ಮದುವೆ - ಒಂದು ಚಿಂತನೆ

 


Marriages are made in heaven ಅನ್ನುವುದು ಇಂಗ್ಲೀಷಿನ ಚಿರಪರಿಚಿತ ನಾಣ್ಣುಡಿ. ನಮ್ಮ ಸಂಸ್ಕೃತಿಯಲ್ಲಿ ಅದನ್ನು " ಋಣಾನುಬಂಧಂ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ವಿಶಾಲ ತಳಹದಿಯಲ್ಲಿ ಹೇಳಿದ್ದಾರೆ. ಈ ಹೇಳಿಕೆ ಗಂಡಿನ ಕೇಂದ್ರಿತವಾದರೂ... ಪತಿ ಪತ್ನಿಯ ಸಂಬಂಧ ಮೊದಲೇ ನಿರ್ಧಾರವಾದಂತೆ ಸೂಚಿಸುತ್ತದೆ... ಏಳೇಳು ಜನ್ಮದ ಸಂಬಂಧ ಅಂತಾರಲ್ಲ.. ಹಾಗೆ ( ಏಳೇ ಯಾಕೋ ಗೊತ್ತಿಲ್ಲ...ಕೆಲ ಸಲ ನನ್ನಹೆಂಡತಿ ಏಳೇಳು ಜನ್ಮಕ್ಕೂ ನೀವೇ ನನ್ನ ಗಂಡ ಎಂದು ಹೇಳಿದಾಗ.. ನಾನು ದೇವರನ್ನು ಕೇಳಿದ್ದಿದೆ....ಇದೇ 7 ನೇ ಜನ್ಮ ಆಗಲೀಂತ...ಇದು ನನ್ನಾಕೆಗೆ ಇಷ್ಟವಾಗದ್ದು..ಮುನಿಸು ತರುವಂತದ್ದು...ಅದಕ್ಕೇ.. ನನಗೆ ಇಷ್ಟವಾಗುವುದು). ಎಲ್ಲಿಯೋ ಇದ್ದ ಹೆಣ್ಣು... ಇನ್ನೆಲ್ಲಿಯೋ ಇದ್ದ ಗಂಡಿನೊಡನೆ ಒಂದಾಗಿ ಬಾಳುವ ಈ ಮದುವೆ ಎನ್ನುವ ಸಂಬಂಧ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ... ಎತ್ತಣ ಮಾಮರ ಎತ್ತಣ ಕೋಗಿಲೆ .. ಎಷ್ಟು ಸೂಕ್ತ ಅಲ್ಲವೇ?

ಕೆ.ಎಸ್. ನ.  ಹೇಳಿದಂತೆ... ಒಂದು ಗಂಡು ಒಂದು ಹೆಣ್ಣು ಹೇಗೋ ಸೇರಿ ಹೊಂದಿಕೊಂಡು, ಕಾಣದೊಂದ ಕನಸು ಕಂಡು..... ಜೀವನ ಮುಂದುವರಿಸೋದು....

ಈ ಚಿಂತನೆ ನನ್ನ ಮನಸ್ಸಿನಲ್ಲಿ ಬರಲು ಕಾರಣ ಫೆಬ್ರವರಿಯಲ್ಲಿ ನಾನು ಭಾಗವಹಿಸಿದ ಎರಡು ಮದುವೆಗಳು.... ಎರಡರಲ್ಲೂ ಒಂದಷ್ಟು ಸಾಮ್ಯ.... ಹೆಣ್ಣು ಗಂಡು ಇಬ್ಬರೂ ವಿದೇಶದಲ್ಲಿ ನೆಲೆಸಿರುವವರು...    ಒಂದು ಜೋಡಿ ನೆಲೆಸಿರುವುದು ಇಂಗ್ಲೆಂಡ್ ನಲ್ಲಿ... ಇಬ್ಬರೂ ಕರ್ನಾಟಕ ಮೂಲದವರು.... ಇನ್ನೊಂದು ಜೋಡಿ ನೆಲೆಸಿರುವುದು ನೆದರ್ಲ್ಯಾಂಡ್ ನಲ್ಲಿ... ಹೆಣ್ಣು ಕರ್ನಾಟಕದ ಮೂಲ ..ಗಂಡು ನೆದರ್ಲ್ಯಾಂಡ್ ನ ಮೂಲ...ಎರಡೂ ಮದುವೆ ಮಾತ್ರ..ಇಲ್ಲಿ... ನಮ್ಮ ಸಂಪ್ರದಾಯದಂತೆ... ನೆದರ್ಲ್ಯಾಂಡಿನ ಗಂಡಿನ ಮನೆಯವರು ನಮ್ಮ ಸಂಪ್ರದಾಯದ ವೇಷ ಭೂಷಗಳಲ್ಲಿ ( ಹೆಂಗಸರು ಸೀರೆ ಕುಪ್ಪಸ ಜಡೆ ಅದಕ್ಕೆ ಹೂ, ಹಣೆಯಲ್ಲಿ ಕುಂಕುಮ... ಹಾಗೆ ಗಂಡಸರು ಕಚ್ಚೆ ಪಂಚೆ ಚುಬ್ಬ... ಅಪ್ಪಟ ನಮ್ಮ ಸಂಸ್ಕೃತಿಯ ಪ್ರತಿಬಿಂಬ) ಕಂಗೊಳಿಸಿದ್ದು, ಉತ್ಸಾಹದಿಂದ ಎಲ್ಲಾ ಶಾಸ್ತ್ರ ಸಂಪ್ರದಾಯಗಳಲ್ಲಿ ಭಾಗವಹಿಸಿದ್ದು ಒಂದು ಸುಂದರ ನೋಟವಾಗಿತ್ತು. ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ತಿಳಿಯುವ ಅವರ ಕುತೂಹಲ ಹಾಗೂ ಶ್ರದ್ಧೆ.... ಅದರಲ್ಲೂ ಕಾಶಿಯಾತ್ರೆಯ ಸಮಯ... ಓದು ಮುಂದುವರಿಸಲು ಹೊರಟಿರುವ ಗಂಡಿಗೆ.. ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡುವ ಹೆಣ್ಣಿನ ಅಪ್ಪ ಅಮ್ಮನ ಅಭಿಲಾಷೆಗೆ ಒಪ್ಪುವ ಗಂಡಿನ ಮನಸ್ಥಿತಿ.... ತುಂಬಾ ತಮಾಷೆಯಿಂದ ಕೂಡಿತ್ತು. 

