ವಾಸ್ತುಶಾಸ್ತ್ರ- ವಸ್ತುಸ್ಥಿತಿ

Walking ಸಮಯದ talking ನನಗೆ ಬಲು ಇಷ್ಟ ... ಅದು ನಮ್ಮದಾದರೂ ಸರಿ.. ಬೇರೆಯವರ ಮಾತಾದರೂ ಸರಿ. ಹೀಗೆ ಕೇಳಿಸಿಕೊಂಡ ಮಾತು ವಾಸ್ತು ಶಾಸ್ತ್ರದ ಬಗೆಗಿತ್ತು.." ಎಂಥಾ ಸಂದಿಗ್ಧ  ಅಂತೀರಾ... ನಮ್ ಪಕ್ಕದ ಸೈಟ್ ನಲ್ಲಿ ದೇವಮೂಲೆಯಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ ...ಒಳ್ಳೆ ನೀರು ಬಂದಿದೆ. ನಮ್ ಸೈಟ್ ನಲ್ಲೂ ಬೋರ್ ವೆಲ್ ಹಾಕಿಸ ಬೇಕು... ಅದು ದೇವಮೂಲೆಯಲ್ಲಿ ಇದ್ರೆ ಒಳ್ಳೇದು ಅಂತ ವಾಸ್ತು ತಿಳಿದವರು ಹೇಳ್ತಾರೆ... ಆದರೆ ನೀರಿನ ಸೆಲೆ ಹುಡುಕಿಕೊಟ್ಟವರು ಅದನ್ನ ಅಗ್ನಿಮೂಲೆ ತೋರಿಸಿದ್ದಾರೆ... ಏನ್ ಮಾಡಬೇಕು ತೋಚುತ್ತಾ ಇಲ್ಲ" . ಕಣ್ಮುಚ್ಚಿ ಅಕ್ಕ ಪಕ್ಕ ಸೈಟ್ ಅನ್ನ ಕಲ್ಪಿಸ್ಕೊಂಡೆ ಆಗ ಕಾಣಿಸಿದ್ದೇ ...ಒಬ್ಬರ ಮನೆಯ ಅಗ್ನಿ ಮೂಲೆಯ  ಬಲಗಡೆ ಪಕ್ಕದ ಮನೆಯವರ ದೇವ ಮೂಲೆ. ನೀರಿನ ಹರಿವು ಅದೃಷ್ಟವಶಾತ್ ಒಬ್ಬರಿಗೆ ದೇವಮೂಲೆಯಲ್ಲಿ ಸಿಕ್ಕಿದೆ, ಪಕ್ಕದಲ್ಲಿ ಬೋರ್ ಹಾಕಿದರೆ ನೀರಿನ ಸಾಧ್ಯತೆ ಹೆಚ್ಚು ಅಲ್ಲವೇ( ಕಾನೂನುಗಳ ವಿಧಿಯನ್ನು ಗಮನಿಸದೆ)... ವಾಸ್ತು ಶಾಸ್ತ್ರಕ್ಕೂ ವಸ್ತು ಸ್ಥಿತಿಗೂ ಇರುವ ಅಂತರ... ಅದರಿಂದಾಗುವ ಗೊಂದಲ ನನ್ನಲ್ಲಿ ಮೂಡಿತು.... ನನಗಿದು ಸಂಬಂಧವೇ ಇಲ್ಲದಿರುವ ವಿಷಯವಾದರೂ. ಇನ್ನು ಅದನ್ನು ನಿಭಾಯಿಸಬೇಕಾದ ವ್ಯಕ್ತಿಗೆ ಆಗುವ ಗೊಂದಲ....  ಹಣದ ಪ್ರಶ್ನೆಯ ಜೊತೆಗೆ... ಅರ್ಥ ಮಾಡಿಕೊಳ್ಳಲು ಅಷ್ಟು ಸುಲಭವಲ್ಲ, ಅನುಭವಿಸಿ ಅರ್ಥಮಾಡಿಕೊಳ್ಳಬೇಕು.

