ಯಾಕೋ ಕಾಣೆ... ಒಂದು ಆತ್ಮಾವಲೋಕನ
ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು
ಜೀವದಾಣೆಯಂತೆ ತಾನೇ ನುಡಿಯುತಿರುವುದು....
ದ.ರಾ. ಬೇಂದ್ರೆ ಯವರ ಈ ಕವನದ ಸಾಲುಗಳು ನನ್ನ ಮನಸ್ಸಿನಲ್ಲಾದ ತುಮುಲದ ಪ್ರತೀಕ. ಈ ತುಮುಲವನ್ನು ಅಕ್ಷರ ರೂಪದಲ್ಲಿ ಇಳಿಸಲು ಸರಿಯಾದ ಮಾರ್ಗವೇ ಕಾಣಲಿಲ್ಲ.... ಇನ್ನೂ ಸ್ಪಷ್ಟತೆ ಬಂದಿಲ್ಲ.... ಹಾಗಂತ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ... ಹಾಗಾಗಿ ಈ ಪ್ರಯತ್ನ ಜಾರಿಯಲ್ಲಿದೆ.
ಮನಸ್ಸಿನಲ್ಲಿ ಏನೋ ಗೊಂದಲ... ಯೋಚನೆಗಳು ಎಲ್ಲ ಕಲಸು ಮೇಲೋಗರ. ಇದ್ದಕ್ಕಿದ್ದಂತೆ ಮರೆಗುಳಿತನ, ಅಸಮಾಧಾನ, ಕೆಲಸಲ ಕೋಪ.. ಶಕ್ತಿ ಕುಂದಿತೇನೋ ಅನ್ನುವ ಭಾವ, ಜಡತ್ವ, ಸೋಮಾರಿತನ, ಕೆಲಸದಲ್ಲಿ ಅಚ್ಚುಕಟ್ಟಿನ ಕೊರತೆ, ಉತ್ಸಾಹದ ಕೊರತೆ... ಏನು ಮಾಡಲೂ ತೋಚದು... ಓದಲು ಕುಳಿತಾಗ ಏಕಾಗ್ರತೆಯ ಕೊರತೆ... ಅಬ್ಬಬ್ಬಾ ಎಷ್ಟೊಂದು ನ್ಯೂನತೆಗಳು... ಯಾಕೋ ಕಾಣೆ ನನ್ನ ಸೋದರ ಮಾವ ರಾಮಣ್ಣಯ್ಯನ ನೆನಪು ಹಾಗೂ ಚಿತ್ರಣ ನನ್ನ ಕಣ್ಣ ಮುಂದೆ....
ಇವೆಲ್ಲವನ್ನೂ ಗುರುತಿಸಿಕೊಳ್ಳಲು ಸಾಧ್ಯವಾದದ್ದು ನನ್ನಲ್ಲಿದ್ದ ಆಪ್ತ ಸಮಾಲೋಚಕ. ಇದು ಆಪ್ತ ಸಮಾಲೋಚಕನಾಗಿ ನನಗೆ ಸಿಕ್ಕ ಬಳುವಳಿ...
ಹಾಗಂತ ಏನೂ ಕೆಲಸವನ್ನೇ ಮಾಡಿಲ್ಲವಾ ಎಂದು ಯೋಚಿಸಿದಾಗ ನಾನು ಒಪ್ಪಿಕೊಂಡ ಕೆಲಸಗಳು ಎಲ್ಲಾ ನಡೆದಿವೆ... ವಿಶ್ಲೇಷಿಸಿದಾಗ ಅದಕ್ಕೆ ಬೇಕಾದಷ್ಟು ತಯಾರಿ.... ಒಳಗೊಳ್ಳುವಿಕೆ ಕಡಿಮೆ... ಹೇಗೋ ಸಂತೆಯ ಸಮಯಕ್ಕೆ 3 ಮೊಳ ನೇಯ್ದಂತೆ ಸರಿದೂಗಿಸಿದ್ದೇನೆ. ಈ ಎಲ್ಲ ನ್ಯೂನ್ಯತೆಗೆ ಕಾರಣಗಳೇನು ಎಂದು ಮೂಲವನ್ನು ಹುಡುಕುವುದು ಆಪ್ತ ಸಮಾಲೋಚಕನ ಕರ್ತವ್ಯ.. ಹಾಗಾಗಿ ನನ್ನನ್ನು ನಾನೇ ವಿಶ್ಲೇಷಣೆಗೆ ಒಳಪಡಿಸಿಕೊಂಡೆ... ಅದರ ವಿವರ...
ಮನಸ್ಸಿನ ಮೇಲೆ ಕೆಲಸದ ಒತ್ತಡ ಉಂಟೆ? ಅದನ್ನು ಅರಗಿಸಕೊಳ್ಳಲಾಗದಷ್ಟು ಮೆದುಳಿಗೆ ಕೆಲಸವೇ?
ಸಂಗೀತದ ಅಭ್ಯಾಸ... ಈತನಕ ಕಲಿತಿದ್ದನ್ನು ಮನನ ಮಾಡುವುದೇ ಆಗಿದೆ.... ಕಲಿಕೆಯ ಹೊಸ ಪ್ರಯತ್ನಗಳಿಗೆ ಉತ್ಸಾಹ ಬರುತ್ತಿಲ್ಲ.
