ಸುಖದ ಪರಿಕಲ್ಪನೆ
ಹೋದ ಗುರುವಾರ NIMHANS ನ ಅಂಗ ಸಂಸ್ಥೆಯಾದ ವಯೋಮಾನಸ ಸಂಜೀವನಿಯ ಸ್ಪೂರ್ತಿ ತಂಡದ.. ವಾರದ online ಕಾರ್ಯಕ್ರಮದಲ್ಲಿ ಮಾತನಾಡುವ ಅವಕಾಶವನ್ನು ಮಾಡಿಕೊಟ್ಟಿದ್ದರು ಶ್ರೀಮತಿ ರತ್ನಪ್ರಭಾ ಅವರು. ವಿಷಯ ಇಂದಿನ ನನ್ನ ಶೀರ್ಷಿಕೆಯೇ... ಸುಖದ ಪರಿಕಲ್ಪನೆ. ಮೊದಲ ಹಂತದಲ್ಲಿಯೇ ಭಾಗಿಗಳಾಗಿದ್ದ ಜನರನ್ನು.. ಅವರ ದೃಷ್ಟಿಯಲ್ಲಿ.. ಸುಖ ಎಂದರೆ ಏನು? ಎಂಬ ಪ್ರಶ್ನೆಗೆ ಸಿಕ್ಕ ಉತ್ತರಗಳು ಹೀಗಿತ್ತು
* ತೃಪ್ತಿಯಿಂದ ಇರುವುದು
* ಆಸೆಯೇ ದುಃಖಕ್ಕೆ ಕಾರಣ
* ನಮಗೆ ಬೇಕಾದ್ದು ಸಿಕ್ಕಾಗ
* Acceptance.. ಒಪ್ಪಿಕೊಳ್ಳುವುದು
* Balancing of life. ಹೊಂದಾಣಿಕೆ
* ಬೇರೆಯವರಿಗೆ ಸಂತೋಷ ಹಂಚುವುದು
* ಸಮಾಜ ಸೇವೆ
* ಆರೋಗ್ಯ
* ಕಷ್ಟವಿಲ್ಲದ್ದು.... ಸುಖ
* ಶಾಂತಿ
* ಖುಷಿ
* ನೆಮ್ಮದಿ
* ಚಿಂತೆ ಇಲ್ಲದ ಜೀವನ
* ಸುಖವಾದ ಮರಣ
* ಹೊಗಳಿಕೆ ಸಿಕ್ಕಾಗ
* ಸಂಬಂಧಗಳು ಚೆನ್ನಾಗಿದ್ದಾಗ
* ಗೆಲುವು / ಯಶಸ್ಸು
* Expectations
* ತಿನ್ಕೊಂಡು ಉಂಡ್ಕೊಂಡು ಹಾಯಾಗಿರೋದು
* ಬೆಚ್ಚನಾ ಮನೆಯಿರಲು..... ಸರ್ವಜ್ಞ
ಸುಖ ಅನ್ನುವುದು... ಅವರವರ ಭಾವನೆ/ ಕಲ್ಪನೆ.... ಸಾಮಾನ್ಯವಾಗಿ ಅವರಿಗೆ ಆ ಸಮಯದಲ್ಲಿ ಕಷ್ಟ ಅನ್ನಿಸಿದ್ದು ಇಲ್ಲವಾದಾಗ ಅದು ಸುಖ.
ಮೇಲಿನ ಎಲ್ಲಾ ವಿಷಯಗಳನ್ನು ಸ್ವಲ್ಪ ಮಟ್ಟಿಗೆ ಒಳಗೊಂಡು ನನ್ನದೇ ಆದ ವಿಶ್ಲೇಷಣೆಯನ್ನು ಸೇರಿಸಿ, ಮಾತನಾಡಿ ಕಾರ್ಯಕ್ರಮ ಮುಗಿಸಿದೆ.
ನಂತರ.. ನನ್ನ ಜೀವನದ ಒಂದು ಸಿಂಹಾವಲೋಕನ ಮಾಡಿ ಅದರಲ್ಲಿ ಸುಖದ ಕಲ್ಪನೆ ಹೇಗಿತ್ತು ಎಂದು ತಿಳಿಯುವ ಮನಸ್ಸಾಯಿತು... ಇದೋ ಇಲ್ಲಿದೆ ಅದರ ಸಾರ...
ನನ್ನ ಹಳ್ಳಿಯ ಜೀವನದ ಸಮಯದಲ್ಲಿ ಆಟಕ್ಕೆ ಬಹಳ ಪ್ರಾಮುಖ್ಯತೆ... ನಂತರ ಹಸಿವು ಅನಿಸಿದಾಗ ಏನಾದರೂ ತಿನ್ನಲು ಬೇಕು. ಅಮ್ಮ ಕೊಡುತ್ತಿದ್ದ ಅವಲಕ್ಕಿ, ಒಣ ಕೊಬ್ಬರಿ, ಬೆಲ್ಲದ ಉಂಡೆ, ಇವು ತುಂಬಾ ಖುಷಿಕೊಡುತ್ತಿದ್ದವು... ಸುತ್ತಮುತ್ತ ಮನೆಗಳ ತೋಟದಲ್ಲಿ / ಹೊಲಗಳಲ್ಲಿ ಬಿಟ್ಟಿರುತ್ತಿದ್ದ ತಿನ್ನುವಂತಹ ಯಾವುದೇ ಹಣ್ಣು, ಕಾಯಿ, ಪಿಂದೆ ...
