗೆ ಕೆಎಸ್ಆರ್ಟಿಸಿ ಹತ್ತಿ ಚಿಕ್ಕಬಳ್ಳಾಪುರಕ್ಕೆ ಹೋಗಿ .ಅಲ್ಲಿ ಒಂದು ಆಟೋ ಬುಕ್ ಮಾಡಿಕೊಂಡು ಎಕ್ಸೆಪ್ಟ್ ವಿಶ್ವೇಶ್ವರಯ್ಯ ನವರ ಮನೆ ಮತ್ತು ಲೇಜರ್ ಶೋ ನೋಡದೆ ಬೆಂಗಳೂರಿಗೆ ಬಂದೆವು.
ReplyDeleteಕಣಿವೆ ಬಸವಣ್ಣ ನನ್ನು ನೋಡಲಿಲ್ಲ.ಆದರೆ ನಿಮ್ಮ ಹಾಗೆ ಬರೆಯಲು ಬರೋಲ್ಲ ಸರ್