ಬಾಲ್ಯದ ಪ್ರಸಂಗಗಳು
ಮೊನ್ನೆ ಶನಿವಾರ ಅಶಕ್ತ ಪೋಷಕ ಸಭಾದಲ್ಲಿ ಎಂಟನೆಯ“ಯೋಗ ದಿನಾಚರಣೆ” ಹಾಗೂ ಒಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲಿನ ನಿವಾಸಿಗಳು, ಎಲ್ಲರೂ ಹಿರಿಯ ನಾಗರಿಕರು. ಆದರೆ ಈ ಕಾರ್ಯಕ್ರಮಕ್ಕೆ ತಯಾರಿ ಮಾಡುವಾಗಿನ ಉತ್ಸಾಹ ಎಳೆಯರನ್ನು ಮೀರಿಸುತ್ತಿತ್ತು. ಒಂದು ಮಾತಿದೆ ವಯಸ್ಸಾದಂತೆ... ಮುದುಕರು ಮಕ್ಕಳಾಗುತ್ತಾರೆ ಎಂದು. ಇದು ಅಕ್ಷರ ಸಹ ಕಣ್ಣಿಗೆ ಕಟ್ಟುವಂತೆ ಕಾಣುತ್ತಿತ್ತು. ತೊಡುವ ಬಟ್ಟೆ, ಅಲಂಕಾರ, ಅವರು ಮಾಡುವ ಕಾರ್ಯಕ್ರಮಕ್ಕೆ ತಕ್ಕ ಹಾಗೆ ಹೊಂದಿಸಿಕೊಳ್ಳುವ ಉತ್ಸಾಹ... ಅದು ಸರಿ ಇದೆಯೇ ಎಂದು ನಮ್ಮಗಳಿಂದ ತಿಳಿದುಕೊಳ್ಳುವ ಕಾತರ.... ಚಟುವಟಿಕೆಯಿಂದ ಓಡಾಡುವ ಅವರುಗಳನ್ನು ನೋಡಿ ಸಂಭ್ರಮ ಪಟ್ಟವರು ನಮ್ಮ ತಂಡದವರು.
ಅವರುಗಳ ಈ ಕ್ರಿಯಾಶೀಲತೆ ನನ್ನನ್ನು ನನ್ನ ಬಾಲ್ಯಕ್ಕೆ ಎಳೆದೊಯ್ಯಿತು.
ನನಗೆ ಇನ್ನೂ ನೆನಪಿದೆ...." ಸ್ವರ್ಗದಲ್ಲಿ ಎಲೆಕ್ಷನ್" ಎನ್ನುವ ನಾಟಕ... ಅದರಲ್ಲಿ ನಾರದನ ಪಾತ್ರ ನನ್ನದು. ಪಂಚೆ, ಶಲ್ಯ, ಜನಿವಾರ, ತಲೆಯ ಜುಟ್ಟು ಅದಕ್ಕೆ ಹೂ, ಎಲ್ಲವೂ ಹೊಂದಿಸಿಯಾಯ್ತು.
ಚಿಟಿಕೆಯನ್ನೂ ಹೊಂದಿಸಿಯಾಯ್ತು ಆದರೆ.. ನಾರದನ ಕೈಯಲ್ಲಿನ ವೀಣೆ ಸಿಗುವುದು ಎಲ್ಲಿ?.... ನನ್ನ ಹಳ್ಳಿ ದೊಡ್ಡ ಜಾಲದಲ್ಲಿ. ಉತ್ಸಾಹದ ಮೇಲೆ ನೀರು ಚೆಲ್ಲಿದಂತಾಯ್ತು.. ಇನ್ನೇನು ಅಳುವುದೊಂದೇಬಾಕಿ... ಆಗ ಬಂದ ಸಲಹೆ.. ನೇಯ್ಗೆ ಅಜ್ಜನ ಬಳಿ ಇದ್ದ ಏಕತಾರಿ.
ಅದನ್ನೇ ವೀಣೆಯಂತೆ ನೇತು ಹಾಕಿಕೊಳ್ಳುವುದು. ವೀಣೆಯನ್ನೇ ಕಾಣದಿದ್ದ ನನಗೆ, ಅದು ವ್ಯತ್ಯಾಸ ವಾಗಲಿಲ್ಲ.... ನಾಟಕ ನಡೆಯಿತು... ಜನ ಆನಂದಿಸಿದರು ಎಂದು ಬೇರೆ ಹೇಳಬೇಕಿಲ್ಲ. ಆದರೆ ಕೆಲವರು ಹೇಳಿದ " ನಾರದ - ರಂಗಣ್ಣನ ವೀಣೆ ಬೋ ಚಂದಾಗಿತ್ತಪ್ಪಾ... " ಎನ್ನುವ ಮಾತು.... ಹೊಗಳಿಕೆಯೋ ಅಥವಾ ಕೀಟಲೆಯೋ... ಈಗಲೂ ತಿಳಿಯದು. ಆಗ ಮಾತ್ರ ಹೆಮ್ಮೆ ಪಟ್ಟಿದ್ದು ಸತ್ಯ.
