ಚೌರ - ಕ್ಷೌರಿಕ - ಕೇಶ ಶೃಂಗಾರ
ಸಂಜೆ ಮನೆಗೆ ಮರಳುವ ಹೊತ್ತಿಗೆ ನಮ್ಮ ಮನೆಯ ಮುಂದಿನ ಸಾಲಿನಲ್ಲಿ ಒಂದು ಹೊಸ ಬೋರ್ಡ್ ಕಾಣಿಸಿಕೊಂಡಿತು... ಅದರಲ್ಲಿ ಬರೆದದ್ದು... ರಿಶಿ ಬ್ಯೂಟಿ ಸ್ಟುಡಿಯೋ..
ಅಂದರೆ ಅದೊಂದು ಮೂಲತಃ (ನನ್ನ ಚಿಕ್ಕಂದಿನ ಭಾಷೆಯಲ್ಲಿ ಹೇಳುವುದಾದರೆ) ಚೌರದ ಅಂಗಡಿ.
ನಿಜಕ್ಕೂ ಈ ಚೌರದ ವಿಚಾರವಾಗಿ ಆಗಿರುವ ರೂಪಾಂತರ ಆಶ್ಚರ್ಯ ಪಡುವಂಥದ್ದು. ಮರದ ಕೆಳಗೆ, ನಮ್ಮ ಮನೆಯ ಬಳಿ ನಡೆಯುತ್ತಿದ್ದ ಚೌರದ ಕಾರ್ಯಕ್ರಮ ಈಗ ಸುಸಜ್ಜಿತ ಸ್ಟುಡಿಯೋ ವರೆಗೆ ಬಂದು ನಿಂತಿದೆ.
ಒಂದು ಸಮಯವಿತ್ತು... ಅವರನ್ನು ಮುಟ್ಟಬಾರದು...ಮೈಲಿಗೆ, ಸಂಜೆಯ ಹೊತ್ತು ನೆನೆಯಬಾರದು, ಎಲ್ಲಿಯಾದರೂ ಹೊರಟಾಗ ಅವರು ಎದುರಿಗೆ ಬಂದರೆ ಅಪಶಕುನ ಎಂಬ ಭಾವನೆ. ಆದರೆ ಅವರ ಓಲಗದ ನಾದ ಮಾತ್ರ ಎಲ್ಲ ಶುಭ ಸಂದರ್ಭಗಳಲ್ಲೂ ಬೇಕು... ಇದು ಯಾವ ನ್ಯಾಯ... ಅರ್ಥವಾಗದು.
ಈ ವಿಚಾರವಾಗಿ ಶತಾವಧಾನಿ ಗಣೇಶ್ ಅವರು ಹೇಳಿದ ಒಂದು ಘಟನೆ ಕಣ್ಣು ತೆರೆಸುವಂತದು. ಶತಾವಧಾನಿ ಗಣೇಶ್ ಅವರು ಅವರ ತಾತನ ಜೊತೆ ಶೃಂಗೇರಿಯ ಆಗಿನ ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಯವರ ದರ್ಶನಕ್ಕೆ ಹೋಗಿದ್ದರಂತೆ...ಆ ಸಮಯದಲ್ಲಿ ತಾತ ಜಗದ್ಗುರುಗಳಲ್ಲಿ ಒಂದು ಪ್ರಶ್ನೆ ಕೇಳಿದರಂತೆ ..."ಅವರುಗಳು ತೆಲುಗಿನಲ್ಲಿ ಮಾತಾಡುತ್ತಿದ್ದರಂತೆ.. ಇದರ ಕನ್ನಡ ಭಾವಾನುವಾದ "ಕ್ಷೌರ ಮಾಡುವವರನ್ನು ಮುಟ್ಟಿದರೆ ಮೈಲಿಗೆ, ಎದುರಿಗೆ ಬಂದರೆ ಅಪಶಕುನ ಎಂದು ಭಾವಿಸುತ್ತೇವೆ... ಆದರೆ ಅದೇ ಮನುಷ್ಯರು ದೇವರ ಮೆರವಣಿಗೆಯಲ್ಲಿ ನಾದಸ್ವರವನ್ನು ತಾಳ ಡೋಲು ಸಮೇತ, ಬಾರಿಸಿಕೊಂಡು ಎಲ್ಲರ ಮುಂದಿರುತ್ತಾರೆ... ಆಗ ಅಪಶಕುನವಲ್ಲವೇ? ". ಅದಕ್ಕೆ ಸ್ವಾಮಿಯವರು ಕೊಟ್ಟ ಉತ್ತರ ..." ವ್ಯಧವಾ... ಸರಸ್ವತಿಯು ನಾಲಿಗೆಯ ಮೇಲೆ ನಲಿಯುತ್ತಿದ್ದರೆ... ಅಪಶಕುನ, ಮೈಲಿಗೆ ಎಲ್ಲುಂಟು...?"
ಒಂದು ಕಾಲವಿತ್ತು.. ಆಗ ಚೌರ ಮಾಡಿಸಿಕೊಳ್ಳಲು.. ಪಂಚಾಂಗ ನೋಡಿ ದಿನ ನಿರ್ಧರಿಸಲಾಗುತ್ತಿತ್ತು.. ಚೌರ ಮುಗಿದ ನಂತರ.. ಅಮ್ಮ ತುಳಸಿ ಕಟ್ಟೆಯಿಂದ ತಂದ ಮೃತ್ತಿಕೆಯನ್ನು ( ಮಣ್ಣು) ನೀರಿನಲ್ಲಿ ಬೆರೆಸಿ ತಲೆಯಿಂದ ಕಾಲಿನ ತನಕಾ ಸುರಿದು.. ಸ್ನಾನ ಮಾಡಿದ ಮೇಲೆ ಶುಚಿತ್ವ ಎಂಬ ನಂಬಿಕೆ. ಈಗಲೂ ಸ್ನಾನ ಮಾಡಿದರೂ ತುಳಸಿಯ ಮೃತ್ತಿಕೆ ಪಕ್ಕಕ್ಕೆ ಸರಿದಿದೆ.
