ಪರೀಕ್ಷೆ- ಜೀವನ

 


ಮೊನ್ನೆ ಪೇಪರ್ ನಲ್ಲಿ ಬಂದ ಸುದ್ದಿ...CET ಪರೀಕ್ಷೆಯಲ್ಲಿ ಕೊಟ್ಟ ಪ್ರಶ್ನೆಗಳು... ಸಿಲಬಸ್ ನಿಂದ ಹೊರತಾಗಿತ್ತು... ಎಂದು.  ವಿದ್ಯಾರ್ಥಿಗಳು ಪೋಷಕರು ಹಾಗೂ ಕೆಲ ಕಾಲೇಜುಗಳಿಂದ ಖಂಡನೆ... ಮರು ಪರೀಕ್ಷೆಯು ನಡೆಯಬಹುದೇನೋ ಎಂಬ  ಸೂಚನೆ.  ಮರು ಪರೀಕ್ಷೆ ಅಂದಾಕ್ಷಣ ನನ್ನ ಮನಸ್ಸು ಹೋಗಿದ್ದು ನನ್ನ ಹತ್ತನೆಯ ತರಗತಿಯ ವರ್ಷಕ್ಕೆ. ನಾನು 10ನೇ ತರಗತಿ (SSLC) ಪರೀಕ್ಷೆಯನ್ನು ಎರಡು ಸಲ ಬರೆದಿದ್ದೇನೆಂಬ ಹೆಮ್ಮೆ.. ಸಾಮಾನ್ಯವಾಗಿ ಎರಡನೆಯ ಬಾರಿ ಪರೀಕ್ಷೆ ಬರೆದಿದ್ದರೆ... ಅದು ಫೇಲಾದ ಸೂಚನೆ ಹಾಗೂ ಕೆಲ ಮಟ್ಟಿಗೆ ಅವಮಾನಕರ... ಅಲ್ಲವೇ. ಆದರೆ ನನ್ನ ವಿಷಯದಲ್ಲಿ (ಆ ವರ್ಷದ ಎಲ್ಲ 10ನೇ ತರಗತಿಯ ವಿದ್ಯಾರ್ಥಿಗಳ ವಿಷಯದಲ್ಲಿ) ಹಾಗಲ್ಲ. ನಮ್ಮದೇ ವೈಶಿಷ್ಟ್ಯ. ಆಗಷ್ಟೇ ಶುರುಮಾಡಿದ್ದ ಹೊಸ ಶೈಲಿಯ... ಮೊದಲನೆಯ ತಂಡ ನಮ್ಮದು.  ಪ್ರಶ್ನೆ ಪತ್ರಿಕೆಯು ಹೊಸ ತರಹ.. new type questions ಸಮೇತ.. ಹಾಗಾಗಿ ನಮಗೆ ಒಂದಷ್ಟು ಕುತೂಹಲ ...ಸಾಕಷ್ಟು ಭಯ. ಸುದೈವದಿಂದ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು.... ಅಲ್ಲಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗುಸು-ಗುಸು... ಗಣಿತದ ಪರೀಕ್ಷೆ ಎರಡು ದಿನ ಇರುವಾಗ... ನನ್ನಣ್ಣ ಒಂದು ಟೈಪ್ ಮಾಡಿದ ಪ್ರಶ್ನೆ ಪತ್ರಿಕೆ ತಂದುಕೊಟ್ಟ... ಅದು ಗಣಿತ ಪ್ರಶ್ನೆ ಪತ್ರಿಕೆಯ ತದ್ರೂಪು... ಅದು ಯಾವ ಮಟ್ಟದಲ್ಲಿ ಪ್ರಸಾರವಾಗಿತ್ತು ಎಂದರೆ ಗಾಂಧಿಬಜಾರ್ ನಲ್ಲಿ ಹಂಚುವಷ್ಟು. ನಾನು ಎಷ್ಟರಮಟ್ಟಿಗೆ ಅದಕ್ಕೆ ತಯಾರ್ ಆಗಿದ್ದೆ ಎಂದರೆ... ಪರೀಕ್ಷೆಯ ಹಾಲಿನಲ್ಲಿ ಪ್ರಶ್ನೆ ಪತ್ರಿಕೆ ನೋಡಿದ ನಂತರ... ಪ್ರಶ್ನೆಯ ಸಂಖ್ಯೆ, ಉಪಸಂಖ್ಯೆ .. ಎಲ್ಲವನ್ನು ನೋಡದೆಯೇ ಉತ್ತರ ಬರೆಯುವಷ್ಟು. ಖುಷಿಯೋ ಖುಷಿ.. ಇನ್ನೊಂದು ಪೇಪರ್ ಬರೆದರೆ ಪರೀಕ್ಷೆ ಮುಗಿದಂತೆ ಆಮೇಲೆ ರಜಾ ಮಜಾ.....