Technical Consultant ಆಗಿ ನನ್ನ ವೃತ್ತಿಯ ವಿಚಾರ ಗಮನಿಸಿದಾಗ ಅಲ್ಲಿ ಎಲ್ಲವೂ ಸರಿ ಇದೆ.... ನಾನು ಹೋಗುವ ಫ್ಯಾಕ್ಟರಿಯ ಜನಗಳ ಪ್ರೀತಿ ಗೌರವದ ಪರಿ ಹೇಳತೀರದು... ಅದರಲ್ಲೂ ನಾನು 75 ವರ್ಷ ದಾಟಿದವನೆಂದು... ವಿಶೇಷ ಗೌರವ ಹಾಗೂ ಕೆಲ ಸವಲತ್ತುಗಳು...( ಯಾರಿಗೂ ಇಲ್ಲದ್ದು)... ನಾನು ಸಹ ಆ ಕೆಲಸವನ್ನು ಸಂತೋಷದಿಂದ ಮಾಡುತ್ತಿದ್ದೇನೆ....
ಅಶಕ್ತ ಪೋಷಕ ಸಭಾದ ಕಾರ್ಯಕ್ರಮಗಳು ಎಲ್ಲವೂ ನಡೆಯುತ್ತಿದ್ದರೂ... ಈಗೀಗ ನಮ್ಮ ತಂಡದ ಸದಸ್ಯರ ಅನುಪಸ್ಥಿತಿ... ಆ ಜಾಗಕ್ಕೆ ತಕ್ಷಣದಲ್ಲಿ ಬೇರೆಯವರನ್ನು ಹೊಂದಿಸಲಾಗದ ಪರಿಸ್ಥಿತಿ... ಇದು ನನ್ನ ಯೋಜನೆಯಂತೆ ನಡೆಯುತ್ತಿಲ್ಲ ಎಂಬ ಒಂದು ಸಣ್ಣ ಕೊರಗು ಇದೆ... ಅದಕ್ಕೆ ಪರಿಹಾರವನ್ನು ಯೋಚಿಸಿದ್ದೇನೆ... ಕಾರ್ಯಗತ ಮಾಡಲಾಗಿಲ್ಲ.
ಆಪ್ತ ಸಮಾಲೋಚನೆ, ಅದಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು, ಎಲ್ಲವೂ ಎಂದಿನಂತೆ ಸಾಗಿದೆ.... ಸ್ವಲ್ಪ ಕಡಿಮೆಯಾಗಿರಬಹುದಾ? ಹೌದು.. ಅದು ಬೇಸಿಗೆಯಲ್ಲಿ ಕಡಿಮೆ.. ಯಾವಾಗಿನಂತೆ
ಮಕ್ಕಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳೂ ನಡೆಯುತ್ತಿವೆ.
ಇನ್ನು ಮನೆಯ ವಾತಾವರಣ.... ಸ್ವಭಾವತಃ ಮನೆಗೆ ಅಂಟಿಕೊಂಡಿರುವವನು ನಾನು.... ಮೇಲ್ನೋಟಕ್ಕೆ ಎಲ್ಲವೂ ಯಾವಾಗಿನಂತೆ ಅನ್ನಿಸಿದರೂ... ಒಳಗೊಳಗೆ ಒಂದಷ್ಟು ತಲ್ಲಣಗಳಿವೆ.... ಅದರಲ್ಲೂ ಹೋದ ನವಂಬರ್ ನಿಂದ ಅದು ಸ್ವಲ್ಪ ಜಾಸ್ತಿಯೇ.... ನನ್ನ ಮನೆಯಾಕೆಯ ಆರೋಗ್ಯ ತಪ್ಪಿ... ಆಸ್ಪತ್ರೆಗೆ ಸೇರಿ ಅಲ್ಲಿಂದ ಹೊರಬರುವ ತನಕ ಪಟ್ಟ ಪಾಡು... ಅನುಭವಿಸಿದ ದ್ವಂದ್ವ ಸನ್ನಿವೇಶಗಳು, ಉತ್ತರವೇ ಸಿಗದ ಪ್ರಶ್ನೆಗಳು ... ನನ್ನನ್ನು ಹಣ್ಣು ಮಾಡಿವೆ... ನಿರ್ಲಕ್ಷ್ಯ ತೋರಲಾಗದು... ಲಕ್ಷ್ಯ ಕೊಡಲಾಗದು... ಈ ಎರಡರ ಮಧ್ಯೆ ತೂಗಾಟ ಪ್ರಾಯಶಃ ನನ್ನ ಕಸಿವಿಸಿಗೆ ಕಾರಣವಿರಬಹುದು.
