ಜಾತ್ರೆ -ತೇರು -ರಥೋತ್ಸವ
ಈಗ ಎಲ್ಲ ಕಡೆಯೂ ಜಾತ್ರೆ.. ರಥೋತ್ಸವ ... ತೇರನ್ನೆಳೆಯುವ ಸಂಭ್ರಮ. ಬೆಳಗಾದರೆ ಪೇಪರ್ ನಲ್ಲಿ ಅಲ್ಲಲ್ಲಿ ನಡೆದ ಜಾತ್ರೆಯ ವಿಷಯ ಬಂದಿರುತ್ತೆ.
ಬೇಸಿಗೆ ಕಾಲ ಬಂತೆಂದರೆ ರೈತರಿಗೆ ವ್ಯವಸಾಯಕ್ಕೆ ಒಂದಷ್ಟು ಬಿಡುವು... ಜೊತೆಗೆ ಮಳೆ ಗಾಳಿಯ ತೊಡಕು ಇಲ್ಲದ ಸಮಯ... ಹಾಗಾಗಿ ಜನ ಸೇರುವ ಕಾರ್ಯಕ್ರಮಗಳಿಗೆ ಇದು ಸೂಕ್ತ ಸಮಯ. ಹಾಗಾಗಿ ಜಾತ್ರೆ, ಊರಿನ ದೇವಸ್ಥಾನದ ದೇವರ ರಥೋತ್ಸವ / ತೇರು ಕಾರ್ಯಕ್ರಮಗಳು. ಇದಕ್ಕೆ ಬಹಳಷ್ಟು ಮನೆಗಳಿಗೆ ಅವರ ನೆಂಟರು ಇಷ್ಟರು ಬಂದು ಭಾಗವಹಿಸುವುದು ಒಂದು ಸಂಪ್ರದಾಯ. ಈಗ ಅದೇ ಪದ್ಧತಿ ಮುಂದುವರಿದು ಜಾತ್ರೆಯಂಥಾ ಕಾರ್ಯಕ್ರಮಗಳು ನಡೆಯುವುದು ಬೇಸಿಗೆ ಸಮಯದಲ್ಲೇ.
ಜಾತ್ರೆ/ ರಥೋತ್ಸವ ಎಂದರೆ ಅದು ಶ್ರದ್ಧೆ ,ಭಕ್ತಿ ಸಡಗರ, ಸಂಭ್ರಮ , ಮನರಂಜನೆ ಎಲ್ಲಾ ಒಟ್ಟುಗೂಡಿರುವ ಒಂದು ಕಾರ್ಯಕ್ರಮ.
ಹಳ್ಳಿ , ಪಟ್ಟಣ, ನಗರ,.. ಹಾಗೇ ಚಿಕ್ಕವರು - ದೊಡ್ಡವರು ಹೆಣ್ಣು- ಗಂಡು ಎಂಬ ಭೇದ ಭಾವವಿಲ್ಲದೆ ಎಲ್ಲ ಕಡೆಯೂ ಜಾತ್ರೆಯಲ್ಲಿ ಉತ್ಸಾಹದಿಂದ ಭಾಗವಹಿಸುವುದು ಸಾಮಾನ್ಯ.
ಚಿಕ್ಕ ಮಕ್ಕಳು... ಅಲ್ಲಿ ಸಿಗುವ ಬಣ್ಣ ಬಣ್ಣದ ಆಟದ ಸಾಮಾನುಗಳು, ವಿವಿಧ ಆಟಗಳು ಹಾಗೂ ತಿನ್ನುವ ಆಸೆಯಿಂದ ಜಾತ್ರೆಗೆ ಬಂದರೆ... ಯುವಕ ಯುವತಿಯರು ಅಂದ ಚಂದವಾಗಿ ಸಿಂಗರಿಸಿಕೊಂಡು, ತಮ್ಮದೇ ಲೋಕದಲ್ಲಿ ವಿಹರಿಸಲು, ಖುಷಿಪಡಲು ಬರುತ್ತಾರೆ. ನವ ದಂಪತಿಗಳು ಕೈ ಕೈ ಹಿಡಿದು ಓಡಾಡುತ್ತಾ.. ಹೊಸತನವನ್ನು ಅನುಭವಿಸುತ್ತಾರೆ. ಮಕ್ಕಳ ತಂದೆ ತಾಯಿಯರು ತಮ್ಮ ಮಕ್ಕಳನ್ನು ಹೆಗಲ ಮೇಲೆ ಏರಿಸಿಕೊಂಡು / ತಪ್ಪಿಸಿಕೊಳ್ಳದಂತೆ ಕೈಯನ್ನು ಭದ್ರವಾಗಿ ಹಿಡಿದು... ಎಲ್ಲವನ್ನು ತೋರಿಸುತ್ತಾ.. ಅವರನ್ನು ಸಾಧ್ಯವಾದಷ್ಟು ಮಟ್ಟಿಗೆ ಖುಷಿಪಡಿಸುತ್ತಾ ಜೀವನದ ಸಾರ್ಥಕತೆಯನ್ನು ಕಾಣುತ್ತಾರೆ. ಇನ್ನು ವಯಸ್ಸಾದವರು... ಬಿಸಿಲಿನ ಜಳಕ್ಕೆ ಸುಸ್ತಾಗಿ.....ತೇರು ಎಳೆದೊಡನೇ... ತಮ್ಮ ಭಕ್ತಿ ಸಲ್ಲಿಸಿ ನೆರಳಿನ ಆಶ್ರಯ ಪಡೆಯುತ್ತಾರೆ.