ಕೋಲಾಟ ನಮ್ಮ ಬಹು ಮುಖ್ಯವಾದ ಕಲಾ ಪ್ರದರ್ಶನ. ಈಗ ಎಲ್ಲೆಡೆ ಸಿಗುವಂತೆ ಬಣ್ಣದ ಕೋಲುಗಳು ಆಗ ನಮ್ಮ ನಿಲುಕಿನಲ್ಲಿ ಇರಲಿಲ್ಲ... ಹಾಗಾಗಿ ಕೋಲುಗಳನ್ನು ತಯಾರು ಮಾಡಿಕೊಳ್ಳವ ಜವಾಬ್ದಾರಿ ನಮ್ಮದೇ.. ನೆಟ್ಟಗಿರುವ... ಒಂದೇ ಸಮನಾದ ಕಡ್ಡಿಗಳನ್ನು ಆಯ್ದು ... ಅದನ್ನು ಮಚ್ಚು ಚಾಕುವಿನಿಂದ ಸಮಮಾಡಿ... ತುದಿಯ ಕಡೆ ಚೂಪು ಮಾಡಿ... ಕೈಗೆ ಸಿಕ್ಕಿದ ಬಣ್ಣದಿಂದ ಅದಕ್ಕೊಂದಿಷ್ಟು ಅಲಂಕಾರ ಮಾಡಿ... ಸಣ್ಣ ಗೆಜ್ಜೆಗಳನ್ನು ಹಿಡಿಯ ಭಾಗಕ್ಕೆ ಕಂಬಿಯಿಂದ ಕಟ್ಟಿ..( ಇದು ನನ್ನ ಕೈಚಳಕಕ್ಕೆ ಮೀರಿದ್ದರಿಂದ.. ಕಾಡಿಬೇಡಿ ಮಾಡಿಸಿಕೊಂಡದ್ದು.. ಮುತ್ತಣ್ಣನಿಂದ...) ತಯಾರು.
ಮೃತ್ಯುಂಜಯಾಚಾರ್... ನಮಗೆ ಪ್ರೀತಿಯ ಮುತ್ತಣ್ಣ... ಸಕಲ ಕಲಾವಲ್ಲಭ ಎಂದು ನಾನು ಹೇಳುವ ಸುಬ್ಬಣ್ಣಯ್ಯ... ಸುಬ್ಬರಾಯಾಚಾರ್ ಮತ್ತು ಶಾರದಕ್ಕ ಅವರ ಮಗ.
ದುರ್ದೈವವೆಂದರೆ.. ಹೆಸರು ಮೃತ್ಯುಂಜಯ ಆದರೆ ಸಾವು ಬಹು ಚಿಕ್ಕವಯಸಿನಲ್ಲಿ, ಪ್ರಾಯಶಃ 23 - 24 ಇರಬಹುದು. ಅಂದಿನ ದಿನದ ನೆನಪಿದೆ... ಊರಿನಲ್ಲಿ ಏನೋ ಗುಜು ಗುಜು... ಮುತ್ತಣ್ಣನ ಹೆಸರು ಪದೇ ಪದೇ ಕೇಳುತ್ತಿದೆ... ಏನಕ್ಕೋ ಕಾಯುತ್ತಿರುವ ಜನ.. ಮಧ್ಯಾಹ್ನದ ಸಮಯಕ್ಕೆ ಬಂದಿದ್ದು ಹಳದಿ ಕಪ್ಪು ಬಣ್ಣದ ಕಾರು... ಅದರಲ್ಲಿ ಮುತ್ತಣ್ಣನ ಶರೀರ.