ಈ ಮಜಾದ ಚಿಂತನೆ... ಮಾರನೆಯ ಬೆಳಗಿನ  ಹೊತ್ತಿಗೆ ಚೂರುಚೂರಾಗಿತ್ತು...ಯಾಕೆಂದರೆ ಎಲ್ಲ ಪರೀಕ್ಷೆಗಳನ್ನು ಮತ್ತೊಮ್ಮೆ ಮಾಡುವ ನಿರ್ಧಾರ ಸರ್ಕಾರ ಪ್ರಕಟಿಸಿತ್ತು. ಉತ್ಸಾಹದ ಬುಗ್ಗೆ ಎಲ್ಲಾ ಒಡೆದು ಬಿದ್ದಿತ್ತು... ಮನಸ್ಸಿಗೆ ಬೇಜಾರು... ಖುಷಿ ಇಲ್ಲ.. ಮತ್ತೆ ಪರೀಕ್ಷೆಯನ್ನು ಬರೆಯಬೇಕೆಂಬ ಬೇಸರ... ಅನಿವಾರ್ಯ.. ಹೇಗೋ ಮತ್ತೆ ಪರೀಕ್ಷೆ ಬರೆದದ್ದಾಯ್ತು ..ಪಾಸೂ ಮಾಡಿಯಾಯಿತು.... ಇದು ನನ್ನ ಪರೀಕ್ಷೆಯ ಕಹಿ ಅನುಭವ.. ಅಷ್ಟೇನೂ ಕಹಿಯಲ್ಲದ ನೆನಪು.

SSLC ಪರೀಕ್ಷೆಯ ನಮ್ಮ ಹಿಂದಿನ ವರ್ಷಗಳಲ್ಲಿ...ಪಾಸಾದವರಿಗೆ ಎರಡು ತರಹದ ಫಲಿತಾಂಶ ಇರುತ್ತಿತ್ತು.. ಒಂದು EPS ..... ಇದು ಮುಂದಿನ ಓದಿಗೆ ಅವಕಾಶವಿಲ್ಲ ...ಬರೀ ಕೆಲಸಕ್ಕೆ ಹೋಗಲು ಅನುಮತಿ... ಇನ್ನೊಂದು EC&PS ... ಇದು ಮುಂದೆ ಓದಲು ಹಾಗೂ ಕೆಲಸಕ್ಕೆ ಸೇರಲು ಎರಡಕ್ಕೂ ಅನುಮತಿ... ಆಗ SSLC.... ಓದಿನ ಬಹುಮುಖ್ಯ ಘಟ್ಟ ಆಗಿತ್ತು.

ನಮ್ಮಪ್ಪ... ನನಗೆ ಹೇಳಿದ ಒಂದು ಮಾತು ಮರೆಯಲು ಸಾಧ್ಯವಿಲ್ಲ... ಅದೇ ...SSLC ಫೇಲ್ ಆದರೆ.... ನಾಲ್ಕು ಎಮ್ಮೆ ಕೊಡುಸ್ತೀನಿ... ಅದನ್ನ ಕಾಯ್ಕೊಂಡಿರು ಅಂತ.... ಸಧ್ಯ... ಆ ಪರಿಸ್ಥಿತಿ ಬರಲಿಲ್ಲ.

ನಾಲ್ಕನೆಯ ಕ್ಲಾಸ್ ತನಕ ಯಾವಾಗ ಹೇಗೆ ಪರೀಕ್ಷೆ ಮಾಡುತ್ತಿದ್ದರು ಗೊತ್ತಿಲ್ಲ. ಆದರೆ ವಾಸು ಫೇಲು ಹೇಳ್ತಾರೆ ಅನ್ನೋದೇ ಪರೀಕ್ಷೆ.... ಒಬ್ಬೊಬ್ಬರ ಹೆಸರು ಹೇಳಿ ನೀನು ಪಾಸು ಅಥವಾ  ಫೇಲು ಅಂತ ಹೇಳೋರು.... ರಂಗನಾಥ ನೀನು ಪಾಸು ಅಂದಾಗ ಖುಷಿಯೋ ಖುಷಿ.

