ನಾವು ಸ್ವಾರ್ಥಿ ಆಗಬೇಕೇ?
ಸರ್ವೇ ಜನಾಃ ಸುಖಿನೋ ಭವಂತು//ಲೋಕಾ ಸಮಸ್ತಾಃ ಸುಖಿನೋಭವಂತು//
ಎನ್ನುವ ಮೂಲಭೂತ ಚಿಂತನೆ ಇರುವ ಧರ್ಮದ ಭಾಗವಾದ ನಮಗೆ... ಸ್ವಾರ್ಥಿ ಆಗಬೇಕೇ ಎನ್ನುವ ಪ್ರಶ್ನೆ ಅಸಮಂಜಸ ಎನಿಸಿತೇ?
ಮೊದಲಿಗೆ ಸ್ವಾರ್ಥ ಪದದ ಅರ್ಥ... ತಾನು, ತನ್ನದು ..ತನ್ನ ಬಗ್ಗೆ ಯೋಚಿಸುವುದು.... ಈ ಭಾವ ಇಲ್ಲದಿದ್ದರೆ... ಮನುಷ್ಯನ ಜೀವನಕ್ಕೆ ಗುರಿಯೇ ಇಲ್ಲದಂತಾಗುತ್ತದೆ... ಅಸ್ತಿತ್ವದ ಪ್ರಶ್ನೆ ಎಂದು ನನ್ನ ಅನಿಸಿಕೆ... ನಾನು ಸಂತೋಷದಿಂದಿದ್ದರೆ... ಅದನ್ನು ಬೇರೆಯವರಿಗೆ ಹಂಚಲು ಸಾಧ್ಯ...
ಇದರ ಇನ್ನೊಂದು ಮುಖ ನಿಸ್ವಾರ್ಥ....ತನ್ನದಲ್ಲದ... ಪರರ ಚಿಂತನೆ.
ಈ ಶ್ಲೋಕವನ್ನು ಗಮನಿಸಿ..
ಪರೋಪಕಾರಾಯ ಫಲಂತಿ ವೃಕ್ಷಃ
ಪರೋಪಕಾರಾಯ ವಹಂತಿ ನದ್ಯಃ
ಪರೋಪಕಾರಾಯ ದುಹಂತಿ ಗಾವಃ
ಪರೋಪಕಾರಾರ್ಥಮಿದಂ ಶರೀರಂ//
ಇದರ ಚಿಂತನೆ ಏನೋ ಸರಿ ಇದೆ... ಆದರೆ ಈಗಿನ ಕಾಲಮಾನದ ಮನುಷ್ಯನ ಜೀವನಶೈಲಿಗೆ ಹೊಂದಿಕೆಯಾಗುವುದಿಲ್ಲ.... ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಕಾಲಘಟ್ಟದಲ್ಲಿ ಹಣ್ಣು ಕೊಡುವ ಮರ / ನೆರಳು ಕೊಡುವ ಮರ ಯಾವುದೇ ಆಗಲಿ.. ತನ್ನ ಅಭಿವೃದ್ಧಿಗಾಗಿ ನಾಶ ಮಾಡುತ್ತಾನೆ.
ಹರಿಯುವ ನದಿಯ ನೀರನ್ನು.. ಕೊಳಕು ಮಾಡುತ್ತಾನೆ... ಹಾಲು ಕೊಡುವ ಹಸುವನ್ನು ಎಷ್ಟರಮಟ್ಟಿಗೆ ಶೋಷಣೆ ಮಾಡುತ್ತಾನೆಂದರೆ... ಅದರ ಕರುವಿಗೂ ಹಾಲು ಸಿಗದಷ್ಟು... ಇನ್ನು ಈ ಶರೀರ ಪರೋಪಕಾರಕ್ಕಾಗಿ ಎನ್ನುವುದು ಕನಸಿನ ಮಾತೇ ಸರಿ... ಅಂದರೆ ನಿಸ್ವಾರ್ಥ ಬುದ್ಧಿ ವೈಯಕ್ತಿಕ ಹರಣಕ್ಕೆ ಕಾರಣವಾಗುತ್ತದೆ ಎನ್ನಬಹುದೇ?