ನಾನಂತೂ...ನಮ್ಮ ಊರ ಬಳಿಯ ಅಕ್ಕಯ್ಯಮ್ಮನ ಬೆಟ್ಟದ ಜಾತ್ರೆ.. (ಬೆಟ್ಟವಾದ್ದರಿಂದ ತೇರು/ ರಥೋತ್ಸವ ಇರದು) ಎಂದರೆ... ನೆನೆಸಿಕೊಳ್ಳುತ್ತಿದ್ದಿದ್ದು ಐಸ್ ಕ್ಯಾಂಡಿ ಹಾಗೂ ಕ್ರಶ್ ( ತುಳಸಿ ಬೀಜ, ಒಂದಷ್ಟು ಬಣ್ಣ.. ಸಕ್ಕರೆ ಬೆರೆಸಿದ ನೀರು). ಅದಕ್ಕಾಗಿ ಆಗ ಸಿಗುತ್ತಿದ್ದ ತೂತು ಮೂರು ಕಾಸನ್ನು ಕಾಯ್ದಿರಿಸಿಕೊಳ್ಳಲು... ಉಡದಾರಕ್ಕೆ ಕಟ್ಟಿಕೊಂಡಿದ್ದ ನೆನಪು ಇದೆ.
ನನ್ನೂರು ದೊಡ್ಡಜಾಲದಲ್ಲಿ ಮುತ್ಯಾಲಮ್ಮನ ಜಾತ್ರೆ ಎರಡು ಮೂರು ಸಲ ನೋಡಿದ ನೆನಪುಂಟು. ದೇವಸ್ಥಾನದ ಮುಂದಿನ ಮರಗಳ ತೋಪಿನಲ್ಲಿ ಸಜ್ಜಾಗಿ ನಿಂತಿದ್ದ ತೇರು... ನನ್ನ ಎತ್ತರಕ್ಕೆ ಹೋಲಿಸಿದಾಗ ಬಹುದೊಡ್ಡ ತೇರಿನ ಚಕ್ರಗಳು, ತೇರಿಗೆ ಕಟ್ಟಿದ ಬಣ್ಣ ಬಣ್ಣದ ಬಾವುಟಗಳು... ಎಳೆಯಲು ದಪ್ಪನಾದ ಹಗ್ಗ... ಎಲ್ಲವನ್ನು ಆಶ್ಚರ್ಯದಿಂದ ನೋಡಿ ಸಂಭ್ರಮಿಸಿದ ನೆನಪಿದೆ. ನನಗೆ ತಿಳಿದಂತೆ.. ಚುನಾವಣೆಯ ಪ್ರಭಾವದಿಂದ.. ಗುಂಪುಗಳಾಗಿ ವಿಭಜನವಾದ ಹಳ್ಳಿಯ ಜನ ಒಟ್ಟು ಸೇರಿ ಜಾತ್ರೆ ಮಾಡಲಾಗದೆ... ನಿಂತೇ ಹೋಯಿತು.. ತೇರಿನ ಸಾಮಾನುಗಳನ್ನು... ನಮ್ಮ ಶಾಲೆಯ ಬಳಿಯಿದ್ದ ವೀರಭದ್ರ ದೇವಸ್ಥಾನದಲ್ಲಿ ಬಹಳ ದಿನ ಇಟ್ಟಿದ್ದು... ಅದರ ಮೇಲೆ ಆಟವಾಡಿದ್ದು... ಅಲ್ಲಿಯೇ ಪಾಠವನ್ನು ಕಲಿತದ್ದು ನೆನಪಿಗೆ ಬರುತ್ತಿದೆ.... ಎಷ್ಟೋ ವರ್ಷಗಳ ನಂತರ ತೇರು ಎಳೆಯುವ ಸಂಭ್ರಮ ಶುರುವಾಗಲಿದೆ ಎಂದು ತಿಳಿದರೂ.... ಕಾರಣಾಂತರಗಳಿಂದ ನಾನು ಭಾಗವಹಿಸಿಲ್ಲ.. ನನ್ನೂರಿನ ತೇರಿನ ನೆನಪು ಅಷ್ಟೇ.