ಶಾರದಕ್ಕನ ನೋವು ಹೇಳತೀರದು... ಆಕ್ರಂದನ ಮುಗಿಲು ಮುಟ್ಟಿತ್ತು... ಮನೆಯವರೆಲ್ಲರ ಅಳು ನಿಲ್ಲಲು ತುಂಬ ಸಮಯ ತೆಗೆದುಕೊಂಡಿತ್ತು ಅನ್ನುವುದು ಮಾತ್ರ ಗೊತ್ತು. ಎಷ್ಟೋ ದಿನ ಶಾರದಕ್ಕ, ಮುತ್ತಣ್ಣನ ವಾರಿಗೆಯವನಾದ ನನ್ನಣ್ಣ ಚೂಡಣ್ಣನನ್ನು ನೋಡಿದಾಗ ಮಗನನ್ನು ನೆನೆಸಿಕೊಂಡು ಅಳುತ್ತಿದ್ದದ್ದು ನೆನಪಿದೆ. ಪುತ್ರಶೋಕಂ ನಿರಂತರಂ ಎನ್ನುವುದು ಎಷ್ಟು ಸತ್ಯ ಅಲ್ಲವೇ?
ಏನಾದರಾಗಲಿ ಜೀವನ ನಿಂತ ನೀರಲ್ಲ.. ಮುಂದುವರಿಯುತ್ತದೆ ಅಲ್ಲವೇ?
ಸಾವಿನ ನಂತರದ ಕಾರ್ಯಕ್ರಮಗಳು .. ಶ್ರಾದ್ಧಗಳು... ಆಡು ಭಾಷೆಯಲ್ಲಿ ತಿಥಿ.
ತಿಥಿ ಎಂದಾಗ ಮೊದಲು ನೆನಪಿಗೆ ಬರುವುದೇ ಪುಷ್ಕಳವಾದ ಊಟ.... ಜೊತೆಗೆ ಸತ್ಯ ಹರಿಶ್ಚಂದ್ರ ಚಿತ್ರದ ಹಾಡು ...ಶ್ರಾದ್ಧದೂಟ ಸುಮ್ಮನೆ ನೆನೆಸಿಕೊಂಡರೆ ಝಮ್ಮನೆ... ನೀರೂರಿನಾಲಿಗೆ ಕುಣಿವುದಯ್ಯ ತಮ್ಮಗೇ....
ನಮ್ಮ ಮನೆಯಲ್ಲಿ ತಿಥಿ ಅಂದಾಗ... ಮೊದಲ ಅತಿಥಿ.... ದೇವನಹಳ್ಳಿ ರಾಮಾ ಶಾಸ್ತ್ರಿಗಳು... ಬೆಳಿಗ್ಗೆ ರೈಲಿನಲ್ಲಿ ಬಂದು... ನಮ್ಮ ಮನೆಯಲ್ಲಿ ಕೂತು ಬಾಳೆ ಎಲೆಯಲ್ಲಿ ದೊನ್ನೆ.. ಹಾಗೂ ಇತರ ಪರಿಕರಗಳನ್ನು ತಯಾರಿ ಮಾಡಿಕೊಳ್ಳುತ್ತಿದ್ದದ್ದು... ನಡುವೆ ಮಾತುಗಳು...
ನಮ್ಮ ಶಾಲೆಯ ಸಮಯ ಆಗುತ್ತಿದ್ದಂತೆ... ಅಮ್ಮ ಕೊಟ್ಟ ಏನನ್ನಾದರೂ.. ಹೊಟ್ಟೆ ತುಂಬ ತಿಂದು ದೌಡು... ಮಧ್ಯಾಹ್ನ ಊಟದ ಸಮಯಕ್ಕೆ ಮನೆಗೆ ಬಂದರೆ ಇನ್ನೂ ಕಾರ್ಯಕ್ರಮ ನಡೆಯುತ್ತಲೇ ಇತ್ತು... ಆಗ ಊಟ ಇಲ್ಲ... ಮತ್ತೆ ಶಾಲೆಗೆ. ಒಂದಷ್ಟು ಸಮಯದ ನಂತರ... ಮನೆಯ ಕಡೆಯಿಂದ ಯಾರೋ ಬಂದು ಮುಖ ತೋರಿಸಿದರೆ.. ನಮ್ಮ ಮೇಷ್ಟ್ರೇ ನನ್ನನ್ನು ಮನೆಗೆ ಊಟಕ್ಕೆ ಕಳಿಸುತ್ತಿದ್ದರು.... ಆಗ ತಿಥಿ ಊಟ... ವಾವ್... ಎಂಥ ಸವಿ ನೆನಪು.