ಇಲ್ಲಿ ಹಾವಿನ ಒಂದು ಕಥೆ ನೆನಪಾಗುತ್ತದೆ.... ಮಕ್ಕಳನ್ನು ಕಚ್ಚುತ್ತಿದ್ದ ಹಾವಿಗೆ ಒಬ್ಬ ಸನ್ಯಾಸಿ ಕಚ್ಚ ಬೇಡವೆಂದು ಉಪದೇಶಿಸುತ್ತಾನೆ. ಹಾವು ಕಚ್ಚದೆ ಉಳಿಯುತ್ತದೆ... ಇದನ್ನು ಕಂಡ ಮಕ್ಕಳು ಹಾವಿಗೆ ಕಲ್ಲು ಹೊಡೆದು ನೋಯಿಸುತ್ತಿರುತ್ತಾರೆ.... ಸನ್ಯಾಸಿಗೆ ಹಾವು ತಾನು ಪಡುತ್ತಿರುವ ಹಿಂಸೆಯನ್ನು ಹೇಳುತ್ತದೆ... ಸನ್ಯಾಸಿಯ ಸಮಜಾಯಿಷಿ... ನಾನು ಕಚ್ಚ ಬೇಡವೆಂದು ಹೇಳಿದ್ದೆ... ಬುಸುಗುಟ್ಟ ಬೇಡವೆಂದು ಹೇಳಿರಲಿಲ್ಲವಲ್ಲ... ಬುಸುಗುಟ್ಟಿ, ಮಕ್ಕಳಿಗೆ ಭಯ ತೋರಿಸಿ ನಿನ್ನನ್ನು ರಕ್ಷಿಸಿಕೋ.... ತನ್ನ ರಕ್ಷಣೆಗೆ ಬೇಕಾದ ಶಕ್ತಿ/ ಯುಕ್ತಿಯನ್ನು ಪಡೆದುಕೊಳ್ಳಬೇಕಾದದ್ದು ಅಸ್ತಿತ್ವಕ್ಕೆ ಅವಶ್ಯಕ. ಇದನ್ನು ಸ್ವಾರ್ಥ ಎನ್ನಲಾಗದು.
ಸ್ವಾರ್ಥಿ ಎನ್ನುವ ಪದ ಸಾಮಾನ್ಯ ಜೀವನದ ಬಳಕೆಯಲ್ಲಿ.... ತನಗೆ ಅನುಕೂಲ / ಲಾಭ ಆಗಬೇಕಾದಾಗ.... ಆ ನಿಟ್ಟಿನಲ್ಲಿ ಬೇರೆಯವರಿಗೆ ತೊಂದರೆಯಾದರೂ ತನ್ನ ವೈಯಕ್ತಿಕ ಲಾಭಕ್ಕೆ ಪ್ರಾಮುಖ್ಯ ಕೊಡುವವರನ್ನು ಸ್ವಾರ್ಥಿ ಎನ್ನಬಹುದು. ಇದನ್ನು ನಾನು ವಿಶೇಷಣದೊಂದಿಗೆ... ಪರಮ ಸ್ವಾರ್ಥಿ ಎನ್ನುತ್ತೇನೆ. “ಸ್ವಾರ್ಥದ ಗೊದ ಮೊಟ್ಟೆ” ಎನ್ನುವ ಪದ ಪ್ರಯೋಗವನ್ನು ಕೇಳಿದ್ದೇನೆ... ಬಹುಶಃ ಇಂಗ್ಲಿಷಿನ selfish ಪದದಲ್ಲಿ ಇರುವ fish ನಿಂದ ಸ್ಪೂರ್ತಿಗೊಂಡು.. ಬಂದಿರಬಹುದೇ?