ಪ್ರಶ್ನೆಪತ್ರಿಕೆ ಕೊಟ್ಟು, ಉತ್ತರ ಬರೆಯುವ ಅನುಭವವನ್ನು ಕೊಟ್ಟವರು ನನ್ನ ಪ್ರೀತಿಯ ಶಂಕರ ನಾರಾಯಣ ರಾವ್ ಮೇಷ್ಟ್ರು. ಮಕ್ಕಳಿಗೆ ಕಲಿಸುವ ಅವರ ಇಚ್ಛೆ... ಉತ್ಸಾಹ ..ಪ್ರಶ್ನೆ ಪತ್ರಿಕೆಗಳನ್ನು ತಮ್ಮ ಕೈಯಲ್ಲೇ ಬರೆದು... ಕೊಡುತ್ತಿದ್ದರು.  ನಮ್ಮ ಹಳ್ಳಿಯಲ್ಲಿ ಇರುತ್ತಿದ್ದ ಅವರು ಪ್ರಶ್ನೆ ಪತ್ರಿಕೆ ಬರೆಯುತ್ತಿದ್ದ ಸಮಯದಲ್ಲಿ ನಾವುಗಳು ಕಿಟಕಿಯಿಂದ ಬಗ್ಗಿ ನೋಡಿ..“ಏಯ್ ಹೋಗ್ರೋ  ” ಅಂತ ಗದರಿಸಿಕೊಂಡ ನೆನಪೂ ಇದೆ.

ಪ್ರಶ್ನೆ ಪತ್ರಿಕೆಯನ್ನು ಮೊದಲು ಪೂರ್ತಿ ಓದಬೇಕು, ಆನಂತರ ಚೆನ್ನಾಗಿ ಗೊತ್ತಿರುವುದನ್ನು ಮೊದಲು ಬರೆಯಬೇಕು, ಅಕ್ಷರಗಳು ಗುಂಡಾಗಿ ಇರಬೇಕು, ಮೊದಲ ಉತ್ತರ ನೋಡಿದ ತಕ್ಷಣ, ಅವರಿಗೆ ಮೆಚ್ಚುಗೆಯಾಗಬೇಕು ಇವು ನಮಗೆ ಹೇಳಿಕೊಟ್ಟ ಕೆಲವು ಸೂಚನೆಗಳು.

ಆಗಿನ್ನು ಇಂಕ್ ಪೆನ್ ಉಪಯೋಗಿಸುತ್ತಿದ್ದ ಸಮಯ... ಪರೀಕ್ಷೆ ಬಂತೆಂದರೆ ಪೆನ್ನನ್ನು ಚೆನ್ನಾಗಿ ತೊಳೆದು ಹೊಸದಾಗಿ ಇಂಕ್ ತುಂಬಿಸಿ ತಯಾರಾಗುವುದೇ ಒಂದು ಸಂಭ್ರಮ. 

ಚಿಕ್ಕ ಪರೀಕ್ಷೆ... ದೊಡ್ಡ ಪರೀಕ್ಷೆ ಅಂತ ಎರಡು ಪರೀಕ್ಷೆ ಮಾತ್ರ ಇರ್ತಿತ್ತು.

ಮೊದಲ ತಾಲೂಕು ಮಟ್ಟದ ಪಬ್ಲಿಕ್ ಪರೀಕ್ಷೆ ಎಂಟನೇ ತರಗತಿಯದು... ಭಯ ಸಂಭ್ರಮ ಸೇರಿದ ಭಾವನೆ... ವಿದ್ಯಾನಗರದ ಶಾಲೆಗೆ ಮೊದಲಿಗನಾಗಿ ಬಂದ ಖುಷಿ.... ಜೊತೆಗೆ ಬೆಂಗಳೂರಿಗೆ ಮುಂದೆ ಓದಲು ಹೋಗುವ ಸಂಭ್ರಮ.

ಬೆಳೆದಂತೆ ಪಬ್ಲಿಕ್ ಪರೀಕ್ಷೆಯ ಭಯ ಕಡಿಮೆಯಾದರೂ... ಒಂದಷ್ಟು ಆತಂಕ ಇರುತ್ತಿದ್ದದ್ದು ಸಹಜ. ಪ್ರಶ್ನೆ ಪತ್ರಿಕೆ ಓದುವ ಮುಂಚೆ... ಅದಕ್ಕೆ ನಮಸ್ಕರಿಸಿ ಕಣ್ಮುಚ್ಚಿ ದೇವರಿಗೆ ಪ್ರಾರ್ಥಿಸಿ... ಬರೆಯಲು ಶುರು ಮಾಡುತ್ತಿದ್ದದ್ದು ಸಾಮಾನ್ಯ ದೃಶ್ಯವಾಗಿತ್ತು.

