ವಾಕ್ಚಾತುರ್ಯ - ಮಾತಾಡುವ ಕಲೆ

 

ಕರ್ನಾಟಕ ಹಿರಿಯ ನಾಗರಿಕ ವೇದಿಕೆಗಳ ಒಕ್ಕೂಟ ಹಾಗೂ ಸ್ನೇಹ ಸೇವಾ ಟ್ರಸ್ಟ್ ಜೊತೆಗೂಡಿ 50ಕ್ಕೂ ಹೆಚ್ಚು ಶಾಲೆ ಕಾಲೇಜುಗಳಲ್ಲಿ “ವಾಕ್ಚಾತುರ್ಯ ಸ್ಪರ್ಧೆ” ನಡೆಸಲಾಯಿತು. . ಎಲ್ಲರಿಗೂ ಕೊಟ್ಟ ವಿಷಯ " ನನ್ನ ಹಿರಿಯರು- ನನ್ನ ಆದರ್ಶ". ಭಾಗವಹಿಸಿದ ಮಕ್ಕಳು ಅವರದೇ ರೀತಿಯಲ್ಲಿ ತಮ್ಮ ವಿಷಯಗಳನ್ನು ಅಭಿವ್ಯಕ್ತಿ ಪಡಿಸಿದರು.  ಪ್ರತಿ ಶಾಲೆಯಲ್ಲೂ ಮೂರು ಜನ ವಿದ್ಯಾರ್ಥಿಗಳನ್ನು ಬಹುಮಾನ ವಿಜೇತರನ್ನಾಗಿ ಆರಿಸಲಾಯಿತು.  ಜುಲೈ 27ನೇ ತಾರೀಕು ಮೊದಲ ಎರಡು ಸ್ಥಾನ ಗಳಿಸಿದ ಎಲ್ಲರ ಮಧ್ಯೆ “champion of champions" ಸ್ಪರ್ಧೆಯನ್ನು ಏರ್ಪಡಿಸಿ ಅಂತಿಮ ವಿಜೇತರನ್ನು ಗುರುತಿಸಲಾಯಿತು.



ಈ ಶಾಲಾ ಸ್ಪರ್ಧೆಗೆ ಜಡ್ಜ್  ಆಗಿ ಎರಡು ಶಾಲೆಯಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಜಡ್ಜ್ ಎನ್ನುವ ಪದ ನನಗಷ್ಟು ಒಪ್ಪಿಗೆಯಾಗದಿದ್ದರೂ... ಆ ಸಂದರ್ಭದಲ್ಲಿ ಅದು ಅನಿವಾರ್ಯವಾಗಿತ್ತು. 

ಆಪ್ತ ಸಮಾಲೋಚಕರಿಗೆ ಒಂದು ಮಾರ್ಗಸೂಚಿ ಇದೆ. "you are not a judge....don't  judge anybody by their words or acts. analyse the reason behind  that act" ಹಾಗಾಗಿ  ಜಡ್ಜಿಂಗ್ ಅನ್ನುವ ಕಲ್ಪನೆಯೇ ನನ್ನೀ 32 ವರ್ಷದ ಆಪ್ತ ಸಮಾಲೋಚಕನ ಪಯಣದಲ್ಲಿ ಮೂಗು ತೂರಿಸಿಲ್ಲ.

ಎರಡೂ ಸಂಘಟನೆಯ ಸದಸ್ಯರುಗಳು.. ಶಾಲೆಗಳಿಗೆ ಹೋಗಿ ಸ್ಪರ್ಧೆಯನ್ನು ನಡೆಸಿ, ವಾಟ್ಸಪ್ ಗುಂಪಿನಲ್ಲಿ ಹಂಚಿಕೊಂಡ ಚಿತ್ರಗಳು, ವಿಷಯಗಳು ತುಂಬಾ ಖುಷಿಯನ್ನು ಕೊಟ್ಟವು. ವಿದ್ಯಾರ್ಥಿಗಳಲ್ಲಿದ್ದ ಭಾಗವಹಿಸುವ ಉತ್ಸಾಹ, ಕೆಲವರಲ್ಲಿ ಇದ್ದ ಹಿಂಜರಿಕೆ, ಮಾತನಾಡಲು ಶುರು ಮಾಡಿದ ಮೇಲೆ ಮುಂದುವರಿಸುವಲ್ಲಿ ಇದ್ದ ತೊಡರು, ಮುಂದುವರಿಸಲು ಆಗದೇ ಇದ್ದಾಗ ಆದ ಬೇಜಾರು, ಕೆಲವರ ಶುಷ್ಕನಗೆ, ಹೀಗೆ ವಿಧವಿಧ ಭಾವನೆಗಳು ಗೋಚರಿಸಿದವು. ಇದಕ್ಕೂ ಮಿಗಿಲಾಗಿ ಕೇಳುಗರಾಗಿ ಸೇರಿದ್ದ ಮಕ್ಕಳು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದ ಪರಿ ಉತ್ಸಾಹದಾಯಕವಾಗಿತ್ತು.