ಬೆಂಗಳೂರಿಗೆ ಬಂದಮೇಲೆ... ಚೌರ ಮಾಡಿಸಿಕೊಳ್ಳಲು ಅಂಗಡಿಗೆ ಹೋಗಬೇಕಿತ್ತು... ಆಗಿನಿಂದ ಗಮನಿಸಿದಾಗ ಹೆಸರುಗಳು..." ಆಯುಷ್ ಕರ್ಮಶಾಲೆ, ಹೇರ್ ಕಟಿಂಗ್ ಶಾಪ್, ಹೇರ್ ಕಟಿಂಗ್ ಅಂಡ್ ಶೇವಿಂಗ್ ಸಲೂನ್, ನಂತರ ಮೆನ್ಸ್ ಬ್ಯೂಟಿ ಪಾರ್ಲರ್ ಹೀಗೆ ಬದಲಾವಣೆ ಗೊಂಡವು.... ಇನ್ನು ಹೆಣ್ಣು ಮಕ್ಕಳ ಬ್ಯೂಟಿ ಪಾರ್ಲರ್ ನ ವೈವಿಧ್ಯಮಯ ಹೆಸರುಗಳು... ಇದರಲ್ಲಿ ಹರ್ಬಲ್ ಎಂಬ ಪದಕ್ಕೂ ಬಹಳ ಪ್ರಾಮುಖ್ಯತೆ ಬಂದಿದೆ. ಇನ್ನು ಒಳಗಿನ ಅಲಂಕರಿಸಿದ ವಾತಾವರಣ... ಹವಾ ನಿಯಂತ್ರಣ ಇವೆಲ್ಲವೂ ವಿಶೇಷ ಅನುಕೂಲಗಳು. ಆಧುನಿಕ ಹೋಟೆಲ್ ಗಳಲ್ಲಿ ಪಾರ್ಲರ್ ಇರುವುದು ಅನಿವಾರ್ಯ.
ಮುಂಚೆಯೂ ತಲೆ ಕೂದಲಿನ ಜೊತೆಗೆ ಉಗುರು ತೆಗೆಯುವುದು, ತಲೆಗೆ ಎಣ್ಣೆ ಹಚ್ಚಿದ ತಟ್ಟುವುದು ಅವರುಗಳಿಂದಲೇ ನಡೆಯುತ್ತಿತ್ತು... ಈಗಂತೂ ತಲೆಗೆ ಬಣ್ಣ.. ಮುಖದ ಶೃಂಗಾರ... ಅದರಲ್ಲೂ ಹೆಂಗಸರಿಗಂತೂ ಇನ್ನೂ ವೈವಿಧ್ಯಮಯ ಸೇವೆಗಳು.
ಗಂಡಸರು ಸಲೂನ್ ಗೆ ಹೋದರೆ ಸ್ನಾನ ಮಾಡುವುದು ಒಂದು ರೀತಿಯ ಕಡ್ಡಾಯ... ಆದರೆ ಹೆಂಗಸರು ಪಾರ್ಲರ್ ಗೆ ಹೋದರೆ ಇದರಿಂದ ರಿಯಾಯಿತಿ... ಅದು ಹೇಗೆ?
ಹಜಾಮರ (ಒಂದಿನಿತೂ ಅಗೌರವವಿಲ್ಲ) ನಾಣಿಗೆ (ನಾರಾಯಣಪ್ಪ) ನನ್ನನ್ನು ಕಂಡರೆ ಇಷ್ಟ... ಉಡತಿ ಮರಿ ರಂಗಣ್ಣ (ಅಳಿಲು)ಎಂದೇ ಕರೆಯುತ್ತಿದ್ದ. ಅವರ ಮನೆ ನಮ್ಮೂರ ಬಾಗಿಲಿನಲ್ಲೇ ಇತ್ತು. ಶಾಲೆ ..ಊರ ಬಾಗಿಲು ದಾಟಿದ ತಕ್ಷಣ ಇತ್ತು... ಹಾಗಾಗಿ ನಾಣಿಯ ಮನೆಯನ್ನು ಹಾದುಹೋಗುವುದು ಅನಿವಾರ್ಯ. ನಾಣಿಯನ್ನು ಕಂಡರೆ ನನಗೆ ಭಯ... ಅವನು ಮುಟ್ಟಬಾರದು ಎಂದು. ಅವನು... ಹೇಳಿದಂತೆ ನಾನು ಮಾಡದಿದ್ದರೆ.. ಅದು ಹಾಡುವುದಾಗಿರಬಹುದು, ಬಸ್ಕಿ ಹೊಡೆಯುವುದು ಇರಬಹುದು... ನನ್ನನ್ನು ಹಿಡಿದುಕೊಳ್ಳುವ ಹಾಗೆ ಬರುತ್ತಿದ್ದ... ನನಗೆ ಭಯ ಹಾಗೂ ಅಳು ಸಹ... ಎರಡು ಕೈ ಮಧ್ಯದಲ್ಲಿ ನಾನು... ಆದರೆ ಎಂದೂ ನನ್ನನ್ನು ಮುಟ್ಟಿದ ನೆನಪಿಲ್ಲ. ಕೆಲವು ಸಲ ಚೌರ ಮಾಡಕ್ಕೆ ಬಂದಾಗ ಮಾಡ್ತೀನಿ ಅಂತ ಕೈಯನ್ನು ಕತ್ತರಿಯ ರೂಪದಲ್ಲಿ ಆಡಿಸುತ್ತಾ ಕಾಡಿದ್ದು ಇದೆ. ಅವರ ಓಲಗ, ಶ್ರುತಿ ಪೆಟ್ಟಿಗೆ ಹಾಗೂ ಡೋಲು... ಅದನ್ನು ಬಾರಿಸುವಾಗ ಬೆರಳುಗಳಿಗೆ ಹಾಕಿಕೊಳ್ಳುತ್ತಿದ್ದ ಒಂದು ತರಹದ ಟೋಪಿ ನನ್ನ ನೆನಪಿನಲ್ಲಿ ಹಸಿರಾಗಿದೆ.
