ತ್ಯಾಗರಾಜರ ಆರಾಧನೆ.. ರುದ್ರಪಟ್ಟಣ

 


ಎಂದರೋ ಮಹಾನುಭಾವಲು ಅಂದರಿಕಿ ವಂದನಮು.... ಇದು ನಾನು ಬಹಳ ಸಲ ನೆನೆಸಿಕೊಳ್ಳುವುದು... ನನ್ನ ಜೀವನದಲ್ಲಿ ಬಂದು ಪ್ರಭಾವ ಬೀರಿದ ವ್ಯಕ್ತಿಗಳನ್ನು ಸ್ಮರಿಸಿದಾಗ.  ತ್ಯಾಗರಾಜರ ಈ ಕೀರ್ತನೆ ನನ್ನ ಹೃದಯಕ್ಕೆ ಬಲು ಹತ್ತಿರ (ಅದರ ಅರ್ಥವೂ ಸರಿಯಾಗಿ ಗೊತ್ತಿಲ್ಲದ ಸಮಯದಿಂದ).... ಇದು ನೆನ್ನೆ ಮೊನ್ನೆಯದಲ್ಲ ಸುಮಾರು ಅರ್ಧ ಶತಮಾನಕ್ಕೂ ಮಿಕ್ಕಿ ವರ್ಷಗಳಿಂದ. ಅದು 60ರ ದಶಕ.... ನಾನು ಬೆಂಗಳೂರಿಗೆ ಬಂದ ಹೊಸದು.... ಚಿಕ್ಕಮಾವಳ್ಳಿಯಲ್ಲಿ ಚಂದ್ರಾ ಕಲಾವಿದರು( ನನ್ನಣ್ಣಂದಿರು ಇದರ ಭಾಗ) ನಡೆಸುತ್ತಿದ್ದ ತ್ಯಾಗರಾಜರ ಆರಾಧನೆಯ ದಿನಗಳು.... ತ್ಯಾಗರಾಜರು ಯಾರೆಂದು ತಿಳಿಯದಿದ್ದರೂ...  ತ್ಯಾಗರಾಜರ ಫೋಟೋದ ಮೆರವಣಿಗೆ ಹಾಗೂ ಪಂಚರತ್ನ ಕೀರ್ತನೆಗಳ ಗಾಯನ ನನಗೆ ಮೆಚ್ಚುಗೆ. ಇದು ಸುಮಾರು ವರ್ಷ ನಡೆಯಿತು... ಯೋಗಾ ಯೋಗವೇನೋ.... ಆ ಫೋಟೋ ಇಂದಿಗೂ ನಮ್ಮ ಮನೆಯಲ್ಲಿದೆ, ಅದು ನನ್ನಲ್ಲಿರುವ ಒಂದು ಅಮೂಲ್ಯ ವಸ್ತು.  ಮನೆ ಕಟ್ಟುವಾಗ ಸಹ ಅದಕ್ಕಾಗಿಯೇ ಸ್ಥಳ ಮೀಸಲು ಮಾಡಿದ್ದು... ಅಲಂಕರಿಸಿದ್ದು, ತ್ಯಾಗರಾಜರ ಮೇಲಿನ ಭಕ್ತಿಯಿಂದ ಅಭಿಮಾನದಿಂದ.

ಹಲವು ಬಾರಿ ಟಿವಿಯಲ್ಲಿ ಪ್ರಸಾರವಾದ... ತಿರುವೈಯಾರುವಿನಲ್ಲಿ ನಡೆದ ತ್ಯಾಗರಾಜರ ಆರಾಧನೆ ನೋಡಿ ಕೇಳಿ ಸಂತೋಷಪಟ್ಟಿದ್ದೇನೆ.

ಆ ಹಾಡುಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ...ಎಂದರೋ ಮಹಾನುಭಾವುಲು... ಎರಡನೆಯದು ಸಾಧಿಂಚನೆ ಹಾಡಿನ... "ಸಮಯಾನಿಕಿ ತಗು ಮಾಟಲಾಡೆನೇ" ಭಾಗ.