ಇದನ್ನೇ ಅಲ್ಲವೇ ಋಣಾನುಬಂಧ ಎನ್ನುವುದು.....ಎತ್ತಣಿಂದೆತ್ತ ಸಂಬಂಧವಯ್ಯ...

ಹೆಣ್ಣು ಗಂಡು ಪರಸ್ಪರ ಜೀವನ ಸಂಗಾತಿಗಳು ಎನ್ನುವ  ಪರಿಕಲ್ಪನೆ ನಮ್ಮ ಸಂಪ್ರದಾಯದ್ದು... ಹಾಗೂ ಅನೂಚಾನವಾಗಿ ನಡೆದುಕೊಂಡು ಬಂದದ್ದು... ಆದರೆ ಈಗಿನ ಪರಿಸ್ಥಿತಿಯಲ್ಲಿ .. ಋಣಾನುಬಂಧ ಎನ್ನುವ ಅನುಬಂಧ ಜೀವನ ಪೂರ್ತಿಯದಲ್ಲ ..ಆದರೆ ಕ್ಷಣಿಕ ಎಂದುಗೋಚರಿಸುತ್ತಿದೆ.... ಆಪ್ತ ಸಮಾಲೋಚಕನಾಗಿ ನಾನು ಕಂಡ ಬಹಳ ಜೋಡಿಗಳು... ಬೇರೆಯಾಗುವ ಮನಸ್ಸು ಉಳ್ಳವರು... ಹಾಗಾಗಿಯೇ ವಿವಾಹ ವಿಚ್ಛೇದನಕ್ಕಾಗಿಯೇ ಒಂದು ನ್ಯಾಯಾಲಯ ಮೀಸಲಾಗಿರಿಸುವ ಪರಿಸ್ಥಿತಿ.... ಮದುವೆ ಎನ್ನುವ ಪರಿಕಲ್ಪನೆಯ ಮೂಲ ಸ್ರೋತವೇ ಬತ್ತಿ ಹೋದಂತೆ ಆಗಿದೆ. ಇದಕ್ಕೆ ಕಾರಣ.. ಅಹಂ... ಹಾಗಾಗಿ ನಾನೇ ಏಕೆ ಸೋಲಬೇಕು... ಹೊಂದಿಕೊಳ್ಳಬೇಕು ಎನ್ನುವ ಮನೋಭಾವ ಇಬ್ಬರಲ್ಲೂ ಅತಿಯಾಗಿ ಬೆಳೆದಿದೆ... ಹೆಣ್ಣು ತನ್ನ ಕಾರ್ಯಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟು... ಹಣ ಸಂಪಾದನೆ ಪ್ರಾಮುಖ್ಯವಾಗಿ ಸಂಸಾರದ ಕಡೆಗೆ ಗಮನ ಕಡಿಮೆಯಾಗಿರುವುದೂ ಒಂದು ಕಾರಣ ಎಂದು ನನ್ನ ಅನಿಸಿಕೆ ( ಈ ಅನಿಸಿಕೆಯನ್ನು ಒಪ್ಪದ ಹಲವಾರು ಮಂದಿ ಹೆಣ್ಣು ಮಕ್ಕಳು ನನ್ನ ಮೇಲೆ ಕೋಪಗೊಂಡು ಮುಗಿ ಬಿದ್ದಾರು ಎಂಬ ಆತಂಕ ನನ್ನದು). ಕಾಲಾಯ ತಸ್ಮೈ ನಮಃ.

ಮೇಲೆ ಹೇಳಿದ ಮದುವೆಗಳನ್ನು ಗಮನಿಸಿದಾಗ ನಾವು ನಮ್ಮ ಮನೋಭಾವದಲ್ಲಿ ಸಾಕಷ್ಟು ವಿಶಾಲ ಚಿಂತನೆಯನ್ನು ಬೆಳೆಸಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆ ಏಳುತ್ತದೆ.... ವಿಶಾಲ ಮನೋಭಾವ ಇಲ್ಲದಿದ್ದರೂ ಸಹ... ತುಂಬಾ ಇದ್ದ ಸಂಕುಚಿತ ಭಾವನೆ ಕಡಿಮೆಯಾಗಿದೆ ಎಂದು  ಖಂಡಿತವಾಗಿ ಹೇಳಬಹುದು. (ಸ್ವಯಿಚ್ಛೆಯಿಂದಾಗಲಿ ಅಥವಾ ಸಂದರ್ಭದ/ಪರಿಸ್ಥಿತಿಯ ಇತಿಮಿತಿಗಳಿಂದಾಗಲಿ ಆಗಿರಬಹುದು)    

