ಗುರುಪೂರ್ಣಿಮೆ
ಮೊನ್ನೆ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಗುರುಪೂರ್ಣಿಮೆಯ ಶುಭಾಶಯಗಳು ಹಾಗೂ ಸಂಬಂಧಪಟ್ಟ ವಿಷಯಗಳ ಬಗ್ಗೆ ಮೆಸೇಜುಗಳ ಮಹಾಪೂರವೇ ಹರಿದು ಬಂತು. ಗುರುಪೂರ್ಣಿಮೆಯ ಆಚರಣೆ ಹಿಂದಿನಿಂದ ಇತ್ತಾದರೂ... ಅದು ಜನಮಾನಸದ ಎಲ್ಲ ಸ್ತರದ ಜನರನ್ನು ಮುಟ್ಟಿರಲಿಲ್ಲ.... ಸಾಮಾಜಿಕ ಜಾಲತಾಣದ ಕೃಪೆಯಿಂದಾಗಿ.. ಇಂದು ಬಹು ಜನರನ್ನು ಮುಟ್ಟಿದೆ... ಹಾಗೂ ಈ ವಿಷಯ ಜನಜನಿತವಾಗಿದೆ. ಇದೊಂದು ಧಾರ್ಮಿಕ ಆಚರಣೆಯೇ ಆಗಿಲ್ಲದೆ... ಸಾಮಾಜಿಕವಾಗಿಯೂ ಆಚರಣೆಯಲ್ಲಿ ಇದೆ... ತಮಗೆ ಇಷ್ಟವಾದ ಗುರುಗಳನ್ನು ಆದರಿಸಿ ಸತ್ಕರಿಸಿ ಗೌರವ ತೋರಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ.
ಅದರಲ್ಲೂ ಸಂಗೀತ ಕ್ಷೇತ್ರದಲ್ಲಿ ಗುರು ವಂದನೆಗೆ ಹೆಚ್ಚಿನ ಪ್ರಾಮುಖ್ಯತೆ.
ನಮ್ಮ ಸಂಸ್ಕೃತಿಯಲ್ಲಿ... ಅಪ್ಪ ಅಮ್ಮನ ನಂತರದ ಸ್ಥಾನ ಗುರುವಿಗೆ.
" ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಕೈಲಾಸಂ ಮಾತಿನಂತೆ.. ತಾಯಿಯೇ ಮೊದಲ ಗುರು.
" ಅಜ್ಞಾನಾತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ" ಅಜ್ಞಾನದಿಂದ ಕುರುಡಾದವನ ಕಣ್ಣುಗಳನ್ನು ಜ್ನಾನಾಂಜನ ಎಂಬ ಸಲಾಕೆಯಿಂದ.. ಕಣ್ಣನ್ನು ತೆರೆಸಿದವನೇ ಗುರು.
ವರ್ಣಮಾತ್ರಂ ಕಲಿಸಿದಾತಂ ಗುರು ಎನ್ನುವ ಹೇಳಿಕೆಯೂ ಇದೆ. ಗುರುವಿನ ಬಗ್ಗೆ ಇಂತಹ ಸಾಲುಗಳು ಅನೇಕವು.. ಬಗೆದಷ್ಟೂ ಸಿಗುವಂತಹವು.
ಗುರು ಹಾಗೂ ಗುರುಕುಲದ ಮೂಲ ರೂಪವೇ ಈಗ ಕಾಣದು. ಗುರುಕುಲದಲ್ಲಿ ಎಲ್ಲರೂ ಸಮಾನರು... ರಾಜನ ಮನೆಯವರಿರಲಿ ಅಥವಾ ಸಾಮಾನ್ಯ ಮನುಷ್ಯರ ಮನೆಯವರಿರಲಿ. ಎಲ್ಲರೂ ಎಲ್ಲ ಕೆಲಸಗಳಲ್ಲೂ ಭಾಗಿಯಾಗುತ್ತಾ ಅಧ್ಯಯನ ಮಾಡಬೇಕಿತ್ತು. ಶಿಷ್ಯತ್ವ ಸಿಗುವುದು ಗುರು ಒಪ್ಪಿಕೊಂಡಾಗ ಮಾತ್ರ.
ಚಿಕ್ಕ ವಯಸ್ಸಿನಲ್ಲಿ ಅಪಾರಜ್ಞಾನ ಸಂಪಾದಿಸಿ... ಅದ್ವೈತ ಸಿದ್ಧಾಂತವನ್ನು ಭಾರತದಾದ್ಯಂತ ಪಸರಿಸಿದ, ಹಾಗೂ ನಾಲ್ಕು ದಿಕ್ಕುಗಳಲ್ಲಿ ಪೀಠಗಳನ್ನು ಸ್ಥಾಪಿಸಿದ ಶಂಕರಾಚಾರ್ಯರಿಗೆ ನನ್ನ ನಮನಗಳು.