ಜಾತ್ರೆಯಲ್ಲಿ ಕೊಳ್ಳಲೇ ಬೇಕೆಂಬ ನಂಬಿಕೆ ಇರುವುದು... ಕಡಲೆಪುರಿ... ಕಲ್ಯಾಣ ಸೇವೆ.. ಬತ್ತಾಸು (ಇಲ್ಲಿ ನೆನಪಾಗುವ ಪದ್ಯ... “ಕಲ್ಯಾಣ ಸೇವೆ ಜೇಬಿನ ಬುಡದಲಿ..ಪುಟಾಣಿ ಪುರಿಯು ಮೇಲೊಂದಿಷ್ಟು.. ಗೋಲಿ ಬಳಪ ಮತ್ತೊಂದಿಷ್ಟು ..ಬಂದ ಬಂದ ಸಂತಮ್ಮಣ್ಣ”).
ತೇರನ್ನೆಳೆಯುವಾಗ.... ನಂತರ ಸಹ... ಧವನವನ್ನು ಬಾಳೆಹಣ್ಣಿಗೆ ಸಿಕ್ಕಿಸಿ ತೇರಿನ ಮೇಲೆ ಎಸೆಯುವುದು ಒಂದು ಸಂಪ್ರದಾಯ...( ಬಹುಶಃ ಧವನ ಎಸೆದರೆ ಅದು ತೇರನ್ನು ಮುಟ್ಟದು... ಬಾಳೆಹಣ್ಣಿನ ಭಾರದ ಜೊತೆಗೆ ಎಸೆದರೆ ಗುರಿ ಮುಟ್ಟುವ ಅವಕಾಶ ಉಂಟು... ಬಾಳೆಹಣ್ಣು ಸುಲಭವಾಗಿ ಸಿಗುವಂತದ್ದು). ಎಸೆದ ಬಾಳೆಹಣ್ಣು.. ಕಳಶಕ್ಕೆ ತಾಕಿದರೆ... ನಾವಂದು ಕೊಂಡ ಕಾರ್ಯ ಸುಸೂತ್ರವಾಗಿ ನಡೆಯುತ್ತದೆ ಎಂಬ ನಂಬಿಕೆ. ನಾನು ಎಸೆದ ಧವನ ಹಣ್ಣು ಎಂದೂ ಕಳಶಕ್ಕೆ ತಾಕಿಲ್ಲ... ನನಗೆ ಗೊತ್ತು.. ನನ್ನ ಕೈಯ ಶಕ್ತಿ ಹಾಗೂ ಗುರಿ ಇಡುವ ಯುಕ್ತಿ ಎರಡರ ಕೊರತೆಯೂ ಇದೆ ಎಂದು. ಧವನ ಬಾಳೆಹಣ್ಣು ಎಸೆಯುವ ಸಮಯದಲ್ಲಿ ತಮಗೆ ಬೇಕಾದವರ ಮೇಲೆ ಎಸೆದು... (ಕೆಲಸಲ.. ನೋವಾಗುವಂತೆ) ಕೀಟಲೆ ಮಾಡುವುದನ್ನು ನಾನು ನೋಡಿದ್ದೇನೆ.
ತೆರನ್ನು ಎಳೆಯಲು, ಭಕ್ತಿ, ಆಸಕ್ತಿ ...ಆತುರ.... ಕೆಲವೊಮ್ಮೆ ಇದು ಅತಿಯಾಗಿ , ಸಿದ್ಧತೆಗೆ ಮುಂಚೆ ತೇರನ್ನೆಳೆದು ತೊಂದರೆಯಾದದ್ದು ಇದೆ... ಇನ್ನೂ ಕೆಲ ವೇಳೆ ತೇರಿಗೆ ಹಗ್ಗವನ್ನು ಸಿಕ್ಕಿಸುವ ಮೊದಲೇ ಎಳೆದು ಹಗ್ಗ ಮಾತ್ರ ಮುಂದೆ ಹೋದದ್ದೂ ಇದೆ. ಇದೆಲ್ಲಕ್ಕೂ ಮಿಗಿಲಾದ ಕೌಶಲ್ಯ ಮತ್ತು ತಂತ್ರಗಾರಿಕೆ... ರಥವನ್ನು ನಿಧಾನವಾಗಿ ಹೋಗಲು ಅನುವು ಮಾಡಿಕೊಡುವ ಕೆಲ ವ್ಯಕ್ತಿಗಳು(brake inspectors ಎನ್ನಲೇ). ಇವರು ಮರದಲ್ಲಿ ಮಾಡಿದ.. ಒಂದು ಸನ್ನೆಯನ್ನು ಹಿಡಿದು... ತೇರಿನ ಚಕ್ರಕ್ಕೆ ಅಡ್ಡ ಕೊಡುವ ಕ್ರಿಯೆ.. ತುಂಬಾ ಜವಾಬ್ದಾರಿಯುತವಾದದ್ದು.