ಒಂದು ಕಾಲವಿತ್ತು... ಆಗ ಇದ್ದದ್ದು ಜಾತಿ ಅಲ್ಲ ನಾಲ್ಕು ವರ್ಣ.. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ.... ಈ ವರ್ಣಗಳ ಮಧ್ಯೆ ಮದುವೆ ನಿಷಿದ್ಧವಲ್ಲದಿದ್ದರೂ... ಅದನ್ನು ವರ್ಣಸಂಕರ ಎಂದು ಕರೆದರು. ನಂತರದ ಕಾಲಮಾನದಲ್ಲಿ ಜಾತಿಗಳು ಹುಟ್ಟಿಕೊಂಡು... ಒಂದೇ ಜಾತಿಯಲ್ಲೂ ಪಂಗಡ ಉಪ ಪಂಗಡಗಳು ಬೆಳೆದು... ಅವುಗಳ ಮಧ್ಯದ ಮದುವೆಯೂ ಒಪ್ಪದ ಮನಸ್ಥಿತಿ ಯಾಕೆ ಬಂದಿತೋ? ಬಹುಶಃ ಮೇಲು-ಕೀಲುಗಳ ಪರಿಗಣನೆ ಇದಕ್ಕೆ ಮುಖ್ಯ ಕಾರಣ ಇರಬಹುದು.... ಅಥವಾ ಸಂಬಂಧಗಳು ನಮ್ಮ ನಮ್ಮಲ್ಲೇ ಇರಲಿ ಎನ್ನುವ ಆಸೆಯೋ?

ಅಂತರ್ಜಾತಿ ವಿವಾಹಗಳು ಈಗೀಗ ಸಾಮಾನ್ಯವಾಗಿದೆ. ನಮ್ಮ ಸಾಮಾಜಿಕ ರೀತಿ ರಿವಾಜುಗಳಲ್ಲಿ ಹೆಣ್ಣು ತನ್ನ ತವರನ್ನು ಬಿಟ್ಟು ಗಂಡನ ಮನೆಗೆ ಹೋಗಿ ಹೊಂದಿಕೊಳ್ಳಬೇಕಾದಂತ ಅವಶ್ಯಕತೆ... ಹಾಗಾಗಿ ಮನೆಯ ಜೀವನಶೈಲಿ ( ಊಟೋಪಚಾರ, ಭಾಷೆ, ಸಾಮಾಜಿಕ ಪದ್ಧತಿಗಳು) ಒಂದೇ ಆಗಿದ್ದರೆ ಹೊಂದಿಕೊಳ್ಳಲು ಸುಲಭ.... ಹೀಗಾಗಿ ಅಂತರ್ಜಾತಿ ವಿವಾಹಗಳಿಗೆ ತಂದೆ ತಾಯಿಗಳು ಒಪ್ಪುವುದು ಸುಲಭವಾಗಿರಲಿಲ್ಲ.

ಜೊತೆಗೆ ಅದೊಂದು ಸಾಮಾಜಿಕವಾಗಿ ಕಪ್ಪು ಚುಕ್ಕೆಯಾಗಿತ್ತು.... ಈಗಿನ ಸಂಸಾರದ ಕಲ್ಪನೆ ಗಂಡ ಹೆಂಡತಿ ಮತ್ತು ಅವರ ಮಕ್ಕಳು ಆದ್ದರಿಂದ ಬೇರೆ ಪರಿಸರದ ಚಿಂತೆ ಇಲ್ಲ.

ಈಗೀಗ ಹೆಣ್ಣುಗಳ ಸಂಖ್ಯೆ ಕಡಿಮೆ ಇರುವುದರಿಂದ... ಆಯ್ಕೆಗಳು ಸೀಮಿತ ಗೊಂಡಿವೆ... ಅದರಲ್ಲೂ ಹಳ್ಳಿಗಾಡಿನ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದು (ಓದಿದ ಹೆಣ್ಣು ಮಕ್ಕಳು ಹಳ್ಳಿಗೆ ಹೋಗಲು ಇಷ್ಟಪಡದೇ ಇರುವುದೂ ಒಂದು ಕಾರಣ) ಕಷ್ಟವಾಗಿದೆ.  ಚಾರಣದ ಸಮಯದಲ್ಲಿ ಕಂಡುಬಂದ ಅಂಶ... ಇಲ್ಲಿ ಹೆಣ್ಣು ಸಿಗದ ಕಾರಣ.... ಬೇರೆ ರಾಜ್ಯದ ಹೆಣ್ಣುಗಳನ್ನು ಮದುವೆಯಾದ ಪ್ರಸಂಗಗಳು... ಕೆಲವು ಹೊಂದಾಣಿಕೆಯಾಗದೆ ಇದ್ದದ್ದು ಸಹ... ಕೇಳಿ ಬಂತು.

ಮದುವೆಯ ವಿಚಾರವಾಗಿ... ಬಹಳಷ್ಟು ಸಲ ಮುನ್ನಡೆಗೆ ಬರುವ ಪ್ರಶ್ನೆ.... ಹಿರಿಯರು ಆಯ್ಕೆ ಮಾಡಿದ ಮದುವೆ ಹಾಗೂ ಗಂಡು-ಹೆಣ್ಣು ಪ್ರೀತಿಸಿ ಆದ ಮದುವೆ... ಯಾವುದು ಒಳ್ಳೆಯದು?   .... ಮದುವೆಯ ಸಂಬಂಧ ಚೆನ್ನಾಗಿ ಇರಬೇಕಾದರೆ... ಮುಖ್ಯವಾಗಿ ಬೇಕಾದದ್ದು ಗಂಡ ಹೆಂಡತಿಯ ಮಧ್ಯೆ ಇರುವ ಹೊಂದಾಣಿಕೆ. ಯಾವ ರೀತಿಯ ಮದುವೆಯಾದರೂ.... ಹೊಂದಾಣಿಕೆ ಇಲ್ಲದಿದ್ದರೆ ಚೆನ್ನವೆಲ್ಲಿ ಬಂತು? ಮದುವೆ ಹೇಗಾಯಿತು ಅನ್ನುವ ಪ್ರಶ್ನೆ ಏಳುವುದೇ ಇಲ್ಲ... ಮದುವೆ ಎಂಬ ಬಂಧನಕ್ಕೆ ಒಳಗಾಗದೆ...( ಕೂಡಾವಳಿ ಎನ್ನಲೇ) ಸುಖ ಸಂಸಾರ ಮಾಡಿದ ಜೋಡಿಯನ್ನು ನಾನು ಕಂಡಿದ್ದೇನೆ.