ಈ ಮಕ್ಕಳನ್ನೆಲ್ಲ ಗಮನಿಸಿದಾಗ, ನನಗನಿಸಿದ್ದು,.. ಹೈ ಸ್ಕೂಲ್ ಮಟ್ಟದಲ್ಲಿ ನಾನು ಒಂದೂ ಭಾಷಣವನ್ನು ಮಾಡಿಲ್ಲ.. ಕಾರಣ ಇದ್ದ ಸೀಮಿತಾವಕಾಶ... ಜೊತೆಗೆ ನನ್ನಲ್ಲಿ ಮೂಡಿದ್ದ ಹಿಂಜರಿಕೆ. ಹಾಗೆ ನೋಡಿದರೆ ಹೈಸ್ಕೂಲಿಗೆ ಬರುವ ತನಕ ನಾನು ಭಾಗವಹಿಸದಿದ್ದ ಕಾರ್ಯಕ್ರಮವೇ ಇರುತ್ತಿರಲಿಲ್ಲ... ಸುಮಾರು ಎಲ್ಲದರಲ್ಲೂ ನನ್ನ ಪಾಲ್ಗೊಳ್ಳುವಿಕೆ ಇರುತ್ತಿತ್ತು. ಬಹುಶಃ ಓದಿದ ಹಳ್ಳಿಯ ವಾತಾವರಣದಲ್ಲಿ ನನಗೆ ಸಿಗುತ್ತಿದ್ದ ಪ್ರೋತ್ಸಾಹ ಹಾಗೂ ಅವಕಾಶಗಳು. (ದಡ್ಡರ ಸಮೂಹದ ಬುದ್ಧಿವಂತ ಎನ್ನಲೇ). 

ಆಗೆಲ್ಲ ಮಾತನಾಡಲು ನಿಂತಾಗ ನಮಗೊಂದು ಸಿದ್ಧ ಮಾದರಿ ಇರುತ್ತಿತ್ತು...“ಎಲ್ಲರಿಗೂ ನಮಸ್ಕಾರ, ವೇದಿಕೆಯ ಮೇಲಿರುವ ಗಣ್ಯರೇ, ನಮಗೆ ಮಾರ್ಗದರ್ಶನ ಮಾಡುತ್ತಿರುವ ನನ್ನೆಲ್ಲ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ.. ಇಂದು ನಾನು ಮಾತನಾಡುತ್ತಿರುವ ವಿಷಯ.....

ಇಲ್ಲಿಯ ತನಕ ನನ್ನ ಮಾತುಗಳನ್ನು ಕೇಳಿದ ನಿಮಗೆಲ್ಲರಿಗೂ ವಂದಿಸುತ್ತಾ... ಹಂಸಕ್ಷೀರ ನ್ಯಾಯದಂತೆ, ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ"

ಚರ್ಚಾ ಸ್ಪರ್ಧೆಯಾದರೆ.. ವಿಷಯದಲ್ಲಿ ಎದುರಾಳಿಗಳ ಮಾತುಗಳನ್ನು ಖಂಡಿಸುವ ಎರಡು ವಾಕ್ಯವಾದರೂ ಇರಲೇಬೇಕು.

ಬೆಂಗಳೂರಿಗೆ ಬಂದು ರಾಷ್ಟ್ರೀಯ ವಿದ್ಯಾಲಯ ಹೈಸ್ಕೂಲ್ ಮೆಟ್ಟಿಲನ್ನು ಹತ್ತಿದಾಗ, ಅಲ್ಲಿಯೇ ನಿಂತಿದ್ದ ಆಗಿನ ಹೆಡ್ ಮಾಸ್ಟರ್ ತಾತಾಚಾರ್ಯ ಅವರನ್ನು ಕಂಡಾಗಲೇ ಭಯ ಆವರಿಸಿತ್ತು.( ಅವರು ಧರಿಸಿದ್ದ ಬಟ್ಟೆಯು ನಮ್ಮ ಹಳ್ಳಿಯ ಮೇಷ್ಟ್ರುಗಳ ಪಂಚೆ ಶರಟಿಗಿಂತಾ ವಿಭಿನ್ನವಾಗಿತ್ತು). ಇನ್ನು ನನ್ನ ಸಹಪಾಠಿಗಳು ತೊಟ್ಟಿದ್ದ ಬಟ್ಟೆಗಳು ಮೇಲ್ಮಟ್ಟದವು, ನನಗಿಂತ ಎಲ್ಲರೂ ತುಂಬಾ ಜಾಣರು ಇರಬಹುದೆಂಬ ಭಾವನೆ.  ನಾನಾದರೋ ಲಾಡಿ ಇರುವ ಚಡ್ಡಿ, ಹಳ್ಳಿಯಲ್ಲಿ ಹೊಲಿದ ಶರಟು ತೊಟ್ಟು ಬಂದವ( ಆಗಿನ ನನ್ನ ಉಡುಪೆಂದರೆ ಚಡ್ಡಿ ಶರಟು ಎರಡೇ... ಒಳ ಉಡುಪಿನ ಪರಿಚಯವೂ ಇಲ್ಲ... ಅವಶ್ಯಕತೆ ಅಂತ ಗೊತ್ತೂ ಇಲ್ಲ). ಇಂತಹ ಒಂದು ದಿನ ಸೀತಾರಾಮ ಎಂಬುವ ಹುಡುಗನ ಕಣ್ಣಿಗೆ ನನ್ನ ಲಾಡಿ ಬಿದ್ದು... ಯಾವ ಮಾಯದಲ್ಲೋ ಅದನ್ನು ಎಳೆದೇ ಬಿಟ್ಟ.. ಚಡ್ಡಿಯು ಜಾರಲಿದ್ದು.. ಹೇಗೋ ಹಿಡಿದೆ. ಆಗ ಬಂದ ಹೀನಾಯ ಭಾವ ನನ್ನ ಆತ್ಮವಿಶ್ವಾಸವನ್ನು ಪಾತಾಳಕ್ಕೆ ತಳ್ಳಿದ್ದು... ಅದರಿಂದ ಹೊರಬರಲು ಸಾಕಷ್ಟು ದಿನಗಳು ಬೇಕಾಯಿತು.. 