ಊಟ.... ? ಅದು ಅಂದಿನ ಪ್ರಾಪ್ತಿ ಎಂದು ನಂಬಿ ಬೆಳೆದವನು ನಾನು... ಇದು ನಮ್ಮಪ್ಪ ಅಮ್ಮನ ಕೊಡುಗೆ.... ಇರುವುದರಲ್ಲಿ ಹಸನು ಮಾಡಿಕೊಂಡು ತಿನ್ನುವ ಮನೋಭಾವ....ಹ್ಞಾ... ಇಲ್ಲೊಂದು ವ್ಯತ್ಯಾಸ ಕಂಡಿದ್ದೇನೆ.... ಉಪ್ಪು ಕಡಿಮೆಯಾದರೆ ನನಗೆ ಒಪ್ಪಿಗೆಯಾಗಲ್ಲ... ಹಾಗಾಗಿ ಉಪ್ಪು ಊಟದ ಸಮಯಕ್ಕೆ ಬೇಕೇ ಬೇಕು... ಎಷ್ಟರಮಟ್ಟಿಗೆ ಎಂದರೆ... ಈ ವಿಚಾರಕ್ಕಾಗಿ ಹೆಂಡತಿಯಿಂದ "ಉಪ್ಪಿಂದೆ ಒಂದು ಕಂತೆಪುರಾಣ ನಿಮ್ಮದು" ಎಂದು ಹೇಳಿಸಿಕೊಂಡ ಹೆಗ್ಗಳಿಕೆ(?) ನನ್ನದು. ಅದು ಬಳಸುವುದು ಕಡಿಮೆಯಾಗಿದೆ.... ಊಟ ಮಾಡುವಾಗ ರುಚಿಯಾಗಿ ಏನಾದರೂ ಬೇಕು ಎನ್ನುವ ಅನಿಸಿಕೆಯೂ ಬಂದಿದೆ... ಊಟವೇನು ಕಡಿಮೆಯಾಗಿಲ್ಲ...“ರೋಗ ರೋಗದಂಗೆ... ಮುದ್ದೆ ಯಾವಾಗಿ ನಂಗೆ” ಎನ್ನುವ ಮಾತು ಸತ್ಯ.
ನಿದ್ದೆ....? ನನ್ನ ಬಹು ಇಷ್ಟದ ಕ್ರಿಯೆ... ವಿದ್ಯಾರ್ಥಿ ದೆಸೆಯಲ್ಲಿ... ನಿದ್ದೆಗಾಗಿ ಸಾಕಷ್ಟು ಬೈಸಿಕೊಂಡಿದ್ದೇನೆ... ನನ್ನ ಹತ್ತಿರದವರು... ಕಾರ್ಯಕ್ರಮದ ಮಧ್ಯೆ ನನ್ನನ್ನು ಗಮನಿಸಿ... "ತೂಕಡಿಸಿದ್ದು ನೋಡಿದೆ".. "ಆಯ್ತಾ ನಿದ್ದೆ..." ಎಂದು ಕಾಲೆಳೆಯುವವರಿದ್ದಾರೆ... ಫೋಟೋ ತೆಗೆದು ತೋರಿಸಿದ್ದೂ ಉಂಟು. ರಾತ್ರಿ ಎಂಟರ ನಂತರ ನಮ್ಮ ಮನೆಗೆ ಬರಬೇಕಾದರೆ ಕೇಳುವ ಪ್ರಶ್ನೆ... ಎದ್ದಿದ್ದೀರಾ ಎಂದು... ಅಷ್ಟು ನಿದ್ದೆ ಪ್ರಿಯ ನಾನು.... ಸಾಮಾನ್ಯವಾಗಿ ಎಲ್ಲರಿಗೂ ಆಗುವಂತೆ ನನಗೂ ನಿದ್ದೆಯ ಒಂದು ಹಂತದಲ್ಲಿ ... ಮನಸ್ಸಿನಲ್ಲಿ ಇದ್ದ ಘಾಢವಾದ ಭಾವ/ ವಿಷಯ ರಿಂಗಣಿಸುವುದುಂಟು..... ಈಗ? ಒಂದು ವಿಷಯವಲ್ಲ... ಹಾಡು, ಅದರ ಸ್ವರಗಳು, ಮಧ್ಯೆ ಮಧ್ಯೆ ಅಂಕಿಗಳು.. ಅದನ್ನು ಜೋಡಿಸುವ ಪರಿ.. ಜೊತೆಗೆ ಬೇರೆಯಾವುದೂ ಇರಬಹುದು.... ಕಲಸು ಮೆಲೋಗರ.. ಯಾಕಿದು... ಅಂಕಿಗಳು... ಹೌದು ಇದು ಈಗೀಗ ನಾನು ಫೋನ್ ನಲ್ಲಿ ಆಡುತ್ತಿರುವ solitaire cards ಆಟದ ಪ್ರಭಾವ. ಏನೂ ಮಾಡಲು ತೋಚದೆ ಇದ್ದಾಗ ಶುರುವಾದ ಈ ಆಟ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ.. ಸಮಯ ಸಿಕ್ಕಾಗೆಲ್ಲ... ಅಥವಾ ಸಮಯ ಮಾಡಿಕೊಂಡು ಎನ್ನಲೇ... ಅನ್ನುವಷ್ಟು. ರಾತ್ರಿ 10:30 ಗಂಟೆಯ ತನಕ ಆಡಿದ್ದೂ ಇದೆ. ಅಂದರೆ ಇದು ಚಟವಾಗಿ ಪರಿವರ್ತಿತವಾಗುತ್ತಿದೆ. ಅದರ ಪ್ರಭಾವ ನಿದ್ದೆಯ ಮೇಲೆ.
ಘಟನೆಗಳು...? ಹೆಂಡತಿ ಆರೋಗ್ಯ...ಮುಂದುವರಿದ ಅದೇ ನೋವುಗಳು... ಜೊತೆಗೆ ... ಬೇಕು... ಬೇಡ ಎನ್ನುವ ಮತ್ತದೇ ದ್ವಂದಕ್ಕೆ ಸಿಲುಕಿ.. ಕಡೆಗೆ ಮನೆಯಿಂದ ಹೊರಟು, ಗಾಡಿಯನ್ನು ಹತ್ತುವಾಗ ಹೆಂಡತಿ ಬಿದ್ದು ಕೈ ಮುರಿದುಕೊಂಡಿದ್ದು (ಬಿದ್ದದ್ದು..ಇದೇ ಮೊದಲಲ್ಲವಾದರೂ) ಮನಸ್ಸಿನ ಮೇಲೆ ತೀವ್ರ ಪರಿಣಾಮ... ವಿಶ್ವಾಸವೇ ಕಮರಿದಂತೆ. ಈಗಲೂ ನಾವಿಬ್ಬರೂ ಜೊತೆಯಾಗಿ ಸ್ಕೂಟರ್ ನಲ್ಲಿ ಹೋಗಲು ಮನಸ್ಸಿಲ್ಲ... ಒತ್ತಾಯಕ್ಕೆ ಒಂದೆರಡು ಸಲ ಹೋದಾಗ.. ಮನಸ್ಸಿನಲ್ಲಿ ಏನೋ ಗೊಂದಲ... ಅಸಹನೆ.