ಹಾಗಾದರೆ ಜಾತಕ ನೋಡುವುದು... ಗಣ ಗುಣಗಳ ಹೊಂದಾಣಿಕೆ... ಬೇಕೇ? ... ಇದು prevention is better than cure... ಎನ್ನುವ ಭಾವದಿಂದ ಬಂದಿರಬಹುದು.... ತಮಗಿದ್ದ ...ಜಾತಕ ವಿಶ್ಲೇಷಣೆ ಮಾಡುವ ಜ್ಞಾನದಿಂದ ಆದಷ್ಟು ಹೊಂದಾಣಿಕೆಯಾಗುವ ಜೋಡಿಯನ್ನು ಗುರುತಿಸುವ ಒಂದು ಕ್ರಮ. ಇಲ್ಲಿ ಮುಖ್ಯವಾದ ಸಂಗತಿ ಜಾತಕದ ಪ್ರಸ್ತುತತೆ... ಹುಟ್ಟಿದ ಸಮಯವನ್ನು ನಿಖರವಾಗಿ ಗುರುತಿಸುವುದು... ಇದರಲ್ಲೇ ತಪ್ಪಾಗಿದ್ದರೆ.... ಆಗ ದೇವರೇ ಗತಿ.

ಗೋತ್ರದ ವಿಚಾರಕ್ಕೆ ಬಂದರೆ... ಸ್ವಗೋತ್ರದ ಮದುವೆ ನಿಷಿದ್ಧ. ಇದು ವೈಜ್ಞಾನಿಕವಾಗಿಯೂ ಒಪ್ಪಿತವಾದ ಮಾತು. ಹತ್ತಿರದ(ರಕ್ತ) ಸಂಬಂಧದಲ್ಲಿ ಮದುವೆಯಾದ ದಂಪತಿಗಳಿಗೆ ಹುಟ್ಟಿದ ಮಕ್ಕಳು.. ಬುದ್ಧಿಮಾಂದ್ಯರಾಗಿರುವುದು ಕಂಡು ಬಂದಿದೆ.... ಆದರೂ ಕೆಲ ಸಂದರ್ಭದಲ್ಲಿ.... ಅನುಕೂಲಕ್ಕಾಗಿ... ಬೇರೆಯವರಿಗೆ ದತ್ತು ಕೊಟ್ಟಂತೆ ಮಾಡಿ ಸ್ವಗೋತ್ರದ ಇಕ್ಕಟ್ಟಿನಿಂದ ಹೊರಬಂದ ಪ್ರಸಂಗಗಳನ್ನೂ ನೋಡಿದ್ದೇನೆ.

ಚಿಕ್ಕಂದಿನಲ್ಲಿ ಮದುವೆ ಎಂದರೆ... ಮನಸ್ಸಿಗೆ ಬರುತ್ತಿದ್ದದ್ದೆ ಲಾಡು ಊಟ.... ಹೊಸ ಬಟ್ಟೆ, ಹಾಗೂ ಬಂದ ಮಕ್ಕಳೊಡನೆ ಆಟ. ನಮ್ಮಪ್ಪ ಶಾನುಭೋಗರಾಗಿದ್ದ ಕಾರಣ... ಬಹಳಷ್ಟು ಮದುವೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು.... ನಾನು ಜೊತೆಯಲ್ಲಿ ಹೋಗುತ್ತಿದ್ದೆ... ಬಹಳ ಕಡೆ ಹಾಲು  ಕುಡಿದು ಬಾಳೆ ಹಣ್ಣು ಮಾತ್ರ ತಿಂದು ಬರುತ್ತಿದ್ದ ನೆನಪಿದೆ( ಈಗ ಅರ್ಥವಾಗುತ್ತೆ ಅದು ಜಾತಿಯ ಕಾರಣ ಎಂದು)...

ನನ್ನ ವಯಸ್ಸಿಗೆ ನಿಲುಕದಿದ್ದರೂ ಸಹ.. ಕೇಳಿದ್ದ ಮಾತು ...ಒಬ್ಬ ಮೇಲು ವರ್ಗದ ಹುಡುಗಿ ಕೆಳ ವರ್ಗದ ಹುಡುಗನ ಜೊತೆ ಓಡಿ ಹೋದಳು ಎಂಬ ಗುಸು-ಗುಸು( ಜಾತಿಯ ಹೆಸರನ್ನು ಬೇಕೆಂದೇ ಮುಚ್ಚಿಟ್ಟಿದ್ದೇನೆ)... ಹಾಗೂ ಮದುವೆಯಾದ ಒಬ್ಬ ಹೆಣ್ಣು ಇನ್ನೊಬ್ಬರ ಜೊತೆ ಬೆಂಗಳೂರಿಗೆ ಓಡಿ ಹೋದದ್ದು.... ಹಾಗೆ ಅಲ್ಲಿಯೇ ಒಳ್ಳೆಯ ಸಂಸಾರ ಮಾಡಿದ್ದನ್ನು ಕಂಡಿದ್ದೇನೆ.