ಗುರುವಿನ ಗುಲಾಮ ನಾಗುವ ತನಕ ದೊರೆಯದಣ್ಣ ಮುಕುತಿ... ಗುಲಾಮ ಅನ್ನುವ ಪದ... ಶಿಷ್ಯ ತನ್ನನ್ನು ತಾನು ಸಂಪೂರ್ಣವಾಗಿ ಗುರುವಿಗೆ ಒಪ್ಪಿಸಿಕೊಳ್ಳುವುದು ಎಂಬ ಅರ್ಥ. ಶಿಷ್ಯನಿಗೂ ತನ್ನದೇ ಆದ ಚಿಂತನೆಗಳಿಗೆ, ಗುರುವಿನ ಜೊತೆ ಮುಕ್ತವಾಗಿ ...ತನ್ನ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮಾತನಾಡುವ ಅವಕಾಶವೂ ಇತ್ತು.
ಗುರು ಪರಂಪರೆಯ ಮೂಲಕ ಜ್ಞಾನವು ಮುಂದಿನ ತಲೆಮಾರುಗಳಿಗೆ ಪ್ರಸರಣವಾಗುತ್ತಿತ್ತು.
ಬ್ರಿಟಿಷರು ಮೆಕಾಲೆ ಪ್ರಣೀತ ವಿದ್ಯಾಭ್ಯಾಸ ನಮ್ಮ ಮೇಲೆ ಹೇರಿದ ಕಾರಣ ಗುರುಕುಲದ ಕಲ್ಪನೆ ಇಲ್ಲವೇ ಇಲ್ಲವೇನೋ ಅನ್ನುವಷ್ಟು ಹಿಂದಕ್ಕೆ ಸರಿದಿದೆ.
ಗುರುಕುಲದಲ್ಲಿ ವಿದ್ಯೆ ಶಿಷ್ಯ ಕೇಂದ್ರಿತ.. ಶಿಷ್ಯನಲ್ಲಿರುವ ಕಲಿಯುವ ಆಸಕ್ತಿ, ಆತನಲ್ಲಿರುವ ಪರಿಮಿತಿ, ಪರಿಣಿತಿ... ಇವುಗಳನ್ನು ಗುರುತಿಸಿ... ಸೂಕ್ತವಾದ ವಿದ್ಯೆಯನ್ನು.... ಜೀವನ ಶೈಲಿಯನ್ನು ಹೇಳಿಕೊಡಲಾಗುತ್ತಿತ್ತು... ಈಗಿನ ಪದ್ಧತಿಯಲ್ಲಿ ಅದು ವಿಷಯ ಕೇಂದ್ರಿತ. ಪಠ್ಯ ಪುಸ್ತಕದಲ್ಲಿ ಏನಿದೆಯೋ ಅದನ್ನು ಎಲ್ಲ ಮಕ್ಕಳಿಗೂ ಸಾಮಾನ್ಯವಾಗಿ ಹೇಳಿಕೊಡುವುದು.. ಅವರಲ್ಲಿರುವ ಚೈತನ್ಯವನ್ನು, ಆಸಕ್ತಿಯನ್ನು ಬಹುತೇಕ ಪರಿಗಣಿಸುವುದೇ ಇಲ್ಲ. ಹಾಗಾಗಿ ಈಗಿನ ಓದಿನ ಗುರಿ ಪರೀಕ್ಷೆಯಲ್ಲಿ ಅಂಕಗಳಿಸುವುದೇ ಆಗಿದೆ... ಜ್ಞಾನಾರ್ಜನೆ ಬಹು ಹಿಂದಕ್ಕೆ ಉಳಿದಿದೆ.
ಈ ಬದಲಾವಣೆಯ ಪರ್ವದಲ್ಲಿ ಗುರುಕುಲಗಳು ಶಾಲೆಗಳಾಗಿ ಗುರುಗಳು ಶಿಕ್ಷಕರಾಗಿ/ ಉಪಾಧ್ಯಾಯರಾಗಿ, ಶಿಷ್ಯರು ವಿದ್ಯಾರ್ಥಿಗಳಾಗಿ ಬದಲಾವಣೆಗೊಂಡರು. ಗುರುಗಳು... ಶಿಕ್ಷಕರಾದಾಗ /ಉಪಾಧ್ಯಾಯರಾದಾಗ ಆಯ್ದ ಕೆಲ ವಿಷಯಗಳನ್ನು ಮಾತ್ರ ಭೋದಿಸುವಲ್ಲಿಗೆ ಸೀಮಿತವಾಯಿತು. ಆಯಾ ಉಪಾಧ್ಯಾಯರು ಅವರಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರ ಓದಿಸುತ್ತಾ, ಬೋಧಿಸುತ್ತಾ.... ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಯಾರದೇ ಒಬ್ಬರ ಜವಾಬ್ದಾರಿಯಾಗದೆ.... ಗುರುಕುಲದ ಮೂಲೋದ್ದೇಶವಾದ ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ ಧಕ್ಕೆ ಉಂಟಾಯಿತು.