ನಮ್ಮಪ್ಪ ಪಂಚಾಂಗ ನೋಡಿ ದಿನವನ್ನು ನಿರ್ಧರಿಸಿಯಾದ ಮೇಲೆ.. ನಾವು ಅವರ ಮನೆಯ ಹತ್ತಿರ ಹೋಗಿ ತಿಳಿಸಿ ಬರಬೇಕು... ಜೊತೆಗೆ ಅಂದು ಬೆಳಿಗ್ಗೆ ಮತ್ತೆ ನೆನಪಿಸಬೇಕು. ಹಡಪ ಎಂದು ಕರೆಯುವ ಚರ್ಮದ ಚೀಲದಲ್ಲಿ ತಂದ ಆಯುಧಗಳನ್ನು ಈಚೆಗೆ ಇಟ್ಟಾಗ ನನಗೆ ಒಂದು ರೀತಿಯ ಆತಂಕ. ಕೂದಲನ್ನು ನುಣ್ಣಗೆ ಕತ್ತರಿಸಲು ಉಪಯೋಗಿಸುತ್ತಿದ್ದ ಮಿಷಿನ್.. ಅದನ್ನು ಆಡಿಸುವಾಗ ಬರುತ್ತಿದ್ದ ಚಕಚಕ ಶಬ್ದ, ಕೆಲ ಸಮಯ ಕೂದಲನ್ನೇ ಕಿತ್ತಾಗ ಆಗುತ್ತಿದ್ದ ನೋವು ಕಣ್ಣಲ್ಲಿ ನೀರು ತರಿಸುತ್ತಿತ್ತು. ಸಾಕಷ್ಟು ವರ್ಷಗಳು ನಮ್ಮಪ್ಪನ ತೊಡೆಯ ಮೇಲೆ ಕುಳಿತು... ನಮ್ಮಪ್ಪ ತಲೆಯನ್ನು ಎಡ ಕೈಯಲ್ಲಿ ಭದ್ರವಾಗಿ ಹಿಡಿದು.. ಬಲಗೈಯಲ್ಲಿ ನನ್ನ ಕೆನ್ನೆಯನ್ನು ಹಿಡಿದಾಗ, ನನ್ನ ತಲೆಯ ಮೇಲೆ ಪ್ರಹಾರ ಮಾಡುತ್ತಿದ್ದದ್ದು... ಅತ್ತಾಗ ಕೂದಲು ಬಾಯಿಯೊಳಗೆ ಹೋಗಿ ವಾಂತಿಯಾಗುವ ಹಾಗೆ ಕೆಮ್ಮು ಬಂದದ್ದು ನೆನಪಿದೆ.
ನಂತರದ ದಿನಗಳಲ್ಲಿ.. ನಾನು ಒಂಟಿಯಾಗಿಯೇ ಮಣೆಯ ಮೇಲೆ ಕೂಡುತ್ತಿದ್ದೆ.... ಕೆಲ ಸಮಯ ಅಮ್ಮನ ನಿರ್ದೇಶನದಂತೆ ನನ್ನ ತಲೆ ಕೂದಲು ಕತ್ತರಿಸಲಾಗುತ್ತಿತ್ತು.... ನನಗೆ ಅದು ಯಾವುದೂ ಮುಖ್ಯವಲ್ಲ... ಅಲ್ಲಿಂದ ಬಿಡುಗಡೆ ಮಾತ್ರ ಮುಖ್ಯವಾಗಿತ್ತು.
ಬೆಂಗಳೂರಿಗೆ ಬಂದ ನಂತರ.. ಸಲೂನ್ ನಲ್ಲಿ ಮೈ ಮೇಲೆ ಒಂದು ಬಟ್ಟೆಯನ್ನು ಸುತ್ತಿ... ಕೂದಲು ಕತ್ತರಿಸುತ್ತಿದ್ದರು... ಅಂದಿಗೆ ಅದೇ ವಿಶೇಷ. ದಿನ ಕಳೆದಂತೆ ಆ ಬಟ್ಟೆ ಶುಭ್ರವಾಗಿಲ್ಲ.... ಬೇರೆಯವರಿಗೂ ಅದನ್ನೇ ಉಪಯೋಗಿಸಿದ್ದಾರೆ ಎಂಬುವ ವಿಚಾರ ಹೊಳೆಯಿತು. ಅವರು ಮಾತಾಡುವಾಗ ತಿಳಿದ ವಿಷಯ... ಮಂಗಳವಾರ ರಜಾ ದಿನ ಹಾಗಾಗಿ ಎಲ್ಲ ಬಟ್ಟೆಗಳನ್ನು ಒಗೆದು ಬುಧವಾರ ತರುವುದು ವಾಡಿಕೆ. ಹಾಗಾಗಿ ನಾನು ಬುಧವಾರದಂದು ಕ್ರಾಫ್ ಕಟ್ ಮಾಡಿಸಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡೆ... ಇಂದಿಗೂ ಅದೇ ನಡೆದಿದೆ. ಆದರೆ ಮಂಗಳವಾರದ ರಜಾದಿನದ ಪದ್ಧತಿ ಎಷ್ಟೋ ಕಡೆ ನಿಂತೇ ಹೋಗಿದೆ.