ಪರೀಕ್ಷೆಯಲ್ಲಿ ಕಾಪಿ ಮಾಡಿದರೆ ಡಿಬಾರ್ ಮಾಡುತ್ತಾರೆ ಎನ್ನುವ ಭಯವಿದ್ದರೂ... ಕಾಪಿ ಮಾಡಲು ಸಹಕರಿಸಿದವನು ನಾನು.   ಪಿಸು ಮಾತಿನಲ್ಲಿ ಉತ್ತರ ಹೇಳುವುದು.... ಬರೆದಿದ್ದು ಕಾಣುವಹಾಗೆ ಪಕ್ಕದಲ್ಲಿ ಇಡುವುದು... ಒಂದು ಸಲ  ಪೇಪರ್ ಕೆಳಗೆ ಬಿದ್ದ ಹಾಗೆ ಮಾಡಿ... ಮುಂದಿನವ ಅದನ್ನು ತಗೊಂಡು ಕಾಪಿ ಮಾಡಿ ವಾಪಸ್ಸು ಕೊಟ್ಟ ಒಂದು ಘಟನೆ.... ತುಂಬಾ ಭಯವಾಗಿತ್ತು.... ಅದೆಲ್ಲಿತ್ತೋ ಧೈರ್ಯ.... ದೇವರು ದಯಾಮಯ ಸಿಕ್ಕಿಹಾಕಿಸಲಿಲ್ಲ.

ಡಿಪ್ಲೋಮಾ ಓದುವ ಕಾಲ... ಕಾರ್ಪೆಂಟರಿ ಪ್ರಾಕ್ಟಿಕಲ್ ಎಕ್ಸಾಮ್...  ಮರದ ತುಂಡಿನಲ್ಲಿ... ಒಂದು ಜಾಯಿಂಟ್ ಮಾಡುವ ಕೆಲಸ.... ಕೈಯಲ್ಲಿ ಶಕ್ತಿಯು ಇಲ್ಲ... ಬೇಕಾದ ಕೌಶಲ್ಯವೂ ಇಲ್ಲ.... ಕೊನೆಯ ಹಂತದಲ್ಲಿ ಮುರಿದೇ ಹೋಗಿತ್ತು.... ಅಳುವುದೊಂದೇ ಬಾಕಿ... ಕಣ್ಣಲ್ಲಿ ನೀರು ತುಂಬಿತ್ತು... ಪಾಪ ಪರೀಕ್ಷಕರೇ ಸಮಾಧಾನ ಹೇಳಿ ಪಾಸಿಂಗ್ ಮಾರ್ಕ್ಸ್ 50 ಕೊಟ್ಟಿದ್ದರು.

ಶಹಾಬಾದಿನಲ್ಲಿದ್ದಾಗ.... ಓದಿ ಬೆಂಗಳೂರಿನಲ್ಲಿ ಬರೆದ AMIE ಪರೀಕ್ಷೆಗಳು ನನಗೆ ತುಂಬಾ ಸಮಾಧಾನ ಕೊಟ್ಟವು... ನನ್ನ ಪರಿಣತೆಯನ್ನು ನನಗೆ ಪರಿಚಯ ಮಾಡಿಕೊಟ್ಟ ಪರೀಕ್ಷೆಗಳು.

