ಬಾಲ್ಯದ ಸೊಗಸು




ಬೆಳಿಗ್ಗೆ ವಾಕಿಂಗ್ ಹೋದಾಗ ನಡೆದ ಒಂದು ಪ್ರಸಂಗ... ಗಂಡ ಹೆಂಡತಿಯ ಜೋಡಿ ಒಟ್ಟಾಗಿ ಸ್ಕೂಟರ್ ಮೇಲೆ ಬಂದು... ಪಾರ್ಕಿನಲ್ಲಿ ತಮ್ಮಷ್ಟಕ್ಕೆ ತಾವು ಬೇರೆ ಬೇರೆಯಾಗಿ ವಾಕಿಂಗ್ ಮಾಡುತ್ತಿದ್ದರು. ತಕ್ಕಮಟ್ಟಿಗೆ ಪರಿಚಯವಿದ್ದ ಗಂಡನೊಡನೆ ಲೋಕಾ ರೂಢಿಯಾಗಿ ಮಾತನಾಡಿದಾಗ ಹೇಳಿದ್ದು.." ಅವರು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡಿತಾರೆ... ಅವರ ಜೊತೆ ನನ್ನ ವಾಕಿಂಗು ಸರಿಯಾಗಲ್ಲ". ಹೌದು ತಕ್ಕಮಟ್ಟಿಗೆ ಇದು ನನ್ನ ಅನುಭವವೂ ಹೌದು.. ಒಂದೇ ವ್ಯತ್ಯಾಸ ಹೇಗೋ ಜೊತೆಯಲ್ಲಿ ನಡೆಯುತ್ತೇನೆ (ವಾಕಿಂಗ್ ಹೋಗುವುದು ಅಪರೂಪ ಆದ್ದರಿಂದ ಅದು ಅಷ್ಟಾಗಿ ಪ್ರಾಮುಖ್ಯತೆ ಪಡೆದಿಲ್ಲ.)

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು.. ಅನ್ನುವ ಪದ ಪುಂಜ ಮತ್ತೆ ಮತ್ತೆ ನನ್ನ ತಲೆಯಲ್ಲಿ ಓಡಿತು.. ತಕ್ಷಣ ಅದರ ಕಾರಣವೂ ತಿಳಿಯಿತು... ನೆನಪಿಗೆ ಬಂದದ್ದು ಆ ಶಿಶು ಗೀತೆ... ಅಥವಾ ಜಾನಪದ ಹಾಡು ಎನ್ನಲೇ?  ಇದೋ ಕೆಳಗಿದೆ ಆ ಸಾಲುಗಳು... ಸಾಧ್ಯವಾದರೆ ಪದ್ಯದ ಧಾಟಿಯಲ್ಲಿ ಓದುವ ಪ್ರಯತ್ನ ಮಾಡಿ...