ಸಿಸ಼ರ್ ಕಟ್ ಮಾಡಿಸಿಕೊಂಡರೆ ಹೆಚ್ಚಿಗೆ ದುಡ್ಡು ಕೊಡಬೇಕೆಂದು ತಿಳಿದಾಗ... ಅದು ಬೇಡವೆಂದು ಸಂಕೋಚದಿಂದ ಹೇಳಿದವನು ನಾನು. ಒಂದು ಹಂತದಲ್ಲಿ ಕತ್ತರಿ ಉಪಯೋಗಿಸಿದಾಗ ಎಲ್ಲಿ ಹೆಚ್ಚು ಹಣ ಕೇಳುವನೋ ಎಂಬ ಆತಂಕವು ಇದ್ದ ದಿನಗಳು ಉಂಟು.
ನಮ್ಮ ಅಜ್ಜಿ... ಅಪ್ಪನ ಅಮ್ಮ... ತಲೆಯಲ್ಲಿ ಕೂದಲನ್ನು ಇಟ್ಟುಕೊಂಡಿರಲಿಲ್ಲ... ಹಾಗಾಗಿ ಅವರ ತಲೆಯ ಕೂದಲನ್ನು ಆಗಾಗ್ಗೆ ತೆಗೆಸಿಕೊಳ್ಳುತ್ತಿದ್ದರು... ನನಗೆ ಹೇಳಲಾರದ ಕಸಿವಿಸಿ.... ಜೊತೆಗೆ ನಮ್ಮಜ್ಜಿಯ ಸ್ವಗತ " ಇದರಿಂದ ಮುಕ್ತಿ ಕೊಡೋ ದೇವರೇ..ನಮ್ಮಪ್ಪ".. ಕೇಳಿದಾಗ ದುಃಖವಾಗುತ್ತಿತ್ತು.
ಕೆಲವರಿಗೆ ಮುಡಿ ಕೊಡುವುದು ಒಂದು ಹರಕೆ... ಅದರಲ್ಲೂ ತಿರುಪತಿಯಲ್ಲಿ ಮುಡಿ ಕೊಡುವುದು ಒಂದು ದೊಡ್ಡ ಸಂಪ್ರದಾಯ... ಈ ಕಾರ್ಯಕ್ಕಾಗಿಯೇ ಕಲ್ಯಾಣ ಕಟ್ಟೆ ಎನ್ನುವ ವಿಶೇಷ ಸ್ಥಳ ನಿಗದಿಯಾಗಿದೆ. ತಿರುಪತಿ ಚೌರ ಎನ್ನುವುದು ಒಂದು ವಿಶೇಷ ಪದಪುಂಜ. ನುಣ್ಣಗೆ ಬೋಳಿಸಿದರು ಎನ್ನುವುದು ಒಂದು ಮುಖವಾದರೆ... ಅಲ್ಲಿಗೆ ಹೋದವರನ್ನು ಸೆಳೆದಿಟ್ಟುಕೊಳ್ಳಲು.... ಸ್ವಲ್ಪ ಕೂದಲನ್ನು ತೆಗೆದು ಕೂಡಿಸುವುದು ಒಂದು ವಿಧಾನ ವಿತ್ತು ಎಂದು ಕೇಳಿದ್ದೇನೆ.
ಬಹುತೇಕ ಎಲ್ಲ ಧರ್ಮದ ಸನ್ಯಾಸಿಗಳು ಬೋಡುತಲೆಯವರು..
ತಲೆ ಬೋಳಿಸಿಕೊಳ್ಳುವುದು ಒಂದು ರೀತಿಯ ಫ್ಯಾಶನ್. ತುಂಬ ಪ್ರಭಾವ ಬೀರಿದವರು ಅಂದಿನ ಕಾಲದ ಹಿಂದಿ ಚಿತ್ರರಂಗದ... ಮಂಗಳೂರು ಮೂಲದ ಫೈಟರ್ ಶೆಟ್ಟಿ... ಯಾವಾಗಲೂ ನುಣ್ಣನೆ ಬೋಳಿಸಿದ ತಲೆ.
ಹಳ್ಳಿಗಾಡಿನಲ್ಲಿ ಶಿಕ್ಷೆ ರೂಪವಾಗಿ ತಲೆ ಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡುತ್ತಿದ್ದ ಪದ್ಧತಿ ಇತ್ತೆಂದು ಕೇಳಿದ್ದೇನೆ .