ಆಗಲೇ ನನಗೆ ಬಿ ಎಸ್ಸಿ ಮಾಡಬೇಕು ಎಂಬ ತಿಕ್ಕಲು ಹತ್ತಿತ್ತು.... ಅಲ್ಲಿ ಇದ್ದ ಮರಗೋಳ್ ಕಾಲೇಜಿಗೆ ಸೇರಿದೆ ಸಹ... ಪ್ರಾಕ್ಟಿಕಲ್ಸ್ ಗೆ ಮಾತ್ರ ಹೋಗಿ ಪರೀಕ್ಷೆ ಬರೆಯಲು ಒಂದು ತರಹದ ಅನುಮತಿ ಸಿಕ್ಕಿತ್ತು...‌ ಮೊದಲ ವರ್ಷ ಸುಸೂತ್ರವಾಗಿ ಎಲ್ಲ ವಿಷಯಗಳು ಪಾಸ್ . ಪರೀಕ್ಷೆಯಲ್ಲಿ ಹುಡುಗರು ರಾಜಾರೋಷವಾಗಿ ಕಾಪಿ ಮಾಡುತ್ತಿದ್ದ ಭರಾಟೆ ನನಗೆ ಸಮಾಧಾನವಿರಲಿಲ್ಲ. ಎರಡನೆಯ ವರ್ಷದಲ್ಲಿ ಅದು ಉತ್ತುಂಗಕ್ಕೆ ಹೋಗಿತ್ತು... ನನಗೆ  ಭ್ರಮನಿರಸನವಾಯಿತು.... ಒಂದೆರಡು ವಿಷಯದಲ್ಲಿ ಫೇಲಾದೆ.... ಆದರೆ ಮುಂದಿನ ವರ್ಷಕ್ಕೆ ಹೋಗಲು ಏನು ಅಡ್ಡಿ ಇರಲಿಲ್ಲ.. ಯಾಕೆಂದರೆ ಆಗ ATKT  ಎನ್ನುವ ಅನುಕೂಲವಿತ್ತು... ಅಂದರೆ Allowed To Keep Time. ಆ ಅನುಕೂಲವನ್ನು ಇಂದಿಗೂ ನಾನು ಉಪಯೋಗಿಸುತ್ತಿದ್ದೇನೆ... ಮುಂದಿನ ಪರೀಕ್ಷೆಗೆ ಇನ್ನೂ ಹೋಗಿಲ್ಲ.

ಆಗಿನ ಒಂದು ವರ್ಷದ ಪಿಯು ಕೋರ್ಸ್ ಓದಿದ್ದು ನ್ಯಾಷನಲ್ ಕಾಲೇಜಿನಲ್ಲಿ... ಅದೊಂದು ವಿಶಿಷ್ಟ ಅನುಭವ... ಮೊದಲ ಟೆಸ್ಟ್...  ಫಿಸಿಕ್ಸ್ ನಲ್ಲಿ ತೆಗೆದುಕೊಂಡ ಅಂಕಗಳು 50ಕ್ಕೆ 17.... ಹಾಗಾಗಿ ಫೇಲ್.... Weak student ಕ್ಲಾಸನ್ನು ಸೇರಬೇಕಾಯಿತು... ನಮಗೆ ಹೆಚ್ ಎನ್ ಸಹ( ಡಾಕ್ಟರ್ ಎಚ್ ನರಸಿಂಹಯ್ಯ) ಫಿಸಿಕ್ಸ್ ಪಾಠ ಮಾಡುತ್ತಿದ್ದರು. ವೀಕ್ ಸ್ಟೂಡೆಂಟ್ಸ್ ಬಗ್ಗೆ ವಿಶೇಷ ಕಾಳಜಿ... ಹಾಗಾಗಿ ಫೈನಲ್  ಪರೀಕ್ಷೆಯ ಫಲಿತಾಂಶ ಬಂದಾಗ ಎಚ್ ಎನ್ ಕೇಳಿದ್ದು... ಎಷ್ಟು ಮಾರ್ಕ್ಸ್ ವೀಕ್ ಸ್ಟೂಡೆಂಟ್ ಗೆ... ಸುದೈವಕ್ಕೆ ನನಗೆ 76 ಬಂದಿತ್ತು ಭೇಷೆಂದರು.

ಅಲ್ಲಿನ ಪರೀಕ್ಷೆಯ ಬಗ್ಗೆ ಹೇಳಲೇಬೇಕು... ಆಗ ಒಂದು ಪ್ರಯತ್ನ ..invigilator ಇಲ್ಲದ ಪರೀಕ್ಷೆ. ಪ್ರಶ್ನೆ ಪತ್ರಿಕೆ ಕೊಟ್ಟು.... ಸೂಚನೆ ಗಳನ್ನು ಕೊಟ್ಟು... ಕಾಪಿ ಮಾಡದೆ ಆತ್ಮಸಾಕ್ಷಿಗೆ ಅನುಗುಣವಾಗಿ ಉತ್ತರ ಬರೆಯಬೇಕೆಂದು ಹೇಳಿ ಹೊರಟು ಹೋಗುತ್ತಿದ್ದರು.... ಅಡಿಷನಲ್ ಶೀಟ್ ಬೇಕಾದರೆ... ಟೇಬಲ್ ಮೇಲೆ ಇದ್ದ ಪೇಪರ್ ಅನ್ನು ನಾವೇ ತೆಗೆದುಕೊಳ್ಳಬಹುದು.... ಕೊನೆಯಲ್ಲಿ ಬಂದು ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು... ನನಗೆ ತಿಳಿದಂತೆ ಯಾರು ಕಾಪಿ ಮಾಡಿದ್ದಿಲ್ಲ... ಅಂತಃ ಶಕ್ತಿಯನ್ನು ಬೆಳೆಸುವ ಪ್ರಕರಣ.

