ತುಂಬು ಕುಟುಂಬ - ಸುವರ್ಣ ಕಾಲ
ನನ್ನ ಪರಿಚಯದ ಶ್ರೀಮತಿ ಸುಜಾತ ರೆಡ್ಡಿ ಅವರು... ನನ್ನ ಲೇಖನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುತ್ತಾರೆ, ಜೊತೆ ಜೊತೆಗೆ ಅವರಿಗೆ ನೆನಪಾದ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಕೆಲವೊಂದು ನನ್ನನ್ನು ಉಬ್ಬಿಸುತ್ತವೆ... ಹುರಿದುಂಬಿಸುತ್ತವೆ.
ಇಂದು ಅವರ ಮೆಸೇಜ್ ನೋಡುವಾಗ ಅನಿರೀಕ್ಷಿತವಾಗಿ ಕಣ್ಣಿಗೆ ಬಿದ್ದ ಅವರ ಮದುವೆಯ ಸಂದರ್ಭ. ..ಹಾಗೂ Joint family ಪದವೇ ನನ್ನ ಲೇಖನಕ್ಕೆ ಸ್ಫೂರ್ತಿ.
Joint family ಎನ್ನುವ ಪದ ವಿಶೇಷವೇ. ಚಿಕ್ಕಂದಿನಲ್ಲಿ ನಮಗೆ ತಿಳಿಯದು. ಹಳ್ಳಿಯ ಎಲ್ಲ ಮನೆಗಳಲ್ಲೂ ಜನವೋ ಜನ... ನನಗೆ ನೆನಪಿರುವಂತೆ, ಒಂದೇ ಮನೆಯಲ್ಲಿ ಗಂಡ ಹೆಂಡತಿ ಇದ್ದದ್ದು... ಅವರಿಗೆ ಮಕ್ಕಳಿರಲಿಲ್ಲ ಎಂಬ ನೆನಪು.
ಬೆಂಗಳೂರಿಗೆ ಬಂದ ನಂತರವೇ ಕೆಲ ದಿನ ನಾವು ಅಣ್ಣ ತಮ್ಮಂದಿರು, ಜೊತೆಗೆ ನನ್ನಕ್ಕ ಗಿರಿಜಾಂಬ ಮಾತ್ರ ಮನೆಯಲ್ಲಿದ್ದದ್ದು... ಅದು ಒಂದು ತರಹ branch office ಇದ್ದ ಹಾಗೆ.
ನಂತರ, ದೊಡ್ಡಜಾಲ ಬಿಟ್ಟು ಅಪ್ಪ, ಅಮ್ಮ ಬೆಂಗಳೂರಿಗೆ ಬಂದಮೇಲೆ, ಬೆಂಗಳೂರೇ head office ಆಯ್ತು.
ಕೂಡು ಕುಟುಂಬದ ಭಾಗವಾಗಿದ್ದು... ಅನುಭವಿಸಿದ ಸುಂದರ ಕ್ಷಣಗಳು ಅವಿಸ್ಮರಣೀಯ.
ಅಕ್ಕಂದಿರುಗಳ ಮದುವೆಯಾಗಿ ಅವರುಗಳ ಜೀವನ ಸಾಗುತ್ತಿದ್ದು... ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಹೆಣ್ಣಿಲ್ಲ... ಬರೀ ಗಂಡಸರು... ಇದಾದ ನಂತರದ ತಿರುವು... ಒಬ್ಬರ ನಂತರ ಒಬ್ಬರು, ನಮ್ಮಣ್ಣಂದಿರಿಬ್ಬರ ಮದುವೆ... ಮನೆಗೆ ಅತ್ತಿಗೆಯರು. ನಾವಿದ್ದ ಮನೆ ಚಿಕ್ಕಮಾವಳ್ಳಿ ಶಾನ್ ಭೋಗ್ ಕೃಷ್ಣಪ್ಪ ಗಲ್ಲಿಯಲ್ಲಿ.