ದುರ್ದೈವ ಕೆಲವು ಬಾರಿ ತೇರು/ ರಥ ಎಳೆಯುವಾಗ ಅವಘಡಗಳು ಸಂಭವಿಸಿದ್ದವು. ಎಲ್ಲಾ ದೈವೇಚ್ಛೆ....
ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುವ ದನದ ಜಾತ್ರೆ... ನಮ್ಮೂರಿನ ರೈತ ಬಾಂಧವರಿಗೆ ಅಚ್ಚುಮೆಚ್ಚು ಆಗಿತ್ತು. ಕಾರಣ ತಮ್ಮಲ್ಲಿರುವ ಜೋಡೆತ್ತುಗಳನ್ನು ಮಾರಿ... ಹೊಸದಾದ ತಮಗಿಷ್ಟವಾದ ಎತ್ತುಗಳನ್ನು ಕೊಂಡು ತರಲು ಸದವಕಾಶ. ನಮ್ಮೂರಿನಿಂದ ಸಂಜೆ ಸಿಂಗರಿಸಿದ ಎತ್ತುಗಳನ್ನು ಹೂಡಿದ ಗಾಡಿಯಲ್ಲಿ ಹೊರಟು ರಾತ್ರಿ ಎಲ್ಲ ಪ್ರಯಾಣ ಮಾಡಿ ಘಾಟಿ ಸೇರಿ... ಜಾತ್ರೆಯಲ್ಲಿ ಭಾಗವಹಿಸಿ ಬರುವ ಸಡಗರ ನೋಡಿಯೇ ಅನುಭವಿಸಬೇಕು. ನನಗೂ ಒಂದು ಬಾರಿ ಈ ಸಡಗರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತ್ತು.
ಜಾತ್ರೆ ತೇರು ಅಂದಾಕ್ಷಣ ಮತ್ತೊಂದು ಮನಸ್ಸಿಗೆ ಬರುವ ಅಂಶ ವಿಧವಿಧವಾದ ಪಾನಕ ಮತ್ತು ಕೊಸಂಬರಿಗಳು. ಬಿಸಿಲನ ಬೇಗೆಯನ್ನು ತಂಪು ಮಾಡುವ ಸಾಧನಗಳು.
ತಂತ್ರಜ್ಞಾನ.. ಅನುಕೂಲಗಳು ಜಾಸ್ತಿಯಾದಂತೆ ಬೇರೆ ಬೇರೆ ಆಟವಾಡುವ ಸಾಧನಗಳು... ಅದರಲ್ಲೂ ಜೈಂಟ್ ವೀಲ್ ಅಂತಹ ಭಾರಿ ಚಕ್ರ...ಅದರಲ್ಲಿ ಕೂತಾಗ ಮಕ್ಕಳು ಅಳುವ, ಭಯ ಬೀಳುವ, ತಲೆ ತಿರುಗಿ ವಾಂತಿ ಮಾಡುವ ಸನ್ನಿವೇಶಗಳು ಉಂಟು. ಇದಲ್ಲದೆ ದುಡ್ಡು ಮಾಡಲು ಆಸೆ ತೋರಿಸುವ ಜೂಜಾಟಗಳು ಜಾಸ್ತಿಯಾಗಿದೆ.
ಸಿನಿಮಾದವರಿಗೆ ಜಾತ್ರೆ ಬಹು ಇಷ್ಟವಾದ ಸನ್ನಿವೇಶ....ಇಲ್ಲೇ ಅವಳಿ ಮಕ್ಕಳಲ್ಲಿ ಒಬ್ಬ ಕಳೆಯುವುದು, ಅಪ್ಪ ಅಮ್ಮ ನಿಂದ ಮಕ್ಕಳು ದೂರವಾಗುವುದು, ಹುಡುಗ ಹುಡುಗಿ ಯ ಪರಸ್ಪರ ಭೇಟಿ....ಮೊದಲ ನೋಟದ ಪ್ರೇಮಾಂಕುರ ಹೀಗೆ.
ತೇರನ್ನೆಳೆದ ನಂತರ... ಊಟದ ಕಾರ್ಯಕ್ರಮ ಇರಲೇಬೇಕಲ್ಲ.... ಬೇರೆ ಬೇರೆ ಸಮುದಾಯದವರು... ಅವರ ಭಾಂದವರಿಗೆ ಊಟದ ವ್ಯವಸ್ಥೆ ಮಾಡಿರುತ್ತಾರೆ... ಹಾಗೂ ಸಾರ್ವಜನಿಕರಿಗೂ ಊಟ ಉಂಟು.