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದಳು ಸೀತೆ

ಸೀತೆಕಾಲೊಳಗೆ ಪದ್ಮ ರೇಖೆ ನೋಡೆ

ಪದ್ಮ ರೇಖೆಯೊಳಗೆ ಚಿನ್ನ ಮೊಳ ನೋಡೆ

ಚಿನ್ನ ಮೊಳದೊಳಗೆ ತಿಳಿ ನೀರ್ ನೋಡೆ

ತಿಳಿ ನೀರು ಕುಡಿಯಕ್ ಬಂತು ಆನೆಯ ನೋಡೆ

ಆನೆಯ ಮೇಲೆ ಅಂಬಾರಿ ನೋಡೆ

ಅಂಬಾರಿಯೊಳಗೆ ಅರಸನ್ ಮಕ್ಕಳ್ ನೋಡೆ

ಅರಸನ ಮಕ್ಕಳ ಕೈಲಿ ಬೆಳ್ಳಿ ಬಟ್ಲು ನೋಡೇ

ಬೆಳ್ಳಿ ಬಟ್ಟಲೊಳಗೆ ಹಾಲು ತುಪ್ಪ ನೋಡೆ

ಹಾಲು ತುಪ್ಪ ಕುಡಿಯಕ್ ಬಂತು ಮಾಳ್ ಬೆಕ್ಕಿನ್ನೋಡೆ 

ಮಾಳ್ ಬೆಕ್ಕಿನ್ನ ಹೊಡಿಯೋಕ್ ಬಂದ ಬೇಟ್ ಗಾರನ್ನ ನೋಡೆ

ಬೇಟ್  ಗಾರನ್ ಕೈಲಿ ಚೋಟುದ್ದ ಕುಡುಗೋಲು

ಚೋಟುದ್ದ ಕುಡುಗೋಲ್ಗೆ ಮಾರ್ ಮಾರ್ ಹಗ್ಗ

ಮಾರ್ ಮಾರ್  ಹಗ್ಗಕ್ಕೆ ಮದ್ದಾನೆಯಂತ ಎಮ್ಮೆ

ಮದ್ದಾನೆಯಂತ ಎಮ್ಮೆಗೆ ಗೆಜ್ಜೆ ಕಟ್ಟಿದ್ ತಂಬ್ಗೆ

ಗೆಜ್ಜೆ ಕಟ್ಟಿ ತಂಬಿಗ್ಗೆ  ಜೀರ್ ಬೋರ್  ಹಾಲು

ಜೀರ್ ಬೋರ್ ಹಾಲಿಂದ ಕಲ್ಲಂತ ಮೊಸರು

ಕಲ್ಲಂತ ಮೊಸರಲ್ಲಿ  ಬೆಣಚ್ಕಲ್ ಅಂತ ಬೆಣ್ಣೆ

ಬೆಣಚ್ಕಲ್ ಅಂತ ಬೆಣ್ಣೆಗೆ ಬಿಸಿ ಬಿಸಿ ದೋಸೆ

ಬಿಸಿ ಬಿಸಿ ದೋಸೆಗೆ ಬೆಣ್ಣೆ ಕಾಯ್ಸಿದ್ ತುಪ್ಪ

ತಿನ್ನು ಬಾರೋ ಬಸವಣ್ಣ ಉಣ್ಣು ಬಾರೋ ಬಸವಣ್ಣ

ನೀನುಂಡು ಬೆಳೆದ ನೀಲದ ಕೋಲೆ

ಹಾಲುಂಡು ಬೆಳೆದ ಹವಳದ ಕೋಲೆ

ಕೋಲು ಕೋಲೆ ಕೋಲನ್ನ ಕೋಲೆ 

ಕೋಲು ಕೋಲೆ ಕೋಲನ್ನ ಕೋಲೆ...

ಹೀಗೆ ಹೇಳುತ್ತಿದ್ದ ಧಾಟಿಯಲ್ಲಿ ಒಂದು ಜುಳು ಜುಳು ಹರಿಯುವ ನೀರಿನ ಓಟ ಇರುತ್ತಿತ್ತು. ಜೊತೆಗೆ ಒಂದಕ್ಕೊಂದು ಅರ್ಥಪೂರ್ಣವಾಗಿ ಪೋಣಿಸುತ್ತಾ ಪದ್ಯವನ್ನು ಮುಂದುವರೆಸಿಕೊಂಡು ಹೋಗುವ ಕಲೆ ಇತ್ತು. ಎಷ್ಟರ ಮಟ್ಟಿನ ಪ್ರಭಾವ ಎಂದರೆ.. ಸುಮಾರು70 ವರ್ಷಗಳ ನಂತರವೂ.. ಆ ಪದ್ಯ ನನ್ನ ಬಾಯಲ್ಲಿ ನಿರರ್ಗಳವಾಗಿ.. ಎಲ್ಲೂ ನಿಲ್ಲದೆ ಪ್ರವಹಿಸಿತು. ಅದೇ ನಮ್ಮ ಹಿಂದಿನ ಪದ್ಯಗಳ ಗಟ್ಟಿತನ. 