ಸಾಮಾನ್ಯವಾಗಿ ರಾತ್ರಿ ಒಂಬತ್ತು ಗಂಟೆಗೆ ನಾವೆಲ್ಲ ಒಟ್ಟಿಗೆ ಕೂತು ಊಟ ಮಾಡುತ್ತಿದ್ದದ್ದು. ಅದಾಗಲೇ ಅಪ್ಪ ರಾತ್ರಿ ಊಟ ಮಾಡುತ್ತಿರಲಿಲ್ಲ. ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಇಬ್ಬರು ಅತ್ತಿಗೆಯರು ಒಟ್ಟಿಗೆ ಊಟಕ್ಕೆ ಕೂತರೆ... ಅಮ್ಮ ಬಡಿಸುವುದು. ನಮ್ಮ ಊಟದ ಮಧ್ಯೆ ಮಾತು ಮಾತು... ವಿಷಯ ಆ ದೇವರಿಗೇ ಗೊತ್ತು.. ನಮ್ಮ ತಟ್ಟೆಗಳನ್ನು ನಾವೇ ತೊಳೆಯುವುದು ರೂಢಿ... ಗೋಮ ಹಚ್ಚುವುದು, ಮುಂದಿನ ಪಾತ್ರೆ ಪಡಗದ ಕೆಲಸ ಅತ್ತಿಗೆಯರದು. ನಮ್ಮ ಮಾತು ಮುಗಿಯದ ಲಕ್ಷಣ ಕಾಣದಿದ್ದಾಗ ಅವರು ಗೋಮ ಹಚ್ಚಲು ಬಂದರೆ... ಗೋಮ ಬಂತು ಗೋಮಾ ಎಂದು ನಾವು ತಟ್ಟೆಯನ್ನು ಕೈಯಲ್ಲಿ ಹಿಡಿಯುವುದು... ಅವರ ಕೆಲಸ ಅವರು ಮುಗಿಸಿ ಹೋದರೂ ನಮ್ಮ ಮಾತು ಇನ್ನು ಮುಂದುವರಿಯುತ್ತಿತ್ತು... ತಟ್ಟೆ ಕೈಯಲ್ಲೇ.... ಆ ದಿನಗಳ ಊಟದ ಸಮಯ ಖುಷಿಯೋ ಖುಷಿ. ಇನ್ನು ನಾನೇ ಚಿಕ್ಕವನಾಗಿದ್ದರಿಂದ, ನಂತರ ಅಂಗಡಿಗೆ ಹೋಗಿ ವೀಳ್ಳೇದೆಲೆ ತರುವುದು ನನ್ನ ಕೆಲಸ.. ಎಷ್ಟೋ ಸಲ ನನ್ನಿಚ್ಚೆಗೆ ವಿರುದ್ಧವಾಗಿ.
ನಮ್ಮ ಮನೆಯ ಮೊದಲ ಮೊಮ್ಮಗುವಾಗಿ ಬಂದ ರವಿ, ಮನೆಯ ಕಣ್ಣಿನ ಗೊಂಬೆ.... ಎಲ್ಲರ ಕೈಲೂ ಅವನೇ... ಸಾಧು ಸ್ವಭಾವದ ಹುಡುಗ( ಆಗ, ಈಗ ಹಾಗಿಲ್ಲ).. ಮಧ್ಯಾಹ್ನಗಳು ನಾನು ಮನೆಯಲ್ಲಿ ಇರುತ್ತಿದ್ದ ಕಾರಣ ಅವನು ನನ್ನ ಜೊತೆ... ಒಂದು ಮಧ್ಯಾಹ್ನ ಉರಿ ಬಿಸಿಲು.. ಏನೋ ಆಟದ ಮಧ್ಯೆ... ಒಂದು ಆಟಿಕೆ ಅಂಗಳಕ್ಕೆ ಎಸೆದು.. ಅವನು ತರಲು ಹೋದಾಗ.. ಬಿಸಿಲಿನ ಝಳಕ್ಕೆ ಕಾಲು ಸುಟ್ಟು ಅಲ್ಲೇ ತಕಥೈ.. ಜೊತೆಗೆ ಅಳು... ಓಡಿ ಅವನನ್ನು ಎತ್ತಿ ಮುದ್ದಿಸಿ ಅಂಗಾಲಿಗೆಲ್ಲ ಮುತ್ತು ಕೊಟ್ಟು ಸಮಾಧಾನ ಮಾಡಿದ ಕ್ಷಣಗಳು.. ಕಟುಕ ತನದ್ದಾದರೂ ಖುಷಿ ಕೊಟ್ಟದ್ದು.