ವಾಸ್ತು ಶಾಸ್ತ್ರದ ಜೊತೆ ನನ್ನ ಮೊದಲ ಮುಖಾಮುಖಿ 1975ರ ಸುಮಾರು... ನಮ್ಮದೆ ಸ್ವಂತ ಫ್ಯಾಕ್ಟರಿ ಮಾಡುವ ಉತ್ಸಾಹ. ಪೀಣ್ಯದಲ್ಲಿ ಅರ್ಧ ಎಕರೆ ಜಾಗ allot ಆಯ್ತು. ಇನ್ನೂ ಸರಿಯಾದ ರಸ್ತೆ ಆಗಿರಲಿಲ್ಲ... ನೀರಿಗಾಗಿ ಭಾವಿಯ ಯೋಜನೆ. ಆ ಯೋಜನೆಯ ಭಾಗವಾಗಿ ಪರಿಚಯವಾಗಿದ್ದೇ ರೇವಣ್ಣನವರು.... ನನ್ನ ದೊಡ್ಡ ಮಾವ ಎಚ್‌.ಪಿ. ನರಸಿಂಹಮೂರ್ತಿಯವರ ಆಪ್ತರು. ಅವರ ಮೂಲಕ ಭಾವಿ ಕೊರೆಯುವ ಜಾಗ ಗುರುತು ಮಾಡಿಸಿಕೊಳ್ಳುವುದೆಂದು ನಿರ್ಧಾರವಾಯಿತು. ಅವರನ್ನು ನನ್ನ ಸ್ಕೂಟರ್ ಮೇಲೆ ಕೂಡಿಸಿಕೊಂಡು ಹೊರಟದ್ದು ಶ್ರೀನಗರದಿಂದ ಪೀಣ್ಯ ಕಡೆಗೆ. ಇನ್ನೂ ರಸ್ತೆ ಇರದಿದ್ದ ಕಾರಣ ನಮ್ಮ ಜಾಗಕ್ಕೆ ತಲುಪಲು ಇದ್ದ ಏಕೈಕ ರಸ್ತೆ... ಸೈಟಿನ ಹಿಂಭಾಗಕ್ಕಿತ್ತು... ಜಾಗದ ಸರ್ವೇಕ್ಷಣೆ ಮಾಡಿದ  ರೇವಣ್ಣನವರು.. ತಾವು ತಂದಿದ್ದ ದಿಕ್ಸೂಚಿಯ ಮೂಲಕ ದಿಕ್ಕುಗಳನ್ನು ನಿರ್ಧರಿಸಿ ಒಂದು ಜಾಗವನ್ನು ಗುರುತಿಸಿದರು. ಅಲ್ಲಿ ಸುತ್ತಲೂ ದತ್ತೂರಿ ಗಿಡಗಳು ಇದ್ದವು... ಇದು  ನೀರು ಸಿಗುವ ಒಳ್ಳೆಯ ಲಕ್ಷಣ ಎಂದು ಹೇಳಿದರು. ಇನ್ನೂ ಜೀವನದಲ್ಲಿ ಯಾವುದೇ ಹೊಡೆತಗಳನ್ನು ತಿನ್ನದಿದ್ದ, ಹೊಸದಾಗಿ ಮಾಡುತ್ತಿದ್ದ ಕೆಲಸದಲ್ಲಿ ಉತ್ಸಾಹವಿದ್ದ ನನಗೆ ಎಲ್ಲದರಲ್ಲೂ ಒಳ್ಳೆಯದೇ ಕಾಣುತ್ತಿತ್ತು. ಸರಿ ಮುಂದಿನ ಭಾಗವಾಗಿ... ಬೋರ್ ವೆಲ್ ಬದಲು ಭಾವಿ ತೋಡಿಸುವುದು ಕಡಿಮೆ ಖರ್ಚು ಎಂದು ನಿರ್ಧಾರ ಮಾಡಿ ಕೆಲಸ ಶುರುವಾಯಿತು.  ದಿನ ದಿನ ಭಾವಿ ಆಳ ಆಗುತ್ತಿರುವುದನ್ನು ನೋಡಿ ಸಂತೋಷಪಟ್ಟಿದ್ದು... ಕ್ರಮೇಣ ಕಡಿಮೆಯಾಗುತ್ತಾ ಬಂತು...80 ಅಡಿಯಾದರೂ ಇನ್ನು ನೀರೇ ಸಿಕ್ಕಿಲ್ಲ... ಇದನ್ನು ಕೇಳಿದ ರೇವಣ್ಣನವರಿಗೆ ಅನುಮಾನವೋ... ಅಸಮಾಧಾನವೋ... ಮತ್ತೊಮ್ಮೆ ಬಂದು ನೋಡಲು ಬಯಸಿದರು.... ಈ ಸಮಯಕ್ಕೆ ನಮ್ಮ ಜಾಗಕ್ಕೆ ಹೋಗಲು ಮಣ್ಣಿನ ರಸ್ತೆಗಳು ಆಗಿತ್ತು.... ಹೋಗಿ ಸೈಟಿನ ಬಳಿ ಇಳಿದಾಗ.... ಕೇಳಿದ್ದು" ನಾವು ಬೇರೆ ರಸ್ತೆಯಲ್ಲಿ ಬಂದೆವು ಅಲ್ವಾ..." ನಾನು ಎಲ್ಲವನ್ನು ಮತ್ತೆ ವಿವರಿಸಿದೆ. ಭಾವಿಯ ಬಳಿ ನಿಂತು ಎಲ್ಲ ಕಡೆಯೂ ಗಮನಿಸಿದರು.... ಅದೇಕೋ ಅವರ ಮುಖದಲ್ಲಿ ಚಿಂತೆಯ ಗೆರೆಗಳು ಕಂಡ ನೆನಪು. ಅವರು ಕೇಳಿದ ಕೆಲ ಪ್ರಶ್ನೆಗಳಿಗೆ ನನಗೆ ತಿಳಿದಷ್ಟು ಮಟ್ಟಿಗೆ ಉತ್ತರ ಕೊಟ್ಟೆ.... ಅವರು ತೋರಿಸಿದ್ದು ಅದೇ ಜಾಗ ಎನ್ನುವುದಕ್ಕೆ ಸುತ್ತ ಕಂಡ ದತ್ತೂರಿ ಗಿಡಗಳನ್ನು ತೋರಿಸಿದೆ... ಆಗ ಅವರ ಸ್ವಗತ..." ಇದು ಅಗ್ನಿ ಮೂಲೆಯಾಯ್ತಲ್ಲ..... ".  ಪ್ರಾಯಶಃ ಮೊದಲ ಬಾರಿ ನಾವು ಬಂದಾಗ ಹಿಂದಿನ ರಸ್ತೆಯಿಂದ ಬಂದ ಕಾರಣ.. ಏನೋ ಗೊಂದಲ ಆಗಿರಬಹುದು. ಮತ್ತೆ ಕೆಲ ಹೊತ್ತು ಯೋಚನೆ ಮಾಡಿ.. ಅವರು ಹೇಳಿದ್ದು ನೀರು ಖಂಡಿತ ಸಿಗುತ್ತೆ ಪ್ರಯತ್ನ ಬಿಡಬೇಡಿ. ಹೌದು ನೀರು ಸಿಕ್ತು 108 ಅಡಿಯಲ್ಲಿ... ಶುದ್ಧವಾದ ನೀರು... ಆದರೆ ಅದನ್ನು ಪಡೆಯಲು ಭಗೀರಥ ಪ್ರಯತ್ನ ಮಾಡಿದ್ದು ಮತ್ತು ಮುಂದುವರಿಸಬೇಕಾದ್ದು ಅನಿವಾರ್ಯವಾಗಿತ್ತು. ಉದ್ದೇಶ ಒಳ್ಳೆಯದಿತ್ತು... ಜಾಗ ದೇವಮೂಲೆಯಲ್ಲಿ ಇತ್ತು...ಆದರೆ ಅದು ನಮ್ಮ ಹಿಂದಿನ ಸೈಟಿನವರಿಗೆ... ನಮಗೆ ಅದು ಅಗ್ನಿಮೂಲೆ... ಹಣೆ ಬರಹಕ್ಕೆ ಹೊಣೆ ಯಾರು... ದೈವ ನಿರ್ಧಾರದ ಮುಂದೆ ನಮ್ಮ ಯಾವ ಜಾಣತನವೂ ನಡೆಯಲಿಲ್ಲ.