ಹೆಣ್ಣು ಗಂಡಿನೊಡನೆ ಪರಾರಿಯಾಗುವ (ಅಥವಾ ಗಂಡು ಹೆಣ್ಣನ್ನು ಓಡಿಸಿಕೊಂಡು  ಹೋಗುವ) ವಿಷಯ ಹೊಸದೇನೂ ಅಲ್ಲ... ಹಿಂದಿನಿಂದಲೂ ನಡೆದುಕೊಂಡು ಬಂದದ್ದೆ. ಗಂಡು-ಹೆಣ್ಣು ಒಪ್ಪಿ.. ಯಾರ ಅಪ್ಪಣೆಗೂ ಕಾಯದೆ ( ಅಥವಾ ಒಪ್ಪಿಗೆ ಸಿಗದಿದ್ದರೆ) ಮದುವೆಯಾಗುವುದು ಗಾಂಧರ್ವ ವಿವಾಹ.. ಕೃಷ್ಣ ರುಕ್ಮಿಣಿ.. ಅರ್ಜುನ ಸುಭದ್ರ ಇವು ಮಹಾಭಾರತದ ಉದಾಹರಣೆಗಳು. ಗಂಧರ್ವ ವಿವಾಹಗಳು ಈಗಲೂ ನಡೆಯುತ್ತಿವೆ . ಪ್ರೇಮ ವಿವಾಹ.. ಗಂಧರ್ವ ವಿವಾಹದ ರೂಪಾಂತರ.

ಇನ್ನು ಸ್ವಯಂವರ ...ಇಲ್ಲಿ ವಧುವೇ...ತನಗೆ ಅನುರೂಪನಾದ ವರನನ್ನು ಆಯ್ಕೆಮಾಡುವ ಪ್ರಕ್ರಿಯೆ..... ಆಯ್ಕೆ ಮಾಡುವ ಅನುಕೂಲಕ್ಕಾಗಿ, ಸ್ವಯಂವರಕ್ಕೆ ಬಂದ ಗಂಡುಗಳಿಂದ ಶಕ್ತಿಪ್ರದರ್ಶನದ ನಿಬಂಧನೆಗಳು ಇರುತ್ತಿದ್ದವು.... ಈಗಲೂ ಸ್ವಯಂವರಗಳು ನಡೆಯುತ್ತಿದೆ ಎಂದೇ ನನ್ನ ಭಾವನೆ... ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ.... ಅದು ಕೆಲ ಗುಂಪುಗಳು ನಡೆಸುವ ವಧು-ವರರ ಸಮಾವೇಶದ ಮೂಲಕ.... ಈ ಸಮಾವೇಶದಲ್ಲಿ ವಧು ವರರು ಪರಸ್ಪರ ವಿಚಾರ ವಿನಿಮಯ ಮಾಡಿ ತಮ್ಮ ಇಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳಲು ಇಬ್ಬರಿಗೂ ಅವಕಾಶವಿದೆ.

ಭೀಷ್ಮ ತನ್ನ ಮೊಮ್ಮಕ್ಕಳಿಗೆ ಮದುವೆ ಮಾಡಲು... ಕಾಶಿರಾಜನ ಮೇಲೆ ಯುದ್ಧ ಮಾಡಿ ಗೆದ್ದು ತಂದ ಅಂಬೆ, ಅಂಬಿಕೆ, ಅಂಬಾಲಿಕೆ..... ಅಂಬೆಯ ಕಾರಣದಿಂದಾಗಿ ತನ್ನ ಮೃತ್ಯುವನ್ನು ತಾನೇ ಆಯ್ದುಕೊಳ್ಳುವಂತಹ ಪರಿಸ್ಥಿತಿಗೆ ತನ್ನನ್ನು ತಾನೇ ದೂಡಿಕೊಂಡವ ಭೀಷ್ಮ ಪಿತಾಮಹ.

ಕುವೆಂಪು ಪ್ರಣೀತ "ಮಂತ್ರ ಮಾಂಗಲ್ಯ" ಸಹ ಸರಳ ಮದುವೆಯ ಒಂದು ರೂಪ.

ಈಗೀಗ ಲವ್ ಜಿಹಾದ್ ಎನ್ನುವ ಒಂದು ಪ್ರಕಾರವು ಆಘಾತವನ್ನುಂಟು ಮಾಡುತ್ತಿದೆ..... ನಮ್ಮ ಹೆಣ್ಣುಮಕ್ಕಳು ತುಂಬ ಸುಲಭವಾಗಿ ಈ ಜಾಲಕ್ಕೆ ಬೀಳುತ್ತಿದ್ದಾರೆ ಎನ್ನುವುದು ಖೇದದ ವಿಚಾರ.

ಅದೊಂದು ಸಮಯ.... ನಾನು ಗುರುಗಳು ಎಂದು ತಮಾಷೆಯಾಗಿ ಕರೆಯುತ್ತಿದ್ದ ಕೃಷ್ಣಮೂರ್ತಿಯವರು.... ನನಗೆ ಮದುವೆ ಮಾಡಿಕೊಳ್ಳಬೇಡ ಎಂದು ಉಪದೇಶ(ತಮಾಷೆ ಗೆ) ಮಾಡುತ್ತಿದ್ದರು... ಅವರು ಸಿಕ್ಕಾಗ... ಶಿಷ್ಯಾ... ಮದುವೆ ...ಅಂದಾಕ್ಷಣ ನಾನು ವ್ಯಾ( ದೀರ್ಘವಾಗಿ) ಹೇಳುತ್ತಿದ್ದೆ (ವ್ಯಾ... ಅಸಹ್ಯ ಸೂಚಿಸುವ ಪದ).. ಗುರುಗಳು ಶಿಷ್ಯನ ಬಗ್ಗೆ ಹೆಮ್ಮೆ  ವ್ಯಕ್ತಪಡಿಸುವುದು.... ಸುತ್ತಲಿದ್ದವರಿಗೆಲ್ಲಾ ಕೆಲ ಸಮಯದ ನಗು. ಆದರೆ ನಾನು ಮದುವೆಯನ್ನು ಮಾಡಿಕೊಂಡೆ.... ಅದೇ ಗುರುಗಳ ಆಶೀರ್ವಾದದೊಂದಿಗೆ.