ಚಿಕ್ಕಂದಿನಿಂದಲೇ ಹಂಚಿ ತಿನ್ನುವ ಅಭ್ಯಾಸವನ್ನು ಮಾಡಿಸುವುದು ಒಂದು ಕ್ರಮ. ನನಗೆ ನೆನಪಿರುವಂತೆ.. ನಾನು ಎಲ್ಲರಿಗೂ ಕೊಟ್ಟರೂ ಸಹ... ನನ್ನ ಭಾಗವನ್ನು.... ಅದರಲ್ಲೂ ನನಗೆ ಪ್ರಿಯವಾದ ತಿಂಡಿಯನ್ನು.... ಎಷ್ಟೋ ಸಲ ಮೊದಲೇ ಇಟ್ಟುಕೊಂಡಿದ್ದಿದೆ. ಮನೆಯ ಎಲ್ಲ ಮಕ್ಕಳಿಗೂ ಸಮವಾಗಿ ಗುಡ್ಡೆಯನ್ನು ಮಾಡಿಟ್ಟು... ಚಿಕ್ಕವನಾದ ನನಗೆ ಅದನ್ನು ತೆಗೆದುಕೊಳ್ಳಲು ಮೊದಲ ಅವಕಾಶ... ನನ್ನ ಪಾಲು ತೆಗೆದುಕೊಳ್ಳುವಾಗ.. ಬೇರೆಯವರ ಭಾಗದಿಂದ ಒಂದೊಂದು ಸಣ್ಣ ಕಾಳನ್ನಾದರೂ ತೆಗೆದುಕೊಂಡದ್ದಿದೆ... ಹಾಗೆಯೇ ಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದ ತಿಂಡಿಯನ್ನು... ಆದಷ್ಟು ಮಟ್ಟಿಗೂ ಯಾರಿಗೂ ತಿಳಿಯದಂತೆ ತಿನ್ನುತ್ತಿದ್ದ ಪರಿ... ಈಗ ನಗುತರಿಸುತ್ತದೆ. ನನ್ನೂರು ದೊಡ್ಡಜಾಲದಲ್ಲಿ ಇದ್ದ ಸುಮಂಗಲಿ ಎನ್ನುವ ಹೆಣ್ಣು ಮಗಳು... ಹುರಿದ ಕಡಲೆಕಾಯಿ ಬೀಜವನ್ನು ಸಣ್ಣ ಸಣ್ಣದಾಗಿ ಮಾಡಿ (ಎಂಟು ಭಾಗ) ಬೆಂಕಿ ಪೊಟ್ಟಣದಲ್ಲಿಟ್ಟು ತರುತ್ತಿದ್ದದ್ದು... ಆ ಸಣ್ಣ ಚೂರಿಗಾಗಿ ನಾವು ಕೈಯೊಡ್ಡುತ್ತಿದ್ದದ್ದು... ಆಕೆ ಕೊಟ್ಟ ಒಂದು ಚೂರನ್ನು ತಿನ್ನುತ್ತಿದ್ದ ನಾನು... ಇವು ಸ್ವಾರ್ಥ.. ನಿಃಸ್ವಾರ್ಥಕ್ಕೆ ಉದಾಹರಣೆಗಳು.
ಆಪ್ತ ಸಮಾಲೋಚಕನಾಗಿ ನನ್ನ ಗಮನಕ್ಕೆ ಬಂದ ಕೆಲ ಸನ್ನಿವೇಶಗಳು:
ಕೂಡು ಕುಟುಂಬ... ಸಂಪಾದನೆಯಲ್ಲಿ ವ್ಯತ್ಯಾಸ ಸಹಜ.... ಮನೆಯ ಯಜಮಾನ... ಕಡಿಮೆ ಸಂಪಾದನೆಯ ದಂಪತಿಯ ಮಕ್ಕಳಿಗೆ ತಾರತಮ್ಯ ಮಾಡುವ ಬುದ್ಧಿ..