ಹಿರಿಯರು ಸತ್ತಾಗ... ಅವರ ಅಪರ ಕರ್ಮಗಳನ್ನು ಮಾಡುವ ಮಕ್ಕಳು ತಲೆ ಕೂದಲು ತೆಗೆಸುವುದು ಒಂದು ಪದ್ಧತಿ. ಕೆಲವರು ಇದನ್ನು ಇಷ್ಟಪಡುವುದಿಲ್ಲ. ನನ್ನ ದೃಷ್ಟಿಯಲ್ಲಿ ಎರಡೂ ಸರಿ.... ಅಪ್ಪ ಅಮ್ಮ ಹೋದಾಗ...ಅಂತ ಹಿರಿಯರೇ ಹೋದರು.. ಇನ್ನು ಈ ಕೂದಲು ಯಾವ ಲೆಕ್ಕ ಎನ್ನುವ ದೃಷ್ಟಿ ಒಂದಾದರೆ... ಹೋದೋರು ಹೋದರು ಕೂದಲು ತೆಗೆಯುವುದರಿಂದ ಏನು ಪ್ರಯೋಜನ ಎನ್ನುವುದು ಇನ್ನೊಂದು ದೃಷ್ಟಿ. ಇದಕ್ಕೆ ಇನ್ನೊಂದು ವೈಜ್ಞಾನಿಕ ದೃಷ್ಟಿಕೋನವೂ ಇದೆ... ಸಾಮಾನ್ಯವಾಗಿ ಅಪರ ಕರ್ಮಗಳನ್ನು ಮಾಡುವಾಗ, ತಲೆಗೆ ತಣ್ಣೀರಿನ ಸ್ನಾನ... ಒರೆಸಿಕೊಂಡು ಒಣಗಿಸದೆ ..ಕಾರ್ಯದಲ್ಲಿ ನಿರತವಾಗುವ ಒಂದು ವಿಧಿ ಇದೆ.. ಇದು ಸುಮಾರು 13 ರಿಂದ 14 ದಿನಗಳವರೆಗೆ ನಡೆಯುತ್ತದೆ. ತಲೆಯ ಕೂದಲಿನಲ್ಲಿ ನೀರು ಉಳಿಯುವುದರಿಂದ ನೆಗಡಿಯಾಗುವ ಸಾಧ್ಯತೆ ಉಂಟು.. ಕೂದಲು ತೆಗೆದಾಗ ಆ ಅಹಿತದಿಂದ ಪಾರು.
ಹುಟ್ಟು ಕೂದಲು ತೆಗೆಸುವ ಕಾರ್ಯಕ್ರಮಕ್ಕೆ ಚೌಲ ಎಂದು ಹೆಸರು.. ನನಗೂ ಮುಂದೆ ಗೋಪಾದದಷ್ಟು ಅಗಲ ಕೂದಲನ್ನು ತೆಗೆದು... ಮಿಕ್ಕದ್ದನ್ನು ಹಾಗೆ ಬಿಟ್ಟಿದ್ದು ಸುಮಾರಾಗಿ ನೆನಪಿದೆ. ಉಪನಯನದಲ್ಲೂ ಇದನ್ನು ಸಾಂಕೇತಿಕವಾಗಿ ಮಾಡಿದ್ದು. ಈ ಸಮಯದಲ್ಲಿ ಅಕ್ಕಿ, ತಾಂಬೂಲ ಕೊಟ್ಟು ಅವರನ್ನು ಗೌರವಿಸುವ ಪದ್ಧತಿ ನಮ್ಮಲ್ಲಿದೆ.
ಕೆಲ ಮಕ್ಕಳಿಗೆ ಸಂಪೂರ್ಣ ಕೂದಲನ್ನು ತೆಗೆಯುವ ಪದ್ಧತಿ ಉಂಟು.. ಅಂತಹ ಮಕ್ಕಳ ಬೋಡು ತಲೆಯನ್ನು ಸವರಲು ನನಗೆ ಬಲು ಇಷ್ಟ.
ಕರೋನಾ ಸಮಯದಲ್ಲಿ ಆಚೆ ಎಲ್ಲೂ ಹೋಗಬಾರದು.... ಹಾಗಾಗಿ ಒಂದಷ್ಟು ದಿನ ತಲೆ ಕೂದಲು, ಗಡ್ಡ ಮೀಸೆ ಬೆಳೆಸಿಕೊಂಡದ್ದೆ.. ಕೊನೆಗೆ ನೋಡಲಾರದೆ ನಾನೇ ಹೇರ್ ಕಟಿಂಗ್... ನನ್ನದೇ ರೀತಿಯಲ್ಲಿ ಮಾಡಿಕೊಂಡೆ.
ಮೊದಲ ಕಾಲಕ್ಕೆ ಗಡ್ಡವನ್ನೂ ಅವರಿಂದಲೇ ತೆಗೆಸಿಕೊಳ್ಳುತ್ತಿದ್ದದ್ದು... ನಾಗರೀಕತೆ ಬೆಳೆದಂತೆ... ದಿನ ದಿನವೂ ಶೇವ್ ಮಾಡ ಬೇಕಾದ್ದರಿಂದ... ಅದನ್ನು ನಾವೇ ಮಾಡಿಕೊಳ್ಳುವಂತಾಗಿದೆ. ಕೆಲಸಲ ಅದಕ್ಕೂ ಬೇಜಾರು/ ಸೋಮಾರಿತನ ಬರುವುದುಂಟು...