ಇನ್ನೊಂದು utter failure ಆದ ಪರೀಕ್ಷೆ ನಾನು BEL ಗೆ ಹೋಗಿದ್ದ ಇಂಟರ್ವ್ಯೂ. ನನ್ನ ಜೀವನದ ಮೊದಲ ಇಂಟರ್ವ್ಯೂ... ಒಂದು ವಸ್ತುವನ್ನು ತೋರಿಸಿ ಏನೆಂದು ಕೇಳಿದ ಒಂದು ಹಂತದ ಪ್ರಶ್ನೆ... ಉತ್ತರ ಹೇಳಿದೆ.... ಕೈಯಲ್ಲಿ ಹಿಡಿದು ನೋಡಿ ಉತ್ತರ ಹೇಳಲು ಸೂಚನೆ.... ಕೈಗೆ ತೆಗೆದುಕೊಂಡ ತಕ್ಷಣ... ಕೈ ನಡುಗಲು ಶುರು... ಇಂಟರ್ವ್ಯೂ ಮುಗಿಯಿತು.... ದೇವರು ನನಗಾಗಿ ಇನ್ನೂ ಉತ್ತಮವಾದ ಅವಕಾಶ ಕೊಟ್ಟಿದ್ದು ಮಾತ್ರ ಸತ್ಯ.

ಒಂದು ವರದಿಯ ಪ್ರಕಾರ... ಈಗಿನ ಮಕ್ಕಳು ಅಂಕಗಳಿಸುವ ನೈಪುಣ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ..  ಸಾಮಾನ್ಯವಾಗಿ ಈ ಅಂಕಗಳಿಸುವಲ್ಲಿ ಹೆಣ್ಣು ಮಕ್ಕಳೇ ಮುಂದು. ಇದು competant ಯುಗವಾದ್ದರಿಂದ... ಅದರ ಅವಶ್ಯಕತೆಯೂ ಇದೆ.... ಆದರೆ ವೃತ್ತಿ ಜೀವನದಲ್ಲಿ ಅಂಕಗಳಿಗಿಂತ.... ಗಳಿಸಿದ ಜ್ಞಾನ ಹಾಗೂ ಅದನ್ನು ವೃತ್ತಿಯಲ್ಲಿ ಅಳವಡಿಸುವ ಚಾಕಚಕ್ಯತೆಯೇ ಮುಖ್ಯವಾಗಿ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದು ನನ್ನ ನಂಬಿಕೆ.

ಮಹಾಭಾರತದ ಧರ್ಮರಾಯ ಎದುರಿಸಿದ ಯಕ್ಷಪ್ರಶ್ನೆ... ಹಾಗೂ ಅರ್ಜುನ ಬಾಣದ ಗುರಿಯನ್ನು ಹಕ್ಕಿಯ ಕಣ್ಣಿಗಿಟ್ಟ ಪ್ರಸಂಗಗಳು ಪರೀಕ್ಷೆಗಳೇ.

ಎಲ್ಲ ಕಾಲದಲ್ಲೂ... ಜೀವನದ ಎಲ್ಲ ಘಟ್ಟಗಳಲ್ಲೂ ಪರೀಕ್ಷೆಗಳು ಸಾಮಾನ್ಯ... ಅಲ್ಲಿ ಅಂಕಗಳು ಸಿಗದಿದ್ದರೂ... ಫಲಿತಾಂಶಗಳು ಮಾತ್ರ ಸ್ಪಷ್ಟ.