ನಮ್ಮ ದೊಡ್ಡಜಾಲದ ಮನೆಯ ವಾಸ್ತುವನ್ನು ವಿಶ್ಲೇಷಿಸಿದಾಗ.. ಅದು ಎಲ್ಲಕ್ಕೂ ವಿರುದ್ಧವಾಗೇ ಇತ್ತೇನೋ ಅನಿಸುತ್ತೆ... ದೇವಮೂಲೆಯಲ್ಲಿ ಕಸ ಹಾಕುವ ತಿಪ್ಪೆ/ ಕಕ್ಕಸು ಮನೆ ಎಂಬ ಅರ್ಧ ಮುಚ್ಚಿದ ಭಾಗ. ಇನ್ನು ಅಗ್ನಿ ಮೂಲೆಯಲ್ಲಿ ನೆಲಭಾವಿ. ಆದರೆ ಭಾವಿಯಲ್ಲಿ ಯಾವಾಗಲೂ ನೀರಿನ ಕೊರತೆಯಾಗಲಿಲ್ಲ... ಕೆಲವು ಸಲ ಬಗ್ಗಿ ನೀರು ತೆಗೆದುಕೊಳ್ಳುವಷ್ಟು ಮೇಲಕ್ಕೆ ಇರುತ್ತಿತ್ತು.   ಹೌದು ಬಡತನವಿತ್ತು.. ಅದು ಹಳ್ಳಿಯ ಬಹುಪಾಲು ಮನೆಯ ಆಸ್ತಿಯಾಗಿತ್ತು ಎನ್ನಲೆ?.. ನಾವೆಲ್ಲ ಒಂದು ಹಂತದ ತನಕ ಬೆಳೆದದ್ದು... ಬಾಲ್ಯದ ಸುಖದ ಕ್ಷಣಗಳನ್ನು ಆಸ್ವಾದಿಸಿದ್ದು ಆ ಮನೆಯಲ್ಲಿ.... ನನ್ನ ನೆನಪಿನ ಬುತ್ತಿಗೆ ಸಾಕಷ್ಟು ವಿಷಯಗಳನ್ನು ಕೊಡುತ್ತಿರುವುದು ಆ ಮನೆಯಲ್ಲಿ ಕಳೆದ ಸಮಯದಿಂದ. ತಕ್ಕಮಟ್ಟಿನ ಒಳ್ಳೆಯ ಭವಿಷ್ಯ ರೂಪಿಸಿಕೊಂಡದ್ದು ಆ ಮನೆಯ ಮೂಲದಿಂದಲೇ... ಹಾಗಾದರೆ ವಾಸ್ತುಶಾಸ್ತ್ರಕ್ಕೂ..ವಸ್ತು ಸ್ಥಿತಿಗೂ ಏನುಂಟು ನಂಟು?