ಕಾರ್ ಮಾರಿದ್ದು.... ಕಾರ್ ಮಾರುವ ನಿರ್ಧಾರ (ನನ್ನ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ) ಯಾಕೆ ತೆಗೆದುಕೊಂಡೆ ಎನ್ನುವ ವಿಚಾರವನ್ನು ವಿಮರ್ಶೆ ಮಾಡಿದಾಗ... ಅದೊಂದು ತರ್ಕಬದ್ಧವಲ್ಲದ ನಿರ್ಧಾರ ಎಂದು ಅನಿಸುತ್ತದೆ... ಆದರೆ ಅದಕ್ಕೆ ಕೊಟ್ಟ ಸಮಜಾಯಿಷಿಗಳು ಮಾತ್ರ ಸತ್ಯ. ಬೆಂಗಳೂರಿನಲ್ಲಿ ಕಾರ್ ಓಡಿಸುವುದು ಕಷ್ಟ... ಗಾಬರಿಯಾಗುತ್ತೆ.... ಈ ವಯಸ್ಸಿನಲ್ಲಿ ರಿಸ್ಕ್ ತಗೋಬೇಕಾ? .. ಹೀಗೆ. ಇದಕ್ಕೆ ಇನ್ನೊಂದು ಕಾರಣ ನಾನು ಬಿಡದಿಗೆ ಆರಾಮವಾಗಿ ... ಕಾರನ್ನು ಓಡಿಸದೆ ಹೋಗಿ ಬರಲು ಮಾಡಿಕೊಟ್ಟಿರುವ ಅನುಕೂಲ.
ಈಚಿನ ಮಾತುಗಳ ಸಮಯದಲ್ಲಿ.... ಮತ್ತೆ ಮತ್ತೆ ಆಡಿದ.." ಯಾವುದೇ ಕಾರ್ಯಕ್ರಮಕ್ಕೆ ಹೋಗುವ / ಕೆಲಸ ಮಾಡುವ ಮೊದಲು... ಹೋಗಲೇಬೇಕಾ? ಹೋಗದಿದ್ದರೆ ಏನಾಗುತ್ತೆ? ನಾನು ಇಲ್ಲದ್ದು.. ಎದ್ದು ಕಾಣುವಂತಹ ಪರಿಸ್ಥಿತಿ ಇದೆಯಾ" ... ಎಂಬಂತಹ ಮಾತುಗಳು ಎಲ್ಲಕ್ಕೂ ಅನ್ವಯಿಸುವುದಕ್ಕೆ ಶುರು ಮಾಡಿದೆನಾ?
ಕೋಪಗಳು... ಈಗೀಗ ಸಣ್ಣಪುಟ್ಟ ವಿಷಯಕ್ಕೂ ತಾಳ್ಮೆ ಕಡಿಮೆ... ಪ್ರತಿಕ್ರಿಯೆಗಳು ತುಂಬಾ ಕಠಿಣ. ಇದರ ಪರಾಕಾಷ್ಟೆ... ನಾನು ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಎಡಗಡೆಯಿಂದ ಹಾರನ್ ಮಾಡಿಕೊಂಡು ವೇಗವಾಗಿ ಓವರ್ ಟೇಕ್ ಮಾಡಿದ ವ್ಯಕ್ತಿಯ ಮೇಲೆ ಕೋಪ ಬಂದು, ನನ್ನಷ್ಟಕ್ಕೆ ನಾನು ಜೋರಾಗಿ ಬೈದುಕೊಂಡ ಕೆಟ್ಟ ಮಾತು. ನನಗೆ ನನ್ನ ಮೇಲೆ ಬೇಜಾರಾಗುವಷ್ಟು ಕೆಳಮಟ್ಟಕ್ಕೆ ಇಳಿದೆ ಎಂಬ ಭಾವ.
ಹರಟೆ... ಇದು ನನಗೆ ಬಹು ಪ್ರಿಯವಾದ ವಿಷಯ. ಯಾವುದೋ ಒಂದು ವಿಷಯ / ಸಂದರ್ಭ ನೆನೆಸಿಕೊಂಡು ಹರಟುವುದು... ನಗುತ್ತಾ ಕಾಲ ಕಳೆಯುವುದು ನನ್ನ ಜೀವನಶೈಲಿ.... ಇದೂ ಕಡಿಮೆಯಾಗಿದೆ... ಬಹಳಷ್ಟು ಸಲ ಮೌನಕ್ಕೆ ಜಾರುತ್ತೇನೆ. ನಗುವೂ ಮಾಸಿದೆ.