ಯೂನಿಫಾರಂ ರೂಪದಲ್ಲಿ ಹೊಸ ಬಟ್ಟೆಗಳೂ ಬಂದವು. ಆದರೂ ಮೈ ಛಳಿ ಬಿಟ್ಟು ಕೆಲವರಲ್ಲಿ ಬೆರೆಯಲು ಮನಸ್ಸು ಒಪ್ಪುತ್ತಿರಲಿಲ್ಲ. 

ಈ ಮನಸ್ಥಿತಿಯಿಂದ ಹೊರಬರಲು ಮೊದಲು ಸಾಧ್ಯವಾಗಿದ್ದು Bangalore Institute of Engineering ನಲ್ಲಿ ಪಾಠ ಮಾಡಲು ಪ್ರಾರಂಭ ಮಾಡಿದಾಗ... ಹಾಗೆ ಅಲ್ಲಿನ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ಮಾಡಿದಾಗ.... ನಂತರ ಶಹಾಬಾದಿನಲ್ಲಿ ಇದ್ದಾಗ... ನನ್ನಲ್ಲಿದ್ದ ಒಂದಷ್ಟು ಪ್ರತಿಭೆ ಅರಳಲು ಬೇಕಾದ ಪೂರಕ ವಾತಾವರಣವಿತ್ತು. ಹಾಗಾಗಿ ಅಲ್ಲಿನ south canara association ನ ಗಣಪತಿ ಹಬ್ಬದ ಸಂದರ್ಭದಲ್ಲಿ ಒಂದು ಹರಿಕಥೆಯನ್ನು ಮಾಡುವ ಅವಕಾಶವೂ ಸಿಕ್ಕಿತ್ತು.

ವಾಕ್ಚಾತುರ್ಯ ಅನ್ನುವ ಪದದ ಅರ್ಥ ಈ ಸ್ಪರ್ಧೆಯಲ್ಲಿ ಸೀಮಿತವಾದರೂ... ವಿಶಾಲಾರ್ಥದಲ್ಲಿ... ಭಾಷಣಗಳು, ಆಶುಭಾಷಣಗಳು , ಚರ್ಚಾಸ್ಪರ್ಧೆಗಳು , ಸಣ್ಣ ಗುಂಪಿನಲ್ಲಿ ನಡೆಯುವ ಮಾತುಕತೆಗಳು,  ಹರಟೆಗಳು ಎಲ್ಲವನ್ನು ಒಳಗೊಳ್ಳುತ್ತವೆ.

ಚಿಕ್ಕಂದಿನಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ವಾಕ್ಚತುರರಲ್ಲಿ...ಮೊದಲಿಗರು ಬುಡುಬುಡಿಕೆಯವರು. ಬುಡುಬುಡಿಕೆಯನ್ನು ಅದರದೇ ವಿಶಿಷ್ಟ ಲಯದಲ್ಲಿ ಆಡಿಸುತ್ತಾ. ...ಹಾಲಕ್ಕಿ ನುಡಿತೈತೆ ಎಂದು ಪ್ರಾರಂಭವಾಗುತ್ತಿದ್ದ ವಾಕ್  ಪ್ರವಾಹ ಓತಪ್ರೋತವಾಗಿ ಸಾಗುತ್ತಿತ್ತು.