ನನ್ನ ಸ್ವಂತ ಮನೆ ಕಟ್ಟುವ ಸಮಯಕ್ಕೆ ವಾಸ್ತುವನ್ನು ಸರಿಯಾಗಿ ನೋಡಬೇಕು ಎಂಬ ಸಲಹೆಗಳು ಬಂದವು.... ನನಗೂ ಹೌದೆನಿಸಿತು... ಹಾಗಾಗಿ ಒಂದಷ್ಟು ವಿಚಾರಿಸಿದ ನಂತರ ಮೊರೆ ಹೋದದ್ದು "ವಾಸ್ತು ಶಾಸ್ತ್ರದ ವಾಸ್ತವಗಳು" ಎಂಬ ಪುಸ್ತಕ... ಗೌರು ತಿರುಪತಿ ರೆಡ್ಡಿ ಎನ್ನುವವರು ಬರೆದದ್ದು. ಪುಸ್ತಕವನ್ನು ಆಂಧ್ರಪ್ರದೇಶದ ಪ್ರದತ್ತೂರಿನಿಂದ ಅಂಚೆಯ ಮೂಲಕ ತರಿಸಿಕೊಂಡು ಓದಲು ಶುರು ಮಾಡಿದೆ.... ಎಷ್ಟು ವಿವರಗಳು.. ಎಕರೆಗಟ್ಟಲೆ ಜಾಗವಿದ್ದರೆ ಅದನ್ನೆಲ್ಲ ಗಮನಿಸಬಹುದೇನೋ ಅನಿಸಿತು. ನನ್ನ 30 x 45 ಸೈಟಿನ ಮುಂದೆ ನಿಂತು ಪುಸ್ತಕದ ಅಂಶಗಳನ್ನು ಗಮನಿಸಿದಾಗ ಅದೆಲ್ಲ ಸಾಧ್ಯವಾಗದ ಮಾತು ಎಂಬ ನಿರ್ಧಾರಕ್ಕೆ ಬಂದು... ದೇವರ ಮನೆ, ಅಡಿಗೆಮನೆ, ನಮ್ಮ ಕೋಣೆ, ನೀರಿನ sump ಹಾಗೂ overhead tank ಇಷ್ಟನ್ನು ಮಾತ್ರ ವಾಸ್ತು ಶಾಸ್ತ್ರದಂತೆ ಹೊಂದಿಸಿ ಬೇರೆಯಲ್ಲ ಅನುಕೂಲಕ್ಕೆ ತಕ್ಕಂತೆ ಕಟ್ಟಿ ಗೃಹಪ್ರವೇಶ ಮಾಡಿ ಮನೆಗೆ  ಬಂದು ಜೀವನ ಶುರು ಮಾಡಿದೆವು. ಜೀವನ ಏರು ಗತಿಯಲ್ಲಿ ಸಾಗಿತು...  ಸುಖ ಸಂತೋಷವಿತ್ತು..... ಸಹಜ ಎಂಬಂತೆ ಕೆಲ ಕಷ್ಟಗಳೂ ಇತ್ತು.  14 ವರ್ಷಗಳ ಅಲ್ಲಿನ ಜೀವನ ಮುಗೀತು... ವಾಸ್ತು ಪ್ರಕಾರವೇ ಇದ್ದರೂ ಅನಿರೀಕ್ಷಿತವಾಗಿ ನಿಂತ ನಿಲುವಲ್ಲೇ  ಮನೆ ಬಿಡಬೇಕಾಯಿತು....ಋಣ ಮುಗಿಯಿತು ಎನ್ನುವ ಸಿದ್ಧಾಂತವೇ ಮನಸ್ಸಿಗೆ ಸಮಾಧಾನ ಕೊಡಲು ನೆರವಾಯಿತು.  ಇದು ವಸ್ತು ಸ್ಥಿತಿ.

ಚಿಕ್ಕಂದಿನ ಚರಿತ್ರೆಯಲ್ಲಿ ಓದಿದಂತೆ ಭಾರತ ದೇಶ ಮೂರು ಕಡೆ ಸಮುದ್ರ ಹಾಗೂ ಒಂದು ಕಡೆ ಹಿಮಾಲಯ ಪರ್ವತ ಶ್ರೇಣಿ... ಹಾಗಾಗಿ ಇದು ತುಂಬಾ   ಸುರಕ್ಷಿತ ವಾದ ಜಾಗ.... ಶತ್ರುಗಳು ಅಷ್ಟು ಸುಲಭವಾಗಿ ನಮ್ಮ ಮೇಲೆ ದಾಳಿ ಮಾಡಲಾರರು.... ಕಾಲಕ್ರಮೇಣ ಯುದ್ಧೋಪಾಯಗಳು, ಅನುಕೂಲಗಳು ಬದಲಾದಂತೆ... ಆ ಸುರಕ್ಷತಾ ಕವಚ ಕರಗಿಹೋಯಿತು... ಎಲ್ಲ ಕಡೆಯಿಂದಲೂ ಬಂದು ನಮ್ಮ ಮೇಲೆ ದಾಳಿ ಮಾಡಿಯಾಯಿತು... ನೈಸರ್ಗಿಕ ವಾಸ್ತು ಇದ್ದ ಭಾರತ.... ಇಬ್ಬಾಗವಾಗಿ... ಮತ್ತೆ ಭಾಗವಾಗಿ... ದಾಯಾದಿ ಮತ್ಸರ ಇರುವಂತಹ ನೆರೆ ರಾಷ್ಟ್ರಗಳು ಉದಯವಾದವು.... ಜೊತೆಗೆ ಆಂತರಿಕವಾಗಿ, ಕ್ಷೋಭೆಯನ್ನು ಹುಟ್ಟು ಹಾಕುವ ಜನರು ಶತ್ರುಗಳೊಂದಿಗೆ ಕೈಜೋಡಿಸಿ... ದೇಶದ ನೆಮ್ಮದಿಯನ್ನು ಹಾಳುಗೆಡುವಲು ಮಾಡುತ್ತಿರುವ ಹುನ್ನಾರದಿಂದ ಶಾಂತಿ ಭಂಗವಾಗುತ್ತಿದೆ....