ಆಯಾ ಕಾಲಕ್ಕೆ ತಕ್ಕಂತೆ ಸಿಗುತ್ತಿದ್ದ ಮಾವು, ದಾಳಿಂಬರೆ, ಸೀಬೆ ( ಚೇಪೆಕಾಯಿ), ತೊಂಡೆ ಹಣ್ಣು, ಕಾರೆ ಹಣ್ಣು, ಕಕ್ಕೆ ಹಣ್ಣು, ಬಿಕ್ಕೆ ಹಣ್ಣು, ಕುರುಡಿ ಹಣ್ಣು, ಮಿರಡಿ ಹಣ್ಣು, ಬುಡಿಮೆ ಹಣ್ಣು, ಬುಡ್ಡೆ ಹಣ್ಣು, ಕಾಚಿ ಹಣ್ಣು, (ಕರಿ ಕಾಚಿ , ಕೆಂಪು ಕಾಚಿ) ಕಂಬಳಿ ಹಣ್ಣು (ಉಪ್ಪು ನೇರಳೆ ಹಣ್ಣು)
ಈಚಲ ಹಣ್ಣು, ಪರಂಗಿ ಹಣ್ಣು, ನೇರಳೆ ಹಣ್ಣು, ಅವಕಾಶ ಸಿಕ್ಕರೆ ಹಲಸಿನ ಹಣ್ಣು ಸಹ, ಬೇಲದ ಹಣ್ಣು ಕೊನೆಗೆ ಬೇಲಿ ಹಣ್ಣು (ಲಾಂಟಾನಾ)...
cactus ( ಹೆಸರೇಕೋ ನೆನಪೇ ಬರಲಿಲ್ಲ.. ಚಿತ್ರ ಹಾಕಿದ್ದೇನೆ) ಗಿಡದ ಹಣ್ಣು... ಸಿಕ್ಕಿದ ಎಲ್ಲವನ್ನೂ ತಿಂದು ಖುಷಿ ಪಟ್ಟದ್ದು... ಇದಕ್ಕೆ ಜೊತೆಯಾಗಿ ಅವರೆಕಾಯಿ , ಕಡಲೆಕಾಯಿ, ಗೆಣಸು, ಆಲೂಗಡ್ಡೆ, ಈರುಳ್ಳಿ, ರಾಗಿ ತೆನೆ ಇವನ್ನೆಲ್ಲ ಸುಟ್ಟು ತಿನ್ನುವುದು... ಅದು ಮನೆಯಲ್ಲಾಗಲಿ ಅಥವಾ ಹೊಲಗಳ ಪಕ್ಕದಲ್ಲಾಗಲೀ...
ಇನ್ನು ಕಬ್ಬಿನ ಕಾಲದಲ್ಲಿ ಒಂದು ಜಲ್ಲೆಯನ್ನೇ ಸಿಗಿದು ತಿನ್ನುವುದು.... ಆಲೆ ಮನೆಯಲ್ಲಿ ಬಿಸಿ ಬೆಲ್ಲ ತಿನ್ನುವುದು... ತಟ್ಟೆಯಲ್ಲಿ ಒಂದಷ್ಟು ಕಡಲೆಬೀಜ, ಕಡಲೆ ಪಪ್ಪು, ಒಣ ಕೊಬ್ಬರಿ ಚೂರು ಎಲ್ಲಾ ಹಾಕಿಕೊಂಡು ಅದರ ಮೇಲೆ ಬೆಲ್ಲದ ಪಾಕವನ್ನು ಹಾಕಿಸಿ ಕೊಂಡು... ಪಾಕಿನ ಪಪ್ಪು (ಈ ಹೆಸರು ಯಾಕೆ ಬಂತು ಗೊತ್ತಿಲ್ಲ) ತಿನ್ನುವುದು. ಹುಣಸೆಕಾಯಿಯ ಜೊತೆಗೆ ಉಪ್ಪು ಹಸಿಮೆಣಸಿನಕಾಯಿ ಸ್ವಲ್ಪ ಜೀರಿಗೆ ಹಾಕಿ ಕುಟ್ಟಿ ಅದನ್ನು ಮಡಿಸಿದ ಪೊರಕೆ ಕಡ್ಡಿಗೆ ಸಿಕ್ಕಿಸಿ... ಈಗಿನ ಲಾಲಿಪಪ್ ನಂತೆ ಚೀಪಿದ ಖುಷಿ.. ವಾವ್ ಬಾಯಲ್ಲಿ ಈಗಲೂ ಜೊಲ್ಲು ಸುರಿಯುತ್ತದೆ. ಕುಂಬಳಕಾಯಿ ಬೀಜ... ಕೊನೆಗೆ ಬಿಲ್ವ ಪತ್ರೆ ಕಾಯಿಯ ಬೀಜವನ್ನೂ ರುಚಿ ನೋಡಿದ್ದೇನೆ.