ಅಂತಹದೇ ಕುಟುಂಬದಲ್ಲಿ... ತಮ್ಮ ಮಕ್ಕಳಿಗೆ ಒಂದಷ್ಟು ಪ್ರಾಮುಖ್ಯತೆ ಕೊಡುವುದು..
ಸಂಸಾರ ನಿಭಾಯಿಸುವಲ್ಲಿ ಹೆಣ್ಣು... ತನ್ನ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು... ಗಂಡ ಮಕ್ಕಳು ಅತ್ತೆ ಮಾವ ನಾದಿನಿ ಮೈದುನ... ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ... ಅದಕ್ಕೆ ಪ್ರತಿಫಲವಾಗಿ ಎಷ್ಟೋ ಅವಹೇಳನಗಳು, ನೋವುಗಳನ್ನು ಅನುಭವಿಸುವ ಪರಿಸ್ಥಿತಿ.... ಇಂಥ ಸಮಯದಲ್ಲಿ ನಾನು " ಸ್ವಾರ್ಥಿಯಾಗಿ... ನಿಮ್ಮ ಮನಸ್ಸಿನ ಶಾಂತಿ, ನೆಮ್ಮದಿ ಹಾಗೂ ನಿಮ್ಮ ಕೆಲ ವೈಯುಕ್ತಿಕ ಆಸೆಗಳಿಗೂ ಒಂದಷ್ಟು ಪ್ರಾಮುಖ್ಯತೆ ಕೊಡಿ" ಎಂದು ಹೇಳಿದ್ದಿದೆ.
ಇದೇ ಪರಿಸ್ಥಿತಿಯಲ್ಲಿ ಹೆಣ್ಣು ಪರಮ ಸ್ವಾರ್ಥಿ ಆದಾಗ ಮನೆಯ ನೆಮ್ಮದಿಯೇ ಹಾಳು.
ಎಲ್ಲ ಜೀವಿಗಳು ತಮ್ಮ ಸಂತತಿಯ ಕ್ಷೇಮಕ್ಕಾಗಿ... ಉಳಿವಿಗಾಗಿ ಒಂದಷ್ಟು ಶ್ರಮಪಡುವುದು ಸಹಜ.. ಆದರೆ ಮನುಷ್ಯನೆಂಬುವ ಜೀವಿ ಮಾತ್ರ.... ಎಷ್ಟು ಸ್ವಾರ್ಥಿ ಎಂದರೆ.. ಮುಂದಿನ ಪೀಳಿಗೆಗೆ ಸಾಕಾಗುವಷ್ಷ್ಟು ಇದ್ದರೂ ಇನ್ನೂ ಕೂಡಿಡುವ ದುರಾಸೆ...
ಈ ಗುಂಪಿನಲ್ಲಿ ಹೆಚ್ಚು ಕಾಣುವವರು ಸ್ವಾರ್ಥವೇ ಮೂರ್ತಿವೆತ್ತಂಥ ರಾಜಕಾರಣಿಗಳು... ಹಾಗೂ ಅವರ ಅನುಗ್ರಹದಿಂದ ಬೆಳೆಯುವ ಪುಂಡು ಪೋಕರಿಗಳು., ಚುನಾವಣೆ ಮುಗಿದಮೇಲೆ ಇವರ ಧೋರಣೆ .."ಹೊಳೆ ದಾಟಿದ ಮೇಲೆ ಅಂಬಿಗ ಮಿಂ*" ಎಂಬ ಮಾತು ಇವರಿಗೆ ಸೂಕ್ತ..
ಇವೆಲ್ಲದರ ಮಧ್ಯೆ ಬೆಳಕಿನ ಕಿರಣಗಳು... ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು.. "ತಿರುಕ" ನಾಮಾಂಕಿತ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು ಹಾಗೂ ಅಂತಹುದೇ ಸೇವೆಗೆ ಜೀವನವನ್ನು ಮುಡಿಪಾಗಿ ಇಟ್ಟಿದ್ದ.... ಹಾಗೂ ಈಗಲೂ ಇಟ್ಟಿರುವ ಸಾಕಷ್ಟು ಜನ ನಿಸ್ವಾರ್ಥಿಗಳು.