ಇನ್ನು ವಿವಿಧ ಶೈಲಿಯ ಹೇರ್ ಕಟ್ ಗಳು.... ಈಗ ಚಾಲ್ತಿಯಲ್ಲಿವೆ... ಅದರ ವಿವಿಧ ಭಾವ ಭಂಗಿಯ ಚಿತ್ರಗಳನ್ನು ಸಲೂನ್ ನಲ್ಲಿ ನೋಡಬಹುದು... ಸಮ್ಮರ್ ಕಟ್, ಮಿಲ್ಟ್ರಿ ಕಟ್, ಈಗೀಗ ಕೇಳಿದ ಕ್ಯಾಬೇಜ್ ಕಟ್.. ಹೆಸರುಗಳೇ ತಿಳಿಯದ ದಡ್ಡತನ ನನ್ನದು.
ಇನ್ನು ಋಷಿ ಮುನಿಗಳು ತಮ್ಮದೇ ಆದ ಕೇಶವಿನ್ಯಾಸವನ್ನು ಹೊಂದಿರುತ್ತಾರೆ.
ಕೆಲವರಿಗೆ ಜಟೆ ಇರುತ್ತದೆ.. ಜಟೆಯಲ್ಲಿ ಕೂದಲು ಗಂಟು ಹಾಕಿಕೊಂಡಿರುತ್ತದೆ.. ಬಾಚಲು ಸಾಧ್ಯವಿಲ್ಲ... ಇದು ದೇವರು ಕೊಟ್ಟ ವರ ಎಂದು ನಂಬುವವರಿದ್ದಾರೆ. ಶನಿ ದೇವರ ಪೂಜೆ ಮಾಡುವವರಲ್ಲಿ ಇದು ಸಾಮಾನ್ಯ ಎಂಬ ಅನುಭವ ನನ್ನದು. ರಾಮಾಯಣದ ರಾಮ ಲಕ್ಷ್ಮಣರು ತಮ್ಮ ಕೂದಲನ್ನು ಜಟೆಯಾಗಿ ಪರಿವರ್ತಿಸಿಕೊಳ್ಳಲು ಎಕ್ಕದ ಹಾಲನ್ನು ಕೂದಲಿಗೆ ಸವರಿ ಕೊಂಡರು.. ಎಂದು ಓದಿದ ನೆನಪು.
ಸಮಾಜಕ್ಕೆ ಎಲ್ಲ ವೃತ್ತಿಗಳ ಜನರ ಅವಶ್ಯಕತೆ ..ಹಾಗಾಗಿ ಕ್ಷೌರಿಕ ಸಹ. ಅವರಿಗೆ ಅವರದೇ ಆದ ಸ್ಥಾನಮಾನ ವಿತ್ತು... ಗೌರವವಿತ್ತು. ಎಲ್ಲ ಶುಭಕಾರ್ಯಗಳ ಪ್ರಾರಂಭವು ಅವರ ಓಲಗದ ಮಂಗಳ ಸ್ವರದಿಂದಲೇ... ವರಮಹಾಲಕ್ಷ್ಮಿ, ಗೌರಿ ಗಣೇಶ ಹಬ್ಬಗಳಲ್ಲಿ ಅವರಿಗೆ ಒಬ್ಬಟ್ಟು ಚಿತ್ರಾನ್ನ ಪಾಯಸ ಎಲ್ಲವನ್ನೂ ಕೊಟ್ಟು ತಾಂಬೂಲ ಕೊಟ್ಟು ಗೌರವಿಸುತ್ತಿದ್ದದ್ದು ನಮ್ಮ ಮನೆಯ ಪದ್ಧತಿ.
ಚಿಕ್ಕಂದಿನ ಪುಸ್ತಕಗಳಲ್ಲಿ ನೋಡಿದ ಮಹಾಶ್ವೇತೆ ಹಾಗೂ ಶಕುಂತಲೆಯರ ಕೇಶವಿನ್ಯಾಸ.. ಮೆಚ್ಚುಗೆಯಾದದ್ದು.
ಇನ್ನು ಹೆಣ್ಣು ಮಕ್ಕಳ ಕೇಶವಿನ್ಯಾಸವಂತೂ ವೈವಿಧ್ಯಮಯ. ಕೇಶ ವಿನ್ಯಾಸದಲ್ಲಿ ಪರಿಣತಿ ಪಡೆಯಲು ಅದಕ್ಕೆ ಮೀಸಲಾದ ತರಬೇತಿಗಳೂ ಉಂಟು. ಸಾಕಷ್ಟು ಹೆಣ್ಣು ಮಕ್ಕಳು ಬ್ಯೂಟಿ ಪಾರ್ಲರ್ ತೆಗೆದು... ಅದನ್ನು ವೃತ್ತಿಯಾಗಿ ಮಾಡಿಕೊಂಡು... ಸಂಪಾದಿಸುವವರಿದ್ದಾರೆ.
1996 ನೇ ಇಸವಿಯಿಂದ ನಾನು ಒಂದೇ ಸಲೂನ್ ಗೆ ಹೋಗುತ್ತಿದ್ದೇನೆ... ಮೂರು ತಲೆಮಾರು ಕ್ಷೌರಿಕರಿಂದ ಸೇವೆ ಪಡೆದಿದ್ದೇನೆ.. ಮೊದಲನೆಯ ತಲೆಮಾರಿನ ಮುನಿಸ್ವಾಮಿ ಈಗಿಲ್ಲ... ಮೂರನೇ ತಲೆಮಾರು ಬರುತ್ತಿದ್ದಂತೆ.. ಅಂಗಡಿಯ ವಿನ್ಯಾಸ, ಅನುಕೂಲಗಳು ಸಾಕಷ್ಟು ಬದಲಾವಣೆಗಳಾಗಿವೆ.