ತಿನ್ನುವ ಖುಷಿಯ ಮುಂದಿನ ಭಾಗ... ಬೆಂಗಳೂರಿನಲ್ಲಿ ಓದುತ್ತಿದ್ದ ಸಮಯ... ನಮ್ಮದು ಎಂಟು ಜನರ ಒಂದು ಗುಂಪು. ಎಲ್ಲರೂ ಸಾಮಾನ್ಯ ಹಿನ್ನೆಲೆಯವರೇ.. ಆಗಿನ್ನೂ ಒಂದು ಪೈಸೆಯ ನಾಣ್ಯ ಚಲಾವಣೆಯಲ್ಲಿದ್ದ ಕಾಲ... ಎಲ್ಲರ ಬಳಿ ಇದ್ದ ನಾಣ್ಯಗಳನ್ನು ಕೂಡಿ ಹಾಕಿದರೂ ಅದು ನಾಲ್ಕು ಅಥವಾ ಐದು ಉದ್ದಿನ ವಡೆಗಳಿಗೆ( ಒಂದು ವಡೆಗೆ 10 ಪೈಸೆ) ಮಾತ್ರ ಸಾಕಾಗುವಷ್ಟೇ... ಅದನ್ನೇ ಎಲ್ಲರೂ ಹಂಚಿಕೊಂಡು... ಹೇರಳವಾಗಿ ಸಾಂಬಾರ್ ಹಾಕಿಸಿಕೊಂಡು ತಿಂದು ಸಂತೋಷಪಡುತ್ತಿದ್ದದ್ದು ರಾಮಾಂಜನೇಯ (ಯುದ್ಧ) ಕ್ಯಾಂಟೀನ್ ನಲ್ಲಿ.
ಚಿಕ್ಕಂದಿನಲ್ಲಿ ದುಃಖದ ಕ್ಷಣಗಳು ಕ್ಷಣಿಕ... ಬಹುಬೇಗ ಕರಗಿ ಹೋಗುತ್ತಿದ್ದವು... ಮನಸ್ಸು ಸಹ ಬಹುಬೇಗ ಬೇರೆಯ ವಿಷಯಕ್ಕೆ ತಿರುಗುತ್ತಿದ್ದವು. ಅದಕ್ಕೇ ಇರಬಹುದು ಚಿಕ್ಕಂದಿನದು ದುಃಖವಿಲ್ಲದ ಕಣ್ಣೀರು... ಬೆಳೆದ ಮೇಲೆ ಕಣ್ಣೀರಿಲ್ಲದ ದುಃಖ ಎಂಬ ಮಾತು.
ಚಿಕ್ಕಂದಿನಲ್ಲಿ ತುಂಬ ಸಂತೋಷ ಪಟ್ಟ ಒಂದು ವಿಷಯ... ಸೈಕಲ್ ತುಳಿದದ್ದು... ಅಥವಾ ತಳ್ಳಿದ್ದು ಎನ್ನಲೇ...?
ನಮ್ಮ ಹಳ್ಳಿಯಲ್ಲಿ ಸೈಕಲ್ಲನ್ನು ನೋಡಿದ್ದೆ... ಕೈಯಲ್ಲಿ ಮುಟ್ಟಿ ಸಂತೋಷಪಟ್ಟಿದ್ದೆ.. ಆದರೆ ಅದನ್ನು ತುಳಿಯೋ ಅವಕಾಶ ನನಗೆ ದಕ್ಕಿರಲೇ ಇಲ್ಲ... ಯಾರನ್ನು ಕೇಳಲು ಕೀಳರಿಮೆಯೋ ..ಸಂಕೋಚವೋ ನನ್ನ ಊಹೆಗೆ ನಿಲುಕದ್ದು. ನನ್ನಣ್ಣ ಚೂಡಣ್ಣ ಒಮ್ಮೆ ಬೆಂಗಳೂರಿನಿಂದ ಸೈಕಲ್ ನಲ್ಲಿ ಬಂದಿದ್ದ... ನನಗೆ ಸೈಕಲ್ ತುಳಿಯುವ ಆಸೆ ಈಗ ಒತ್ತರಿಸಿ ಬಂತು... ಆಗಲೇ ಸಂಜೆ ಆಗಿದ್ದ ಕಾರಣ ನನ್ನ ಆಸೆ ಕೈಗೂಡಲಿಲ್ಲ.. ಬೆಳಿಗ್ಗೆ ಸೈಕಲ್ ಕೊಡಲು ಒಪ್ಪಿಗೆಯಾಗಿತ್ತು. ನನ್ನ ಸೈಕಲ್ ತುಳಿಯುವ ಉತ್ಸಾಹ ಎಷ್ಟಿತ್ತೆಂದರೆ ಅಂದು ರಾತ್ರಿ ಕನಸಿನಲ್ಲೂ ಅದೇ... ನಿದ್ರೆ... ಎಚ್ಚರ... ಬೆಳಕಾಗುವುದು ಯಾವಾಗಲೋ ಎಂಬ ಕಾತುರ... ಅಂತೂ ಇಂತೂ ಮಬ್ಬು ಕತ್ತಲಿನಲ್ಲೇ ಸೈಕಲ್ ತುಳಿಯಲು ಸಿಕ್ಕಿತು ಒಪ್ಪಿಗೆ.. ಜೊತೆ ಜೊತೆಗೆ.. ಹುಷಾರು.. ಬಿದ್ದೀಯಾ.. ಯಾರಿಗಾದರೂ ಡಿಕ್ಕಿ ಹೊಡೆದೀಯ... ಸೈಕಲ್ ಬೀಳಿಸಬೇಡ ಹೀಗೆ ಬಹಳಷ್ಟು ಸೂಚನೆಗಳು / ಆದೇಶಗಳು. ಸೈಕಲ್ ನನ್ನ ಎತ್ತರಕ್ಕೂ ಮೀರಿ ಇದ್ದದ್ದನ್ನು ಕಷ್ಟಪಟ್ಟು ತಳ್ಳಿಕೊಂಡು ಮನೆಯಿಂದ ಹೊರಬಂದದ್ದು.. ನನಗೆ ಮಿತಿ ಮೀರಿದ ಖುಷಿಯನ್ನು ಕೊಟ್ಟಿತ್ತು. ಒಂದಷ್ಟು ಹೊತ್ತು ಸೈಕಲ್ ಅನ್ನು ತಳ್ಳಿದ್ದೇ ಬಂತು... ಜೊತೆಗೆ ಸೇರಿದ ಸ್ನೇಹಿತರ ದಂಡು ಅವರ ಸೂಚನೆಗಳು.. ಕೊನೆಗೆ ಸೈಕಲ್ ಪೆಡಲ ಮೇಲೆ ಕತ್ರಿ ಕಾಲು ಹಾಕಿ.. ಸೈಕಲ್ ಮೇಲೆ ಒಂದು ಕಾಲು ನೆಲದ ಮೇಲೆ ಒಂದು ಕಾಲು ಇಟ್ಟು ಮುಂದೆ ಹೋದದ್ದೇ ಖುಷಿ... ಅಂತೂ ಸುಸ್ತಾಗಿ ಮನೆಗೆ ಮರಳಿದ್ದು... ಆಗ ಪಟ್ಟ ಸಂತೋಷದ ನೆನಪು ಹಸಿ ಹಸಿಯಾಗಿದೆ. ಎಂಥಾ ಸುಖ ಅಲ್ವಾ?