ಕೆಲವರ ಅಭಿಪ್ರಾಯದಲ್ಲಿ ಮದುವೆಯೊಂದು ಅಧಿಕ ಜವಾಬ್ದಾರಿಯನ್ನು ( ತಪ್ಪಿಸಬಹುದಾದ) ಹೊರಲು ಮಾಡಿಕೊಂಡ ವ್ಯವಸ್ಥೆ.... ಆದರೆ ನಿಜ ಜೀವನದಲ್ಲಿ ಅ ಜವಾಬ್ದಾರಿ ಜೀವನಕ್ಕೆ ಗುರಿಯನ್ನು ಕೊಡುತ್ತದೆ... ಮಕ್ಕಳು... ಅವರುಗಳ ಆಟ ಪಾಠ, ಅವರನ್ನು ಸಾಕಿ ಸಲಹುವ ಜವಾಬ್ದಾರಿ.. ಜೊತೆ ಜೊತೆಗೆ ಆ ಸಂಬಂಧಗಳಲ್ಲಿ ಸಿಗುವ ಪ್ರೀತಿ, ವಿಶ್ವಾಸ, ಅಭಿಮಾನ, ಆಸರೆ, ಕಾಳಜಿ ಎಲ್ಲವನ್ನು ಪರಸ್ಪರರಿಗೆ ಹಂಚುತ್ತದೆ.... ಇದೇ ಅಲ್ಲವೇ ಜೀವನಕ್ಕೆ ಬೇಕಾದ ಸ್ಪೂರ್ತಿ... ಹಾಗಾಗಿ ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಇದ್ದರೆ ಬಲು ಚೆನ್ನ....

ಮದುವೆ ಎರಡು ವ್ಯಕ್ತಿಗಳ ನಡುವಿನ ಸಂಬಂಧ ಆದರೂ ಸಹ ಅದು ಎರಡು ಸಂಸಾರಗಳನ್ನು ಒಟ್ಟುಗೂಡಿಸುತ್ತದೆ.

ಮದುವೆಯ ಸಮಯದ ಕೆಲ ಮಧುರ ಕ್ಷಣಗಳು ಅದರ ಹಿಂದಿರುವ ಸಂದೇಶಗಳೂ ಅರ್ಥಪೂರ್ಣ.  ನಮ್ಮ ಮದುವೆ ಮಾಡಿಸಿದವರು ಗುಂಡಣ್ಣ ( ಗುಡೇಮಾರನಹಳ್ಳಿ ಸತ್ಯನಾರಾಯಣ ಶಾಸ್ತ್ರಿಗಳು... ಸದ್ಯ ಅಮೆರಿಕದಲ್ಲಿದ್ದಾರೆ)... ಅಕ್ಕಿ ಆನೆ... ಉಪ್ಪಿನ ಆನೆ ಶಾಸ್ತ್ರದ ( ಆಟ ಎನ್ನಲೇ) ಸಮಯದಲ್ಲಿ ಹೇಳಿಕೊಟ್ಟ ...... ಎನ್ನರಸ, ಚನ್ನರಸ ಪಟ್ಟದರಸ , ಪ್ರಾಣ ಕಾಂತ , ಎನ್ನಾಜಿ ರನ್ನ , ಗುಣಸಂಪನ್ನ , ಕೀರ್ತಿ ಸಂಪನ್ನ,  ಅಷ್ಟೈಶ್ವರ್ಯ ಸಂಪನ್ನ.... ಹೀಗೆ ಕೇಳಲು ಹೇಳಲು ಚೆನ್ನ..... ಮತ್ತೊಮ್ಮೆ ಹೇಳುವಾಗ ಅದು.. ಎನ್ನರಸ , ಚನ್ನರಸ , ಎಡವರಸ ತಡವರಸ, ಮುಗ್ಗರಿಸ...ಆಗಿ ಬದಲಾಗಿ ... ಹೇಳಿಕೊಟ್ಟದ್ದನ್ನು ಹೇಳುವ ಮನೋಭಾವದಲ್ಲಿದ್ದ ಹೆಣ್ಣಿಗೆ ಅದರ ಅರ್ಥ ಗೊತ್ತಾಗುವಷ್ಟರಲ್ಲಿ... ಸುತ್ತಲಿದ್ದವರೆಲ್ಲ ನಕ್ಕು ನಲಿದಿರುತ್ತಾರೆ. ಈ ಆಟದ ಹಿಂದೆ ಒಂದು ವಿಶ್ಲೇಷಣೆ ಹೀಗಿದೆ... ಇಬ್ಬರು ಬೇರೆ ಬೇರೆ ಮನೋಭಾವದ, ಬೇರೆ ವಾತಾವರಣದಲ್ಲಿ ಬೆಳೆದ ವ್ಯಕ್ತಿಗಳು ಅಕ್ಕಿ ಮತ್ತು ಉಪ್ಪಿನಂತೆ ಬೇರೆ ಬೇರೆ ಮನೋಭಾವ... ಹಾಗಾಗಿ ಪರಸ್ಪರ ಅಭಿಪ್ರಾಯ ಭೇದ ಇರುತ್ತದೆ ಆದರೆ... ಅಕ್ಕಿಯಿಂದ ಮಾಡಿದ ಅಡುಗೆ ಉಪ್ಪಿಲ್ಲದಿದ್ದರೆ ರುಚಿಸದು... ಉಪ್ಪೊಂದೇ ತಿನ್ನಲಾಗದು.... ಪರಸ್ಪರ ಹೊಂದಾಣಿಕೆ... ಸಂಮಿಲನ ಇದ್ದರೆ ಅಡಿಗೆ ರುಚಿ.... ಅಂದರೆ ಸಂಸಾರದ ಸೊಗಸು ...ಅನುಭವಿಸಿಯೇ ತಿಳಿಯಬೇಕು.... ಅಲ್ಲವೇ?