 








ಎರಡನೆಯವರು ...ಏಕನಾದ ಹಾಗೂ ತಾಳ ಹಿಡಿದು. ..ತೆಲುಗಿನಲ್ಲಿ ಹಾಡಿ ತೆಲುಗು ಮಿಶ್ರಿತ ಕನ್ನಡದಲ್ಲಿ ಕಥೆ ಹೇಳುತ್ತಿದ್ದ..ಕಥೆಗಾರರು. ನನಗೆ ನೆನಪಿರುವ ಹಾಡಿನ ಸಾಲು  "ಬಾಲನಾಗಮ್ಮಕಿ ಬಾಲುಡು ಪುಟ್ಯಾಡೇ... ತಂದಾನ.. ಶಂಕಾರಾ... ರಾಮಲಿಂಗಮಯ್ಯೋ ಶಂಕಾರ" ಬಾಲನಾಗಮ್ಮನ ಜಾನಪದ ಕಥೆ... ಕಥೆಯ ಇನ್ನೂ ಕೆಲ ಭಾಗ ಗಳು ನೆನಪಿದೆಯಾದರೂ... ಅವುಗಳನ್ನು ...ಬರೆದು ಆ ಮಾಧುರ್ಯವನ್ನು ಬಣ್ಣಿಸಲಾರೆ..ಕೇಳಲು ಮಾತ್ರ..ಸೊಗಸು. ಆಗಾಗ್ಗೆ ಅದನ್ನು ಹಾಡಿ ಕೊಂಡು ಸುಖಿಸುತ್ತೇನೆ.

ಇನ್ನೊಂದು ಪ್ರಮುಖ ಘಟನೆ... ವಿನೋಬಾ ಭಾವೆಯವರು ನಮ್ಮೂರಲ್ಲಿ ನಡೆಸಿದ  "ಭೂದಾನ" ಸಂಭಂದಿತ ಕಾರ್ಯಕ್ರಮ. ನಮ್ಮೂರ ವಿಶ್ವೇಶ್ವರ ಶಾಸ್ತ್ರಿಗಳು  ಮಾಡಿದ ಸ್ವಾಗತ ಭಾಷಣ... "ಬಯಸುವೆವು ತಮಗೆ ಸುಖಾಗಮನಂ...ಹಳ್ಳಿಗಳಾದ (?) ಬೀದಿಗಳಲಿ ..ಬಯಸುವೆವು ತಮಗೆ ಸುಖಾಗಮನಂ" ಎಂಬ ಹಾಡಿನೊಂದಿಗೆ.  ವಿನೋಬ ಭಾವೆ ಯವರ ಭಾಷಣ ಕೇಳಿದ್ದು ಮಾತ್ರ..ಏನೂ ಅರ್ಥ ವಾಗಲಿಲ್ಲ...ಭಾಷೆ ಬೇರೆಯಾದ ಕಾರಣ. ಆದರೆ ನಾನು ಮತ್ತು ನಾಣಿ (ನಾರಾಯಣಾಚಾರ್) ಮಾಡಿದ ಯಕ್ಷಿಣಿಯ ನೆನಪು ಹಸಿರಾಗಿದೆ.

ಗುರುರಾಜುಲು ನಾಯ್ಡು ಅವರ ಮಾತಿನ ಲಹರಿ, ಹಾಸ್ಯಭರಿತ ಮಾತುಗಳು, ಸುಮಧುರ ಕಂಠದ ಹಾಡಿ ನಿಂದ ಕೂಡಿದ ಹರಿ ಕಥೆ ತುಂಬ ಪ್ರಿಯವಾದದ್ದು.

ಈಚಿನ ದಿನಗಳಲ್ಲಿ ಪ್ರೊಫೆಸರ್ ಕೃಷ್ಣೇಗೌಡರು ಮಾತನಾಡುವ ಶೈಲಿ ನನಗೆ ಇಷ್ಟ.

ರಾಷ್ಟ್ರೀಯ ವಿದ್ಯಾಲಯದಲ್ಲಿ ಓದುವಾಗ ಜನವರಿ 26 ಹಾಗೂ ಆಗಸ್ಟ್ 15 ರ ಕಾರ್ಯಕ್ರಮದ ಭಾಗವಾಗಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಶಾಲೆಯ ಸಂಸ್ಥಾಪಕರಾದ ಶಿವಾನಂದ ಶರ್ಮ ಅವರ ಭಾಷಣ ಕೇಳುವುದು ಕಡ್ಡಾಯವಾಗಿತ್ತು...ಭಾಷಣದ ನಂತರ ಕೊಡುತ್ತಿದ್ದ ಲಾಡು ಮಾತ್ರವೇ  ಇಷ್ಟವಾಗುತ್ತಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ, ಮಕ್ಕಳಿಗೆ ತಲುಪವ ಹಾಗೆ ಭಾಷಣ ಮಾಡುವ ಕಲೆ ತುಂಬಾ ಮುಖ್ಯ. ಬಹಳಷ್ಟು ಸಲ ಮಕ್ಕಳಿಗೆ ಭಾಷಣಗಳು ಶಿಕ್ಷೆಯೇ.

ಆದರೆ ಮಕ್ಕಳ ಭಾಷಣವನ್ನು ಕೇಳಲು ಚಂದ.... ಅವರು ಹೇಗೆ ಮಾಡಿದರೂ.  ಕೈಕಟ್ಟಿ ಶುರು ಮಾಡಿದ ಭಾಷಣ... ಯಾರದೋ ಸಲಹೆಯಂತೆ ಕೈ ಬಿಚ್ಚಿದಾಗ ..ಮುಂದುವರಿಯದೆ ಇದ್ದ ಪ್ರಸಂಗ ಕಚಗುಳಿ ಇಡುವಂತದ್ದು.   ಅಂತಹ ಒಂದು ಭಾಷಣವನ್ನು ಸಂಭ್ರಮಿಸಿದ್ದು ನನ್ನ ಪುಟ್ಟ ಭಾವಮೈದ ನರೇನಿ ( Dr. H R Narendra) ಮಾಡಿದ್ದು. 



ತುಂಬಾ ಆಸೆಯಿಂದ ನ್ಯಾಷನಲ್ ಕಾಲೇಜ್ ಮೈದಾನಕ್ಕೆ  ಹೋಗಿ ಕೇಳಿದ್ದು ವಾಜಪೇಯಿಯವರ ಭಾಷಣ. ಅವರು ಮಾತಾಡುವಾಗ ಇರುವ ಹಾಸ್ಯದ ಲೇಪ ಹಾಗೂ ಮಧ್ಯೆ ಕೊಡುತ್ತಿದ್ದ  ಕ್ಷಣ ಕಾಲದ ಮೌನದ ಅಂತರ... ನನಗಿಷ್ಟ.

ಬೀchi ಯವರ ತಿಮ್ಮನ ಭಾಷಣ... ವಿಷಯದ ಪರಿವೆಯೇ ಇಲ್ಲದ.. ಬರೀ ಅದು, ಇದು ...ಎಂದು ತುಂಬಿದ ಮಾತುಗಳು... ಅವರು ಬರೆದ ಶೈಲಿಯಲ್ಲಿ ಓದಿ ಆನಂದಿಸಬೇಕು.

ಕೆಲವರಿಗೆ ಭಾಷಣ ಮಾಡುವ ಚಪಲ.. ಮೈಕ್  ಕೈಗೆ ಸಿಕ್ಕಿಬಿಟ್ಟರಂತೂ ಅವರ ವಾಕ್ ಪ್ರವಾಹವನ್ನು ತಡೆಯುವ ಅಣೆಕಟ್ಟು ಸಿಗದು. ಕೆಲವರು ಮೈಕ್ ಬಳಿಯೇ ಸುಳಿಯದವರು.

ಶಹಾಬಾದಿನಲ್ಲಿ ನಾವು ಮಾಡುತ್ತಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಷಣ ಮಾಡುವವರನ್ನು ಹುಡುಕಲು ಶ್ರಮಪಡುತ್ತಿದ್ದೆವು. ಅಂತಹ ಒಬ್ಬ ಭಾಷಣಕಾರರು ತಮ್ಮ ಭಾಷಣದ ಮಧ್ಯದಲ್ಲಿ 14 ಸಲ " ನಾನು ಚರಿತ್ರೆಯ ವಿದ್ಯಾರ್ಥಿಯಾಗಿ" ಎಂದು ಹೇಳಿದರು ಎಂಬ ಲೆಕ್ಕವು ಸಿಕ್ಕಿತ್ತು.

ತಮಾಷೆ ಎನಿಸಿದರೂ... ಮಾತುಗಳ ವರಸೆ ವೈವಿಧ್ಯಮಯವಾಗಿ ಕಾಣುವುದು ಬೀದಿಯ ನಲ್ಲಿ ಬಳಿಯ ಜಗಳದ ಬೈಗುಳಗಳಲ್ಲಿ... ಬಳಸುವ ಪದಗಳು ಯಾವ ನಿಘಂಟಿನಲ್ಲಿಯೂ ಸಿಗದು.

walk ಚಾತುರ್ಯ - ಇದು ವಾಕಿಂಗ್ ಮಾಡುವಾಗ ಹರಟೆ ಹೊಡೆಯುವ.. ಗುಂಪು ಗುಂಪಾಗಿ ಮಾತಾಡುತ್ತಾ ನಗುವುದು ಎಂದು ನನ್ನ ನಂಬಿಕೆ.

ಮಾತಿನಲ್ಲಿ ಮೋಡಿ ಮಾಡಿ, ಜೊತೆಯಲ್ಲಿದ್ದ ಎಲ್ಲರನ್ನೂ ನಗಿಸುತ್ತಿದ್ದವನು... ಉತ್ಸಾಹ ಬಂದಾಗ ಒಂದಷ್ಟು ಪೋಲಿ ಮಾತುಗಳನ್ನು ಪೋಣಿಸಿ ರಂಜಿಸುತ್ತಿದ್ದವನು.... ಶಹಾಬಾದಿನ ಸತ್ತಿ ( ಕೆ ಆರ್ ಸತ್ಯನಾರಾಯಣ...  ಈಗ ಅವನು ಇಲ್ಲ)