Success ನಿಂದ ಸಿಗುವ ಸುಖ... ಅದರಲ್ಲೂ ಸಾಕಷ್ಟು ಪ್ರಯತ್ನಗಳು ಸೋಲುಗಳ ನಂತರ... ಅದೇ ಸುಖ. “ಮಳೆ ಬಂತು ಮಳೆ” ಕನ್ನಡ ಚಿತ್ರದಲ್ಲಿ ಒಂದು 18 ಅಡಿ ಉದ್ದದ ಮೊಸಳೆಯನ್ನು , ಜೀವಂತವಾಗಿ ಮಾಡುವ ಒಂದು ಸವಾಲನ್ನು "ರಂಗಣ್ಣ ನೀವ್ ಧೈರ್ಯವಾಗಿ ಮಾಡಿ ಸಾಧ್ಯ ಆಗುತ್ತೆ" ಎಂದು ಬೆನ್ನು ತಟ್ಟಿ, ಪ್ರೋತ್ಸಾಹಿಸಿದವರು ಪಕ್ಕದ ಮನೆಯಲ್ಲಿ ವಾಸವಾಗಿದ್ದ ಶ್ರೀ HV ಸುಬ್ಬರಾವ್ ಅವರು,ಚಿತ್ರ ಸಾಹಿತಿ.. ಆ ಚಿತ್ರದ ನಿರ್ಮಾಪಕರು. ಅದಕ್ಕಾಗಿ ತಯಾರಾಗಿದ್ದ ಮೊಸಳೆಯ ಪ್ರತಿ ಕೃತಿಯನ್ನು ನಮ್ಮ factory ಗೆ ಕಳಿಸಿದರು.
ಮೊಸಳೆ ನಡೆಯುವುದು, ಓಡುವುದು, ಬಾಲ ಅಲ್ಲಾಡಿಸುವುದು, ತಲೆ ಅಲ್ಲಾಡಿಸುವುದು, ಬಾಯಿ ದೊಡ್ಡದಾಗಿ ತೆರೆದು ಮುಚ್ಚುವುದು, ಕಣ್ಣ ರೆಪ್ಪೆಯನ್ನು ಮುಚ್ಚಿ ತೆಗೆಯುವುದು, ಮೂಗಿನ ಹೊಳ್ಳೆಯಿಂದ ನೀರನ್ನು ಚಿಮ್ಮುವುದು ಹೀಗೆ. ಸಾಕಷ್ಟು ಪ್ರಯತ್ನಪಟ್ಟು, ಎಲ್ಲವನ್ನು ಒಂದು ಹಂತಕ್ಕೆ ಬಂತು ಎನ್ನುವ ಖುಷಿಯಲ್ಲಿದ್ದಾಗ... ಅದರ ನಡಿಗೆಯಲ್ಲೇ ಸಮಸ್ಯೆಯಾಗಿ ಅದು ಕುಸಿದು ಬೀಳುತ್ತಿತ್ತು... ನನಗೋ ಅತಿ ನಿರಾಶೆ... ಇದನ್ನು ನೋಡಿದ HV ಸುಬ್ಬರಾವ್ ಅವರಿಗೆ ನಿರಾಶೆಯಾಗಿದ್ದು ಸಹಜ... ಆದರೆ ತಕ್ಷಣ ಅವರು ಬೆನ್ನು ತಟ್ಟಿ... ಇಷ್ಟೆಲ್ಲ ಮಾಡಿದ್ದೀರಾ.. ಪ್ರಯತ್ನ ಮಾಡಿ ಅದು ಸರಿಯಾಗುತ್ತೆ ಅಂತ ಹೇಳಿ ಹೋಗಿದ್ದು ಸ್ವಲ್ಪ ಮಟ್ಟಿಗೆ ನಿರಾಶೆಯನ್ನು ಕಡಿಮೆ ಮಾಡಿತ್ತು. ಆ ಮನಸ್ಥಿತಿಯಲ್ಲಿ ಯಾವ ಪರಿಹಾರವೂ ಕಾಣಲಿಲ್ಲ... ಪ್ರಯತ್ನ ಮುಂದುವರಿಯಬೇಕು... ಎರಡು ದಿನ ಕಳೆದರೂ ಯಾವ ಪರಿಹಾರವೂ ಕಾಣದು. ಬೇಜಾರೋ, ಅಸಹನೆಯೋ, ತಲ್ಲಣವೋ, ಕೋಪವೋ... ಮೊಸಳೆಯನ್ನು ಕಾಲಿಂದ ತುಳಿದೆ... ವಾಹ್... ಮೊಸಳೆ ಸರಿಯಾಗಿ ನಿಂತಂತೆ ಅನಿಸಿತು. ಮತ್ತೆರಡು ಸಲ ಅದನ್ನೇ ಮಾಡಿದಾಗ ಹೌದು... ನಿಲ್ಲುತ್ತಿದೆ.. ಕುಸಿತವಿಲ್ಲ. ಉತ್ತರ ಸಿಕ್ಕಿ ಆ ಜಾಗದಲ್ಲಿ ಭಾರವನ್ನು ಇಟ್ಟು ನಡೆಸಿದಾಗ ಮೊಸಳೆ ಓಡಿತೂ ಸಹ... ಖುಷಿಗೆ ಎಲ್ಲೆ ಇರಲಿಲ್ಲ... ವಿಷಯ ತಿಳಿದಾಕ್ಷಣ ಬಂದ ಸುಬ್ಬರಾವ್ .. ಮೊಸಳೆಯಂತೆ ಅಲ್ಲಾಡುತ್ತಾ ಅದರ ಪಕ್ಕ ನಡೆದು ಸಂತೋಷಪಟ್ಟಿದ್ದು ಕಣ್ಣಿಗೆ ಕಟ್ಟಿದೆ.
ಸುಖವೇ ಒಂದು ಕಲ್ಪನೆ... ಕಲ್ಪನೆಗೆ ಯಾವ ಮಿತಿಯೂ ಇಲ್ಲ.... ಹೀಗೆ ದೊಡ್ಡದಾದ ಕನಸು ಕಟ್ಟಿಕೊಂಡು, ಸರ್ಕಾರ ಕೊಡುವ ಸಾಲವನ್ನು ನೆಚ್ಚಿಕೊಂಡು.. ಶುರು ಮಾಡಿದ್ದೇ ಒಂದು ಸಣ್ಣ ಕೈಗಾರಿಕೆ... ಒಳ್ಳೆ ಆಫೀಸು ರೂಮು, ಗಾಜಿರುವ ಬಾಗಿಲು, ಟೇಬಲ್ ಮೇಲೆ ಒಂದು ಫೋನು, ಆಚೆ ಕಡೆ ಒಬ್ಬ ಟೈಪಿಸ್ಟ್/ ರಿಸೆಪ್ಶನಿಸ್ಟ್.... ಆಕೆ ಬಂದ ಕಾಲ್ ರಿಸೀವ್ ಮಾಡಿ ಒಳಕ್ಕೆ ಟ್ರಾನ್ಸ್ಫರ್ ಮಾಡಬೇಕು.... ಹೀಗೆ ಕಟ್ಟಿಕೊಂಡ ಕನಸು ಒಂದು ಹಂತಕ್ಕೆ ನನಸಾದರೂ.... ಅದನ್ನೆಲ್ಲ ಸರಿ ದೂಗಿಸುವಷ್ಟು ಹಣದ ಸಂಪಾದನೆಯೂ ಬೇಕಲ್ಲ.... ಆ ಕನಸನ್ನು ನನಸಾಗಿಸುವ ಪರಿಣಾಮಕಾರಿಯಾದ ಕಾರ್ಯ ಚಟುವಟಿಕೆಗಳೂ ಬೇಕಲ್ಲ.... ತಾಳ ತಪ್ಪಿ... ಸೋತು... ನಂತರದ ಸಮಯೋಚಿತ, ಕಾರ್ಯಸಾಧುವಾದ ಕೆಲಸಗಳನ್ನು ಮಾಡಿ... ಜೀವನ ಒಂದು ಮಟ್ಟಕ್ಕೆ ಬಂದಾಗ ನೆನಪಾಗಿದ್ದೇ ಈ ಹಾಡು..." ಗಾಳಿಗೋಪುರ ನಿನ್ನಾಶಾ ತೀರ... ನಾಳೆ ಕಾಣುವ ಸುಖದಾ ವಿಚಾರ....".
ಆಕಾಶಕ್ಕೆ ಏಣಿ ಹಾಕಲು ಸಾಧ್ಯವೇ?
"ತೇನ ತ್ಯಕ್ತೇನ ಭುಂಜಿತಾಃ"... ಎಷ್ಟು ಸತ್ಯ ಅಲ್ಲವೇ? ನಮಗಾಗಿ ಇಂದು ಇರುವಷ್ಟು ಮಾತ್ರ ನಮಗೆ ಲಭ್ಯ... ಅದರಲ್ಲಿ ತೃಪ್ತಿ ಇದ್ದರೆ ಜೀವನ ಸೊಗಸು. ಸಂತೋಷಕ್ಕೆ ರಹದಾರಿ.
acceptance.... ವಸ್ತು ಸ್ಥಿತಿಯನ್ನು ಒಪ್ಪಿಕೊಂಡು ಮುನ್ನಡೆಯುವುದು ಮಾತ್ರ.... ಸುಖದೆಡೆಗೆ ನಡೆಯುವ ದಾರಿ.. ಇಲ್ಲದುದನ್ನು ನೆನೆಸಿಕೊಂಡು ಕೊರಗಿದರೆ ಬರೀ ದುಃಖ.