ನನ್ನ ಸೀಮಿತ ಜ್ಞಾನದ ಮಟ್ಟಿಗೆ... ವಾಸ್ತು ಶಾಸ್ತ್ರದ ಉಗಮ ದೇವಸ್ಥಾನಗಳನ್ನು ಕಟ್ಟುವ ದೃಷ್ಟಿಯಿಂದ ಶುರುವಾಗಿ ಅದನ್ನು ಮನೆಯನ್ನು ಕಟ್ಟುವ ಕಾರ್ಯದಲ್ಲೂ ಉಪಯೋಗಿಸಲಾಯಿತು. ನನಗೆ ನೆನಪಿರುವಂತೆ ನಮ್ಮ ಹಳ್ಳಿಯಲ್ಲಿ... ಅದೇ ಸಕಲಕಲಾವಲ್ಲಭ.... ನನ್ನ ಪ್ರೀತಿಯ ಸುಬ್ಬಣ್ಣಯ್ಯ  (ಸುಬ್ಬರಾಯಾಚಾರ್) ಮನೆ ಕಟ್ಟುವವರ ಜಾತಕ ಅಥವಾ ನಾಮ ನಕ್ಷತ್ರದ ಆಧಾರದ ಮೇಲೆ ಮನೆಯ ಆಯತವನ್ನು (ಅಗಲ ಮತ್ತು ಉದ್ದ) ನಿರ್ಧಾರ ಮಾಡಿಕೊಡುತ್ತಿದ್ದರು.

ವಾಸ್ತು ಮೂಲತಃ ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶಗಳ, ಸಂಪೂರ್ಣ ಉಪಯೋಗ ಪಡೆಯುವ ಒಂದು ಕಲೆ.  ಒಂಟಿಯಾಗಿ ಎಲ್ಲವೂ ಅನುಕೂಲ ವಾಗಿದ್ದರೂ.. ಕೆಲವೊಂದು... ಜೊತೆಯಾದಾಗ ಮಾರಕವಾಗಬಹುದು... ಉದಾಹರಣೆಗೆ ಬೆಂಕಿ ಗಾಳಿಯಿಂದ ಹರಡಬಹುದು..... ಹಾಗಾಗಿ ಗಾಳಿ ಬೀಸುವ ದಿಕ್ಕು ಬೆಂಕಿಗೆ ಪೂರಕವಾಗಿರಬಾರದು... ಅಂದರೆ ಅಡಿಗೆಯ ಮನೆಗೂ... ಗಾಳಿ ಬೀಸುವ ದಿಕ್ಕಿಗೂ ಇರಬೇಕಾದ ಅಂಶವನ್ನು  ಗಮನಿಸುವುದು

 


ಪೂರ್ವಕ್ಕೆ ಅಥವಾ ಉತ್ತರಕ್ಕೆ ಬಾಗಿಲು ಇಡುವುದು.... ಸೂರ್ಯನ ಬೆಳಕು ಮನೆಯೊಳಗೆ ಬೀಳುವ ಅನುಕೂಲತೆಗಾಗಿ. North light trusses ಎನ್ನುವುದು ಉತ್ತರದ ಬೆಳಕು ಕಟ್ಟಡದೊಳಗೆ ಬೀಳಲು   ಅನುಕೂಲ ವಾಗುವಂತೆ...ಗಾಜನ್ನು ಅಳವಡಿಸಲು ಮಾಡಿದ ಪರಿಕರ. 

ಶುಭಕಾರ್ಯಗಳಲ್ಲೂ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಕೂಡಿಸುವ ಪರಿಪಾಠ ಬೆಳಕಿನ ಕಾರಣದಿಂದಲೇ ಬಂದಿರಬೇಕು.

ನಮ್ಮ ಎಲ್ಲ ಆಚಾರ ವಿಚಾರಗಳು ವೈಜ್ಞಾನಿಕ ಆಧಾರದಿಂದಲೇ ನಿರ್ಧರಿಸಲಾಗಿದೆ ಎನ್ನುವುದು ವಿದಿತ. ನಮ್ಮ ದೇವಸ್ಥಾನಗಳ ಕಟ್ಟಡಗಳ ನಿರ್ಮಾಣದಲ್ಲಿ ಅಳವಡಿಸಿರುವ ವೈಜ್ಞಾನಿಕ ಅಂಶಗಳು ಆಶ್ಚರ್ಯ ಪಡುವಂತಹದ್ದು... ಉದಾಹರಣೆಗೆ ವರ್ಷದ ಒಂದು ದಿನ ಬೆಳಕಿನ ಕಿರಣಗಳು ದೇವರ ಮೇಲೆ ಬೀಳುವುದು... ಕಂಬಗಳು  ಭೂಮಿಯ ಮಧ್ಯೆ ಇರುವ ಸಂದಿ... ಸಪ್ತ ಸ್ವರಗಳು ಹೊರಡಿಸುವ ಕಲ್ಲುಗಳ ಆಯ್ಕೆ....