ಕೊರತೆಗಳು / ಅತೃಪ್ತಿ... ಜೀವನದ ವಿವಿಧ ಘಟ್ಟಗಳಲ್ಲಿ ಅತೃಪ್ತಿ ಇದ್ದದ್ದು ಉಂಟು... ನನ್ನಂತ ಸಾಮಾನ್ಯ ಮನುಷ್ಯರಿಗೆ ಅದು ಸಹಜವೂ ಸಹ... ಆದರೆ ಅವುಗಳಿಗೆ ನನ್ನದೇ ಆದ ರೀತಿಯಲ್ಲಿ ಸಮಾಧಾನ ಕಂಡುಕೊಂಡಿದ್ದೂ ಅಷ್ಟೇ ಸತ್ಯ... ಯಾವುದಾದರೂ ಅತೃಪ್ತಿಯ ಪಳೆಯುಳಿಕೆಗಳು ಮನಸ್ಸಿನಲ್ಲಿ ಉಳಿದುಕೊಂಡಿದೆಯಾ? ... ಇದಕ್ಕೆ ಸಮಂಜಸ ಉತ್ತರ ಗುರುತಿಸಲಾಗಲಿಲ್ಲ... ಮುಗಿದ ಅಧ್ಯಾಯಗಳನ್ನು ಮತ್ತಷ್ಟು ಕೆದಕಿ ಗಾಯ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎನಿಸಿತು.
ಲೇಖನಗಳನ್ನು ಬರೆದು BLOG ನಲ್ಲಿ ಪ್ರಕಟಿಸುವ ಹವ್ಯಾಸಕ್ಕೂ ಉತ್ಸಾಹ ಇಲ್ಲ... ನಾಲ್ಕು ವಾರಗಳಾಗಿವೆ. ಕಾರಣ? ಇಲ್ಲೊಂದು ಅತೃಪ್ತಿಯ ಎಳೆ ಕಂಡಿತು.. ಈಗೀಗ ಓದುಗರ ಸಂಖ್ಯೆ ಸ್ವಲ್ಪ ಇಳಿಮುಖ ಕಂಡಿದೆ.. ಈಗ ನೆನಪಿಗೆ ಬಂದದ್ದೇ ಡಿವಿಜಿಯವರ ಕಗ್ಗದ ಸಾಲುಗಳು
" ಮನ್ನಣೆಯ ದಾಹವದು ಎಲ್ಲದಕು ತೀಕ್ಷ್ಣತಮ , ಕೊಲ್ಲುವುದದಾತ್ಮವನೇ.. ಮಂಕುತಿಮ್ಮ"
ಮತ್ತೊಮ್ಮೆ ಎಲ್ಲವನ್ನು ಆಪ್ತ ಸಮಾಲೋಚಕನ ದೃಷ್ಟಿಯಿಂದ ಕೂಲಂಕುಶವಾಗಿ ಯೋಚಿಸಿದಾಗ.. ಕಂಡಿದ್ದು ಕೋಲ್ ಮಿಂಚು...
* ನನಗರಿವಿಲ್ಲದೆಯೇ, ನನ್ನ ಕೆಲ ಚಿಂತನೆಗಳು / ನಡೆಗಳು... ನಾನು ಮುದುಕನಾದೆ... ಕೈಲಾಗದವನು ಎಂಬ ಭಾವವನ್ನು ಬೆಳೆಸಿದೆ.
* ಅರಿವಿಗೆ ತಿಳಿಯದ ಅತೃಪ್ತಿಯ ಜೊತೆಗೆ ಕಡಿಮೆಯಾದ ಓದುಗರ ಸಂಖ್ಯೆಯ ವಿಷಯವೂ ಸೇರಿದೆ.
* ಕಷ್ಟಗಳನ್ನು ಎದುರಿಸಬೇಕಾಗಿ ಬಂದ ಸಮಯದಲ್ಲಿ, ಆತ್ಮವಿಶ್ವಾಸ ಕುಸಿದ ಕಾರಣದಿಂದಾಗಿ... ಅಸಹಾಯಕತೆಯ ಭಾವ ಮುನ್ನುಗ್ಗಿದೆ... ಅದು ಅಸಹನೆಯಾಗಿ... ಕೋಪಕ್ಕೆ ಕಾರಣವಾಗಿದೆ.
ಏನು ಮಾಡಲೂ ತೋಚದಿದ್ದಾಗ... ಮೊಬೈಲ್ ನಲ್ಲಿ ಆಟ ಶುರುವಾಗಿ.. ಚಟವಾಗುವ ಕಡೆಗೆ ನಡೆದಿದೆ.
ಪರಿಹಾರ ಸೂಚಿಸಿ ಅದನ್ನು ಅಳವಡಿಸಿಕೊಳ್ಳಲು ಸಹಾಯ ಮಾಡದಿದ್ದರೆ ಆಪ್ತ ಸಮಾಲೋಚಕ ಹೇಗಾದೇನು....
ಮೊದಲನೆಯದು... ಬೆಳಿಗ್ಗೆ 6 ಕ್ಕೆ ವಾಕಿಂಗ್ ಮಾಡಲು ಶುರು ಮಾಡಿದ್ದು.