ಆಸೆ ಇಲ್ಲದಿದ್ದರೆ ಜೀವನಕ್ಕೆ ಗುರಿಯೂ ಇಲ್ಲ.... ಧ್ಯೇಯವೂ ಇಲ್ಲ... ನೀರಸ ಬದುಕು.... ಆಸೆ ...ನಮ್ಮ ದೈಹಿಕ ಮಾನಸಿಕ, ಆರ್ಥಿಕ ಹಾಗೂ ಪರಿಸರದ ಅರಿವಿನ ಚೌಕಟ್ಟಿನಲ್ಲಿದ್ದರೆ ಚೆನ್ನ... ಇಲ್ಲದಿರೆ ಅದು ದುರಾಸೆ... ಹಾಗಾಗಿ ನಮ್ಮ ಬುದ್ಧನ ಹೇಳಿಕೆಯನ್ನು ಸ್ವಲ್ಪ ಬದಲಾಯಿಸಿ.... ದುರಾಸೆಯೇ ದುಃಖಕ್ಕೆ ಕಾರಣ....ಎಂದು ಹೇಳಿದರೆ ಸರಿ ಎಂದು ನನ್ನ ಅನಿಸಿಕೆ.
ಬೇರೊಬ್ಬರಿಗೆ.... ಅಗತ್ಯವಿದ್ದಾಗ ನಮ್ಮ ಕೈಲಾದಷ್ಟು ಸಹಾಯ... ಯಾವ ರೀತಿ ಆದರೂ ಸರಿ.. ಮಾಡಿದಾಗ.. ಸಹಾಯ ಪಡೆದವರಿಂದ ಸಿಕ್ಕ ಒಂದು ಥ್ಯಾಂಕ್ಸ್ ಸಹ ಮನಸ್ಸಿಗೆ ಹಿತ ಕೊಡುತ್ತದೆ, ಮಾಡಿದ್ದು ಸಾರ್ಥಕ ಎನಿಸುತ್ತದೆ. ನನ್ನ 32 ವರ್ಷದ... ಆಪ್ತಸಮಾಲೋಚನೆಯ ಪಯಣದಲ್ಲಿ ಇಂಥ ಸಾರ್ಥಕತೆಯನ್ನು ಸಾಕಷ್ಟು ಸಲ ಪಡೆದಿದ್ದೇನೆ... ಇದು ಸುಖದ ಶಿಖರವನ್ನೇರಿದ ಅನುಭವ.
ಚಿಂತೆ/ ಕಷ್ಟ / ನೋವುಗಳು ಇಲ್ಲದ ಜೀವನ ಎನ್ನುವುದು ಒಂದು ಮಿಥ್ಯೆ. ಆದರೆ ಅದನ್ನು ಎದುರಿಸುವ ಮನೋಬಲ ನಮ್ಮಲ್ಲಿದ್ದರೆ ಕಷ್ಟದ ತೀವ್ರತೆ ಕಡಿಮೆಯಾಗುತ್ತದೆ.
“ಕಷ್ಟಗಳ ಕೊಡಬೇಡ ಎನಲಾರೆ ರಾಮ, ಕಷ್ಟ ಸಹಿಸುವ ಸಹನೆ ಕೊಡು ಎನಗೆ ರಾಮ, ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ, ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ” ಎಂಬ ಹಾಡಿನ ಸಾಲುಗಳು ನನಗೆ ಸ್ಪೂರ್ತಿದಾಯಕ.
ಆರೋಗ್ಯ ಬಹಳ ಮುಖ್ಯ... ಅದನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿಯು ನಮ್ಮ ಮೇಲೆ.. ವ್ಯತ್ಯಾಸವಾದಾಗ ಸರಿ ಮಾಡಿಕೊಳ್ಳುವುದು ಸೂಕ್ತ... ಇಲ್ಲದಿರೆ endure which you cannot cure... ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು... ಆಗಲೇ ನೆಮ್ಮದಿ.
ನಮ್ಮ ಸುತ್ತು ಮುತ್ತಿನ ಜನಗಳೊಂದಿಗಿನ ಸಂಬಂಧಗಳು ಚೆನ್ನಾಗಿದ್ದಾಗ ಮಾನಸಿಕವಾಗಿ ನೆಮ್ಮದಿ ಇರುತ್ತದೆ... ಅದಕ್ಕೆ ಬೇಕಾದ್ದು ನಮ್ಮಲ್ಲಿರುವ ಅಹಂ ಅನ್ನು ಕಡಿಮೆ ಮಾಡಿಕೊಳ್ಳಬೇಕಾದ ಮನಸ್ಸು.. ಜೊತೆ ಜೊತೆಗೆ ಬೇರೊಬ್ಬರ ಭಾವನೆಗಳನ್ನು ಗೌರವಿಸುವ ಮನೋಭಾವ. ಬೇರೊಬ್ಬರು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳಬೇಕೆಂದೇನಿಲ್ಲ... ಆದರೆ ನಂದೇ ಸರಿ ಎನ್ನುವ ವಾದವೂ ಬೇಕಿಲ್ಲ...agree to disagree ಅನ್ನುವ ಚಿಂತನೆ ಸಂತೋಷವಾಗಿರಲು ತುಂಬಾ ಸಹಕಾರಿ.