ನನ್ನ ವ್ಯವಹಾರಿಕ ನಿವೃತ್ತಿಯ ಸಮಯದಲ್ಲಿ... ಒಂದು ನಿರ್ಧಾರ... ಕೀಬೋರ್ಡ್ ಕಲಿಯುವುದು. ಮಹತ್ತರವಾದ ಆಸೆ ಎಂದರೆ... ಎಂದರೋ ಮಹಾನುಭಾವುಲು ಹಾಗೂ ಸಾಧಿಂಚನೆ ಹಾಡುಗಳನ್ನು ನುಡಿಸುವುದು.. ಈ ಗುರಿಯೊಂದಿಗೆ ಹೊರಟ ನಾನು ಕರೋನಾ ಸಮಯದಲ್ಲಿ ಈ ಎರಡು ಹಾಡುಗಳಿಗೂ ಸಾಕಷ್ಟು ಹತ್ತಿರ ಆದೆನೆಂಬ ಸಂತೋಷ ಇದೆ... ಆ ದಿಕ್ಕಿನ ಪಯಣ ತುಂಬಾ ದೂರ ಇದೆ... 

ಮೊನ್ನೆ ಭಾನುವಾರ... ರುದ್ರಪಟ್ಟಣಕ್ಕೆ ಪ್ರಯಾಣ... ಇದೇನು ಮೊದಲ ಸಲವಲ್ಲ.. ಅಲ್ಲಿ ನಡೆಯುವ ತ್ಯಾಗರಾಜ ಆರಾಧನೆ.. ಹಾಗೂ ಸಂಗೀತೋತ್ಸವಕ್ಕೆ ಸಾಕಷ್ಟು ಸಲ ಹೋಗಿದ್ದೇನೆ. ಈ ಸಲದ ತ್ಯಾಗರಾಜ ಆರಾಧನೆ ನನ್ನ ಪಾಲಿಗೆ ವಿಶಿಷ್ಟವಾಗಿತ್ತು. ಕಾರಣ ಪಂಚರತ್ನ ಕೀರ್ತನೆಯ ಸಮೂಹ ಗಾಯನ ಗೋಷ್ಠಿಯಲ್ಲಿ ಎರಡು ಹಾಡುಗಳನ್ನು ಸ್ವರಪ್ರಸ್ತಾರದಿಂದ ಗುರುತಿಸಿ, ಹಾಡನ್ನು ನಾನು ಸಹ ಗುನುಗಲು ತಕ್ಕಮಟ್ಟಿಗೆ ಸಾಧ್ಯವಾಯಿತು ಎನ್ನುವ ಖುಷಿಯಿಂದ. ಇದು ಸಾಧ್ಯವಾದದ್ದೇ ನನ್ನ ಕೀಬೋರ್ಡ್ ಕಲಿಕೆಯಿಂದ...

ರುದ್ರಪಟ್ಟಣದ ಪರಿಚಯವಾದದ್ದು ನಾನು ಶಹಾಬಾದಿನಲ್ಲಿದ್ದಾಗ...R L ಶ್ರೀನಿವಾಸ್  ಮೂಲಕ...ಆತ ರುದ್ರಪಟ್ಟಣ ಮೂಲದವನು. ಅವನ ಮೂಲಕ ಬೆಂಗಳೂರಿನಲ್ಲಿ ಪರಿಚಯವಾದದ್ದು RK ಶ್ರೀನಿವಾಸ ಮೂರ್ತಿ( ಈಗ ನಮ್ಮೊಂದಿಗಿಲ್ಲ) ಹಾಗೂ RK ಅನಂತಪದ್ಮನಾಭ ಸಹೋದರರು .  RK ಅನಂತಪದ್ಮನಾಭ (ಅನಂತ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸದಲ್ಲಿದ್ದರು.... ಅವರ ಸಂಗೀತದ ಅಭಿರುಚಿ ನನಗೆ ಪರಿಚಯವಿರಲಿಲ್ಲ. 