ಸಪ್ತಪದಿ.. ಮದುವೆಯ ಉದ್ದೇಶ ಹಾಗೂ ಇಬ್ಬರ ಮಧ್ಯೆ ಪರಸ್ಪರ ಇರಬೇಕಾದ ನಂಬಿಕೆಗಳು, ಹೊಣೆಗಳು ಹಾಗೂ ಕರ್ತವ್ಯಗಳನ್ನು ವಿವರಿಸುತ್ತವೆ. ಉರುಟಣೆ ಸಮಯದ ತಮಾಷೆ ಹಾಡುಗಳು... ಅದರಲ್ಲೂ ಹೂವಿನ ಚಂಡಾಟ.... ಆ ಸಮಯದ ಹಾಡು... ಆಡೋಣ ಬಾರೋ ಪ್ರಿಯಾ... ಚಂಡಾಡೋಣ ಬಾರೋ ಪ್ರಿಯಾ... ಲಟವಾಣಿ ವನದಲ್ಲಿ... ಘಟವಾಣಿರೆಲ್ಲ ಸೇರಿ.. ಲಟವಾಣಿ ಹೂವ ಕೊಯ್ದು ಚಂಡಾ ಕಟ್ಟಾಡೋಣ..... ಎಂಥ ಕವಿತ್ವ...ಇದೆಲ್ಲಾ ಜೀವನಪರ್ಯಂತ ನೆನಪಿನಲ್ಲಿ ಉಳಿಯುವ... ಕಚಗುಳಿ ಕೊಡುವ ಸಂಗತಿಗಳು.

ಕಾಲ ಬದಲಾದಂತೆ ಮದುವೆಯ ರೀತಿ ರಿವಾಜುಗಳು ಬದಲಾಗಿವೆ... ಹಾಗಾಗಿ ಮೆಹಂದಿ, ಫೋಟೋ ಶೂಟ್... ಮುಂತಾದವುಗಳು ಹೊಸದಾಗಿ ಬಂದು ಒಂದಷ್ಟು ಹಳೆಯ ವಿಚಾರಗಳನ್ನು ಬದಿಗೊತ್ತಿವೆ..... ಇದು ಒಪ್ಪಬೇಕಾದ್ದೆ... ಕಾಲಕ್ಕೆ ತಕ್ಕಂತೆ ಬದಲಾಗು.. ಎಂಬಂತೆ. 

ಹಿಂದಿನ ಕಾಲದ ಮದುವೆಯಲ್ಲಿ ಮನೆಯವರಿಗೆ ಬಂಧು ಮಿತ್ರರಿಗೆ ..ಎಲ್ಲರಿಗೂ ಕೈ ತುಂಬಾ ಕೆಲಸ.... ಬಂದವರ ಆದರಾತಿಥ್ಯದ ಹೊಣೆಯೂ ಸೇರಿದಂತೆ.... ಈಗಿನ ಕಾಲಕ್ಕೆ ಅದೆಲ್ಲ ಇವೆಂಟ್ ಮ್ಯಾನೇಜ್ಮೆಂಟ್ ನ ಜನ ನೋಡಿಕೊಳ್ಳುತ್ತಾರೆ.... ಬಂದವರೂ ಸಹ... ಅಷ್ಟೇ ವ್ಯವಹಾರಿಕವಾಗಿರುತ್ತಾರೆ... ಮದುಮಕ್ಕಳ ಕೈಕುಲಿಕಿ.. ಊಟ ಮಾಡಿ ಹೋದರೆ ಜವಾಬ್ದಾರಿ ಮುಗಿದಂತೆ.

ಮದುವೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ....

ಹಾಗಾಗಿ ಮದುವೆ ಎಂಬ ವ್ಯವಸ್ಥೆಗೆ.... ಧನ್ಯವಾದ ಅರ್ಪಿಸುತ್ತಾ... 

ನಮಸ್ಕಾರ....



    

Comments

  1. ಉತ್ತಮ ವಾದ ಜೀವನಾನುಭವದ ಲೇಖನ

    ReplyDelete
  2. ಎನ್ನರಸ, ಚನ್ನರಸ ಪಟ್ಟದರಸ , ಪ್ರಾಣ ಕಾಂತ , ಎನ್ನಾಜಿ ರನ್ನ , ಗುಣಸಂಪನ್ನ , ಕೀರ್ತಿ ಸಂಪನ್ನ, ಅಷ್ಟೈಶ್ವರ್ಯ ಸಂಪನ್ನ ಇದೆಲ್ಲ ಎಷ್ಟು ಚೆನ್ನಾಗಿ ಹೇಳಿದ್ದೀರಾ

    ReplyDelete
  3. ನಾಗೇಂದ್ರ ಬಾಬು25 February 2024 at 13:52

    ವಿವಾಹ ಭೋಜನದ ಬಗ್ಗೆ ವಿವರಣೆ ಪ್ರಜ್ಞಾ ಪೂರಕವಾಗಿ ಬಿಟ್ಟಿದ್ದೀರಿ...ಹಾ ..ಹಾ..
    ಆದರೂ ..ಇತ್ತೀಚೆಗೆ ನಮ್ಮ ಮದುವೆ ಹಾಗೂ ಇತರ ಸಮಾರಂಭದಲ್ಲಿ ಶ್ರಮಪಟ್ಟು ತಯಾರಿಸಿದ ಪಲ್ಯ,ಕೋಸಂಬರಿ, ಗೊಜ್ಜು,ಸಿಹಿ ತಿನಿಸುಗಳನ್ನು ವ್ಯರ್ಥ ಮಾಡುವುದನ್ನು ಕಂಡು ಬಹಳ ಬೇಸರ ಆಗುತ್ತದೆ. ವಿವಾಹದ ಸಂಭ್ರಮ (ಭ್ರಮೆ) ವನ್ನು ಬಹಳ ಅಚ್ಚುಕಟ್ಟಾಗಿ ಸರಳ ಬರವಣಿಗೆಯಲ್ಲಿ ವಿವರಿಸಿದ್ದೀರಾ..ಧನ್ಯವಾದಗಳು
    ಬಾಬು