ಹಿರಿಯರು ಹೇಳುತ್ತಿದ್ದ ಕಥೆಗಳನ್ನು ತುಂಬಾ ಇಷ್ಟದಿಂದ ಕೇಳುತ್ತಿದ್ದ ನಾವು... ಆನೆ, ಅರಸ, ನೀರಿನ ಹರಿವು, ಎಮ್ಮೆ, ಹಾಲು ಮೊಸರು, ಬೆಣ್ಣೆ , ದೋಸೆಯ ಚುಯ್  ಗುಡುವಿಕೆ ಎಲ್ಲವನ್ನೂ ಕಲ್ಪನಾ ಲೋಕದಲ್ಲಿ ಸೆರೆ ಹಿಡಿದು ಆನಂದಿಸುತ್ತಿದ್ದೆವು.. ನಮ್ಮ ಜೀವನ ಶೈಲಿ ನಿಸರ್ಗದ ಸುತ್ತು ಮುತ್ತಲು ಇರುತ್ತಿತ್ತು.  ಅದರ ಫಲವೇ ಇಂದೂ ಸಹ ಆ ಗೀತೆಯ ಅನುರಣನ.

ನಾನು ಓದಿದ್ದು ಹೈಸ್ಕೂಲ್ ವರೆಗೂ ಸರ್ಕಾರಿ ಶಾಲೆ.. ಕನ್ನಡ ಮೀಡಿಯಂ... ಹೈಸ್ಕೂಲ್ ಗೆ ಬಂದ ನಂತರ ಇಂಗ್ಲೀಷ್ ಮೀಡಿಯಂ ಆದರೂ ಸಹ... ಪಾಠ ಮಾಡುವಾಗ ನಮ್ಮೆಲ್ಲ ಉಪಾಧ್ಯಾಯರುಗಳು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು.... ವಿಜ್ಞಾನ ಗಣಿತ ಇಂತಹ ವಿಷಯಗಳ ಪದಗಳನ್ನು ಇಂಗ್ಲೀಷಿನಲ್ಲಿ ಕಲಿತರೂ ಅದರ ವಿವರಣೆ  ಬಹುತೇಕ ಕನ್ನಡದಲ್ಲಿ ಇರುತ್ತಿತ್ತು.  ಹಾಗಾಗಿ ಅದನ್ನು ಅರ್ಥ ಮಾಡಿಕೊಂಡು ಜೀರ್ಣಿಸಿಕೊಳ್ಳುವುದು ಸುಲಭವಾಗಿತ್ತು ಎಂದು ನನ್ನ ಅನಿಸಿಕೆ. ಚಿಂತನೆ ಎಲ್ಲಾ ಕನ್ನಡದಲ್ಲಿ... ಪರೀಕ್ಷೆ ಬರೆಯುವುದು ಮಾತ್ರ ಇಂಗ್ಲಿಷ್ ನಲ್ಲಿ. ಸಂಸ್ಕೃತ ಭಾಷೆ ಕಲಿಯುವಾಗಲೂ ಸಹ ಕನ್ನಡದ ಉಪಯೋಗವೇ ಇರುತ್ತಿತ್ತು.

ಹಾಡಿನೊಂದಿಗೆ ಆಟ ಹಾಗೂ ನೆನಪಿನ ಶಕ್ತಿಯ ಪ್ರಯೋಗವೂ ನಡೆಯುತ್ತಿತ್ತು.. ಅದರ ಒಂದು ತುಣುಕು..

ಗೊಟ್ಟಿಗೆರೆ ಮುದುಕ ಬೆಂಗಳೂರಿಗೆ ಬಂದನು

ಮುದುಕನ  ಹೆಂಡತಿ ಬೆಂಗಳೂರಿಗೆ ಬಂದಳು

ಗೊಟ್ಟಿಗೆರೆ ಮುದುಕ ಮುದುಕನ ಹೆಂಡತಿ ಬೆಂಗಳೂರಿಗೆ ಬಂದರು

ಹೆಂಡತಿಯ ನಾಯಿ ಬೆಂಗಳೂರಿಗೆ ಬಂದಿತು

ಗೊಟ್ಟಿಗೆರೆ ಮುದುಕ ಮುದುಕನ ಹೆಂಡತಿ ಹೆಂಡತಿಯ ನಾಯಿ ಬೆಂಗಳೂರಿಗೆ ಬಂದಿತು

ನಾಯಿಯ ಬಾಲ ಬೆಂಗಳೂರಿಗೆ ಬಂದಿತು

ಗೊಟ್ಟಿಗೆರೆ ಮುದುಕ ಮುದುಕನ ಹೆಂಡತಿ ಹೆಂಡತಿಯ ನಾಯಿ ನಾಯಿಯ ಬಾಲ ಬೆಂಗಳೂರಿಗೆ ಬಂದಿತು...