ನನ್ನಣ್ಣ ಸತ್ತೀಸಾರ್ ಆಫೀಸಿಗೆ ಹೊರಟಾಗ ಅವನು ಹಿಂದೆ ಬೀಳುವುದು ಒಂದು ವಾಡಿಕೆ. ಅವನನ್ನು ತಪ್ಪಿಸಲು ಜೂಟ್ ಆಟ ಆಡುವುದು.. ಬಾಗಿಲ ಹಿಂದೆ ಅವನು ಬಚ್ಚಿಟ್ಟುಕೊಂಡಾಗ ಅಣ್ಣ ಪರಾರಿ.. ಪಾಪ ಮಗು ತುಂಬಾ ಹೊತ್ತು ಅಲ್ಲಿಯೇ ಕಾಯುತ್ತಿತ್ತು... ಮರೆತು ಹೋಗುತ್ತಿತ್ತು ಸಹ.
ನಂತರದ ಕೆಲ ದಿನಗಳಲ್ಲಿ ಬಂದಿದ್ದು ಎರಡನೆಯ ಅಣ್ಣನ ಮಗು ಮುರಳಿ... ಇವನು ಅಸಾಧ್ಯ ತುಂಟ... ಕೋಪ ಬಂದರೆ ಯಾರನ್ನು ಹೇಗೆ ಬೇಕಾದರೂ ಕಚ್ಚುವವನು.... ಅದೇಕೋ... ರಾತ್ರಿ ಸರಿ ಹೊತ್ತು... ಇವನಿಗೆ ಬೆಳ್ಳಂಬೆಳಗು ಒಂದೇ ಸಮ ಅಳು... ಆ ಸರಿ ರಾತ್ರಿಯಲ್ಲಿ, ಅವನನ್ನು ಎತ್ತಿಕೊಂಡು ರಸ್ತೆಯಲ್ಲ ಓಡಾಡಿಸುವುದು... ನಿದ್ದೆ ಬರುವ ತನಕ... ಅದಕ್ಕೆ ನಾನೇ ಬೇಕು. ಇಂತಹ ಮುರುಳಿ ಒಂದು ದಿನ ವಿಕ್ಟೋರಿಯಾ ಆಸ್ಪತ್ರೆ ಬಳಿ ಒಂಟಿಯಾಗಿ ಸಿಕ್ಕ.... ಬಹುಶಃ ಅವನಾಗ 4/5 ನೇ ಕ್ಲಾಸ್ ಇರಬಹುದು.... ವಿಚಾರಿಸಿದಾಗ... "ನಾಯಿ ಕಚ್ಚಿತು.. ಹೊಕ್ಕಳು ಸುತ್ತ 14 ಇಂಜೆಕ್ಷನ್ ಕೊಡ್ತಾರೆ ... ಅದು ತಗೊಳ್ಳೋಕೆ ಬಂದಿದ್ದೇನೆ"... ನಾಯಿ ಅದೃಷ್ಟ ಮಾಡಿತ್ತು... ಮುರಳಿ ಅದನ್ನು ಕಚ್ಚಲಿಲ್ಲ.
ಒಂದು ಸಮಾರಂಭದ ಸಮಯ ಮನೆಗೆ ಅಕ್ಕಂದಿರು ಬಂದಿದ್ದು.. ಮಾತು ಮಾತು...ರಾತ್ರಿ ಒಂದು ಸಾಲಿನಲ್ಲಿ ಸಾಲಾಗಿ ಅವರು... ಮತ್ತೊಂದು ಸಾಲು ಅವರ ತಲೆಯ ಬಳಿ ನನ್ನ ತಲೆ.... ಏನೋ ಮಾತು.... ಹಾಗೆಯೇ ನಿದ್ದೆ... ಸುಂದರ ಸುಮಧುರ ಕ್ಷಣಗಳು.
ಕಾರಣ ಏನೋ ತಿಳಿಯದು... ಅಂದು ಮನೆಯಲ್ಲಿದ್ದದ್ದು ನಾನು, ಅತ್ತಿಗೆ ಮತ್ತು ಮಗು ರವಿ... ಯಥಾಪ್ರಕಾರ ರವಿ ನನ್ನ ಹಿಂದೆ ಮುಂದೆ... ಇನ್ನೂ ಮಡಿಯ ಪ್ರಭಾವ ಇದ್ದಕಾಲ... ಅತ್ತಿಗೆ ಒಳಗಿಲ್ಲ...
ದೇವರ ಮನೆ ಅಡಿಗೆಯ ಮನೆಯ ಒಂದು ಭಾಗವಾಗಿದ್ದದ್ದು... ರವಿ ಬಂದು ಅಲ್ಲಿ ಕಕ್ಕ ಮಾಡಿದ... ಅದನ್ನು ತೆಗೆಯುವ ಜವಾಬ್ದಾರಿ ನನ್ನ ಮೇಲೆ... ಹೇಗೋ ನಿಭಾಯಿಸಿದ್ದು ಸತ್ಯ.