ಗವಿ ಗಂಗಾಧರ ದೇವರ ರಥೋತ್ಸವ, ಸಜ್ಜನ್ ರಾವ್ ಸರ್ಕಲ್ ಸುಬ್ರಹ್ಮಣ್ಯ ದೇವರ ರಥೋತ್ಸವ, ಮಾಗಡಿ ಜಾತ್ರೆ, ಸಾವನ ದುರ್ಗದ ಜಾತ್ರೆ, ಗಿರಿನಗರದ ಗಣೇಶನ ರಥೋತ್ಸವಗಳನ್ನು ನೋಡಿ ಸಂಭ್ರಮಿಸಿದ್ದೇನೆ.
ಗೊಟ್ಟಿಗೆರೆಯ ಶಿವರಾತ್ರಿ ಮಾರನೆಯ ದಿನದ ಜಾತ್ರೆ... ಶ್ರೀನಿವಾಸ ಮೂರ್ತಿ (ಅಣ್ಣ... ಈಗಿಲ್ಲ) ಹಾಗೂ ಮನೆಯವರ ಆದರಾತಿಥ್ಯ ಮರೆಯಲಾಗದು.
ಕೊಪ್ಪಳದ ಜಾತ್ರೆಯಲ್ಲಿ ಭಾಗವಹಿಸದಿದ್ದರೂ .... ಕಾರ್ಯನಿಮಿತ್ತ ಕೊಪ್ಪಳಕ್ಕೆ ಹೋದಾಗ.. ಜಾತ್ರೆಯ ಪೂರ್ವ ತಯಾರಿಗಳು ನಡೆಯುತ್ತಿದ್ದದ್ದು... ಗವಿಮಠದ ಸಿಬ್ಬಂದಿ ತೋರಿಸಿದ ಚಿತ್ರಗಳು ಹಾಗೂ ಜಾತ್ರೆ ನಡೆಯುವ ವಿಶಾಲ ಜಾಗ... ಗಾಡಿಗಳಲ್ಲಿ ತುಂಬಿ ತರುವ ರೊಟ್ಟಿಗಳು ಅದಕ್ಕೆ ಬೇಕಾದ ವ್ಯಂಜನಗಳು... ಅದರ ಅಗಾಧತೆ... ತಿಳಿದು ತುಂಬಾ ಸಂತೋಷವಾಯಿತು.
ಇನ್ನು ನನಗೆ ತುಂಬಾ ಮನಸ್ಸಿಗೆ ಹತ್ತಿರವಾದದ್ದು .. ತುಮಕೂರು ಜಿಲ್ಲೆ ಹೂವಿನ ಕಟ್ಟೆ ರಂಗನಾಥನ ರಥೋತ್ಸವ. ಹೂವಿನ ಕಟ್ಟೆ ನನ್ನ ಮಾವನವರು ಹುಟ್ಟಿ ಬೆಳೆದ ಹಳ್ಳಿ. ಮದುವೆಯಾದ ಹೊಸದರಲ್ಲಿ ಅಲ್ಲಿಗೆ ಮಗಳು ಅಳಿಯನನ್ನು ಕರೆದುಕೊಂಡು ಹೋಗುವ ಒಂದು ಪದ್ಧತಿ. ಆಗ ಅನುಕೂಲಗಳು ಕಡಿಮೆ... ಬಸ್ಸಿಳಿದು ಸುಮಾರು ದೂರ ನಡೆಯಬೇಕು.... ಅಡುಗೆ ಮಾಡಲು ನೀರನ್ನು ಗುಡ್ಡದ ಕೆಳಗಿನ ಬಾವಿಯಿಂದ... ಗಾಡಿಯ ಮೇಲೆ ದೊಡ್ಡ ದೊಡ್ಡ ಪಾತ್ರಗಳಿಗೆ ತುಂಬಿ ತರಬೇಕು. ಮತ್ತೊಂದು ಕೊಳದಲ್ಲಿ ಸ್ನಾನ ಮಾಡಲು ಅನುಕೂಲ... ಹೀಗೆ.
ಜಾತ್ರೆಯ ಹಿಂದಿನ ದಿನ ರಾತ್ರಿ ನಾವು ಗುಡ್ಡವನ್ನು ಮುಟ್ಟಿದೆವು... ಅಂದು ಊಟ ಮಾಡಿದ ಹಲಸಿನಕಾಯಿಯ ಜೊತೆ ಕಾಳು ಹಾಕಿ ಮಾಡಿದ್ದ ಹುಳಿಯ ರುಚಿ ಇಂದೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.