ಆಟವಾಡುತ್ತಿದ್ದ ಫೋನನ್ನು ಪಕ್ಕಕ್ಕೆ ಇಟ್ಟು.. ತಕ್ಷಣ ನಮ್ಮ ಮನೆಯ ಪುಸ್ತಕದ ಸಂಗ್ರಹಕ್ಕೆ ಕೈ ಇಟ್ಟು ಭೈರಪ್ಪನವರ " ನಾಯಿ ನೆರಳು" ಪುಸ್ತಕವನ್ನು ಹಿಡಿದದ್ದು. ಮೊದಮೊದಲು ಓದು ಮುಂದುವರಿಸಲು ಕಷ್ಟವಾದರೂ... ಸಂಜೆಯ ಹೊತ್ತಿಗೆ ಹಿಡಿತಕ್ಕೆ ಬಂತು.. ಓದಿನ ಓಟ ನನ್ನ ಯಾವಾಗಿನ ವೇಗ ಮುಟ್ಟಿತು. ಪೂರ್ಣ ಓದದೇ ಉಳಿದಿದ್ದ "ತರಂಗ" ಗಳನ್ನೂ ಮುಗಿಸಿದ್ದಾಯಿತು. ಈಗ ಓದು ಹಿಡಿತಕ್ಕೆ ಬಂದಿದೆ.
Blog ಬರೆಯಲು ಪ್ರಾರಂಭಿಸಿದ ಸಂದರ್ಭ ನೆನೆಸಿದಾಗ...... ನನ್ನ ಮೊದಲ ಲೇಖನವನ್ನು ಮತ್ತೊಮ್ಮೆ ಓದಿದೆ..." ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"... ಮೂಲ ಆಶಯದಿಂದ ದೂರ ಹೋಗಿ ಮನ್ನಣೆಗೆ ಮನಸೋತದ್ದು ಸೋಲಿನ ಹಾದಿ. ಇಷ್ಟು ದಿನ ಬರೆಯದಿದ್ದಾಗ.. ಬರೆದಿಲ್ಲವೆಂದು ಯಾರಾದರೂ ಕೇಳಿದರಾ?... " ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ ದಕ್ಕುವುದೇ ನಿನಗೆ ಜಸ ಮಂಕುತಿಮ್ಮ" ಕಗ್ಗದ ಈ ಸಾಲು ಎಷ್ಟು ಸಮಂಜಸ. ನಾ ಮಾಡುವ ಕೆಲಸಗಳು ನನ್ನ ಸಂತೋಷಕ್ಕಷ್ಟೇ ಸೀಮಿತವಾದರೆ... ಒಳ್ಳೆಯದಾದೀತು. ಬರವಣಿಗೆ ಮುಂದುವರಿಸಬೇಕು... ಪ್ರಯತ್ನ ಕುಂಟುತ್ತಾ ಮುಂದುವರಿದು ಈ ಘಟ್ಟಕ್ಕೆ ಬಂದಿದೆ. ( 1.6.2024 ರಂದು ಚಿಂತಾಮಣಿಯ ಗುರುಪ್ರಸನ್ನ ಅವರು ಕಳಿಸಿದ “ಸಿಹಿ ಕಹಿ ನೆನಪುಗಳ ಬ್ಲಾಗ್ ಹಾಕುತ್ತಿಲ್ಲ?🤔” ಎಂಬ ಮೆಸೇಜ್ ಮೊದಲನೆಯದು)
ಸನ್ನಿವೇಶಕ್ಕೆ ಪ್ರತಿಕ್ರಯಿಸುವ ಬದಲು ಬರೀ ಮೌನಕ್ಕೆ ಜಾರಿದರೆ, ಆ ಸಂದರ್ಭದಲ್ಲಿ ವಾತಾವರಣ ಕೆಡದಿದ್ದರೂ, ಅಸಹನೆ ಕೋಪ ಕಡಿಮೆಯಾಗುವುದಿಲ್ಲ.. ಆ ವಿಚಾರಗಳು ಮನದ ಮಂಥನದ ಭಾಗವಾಗಿಯೇ ಉಳಿಯುತ್ತವೆ... ವಸ್ತು ಸ್ಥಿತಿ ಬದಲಾಗುವುದಿಲ್ಲ... ಆಕಾಶವು ಕಳಚಿ ಬೀಳುವುದಿಲ್ಲ... ಹಾಗಾಗಿ... ವಿಚಾರವನ್ನೇ ಮತ್ತೆ ಮತ್ತೆ ಯೋಚಿಸದೆ ಪಕ್ಕಕ್ಕೆ ತಳ್ಳುವ (ದಿವ್ಯ ನಿರ್ಲಕ್ಷ್ಯ) ಮನೋಭಾವ ಬೆಳೆಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಡಬೇಕು.
ಆಟ ಆಡುವ ಫೋನ್ ಪಕ್ಕಕ್ಕೆ ಇಟ್ಟರೂ... ದಿನನಿತ್ಯ ಉಪಯೋಗಿಸುವ ಫೋನ್ ಕೈಯಲ್ಲೇ ಇರುತ್ತದೆ.... ಅದರಲ್ಲಿ ಮುಳುಗಿ ಹೋಗುವ ಸಂದರ್ಭಗಳೂ ಬರುತ್ತಿವೆ... ಅರಿವಿಗೆ ಬಂದ ತಕ್ಷಣ ಎಚ್ಚೆತ್ತು ಅದನ್ನು ಪಕ್ಕಕ್ಕಿಡುವ ಪ್ರಯತ್ನ. ಸೋಮವಾರದ NET ಉಪವಾಸವೂ ನಡೆಯುತ್ತಿದೆ.