ಹೀಗೆ ಜೋಡಣೆ ಮಾಡುವುದು... ಅದರಲ್ಲಿನ ಬುದ್ಧಿವಂತಿಕೆ.. ಜೊತೆಗೆ ಎಲ್ಲವನ್ನೂ ಅದೇ ಕ್ರಮದಲ್ಲಿ ಹೇಳಬೇಕಾದ ಜಾಣತನ ಹಾಗೂ ನೆನಪಿನ ಶಕ್ತಿ... ನಮಗರಿವಿಲ್ಲದೆ ನಮ್ಮಲ್ಲಿ ಬೆಳೆಸಿದ ಕೆಲವು ಶಕ್ತಿ/ ಯುಕ್ತಿಗಳು.













ಪ್ರತಿ ತಿಂಗಳು ಬರುತ್ತಿದ್ದ ಚಂದಮಾಮ   ಪತ್ರಿಕೆ ನಮ್ಮ ಓದಿನ ಹಸಿವನ್ನು ಹೆಚ್ಚು ಮಾಡುತ್ತಿತ್ತು... ಅಲ್ಲದೆ ಅದರಲ್ಲಿ ಬರುತ್ತಿದ್ದ ಕಥೆಗಳು, ಚಿತ್ರಗಳು ಕುತೂಹಲವನ್ನು ಹಿಡಿದಿಟ್ಟು ಕೊಳ್ಳುತ್ತಿದ್ದವು..... ಬೇತಾಳದ ಕಥೆಗಳ ಕೊನೆಯ ಪ್ರಶ್ನೆ ಯಂತೂ ರೋಚಕವಾಗಿರುತ್ತಿತ್ತು.

ಹೀಗೆ ಕನ್ನಡದಲ್ಲಿ ಚಿಂತಿಸಿ... ಕನ್ನಡದಲ್ಲಿ ಕಲ್ಪಿಸಿಕೊಂಡು... ಕನ್ನಡದಲ್ಲಿ ಅರಗಿಸಿಕೊಂಡ ವಿಷಯಗಳು ನಮಗೆ ತುಂಬ ಹತ್ತಿರ. ಹಾಗಂತ ಇಂಗ್ಲಿಷ್ ನಲ್ಲಿ ಓದಿದ ವಿಷಯಗಳು ಅರ್ಥವಾಗಿಲ್ಲವಾ ಎಂದರೆ ತಪ್ಪು... ಆದರೆ ಭಾವನಾತ್ಮಕವಾದ / ಹೃದಯಕ್ಕೆ ಹತ್ತಿರವಾದ ವಿಷಯಗಳು ನಮ್ಮ ಆಡು ಭಾಷೆಯಲ್ಲಿದ್ದರೆ ಚಂದ.










JJack and jill went up the hill

To fetch a pail water..

ನೀರು ತರಲು ಬಿಂದಿಗೆ ತಗೊಂಡು ಬೆಟ್ಟದ ಮೇಲೆ ಹೋಗುವುದು ನಮ್ಮ ನಿಲುಕಿಗೆ ಸಿಗದ್ದು.. ನೀರೇನಿದ್ದರೂ ಭೂಮಿಯ ಮೇಲೆ ಕೆರೆ, ಕಾಲುವೆ ಹಾಗೂ ನದಿಯಲ್ಲಿ.... ಭೂಮಿಯ ಆಳದ ಬಾವಿಯಲ್ಲಿ ಸಿಗುವಂತದ್ದು ಎಂಬ ಸಾಮಾನ್ಯ ಜ್ಞಾನ ನಮ್ಮದು. ಹಾಗಾಗಿ ಅರ್ಥವಾಗದ್ದನ್ನು... ಕಂಠಪಾಟ ಮಾಡುವುದು ಸುಲಭದ ಕೆಲಸ. ಅದು ಪರೀಕ್ಷೆಗಾಗಿ ಮಾಡಿದ್ದು ಎಂದು ನನ್ನ ಅನಿಸಿಕೆ.