ದಶಕಗಳ ನಂತರ ಮತ್ತೆ ಭೇಟಿಯಾಗಿದ್ದು ಇನ್ನೊಬ್ಬ ರುದ್ರಪಟ್ಟಣ ಮೂಲದ ಸ್ನೇಹಿತ ಕೃಪ ಅವರ ಕಡೆಯಿಂದ.... ಹಳೆಯ ಪರಿಚಯದ ಹೊಸ ಅನಾವರಣ...

RK ಅನಂತಪದ್ಮನಾಭ.....   ಗಾನಕಲಾಭೂಷಣ ವಿದ್ವಾನ್. RK ಪದ್ಮನಾಭ (RKP ಎಂದು ಚಿರಪರಿಚಿತ)ಎಂಬ ಹೆಸರುಗಳಿಸಿ ಬೆಳೆದಿದ್ದ ಪರಿ/ ಗಳಿಸಿದ್ದ ಜನ ಸಂಪತ್ತು... ಜೊತೆ ಜೊತೆಗೆ ಇದ್ದ ಸರಳತೆ ನನಗೆ ಮೆಚ್ಚುಗೆ ಆಯ್ತು. ಆ ಕಾರಣದಿಂದ ರುದ್ರಪಟ್ಟಣದ ಕಾರ್ಯಕ್ರಮಗಳು ಇನ್ನೂ ಹತ್ತಿರವಾದವು.

ಕೃಪನ ಕೃಪೆಯಿಂದ ಮೊದಲ ಬಾರಿ ರುದ್ರಪಟ್ಟಣಕ್ಕೆ ಒಂದು ಪ್ರವಾಸದಂತೆ ನಮ್ಮ ಸ್ನೇಹಿತರ ಗುಂಪು ಹೋಗಿದ್ದೆವು. ಅಲ್ಲಿನ ಕಾವೇರಿ ನದಿಯ ಘಟ್ಟ... ಸಪ್ತಸ್ವರ ಧ್ಯಾನ ಮಂದಿರ, ದ್ವಾದಶ ಸ್ವರಸ್ತಂಭ ಮಂಟಪ.... (ಇಲ್ಲಿ 12 ಸ್ತಂಭಗಳಲ್ಲಿ 12 ಸ್ವರಗಳು ಬರುವಂತೆ ಅಣಿ ಮಾಡಲಾಗಿದೆ.... ಇದನ್ನು ಪ್ರಯತ್ನ ಮಾಡಿ ನೋಡಿ ಸಂತೋಷಪಟ್ಟವನು ನಾನು. ) ಸ್ನೇಹಿತ RL ಶ್ರೀನಿವಾಸ್ ಇದ್ದ ಮನೆ, ರಾಮ ಮಂದಿರ... ಅದರಲ್ಲಿ ಹಾಕಿದ್ದ ಫೋಟೋಗಳಲ್ಲಿ ನಾನು ಕಂಡು ಪುಳಕಿತನಾಗಿದ್ದು...ಆರ್ ಎನ್ ಗುಂಡುರಾಮಯ್ಯನವರ ಫೋಟೋ.  ಬೆಂಗಳೂರಿಗೆ ಬಂದು ರಾಷ್ಟ್ರೀಯ ವಿದ್ಯಾಲಯ ಸೇರಿದಾಗ.. ಮೊದಲನೆಯ ಪಾಠ ಮಾಡಿದ ಕನ್ನಡದ ಮೇಷ್ಟ್ರು... ಪ್ರೀತಿಯRNG ..ಅವರ ಸಾಮಾನ್ಯವಾದ ನಗುಮುಖ, ಪೇಟ, ಕಚ್ಚೆಪಂಚೆ, ಕೋಟು ಇಂದಿಗೂ ಕಣ್ಣ ಮುಂದಿದೆ. ಅವರ ಕೋಪದ ಮುಖವನ್ನು ಒಮ್ಮೆ ನೋಡಿದ ನೆನಪಿದೆ... ಹೀಗೆ ಮನಸ್ಸಿಗೆ ಹಿತ ನೀಡಿದ ಸಂಗತಿಗಳು.  