ಇನ್ನು ಬಹಳಷ್ಟು ರಾಜಕಾರಣಿಗಳು ವಿಧಾನಸಭೆ, ಲೋಕಸಭೆಯಲ್ಲಿ ಆಡುವ ಮಾತುಗಳು ಮಾಡುವ ಚರ್ಚೆಗಳು, ತುಂಬಾ ಕೆಳಮಟ್ಟಕ್ಕೆ ಇಳಿದಿವೆ. ವಿಷಯಾಂತರ ಮಾಡುವುದೇ ಅವರ ಧ್ಯೇಯ.... ವಿಷಯದ ಬಗ್ಗೆ ಚರ್ಚೆಗೆ ತಯಾರಿಯೂ ಇಲ್ಲ, ಹೇಳಲು ಬೇಕಾದ ವಿಷಯಗಳ ಸಂಗ್ರಹವೂ ಇಲ್ಲ... ಹಾಗಾಗಿ ಬಾಯಿಗೆ ಬಂದದ್ದೇ ಮಾತು... ಬೀದಿಯ ಜಗಳದ ಮಟ್ಟಕ್ಕೆ ಇಳಿದಿದೆ. ನಮ್ಮ ವಿಧಾನಸಭೆಯಲ್ಲಿ ... ಮೇಜಿನ ಮೇಲೆ ನಿಂತ, ಬಟ್ಟೆಯನ್ನು ಬಿಚ್ಚಿಟ್ಟ, ಅಶ್ಲೀಲ ಚಿತ್ರಗಳನ್ನು ನೋಡುತ್ತಾ,  ಕೂಗಾಡುತ್ತಾ, ಮಾತನಾಡುವವರನ್ನು ಅಡ್ಡಿ ಮಾಡುತ್ತಾ ಕಾಲ ಕಳೆಯುವ ರಾಜಕಾರಣಿಗಳನ್ನು.. ಏನೆಂದು ಹೆಸರಿಸಲಿ... ಪದವೇ ದೊರೆಯದು.

ಇನ್ನು ಕೆಲವರದು ವಿತಂಡವಾದ.... ಏನಾದರೂ ಇರಲಿ ತಮ್ಮ ದೃಷ್ಟಿಕೋನವೇ ಸರಿ ಎಂದು ವಾದಿಸುವವರು... 

ನನ್ನ ಸ್ನೇಹಿತ ನಾಗೇಂದ್ರ ಬಾಬು... ಅವನ ಮನೆಯ ನೆಲದ ಮೇಲೆ 6 ಎಂಬ ಅಂಕಿಯನ್ನು ಬರಸಿದ್ದಾನೆ... ನಾನು ಆರು ಎಂದರೆ ಅವನಿಗೆ ಅದು 9 ... ಹೌದಲ್ಲವೇ ಜಾಗ ಬದಲಾಯಿಸಿದಾಗ ಅದು ಸರಿಯೇ... ಇನ್ನೊಬ್ಬರ ದೃಷ್ಟಿಕೋನವನ್ನು ಪರಾಮರ್ಶಿಸಿ ಗೌರವಿಸುವುದೇ ನಿಜವಾದ ಜೀವನಶೈಲಿ.








ಆಗಿನ್ನು ದೂರದರ್ಶನ ಇಲ್ಲದಿದ್ದ ಕಾಲ...12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ವೀಕ್ಷಕ ವಿವರಣೆ ಆಕಾಶವಾಣಿಯಿಂದ ಪ್ರಸಾರ ಆಗುತ್ತಿತ್ತು. ಅಂತಹ ಒಂದು ವೀಕ್ಷಕ ವಿವರಣೆಯನ್ನು G P ರಾಜರತ್ನಂ ಅವರು ಕೊಡುತ್ತಿದ್ದರು. ಅವರ ಕಂಚಿನ ಕಂಠ, ಕನ್ನಡ ಪದಗಳ ಪ್ರಯೋಗ, ಭಾವಪೂರ್ಣವಾಗಿ ಹೇಳುತ್ತಿದ್ದ ರೀತಿಯಲ್ಲಿ ನಮ್ಮ ಕಣ್ಮುಂದೆ ಗೊಮ್ಮಟೇಶ್ವರನ ತಲೆಯ ಮೇಲಿಂದ ಕಳಶಗಳಲ್ಲಿ ಸುರಿದ ಅರಿಶಿಣ ಚಂದನ ಮತ್ತು ಕುಂಕುಮದ ಬಣ್ಣಗಳ ಚಿತ್ತಾರ ಮೂಡಿತ್ತು. ನಂತರ ಹಾಕಿದ ಹಾಲಿನ/ ನೀರಿನ ಅಭಿಷೇಕದ ವರ್ಣನೆ... ಎಲ್ಲ ಬಣ್ಣಗಳ ಹರಿವು ಮಸ್ತಕದಿಂದ ಪಾದದವರೆಗೆ ಹರಿದ ಮಹಾಮಸ್ತಕಾಭಿಷೇಕದ ಚಿತ್ರಣ ಕಣ್ಮನ ತಣಿಸಿತ್ತು. ಎಂಥ ವಾಕ್ಚತುರತೆ.