 ಈಚಿಗಿನ ನಗರದ ಜೀವನ ನಿಸರ್ಗದಿಂದ ದೂರವಿದ್ದಂತೆ.... ಮಕ್ಕಳಿಗೆ ಹಾಲು ಎಂದಾಗ.. ನೆನಪಾಗುವುದು ಹಾಲಿನ ಪ್ಯಾಕೆಟ್. ಇನ್ನು ಕೆರೆ ಭಾವಿಯಂತೂ ಕಾಣುವ ಭಾಗ್ಯವೇ ಇಲ್ಲ. ಬೆಳಗಿನ ಹಾಗೂ ಸಂಜೆಯ ಪಕ್ಷಿಗಳ ಕಲರವವೂ ದೂರ.. ಎಲ್ಲೋ ಕೆಲ ಕಡೆ ಇದ್ದರೂ... ವಾಹನಗಳ ಸದ್ದಿನಲ್ಲಿ ಅದು ಅಡಗಿ ಹೋಗುತ್ತವೆ.  ಬೀಚಿ ಹೇಳುತ್ತಿದ್ದಂತೆ... ಮುಂದಿನ ಪೀಳಿಗೆಗೆ ತುಪ್ಪ ಎಂದರೆ ಬಟ್ಟಲಿಗೆ ಚಮಚದಿಂದ ತಗುಲಿದಾಗ ಬರುವ ಶಬ್ದ... ಎನ್ನುವಷ್ಟರ ಮಟ್ಟಿಗೆ....

ಈಗಿನ ತಂದೆ ತಾಯಿಗಳ.. ಮಕ್ಕಳ ಕಾಳಜಿ... ಅದರಲ್ಲೂ ಒಂದೇ ಮಗು ಇರುವವರದ್ದು... ಮಕ್ಕಳ ವಿಕಸನಕ್ಕೆ ಒಂದು ತೊಡಕಾಗಿದೆಯೇನೋ ಎಂಬ ಅನಿಸಿಕೆ. ವಾಹನಗಳ ಕಾಟ... ರಸ್ತೆಗೆ ಬಿಡಲಾಗದು... ದಿನವೂ ಆಟವಾಡುವ ಜಾಗಕ್ಕೆ... ಕರೆದು ಕರೆದುಕೊಂಡು ಹೋಗಲು ಇರುವ ಇತಿಮಿತಿ... ಮಕ್ಕಳನ್ನು ನಾಲ್ಕು ಗೋಡೆಯ ಮಧ್ಯೆ ಬಂಧಿಸಲಾಗಿದೆ... ಹಾಗಾಗಿ ಅವೂ ಸಹ

 



ಟಿವಿಯ ಮುಂದೆ..... ಕರೋನ ನಂತರದ ಸಮಯದಲ್ಲಿ ಎಲ್ಲ ಮಕ್ಕಳ ಕೈಲೂ ಅನಿವಾರ್ಯವಾಗಿ ಮೊಬೈಲ್ ಫೋನ್.... ಅದಕ್ಕೆ ಅಂಟಿಕೊಂಡ ಮಗು... ಅದರ ಅಡ್ಡ ಪರಿಣಾಮ...

ನಿಜಕ್ಕೂ ಇಂದಿನ ಪೀಳಿಗೆಯ ಅಪ್ಪ ಅಮ್ಮಂದಿರಿಗೆ ಮಕ್ಕಳನ್ನು ಬೆಳೆಸುವುದು ಒಂದು ಸವಾಲೇ ಆಗಿದೆ.

ಹಿಂತಿರುಗಿ ನೋಡಿದಾಗ ನಾವೆಷ್ಟು ಅದೃಷ್ಟವಂತರು ಎಂದೆನಿಸುತ್ತದೆ.

ಬದಲಾವಣೆ ಅನಿವಾರ್ಯ... ಅಂತೆಯೇ ನಗರೀಕರಣ... ಅದರ ಜೀವನ ಶೈಲಿ. ಇಲ್ಲಿರುವ ಅವಕಾಶಗಳನ್ನೇ ಬಳಸಿಕೊಂಡು... ಒಂದಷ್ಟು ಬದಲಿಸಿಕೊಂಡು... ನಿಸರ್ಗದ ಜೊತೆ ಮಕ್ಕಳು ಬೆಳೆಯುವ ಅನುಭವವನ್ನು ಕೊಡಲು ಸಾಧ್ಯವೇ ಎಂಬ ದಿಕ್ಕಿನಲ್ಲಿ ನಾವು ಯೋಚಿಸಬೇಕಾಗಿದೆ. ಅಪ್ಪ ಅಮ್ಮಂದಿರಿಗೆ ಈ ದಿಕ್ಕಿನಲ್ಲಿ ಯೋಚಿಸುವ... ಸಾಧ್ಯ ಮಾಡುವ ಶಕ್ತಿ ಬರಲೆಂದು ಪ್ರಾರ್ಥಿಸಿ..