ತುಂಬ ಚಿಕ್ಕದಾದ ಗುಡಿ... ಕೆಳಮಟ್ಟದ ಮಣ್ಣಿನ ಮಾಡು.. ಉದ್ಭವದೇವರು...
ರಾತ್ರಿ ಸೆಖೆ, ಜೊತೆಗೆ ಸೊಳ್ಳೆಯ ಕಾಟ.... ನಿದ್ರೆ ಬಾರದು... ಆದರೆ ಅಂದು ಆ ಊರ ಹೆಣ್ಣು ಮಕ್ಕಳು ಹಾಡಿದ ಸೋಬಾನೆ ಪದಗಳ ಸೊಗಸು... ಇಂದಿಗೂ ಕಿವಿಯಲ್ಲಿ ಗುಂಯ್ ಗುಡುತ್ತವೆ.
ದೇವರ ಉತ್ಸವ ಮೂರ್ತಿಯನ್ನು... ರಥದಲ್ಲಿ ಕೂಡಿಸುವ ಮೊದಲು.. ದೇವಸ್ಥಾನದ ಸುತ್ತ ಮೂರು ಪ್ರದಕ್ಷಿಣೆ ಹಾಕುವಾಗ... ಅದಕ್ಕೆ ಹೆಗಲುಕೊಟ್ಟ ಸಂತೋಷ ನನ್ನದು.... ಅದರ ಜೊತೆಗೆ.. ಬಿಸಿಲು.... ಕಾಲು ಸುಡುವಷ್ಟು ಕಾದ ನೆಲ.. ಜೊತೆಗೆ ಸಣ್ಣಪುಟ್ಟ ಮುಳ್ಳುಗಳು... ಅದಕ್ಕೇ ಇರಬೇಕು ಹಿಂದಿನವರ ಹೇಳಿಕೆ... ದೇವರನ್ನು ನೋಡಲು ಒಂದಷ್ಟು ಕಷ್ಟವನ್ನು ಸಹಿಸಬೇಕು ಎಂದು.
ಈಗ ಅನುಕೂಲಗಳು ಹೆಚ್ಚಿವೆ... ಹಣದ ಕೊರತೆಯೂ ಭಾದಿಸದು.... ಜೊತೆಗೆ ನನ್ನ ಚಿಕ್ಕ ಮಾವ ತುಮಕೂರಿನ ಸುಬ್ಬರಾಯರು ದಂಪತಿಗಳ ನೇತೃತ್ವ... ಎಲ್ಲ ಸೇರಿ ಜಾತ್ರೆಯ ಅನುಭವ ಬೇರೆಯೇ ರೀತಿಯಲ್ಲಿದೆ. ಬಂದವರಿಗೆಲ್ಲ ಒಂದು ಸುತ್ತು ಊಟಕ್ಕೆ ಬಡಿಸಿ ನಂತರ ಊಟ ಮಾಡುವುದರಲ್ಲಿ ಏನೋ ಧನ್ಯತೆ.
ಯಾವಾಗಲೂ... ರಥೋತ್ಸವಕ್ಕೆ ಮುಂಚೆ ಮಾಡುವ ಹೋಮ ಹವನಗಳನ್ನು... ಮಾಡುತ್ತಿದ್ದದ್ದು ... ಹೂವಿನ ಕಟ್ಟೆ ಮನೆತನದ ಹಿರಿಯ ತಲೆ ನರಸಿಂಹಮೂರ್ತಿಯವರು (ನನ್ನ ದೊಡ್ಡ ಮಾವ ಹಾಗೂ ಪ್ರೀತಿಯಿಂದ ಕರೆಯುತ್ತಿದ್ದದ್ದು ದೊಡ್ಡಪ್ಪ ಎಂದು... ಬಹು ಆತ್ಮೀಯರು).... ಒಂದು ವರ್ಷ ಕಾರಣದ ಸ್ಪಷ್ಟತೆ ಇಲ್ಲ.... ಹಿರಿಯರ ಆದೇಶದಂತೆ ಆ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲೆ ಬಿತ್ತು... ಪೂರ್ಣ ಶ್ರದ್ಧೆಯಿಂದ ನಿರ್ವಹಿಸಿದೆ ಎಂಬ ತೃಪ್ತಿ ನನ್ನದು... ಇದು ಒಂದು ಯೋಗಾ ಯೋಗವೇ... ಎತ್ತಣ ದೊಡ್ಡಜಾಲದ ಹುಡುಗ... ಎತ್ತಣ ಹೂವಿನ ಕಟ್ಟೆಯ ರಥೋತ್ಸವ.