ನಮ್ಮ ಜೀವನ ಶೈಲಿಯು ಆಸೆ ಬುರುಕತನವಿಲ್ಲದ (not greed based) ಅವಶ್ಯಕತೆಗೆ ತಕ್ಕಷ್ಟು( need based) ಆಗಿ ಇಟ್ಟುಕೊಳ್ಳಲು ಸಾಧ್ಯವಾದರೆ ನಾವು ಸುಖದ ಸುಪ್ಪತ್ತಿಗೆಯಲ್ಲಿ ಇರಬಹುದು.
ತೃಪ್ತಿಯೇ ಮೂರ್ತಿವೆತ್ತಂತೆ ಇದ್ದವರು ನಮ್ಮಪ್ಪ (ಅದರಲ್ಲೂ ನಮ್ಮಮ್ಮ ಸತ್ತ ನಂತರ)... ಯಾವ ನಿರೀಕ್ಷೆಗಳನ್ನು ಪ್ರಕಟಿಸಿಲ್ಲ, ನಶ್ಯ ಒಂದನ್ನು ಬಿಟ್ಟು ಬೇರೇನನ್ನೂ ಕೇಳಿಲ್ಲ. ಮಾಡಿದ ಅಡಿಗೆಯನ್ನು ತೃಪ್ತಿಯಿಂದ ತಿನ್ನುತ್ತಿದ್ದ ಜೀವಿ. (ಏನಾದರೂ ವ್ಯತ್ಯಾಸವಿದ್ದರೆ ಅದನ್ನು ತಕ್ಕಮಟ್ಟಿಗೆ ಇದ್ದುದರಲ್ಲೇ ಸರಿ ಮಾಡಿಕೊಂಡು ತಿನ್ನುತ್ತಿದ್ದರು. ಗೊಣಗಿದ್ದನ್ನು ಕೇಳಿಯೇ ಇಲ್ಲ). ಮಕ್ಕಳು ಮೊಮ್ಮಕ್ಕಳ ಮುಂದಿನ ಏಳ್ಗೆ.... ಅದರಲ್ಲಿ ಭಾಗವಾಗುವ ಉತ್ಸಾಹ ಅವರ ಜೀವನದ ಗುರಿಯಾಗಿತ್ತು.
ಸುಖವನ್ನು ಕಲ್ಪಿಸಿಕೊಳ್ಳುವುದಕ್ಕಿಂತ... ಜೀವನದಲ್ಲಿ ಕಂಡು ಅನುಭವಿಸುವುದು ನಿಜವಾದ ಸುಖ ಅಲ್ಲವೇ?
ಎಲ್ಲರಿಗೂ ಸುಖ, ಶಾಂತಿ ಮತ್ತು ನೆಮ್ಮದಿ ಕೊಡೆಂದು ಆ ದೇವರನ್ನು ಪ್ರಾರ್ಥಿಸುತ್ತಾ....
ನಮಸ್ಕಾರ.
D C Ranganatha Rao
ನಿಮ್ಮ ಬರಹಗಳನ್ನು ಓದುವುದು ಸಹ ಒಂದು ಸುಖ, ನಿಜವಾಗಲೂ ಸಣ್ಣ ಪುಟ್ಟ ವಿಷಯ ಗಳಿಗೂ ಸುಖ, ಸಂತಸ ಪಟ್ಟ ಪೀಳಿಗೆ ಎಂದರೆ 50 ರಿಂದ 70 ರ ದಶಕದಲ್ಲಿ ಜನಿಸಿದ ಕೆಳ ಮಧ್ಯಮ ವರ್ಗದವರು...fracture ಭಯ ಇಲ್ಲದೇ ರಸ್ತೆಯಲ್ಲಿ ಆಡಿ ಬಿದ್ದು ಎದ್ದವರು, ರೋಗ ರುಜಿನದ ಭಯ ಇಲ್ಲದೆ ಬೀದಿ ಬದಿಯ ಗಾಡಿಗಳಲ್ಲಿ ಸಿಕ್ಕಿದ್ದು ತಿಂದು ಬೊಗಸೆಯಲ್ಲಿ ನೀರು ಕುಡಿದವರು, ರೈಲು ಪ್ರಯಾಣದಲ್ಲಿ ಕಡಲೆಗಿಡ, ಸೌತೆಕಾಯಿ ತಿಂದು ತೃಪ್ತಿ ಪಟ್ಟವರು, ಸೈಕಲ್, ಸುವೇಗ,ಲೂನ ಓಡಿಸಲು ಸಾಹಸ ಪಟ್ಟವರು ...ಒಮ್ಮೆ ಹಿಂತಿರುಗಿ ನೋಡಿದರೆ ನಾವೇಷ್ಟು ಮರೆಯಲಾಗದ ಅನುಭವ ಪಡೆದ ಸುಖೀ ಪೀಳಿಗೆಯವರು ...ಸರ್ವೇ ಜನ ಸುಖಿನೋಭವಂತು
ReplyDeleteಧನ್ಯವಾದಗಳು
ಬಾಬು
Hi DCR sir, what a definition for HAPINESS. What a flow of beautiful thought translated to writing. The article on SUKHADA PARIKALPANE touches every heart. A very big definition for a meaningful title. Dhanyavadagalu sir.🙏🙏🙏🙏
ReplyDeleteಬಹಳ ಸೊಗಸಾಗಿದೆ
ReplyDeleteತುಂಬಾ ಸೊಗಸಾಗಿದೆ ನಾವು ಸಹ ಈ ತರಹ ಜೀವನವನ್ನು ಪೂರ್ಣವಾಗಿ ಅನುಭವಿಸಿದ್ದೇವೆ. ನಮಗೆ ಆ ದಿನದ ನೆನಪುಗಳು ಉಲ್ಲಾಸವನ್ನು ನೀಡುತ್ತಿದೆ. ಚಿತ್ರ ದ ಹೆಸರು ಪಾಪಸ್ ಕಳ್ಳಿ ಇರಬಹುದಾ.