ಮಕ್ಕಳಿಗೆಲ್ಲ ಒಳ್ಳೆಯದಾಗಲಿ..

ನಮಸ್ಕಾರ🙏


D C Ranganatha Rao

9741128413




























Comments

  1. ಯಾಕೋ ಲೇಖನ ಚುಟುಕು ಆಯ್ತು ಅನ್ಸುತ್ತೆ..ಏಕೆಂದರೆ 70-80 ರ ದಶಕದ ಬಾಲ್ಯ ಒಂದು ದೊಡ್ಡ ಕಾದಂಬರಿ ಬರೆಯುವಷ್ಟೂ ಘಟನೆ ಸಾಕಷ್ಟು ಇರುತ್ತದೆ...ರಸ್ತೆಯಲ್ಲಿ (ರಸ್ತೆ ಎಲ್ಲಿತ್ತೊ) ಗೋಲಿ, ಗಿಲ್ಲಿ , ಲಗೋರಿ, ಕುಂಟು ಪಿಲ್ಲೆ ಆಟ ... ಮಂಜುಗಡ್ಡೆ ಐಸ್...ಪಪಂ ಪೊಪ್ಪು ...ಕಟ್ ಮಾಡಿದ ಮಾವು,ಸೀಬೆ ಯಾವುದೇ ಭಯ ಇಲ್ಲದೆ ಕೈ ತೊಳೆಯದೆ
    ತಿ೦ದಿದ್ದು...ಎಲ್ಲವೂ ಸುಂದರ ನೆನಪುಗಳು ಈಗಲೂ ಯಾವುದಾದರು ಹಳ್ಳಿಗಳಲ್ಲಿ ಒಂದೆರಡು ದಿನ ನಮ್ಮ ಬಾಲ್ಯದ ಸಮಯ ದಂತೆ ಕಾಲಕಳೆಯ ಬೇಕೆಂಬ ಆಸೆ
    ಬಾಲ್ಯವನ್ನು ನೆನಪಿಸಿದ ನಿಮಗೆ ಧನ್ಯವಾದಗಳು
    ಬಾಬು

    ReplyDelete
  2. ಬಾಲ್ಯದ ನೆನಪುಗಳ ಜೊತೆಗೆ ಹಾಡುಗಳು ಸಹಾ ಸೊಗಸಾಗಿ ಉಲ್ಲೆಖಿಸಿದ್ದೀರಿ

    ReplyDelete
  3. ಬಾಲ್ಯ ದ ಸೊಗಸು ಸೂಗಸಾಗಿಯೇ ಇದೆ. ಇನ್ನೂ ತುಂಬಾ ಇದೆ ಅನ್ನಿಸುತ್ತೆ.

    ReplyDelete
  4. Balyada sukhada nemmadi ellarigu yavagalu sigali sir

    ReplyDelete
  5. ಬಾಲ್ಯದ ಅನುಭವದ ಕೆಲವು ಅಥವಾ ಹಲವು ಜನಪಥದ ಹಾಡುಗಳಂತೂ ಕೇಳಿದರೆ ಮೈನವಿರೇಳಿಸುತ್ತವೆ. ಮಳೆರಾಯನ ಆಗಮನಕ್ಕೆ ಗೋಗರೆಯೂವ ಹುಯ್ಯೋ ಹುಯ್ಯೋ ಮಳೆರಾಯ ಎಂದು ಶುರುವಾಗುವ !!