ಯೋಚಿಸಿದ ಎಲ್ಲವನ್ನು ಕಾರ್ಯರೂಪಕ್ಕೆ ಇಳಿಸುವುದು ಹೇಳಿದಷ್ಟು ಸುಲಭವಲ್ಲ, ಆದರೆ ಸಾಧ್ಯ ಎಂಬ ಮಾತು ಸತ್ಯ. ಗುರಿಯೆಡೆಗೆ ಸಾಗಲೇಬೇಕಲ್ಲ.... ಸಣ್ಣ ಸಣ್ಣದಾದರೂ ಪ್ರಯತ್ನಗಳು ಇರಲೇಬೇಕಲ್ಲ...
ಈ ಚಿತ್ರ ನನಗೆ ಸ್ಪೂರ್ತಿಯನ್ನು ಕೊಟ್ಟಿರುವುದು ಸಾಕಷ್ಟು ಹಿಂದಿನಿಂದ... ಸುಮಾರು 50 ವರ್ಷಗಳಿಂದ ನನ್ನ ಬಳಿ ಜೋಪಾನವಾಗಿದೆ.
ಮನಸ್ಸು ಹತೋಟಿಗೆ ಬರುತ್ತಿದೆ... ಮನಸ್ಸಿನಲ್ಲಿ ನಡೆಯುವ ಮಂಥನವು ಆಗಾಗ ಬರುತ್ತಿದ್ದರೂ... ಅದನ್ನು ಮೆಟ್ಟಿ ನಿಲ್ಲುವ ಪ್ರಯತ್ನವೂ ನಡೆಯುತ್ತಿದೆ. ಬದಲಾವಣೆ ಜಗದ ನಿಯಮ... ರಾತ್ರಿಯಾದ ನಂತರ ಬೆಳಗು...
ಎಲ್ಲರ ಜೀವನದಲ್ಲೂ ಬೆಳಗು.... ರಾತ್ರಿಯಲ್ಲಿ ಬೆಳಕು ಇರಲೆಂದು ಆಶಿಸುತ್ತಾ.... ನಮಸ್ಕಾರ.🙏
D C Ranganatha Rao
9741128413
_____________________________
😂 ಸುಮಾರು ಹದಿನೈದು ದಿನಗಳ ಸತತ ಪ್ರಯತ್ನದ ಫಲ... ಈ ಲೇಖನ... ಗಜ ಗರ್ಭದ ನಂತರದ ಪ್ರಸವ ಎನ್ನಲೇ?
ಎಲ್ಲರಿಗೂ ಇದೇ ಸಮಸ್ಯೆ ನಾ?
ReplyDeleteನಿಮಗೆ 75 ರಲ್ಲಿ ಬಂದ ಈ ಮನಸ್ಥಿತಿ ನನಗೆ 58-59 ರಲ್ಲಿ ಕಾಡುತ್ತಿದೆ...ಬಹುಶಃ ಯಾವುದೂ ನಮ್ಮ ಇಚ್ಛೆ ಯಂತೆ ನಡೆಯುತ್ತಿಲ್ಲ ಅನಿಸುತ್ತದೆ (ಚುನಾವಣಾ ಫಲಿತಾಂಶ ಕೂಡ... ರಾಮನಿಗಿಂತ ಅಲ್ಲಾನೇ ಬಲಶಾಲಿ ಅನಿಸುತ್ತದೆ)... ಸಹಜವಾಗಿ ಮುಂದಿನ ದಿನಗಳ ಬಗ್ಗೆ ಹೆಚ್ಚಾಗಿ ಯೋಚನೆ ಈ ಭಾವನೆಗಳನ್ನು ಬಿಂಬಿಸುತ್ತದೆ ...ಇದನ್ನು ಕೂಡ ಅಚ್ಚುಕಟ್ಟಾಗಿ ಬರೆದದ್ದು ..ನಿಮ್ಮಿಂದ ಇನ್ನೂ ಹೆಚ್ಚಿನ ಲೇಖನವನ್ನು ನಿರೀಕ್ಷೆ ಮಾಡುವಂತೆ ಮಾಡಿದೆ...ಅಯ್ಯೋ...12 ಗಂಟೆ ನಾನು ಮೊಬೈಲ್ ಆಫ್ ಮಾಡಿ ನಿದ್ದೆ ಮಾಡ್ತೀನಿ....
ReplyDeleteಬಾಬು
ನಂದೂ ಅದೇಯ. ಮಾಗಿದಂತೆಲ್ಲ ಅಂತರ್ಮುಖಿಯಾಗುತ್ತೇವೆ .ಸ್ವಯಂವಿಶ್ಲೇಷಣೆ ಕೆಲವೊಮ್ಮೆ ಚಿಂತೆಗೆ ದೂಡುತ್ತದೆ. ಏನೇ ಆಗಲಿ ನೀನು ವಿಹಿತವಾದದ್ದನ್ನ ಮಾಡುವ ಅಭ್ಯಾಸ ಉಳ್ಳವನು
ReplyDeleteಶುಭಂ ಬ್ರೂಯಾತ್...
ನನಗೂ ಸಹಾ ೫೮ ರಲ್ಲೇ ಈ ಅನುಭವ ಆಗುತ್ತಿದೆ. ಯಾವುದೂ ನನ್ನ ಇಚ್ಛೆಯಂತೆ ನಡೆಯುತ್ತಿಲ್ಲ. ಏನೋ ನೋವು, ಹತಾಶೆ, ಜಿಗುಪ್ಸೆ. ಏಕೋ ಕಾಣೆ. ಮನೆಯಲ್ಲಿ ಬೆಲೆ,ಗೌರವ ಕಡಿಮೆಯಾಗುತ್ತಿದೆಯೇನೋ ಎಂದೆನುಸುತ್ತಿದೆ. ನನ್ನ ಸಮಸ್ಯೆಗೆ ಯಾರೂ ಸ್ಸಂದಿಸುತ್ತ್ತಿಲ್ಲ್ಲ. ಯಾವುದೂ ಸ್ಪಷ್ಟತೆಯಿಲ್ಲ.ಗೋಜಲು ಗೋಜಲು.