ReplyDeleteExcellent sir. It shows your ability , experience in writing. Keep writing more
ReplyDeleteಎಷ್ಟು ಸುಲಭವಾಗಿ ನಮ್ಮ ಬಾಲ್ಯದ ಒಂದು ಸುತ್ತು ಹಾಕಿ ಬಂದ ಹಾಗಾಯಿತು...ನಿಮ್ಮ ಲೇಖನ ಓದಿ.ಸೊಗಸಾಗಿದೆ
ReplyDeleteಸುಖವೆಂಬುದು ಒಂದು ಮಾನಸಿಕ ಸ್ಥಿತಿ ಅಷ್ಟೆ. ಮಕ್ಕಳಿಗೆ ಚಾಕಲೇಟ್, ಐಸ್ ಕ್ರೀಮ್ ನೀಡುವ ಸುಖ ನಮಗೆ ನೀಡಲಾರದು. ಸುಖದ ಪರಿಕಲ್ಪನೆ ವ್ಯಕ್ತಿಯಿಂದ ವ್ಯಕ್ತಿಗೆ, ಬೇರೆ ಬೇರೆ ಸಂದರ್ಭಗಳಲ್ಲಿ ವಿಭಿನ್ನವಾಗುರುತ್ತದೆ.
ReplyDeleteಸುಖದ ವಿವಿಧ ಆಯಾಮ, ಸನ್ನಿವೇಷಗಳನ್ನು ರಸಮಯವಾಗಿ ವಿವರಿಸಿದ್ಧೀರಿ. ಎಲ್ಲರೂ ನೆನಪಿನ ಬುತ್ತಿ ಬಿಚ್ಚಲು ಅವಕಾಶವಾಗಿದೆ.
ನಮ್ಮ ನಮ್ಮ ಶಕ್ತಿಗೆ ತಕ್ಕಂತೆ ಸುಖದ ಪರಿಕಲ್ಪನೆಯನ್ನು ಇಟ್ಟುಕೊಂಡರೆ ಬಾಳು ಸುಖ, ಸಹ್ಯ. ತಪ್ಪಿದಲ್ಲಿ ವೃಥಾ ಅತೃಪ್ತಿ, ಅಸಮಾಧಾನಕ್ಕೆ ಎಡೆಯಾಗುತ್ತದೆ.
ಎಲ್ಲರೂ ಭಿನ್ನ ಭಿನ್ನ ಎಂದು ಅರ್ಥಮಾಡಿಕೊಂಡು ಅದರಂತೆ ಯೋಚನೆ, ಕಾರ್ಯವನ್ನು ರೂಢಿಸಿಕೊಳ್ಳುವುದು ಸೂಕ್ತ.
ಮುಗಿಸುವ ಮುನ್ನ:
ನಮಗೆ ಕಾರ್ ಕೊಂಡರೆ ಸುಖ, ಅಂಬಾನಿ,ಅದಾನಿ,ಟಾಟಾರಿಗೆ ಕಾರಿನ ಕಂಪನಿ ಕೊಂಡರೆ ಸುಖ.
ಅಷ್ಟೇ ವ್ಯತ್ಯಾಸ.
ವಂದನೆಗಳು,
ಗುರುಪ್ರಸನ್ನ
ಚಿಂತಾಮಣಿ
ತಮ್ಮ ಸುಖದ ಪರಿಕಲ್ಪನೆ ಲೇಖನವು ಉತ್ತಮವಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು.ಸುಖದ ಬಗ್ಗೆ ಅನೇಕ ಆಯಾಮಗಳ ವಿವರಣೆ ನೀಡಿರುತ್ತೀರಿ.ಸುಖವನ್ನು ತಾವು ಅನುಭವಿಸಿದ ಬಗ್ಗೆ ಬಾಲ್ಯದ ಅನುಭವ, ಕಾಲೇಜಿನ ಅನುಭವ, ಸೈಕಲ್ಲು ತುಳಿದು ಅನುಭವ ಉತ್ತಮವಾಗಿ ವಿವರಣೆ ನೀಡಿರುತ್ತೀರಿ.ತಾವು ತಿಳಿಸಿದ ಹಾಗೆ ಅಹಂ ಬಿಡುವುದು, ಇನ್ನೊಬ್ಬರಿಗೆ ಗೌರವ ನೀಡುವುದು,ಅತೀ ಆಸೆ ಇಲ್ಲದೇ ಇದ್ದುದರಲ್ಲೇ ತೃಪ್ತಿ ಪಡುವುದು ಸುಖದ ಸೂತ್ರಗಳಾಗಿರುತ್ತವೆ ಹಾಗೂ ಮುಖ್ಯ ಸಂದೇಶವಾಗಿರುತ್ತವೆ.ಮತ್ತೊಮ್ಮೆ ತಮಗೆ ಧನ್ಯವಾದಗಳು. ದೇವೇಂದ್ರಪ್ಪ
ReplyDelete