ಜೀವನದ ಮೊದಲ ಹಂತದಲ್ಲಿ ಮಕ್ಕಳನ್ನು ಬೆಳೆಸುವುದೇ ತಂದೆ ತಾಯಿಯರಿಗೆ ತಾಳ್ಮೆಯ ಪರೀಕ್ಷೆ... ಮಕ್ಕಳಿಗೆ ...ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದೇ ಸವಾಲು... ಓದಿನ ನಂತರ ಜೀವನದಲ್ಲಿ... ಕೆಲಸ ಗಳಿಸಲು ಎದುರಿಸಬೇಕಾದ ಹಲವಾರು competative ಪರೀಕ್ಷೆಗಳು...driving licence ಪಡೆಯಲು ಎದುರಿಸಬೇಕಾದ ಪರೀಕ್ಷೆ....ಮುಂದಿನ ಹಂತದ.. ಮದುವೆಗಾಗಿ ನಡೆಯುವ ವಧು ವರರ ಪರೀಕ್ಷೆ.... ಮದುವೆಯಾದ ನಂತರ  ಮಗುವಾಗುವ ಹಂತದಲ್ಲಿ ವಿಧವಿಧವಾದ ತಾಯಿಯ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆಯ  ಪರೀಕ್ಷೆ... ವಯಸ್ಸಾದ ನಂತರ ರಕ್ತ, ಮೂತ್ರದ  ಪರೀಕ್ಷೆ...

ಜೊತೆಗೆ ಜೀವನದ ವಿವಿಧ ಹಂತದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಸತ್ವ ಪರೀಕ್ಷೆ.

ಜೀವನದ ಪರೀಕ್ಷೆಯ ವಿಶೇಷವೆಂದರೆ... ಎಲ್ಲರಿಗೂ ಅವರದೇ ಆದ ಪ್ರಶ್ನೆಪತ್ರಿಕೆ...  ಕಾಪಿ ಮಾಡಲು ಅವಕಾಶವಿಲ್ಲ... ಮಾಡಿದಾಗ ಬಹುಪಾಲು ಸೋಲೇಗಟ್ಟಿ.

ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವಾಗ... ಎಲ್ಲವನ್ನು ವ್ಯವಸ್ಥಿತವಾಗಿ ಮಾಡಲು ತಯಾರು ಮಾಡಿಕೊಂಡಿದ್ದರೂ... ಎಲ್ಲವೂ ಮುಗಿದು.... ನಮ್ಮವರ ಜೊತೆಯಲ್ಲಿ ಕುಳಿತು ಕಾರ್ಯಕ್ರಮದ ವಿಮರ್ಶೆ ಮಾಡುವಾಗ.... ಸಿಕ್ಕ ಉತ್ತರ ಸಮಾಧಾನ ತಂದರೆ... ಪರೀಕ್ಷೆಯಲ್ಲಿ ಗೆದ್ದಂತೆಯೇ.

ನನ್ನ ಆಪ್ತ ಸಮಾಲೋಚನೆಯ ಪ್ರವೃತ್ತಿಯಲ್ಲಿ... ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವಾಗ..... ಕೊಟ್ಟ ಪರಿಹಾರ.... ಬೇಕಾದ ಪರಿಣಾಮವನ್ನು ಕೊಟ್ಟಾಗ ಪರೀಕ್ಷೆಯನ್ನು ಗೆದ್ದಂತೆಯೇ..... ಒಂದಷ್ಟು ಕೊರತೆಯಾದಾಗ... ಉತ್ತರವನ್ನು ಬದಲಾಯಿಸಬೇಕಾದಾಗ... ಮರು ಪರೀಕ್ಷೆಯೇ....

ಈಗೊಂದು ಅಗ್ನಿಪರೀಕ್ಷೆ... ಸಾರ್ವತ್ರಿಕ ಚುನಾವಣೆ.... ಪರೀಕ್ಷೆ ಬರೆಯುವುದು ನಾವಾದರೂ.. ತಕ್ಷಣ ಅದರ ಪ್ರತಿಫಲ ಪಡೆಯುವುದು ಅಭ್ಯರ್ಥಿಗಳು.... ನಮಗೆ ಪ್ರತಿಫಲ ಸಿಗುವುದು ಮುಂದಿನ ಐದು ವರ್ಷಗಳ ಕಾಲ.... ಅದು ನಾವು ಆರಿಸಿದ ಅಭ್ಯರ್ಥಿಯ ಯೋಗ್ಯತೆಗೆ ತಕ್ಕಂತೆ... ಸರಿಯಾದ ವ್ಯಕ್ತಿಯನ್ನು ಆರಿಸುವ ಹೊಣೆ ನಮ್ಮದು.. ಹಾಗಾಗಿ ತಪ್ಪದೇ ಮತದಾನ ಮಾಡೋಣ..

ದೇಶದ ಮತ್ತು ಜನರ ಹಿತಕ್ಕಾಗಿ ಶ್ರದ್ಧೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ವ್ಯಕ್ತಿಗಳನ್ನು ಆರಿಸೋಣ.... ಅಂತೆಯೇ ದೇಶದ ಹಿತಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ನಮ್ಮ ನರೇಂದ್ರ ಮೋದಿಯವರ ತಂಡದ ಕೈ ಬಲಪಡಿಸೋಣ.