ಅದೇ ಸಮಯದಲ್ಲಿ ನನ್ನ ಸತ್ತಿ ಸರ್ ಸರ್ಕಾರಿ ಕೆಲಸಕ್ಕೆ ಸೇರಿದ್ದು.. ನನಗೆ ಪ್ರತಿ ತಿಂಗಳು ಹತ್ತು ರೂಪಾಯಿ ಕೊಡುತ್ತಿದ್ದರು...
ಟೌನ್ ಹಾಲ್ ಎದುರಿಗಿದ್ದ ಹ್ಯಾಂಡ್ ಲೂಮ್ ಹೌಸ್ ನಲ್ಲಿ ಸುಮಾರು ಆರು ರೂಪಾಯಿ ಕೊಟ್ಟು ಶರ್ಟ್ ಪೀಸ್ ತರುವುದು...... ಹೊಲಿಗೆಯ ಖರ್ಚು ಮತ್ತದೇ ಸತ್ತಿ ಸಾರ್.... ಎಲ್ಲ ಬಟ್ಟೆಗಳನ್ನು ನಾವಿಬ್ಬರೂ ಹೊಂದಿಸಿಕೊಂಡು ಹಾಕಿಕೊಳ್ಳುತ್ತಿದ್ದದ್ದು... ಎಷ್ಟೋ ಬಟ್ಟೆ ಇದೆ ಎನಿಸುತ್ತಿತ್ತು.
ನನ್ನ ಓದು ಮುಗಿದು... ಕೆಲಸಕ್ಕಾಗಿ ಬೇರೆ ಊರಿಗೆ ಹೋದಾಗ ನನ್ನ ಕೂಡು ಕುಟುಂಬದ ಅನುಭವ ಕೊನೆಗೊಂಡಿತು.... ಕಾಲಕ್ರಮೇಣ ಲೋಕಾ ರೂಢಿಯಂತೆ ನಮ್ಮ ಕೂಡು ಕುಟುಂಬವೂ... ಚಿಕ್ಕದಾಯಿತು.
ಇಂದಿಗೂ ಅಣ್ಣಂದಿರ, ಅಕ್ಕಂದಿರ ಮಕ್ಕಳು... ಬೆಳೆದ ಸಂಸಾರ.... ಸೊಸೆ ಅಳಿಯಂದಿರು ಮೊಮ್ಮಕ್ಕಳು ಎಲ್ಲರೂ ತುಂಬಾ ಪ್ರೀತಿಯಿಂದ ಒಡನಾಡುತ್ತಾರೆ... ಎನ್ನುವುದು ತುಂಬಾ ಹೆಮ್ಮೆಯ ಸಂಗತಿ.
ಈಗ ಕುಟುಂಬ ಎಂದರೆ ಗಂಡ ಹೆಂಡತಿ ಒಂದು ಅಥವಾ ಎರಡು ಮಕ್ಕಳು ಮಾತ್ರ. ಹಾಗಾಗಿ ಈಗಿನ ಮಕ್ಕಳಿಗೆ ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಸೋದರತ್ತೆ, ಅಣ್ಣ, ಅತ್ತಿಗೆ, ಅಕ್ಕ, ಭಾವ, ಸೋದರ ಮಾವ... ಹೀಗೆ ಸಂಬಂಧಗಳ ಅರಿವೇ ಇಲ್ಲದಾಗಿದೆ.