ಹಿಂದಿನ ಕಾಲದಲ್ಲಿ... ಮಧ್ಯಾಹ್ನದ ಊಟದ ಸಮಯಕ್ಕೆ... ಯಾರಾದರೂ ಆಗಂತುಕರು ಇದ್ದಾರೆಯೇ ಎಂದು ಗಮನಿಸಿ... ಅವರಿಗೂ ಊಟ ಹಾಕುವ ಒಂದು ಸಂಪ್ರದಾಯವೇ ಇತ್ತು... ಬಹುಶಃ....... ಹೋಟೆಲ್ ಗಳು ಅಸ್ತಿತ್ವಕ್ಕೆ ಬಂದ ನಂತರ ಈ ಸಂಪ್ರದಾಯ ಕೊನೆಗೊಂಡಿತು.
ಇನ್ನು.. ಅಪ್ಪನ ಮಾತನ್ನು ಉಳಿಸಿಕೊಳ್ಳಲು.. ವನವಾಸಕ್ಕೆ ಹೋದ ಶ್ರೀರಾಮಚಂದ್ರ.... ತನಗೆ ಶರಣಾದ ಪಾರಿವಾಳವನ್ನು ರಕ್ಷಿಸಲು... ತನ್ನ ದೇಹದ ಮಾಂಸವನ್ನೇ ಕೊಡಲು ಮುಂದಾದ ಶಿಬಿ ಚಕ್ರವರ್ತಿ ಎಂತಹ ನಿಸ್ವಾರ್ಥಿಗಳು ಅಲ್ಲವೇ?
ಇನ್ನೊಂದು ಕಥೆ ಹಂಚಿಕೊಳ್ಳಬೇಕು... ತಾಯಿ ಕೋತಿ ತನ್ನ ಮರಿಯನ್ನು.. ಯಾವಾಗಿನಂತೆ ಎದೆಗೆ ಅವುಚಿಕೊಂಡು ಹೋಗುತ್ತಿತ್ತು... ನೀರನ್ನು ದಾಟುವ ಸಮಯ... ಮರಿಯನ್ನು ಬೆನ್ನ ಮೇಲೆ ಕೂಡಿಸಿಕೊಂಡಿತು... ಮತ್ತೆ ಆಳವಾದಾಗ ಹೆಗಲ ಮೇಲೆ.. ನಂತರ ತಲೆಯ ಮೇಲೆ.... ನೀರಿನ ರಭಸ ಹೆಚ್ಚಾದಾಗ... ಅದು ತನ್ನನ್ನು ಹಾಗೂ ಮರಿಯನ್ನು ಸಂಭಾಳಿಸಲಾಗದೆ ಕಷ್ಟಪಡುತ್ತಿತ್ತು.... ಕೊನೆಗೆ ಮರಿಯನ್ನು ಎತ್ತಿ ದೂರದ ದಡದ ಕಡೆಗೆ ಬದುಕಿಕೊಳ್ಳಲಿ ಎಂದು ಎಸೆದು... ತಾನೂ ಆ ಕಡೆಗೆ ಹೊರಟಿತು... ಇಬ್ಬರೂ ಸಾಯುವ ಬದಲು... ಬದುಕಲು ಪ್ರಯತ್ನ... ಈ ಹಂತದಲ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಬೇಕಾದ ಉಪಾಯ... ನಮ್ಮನ್ನೇ ನಾವು ರಕ್ಷಿಸಿಕೊಳ್ಳಬೇಕಾದಾಗ ಒಂದಷ್ಟು ತ್ಯಾಗ ಅವಶ್ಯಕ.