ಈಗಿನ ಟೀಚರ್ ಗಳನ್ನು ಗಮನಿಸಿದಾಗ ಬಹಳ ಮಂದಿಯ ಉದ್ದೇಶ ಜೀವನೋಪಾಯಕ್ಕಾಗಿ ಮಾಡುವುದು..." ಊದೋ ಶಂಖ ಊದಿದರಾಯಿತು... ಮಾಧವನ ಪೂಜೆ ಆದರೆಷ್ಟು ಬಿಟ್ಟರೆಷ್ಟು" ಎಂಬ ಮನೋಭಾವವೇ ಎದ್ದು ಕಾಣುತ್ತದೆ. ಮಕ್ಕಳ ಮಾರ್ಗದರ್ಶನದ ಜವಾಬ್ದಾರಿ ಹೊತ್ತ ಟೀಚರ್ ಗಳ ಮೊದಲ ಆಯ್ಕೆ ಎಷ್ಟೋ ಸಲ ಪಾಠಮಾಡುವುದಲ್ಲ.... ಎಲ್ಲಿಯೂ ಸಲ್ಲದಾಗ ಇಲ್ಲಿ ಬಂದವರೇ ಬಹಳ ಮಂದಿ. ಹಾಗಾಗಿ ಅವರಿಂದ ಇನ್ನೇನನ್ನು ಅಪೇಕ್ಷಿಸಲು ಸಾಧ್ಯ. ಇದೆಲ್ಲದರ ಮಧ್ಯೆ ಸಮರ್ಪಣ ಮನೋಭಾವದಿಂದ ವಿದ್ಯಾರ್ಥಿಗಳ ಹಿತವನ್ನು ಬಯಸುವ ಅನೇಕ ಮಂದಿ ಟೀಚರ್ ಗಳು ಇದ್ದಾರೆ ಎನ್ನುವುದೇ ಆಶಾಕಿರಣ. ಅವರು ನಿಜವಾದ ಅರ್ಥದಲ್ಲಿ ಗುರುಗಳು.
ಗುರುಕುಲದಲ್ಲಿ ಅಧ್ಯಯನ ಮಾಡಿದವರುಗಳಲ್ಲಿ ಆಯ್ದ ಪ್ರತಿಭಾವಂತರಾದ ಕೆಲ ವಿದ್ಯಾರ್ಥಿಗಳಿಗೆ ಎಲ್ಲ ಜ್ಞಾನವನ್ನು ಧಾರೆಯೆರೆದು... ಮುಂದಿನ ಪೀಳಿಗೆಗೆ ವರ್ಗಾಯಿಸಲು ತಯಾರು ಮಾಡಿದವರೇ ಗುರು ಪರಂಪರೆಯ ಭಾಗ ಎನ್ನುವ ಭಾವ ನನ್ನದು.
ಗುರು ಮೂಲ ಋಷಿ ಮೂಲ ಹುಡುಕಬಾರದು ಎಂಬ ಗಾದೆಯೇ ಇದೆ... ಸಾಮಾನ್ಯ ಜೀವಿಯಾಗಿದ್ದ ವ್ಯಕ್ತಿ.. ಗುರುವಾಗಿ ರೂಪುಗೊಳ್ಳುವ ಮಾರ್ಗದಲ್ಲಿ ಆದ ವೈಯುಕ್ತಿಕ ಬದಲಾವಣೆಗಳ ಬಗ್ಗೆ ನಮಗೇಕೆ ಚಿಂತೆ... ಗುರುವಾಗಿ ಅವರಲ್ಲಿರುವ ಜ್ಞಾನವನ್ನು ಪಡೆದರೆ ಸಾಕಲ್ಲವೇ?
ಗುರು ಶಿಷ್ಯರ ಸಂಬಂಧವನ್ನು ಯೋಚಿಸಿದಾಗ... ನನಗೆ ತುಂಬಾ ಪ್ರಭಾವ ಬೀರಿದ್ದು ಏಕಲವ್ಯ ದ್ರೋಣರ ಸಂಬಂಧ. ಏಕಲವ್ಯ ದ್ರೋಣರನ್ನೇ ಮಾನಸಿಕವಾಗಿ ಗುರುವೆಂದು ನಂಬಿ ಬಿಲ್ಲು ವಿದ್ಯೆಯನ್ನು ಕಲಿಯುತ್ತಾನೆ... ದ್ರೋಣರಾದರೋ... ಅರ್ಜುನನ ಹಿತವನ್ನು ಕಾಪಾಡಲು...( ಸ್ವಾರ್ಥ / ದ್ವೇಷ ಸಾಧನೆಗೆ ಎನ್ನಲೆ) ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ಪಡೆದ ಕ್ರಮ ಅಹಿತವೆನಿಸುತ್ತದೆ. ಗುರುದಕ್ಷಿಣೆ - ಶಿಷ್ಯನ ಮನೋಭಿಲಾಷೆಯಂತೆ ಇದ್ದರೆ ಚೆನ್ನ ಅಲ್ಲವೇ? ಇಲ್ಲಿ ಏಕಲವ್ಯನ ಗುರು ನಿಷ್ಠೆ ಎದ್ದು ಕಾಣುತ್ತದೆ. ನೈತಿಕವಾಗಿ ಗುರುವನ್ನೇ ಮೀರಿಸಿದ ಶಿಷ್ಯ- ಏಕಲವ್ಯ ಎನ್ನುವ ಭಾವ ನನ್ನದು.
ವಿದ್ಯೆ ಕಲಿಯುವ ಅಭಿಲಾಷೆಯಿಂದ... ತನ್ನ ಜಾತಿಯ ಬಗ್ಗೆ ಸುಳ್ಳು ಹೇಳಿದ ಕರ್ಣ.. ಪರಶುರಾಮನಿಂದ ಶಾಪಗ್ರಸ್ತನಾದ ಎಂಬುದು ಗುರು ಶಿಷ್ಯರ ಸಂಬಂಧದ ಇನ್ನೊಂದು ಮುಖ.
ಗುರು ಎಂದರೆ ಭಾರವಾದ, ತೂಕವುಳ್ಳ, ಮಹತ್ವವುಳ್ಳ ಎಂಬ ಅರ್ಥಗಳು ಇವೆ... ಜ್ಞಾನದಿಂದ ಮಹತ್ವ ಉಳ್ಳವರಾದ್ದರಿಂದ ಅವರು ಗುರು... ಅದನ್ನೇ ಬಸವಣ್ಣನವರು " ಅರಿವೇ ಗುರು" ಎಂದು ಹೇಳಿರಬಹುದು ಅಲ್ಲವೇ?
"ಗುರುಬಲ" ಇದೆ ಈಗ ಕೆಲಸ ಆಗುತ್ತೆ... ಅಥವಾ ಇಲ್ಲ ಕೆಲಸ ಆಗುವುದು ಕಷ್ಟ ಎಂಬ ಮಾತು ವ್ಯಕ್ತಿಗಳ ಜಾತಕವನ್ನು ಪರಿಶೀಲಿಸುವಾಗ ಹೇಳುವುದುಂಟು. ಇಲ್ಲಿ ಗುರು ಎಂದು ಗುರುತಿಸುವುದು ನವಗ್ರಹಗಳಲ್ಲಿ ಒಂದಾದ " ಗುರು ಗ್ರಹ" ವನ್ನು... ಗುರು ಗ್ರಹ ಸೌರಮಂಡಲದ ಅತ್ಯಂತ ಭಾರವಾದದ್ದು... ಸ್ವಾಭಾವಿಕವಾಗಿ ಹೆಚ್ಚು ತೂಕವುಳ್ಳದ್ದು ಹೆಚ್ಚು ಪ್ರಭಾವ ಬೀರುತ್ತದೆ ಅಲ್ಲವೇ? ಹಾಗಾಗಿ ಗುರುವಿನ ಬಲ ಶಿಷ್ಯನಿಗೆ (ವ್ಯಕ್ತಿಗೆ) ಯಾವಾಗಲೂ ಮುಖ್ಯ.
ನನ್ನ ವೈಯುಕ್ತಿಕ ನೆಲೆಯಲ್ಲಿ ಗುರುವಾಗಿ, ಮಾರ್ಗದರ್ಶಕರಾಗಿ ನನ್ನ ಮೇಲೆ ಪ್ರಭಾವ ಬೀರಿದ ಮಹನೀಯರು ಬಹಳಷ್ಟು ಜನ.. ತುಂಬಾ ಚಿಕ್ಕದಾದರೂ... ಈರುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ತೆಗೆಯುವ ವಿಧಾನವನ್ನು ಹೇಳಿಕೊಟ್ಟ ಕುಣಿಗಲ್ ಭಾವನನ್ನು ( ಹನುಮಂತರಾಯರು) ಈರುಳ್ಳಿ ಹೆಚ್ಚುವಾಗಲೆಲ್ಲ ನೆನೆಯುತ್ತೇನೆ.
ನನಗೆ ಮೊದಲಕ್ಷರ ಹೇಳಿಕೊಟ್ಟ ನಂಜುಂಡಯ್ಯ ಮೇಷ್ಟ್ರು.... ಅವರು ನೆಲದ ಮೇಲೆ ಬರೆದ ಅ ಮತ್ತು ಆ ಅಕ್ಷರಗಳ ಮೇಲೆ... ಹುಣಿಸೆ ಬೀಜಗಳನ್ನು ಜೋಡಿಸುತ್ತಾ ಕಲಿತದ್ದು.
ನನ್ನ ಪ್ರೈಮರಿ ಶಾಲೆಯ ಹನುಮಂತಯ್ಯ ಮೇಷ್ಟ್ರು... ನಾವು ತುಂಬಾ ಮೆಚ್ಚಿದ ವ್ಯಕ್ತಿ... ಅವರು ಬೇರೆ ಶಾಲೆಗೆ ವರ್ಗವಾದಾಗ... ಬೇಜಾರಿನಿಂದ ಅತ್ತಿದ್ದು ನೆನಪಿದೆ.... ಅವರು ಸಮಾಧಾನ ಮಾಡುತ್ತಾ ಹೇಳಿದ " ಮುಂದೆ ಬರುವವರು ಇನ್ನೂ ಒಳ್ಳೆಯವರು ಇರುತ್ತಾರೆ".... ಎಂಬ ಸಮಾಧಾನ, ಜೊತೆಗೆ ಧನಾತ್ಮಕ ಚಿಂತನೆ(positive thinking) ತುಂಬಿದ ಮಾತುಗಳು, ಮುಂದಿನ ದಿನಗಳ ಬಗ್ಗೆ ಯೋಚಿಸುವಾಗ... ಪ್ರೇರಕ ಶಕ್ತಿ.