ಈಗೀಗ ದೊಡ್ಡ ಸಂಸಾರಗಳು ಅಪರೂಪ.... ಯಾಕೋ ಕಾಣೆ, ಒಟ್ಟಾಗಿರಲು ಬೇಕಾದ ಸಹನೆ ಹೊಂದಾಣಿಕೆಯ ಗುಣ ತಕ್ಕಮಟ್ಟಿನ ನಿಸ್ವಾರ್ಥಭಾವ ಕಡಿಮೆಯಾಗುತ್ತಿದೆ... ನಾನು ನನ್ನದು ಎನ್ನುವ ಭಾವ ಜಾಸ್ತಿಯಾಗಿ... ನಮ್ಮವರು ಎಂದಾಗ ಗಂಡ ಹೆಂಡತಿ ಮಕ್ಕಳಿಗಷ್ಟೇ ಸೀಮಿತವಾಗುತ್ತಿದೆ ಎನ್ನುವುದು ಕಟು ಸತ್ಯ. ಹಿಂದೆ ಮನೆಗೆ ಒಬ್ಬ ಹಿರಿಯ ಯಜಮಾನ ಇರುತ್ತಿದ್ದ... ಯಜಮಾನನಾಗಲು ಇರಬೇಕಾಗಿದ್ದ ನಿಸ್ವಾರ್ಥ ಭಾವ, ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಗುಣ.. ಇವು ಮನೆಯನ್ನು ಮುನ್ನಡೆಸಲು ಪೂರಕವಾಗಿತ್ತು.... ಮನೆಯವರೆಲ್ಲರೂ ಯಜಮಾನನಿಗೆ ಗೌರವ ಕೊಡುತ್ತಿದ್ದರು ತಾರತಮ್ಯ ತುಂಬಾ ಕೆಳ ಮಟ್ಟದಲ್ಲಿ ಇರುತ್ತಿತ್ತು. ಒಂದಷ್ಟು ಭಿನ್ನಾಭಿಪ್ರಾಯಗಳು ಬಂದರೂ ಸಹ ಅದು ಸುಲಭವಾಗಿ ಬಗೆಹರಿಯುತ್ತಿತ್ತು. ಕಾಲಕ್ರಮೇಣ ಓದು, ಒಳ್ಳೆಯ ಕೆಲಸದ ಅವಕಾಶಗಳು ಸಿಕ್ಕಾಗ.. ದೂರ ಹೋಗುವುದು ಅನಿವಾರ್ಯ... ಹಾಗೆಯೇ ಒಂದೇ ಕಡೆ ಇದ್ದರೆ ಆಚೆ ಸಂಬಳದ ಕೆಲಸ ಮಾಡುವವರಿಗೂ ಸಂಬಳವಿಲ್ಲದ ಕುಲಕಸುಬು ಮಾಡುವವರಿಗೂ ಸಂಪಾದನೆಯ ಅಂತರ ಜಾಸ್ತಿಯಾಗಿ, ಬೇರೆ ಬೇರೆ ಪರಿಸರದಿಂದ ಬಂದ ಸೊಸೆಯರ ಚಿಂತನೆಗಳು ಹೊಂದಾಣಿಕೆಯಾಗದ್ದೂ ಒಡಕು ಮೂಡಲು ಕಾರಣವಾಗಿರಬಹುದು.
ಈಗಂತೂ ಒಂದು... ಎರಡು ಮಕ್ಕಳಿರುವ ಕಾರಣ ದೊಡ್ಡ ಕುಟುಂಬದ ಅವಕಾಶವೇ ಇಲ್ಲ.... ಅದು ಚರಿತ್ರೆಯ ಭಾಗವಾಗಬಹುದೇನೋ ಎನಿಸುತ್ತೆ.
ಹತ್ತಿರದಿಂದ ನಾನು ಕಂಡ ದೊಡ್ಡ ಸಂಸಾರಗಳು... ಚಿಕ್ಕಬಳ್ಳಾಪುರದ ನಮ್ಮಮ್ಮನ ತವರು ಮನೆ... ಅಜ್ಜಿ ತಾತ, ಸೋದರ ಮಾವಂದಿರು... ಅತ್ತೆಯರು ಮಕ್ಕಳು, ಜೊತೆಗೆ ಓದಲು ಇರುತ್ತಿದ್ದ ಹೆಣ್ಣು ಮಕ್ಕಳ ಮಕ್ಕಳು... ನವರಾತ್ರಿಯ ಸಂಭ್ರಮ... ಚಿಕ್ಕವನಾಗಿ ಅದನ್ನು ಸಂಭ್ರಮಿಸಿದ ಕ್ಷಣಗಳು ಹಸಿರು.