ಯಾವ ಕಾರಣದಿಂದಲೋ... ಎಲ್ಲ ವೈಜ್ಞಾನಿಕ ಕಾರಣಗಳನ್ನು ತಿಳಿಯದೆ... ಅದರ ಮೂಲತತ್ವವನ್ನು ಬಿಟ್ಟು, ಬರೀ ಆಚರಣೆಗೆ ಸೀಮಿತವಾಗಿರುವುದು ನಮ್ಮ ವೈಫಲ್ಯ... ಇದಕ್ಕೆ ಕಾರಣ ಮೆಕಾಲೆ ಪ್ರೇರಿತ ವಿದ್ಯಾಭ್ಯಾಸದ ಶೈಲಿ... ವೇದಗಳ ಕಾಲದ ಜ್ಞಾನವನ್ನು... ಅಂಧಶ್ರದ್ಧೆ ಎಂದು ಬಿಂಬಿಸಿ ಅದನ್ನು ಮೂಲೆಗುಂಪು ಮಾಡಿದ್ದು.... ನಾವು ನಮ್ಮ ಗುಲಾಮತನವನ್ನು ಪ್ರದರ್ಶಿಸಿ ಅದನ್ನು ಒಪ್ಪಿಕೊಂಡು ಅಳವಡಿಸಿಕೊಂಡಿದ್ದು.

ಈ ಅಂಧ ಶ್ರದ್ಧೆಯ ಇನ್ನೊಂದು ಮುಖವೇ... ನಾವುಗಳು ಶೋಷಣೆಗೆ ಒಳಗಾಗುತ್ತಿರುವುದು. ವಾಸ್ತು ಶಾಸ್ತ್ರದ ವಿಷಯಕ್ಕೆ ಬಂದಾಗಲೂ ಇದು ಎದ್ದು ಕಾಣುತ್ತದೆ. ಕಷ್ಟ ಮನುಷ್ಯನ ಜೀವನದ ಅವಿಭಾಜ್ಯ ಅಂಗ... ಎಷ್ಟೋ ಸಲ ಇದರ ಕಾಲಾವಧಿ ಸ್ವಲ್ಪ ಜಾಸ್ತಿ ಇರಬಹುದು. ಇದರಿಂದ ಹೊರಬರಲು ಕಾತುರ ಸಹಜ... ಕೆಲವು ಸಲ ಹುಲ್ಲು ಕಡ್ಡಿಯೂ ಆಸರೆಯಾದಿತೇನೂ ಎಂಬ ಆಸೆ.  ಈ ಕಷ್ಟಗಳಿಗೆ ಕಾರಣ ಮನೆಯ ವಾಸ್ತು ಎಂದು ಬಿಂಬಿಸಿ, ನಂಬಿಸಿ ತಮ್ಮ ಬೇಳೆ ಬೇಯಿಸಿಕೊಂಡ ಢೋಂಗಿ ವಾಸ್ತು ಶಾಸ್ತ್ರಜ್ಞರು ಬಹಳ ಜನ. ಯಾವ ಮಟ್ಟದ ಶೋಷಣೆ ನಡೆಯುತ್ತದೆ ಎಂದರೆ... ಅವರುಗಳು ಕೊಡುವ ಮಣಿಗಳು, ಕನ್ನಡಿ, ಗಡಿಯಾರ, ದೇವರ ಫೋಟೋ, ಗಿಡಗಳು ಕೊನೆಯ ಹಂತದಲ್ಲಿ ಮನೆಯ ಮಾರ್ಪಾಟು... ಇದಕ್ಕೆಲ್ಲ ಹಣ. ನಮ್ಮ ಮಾನಸಿಕ ದೌರ್ಬಲ್ಯವನ್ನು ಅಸ್ತ್ರವಾಗಿ ಮಾಡಿಕೊಂಡು ನಮ್ಮಿಂದ ಹಣ ಕೀಳುವ ಕಲೆಗಾರರು. 

ಆಪ್ತ ಸಲಹೆಗಾರನಾಗಿ ನನ್ನಲ್ಲಿ ಬಂದ ಕೆಲ ವ್ಯಕ್ತಿಗಳು... ಅವರು ಮಾಡಿದ ವಾಸ್ತು ಬದಲಾವಣೆಗಳನ್ನು.. ಹಾಗೂ ಬದಲಾಗದ ಕಷ್ಟಕೋಟಲೆಗಳನ್ನು ಕೇಳಿದಾಗ ನೋವಾಗಿದೆ. ಕಷ್ಟದ ಮೂಲವನ್ನು ಗಮನಿಸದೇ, ಅದಕ್ಕೆ ಪರಿಹಾರ ನೀಡದೆ ಬೇರೆಲ್ಲ.. ಏನೆಲ್ಲ ಮಾಡಿದರೆ ಪ್ರಯೋಜನವಾದೀತು.

ಮಂತ್ರಿಸಿದರೆ ಮಾವಿನಕಾಯಿ ಬೀಳುವುದೇ... ಸರಿಯಾದ ದಿಕ್ಕಿನ ಪ್ರಯತ್ನ ಬೇಕಲ್ಲವೇ? 