ಭಾರತ ಮಾತೆಗೆ ಜಯವಾಗಲಿ...


DC Ranganatha Rao 

9741128413

Comments

  1. ನಾಗೇಂದ್ರ ಬಾಬು27 April 2024 at 16:46

    ಪರೀಕ್ಷೆ ನಂತರ ಪಲಿತಾಂಶದ ನಿರೀಕ್ಷೆ, ಉತ್ತಮ ಜೀವನದ ಅಪೇಕ್ಷೆ...ಹೀಗೆ ಬಾಲ್ಯದಲ್ಲಿ ಪ್ರಾರಂಭವಾದ ಪರೀಕ್ಷಾ ಭಯ ಜೀವನದ ಮುಕ್ತಾಯದ ತನಕ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಾಡುವ, ಕುಗ್ಗಿಸುವ,ಧೈರ್ಯ ಕೊಡುವ,ಹುರಿದುಂಬಿಸುವ ವಿಶಿಷ್ಟ ಅನುಭವ, ಈ ಕುರಿತ ನಿಮ್ಮ ಬರಹ ಅರ್ಥಪೂರ್ಣ, ಇನ್ನು ಮತದಾನ (ನಾವು ಸ್ವಲ್ಪ ಜನ ಮಾತ್ರ ದಾನ ಮಾಡೋದು...
    ಬಾಕಿ ಎಲ್ಲ ಮತ ಮಾರೋರು...🥲) ಅನ್ನದಾನ ಕೂಡ ಇಂದು ಉತ್ಪ್ರೇಕ್ಷೆ ಯಾಗಿದೆ
    ನೋಡೋಣ ಪ್ರಜಾಪ್ರಭುತ್ವದ ಪರೀಕ್ಷೆ ನಡೆಯುತ್ತಿದೆ...ಉತ್ತಮ ಫಲಿತಾಂಶ ಬರಲಿ ಎಂದು ಆಶಿಸುತ್ತಾ....ವಂದನೆಗಳು
    ಬಾಬು

    ReplyDelete
  2. Sir, one suggestion, please insert few images relevant to the subject which can reflect the ideas better.

    ReplyDelete
  3. ಪರೀಕ್ಷೆ-ಜೀವನ ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ಪರೀಕ್ಷೆಯಲ್ಲಿ ಮೊದಲು ಪ್ರಶ್ನೆ ಪತ್ರಿಕೆಯನ್ನು ಸಮಾಧಾನದಿಂದ ಪೂರ್ತಿ ಓದುವುದು,ಉತ್ತರ ಗೊತ್ತಿದ್ದ ಪ್ರಶ್ನೆಗಳಿಗೆ ಮೊದಲು ಗುಂಡಾಗಿ ಉತ್ತರ ಬರೆದು ನಂತರ ಉಳಿದ ಪ್ರಶ್ನೆಗಳಿಗೆ ಉತ್ತರ ಬರೆಯುವುದು ಉತ್ತಮ ಸಂದೇಶ ವಾಗಿದೆ.ಇತ್ತೀಚೆಗೆ ಪರೀಕ್ಷೆ ಯಲ್ಲಿ ಮಕ್ಕಳಿಗೆ ಹೆಚ್ಚಿನ ನಂಬರು ತೆಗೆಯುವುದು ಆದ್ಯತೆ ಆಗಿದೆ.ಆದರೆ ಜೀವನದ ಪಾಠಗಳನ್ನು ಶಾಲೆಗಳಲ್ಲಿ ಕಲಿಸುವುದು ಒಳ್ಳೆಯದು ನನ್ನ ಅಭಿಪ್ರಾಯ.ಮನೆಯಲ್ಲಿ ತಂದೆ ತಾಯಂದಿರು/ಅಜ್ಜಅಜ್ಜಿಯವರು ಜೀವನದ ಪಾಠಗಳನ್ನು ಕಲಿಸುವುದು/ಅನುಷ್ಠಾನ ಮಾಡಿಸುವುದು ಒಳ್ಳೆಯದು ಎಂದು ನನ್ನ ಅಭಿಪ್ರಾಯ.ಮತ್ತೊಮ್ಮೆ ಧನ್ಯವಾದಗಳು. ದೇವೇಂದ್ರಪ್ಪ.ಬೆಂಗಳೂರು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