ಇನ್ನೊಂದು ನನ್ನ ಮಾವನ ಮನೆ... ಅಲ್ಲಿಯೂ.... ನನ್ನ ಮಾವ ಹಾಗೂ ಅವರ ಅಣ್ಣನ( ದೊಡ್ಡಪ್ಪ ಎಂದು ನಾವು ಪ್ರೀತಿಯಿಂದ ಕರೆಯುತ್ತಿದ್ದ... ಈಚೆಗಷ್ಟೇ ಕಣ್ಮರೆಯಾದ ಎಚ್ ಪಿ ನರಸಿಂಹಮೂರ್ತಿಯವರು) ಮಧ್ಯೆ ಇದ್ದ ಹೊಂದಾಣಿಕೆ.... ಅದರಲ್ಲೂ ತಂಗಿಯರ ಮದುವೆ, ಬಾಣಂತನ.. ಮುಂತಾದ ಜವಾಬ್ದಾರಿಗಳನ್ನು ನಿರ್ವಹಿಸಿದ ಬಗೆ... ಮಕ್ಕಳ ಓದು, ಮದುವೆ ಮುಂಜಿ ಹೀಗೆ ಸಂಸಾರದ ಕರ್ತವ್ಯಗಳನ್ನು... ಇದ್ದ ಸೀಮಿತ ವರಮಾನದಲ್ಲೇ ನಿಭಾಯಿಸಿದ ಪರಿ ನನಗೆ ತುಂಬಾ ಮೆಚ್ಚುಗೆ.
ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತು ಒಪ್ಪಲು ಮೇಲಿನ ಎರಡು ಉದಾಹರಣೆ ಸಾಕು.
ತರಾಸು ಅವರ ಕಾದಂಬರಿಯ ಆಧಾರಿತ ಚಲನಚಿತ್ರ " ಚಂದವಳ್ಳಿಯ ತೋಟ"... ನನ್ನ ಮೇಲೆ ತುಂಬಾ ಪ್ರಭಾವ ಬೀರಿದ್ದು.... ಕೂಡು ಕುಟುಂಬದ ಅವನತಿಗೆ ಕಾರಣಗಳನ್ನು ತುಂಬಾ ಚೆನ್ನಾಗಿ ಬಿಂಬಿಸಿದ ಚಿತ್ರ.
ಹಾಗೆ "ಒಂದಾಗಿ ಬಾಳುವಾ.. ಒಲವಿಂದ ಆಳುವಾ" ಎನ್ನುವ ಜೇನುಗೂಡು ಚಿತ್ರದ ಹಾಡು ಚೆನ್ನ.
ತುಂಬು ಕುಟುಂಬದಲ್ಲಿ ಬೆಳೆದ ಮಕ್ಕಳು ಸಹಜವಾಗಿ ಒಂದಷ್ಟು ಹೊಂದಾಣಿಕೆಯನ್ನು ಬೆಳೆಸಿಕೊಂಡಿರುತ್ತಾರೆ... ಜೊತೆಗೆ ಹಂಚಿಕೊಳ್ಳುವ ಅಭ್ಯಾಸವು ಆಗಿರುತ್ತದೆ. ಅವರಿಗೆ ಅಪ್ಪ ಅಮ್ಮನಲ್ಲದೆ ಬಹುಜನರ ಪ್ರೀತಿಯು ಸಿಕ್ಕಿ... ವ್ಯಕ್ತಿತ್ವ ಅರಳಲು ಸಹಾಯವಾಗುತ್ತದೆ.
ಎಲ್ಲಾ ವಿಷಯಗಳಲ್ಲೂ ಇರುವಂತೆ ಕೂಡು ಕುಟುಂಬದಲ್ಲೂ ಅನುಕೂಲಗಳು ಅನಾನುಕೂಲಗಳು ಇರುವುದು ಸಹಜ... ಆದರೆ ಅನುಕೂಲಗಳೇ ಜಾಸ್ತಿ ಎಂದು ನನ್ನ ಬಲವಾದ ನಂಬಿಕೆ. ಚಿಕ್ಕ ಕುಟುಂಬಗಳಲ್ಲಿ.... ಅದರಲ್ಲೂ ಅಪ್ಪ ಅಮ್ಮ ಇಬ್ಬರೂ ಕೆಲಸ ಮಾಡುವಾಗ ಮಕ್ಕಳು ಒಂಟಿಯಾಗುವ ಸಾಧ್ಯತೆ ಹೆಚ್ಚು... ಅದು ಅವರ ಬೆಳೆವಣಿಗೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಈಗಿನ ಸನ್ನಿವೇಶದಲ್ಲಿ.... ಮೊಬೈಲ್ ಫೋನ್ ... ಅವರನ್ನು ಇನ್ನಷ್ಟು ಒಂಟಿ ಮಾಡಿ... ಹಾದಿ ತಪ್ಪುವ ಸಾಧ್ಯತೆಗಳು ತುಂಬಾ ಇವೆ.