ಇನ್ನು ಶಂಕರನಾರಾಯಣ್ ರಾವ್ ಮೇಷ್ಟ್ರಂತೂ... ನನಗೆ ಆದರ್ಶ ವ್ಯಕ್ತಿ... ಅವರ ಮಕ್ಕಳ ಬಗೆಗಿನ ಶ್ರದ್ಧೆ.... ಪ್ರಶ್ನೆ ಪತ್ರಿಕೆಗಳನ್ನು ಸ್ವತಃ ಕೈಯಲ್ಲಿ ಬರೆದು.. ನಮಗೆ ಪರೀಕ್ಷೆಯ ಅನುಭವವನ್ನು ಕೊಟ್ಟವರು... ಕರೆಂಟ್ ಇಲ್ಲದ ಕಾಲದಲ್ಲಿ ... ಏನೇನೋ ವೈರುಗಳನ್ನು ಜೋಡಿಸಿ... ನೆಲದಲ್ಲಿ ಹೂತು...ಕಿವಿಗೆ ಸಿಕ್ಕಿಸಿ ಕೊಂಡು(ear phone) ನಮಗೆ ರೇಡಿಯೋ ಕೇಳುವ ಖುಷಿಯನ್ನು ಕೊಟ್ಟವರು.... ಪ್ರಾತಃ ಸ್ಮರಣೀಯರು.
ಈಜಲು ಕಲಿಸಿದ ನಮ್ಮೂರು ದೊಡ್ಡಜಾಲದ ರಾಮಲಿಂಗಣ್ಣಯ್ಯ.. ನೀರಿಗೆ ಇಳಿದಾಗಲೆಲ್ಲಾ ನೆನಪಾಗುವ ಆ ಪ್ರೀತಿಯ ಮುಖ.
ರಾಷ್ಟ್ರೀಯ ವಿದ್ಯಾಲಯದಲ್ಲಿ ಇಂಗ್ಲೀಷ್ ಪಾಠ ಹೇಳಿಕೊಟ್ಟ S R ಸುಬ್ಬರಾವ್ ಅವರು (ಪ್ರೀತಿಯ SRS). ಅವರು ಹೇಳಿಕೊಟ್ಟ ಇಂಗ್ಲಿಷ್ ಪ್ರಯೋಗಗಳು ಇಂದಿಗೂ ನನಗೆ ಉಪಯೋಗಕ್ಕೆ ಬರುತ್ತಿವೆ. "change the degree" ಎಂಬ ವ್ಯಾಕರಣದ ಪಾಠ ಮಾಡುತ್ತಾ ಅವರು ಕೊಟ್ಟ ಒಂದು ವಾಕ್ಯ.."Lalbagh is the best place for lovers to meet" ಇಂದಿಗೂ ನೆನಪಿದೆ... ನಮ್ಮ ಶಾಲೆ ಲಾಲ್ ಬಾಗ್ ಪಕ್ಕದಲ್ಲಿದ್ದು... ನಾವು ಕೂತ ಜಾಗದಿಂದ ಕಣ್ಣಿಗೆ ಬೀಳುತ್ತಿತ್ತು. lovers ಅನ್ನುವ ಪದ ನಮಗೆಲ್ಲ ಒಂತರಾ ಕಚಗುಳಿ ಇಟ್ಟದ್ದು ಆಗಿನ ಕಾಲಕ್ಕೆ ಸಹಜವೇನೋ.
ನನಗೆ ಉಪನಯನವಾದ ಹೊಸದರಲ್ಲಿ...ಮೂರೂ ಕಾಲದ ಸಂಧ್ಯಾವಂದನೆಯ ಪಾಠವನ್ನು ತುಂಬಾ ವಿಷದವಾಗಿ ಹೇಳಿಕೊಟ್ಟವರು ಚಿಕ್ಕಬಳ್ಳಾಪುರದ ತಾತ ( ನನ್ನಮ್ಮನ ಅಪ್ಪ... ರಾಮಕೃಷ್ಣಪ್ಪ ನವರು). ಅದರಲ್ಲೂ ಅವರು ದಿಕ್ಕುಗಳನ್ನು ಗುರುತಿಸುವ ಬಗೆಯನ್ನು ಹೇಳಿಕೊಟ್ಟಿದ್ದು ಇಂದಿಗೂ ಉಪಯೋಗಿಸುತ್ತೇನೆ.