    ReplyDelete
  4. ಸಮುದ್ರದ ಉಪ್ಪಿಗೂ ಮಾವಿನ ಮರದ ತುದಿಯ ಕಾಯಿಗೂ ಸಂಬಂಧ ಬೆಸೆಯುವುದೇ ಮದುವೆಯ ಸ್ವಾರಸ್ಯ, ಗಮ್ಮತ್ತು. ಈಗ ಅದು ಮೊದಲಿನ ಸೊಗಸು, ಸೊಗಡನ್ನು ಕಳೆದುಕೊಂಡು ಯಾಂತ್ರಿಕ ಹಾಗೂ ಬರಿಯ ಆಡಂಬರದ ಆಚರಣೆಯಾಗಿಬಿಟ್ಟಿದೆ.

    ಮದುವೆಯ ಬಗ್ಗೆ ವ್ಯಾಖ್ಯಾನ,ಹಾಸ್ಯ ಲೇಪನ, ವಾಸ್ತವಿಕತೆಯ ವಿವಿಧ ಮಜಲುಗಳನ್ನು ತೆರೆದಿಟ್ಟು ಲೇಖನವನ್ನು ಶ್ರೀಮಂತಗೊಳಿಸಿದ್ದೀರಿ.

    ಮದುವೆಯಾಗಿ ಎಷ್ಟೋ ವರ್ಷಗಳಾದರೂ ಗಂಡ-ಹೆಂಡತಿಯರಲ್ಲಿ ಸಾಮರಸ್ಯ ಅಪರೂಪವಾಗಿರುವ‌ ಈ ಕಾಲದಲ್ಲಿ ಎರಡೂ ಕುಟುಂಬಗಳ ಅನ್ಯೋನ್ಯತೆ ಕನಸಿನ ಮಾತೇ ಸರಿ.

    ಆದರೂ ಜೀವನದಲ್ಲಿ ಒಮ್ಮೆ ಆಗುವ ಈ ಸಮಾರಂಭವೂ ಶಾಸ್ತ್ರೋಕ್ತವಾಗಿ ಆದರೆ ಚೆನ್ನವೆಂದು ನನ್ನ ಅಭಿಮತ. ಇದರಿಂದ ಮದುವೆಗೆ ಸಂಬಂಧಿಸಿದ ಬಹಳಷ್ಟು ಜನರಿಗೆ ಉದ್ಯೋಗ, ವ್ಯಾಪಾರಕ್ಕೆ ದಾರಿಯಾಗುತ್ತದೆಂಬುದು ಧನಾತ್ಮಕ ಅಂಶವಲ್ಲವೇ?

    ಮದುವೆಯೆಂಬುದು ಮನೆ-ಮನೆತನಗಳನ್ನು ಬೆಸೆಯುವ ಕೊಂಡಿಯಾದಾಗಲೇ ಅದರ ಮೂಲ ಉದ್ದೇಶ, ಸಾರ್ಥಕತೆ ಅಡಗಿದೆ.

    ಆದರಗಳೊಡನೆ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
    Replies
    1. ಮದುವೆಗಳಲ್ಲಿ ಕ.ಪಿ (ಕನ್ಯಾ ಪಿತೃ) ಗಳ ಕಷ್ಟಗಳನ್ನು ಸ್ವಲ್ಪ ನೆನಪು ಮಾಡಿಕೊಳ್ಳಬೇಕಿತ್ತು ಮುಗಿಯಲ್ಲ 👌👌👍

      Delete
  5. ಮದುವೆ ಒಂದು ಚಿಂತನೆ ಶೀರ್ಷಿಕೆಯು ಉತ್ತಮವಾಗಿ ಮೂಡಿ ಬಂದಿದೆ.ತಮಗೆ ಧನ್ಯವಾದಗಳು.ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಒಂದು ಮುಖ್ಯ ಘಟ್ಟ ವಾಗಿರುತ್ತದೆ.ಹಿರಿಯರು ತೀರ್ಮಾನದಂತೆ ನಡೆಸುವ ಮದುವೆ, ಪರಸ್ಪರ ಪ್ರೀತಿಸಿ ಆಗುವ ಮದುವೆ , ಅಂತರ್ಜಾತಿ ಮದುವೆ ಹಾಗೂ ಮದುವೆ ವಿಚ್ಛೇದನ ಬಗ್ಗೆ ತಿಳುವಳಿಕೆ ನೀಡಿದ್ದೀರಿ.ಯಾವುದೇ ಮದುವೆ ಆದರೂ ಪರಸ್ಪರ ಹೊಂದಾಣಿಕೆ, ಗೌರವಿಸುವುದು,ಅಹಂ ತೊರೆಯುವುದು ಇವು ಸುಖ ಸಂಸಾರದ ಸೂತ್ರಗಳು ಎಂಬುದು ಉತ್ತಮ ಸಂದೇಶವಾಗಿದೆ. ಮತ್ತೊಮ್ಮೆ ಧನ್ಯವಾದಗಳು.ದೇವೇಂದ್ರಪ್ಪ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