ReplyDeleteಬಹುಶ: ಇದು ಬಹಳಷ್ಟು ಜನರಿಗೆ ಇರಬಹುದು. ಹೇಳಿಕೊಳ್ಳುವುದಿಲ್ಲ ಅಥವಾ ಅದಕ್ಕೆ ಸೂಕ್ತ ವೇದಿಕೆ, ಸಂದರ್ಭ ಸಿಗುತ್ತಿಲ್ಲವೇನೋ.
ನಾವು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆಯಲು ಇದು ಸಕಾಲ. ಅರವತ್ತರ ನಂತರ ಎಲ್ಲರೂ ಒಂದೇ ತಕ್ಕಡಿಯಲ್ಲೇ...ಚೆಸ್ ಆಟದ ನಂತರ ರಾಜ,ರಾಣಿ,ಕುದುರೆ...ಎಲ್ಲವೂ ಒಂದೇ ಡಬ್ಬಕ್ಕೆ ಸೇರುತ್ತವೆ! ಅಂಬಿ ನಿನಗೆ ವಯಸ್ಸಾಯ್ತೋ ಎಂಬ ಸಿನಿಮಾ ಮನದಲ್ಲಿ ಬಂದು ಹೋಯಿತು
ದೈನಂದಿನ ಬದುಕು, ಆರೋಗ್ಯ, ನೆಮ್ಮದಿಯ ಜೀವನದತ್ತ ಗಮನಹರಿಸುವುದು ಸೂಕ್ತ. ಬೇರೆಲ್ಲ್ಲ ನಮ್ಮ ಕೈನಲ್ಲಿ ಇಲ್ಲ...ಅದರ ಬಗ್ಗೆ ಹೆಚ್ಚಿನ ಚಿಂತೆ ಮಾಡದಿರುವುದೇ ಕ್ಷೇಮ.
ಇಷ್ನನ್ನು ಬಿಟ್ಟು ಬೇರೆ ಏನೂ ಹೇಳಲು ತೋಚುತ್ತಿಲ್ಲ...ಕಾರಣ ನಾವು ಒಂದೇ ದೋಣಿಯಲ್ಲಿರುವ ಪಯಣಿಗರು.
ಬೇರೆ ದೋಣಿಯಲ್ಲಿದ್ದು ನಮ್ಮ ಮನಸ್ಥಿತಿ ಅರ್ಥ ಮಾಡಿಕೊಂಡಿರುವ ಯಾರಾದರೂ ಮಾರ್ಗದರ್ಶನ, ಸಲಹೆ, ಸೂಚನೆ ನೀಡುವುದಿದ್ದರೆ ನೀಡಲಿ. ಸ್ವೀಕರಿಸೋಣ.
ಒಳಿತಾಗಲಿ...ಶುಭವಾಗಲಿ.
ವಂದನೆಗಳೊಂದಿಗೆ,
ಗುರುಪ್ರಸನ್ನ,
ಚಿಂತಾಮಣಿ.
ನಮಸ್ಕಾರಗಳು
ReplyDeleteನಿಮ್ಮ ದೀರ್ಘ ಲೇಖನ ಓದಿ ಮೊಗದಲ್ಲಿ ನಸು ನಗೆ ಉಕ್ಕಿತು. ಯಾಕೆ ಅಂತ ಗೊತ್ತಿಲ್ಲ. ಎಷ್ಟೋ ಜನರ ಬದುಕಿಗೆ ಬೆಳಕಾದವರು. ನಿಮಗೂ ಕಾಡಿತೆ ಬದುಕಿನ ಬವಣೆ!! ನಾವು ಸಾಮಾನ್ಯ ಮನುಷ್ಯರು. ಬದುಕಿನಲ್ಲಿ
ಸಮಸ್ಯೆಗಳು ಸಹಜ. ಅದನ್ನು ಗ್ರಹಿಸಿ ಸ್ವಸಲಹೆಯ ಮೂಲಕ ಪರಿಹಾರ ಕಂಡು ಕೊಳ್ಳುವುದು ಆಪ್ತಸಮಾಲೋಚಕರಿಗೆ ಸಿದ್ಧ. ಅದರಂತೆ ನೀವು ನ್ಯೂನ್ಯತೆಯಿಂದ ಹೊರ ಬಂದಿರುವುದು ಸಂತೋಷದ ವಿಷಯ.
ನಾನು ಸಹ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಎದೆ ಗುಂದದೆ ದೃಢತೆಯಿಂದ ಎದುರಿಸುತ್ತೇನೆ.
ಇಂತಹ ಗಟ್ಟಿ ನಿರ್ಧಾರಗಳು ನಮ್ಮ ಜೀವನಕ್ಕೆ ದಾರಿದೀಪ. ಎಲ್ಲರೂ ತಾಳ್ಮೆಯಿಂದ ಸಹಿಷ್ಣುತೆಯಿಂದ ಬದುಕನ್ನು ಸುಂದರವಾಗಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ಅವಕಾಶಕ್ಕಾಗಿ ಧನ್ಯವಾದಗಳು🙏
ಎಸ್.ಜೆ. ರತ್ನಪ್ರಭಾ
ಬೆಂಗಳೂರು