ನಮ್ಮ ಮನೆಯ ತಿಥಿಯ ಅವಿಭಾಜ್ಯ ಅಂಗ... ನಂಜಣ್ಣಯ್ಯ.... ನನ್ನ ಚಿಕ್ಕಪ್ಪ... ಅವರೇ ಊಟ ಬಡಿಸುತ್ತಿದ್ದದ್ದು... ತಪ್ಪದೇ ಇರುತ್ತಿದ್ದ ಒಂದು ಮಾತು.... ಅರ್ಧ ಹಾಕು ಎಂದು ಯಾರು ಕೇಳಿದರೂ... ಮಾಡಿದ್ದರಲ್ಲಿ ನಿನಗೆ ಅರ್ಧ ಹಾಕಿದರೆ ಬೇರೆಯವರ ಗತಿಯೇನು ಎನ್ನುವುದು.. ಎಲ್ಲ ಸಲವೂ ನಗುತ್ತಿದ್ದದ್ದು ಮಾತ್ರ ನೆನಪಿದೆ.
ಹೈಸ್ಕೂಲ್ ಸೇರಲು ಬೆಂಗಳೂರಿಗೆ ಬಂದಾಗ ನಾನು ಕೆಲ ಕಾಲ ಇದ್ದದ್ದು ನಂಜಣ್ಣಯ್ಯನ ಮನೆಯಲ್ಲಿ. ಅಣ್ಣಯ್ಯ ಎಲ್ಲ ಕೆಲಸದಲ್ಲೂ ಅಚ್ಚು ಕಟ್ಟು. ಮಲಗುವಾಗ ನಮಗೆ ಸೊಳ್ಳೆ ಪರದೆ ಕಟ್ಟಿಕೊಡುವುದು.... ಬೆಳಗಾಗ ಅದನ್ನು ಮಡಿಸಿಡುವುದು. ಮಡಿಸುತ್ತಾ ಅಣ್ಣಯ್ಯ ಹೇಳಿಕೊಳ್ಳುತ್ತಿದ್ದ ಶ್ಲೋಕಗಳು..." ಲಕ್ಷ್ಮಿ ನೃಸಿಂಹ ಮಮದೇಹಿ ಕರಾವಲಂಬಂ" ಭಾಗವಂತೂ ನೆನಪಿದೆ. ಸೊಳ್ಳೆ ಪರದ ಮಡಿಸಲು ಕಲಿತದ್ದು ಅಣ್ಣಯ್ಯನಿಂದನೇ.
ಅಣ್ಣಯ್ಯನ ಮನೆಯಲ್ಲಿದ್ದಾಗ ಒಂದು ಸಂಜೆ ಅನ್ನ ಮಾಡುವ ಜವಾಬ್ದಾರಿ ನನ್ನ ಮೇಲೆ ಬಿತ್ತೋ... ಅಥವಾ ನಾನೇ ತೆಗೆದುಕೊಂಡೆನೋ ನೆನಪಿಲ್ಲ. ಚಿಕ್ಕಮ್ಮ ಒಳಗಿಲ್ಲ, ಮಕ್ಕಳಿಗೆ ಹಸಿವು... ಅಣ್ಣಯ್ಯ ಬರುವುದು ತಡ ಹಾಗಾಗಿ ಈ ಕೆಲಸ. ಅಕ್ಕಿಯನ್ನು ಜಾಲಿಸಿ ಕಲ್ಲಿನ ಹರಳುಗಳನ್ನು ಬೇರ್ಪಡಿಸಿ ಒಲೆಯ ಮೇಲಿಡುವುದು ಒಂದು ಕ್ರಮ. ಅಕ್ಕಿಯನ್ನು ಜಾಲಿಸಿದೆ.. ಒಂದೆರಡು ಕಲ್ಲು ಬಂತು... ಚಿಕ್ಕಮ್ಮನಿಗೆ ತೋರಿಸಿದೆ.. "ಒಂದೆರಡು ತೆಗೆದರೂ ಒಂದೇ ಹಾಗೆ ಬಿಟ್ರು ಒಂದೇ... ವ್ಯತ್ಯಾಸ ಆಗಲ್ಲ " ಅಂತ ಹೇಳಿದ್ದು... ಹಾಗಾದ್ರೆ ವಾಪಸ್ ಹಾಕ್ಲಾ ಅಂತ ಕೇಳಿದ ನಾನು... ಚಿಕ್ಕಮ್ಮ ಏನು ಉತ್ತರ ಕೊಟ್ಟರೋ ಕಾಣೆ...ಹೂಂ ಅಂತ ಭಾವಿಸಿ ಮತ್ತೆ ಅದನ್ನು ಅಕ್ಕಿ ಜೊತೆ ಹಾಕಿ ಒಲೆ ಮೇಲೆ ಇಟ್ಟೆ... ಎಂಥ ಪೆದ್ದತನ ನನ್ನದು... ನೆನಪಾದಾಗಲೆಲ್ಲ ನಗುವೇ ನಗು.