ಬುಧವಾರ ಸಂಜೆ ರೇಡಿಯೋ ಸಿಲೋನ್ ನಿಂದ ಬರುತ್ತಿದ್ದ ಬಿನಾಕಾ ಗೀತ್ ಮಾಲಾದ ನಿರೂಪಕ ಅಮೀನ್ ಸಾಯನಿ ಅವರ ಮಾತುಗಳು ಜನರನ್ನು ಮೋಡಿ ಮಾಡಿತ್ತು.

ಹೈ ಸ್ಕೂಲ್ ಓದುತ್ತಿದ್ದ ಸಮಯ... ಕ್ರಿಕೆಟ್ ಬಗ್ಗೆ ಒಂದಷ್ಟು ಆಸಕ್ತಿ ಇತ್ತು... ಸ್ನೇಹಿತರ ಜೊತೆ ಮಾತುಕತೆ ಕ್ರಿಕೆಟ್ ಬಗ್ಗೆ ಇರುತ್ತಿತ್ತು.. ಅಂತಹ ಸಮಯದಲ್ಲಿ.. ಕ್ರಿಕೆಟ್ ಕಾಮೆಂಟರಿ  ಸಂಪೂರ್ಣ ಅರ್ಥ ಆಗದಿದ್ದರೂ.. ಕೇಳುವುದು.. ಒಂದು ಶೋಕಿ...“This is vizzy reporting from brabourne stadium on the fourth day of the 5th test between India and west indies."      ಇಂತಹ ಕೆಲ ವಾಕ್ಯಗಳು ನೆನಪಿನಲ್ಲಿದೆ.

ಕೊನೆಯದಾಗಿ ವಾಕ್ ಚಾತುರ್ಯಕ್ಕೆ ಕಂತಿ ಹಂಪನ ಸಮಸ್ಯೆಗಳು ಸರಿಸಾಟಿ ಇಲ್ಲದ ಉದಾಹರಣೆ. ಅರ್ಥವಿಲ್ಲದ ಅಥವಾ ಅನರ್ಥವನ್ನೇ ಸೂಚಿಸುವ ವಾಕ್ಯದ ತುಂಡುಗಳನ್ನು ಉಪಯೋಗಿಸಿ ಅರ್ಥವತ್ತಾದ ಪದ್ಯವನ್ನು ರಚಿಸುವ ಕಂತಿಯ ಚಾಣ್ಮೆ ಚಾತುರ್ಯ ಅಮೋಘವಾದದ್ದು.

“ಇಲಿಗಳಂ ಮುರಿ ಮುರಿದು ತಿನ್ನುತ್ತಿರ್ಪರ್" ಎಂಬ ವಾಕ್ಯವನ್ನು "ಚಕ್ಕುಲಿಗಳಂ ಮುರಿ ಮುರಿದು ತಿನ್ನುತ್ತಿರ್ಪರ್" ಎಂದೂ.... ಹಾಗೆ ದನವಂ ಕಡಿ ಕಡಿದು ಬಸದಿ ಗೆಳೆಯುತಿರ್ದರ್" ... ಎನ್ನುವುದನ್ನು "ಚಂದನವಂ ಕಡಿ ಕಡಿದು ಬಸದಿಗೆಳೆಯುತಿರ್ದರ್"... ಎಂದು ಬದಲಾಯಿಸಿ ಪದ್ಯದ ಭಾಗವಾಗಿ ಮಾಡಿದ ಜಾಣ್ಮೆ. ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್......ಎನ್ನುವ ಮಾತನ್ನು ಸಾಕಾರಗೊಳಿಸಿದ ಮಹನೀಯರು.

ಎಲ್ಲಾ ಭೀಕರ ಭಾಷಣಕಾರರಿಗೆ ಒಳ್ಳೆಯ ಮಾತನಾಡುವ ಕಲೆ ಕೊಡು ದೇವರೇ ಎಂದು ಬೇಡುತ್ತಾ.... ವಾಕ್ಚತುರರಿಗೆ ನಮಸ್ಕಾರ ಹೇಳುತ್ತಾ...

ನನ್ನ ಈ ವಾಕ್ ಚತುರತೆಯ ಬಗೆಗಿನ ಬರಹಕ್ಕೆ ಪೂರ್ಣವಿರಾಮ ಹಾಕುವೆ.


D C Ranganatha Rao

9741128413

    

Comments

  1. Wakchaturya da jothe baraha chaturya nimmadu sir. Nimma baraha thumba chennagide sir 🙏

    ReplyDelete
  2. ಮಾನ್ಯರೇ,

    ವಾಕ್ ಝರಿ (ಹರಿಯುವ) ಆಗಬೇಕು..ಜಲಪಾತ(ಧುಮುಕುವ)ವಾಗಬಾರದು ಎನ್ನುವ ಮಾತಿದೆ. ಅದು ಆಗಿರಲಿ.

    ನುಡಿದರೆ ಮುತ್ತಿನ ಹಾರದಂತಿರಬೇಕು...ಎಂದು ಬಸವಣ್ಣನವರು ಹೇಳಿದರೆ...ನಮ್ಮ ಢುಂಡಿರಾಜರು, ನುಡಿದರೆ ಮುಂದಿರುವವರಿಗೆ ಎಂಜಲು ಹಾರದಂತಿರಬೇಕು ಎನ್ನುತ್ತಾರೆ.