ಮಕ್ಕಳು ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ.... ಸಾಕಷ್ಟು ಸಮಯ ಕೊಡಲಾಗದ ಅಮ್ಮಂದಿರು.. ಪಾಪಪ್ರಜ್ಞೆಯಿಂದಲೋ, ಪ್ರೀತಿಯ ತೋರಿಕೆಗಾಗೋ ...ಮಕ್ಕಳಿಗೆ ವಸ್ತು ಸಂಬಂಧಿತ ಕೊಡುಗೆಗಳಿಂದ ಆ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಇದು ಮಕ್ಕಳು ಜನಗಳೊಂದಿಗೆ ಬೆರೆಯುವ ಸ್ವಭಾವವನ್ನು ಮರೆಯುವಂತೆ ಮಾಡಿದೆ.
ಹೆಂಗಸರ ಮುಖ್ಯ ಜವಾಬ್ದಾರಿಯಾದ ಅಡಿಗೆಯ ಮನೆಯ ಕೆಲಸ... ಕೂಡು ಕುಟುಂಬದಲ್ಲಿ ಕೆಲಸ ಜಾಸ್ತಿಯಾದರೂ... ಕೆಲಸ ಮಾಡುವ ಕೈಗಳು ಜಾಸ್ತಿಯಾಗಿ ಕೆಲಸ ಹಂಚಿ ಹೋಗುತ್ತದೆ.... ಒಂಟಿ ಹೆಣ್ಣು ಎಲ್ಲ ಕೆಲಸವನ್ನು ತಾನೇ ಮಾಡಬೇಕು... ಇದು ಅವಳನ್ನು ದೈಹಿಕವಾಗಿ... ಕೆಲವು ಸಲ ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸುತ್ತದೆ.
ನಮ್ಮ ಕಾನೂನುಗಳಲ್ಲೂ.... ಅದರಲ್ಲೂ ಆದಾಯ ತೆರಿಗೆ ವಿಚಾರದಲ್ಲಿ... ಅವಿಭಕ್ತ ಕುಟುಂಬಕ್ಕೆ HUF - hindu undivided family ಗೆ ವಿಶೇಷ ಸ್ಥಾನಮಾನವಿದೆ.
ಸಂಸಾರ ಸಾಗರ ಎನ್ನುವ ಒಂದು ಮಾತಿದೆ. ನಿಜ ಅದು ಸಾಗರವೇ... ಕಪ್ಪೆ ಚಿಪ್ಪಿದೆ, ಹವಳವಿದೆ, ವಿಶೇಷ ಖನಿಜಗಳಿವೆ, ಉಪ್ಪಿದೆ, ವಿಷದ ಮೀನೂ ಇದೆ. ಯಾವುದನ್ನು ಹೇಗೆ, ಎಷ್ಟು ಮತ್ತು ಯಾವ ಸಮಯದಲ್ಲಿ ಪಡೆಯಬೇಕು ಎಂಬ ನಿರ್ಧಾರವನ್ನು ಮಾಡಿದ್ದೇ ಆದಲ್ಲಿ ಅದು ಸಾಗರದಷ್ಟು ಸಂತೋಷವನ್ನು ಕೊಡಬಲ್ಲದು... ಎಡವಟ್ಟಾದರೆ ಸಂಸಾರಂ ಸಾಗರಂ ದುಃಖಂ... ಎಂಬ ಮಾತನ್ನು ಪುಷ್ಠೀಕರಿಸುತ್ತದೆ.
ಕೊನೆಯದಾಗಿ, ಇಷ್ಟೆಲ್ಲ ವಿಷಯಗಳು ಕೂಡು ಕುಟುಂಬಗಳ ಅವಸಾನವನ್ನು ಸೂಚಿಸುತ್ತಿದ್ದರೂ... ಬೆಳ್ಳಿ ರೇಖೆಯಂತೆ ನನ್ನ ಕಣ್ಣಿಗೆ ಕಾಣುತ್ತಿರುವುದು... ನನ್ನ ಮಗಳು ಚೈತ್ರ ಸೇರಿರುವ ಕೂಡು ಕುಟುಂಬ... ಹಾಗಾಗಿ ನನ್ನ ಮೊಮ್ಮಗಳು ವಿಸ್ಮಯಳಿಗೆ ಅಕ್ಕ, ಅಪ್ಪ, ಅಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅಜ್ಜಿ, ತಾತ ಹಾಗೂ ಮುತ್ತಜ್ಜಿಯ ಪ್ರೀತಿ, ಆದರ ಹಾಗೂ ಆಶೀರ್ವಾದದ ಭಾಗ್ಯ ಸಿಕ್ಕಿದೆ ಎನ್ನುವುದು.