ಹಬ್ಬದ ಹಿಂದಿನ ದಿನ.. ಹೂಗಳನ್ನು ಕಿತ್ತು ತರುವುದು ಒಂದು ಕೆಲಸ. ನಾನು ನನ್ನಣ್ಣ ಸತ್ತಿ.. ಮುಕುಂದ ಮತ್ತು ಮೂರ್ತಿ ಯಾವಾಗಲೂ ಜೊತೆ... ಒಂದು ಸಲ ನನ್ನಣ್ಣ ಕಿಟ್ಟಣ್ಣ ನಮ್ಮ ಜೊತೆಯಲ್ಲಿ ಬಂದ... ನಾವು ಹೋಗುವ ಜಾಗದಲ್ಲಿ ಅಲ್ಲಲ್ಲಿ ನೀರು ಹರಿಯುತ್ತಿರುವ ಸಣ್ಣ ಸಣ್ಣ ಕಾಲುವೆಗಳು ಸಾಮಾನ್ಯ. ಅಂತ ಒಂದು ಸಣ್ಣ ಕಾಲುವೆಯಲ್ಲಿ.. ಮೀನುಗಳು ಓಡಾಡುತ್ತಿದ್ದವು... ಅದರ ಜೊತೆ ಸ್ವಲ್ಪ ಆಟವಾಡುವುದು ನಡೆಯಿತು.... ಹೀಗಿರುವಾಗ ನನ್ನಣ್ಣ ಕಿಟ್ಟಣ್ಣ ಒಂದು ಸಣ್ಣ ಮೀನನ್ನು ಹಿಡಿದು ಬಾಯಿಗೆ ಎಸೆದು ತಿಂದಂತೆ ಮಾಡಿ ... ರುಚಿಯಾಗಿದೆ.. ನೀನು ತಿನ್ನು ಎಂದು ನನಗೆ ಹೇಳಿದ. ನಾವು ಮೀನು ತಿನ್ನಬಾರದು ಎಂದು ಗೊತ್ತಿದ್ದ ನಾನು ಬೇಡ ಎಂದಾಗ... ಪುಸಲಾಯಿಸಿ ಯಾರಿಗೂ ಹೇಳುವುದಿಲ್ಲ.. ಎಂದು ಪ್ರೇರೇಪಿಸಿದ... ನಾನು ಸಣ್ಣ ಮೀನನ್ನು ಹಿಡಿದು ಬಾಯಿಗೆ ಹಾಕಿಕೊಂಡು.. ಆ ಅಸಹ್ಯ ತಾಳಲಾರದೆ ಉಗಿದು.. ಅತ್ತಾಗ...... ತಾನು ಮೀನನ್ನು ಬಾಯಿಗೆ ಹಾಕಿಕೊಳ್ಳದೆ ಪಕ್ಕಕ್ಕೆ ಎಸೆದದ್ದು ಹೇಗೆ ಎಂದು ಮತ್ತೆ ತೋರಿಸಿ... ನನ್ನನ್ನು ನಗಿಸಿದ.. ಆ ಕ್ಷಣಕ್ಕಿಂತ... ಬಾಯಲ್ಲಿ ಮೀನು ಅಲುಗಾಡಿದ ಹಾಗೂ ಅದರ ವಾಸನೆ ಈಗ ನೆನೆದರೂ.. ಕಷ್ಟ.. ಆದರೆ ಅದರ ಜೊತೆಗೆ ನಗುವೂ ಸಹ.