ಶಹಾಬಾದಿನಲ್ಲಿ ನಮ್ಮ ಕಾಲೋನಿಗಳಲ್ಲಿ ಇದ್ದದ್ದು ರಾಮ್ ಲಿಂಗ್ ನ ಸಲೂನ್ ಮಾತ್ರ... ಊರಿಗೆ ಒಬ್ಬಳೇ ಪದ್ಮಾವತಿಯಂತೆ... ಆತ ಮಾಡಿದ ಹೇರ್ ಕಟ್ಟೇ ಅಂತಿಮ.
ನಾನು ತುಂಬಾ ಮೆಚ್ಚಿದ ವ್ಯಕ್ತಿ ಎಂದರೆ... ಮುತ್ತುರಾಜ್ ( ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಸಲೂನ್ ಇಟ್ಟುಕೊಂಡಿರುವವರು). ಈತ ಕಲಾವಿದ ಸಹ. ವಿಶೇಷ ಅಂದರೆ ನೆಲ್ಸನ್ ಮಂಡೇಲಾ ಅವರ ಹುಟ್ಟುಹಬ್ಬದ ದಿನ.. ಸಮಾನ ಮಸ್ಕರನ್ನು ಜೊತೆ ಮಾಡಿಕೊಂಡು ಸುಮಾರು 5,000 ಜನ ಬಡವರಿಗೆ/ ದಲಿತರಿಗೆ/ ಹಾಗೂ ಕೊಳಗೇರಿಗಳಲ್ಲಿ ವಾಸಿಸುವವರಿಗೆ ಉಚಿತವಾಗಿ ಹೇರ್ ಕಟ್ ಮಾಡಿದ ಸಾಧನೆ.
ಜಾತಿ ಪದ್ಧತಿ.. ಅದರಲ್ಲಿನ ತಾರತಮ್ಯ.. ಈ ವೃತ್ತಿಯವರನ್ನೂ ಬಿಟ್ಟಿಲ್ಲ... ಎಡಗೈ, ಬಲಗೈ ಎನ್ನುವ ಕಟ್ಟ ಕಡೆಯ ಜಾತಿಯವರ ತಲೆ ಕೂದಲನ್ನು ಇವರು ಕತ್ತರಿಸುತ್ತಿರಲಿಲ್ಲ.. ಅದು ಅವರ ಘನತೆಗೆ ಕುಂದು. ಸಾಮಾನ್ಯವಾಗಿ ಈ ತಾರತಮ್ಯವನ್ನು ಮಾಡುವವರು ಮೇಲ್ವರ್ಗದ ಬ್ರಾಹ್ಮಣರು ಎಂಬುದು ಜನಜನಿತ. ಸೂಕ್ಷ್ಮವಾಗಿ ಗಮನಿಸಿದಾಗ ಎಲ್ಲ ವರ್ಗದವರು ಅವರಿಗಿಂತ ಕೆಳ ವರ್ಗದ ಜನರನ್ನು ಕೀಳಾಗಿ ಕಾಣುವ, ಅವರೊಡನೆ ಬೆರೆಯದಿರುವ ಪದ್ಧತಿಯನ್ನು ಅಳವಡಿಸಿಕೊಂಡವರೇ. ಇಂದಿಗೂ ಹಳ್ಳಿಯ ವಾತಾವರಣದಲ್ಲಿ ಇದು ತಕ್ಕಮಟ್ಟಿಗೆ ಉಂಟು. ನಗರ ಪ್ರದೇಶಗಳಲ್ಲಿ ತುಂಬಾ ಕಡಿಮೆ. ಸಮಾಜಕ್ಕೆ ಎಲ್ಲರೂ ಅನಿವಾರ್ಯ... ಎಲ್ಲರ ದೇಣಿಗೆಯು ಅಷ್ಟೇ ಮುಖ್ಯ.
ಸಣ್ಣ ಹಾಸ್ಯ ಚಟಾಕಿಯೊಂದಿಗೆ ಮುಕ್ತಾಯ ಮಾಡುತ್ತೇನೆ... ತಲೆಯ ಕೂದಲೆಲ್ಲ ಸಾಕಷ್ಟು ಉದರಿದ್ದ ವ್ಯಕ್ತಿಗೆ ಹೇರ್ ಕಟ್ ಮಾಡಿ... ನೂರು ರೂಪಾಯಿ ಕೇಳಿದಾಗ... ಏನಪ್ಪಾ ತಲೆಲಿ ಇರೋದೇ ನಾಲ್ಕು ಕೂದ್ಲು ಅದು ತೆಗೆಯಕ್ಕೆ 100 ರೂಪಾಯಾ?... ಹೌದು ಸ್ವಾಮಿ ನಿಮ್ಮ ತಲೆಯ ಕೂದಲನ್ನ ಹುಡುಕಿ ಹುಡುಕಿ ಕತ್ತರಿಸಬೇಕಾದರೆ ಕಷ್ಟ ಇದೆ... ಅದಕ್ಕೆ ಅಷ್ಟಾಗುತ್ತೆ...
ನಗೆ ಬಂತಾ?
ನಮಸ್ಕಾರ..