ಕಹಿ ನೆನಪು ಒಂದು ...ಈ ಜಾತ್ರೆಯ ಭಾಗವಾಗಿರುವುದು ವಿಧಿಯ ಇಚ್ಛೆ. ಬಂಧುಗಳ ಒಬ್ಬ ಹುಡುಗ ಸ್ನಾನಕ್ಕೆ ಈಜಲು ಹೋಗಿ... ಮುಳುಗಿ ಸತ್ತದ್ದು... ನಾನು ನೋಡದಿದ್ದರೂ .. ಕೇಳಿ ತಿಳಿದ.. ಹುಡುಗನ ಅಪ್ಪ ಅಮ್ಮನ ನೋವು... ನನಗೂ ನೋವೇ.
ಉಡುಪಿಯ ರಥ ಬೀದಿ ಹಾಗೂ ಅಡಿಗೆ ಮನೆಗೆ ಬೇಕಾದ ಉರುವಲು ಕಟ್ಟಿಗೆಗಳನ್ನು... ರಥದ ರೂಪದಲ್ಲಿ ಜೋಡಿಸಿಡುವ ಕಟ್ಟಿಗೆ ರಥ ಎರಡೂ ಆಕರ್ಷಣೆಗಳು.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ...
ಜನ ಮರಳೋ ಜಾತ್ರೆ ಮರಳೋ .... ನಾವು ಉಪಯೋಗಿಸುವ ನುಡಿಗಟ್ಟುಗಳು.
ತುಂಬಾ ಜನ ಸೇರಿದ್ದನ್ನು ವರ್ಣಿಸುವಾಗ.. ಅಬ್ಬಬ್ಬಾ ಜನಸಾಗರ.. ಜನ ಜಾತ್ರೆ ಎಂದು ಹೇಳುವುದುಂಟು...
ಸೂರ್ಯದೇವನು ಹಳೆಯ ರಥವನ್ನು ಬಿಟ್ಟು ಹೊಸ ರಥವನ್ನು ಏರುವ ದಿನವೇ “ರಥಸಪ್ತಮಿ”. ಹೊಸ ಜೀವನ ಆರಂಭಿಸುವ ಸೂಚನೆಯೇ ಇರಬಹುದು.
ಶಿಶುನಾಳ ಶರೀಫರು ಬರೆದ.... ನಾನು ಅರ್ಥ ಮಾಡಿಕೊಂಡಂತೆ... ಗಂಡ ಹೆಂಡತಿಯ ಜೀವನವನ್ನು ತೇರಿಗೆ ಹೋಲಿಸಿ ಬರೆದ.... " ತೇರನೆಳೆಯುತ್ತಾರೆ ತಂಗಿ ತೇರಾ ನೆಳೆಯುತ್ತಾರೆ" ....ಅದರಲ್ಲೂ..." ನಾಲ್ಕು ಗಾಲಿ ಒಂದೇ ಜೋಡಿ... ಆಶಾ ಎಂಬೋ ಹಗ್ಗ ಮಾಡಿ... ತೇರಾನೆಳೆಯುತ್ತಾರೆ" ಪದ್ಯ ಸೊಗಸಾಗಿದೆ.
ಜೀವನ ರಥ ಸೊಗಸಾಗಿ ಸಾಗಲು... ಈ ಜಾತ್ರೆ ತೇರು ರಥೋತ್ಸವಗಳು ಎಲ್ಲವೂ ಪೂರಕ ಅಂಶಗಳು.
ಜೀವನ ರಥ ...ನೋವೋ ನಲಿವೋ, ಕಷ್ಟವೋ ಸುಖವೋ.. ಸಾಗುತ್ತಲೇ ಇರಬೇಕು... ಇರುತ್ತದೆ ಸಹ.... ಜೀವನ ರಥದ ಎಳೆಯುವಿಕೆ ಸಂತೋಷದಿಂದ ಕೂಡಿರಲು ಬೇಕಾದ ಇಚ್ಛಾಶಕ್ತಿ ಹಾಗೂ ಮನಸ್ಥಿತಿ ದೇವರು ಎಲ್ಲರಿಗೂ ಕರುಣಿಸಲಿ ಎಂದು ಆಶಿಸುತ್ತಾ....
ನಮಸ್ಕಾರ
DC Ranganatha Rao
9741128413
👌👌👌👌👌
ReplyDeleteSir what a coincidence....
ReplyDeleteನಾನು ನೋಡಿದ ಮೊದಲ ತೇರು/ಜಾತ್ರೆ ಮೊನ್ನೆ ರಾಮ ನವಮಿಯ ದಿನ. ಅಂದು ನಾನು ತುಮಕೂರಿನ ಬಯಲು ಆಂಜನೇಯ ದೇವರ ತೇರಿಗೆ ಹೋಗಿದ್ದೆ.
ತೇರು ಚಿಕ್ಕದಾಗಿದ್ದರೂ ಅದನ್ನು ಎಳಯುವ ಜನರ ಉತ್ಸಾಹ, ಶ್ರದ್ದೆ ಹಾಗು ಕಷ್ಟ ನೋಡಿ ನಾನು ಬೆರಗಾದೆ.