ಇನ್ನು ನನ್ನ professional career ಪ್ರಾರಂಭದಲ್ಲಿ... ಶಹಾಬಾದಿನಲ್ಲಿ... ನನಗೆ ಮಾರ್ಗದರ್ಶನ ಮಾಡಿದವರು A ಗಣೇಶ ಭಟ್ ಅವರು.... ಅವರು ಕೊಟ್ಟ ಪ್ರೋತ್ಸಾಹ... ಹೊಸ ವಿಷಯಗಳನ್ನು ತಿಳಿಯಲು / ಕೆಲಸಗಳನ್ನು ಮಾಡಲು ಕೊಟ್ಟ ಅವಕಾಶ ನನ್ನಲ್ಲಿ ( ಯಾವುದೇ ಹೊಸ ವಿಷಯವನ್ನು ಸ್ವಂತವಾಗಿ ಆಲೋಚಿಸುವ... ಪರಾಮರ್ಶಿಸುವ ಶಕ್ತಿ) ಆತ್ಮವಿಶ್ವಾಸವನ್ನು ತುಂಬಿತು...
ನನ್ನ ಆಪ್ತ ಸಮಾಲೋಚನೆಯ ಕಲಿಕೆಯ ಹಾದಿಯಲ್ಲಿ ಮಾರ್ಗದರ್ಶನ ಮಾಡಿದ ಪಂಕಜ ಮೇಡಂ.... ಅಪಾರವಾಗಿ ಅವಕಾಶಗಳನ್ನು ಕಲ್ಪಿಸಿಕೊಟ್ಟು, ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪದ್ಮಶ್ರೀ ಡಾಕ್ಟರ್. CR ಚಂದ್ರಶೇಖರ್ ಅವರು... ಇಂದಿಗೂ ಅವರ ಒಡನಾಟವಿದೆ ಎಂಬುದೇ ಹೆಮ್ಮೆ.
ಇನ್ನು ನನ್ನ key board ಕಲಿಕೆಯ ಮಾರ್ಗದಲ್ಲಿ... ಗೋಪಾಲ್ ಸಂಗೀತ್ ಎನ್ನುವ ಯೂಟ್ಯೂಬ್ ಚಾನೆಲ್ ನ ಗೋಪಾಲ್ ಮಹತೋ ಅವರನ್ನು ನೆನೆಯಲೇಬೇಕು. ಅವರು ನನಗೆ ದ್ರೋಣಾಚಾರ್ಯರು( ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳದವರು). ಅವರಿಂದ ಸಾಕಷ್ಟು ಕಲಿತಿದ್ದೇನೆ... ಬೆರಳುಗಳನ್ನು ಬಳಸುವ ಕೆಲ ಸಂಕೀರ್ಣ ಚಳಕಗಳನ್ನು ನಿರೂಪಿಸಿ... ಹಾಗೆಯೇ ನನ್ನದೇ ಮಾರ್ಗದಲ್ಲಿ ಸ್ವರಗಳ ಅಲಂಕಾರಗಳನ್ನು ರೂಪಿಸುವ/ ಜೋಡಿಸುವ ಕಲೆಯನ್ನು ತಿಳಿಸಿದವರು.
ಇನ್ನು ಗೂಗಲ್ ಗುರುವನ್ನು ಮರೆಯಲಾದೀತೇ... ಅದು ಎಲ್ಲ ವಿಷಯಗಳ ಗಣಿ... ಹೆಕ್ಕಿ ತೆಗೆಯುವ ಕಲೆ ಬೇಕಷ್ಟೇ.... ಗೂಗಲ್ ಗುರು ನನಗೆ ತುಂಬಾ ಜ್ಞಾನವನ್ನು ನೀಡಿದೆ.
ಇನ್ನು ಕೆಲ ತಮಾಷೆಯ ವಿಷಯಗಳು ಗುರು ಶಿಷ್ಯರಿಗೆ ಸಂಬಂಧಿಸಿದಂತೆ..
ಚೋರ ಗುರು ಚಂಡಾಲ ಶಿಷ್ಯ ಎನ್ನುವುದು ಒಂದು ನುಡಿಗಟ್ಟು... ಗುರುವಿಗೆ ತಕ್ಕನಾದ ಶಿಷ್ಯ... ಕಂತೆಗೆ ತಕ್ಕ ಬೊಂತೆ. ಕೈವಾರದ ತಾತ ಬರೆದ "ಶ್ರೀರಾಮ ... ನೀ ನಾಮಮು" ಎಂಬ ಹಾಡಿನ ಒಂದು ಸಾಲು ಹೀಗಿದೆ.. "ಮಾಯಾವಾದಿ ಗುರುನೀ ಭೋದ ಮೋಸಾ ಮನ್ನಾದೀ"
ಗುರುವಿಗೆ ತಿರುಮಂತ್ರ ಹಾಗೂ ಗುರುವಿಗೆ ಗುಟುಕು ನೀರು... ಎನ್ನುವ ನಾಣ್ಣುಡಿ... ಶಿಷ್ಯನ ತಲೆಹರಟೆಯ ಅತಿರೇಕ ಎನ್ನಬಹುದೇ?