ಪುಟ್ಟ ಕುಟುಂಬಗಳು ದೊಡ್ಡದಾಗಿ ಬೆಳೆಯಲಿ ಎಂಬ ಆಶಯದೊಂದಿಗೆ...
ಎಲ್ಲರಿಗೂ ನಮಸ್ಕಾರ.
Excellent
ReplyDeleteನಮಸ್ಕಾರ 🙏
ReplyDeleteಲೇಖನ ಓದಲು ತುಂಬಾ ಸೊಗಸು ಮತ್ತು ಕೌತುಕವು ಕೂಡ..! ಇನ್ನಷ್ಟು ಬರೆವಣಿಗೆ ಮುಂದುವರಿಯಲಿ ಸಾರ್..
ಪ್ರೀತಿಯಿಂದ,
ಮಣಿಕಂಠ
Hi Ranga sir. Article is very nice and today's reality that we rarely see joint families. Nowadays money is more powerful than relationship. Hence everybody expects independence. Happy to know Chaitra is enjoying big family environment. Nice writing from you given on any subject. All the best , keeping writing and also walking.
ReplyDeleteನಿಮ್ಮ ಕೋದು ಕುಟುಂಬದ ಬರಹ ನಿಜವಾಗಿಯೂ ಒಪ್ಪಿತವಾದ, ಸಮ್ಮತವಾದ ಒಕ್ಕಣೆ, ಆದರೆ, ಕಾಲಯ ತಸ್ಮೆ ನಮಃ ಎಂಬಂತೆ, ಅವರವರ ಕೆಲಸಗಳಿಗೆ ಅನುಗುಣವಾಗಿ ಬೇರೆ ಸ್ಥಳಗಳಿಗೆ ಹೋಗುವುದು ಅನಿವಾರ್ಯವಾಗಿರುವುದರಿಂದ, ಈಗಿನ ಪರಿಸ್ಥಿತಿಯಲ್ಲಿ ಯಾರನ್ನು ಹೊಣೆ ಮಾಡಲು ಆಗುವುದಿಲ್ಲ. ಆದರೂ ಉತ್ತರ ಭಾರತದವರು ಅದರಲ್ಲೂ ಮಾರವಾಡಿಗಳಲ್ಲಿ ಇಂದಿಗೂ ಕೂಡ ಕುಟುಂಬದ ವ್ಯವಸ್ಥೆಯನ್ನು ಪಾಲಿಸಿಕೊಂಡು ಬಂದಿದ್ದಾರೆ, ನಮ್ಮ ಮಕ್ಕಳಿಗೆ ಉದಾಹರಣೆ ಕೊಡಲು ಸಾಧ್ಯ
ReplyDeleteಅವಿಭಕ್ತ ಕುಟುಂಬ ನಗರದ ಜೀವನದಿಂದ
ReplyDeleteಸಂಪೂರ್ಣವಾಗಿ ಮರೆಯಾಗಿದೆ ಇರುವ ಒಂದೋ, ಎರಡೋ ಮಕ್ಕಳು ವಿದೇಶ ಅಥವಾ ಹೊರ ರಾಜ್ಯಗಳಲ್ಲಿ ನೆಲೆಸಿರುತ್ತಾರೆ
ಗಂಡ ಹೆಂಡತಿ ಒಟ್ಟಾಗಿ ಇರುವುದೇ ಇಂದಿನ
ಕೂಡು ಕುಟುಂಬ....ಬಾತ್ ರೂಂ ಗಳು attach ಆಗುತ್ತಿದೆ...ಮನಸ್ಸುಗಳು detach
ಆಗುತ್ತಿದೆ...ಮನೆಗಳು ಭವ್ಯವಾಗಿದ್ದರೂ....ಮಾತು, ನಗು, ತರಲೆ, ತುಂಟತನ ಇಲ್ಲದೇ ಬದುಕು ನಿರಸವಾಗಿದೆ ...
ಮೊಬೈಲ್ ಎಲ್ಲರ ಆತ್ಮೀಯ ಮಿತ್ರವಾಗಿದೆ
ಕಾಲಯಾ ತಸ್ಮೇನಮಹ
ಬಾಬು