D C Ranganatha Rao
9741128413
ಮನೆ ಮುಂದಿನ ಒಂದು ಫಲಕ, ಕ್ಷೌರದ ಬಗೆ
ReplyDeleteಲೇಖನ ಬರೆಯಲು ನಿಮಗೆ ಸ್ಫೂರ್ತಿ ನೀಡಿದ್ದು
ಹಾಗೂ ಸಮಯೋಚಿತ ಚಿತ್ರದ ಮೂಲಕ
ಚೌಲದಿಂದ ಅಪರ ಕರ್ಮದ ಒರೆಗೆ ನಡೆಯುವ ವಿವಿದ ಘಟ್ಟದ ಕೇಶ ವಿನ್ಯಾಸದ ಬಗ್ಗೆ ಸಹಜ ವಿವರಣೆ ಚೆನ್ನಾಗಿ ವಿವರಿಸಿದ್ದೀರಾ
ಇನ್ನು ಏಡ್ಸ್ ಪ್ರಾರಂಭವಾದ ದಿನಗಳಲ್ಲಿ ಅಂಟು ಜಾಡ್ಯದ ಭಯದಿಂದ ನನ್ನದೇ ಒಂದು
ಹಡಪದ ಕಿಟ್ ತಯಾರಿ ಮಾಡಿ ಇಂದಿಗೂ ಚೌರಕ್ಕೆ ಅದನ್ನೇ ಉಪಯೋಗಿಸುವ ಅಭ್ಯಾಸ
ಮಾಡಿಕೊಂಡಿದ್ದೇನೆ. ಇಂದು ಈ ವೃತ್ತಿ ಕೂಡ
ಬಹು ದೊಡ್ಡದಾಗಿ ಬೆಳೆದಿದೆ.ಅಕ್ಬರ್ ಹಾಗೂ
ಬೀರಬಲ ಕಥೆ ನೆನಪಿಗೆ ಬಂತು
ಧನ್ಯವಾದಗಳು
ಬಾಬು
ಕ್ಷೌರದ ಹತ್ತು ಹಲವು ರೀತಿಗಳನ್ನು ವಿವರಿಸಿರುವ ರೀತಿ ನಮಗೆ ಸ್ಪಷ್ಟvaagi ತಿಳಿಯುವುದು. ಇಂದಿನವರೆಗೆ ಮಾಹಿತಿ. nice to read
ReplyDeleteVery nice elaboration of small subject. Nice writing.
ReplyDelete👌👌👌
ReplyDeleteಚೌರ ಮತ್ತು ಕ್ಷೌರಿಕನ ಇತಿಹಾಸ ಲೇಖನ ಚೆನ್ನಾಗಿ ಊಟ👌👌👍
ReplyDeleteಚೆನ್ನಾಗಿ ಮೂಡಿಬಂದಿದೆ
Deleteಮಾನ್ಯರೇ,
ReplyDeleteನಾನು ಬಾಲ್ಡ್ (ಬೋಲ್ಡ್ಸ ಸಹಾ) ಅಗಿದ್ದರೂ ಎಲ್ಲರಷ್ಟೆ ಹಣ ಕೊಡಬೇಕೆಂದಾಗ ನಿಜಕ್ಕೂ ದು:ಖವಾಗುತ್ತದೆ.
ಇನ್ನು ಲೇಖಕರು ಎಲ್ಲಾ ಕೋನಗಳಿಂದ ಲೇಖನವನ್ನು ಶ್ರೀಮಂತಗೊಳಿಸಿಬಿಟ್ಟಿರುವದರಿಂದ ನಮ್ನ ಕೆಲಸ ಸುಲಭ.
ಈಗಿನ ಕಾಲದ ಹುಡುಗರು ಉಪನಯನದಲ್ಲಿ ಶಿಖೆ ಬಿಟ್ಟು, ಉಳಿದ ಕೂದಲನ್ನು ಕತ್ತರಿಸಿಕೊಳ್ಳಲು ಒಪ್ಪುವುದಿಲ್ಲ.
ಶಾಸ್ತ್ರಕ್ಕೆ ಕತ್ತರಿಸುತ್ತಾರಷ್ಟೆ.
ಇಂದಿನ ಕ್ಷೌರಕ್ಕಾಗಿ ಬಹು ದುಬಾರಿಯ ಬೆಂಗಳೂರಿನ, ಮುಂಬಯಿಯ, ಚೆನ್ನೈ ನ ಕೆಲವು ಆಯ್ದ ಸೆಲೂನ್, ಬ್ಯೂಟಿ ಪಾರ್ಲರ್ ಗಳಿಗೆ ಹೋಗುತ್ತಾರಂತೆ!
ಮದುವೆಗಳಲ್ಲಿ ವಧುವಿಗಲ್ಲದೆ ಇತರರಿಗೂ ಮೇಕಪ್, ಕೇಶವಿನ್ಯಾಸ ಮಾಡಿಸಲು ಫ್ಯಾಮಿಲಿ ಪ್ಯಾಕೇಜ್ ಇದೆ.
ಹೀಗೆಯೇ ಸಾಗುತ್ತದೆ ಕೇಶಪುರಾಣ.
ಲಾಸ್ಟ್ ಪಂಚ್:
ಪೈಟರ್ ಶೆಟ್ಟಿ ಕಟ್ಟಿಂಗ್ ಮಾಡಿಸಿಕೊಂಡ ನಂತರ ರಾಜ್ ಕುಮಾರ್, ಅಮಿತಾಬ್ ಬಚ್ಚನ್.. ಇತ್ಯಾದಿ ಕಟ್ಟಿಂಗಿಗೆ ಅವಕಾಶವಿಲ್ಲ!
ವಂದನೆಗಳೊಂದಿಗೆ,
ಗುರುಪ್ರಸನ್ನ
ಚಿಂತಾಮಣಿ