ಕೊನೆ ಹನಿ..... ಖಾಲಿ ಜಾಗ ಹಾಗೂ ಮನೆ ಕಟ್ಟುವ ವಿಚಾರದಲ್ಲಿ ಇರುವ ನಮ್ಮ ಕಾರ್ಪೊರೇಷನ್ ನಿಬಂಧನೆಗಳು ಸಹ ಢೋಂಗಿ ವಾಸ್ತು ಶಾಸ್ತ್ರದಷ್ಟೇ ಅಸಂಬದ್ಧ ಎಂದು ನನ್ನ ಭಾವನೆ. ಅದರಲ್ಲೂ ಸುತ್ತ ಜಾಗ ಬಿಡುವ ನಿಬಂಧನೆಗಳು.... ಚಿಕ್ಕ ಚಿಕ್ಕ ಸೈಟುಗಳಲ್ಲಿ ಅಳಡಿಸಿಕೊಳ್ಳಲಾಗದಂತವು. ಹಾಗಾಗಿ ಇದನ್ನು ಪಾಲಿಸದವರೇ ಜಾಸ್ತಿ. ನಮ್ಮ ಪಾಲಿಕೆಯವರಿಗೆ ಎಲ್ಲವೂ ಗೊತ್ತು... ಈ ವಿಚಾರವಾಗಿ ತಮ್ಮ ಕಣ್ಣು ಮುಚ್ಚಿಕೊಳ್ಳಲು... ಬೇಕಾದ ಕೈ ಬಿಸಿ ಮಾಡಿಸಿಕೊಂಡು ಹಾಯಾಗಿದ್ದಾರೆ. ಕೆಲ ಕಾನೂನುಗಳಂತೂ ಮಾಡಿರುವುದೇ ಮುರಿಯಲು ಎಂಬಂತೆ ಇದೆ. ಅದು ಅಕ್ರಮವಾಗಿ ಹಣ ಮಾಡಲು ಒಳ್ಳೆಯ ಅವಕಾಶಗಳನ್ನು ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.

" ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನಃ" ಎನ್ನುವ ಭಗವದ್ಗೀತೆಯ ಸಂದೇಶದಂತೆ ನಮ್ಮ ಕೆಲಸವನ್ನು ನೈತಿಕತೆ ಮತ್ತು ನಿಷ್ಠೆಯಿಂದ ಮಾಡಿ ನಮಗೆ ಬಂದ ಫಲವನ್ನು ಅನುಭವಿಸುವುದು ಸುಖದ ಜೀವನ... ಆದರೆ ಇಂದಿನ ಸಾಮಾಜಿಕ ಮನಸ್ಥಿತಿಯಲ್ಲಿ, ನೈತಿಕತೆಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಬೇಕು.... ಆ ಶಕ್ತಿ ಮತ್ತು ಮನಸ್ಥಿತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತಾ.... ನಮಸ್ಕಾರ.



D C Ranganatha Rao

9741128413



    

Comments

  1. ನಾಗೇಂದ್ರ ಬಾಬು29 August 2024 at 10:47

    ವಾಸ್ತು ಶಾಸ್ತ್ರದ ನಿಮ್ಮ ಲೇಖನ ವಾಸ್ತವತೆ
    ಇಂದ ಕೂಡಿದೆ...ನಮ್ಮ ಎಲ್ಲಾ ತೊಂದರೆಗಳಿಗೆ
    ನಾವು ಮೊದಲು ಪರಿಹಾರ ಹುಡುಕುವುದು
    ಜ್ಯೋತಿಷ್ಯ, ವಾಸ್ತು, ಶನಿ ಕಾಟ, ನಾಗ ದೋಷ,
    ಇತ್ಯಾದಿ.....ಆದರೆ ಈ ಎಲ್ಲಾ ವಿಷಯಗಳಲ್ಲಿ
    ಆಳವಾದ ಜ್ಞಾನ ಇಲ್ಲದೆ...ಇತ್ತ ಬಿಡಲೂ ಆಗದೆ ತೊಳಲಾತ್ತಿದ್ದೇವೆ...ವೈದ್ಯರಿಂದ ಪುರೋಹಿತರ ತನಕ ಎಲ್ಲರೂ ಹಣದ ಹಿಂದೆ
    ಬಿದ್ದಿರುವಾಗ...ಜ್ಞಾನ ಹಾಗೂ ವಿಜ್ಞಾನ ಎರಡು
    ದೋಣಿ ಮೇಲೆ ಕಾಲಿಟ್ಟು ಪ್ರಯಾಣಿಸುತ್ತಿದ್ದೇವೆ ಅನಿಸುತ್ತಿದೆ
    ಯಾವುದೇ ವಿಷಯವನ್ನು ನಿಮ್ಮ ಸ್ವಂತ ಅನುಭವಗಳೊಂದಿಗೆ ಸರಳವಾಗಿ ವಿವರಿಸುವ ನಿಮ್ಮ ಲೇಖನ ಸೊಗಸಾಗಿದೆ
    ಬಾಬು