 ಸಪ್ತಸ್ವರ ಧ್ಯಾನ ಮಂದಿರದ ಪರಿಕಲ್ಪನೆ  ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸಲು ಆರ್ ಕೆ ಪಿ ಯ ಪಾತ್ರವನ್ನು ತಿಳಿದ ಮೇಲೆ ಅವರ ಇನ್ನೊಂದು ಮುಖದ ಅನಾವರಣವಾಯಿತು.  ಪ್ರಾಯಶಃ ಒಂದು ತೆರನ ಹೆಮ್ಮೆ... ಇಂತಹ ವ್ಯಕ್ತಿ ನನಗೆ ತಕ್ಕಮಟ್ಟಿನ ಪರಿಚಯ ಎಂದು.

ಒಂದು ವರ್ಷದ ಸಂಗೀತೋತ್ಸವದಲ್ಲಿ... ರಾತ್ರಿ ನಡೆದ ತೆಪ್ಪೋತ್ಸವ...ಕಾವೇರಿ ನದಿಯ ನೀರಿನ ಮೇಲೆ ಸರ್ವಾಲಂಕಾರ ಭೂಷಿತ ದೇವರ, ಜೊತೆಗೆ ಝಗಮಗಿಸುವ ವಿದ್ಯುತ್ ದೀಪಾಲಂಕಾರ....ನದಿಯ ದಂಡೆಯ ಮೇಲೆ ಸಂಗೀತದ ಸೇವೆ....ಕಣ್ಣಿಗೆ..ಕಿವಿಗೆ ರಸದೌತಣ.

ಇದು ನನ್ನ ಬಾಲ್ಯದ ದಿನಗಳ ಅನುಭವಗಳೊಡನೆ ಥಳಕು ಹಾಕಿತು....ನನ್ನೂರು ದೊಡ್ಡಜಾಲದ ಕೆರೆ ತುಂಬಿದಾಗ ...ಖಾಲಿ ಡ್ರಮ್ಮು ಬೊಂಬುಗಳನ್ನು ಉಪಯೋಗಿಸಿ ತೆಪ್ಪವನ್ನು ಕಟ್ಟಿ, ಮಾವು ಬೇವುಗಳಿಂದ ಅಲಂಕರಿಸಿ, ಪೆಟ್ರೋಮ್ಯಾಕ್ಸ್ ದೀಪಗಳಿಂದ ಬೆಳಗಿಸಿ, ದೇವರನ್ನು ಇಟ್ಟು ಕೆರೆಯಲ್ಲಿ ಒಂದು ಸವಾರಿ... ಅದೇ ತೆಪ್ಪೋತ್ಸವ.... ತೆಪ್ಪದ ಮೇಲೆ ಹಾಡುವವರು ಹಾರ್ಮೋನಿಯಂ ಸಮೇತ... ಎಲ್ಲರಿಗೂ ಕೇಳುವಷ್ಟು ಜೋರಾಗಿ ..ಐದನೇ ಮನೆಯಲ್ಲಿ ಹಾಡುತ್ತಿದ್ದದ್ದು. ಕಲಿಯುಗದಲಿ ಹರಿ ನಾಮವ ನೆನೆದರೆ ಕುಲ ಕೋಟಿಗಳು ಉದ್ಧರಿಸುವವೋ ರಂಗ.... ಈ ಹಾಡನ್ನು ಹಾಡಿದ್ದು ಮೋಟ ಶಂಕರಪ್ಪ ಅವರು... ಇಂದಿಗೂ ಗುನುಗುನಿಸುವ ಹಾಗಿದೆ.