    ಲೇಖನವು ಮಾತಿನ ವಿವಿಧ ಮಜಲುಗಳನ್ನು ದಾಟುತ್ತಾ, ಓದುಗರಿಗೆ ರಸದೌತಣವನ್ನು ಕೊಡುತ್ತದೆ. ಲೇಖಕರ ಜೀವನದ ವೈವಿಧ್ಯತೆ ಗೆ ಒಂದು ನಮನ.

    ಮಾತು ಬೆಳ್ಳಿ, ಮೌನ ಬಂಗಾರ ಎನ್ನುತ್ತಾರೆ. ಅವರೆಂದುಕೊಳ್ಳಲಿ, ನಾವು ಮಾತನಾಡುತ್ತಲೇ ಇರೋಣ.

    ಮಾತು ಮನೆ ಕೆಡಿಸಿತು..ತೂತು ಒಲೆ ಕೆಡಿಸಿತು ಎನ್ನುವ ಗಾದೆ ಇದೆ. ಇರಲಿ.ಬಾಯಿದ್ದವನು ಬರಗಾಲದಲ್ಲೂ ಬದುಕುತ್ತಾನಂತೆ.

    ಈ ರೀತಿ ತಮ್ಮ ಮಾತಿನಿಂದಲೇ ಜನಮನ ಗೆದ್ದಿರುವ ವಾಟಾಳ್ ನಾಗರಾಜ್, ಮಾ| ಹಿರಣ್ಣಯ್ಯ, ಎ.ಎಸ್. ಮೂರ್ತಿ, ಅಪರ್ಣಾ ರವರನ್ನು ಒಮ್ಮೆ ಇಲ್ಲಿ ನೆನೆಯೋಣ.

    ನಿಮ್ಮ ಮಾತುಗಳು ಬರವಣಿಗೆಯ ರೂಪದಲ್ಲಿ ಹೀಗೆಯೇ ಸಾಗುತ್ತಿರಲಿ ಎಂಬ ಸದಾಶಯಗಳು.

    ವಿಶ್ವಾಸಿ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  3. ಅದ್ಭುತ ಚಿಂತನೆ ಮಂದಿಡುತ್ತಾ, ಜೀವನಾನುಭವ ರಮ್ಯವಾಗಿದೆ. ಸಂತೋಷ ಎಂದರೆ ನಿಮ್ಮ ಹೋಲಿಕೆಗಳು, ಆರಿಸಿರುವ ವ್ಯಕ್ತಿಯಗಳು ನಮ್ಮ ಮನಸ್ಸಿನಲ್ಲೂ ಇದೆ. ಎಲ್ಲದಕ್ಕೂ ವಿಶೇಶವೆಂದರೆ, ವಿವರಣೆ ಮತ್ತು ಬರವಣಿಗೆ ಕಾದಂಬರಿಗಳಂತೆ, ದಿವಂಗತ ತ್ರಿವೇಣಿ ಕಾದಂಬರಿಗಳಂತೆ ಓದಿಸಿಕೂಂಡು ಹೋಗುತ್ತದೆ. ಓಟ್ಟಿನಲ್ಲಿ ಸಮತೂಕದ ಬರಹ. ಧನ್ಯವಾದಗಳು ಮತ್ತು ಅಭಿನಂದನೆಗಳು ಸಾರ್

    ReplyDelete
  4. ನಾಗೇಂದ್ರ ಬಾಬು3 August 2024 at 17:30

    ಜಗತ್ತಿನ ಎಲ್ಲ ಜಗಳ,ಕದನದ ಪ್ರಾರಂಭ ಒಂದು ಸಣ್ಣ ಮಾತಿನಿಂದ, ಎಂಥ ಶಕ್ತಿ
    ಇತ್ತೀಚೆಗೆ ಒಂದು ಸಣ್ಣ ಪದ ಕೂಡ
    ಸಂದರ್ಭಕ್ಕೆ ತಕ್ಕಂತೆ ಬೇರೆ ಬೇರೆ ಅರ್ಥ ಕಲ್ಪಿಸುವ ಮೂಲಕ ಬರೀ ಅಪಾರ್ಥ ಗೊಂದಲ ನಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಬಹುದು.....ಮಾತು ಭಗವಂತ ಮನುಷ್ಯನಿಗೆ ನೀಡಿರುವ ವರ...ಇನ್ನು ಮಾತಿನಿಂದ ನಮ್ಮ ಪೂರ್ವಜರು ಸೃಷ್ಟಿಸಿರುವ ಸಾವಿರಾರು ಭಾಷೆಗಳು ಸೋಜಿಗವೇ ಸರಿ...ಅದರಲ್ಲೂ ಕನ್ನಡ ಭಾಷೆ
    ಯಲ್ಲಿ ನಿಮ್ಮ ಬರಹ ಸುಂದರ...
    ಧನ್ಯವಾದಗಳು
    ಬಾಬು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