ಅದಕ್ಕಾಗೇ.. ಈಗಿನ ಹೆಣ್ಣು ಮಕ್ಕಳಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಅವಶ್ಯಕ ತರಬೇತಿಯನ್ನು ಕೊಡುವುದು. ಕಾನೂನಿನ ದೃಷ್ಟಿಯಲ್ಲೂ... ತನ್ನ ರಕ್ಷಣೆಯ ಸಂದರ್ಭದಲ್ಲಿ... ಬೇರೆಯವರ ಮೇಲಾದ ಹಲ್ಲೆಯನ್ನು ಶಿಕ್ಷಾರ್ಹವಲ್ಲವೆಂದು ಪರಿಗಣಿಸಲಾಗುವುದು.
ಮೊದಲೇ ಹೇಳಿದ ಹಾಗೆ... ನಮ್ಮ ಧರ್ಮವು ಎಂದಿಗೂ ಬೇರೆಯವರ ನೋವು, ಹಾನಿಯನ್ನು ಬಯಸುವುದಿಲ್ಲ..
ನಾವು ಸಹ ಬೇರೆಯ ಧರ್ಮದ ಬಗ್ಗೆ ಮಾರಕವಾಗುವಂತಹ ಕೆಲಸವನ್ನು ಮಾಡದಿರೋಣ... ಪೂರಕವಾಗಿಯೂ ಬೇಡ... ಆದರೆ ನಮ್ಮ ಮೇಲೆ / ನಮ್ಮ ಧರ್ಮದ ಮೇಲೆ ಸವಾರಿ ಮಾಡಲು ಬಂದಾಗ ಸ್ವಾರ್ಥಿಗಳಾಗೋಣ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗೋಣ, ನಮ್ಮನ್ನು, ನಮ್ಮ ಧರ್ಮವನ್ನು ರಕ್ಷಿಸಿಕೊಳ್ಳಲು ಕಟಿಬದ್ಧರಾಗೋಣ.
ಧರ್ಮೋ ರಕ್ಷತಿ ರಕ್ಷಿತಃ
ನಮಸ್ಕಾರD
DC Ranganatha Rao
9741128413
ಸೆಲ್ಫಿಶ್ ಲೇಖನ ಸತ್ಯಕ್ಕೆ ಕನ್ನಡಿ ಹಿಡಿದ ಹಾಗಿದೆ ..ತಾನು ತನ್ನದು ಈ ಭಾವವೇ ನಮ್ಮನ್ನು ಗುರಿಯೆಡೆಗೆ ಸಾಗಲು ಸಹಕಾರಿ 👍👌💐
ReplyDeleteನೀವು ಕೇಳಿರುವ ಪ್ರಶ್ನೆಗೆ ಉತ್ತರ ಅತ್ಯಂತ ಸರಳವಾಗಿದೆ ಸ್ವಾರ್ಥವಿಲ್ಲದೆ ಜೀವನವಿಲ್ಲ, ಆದರೆ ನಮ್ಮ ಸ್ವಾರ್ಥದಿಂದ ಬೇರೆಯವರ ಸ್ವಾರ್ಥಕ್ಕೆ ತೊಂದರೆ ಅಥವಾ ಅಡ್ಡಿ ಯಾಗಬಾರದು ಅಷ್ಟೇ, ಸ್ವಾರ್ಥ ಎನ್ನುವುದು ಎಲ್ಲಾ ಜೀವಿಗಳಲ್ಲೂ ಇದ್ದದ್ದೆ. ಎಂತಹ ಮಹಾಜ್ಞಾನಿಗೂ ಇದ್ದೇ ಇರುತ್ತದೆ ಅವನಿಗೆ ಮುಕ್ತಿಯನ್ನು ಹೊಂದುವ ಸ್ವಾರ್ಥ ಭಗವಂತನಿಗೂ ಸಹ ತನ್ನ ಭಕ್ತರು ಸುಖವಾಗಿರಬೇಕು ಎಂಬ ಸ್ವಾರ್ಥ ಹೌದಲ್ಲವೇ. ನಿಮ್ಮ ಬಗ್ಗೆ ಅತ್ಯಂತ ಹೆಮ್ಮೆ ಪಡಬಹುದಾದ ವಿಷಯವೆಂದರೆ ತಕ್ಕಮಟ್ಟಿನ ನಿಸ್ವಾರ್ಥ ಜೀವನ, ಇಹ ಮತ್ತು ಪರಗಳಲ್ಲಿ ಪರೋಪಕಾರಾರ್ಥಮ್ ಇದಂ ಶರೀರಂ ಎನ್ನುವುದನ್ನು ಸಾಕಾರಗೊಳಿಸಿದ್ದೀರಿ, *ನಿಸ್ವಾರ್ಥ ಜೀವನವೆಂದು ಇದನ್ನು ಕರೆಯಬಹುದೇ*
ReplyDeleteಅತ್ಯಂತ ಧನವಂತ ಕುಟುಂಬದ ಹಿರಿಯ ಸದಸ್ಯರೊಬ್ಬರು ಪ್ರತಿನಿತ್ಯ ತಮ್ಮ ಪಾಲಿನ ಊಟದಲ್ಲಿ ಸ್ವಲ್ಪ ಭಾಗವನ್ನು ತೆಗೆದಿಟ್ಟು ಬೇರೊಬ್ಬ ಹಸಿವಿನಿಂದ ಬಳಲುತ್ತಿದ್ದವರಿಗೆ ಕೊಡುತ್ತಿದ್ದರು, ಆದರೆ ಅವರ ಮನೆಯವರು ನಮ್ಮಲ್ಲಿ ಇಷ್ಟೊಂದು ಅನುಕೂಲವಿರುವಾಗ ನಿನ್ನ ಪಾಲಿನ ಊಟ ಕಡಿಮೆ ಮಾಡಿ ಬೇರೊಬ್ಬರಿಗೆ ನೀಡುವ ಪರಿಪಾಠವಾದರೂ ಏಕೆ ಎಂದು ಕೇಳುತ್ತಿದ್ದರು ಆಗ ಅವರು ಹೇಳಿದರು ಮನೆಯಲ್ಲಿದ್ದನ್ನೇ ದಾನ ಮಾಡಿದರೆ ಅದು ನನ್ನದು ಎನಿಸುವುದಿಲ್ಲ ದಾನ ಮಾಡುವುದಾದರೆ ನನ್ನ ಪಾಲಿನದನ್ನೇ ದಾನ ಮಾಡಬೇಕು, ಎಂದು ಹೇಳುತ್ತಿದ್ದರು.
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ. ಇಂತಿ ನಿಮ್ಮವ ಪದ್ಮನಾಭ.💐💐🙏🙏
ಮನುಷ್ಯ ಹುಟ್ಟುವಾಗ ಏನೂ ತರುವುದಿಲ್ಲ...ಹೋಗುವಾಗ ಸೂಜಿಯನ್ನು ಸಹಾ ತೆಗೆದುಕೊಂಡು ಹೋಗಲಾಗುವುದಿಲ್ಲವೆಂದು ತಿಳಿದುದ್ದೂ ಸಹಾ ಬುದ್ಧಿ ತಿಳಿದಾಗಿನಿಂದ ಸ್ವಾರ್ಥಕ್ಕೆ ಶರಣಾಗುವುದು ವಿಧಿಯ ಕ್ರೂರ ಅಟ್ಟಹಾಸವೇ ಸರಿ.
ReplyDeleteಒಂದು ಹಂತದವರೆಗೆ ಸ್ವಾರ್ಥ ಸರಿ..ನಂತರ ಸ್ವಲ್ಪಮಟ್ಟಿಗೆ ದಾನಪರರಾಗುವುದು ಒಳ್ಳೆಯದು.