ರಾಜಕಾರಣದ ಜಿದ್ದಾ-ಜಿದ್ದಿನಲ್ಲಿ ಪೋಸ್ಟರ್ ವಾರ್... ಒಂದು ಭಾಗ.... ಇದೀಗ ಅದು ಸೋಶಿಯಲ್ ಮೀಡಿಯಾಗೂ ಬಂದು ತಲುಪಿದೆ. ಇಂಥ ಒಂದು ಪೋಸ್ಟರ್ ವಾರ್ ಅನ್ನು ನಾನು ಮತ್ತು ಮುಕುಂದ ನಮ್ಮ ಹಳ್ಳಿಯಲ್ಲಿ ನಡೆಸಿದ್ದು ಉಂಟು. ಚಂದಮಾಮ ಓದುತ್ತಿದ್ದ ಕಾಲ.. ಅದರ ಒಂದು ಕಥೆಯಲ್ಲಿ ರಂಗಭಾವ ಎನ್ನುವ ಒಂದು ಪಾತ್ರ... ಪ್ರಾಯಶಃ ಅದು ಕೆಟ್ಟದ್ದಿತ್ತೇನೋ.... ಒಂದು ಬೆಳಿಗ್ಗೆ ನಮ್ಮ ಮನೆಯ ಗೋಡೆಯ ಮೇಲೆ "ರಂಗಭಾವ" ಎಂದು ಬರೆದದ್ದು ಕಂಡಿತು... ಅದನ್ನು ಬರೆದದ್ದು ಮುಕುಂದ ಎಂದು ತಿಳಿಯಿತು. ಅದು ಪ್ರತೀಕಾರವೋ ಅಥವಾ ಆಟವೋ ನೆನಪಿಲ್ಲ ಆದರೆ ನನ್ನ ಪ್ರತಿಕ್ರಿಯೆ ಮಾತ್ರ ಜಾಸ್ತಿಯೇ ಇತ್ತು. ಮುಕುಂದನನ್ನು ಕೆಲವು ಸಲ ಮುಕುಂದಪ್ಪ ಎಂದು ಕೆಲವರು ಕರೆಯುತ್ತಿದ್ದರು. ನನಗೆ ಎಲ್ಲಿಂದ ಬಂತೋ ಸ್ಪೂರ್ತಿ "##ಕುದ್ದಪ್ಪ" ಎಂದು ಹಲವಾರು ಚೀಟಿಗಳಲ್ಲಿ ಬರೆದು ಮುಕುಂದನ ಮನೆ... ಹಾಗೂ ಇನ್ನೆಲ್ಲೆಲ್ಲೋ ಅಂಟಿಸಿ ಬಂದಿದ್ದು. ಒಂದು ಚೀಟಿ ... ಸುಬ್ಬಣ್ಣಯ್ಯನ ತೋಟದ ಭಾವಿಯ ಬಳಿ ಇದ್ದ ಬೂರುಗದ ಮರಕ್ಕೆ ಅಂಟಿಸಿ ಬಂದಿದ್ದು...( ಈಚೆಗೆ ನನ್ನಣ್ಣ ಸತ್ತೀಸಾರ್ ಇದನ್ನು ನೆನಪಿಸಿದ್ದು)
ಇಷ್ಟೆಲ್ಲಾ ಆದಮೇಲೂ ನನ್ನ ಮತ್ತು ಮುಕುಂದನ ಬಾಂಧವ್ಯ ಚೆನ್ನಾಗಿಯೇ ಇತ್ತು. ಮುಕುಂದ ಈಗ ನಮ್ಮ ಜೊತೆಯಲ್ಲಿಲ್ಲ... ನೆನಪುಗಳು ಮಾತ್ರ.
ಪಾಕೆಟ್( purse ) ಬೇಕು ಅದರಲ್ಲಿ ದುಡ್ಡು ಇಟ್ಟುಕೊಳ್ಳಬೇಕು ಎನ್ನುವುದು ಒಂದು ಮಹತ್ತರವಾದ ಆಸೆ.... ಅದನ್ನು ಕೊಳ್ಳಲು ಬೇಕಾದ ಹಣ ತುಂಬಾ ದೊಡ್ಡದು. ಬಹಳ ಕಷ್ಟಪಟ್ಟು.. ಹಾಗೂ ಹೀಗೂ ಕೂಡಿಸಿದ ದುಡ್ಡು ಕೊಟ್ಟು... ಅಕ್ಕಯ್ಯಮ್ಮನ ಬೆಟ್ಟದ ಜಾತ್ರೆಯಲ್ಲಿ ಒಂದು ಪಾಕೆಟ್ ಕೊಂಡಾಯಿತು.... ಆದರೆ ಅದರಲ್ಲಿ ಇಡಲು ದುಡ್ಡು ಮಾತ್ರ ಇಲ್ಲ... ಎಲ್ಲ ಖಾಲಿ. ಅದರಲ್ಲಿ ದುಡ್ಡಿಟ್ಟುಕೊಂಡು ಓಡಾಡಿದ ನೆನಪಂತೂ ನನಗಿಲ್ಲ. ಪಾಕೆಟ್ ನ ಸುಖ ಮಾತ್ರ ನೆನಪಿದೆ.