ಸ್ವಲ್ಪ ನನ್ನ ಬಗ್ಗೆ ತುತ್ತೂರಿಯಾದರೂ.. ಹೇಳಲೇಬೇಕೆಂಬ ಆಸೆ ನನ್ನದು.. ಚಿಕ್ಕಂದಿನಿಂದಲೂ ನನ್ನ ಜೊತೆಯವರಿಗೆ ಹಾಗೂ ಚಿಕ್ಕವರಿಗೆ ಪಾಠ ಹೇಳುವುದು ನನಗೆ ತುಂಬಾ ಇಷ್ಟವಾದ ಕೆಲಸ.... ಹಳೆಯ ಸ್ನೇಹಿತರು ಸಿಕ್ಕಾಗ ಮಾತಾಡ್ತಾ.. ಹೊಸಬರೊಂದಿಗೆ ಪರಿಚಯ ಮಾಡುವಾಗ..." ಇವ್ನು ನನಗೆ ಪಾಠ ಹೇಳಿಕೊಟ್ಟ ಗುರು" ಎಂಬ ಮಾತು ಕೇಳಿದಾಗ ಸಹಜವಾಗಿಯೇ ಖುಷಿಯಾಗುತ್ತದೆ. ಹಾಗೆ ನನ್ನ ಆಪ್ತ ಸಮಾಲೋಚನೆಯ ಮೂಲಕ ನೆಮ್ಮದಿ ಪಡೆದುಕೊಂಡವರು... ಅದನ್ನು ನೆನೆಯುತ್ತಾ.. ಮಾರ್ಗದರ್ಶಕರು.... guide.. ಸಹಾಯ ಮಾಡಿದವರು ಎಂದು ಹೇಳಿದಾಗ ತುಂಬ ಸಂತೃಪ್ತಿಯನ್ನು ಕಂಡಿದ್ದೇನೆ. ಅಂತಹ ಎರಡು ಮೆಸೇಜ್ ಗಳು ಗುರುಪೂರ್ಣಿಮೆಗೆ ಉಡುಗೊರೆಯಾಗಿ ಬಂದವು.
ಈ ಕಾಯಕಕ್ಕೆ ದಾರಿ ತೋರಿದ ಸ್ನೇಹಿತ A S ಆನಂದ್ ಹಾಗೂ ಸಕಲಕೆಲ್ಲಕೂ ಅಕಳಂಕ ಗುರುವಾದ.. ನನಗೆ ಈ ಕೆಲಸ ಮಾಡಲು ಪ್ರೇರೇಪಣೆ ನೀಡಿದ ಆದೈವಕ್ಕೆ ನಾನು ಚಿರಋಣಿ.
ಗುರು ಪೂರ್ಣಿಮೆ ನಾವು ಪಡೆದ ಜ್ಞಾನಕ್ಕೆ... ಪ್ರೇರೇಪಣೆಗೆ.. ಮಾರ್ಗದರ್ಶನಕ್ಕೆ ಕೃತಜ್ಞತೆಯನ್ನು ಸೂಚಿಸಲು ತುಂಬಾ ಪ್ರಶಸ್ತ ಸಮಯ ಎಂದು ನನ್ನ ದೃಢವಾದ ನಂಬಿಕೆ.
ನನ್ನ ಈ ದೀರ್ಘವಾದ ಜೀವನ ಯಾತ್ರೆಯಲ್ಲಿ ಮಾರ್ಗದರ್ಶನ ಮಾಡಿದ, ಪ್ರೇರೇಪಿಸಿದ, ಸಹಾಯ ಮಾಡಿದ ಎಲ್ಲಾ ಅಗಣಿತ ಚೇತನಗಳಿಗೆ....
ನನ್ನ ಹೃತ್ಪೂರ್ವಕ ನಮಸ್ಕಾರಗಳನ್ನು ತಿಳಿಸುತ್ತಾ....
ಗುರುಭ್ಯೋ ನಮಃ
D C Ranganatha Rao
9741128413
ಗುರುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ, ಲೇಖನ ಓದಿ ಖುಷಿಯಾಯಿತು ಅಂದಹಾಗೆ ನೀವೂ ನನಗೆ ಗುರುಗಳು 🙏🙏 ಗುರುಭ್ಯೋ ನಮಃ 🙏🙏.
ReplyDeleteDHANYOSMI. What a tribute to GURU . Realistic dedication to all type of GURU'S.
ReplyDeleteಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು
ReplyDeleteಅಲ್ಲಿಂದ ನಾವು ಇರುವವರೆಗೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾಠ ಕಳಿಸುತ್ತಾರೆ. ನಾವು ಕಲೀತಿರುತ್ತೇವೆ. ಶಾಲಾ ಕಾಲೇಜು ದಿನಗಳಲ್ಲಿ ಕಲಿಸಿದ ಗುರುಗಳನ್ನು ಮರೆಯೋದಕ್ಕೆ ಆಗೋಲ್ಲ. ನಿಮಗೆ ನೆನಪಿನ ಶಕ್ತಿ ಹೆಚ್ಚು. ಹಳೆಯ ನೆನಪುಗಳನ್ನು ಹಚ್ಚ ಹಸಿರಿನಂತೆ ಬರೆದಿದ್ದೀರಿ ಸರ್
गुरुरेव गतिः गुरुमेव भजे
ReplyDeleteगुरुणैव सहास्मि नमो गुरवे ।
न गुरोः परमं शिशुरस्मि गुरोः
मतिरस्ति गुरौ मम पाहि गुरो ॥
ಸಾರ್ ಪ್ರತಿ ಗುರುಗಳ ಬಗ್ಗೆ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಿ
ನೀವು ನನ್ನ ಗುರುಗಳು ಸಾರ್
ನಾನು ಬಹಳಷ್ಟು ಹರಟೆಗಳಲ್ಲಿ ಗುರುಕುಲದ ಅವನತಿ ಮತ್ತು ಅದರಿಂದ ಹಿಂದೂ ಸಮಾಜದ ಇಂದಿನ ಹಾಗೂ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕಾರಕಗಳು ತಾರ್ಕಿಕ ವಾಗಿ ತಲುಪದೆ ಗೊಂದಲ ಉಂಟಾಗಿ ಒಂದು ರೀತಿಯ ಎಡಬಿಡಂಗಿ ಸ್ತಿತಿ ಇರುವ ಬಗ್ಗೆ ಚರ್ಚೆ ಮಾಡಿದ್ದೇನೆ....ಮದರಾಸಗಳಂತೆ ದರ್ಮದ ಬಗ್ಗೆ ಮನಸ್ಸಿನಲ್ಲಿ ಆಳವಾಗಿ ಬೇರು ರುವಂತೆ ಮಾಡುವಲ್ಲಿ ವಿಫಲರಾಗಿದ್ದೇವೆ
ReplyDeleteಇನ್ನು ನಮ್ಮ ಪೀಳಿಗೆಯ ಯಾರು ಕೂಡ ತಮ್ಮ ಮಕ್ಕಳು ಶಿಕ್ಷಕ (ಗುರುಗಳು) ಆಗಲಿಯಂದು ಬಯಸುವುದಿಲ್ಲ...ಹಾಗಾಗಿ ಇಂದು ಒಳ್ಳೆಯ ಗುರು ಸಿಗುವುದೇ ಅಪರೂಪ ಮತ್ತೊಮ್ಮೆ ನಿಮ್ಮ ನೆನಪಿನ ಶಕ್ತಿ ಹಾಗೂ ಅದನ್ನು ಸುಂದರವಾಗಿ ಬರಹಕ್ಕೆ ಇಳಿಸುವ ಶೈಲಿಗೆ
ನಮೋ ನಮೋ...
ಬಾಬು
Guru is the
ReplyDeleteGuru is the Via media between us & truth
ReplyDeleteಮಾನ್ಯರೇ,
ReplyDeleteಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು, ಇದಕ್ಕೆ ಕೃಷ್ಣ-ಅರ್ಜುನ, ರಾಮಕೃಷ್ಣರು-ನರೇಂದ್ರರು ಉತ್ತಮ ಉದಾಹರಣೆಗಳು.
ಲೇಖನದಲ್ರಿ ಗುರುವಿನ ಬಗ್ಗೆ ಸರ್ವಾಂಗೀಣ ಚಿತ್ರಣವಾಗಿದೆ. ಅದರ ಬಗ್ಗೆ ನೀವು ಸಿದ್ಧಹಸ್ತರು.
ವೈಯುಕ್ತಿಕವಾಗಿ ನನಗೆ ಪ್ರಾಥಮಿಕ ಶಾಲೆಯ ಗುರುಗಳೇ ಇಂದಿಗೂ ಅಚ್ಚು ಮೆಚ್ಚು.
ಈಗಲೂ ಗುರುಕುಲಗಳಿವೆ. ಪೋಷಕರು ತಮ್ಮ ಮಕ್ಕಳನ್ನು ಸೇರಿಸುವ ಮನಸ್ಸು ಮಾಡಬೇಕಷ್ಟೆ.
ಅಂದಿನ ಗುರುಕುಲಗಳಲ್ಲಿ ಬರವಣಿಗೆಯ ಸಾಧನಕ್ಕಿಂತ ಮೌಖಿಕವಾಗಿಯೇ ಙಾನಾರ್ಜನೆ, ಙಾನದ ವರ್ಗಾವಣೆ ಮಾಡುತ್ತಿದ್ದುದು ಶ್ಲಾಘನೀಯ.
ಪಂಚ್:
ಅಂದಹಾಗೇ ನನ್ನ ಹೆಸರಿನಲ್ಲಷ್ಟೇ ಗುರುವಿದ್ದಾನೆ ಎಂಬುದೇ ದುಖ:ದ ಸಂಗತಿ.!
ಆದರಗಳೊಡನೆ,
ಗುರುಪ್ರಸನ್ನ
ಚಿಂತಾಮಣಿ