ನನ್ನ experience ಯನ್ನೆ ನೀವು ಬರೆದಿದ್ದೀರಿ. Hats off to your way of writing...
ಶ್ಯಾಮಲ
👏💐
DeleteYour beautiful story reminds me of my old days in Bettadapur, jatre, Teru, Deepavali Bettada pradakshine and also Hanasoge, Ramanathapura, Rudrpatna activities. You took me to a different wonderful world. Many thanks to you, Ranganath for your write-up up. 👍👍
ReplyDelete,👌👌👌👌👌
ReplyDeleteತೇರು ಹಾಗೂ ರಥೋತ್ಸವದ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ. ನಮ್ಮನೆಯವರ ಊರಾದ ಗುಬ್ಬಿಯಲ್ಲಿರುವ ಬೊಮ್ಮರಸನ ಹಳ್ಳಿಯ ಜಾತ್ರೆ ನೆನಪಿಗೆ ಬಂತು. ಸಾಮಾನ್ಯವಾಗಿ ಎಲ್ಲ ಕಡೆಯು ರಥೋತ್ಸವ ಹೀಗೆ ಅದ್ಧೂರಿಯಾಗಿ ನಡೆಯುತ್ತದೆ.
ReplyDeleteNimma baraha namma namma oorina jathre kanna munde barathe
ReplyDeleteಎಲ್ಲಾ ಕಣ್ಣಿಗೆ ಕಟ್ಟುವ ಹಾಗೆ ಬರೆದಿದ್ದೀರಾ ಸಾರ್
Deleteಜಾತ್ರೆಯ ಚಿತ್ರಣವು ಕಣ್ಣಿನ ಮುಂದೆ ಬಂದಂತೆ ಆಗುತ್ತದೆ ಈ ಲೇಖನ.
ReplyDeleteಜಾತ್ರೆ ಈಗಲೂ ಸಹಾ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳದಿರುವುದು ಸಂತಸದ ವಿಷಯ.
ಕಾಲಾಯ ತಸ್ಮಾಯ ನಮ:
ಆದರಗಳೊಡನೆ
ಗುರುಪ್ರಸನ್ನ
ಚಿಂತಾಮಣಿ
ನಮ್ಮೂರು ರೈಲ್ವೆ ಗೊಲ್ಲಹಳ್ಳಿಯ ಆಂಜನೇಯಸ್ವಾಮಿ ಜಾತ್ರೆಯಲ್ಲಿ ಗರುಡವೊಂದು ರಥಕ್ಕೆ ಪ್ರದಕ್ಷಿಣಿ ಹಾಕಿದ ನಂತರವೇ ರಥ ಎಳೆಯುತ್ತಿದ್ದುದು. ಆ ದೃಶ್ಯ ಅತ್ಯಂತ ರೋಮಾಂಚನಕಾರಿಯಾಗಿರುತ್ತಿತ್ತು.
ಪುರಿಯ ಜಗನ್ನಾಥ ರಥಯಾತ್ರೆ ಹಾಗೂ ಶಿರಸಿಯ ಮಾರಿಕಾಂಬ ಜಾತ್ರೆ ಇಲ್ಲಿ ದೇಶ ಹಾಗೂ ರಾಜ್ಯದ ಅತಿದೊಡ್ಡ ಜಾತ್ರೆ ಉಲ್ಲೇಖಾರ್ಹ.
ಅಂದಹಾಗೆ ಇಂದು ಬೆಂಗಳೂರು ಕರಗ, ಜಾತ್ರೆಯಂತೆ ಬಹಳಷ್ಟು ಜನ ಸೇರುತ್ತಾರೆ. ಈಗ ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣದಲ್ಕಷ್ಟೇ ವೀಕ್ಷಣೆ.
ಇಂತಹ ಸಿಹಿ ನೆನಪುಗಳು ಜೀವನಕ್ಕೆ ಚೇತೋಹಾರಿ. ಇಂದಿನ ಯುವಪೀಳಿಗೆಗೆ ಜಾತ್ರೆಯ ಸಂತೋಷ, ಆಚರಣೆ ಇಲ್ಲದಿರುವುದು ಬೇಸರದ ವಿಷಯ.
ಮೇಲಿನ ನನ್ನ ಅನಿಸಿಕೆ ತಾಂತ್ರಿಕ ದೋಷದಿಂದಾಗಿ ಕಲಸುಮೇಲೋಗರವಾಗಿಬಿಟ್ಟಿದೆ...
ReplyDeleteಅದಕ್ಕಾಗಿ ವಿಷಾದಿಸುತ್ತೇನೆ.
ಗುರುಪ್ರಸನ್ನ
ಚಿಂತಾಮಣಿ