    ReplyDelete
  2. ತಮ್ಮ ವಾಸ್ತು ಶಾಸ್ತ್ರ ಮತ್ತು ವಸ್ತು ಸ್ಥಿತಿ ಶೀರ್ಷಿಕೆಯು ಉತ್ತಮವಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು.ಈ ಶೀರ್ಷಿಕೆ ಯಲ್ಲಿ ಫ್ಯಾಕ್ಟರಿ ಕಟ್ಟುವ ಸಂದರ್ಭದಲ್ಲಿ ಬಾವಿ ತೆಗೆಸಲು ಆದ ಅನುಭವ,ದೊಡ್ಡಜಾಲ ಹಳ್ಳಿಯಲ್ಲಿರುವ ಬಾವಿಗಳಲ್ಲಿ ಇರುವ ನೀರಿನ ಅನುಭವ,ತಮ್ಮ ಮನೆ ಕಟ್ಟುವಾಗ ಪಾಲಿಸಿದ ವಾಸ್ತು ಶಾಸ್ತ್ರದ ಅನುಭವ, ಭಾರತ ದೇಶದ ವಾಸ್ತು ಶಾಸ್ತ್ರದ ಸ್ಥಿತಿಗತಿ ಹಾಗೂ ಕೊನೆಯದಾಗಿ ವಾಸ್ತು ಶಾಸ್ತ್ರದ ಬಗ್ಗೆ ತಮ್ಮ ಸಂದೇಶ ಬಹಳ ಚೆನ್ನಾಗಿ ವಿವರಣೆ ನೀಡಿರುತ್ತೀರಿ.ಮನೆಗಳನ್ನು ಕಟ್ಟುವಾಗ ಇತ್ತೀಚೆಗೆ ವಾಸ್ತುಶಾಸ್ತ್ರ ಪಾಲನೆ ಹಾಗೂ ಡೋಂಗಿ ತಜ್ಞ ರ ದುರುಪಯೋಗ ಹೆಚ್ಚಿಗೆ ಯಾಗುತ್ತಿರುವುದು ಕಂಡುಬಂದಿದೆ.ನಮ್ಮ ಊರಿನ ಕೇರಿಯಲ್ಲಿ ಮನೆಗಳು ಇದುರು-ಬದರು ಅಂದರೆ ಒಂದು ಕಡೆಯ ಬಾಗಿಲು ಉತ್ತರಕ್ಕೆ ಇದ್ದರೆ ಇನ್ನೊಂದು ಸಾಲಿನ ಮನೆಗಳು ಬಾಗಿಲು ದಕ್ಷಿಣಕ್ಕೆ ತಲೆ ತಲಾಂತರದಿಂದ ಕಟ್ಟಲ್ಪಟ್ಟಿದೆ.ಯಾವುದೇ ವಾಸ್ತು ಪರಿಗಣಿಸಿರುವುದಿಲ್ಲ.ಎಲ್ಲಾ ಚೆನ್ನಾಗಿ ಸಂಸಾರ ಗಳು ನಡೆದಿವೆ.ಇತ್ತೀಚೆಗೆ ಬೆಂಗಳೂರಿನಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಇಡೀ ಮನೆಯನ್ನು ಒಡೆದಿರುವುದನ್ನು ಕೇಳಿರುತ್ತೇನೆ.ಇದರಿಂದ ಹಣ ದುಂದುವೆಚ್ಚ ವಾಗುತ್ತದೆ.ಹಣೆಬರಹದಲ್ಲಿ ಕೆಟ್ಟದು ಆಗುವುದನ್ನು ವಾಸ್ತು ಶಾಸ್ತ್ರ ತಡೆಯಲು ಸಾಧ್ಯವಿಲ್ಲ.ನಮ್ಮನಂಬಿಕೆಗಳು ಬದಲಾಗಬೇಕು.ಮತ್ತೊಮ್ಮೆಧನ್ಯವಾದಗಳು.ಕೆ.ಜೆ.ದೇವೇಂದ್ರಪ್ಪ.

    ReplyDelete
  3. ಮಾನ್ಯರೇ,

    ನನಗೆ ವಾಸ್ತುಶಾಸ್ತ್ರದ ಬಗ್ಗೆ ಅರಿವಿಲ್ಲ.ಮತ್ತು ನಂಬಿಕೆಯೂ ಇಲ್ಲ.ಆಗೆಂದು ಹೀಗಳೆಯುವುದೂ ಇಲ್ಲ. ಅವರವರ ಭಕುತಿಗೆ, ಅವರವರ ಭಾವಕ್ಕೆ ಬಿಟ್ಟಿದ್ದು ಈ ವಾಸ್ತು.

    ಆದರೂ ಒಂದು ಮನವಿ ಏನೆಂದರೆ ವಾಸ್ತುವನ್ನು ನಿರ್ಮಾಣದ ವೇಳೆಯೇ ಅನುಸರಿಸುವುದು ಒಳಿತು. ನಿರ್ಮಾಣದ ನಂತರ ಒಡೆಯುವುದು,ಬದಲಿಸುವುದು ಸೂಕ್ತವಲ್ಲ.

    ಲೇಖನ ವಾಸ್ತುಶಾಸ್ತ್ರದ ಬಗ್ಗೆ ಸುದೀರ್ಘವಾದ ಆಯಾಮದಿಂದ ಕೂಡಿದೆ. ಲೇಖಕರಿಂದ ಹೀಗೆ ಬೇರೆಬೇರೆ ವಿಷಯಗಳನ್ನು ಅರಿಯುತ್ತಾ ಸಾಗೋಣ.

    ಅಂದಹಾಗೆ ನಾನು ಹಾಗೂ ನನ್ನ ಪತ್ನಿ ನಮ್ಮ ಇಚ್ಛೆಯ ವಿನ್ಯಾಸದಲ್ಲಿ ಮನೆ ಕಟ್ಟಿದೆವು. ನಂತರ ತಿಳಿಯಿತು, ಅದೂ ಪಕ್ಕಾ ವಾಸ್ತುಪ್ರಕಾರವೇ ಇದೆಯಂತೆ.ದೈವೇಚ್ಛೆ.

    ವಂದನೆಗಳು,

    ಗುರುಪ್ರಸನ್ನ
    ಚಿಂತಾಮಣಿ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