ಊಟದ ಸಮಯಕ್ಕೆ... ನಾನು ನನ್ನಣ್ಣ ಸತ್ತಿ ಒಟ್ಟಿಗೆ ಇರುವುದು ಒಂದು ಪದ್ಧತಿ... ನನ್ನನ್ನು ಹುಡುಕಿ (ಆಟವಾಡುತ್ತಾ ಊರಿನ ಯಾವ ಮೂಲೆಯಲ್ಲಾದರೂ ಇರಬಹುದು) ಕರೆತರವುದು ಬಹುಶಃ ಅಣ್ಣನಾಗಿ ಅವನ ಜವಾಬ್ದಾರಿ ಆಗಿತ್ತೇನೋ... ಇಂಥ ಒಂದು ದಿನ ನನ್ನಣ್ಣ ನನಗಾಗಿ ಹುಡುಕಾಡಿದ್ದಾನೆ.. ಎಲ್ಲಿಯೂ ಕಂಡಿಲ್ಲ.. ಆ ಸಮಯದಲ್ಲಿ ನಮ್ಮೂರಿನ ಸರೋಜಾ ಎಂಬ ಹೆಣ್ಣು ಮಗಳು ಸಿಕ್ಕಿ.. ಆಕೆಯನ್ನು ಕೇಳಿದಾಗ ಹೇಳಿದ್ದು... "ರಂಗಣ್ಣ -------- ಭಾವಿಗೆ (ಭಾವಿಯ ಹೆಸರು ನನಗೆ ನೆನಪಿಲ್ಲ) ಬಿದ್ದಿದ್ದ.. ನನ್ನನ್ನ ಎತ್ತು ಎತ್ತು ಅಂತ ಕೇಳಿದ... ನನಗೆ ತುಂಬಾ ಕೆಲಸ ಇತ್ತು... ಅದಕ್ಕೆ ಬಂದುಬಿಟ್ಟೆ" ಅಂತ. ಸತ್ತಿಗೆ ಅಳು... (ರಂಗ ಸತ್ತೇ ಹೋದನೋ ಎಂದು ಇರಬಹುದೇ)... ಭಾವಿಯ ಬಳಿಗೆ ಹೋದಾಗ ಅಲ್ಲಿ ಯಾರು ಇಲ್ಲ.. ಅಳುತ್ತಾ ಮನೆಗೆ ಬಂದು ನೋಡಿದರೆ ನಾನು ಹಾಯಾಗಿ ಊಟ ಮಾಡುತ್ತಾ ಕುಳಿತಿದ್ದೆ... ಕೋಪ ಬರುವುದು ಸಹಜ ತಾನೆ? ಈಗಲೂ ಯೋಚನೆ ಮಾಡಿದಾಗ ಸರೋಜಳಿಗೆ ಬಾವಿಯಲ್ಲಿ ಬಿದ್ದವನಿಗೂ ಸಹಾಯ ಮಾಡದಷ್ಟು ಅರ್ಜೆಂಟ್ ಕೆಲಸ ಏನಿತ್ತು ತಿಳಿಯದು.... ಕಾಕತಾಳಿಯವಾಗಿ ನಮ್ಮ ಅತ್ತಿಗೆ ಹೆಸರು ಸರೋಜಾ ಎಂದು.... ಆಗಾಗ ಈ ವಿಷಯ ನೆನಪಿಗೆ ಬಂದು ಮಾತಾಡುವಾಗ ಯಾವ ಸಂಬಂಧವೂ ಇಲ್ಲದ... ಹೆಸರಿನ ಕಾರಣದಿಂದ... ಅವರನ್ನು ತಮಾಷೆ ಮಾಡುವುದು ಇದೆ.
ಬಾಲ್ಯದ ನೆನಪುಗಳು ಎಂದಿಗೂ ಸೊಗಸೇ...
ಇನ್ನಷ್ಟು ಪ್ರಸಂಗಗಳು ಮುಂದಿನ ದಿನಗಳಲ್ಲಿ...
ನಮಸ್ಕಾರ
D C Ranganatha Rao
9741128413
ಮಧುರವಾದ ಬಾಲ್ಯದ ನೆನಪುಗಳು ಜೀನದಲ್ಲಿ ಉತ್ಸಾಹ ತುಂಬುತ್ತವೆ.