    ReplyDelete
  6. ಈ ಬಾರಿ ಸಾಂದರ್ಭಿಕ ಚಿತ್ರಗಳ ಸಹಿತ ಲೇಖನ ಆಕರ್ಷಕವಾಗಿದೆ.
    ವಾಕಿಂಗ್-ಹೆಜ್ಜೆ ಮೇಲೆ ಹೆಜ್ಜೆ ಪದ್ಯ, ಹಿರಿಯರ ಕಥೆಗಳು... ಅವುಗಳಲ್ಲಿನ ಜೀವವೈವಿಧ್ಯತೆಯ ಸೊಗಡು ಚೆನ್ನಾಗಿ ಚಿತ್ರಿತವಾಗಿದೆ.

    ಆಟ-ಪಾಠಗಳ ವರ್ಣನೆಯೂ ನೈಜತೆಗೆ ಸನಿಹವಾಗಿದೆ.ಗೊಟ್ಟಿಗೆರೆ ಮುದುಕ...ಸೊಗಸಾಗಿದೆ.
    *ಚಂದಮಾಮ* ದ ಉಲ್ಲೇಖ ಮುದನೀಡಿತು.

    "ಭಾವನಾತ್ಮಕ/ಹೃದಯಕ್ಕೆ ಹತ್ತಿರವಿರುವ ವಿಷಯಗಳು ನಮ್ಮ ಆಡುಭಾಷೆಯಲ್ಲಿ ಇದ್ದರೆ ಚೆನ್ನ" ಎಂಬ ಮಾತು ಅರ್ಥಪೂರ್ಣವಾಗಿದೆ.
    ನೀರು ತರುವುದು-ಹಾಲು-ಪಕ್ಷಿಗಳಕಲರವ-ತುಪ್ಪದ ವ್ಯಾಖ್ಯಾನ ಹೀಗೆ ಹಲವಾರು ಅಂಶಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ.

    ಒಂದೇ ಮಗು ಇರುವ ಪೋಷಕರ ಕಷ್ಟ-ಮಕ್ಕಳ ಮೊಬೈಲ್ ವ್ಯಸನ-ಆಧುನಿಕತೆ, ನೈಸರ್ಗಿಕತೆ ಮಿಶ್ರಿತ ಜೀವನಶೈಲಿ ಇತ್ಯಾದಿಗಳ ವಿವರಗಳ ನಿದರ್ಶನ. ಚೆನ್ನಾಗಿದೆ.

    ಒಟ್ಟಾರೆ ಲೇಖನದ ಓಘದಲ್ಲಿ ಎಲ್ಲವೂ ಸೇರಿಕೊಂಡು ಹದವಾಗಿದೆ.

    ನಿಜಕ್ಕೂ ನಿರೂಪಣಾ ಶೈಲಿ ಒಂದು ಕಲೆಯೇ ಸರಿ...ಇದನ್ನು ಆಸ್ವಾದಿಸುವ ನಮ್ಮದು ಒಂದು ಭಾಗ್ಯವೇ ಸರಿ.

    ಮುಂದುವರೆಸಿ.

    ಆದರಪೂರ್ವಕವಾಗಿ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  7. ತಮ್ಮ ಬಾಲ್ಯದ ಸೊಗಸು ಉತ್ತಮವಾಗಿ ಮೂಡಿ ಬಂದಿದೆ.ತಮ್ಮ ಲೇಖನದಲ್ಲಿ ಅನೇಕ ವಿಷಯಗಳ ನ್ನು ಚಿತ್ರಗಳೊಂದಿಗೆ ಉತ್ತಮ ವಾಗಿ ವಿವರಣೆ ನೀಡಿರುತ್ತೀರಿ.ಮಕ್ಕಳಲ್ಲಿ ಮೊಬೈಲು ಬಳಕೆ ಹೆಚ್ಚಿಗೆ ಆಗಿರುವುದು ನಿಜ ವಿರುತ್ತದೆ.ಬಾಲ್ಯದಲ್ಲಿ ಮಕ್ಕಳು ಆಟಗಳು ಬಗ್ಗೆ ಗಮನಹರಿಸುವುದು ಹಾಗೂ ಮಕ್ಕಳಲ್ಲಿ ಮೊಬೈಲು ಬಳಕೆ ಕಡಿಮೆ ಮಾಡುವುದು ಉತ್ತಮ ಸಂದೇಶ.ಮತ್ತೊಮ್ಮೆ ತಮಗೆ ಧನ್ಯವಾದಗಳು.ದೇವೇಂದ್ರಪ್ಪ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