ಸ್ವಾರ್ಥ ಎಂಬುದು ಒಂದು ಮಾಯೆ. ಅದನ್ನು ಮೀರುವುದು ಕಷ್ಟಸಾಧ್ಯ.ಅದನ್ನು ಮೀರಿದ ಮಹಾನುಭವರುಗಳನ್ನು ಲೇಖನದಲ್ಲಿ ಕಾಣಬಹುದಾಗಿದೆ. ಸ್ವಾರ್ಥದ ವಿವಿಧ ಮಜಲು, ರೂಪಗಳನ್ನು ಲೇಖನದಲ್ಲಿ ಬಹುಮುಖವಾಗಿ ಕಟ್ಟಿಕೊಡಲಾಗಿದೆ.
ಪಂಚಭೂತಗಳು, ಪ್ರಕೃತಿಯು ನಮಗೆ ನಿಸ್ವಾರ್ಥವಾಗಿ ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಕಲಿಯುವ ಆಸಕ್ತಿ, ಇಚ್ಛಾಶಕ್ತಿ ಇರಬೇಕು.
ಒಳಿತಾಗಲಿ, ಶುಭವಾಗಲಿ.
ಆದರಪೂರ್ವಾಕವಾಗಿ,
ಗುರುಪ್ರಸನ್ನ
ಚಿಂತಾಮಣಿ
ನಾವು ಸ್ವಾರ್ಥಿ ಆಗಬೇಕೇ- ನನಶೀರ್ಷಿಕೆಯು ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ಸ್ವಾರ್ಥಿ ವಿಷಯದಲ್ಲಿ ಮೊದಲು ನಾನು, ನನ್ನ ಆರೋಗ್ಯ ಚೆನ್ನಾಗಿದ್ದ ನಂತರ ರೆ ನಾನು ಉಳಿದವರ ಬಗ್ಗೆ ವಿಚಾರ ಮಾಡಬಹುದು.ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಹಾಗೂ ಇನ್ನೊಬ್ಬರಿಂದ ಲಾಭ ಮಾಡಿಕೊಳ್ಳುವುದು ಸರಿಯಲ್ಲ.ನಿಸ್ವಾರ್ಥಕ್ಕೆ ಬಂದಾಗ ಸಂಪೂರ್ಣವಾಗಿ ಬೇರೆಯವರಿಗೆ ಉಪಕಾರ/ಸಹಾಯ ಮಾಡುವುದು ಸರಿಯಲ್ಲ ಎಂದು ನನ್ನ ಅಭಿಪ್ರಾಯ.ತನಗೆ/ತನ್ನ ಸಂಸಾರಕ್ಕೆ ಮೀಸಲಿಟ್ಟು ನಂತರ ಉಪಕಾರ/ಸಹಾಯ ಮಾಡುವುದು ಒಳ್ಳೆಯದು.ತಮ್ಮ ಶೀರ್ಷಿಕೆಯಲ್ಲಿ ಹಾವಿನ /ಕೋತಿಯ ಕಥೆ ಸಮಯೋಚಿತವಾಗಿದೆ.ಮತ್ತೊಮ್ಮೆ ಧನ್ಯವಾದಗಳು.ದೇವೇಂದ್ರಪ್ಪ.ಬೆಂಗಳೂರು
ReplyDeleteಸ್ವಾರ್ಥೇನ, ಪರೋಪಕಾರಾರಾರ್ಥ ಇದಂ ಶರೀರಂ, ಎಂದೂ ಅನ್ನಬಹುದು.
Deleteಸ್ವಾರ್ಥ ಸಾಮಾನ್ಯ ಬದುಕಿಗೆ ಬೇಕಾದ ಭದ್ರತೆ, ಮಿತಿ ಮೀರದೆ ಪರ ಧರ್ಮ ಹಾಗೂ ಅತಿಶಯ ಧರ್ಮ ಆಗಬೇಕು ಎಂಬ ನಿಮ್ಮ ಚಿಂತನೆ ಸ್ವಾರ್ಥ ದೂರವಾಗಿದೆ. ತಿಳಿಯಲು ವಿಚಾರಗಳಿವೇ .
ReplyDelete