ReplyDeleteಕಳೆದ ಲೇಖನದ ಮುಂದುವರಿದ ಭಾಗ
ReplyDelete80ರ ದಶಕದ ಟಿಪಿಕಲ್ ಮಾದ್ಯಮ ವರ್ಗದ ಬ್ರಾಹ್ಮಣ ಕುಟುಂಬದ ಬಾಲ್ಯ ನಿಮ್ಮ ಅಗಾಧ ನೆನಪಿನ ಶಕ್ತಿ ಮತ್ತು ಸರಳ ಬರವಣಿಗೆ ಮೂಲಕ ಸುಂದರವಾಗಿ ಮೂಡಿ ಬಂದಿದೆ ನಮ್ಮನ್ನು ಮತ್ತೊಮ್ಮೆ ಹಿಮ್ಮುಖವಾಗಿ ಚಲಿಸಿ ಹಳೆಯ ಘಟನೆ ಮೆಲುಕು ಹಾಕುವಂತೆ ಮಾಡಿದ ನಿಮಗೆ ಒಂದು ಸಲಾಮ್
ಧನ್ಯವಾದಗಳು
ಬಾಬು
ಮಧುರವಾದ ಬಾಲ್ಯ, ಯಾತನೀಯ ವೃದ್ಧಾಪ್ಯ ಎಂದಿಗೂ ಚಿರ
ReplyDeleteನೂತನವಾದ ಬಾಳಿನ ಅಧ್ಯಾಯಗಳು.
ಅವೆರಡನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದೀರಿ.
ನಾಟಕ, ಕೋಲಾಟ, ಮೃತ್ಯುಂಜಯ ನ ಅಕಾಲಮರಣ!, ಶ್ರಾದ್ಧದ ವಿವರ, ಅದರ ಊಟದ ಗಮ್ಮತ್ತು ಎಲ್ಲವೂ ಸೊಗಸಾಗಿ ಚಿತ್ರಿತವಾಗಿದೆ.
ಪಾಕೆಟ್ ಖರೀದಿಸಲು ಪರದಾಟ, ಮುಕುಂದನ ಮೇಲೆ ನೇರವಾಗಿ ಸೇಡು ತೀರಿಸಿಕೊಳ್ಳಲಾಗದ ಅಸಹಾಯಕತೆ, ಬಾವಿಗೆ ಬಿದ್ದಿದ್ದ ಎನ್ನಲಾದ ಹಾಸ್ಯಪ್ರಸಂಗ ಜೀವನದ ನೆನಪುಗಳ ಬುತ್ತಿಯಾಗಿದೆ. ಇವುಗಳು ಎಲ್ಲರ ಬಾಲ್ಯದ ನೆನಪುಗಳನ್ನು ಮುನ್ನೆಲೆಗೆ ತಂದು ಮುದ ನೀಡುತ್ತದೆ. ಅದಕ್ಕೆ ಕಾರಣವಾದ ಲೇಖನಕ್ಕೆ ಹಾಗೂ ಅದರ ಕರ್ತೃವಿಗೂ ನಮನಗಳು.
ವಿಶ್ವಾಸಿ,
ಗುರುಪ್ರಸನ್ನ
ಚಿಂತಾಮಣಿ
ಬಾಲ್ಯದ ನೆನಪು ಇನ್ನೆಷ್ಟು ಇದೆ ಸಾರ್ . ನಿಮ್ಮ ಬಾಲ್ಯವು ಒಂದು ಅಗಾಧವಾದ👌👌👌ನೆನಪಿನ ಅಂಗಳ
ReplyDeleteಬಾಲ್ಯದ ನೆನಪುಗಳು ಮಧುರ ಮಾತ್ರವಲ್ಲ ಅಮರ ಕೂಡ ಅನ್ನೋದು ನಿಮ್ಮ ಈ ಬರವಣಿಗೆ ತೋರಿಸುತ್ತಿದೆ.
ReplyDeleteತಮ್ಮ ಬಾಲ್ಯದ ನೆನಪುಗಳು ಲೇಖನವು ಉತ್ತಮವಾಗಿ ಮೂಡಿ ಬಂದಿದೆ..ತಮ್ಮ ನೆನಪಿನ ಶಕ್ತಿಗೆ ಅನಂತ ಅನಂತ ಧನ್ಯವಾದಗಳು.ಬಾಲ್ಯದಲ್ಲಿ ನಡೆದ ಕೋಲಾಟ,ನಾಟಕ, ಅಕಾಲಿಕ ಮರಣ, ತಿಥಿಯ ಊಟದ ಬಗ್ಗೆ ಸೊಗಸಾದ ವಿವರಣೆ ಬಂದಿದೆ.ತಮ್ಮ ಅದ್ಬುತ ನೆನಪಿನ ಶಕ್ತಿಗೆ ಹಾರ್ದಿಕ ಅಭಿನಂದನೆಗಳು.ಭಗವಂತ ತಮಗೆ ಇನ್ನೂ ಉತ್ತಮ ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇನೆ.ದೇವೇಂದ್ರಪ್ಪ
ReplyDelete