ನಾವು ರುದ್ರಪಟ್ಟಣದಲ್ಲಿ ಉಳಿದಿದ್ದ ಒಂದು ಶನಿವಾರ ಸಂಜೆ... ಒಂದು ಸಣ್ಣ ರಥದಲ್ಲಿ ದೇವರ ಫೋಟೋ ಇಟ್ಟು ಭಜನೆಯೊಂದಿಗೆ ಊರ ಬೀದಿಯಲ್ಲಿ ಮೆರವಣಿಗೆ ಮಾಡಿ... ಬಹಳಷ್ಟು ಮನೆಗಳಲ್ಲಿ ಹಣ್ಣು ಕಾಯಿ ಕೊಟ್ಟು ಪೂಜೆ ಮಾಡಿಸಿದ್ದು ನೋಡಿ... ನಮ್ಮ ಹಿಂದಿನ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡಿರುವುದು ಹೆಮ್ಮೆ ಎನಿಸಿತು....

ನಮ್ಮೂರಲ್ಲಿಯೂ ಸಹ ನಾವುಗಳು ಶನಿವಾರ ಸಂಜೆ ಗರುಡಗಂಬ ಹಾಗೂ ಬೇರೆ ಬೇರೆ ದೇವರ ಫೋಟೋ ಹೊತ್ತು ಊರ ಬೀದಿಯಲ್ಲಿ ಮೆರವಣಿಗೆ ಮಾಡಿ ನಂತರದ ಚರ್ಪು ತಿನ್ನುವ ಸಂಭ್ರಮ.. ವಾವ್... ಸವಿ ನೆನಪು...

ನಮ್ಮಲ್ಲಿ  ಒಂದು ವಿಶಿಷ್ಟ ಸಂಪ್ರದಾಯ... ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮದ ಕೊನೆಯಲ್ಲಿ ಪ್ರಸಾದ ಹಂಚುವುದು... ಅಥವಾ ಹೊಟ್ಟೆ ತುಂಬಾ ಸಿಹಿಯೊಂದಿಗೆ ಊಟವನ್ನು ಹಾಕುವುದು...... ಅದರಂತೆ ತ್ಯಾಗರಾಜರ ಆರಾಧನೆಯ ಕೊನೆಯ ಹಂತವೂ ಊಟವೇ ಆಗಿತ್ತು.. ಅದು ಎಂತಹ ಊಟ ಸ್ವಲ್ಪ ಸಾವಧಾನದಿಂದ... ಓದಿ.

ಹಸನಾಗಿ ಹರಡಿದ ಬಾಳೆ ಎಲೆಯ ಮೇಲೆ ಬಡಿಸಿದ್ದು ...ಮೊದಲ ಹಂತದಲ್ಲಿ ಉಪ್ಪಿನಕಾಯಿ, ಚಟ್ನಿ, ಪಾಯಸ, ಎರಡು ತರದ ಕೋಸಂಬರಿ, ಏಳು ತರದ ಪಲ್ಯಗಳು, ಹಪ್ಪಳ ಸಂಡಿಗೆ,  ಬಾಳಕ,  ಚಕ್ಕುಲಿ ಕೋಡುಬಳೆ, ಮೂರು ತರದ ಗೊಜ್ಜುಗಳು... ಅದರಲ್ಲೂ ಊರ್ವಟ್ಲು ಎನ್ನುವ ಸಂಕೇತಿ ಸಮಾಜದ ವಿಶೇಷ ಗೊಜ್ಜು... ಅನ್ನ ತೊವ್ವೆ ತುಪ್ಪ.... ಊಟ ಶುರುವಾದ ನಂತರ ಸಾಲು ಸಾಲಾಗಿ ಬಂದದ್ದು ಹಲಸಿನಕಾಯಿ ಹುಳಿ, ಅನ್ನ ತಿಳಿಸಾರು, ಸಿಗ್ಗಿನ ಉಂಡೆ,ರವೆ ಉಂಡೆ, ಆಂಬೊಡೆ, ಉದ್ದಿನವಡೆ, ಇಡ್ಲಿ, ಬಿಸಿಬೇಳೆ ಬಾತ್, ಪುಳಿಯೋಗರೆ, ಹೊಯ್ಗಡುಬು ಸಿಹಿ ಮತ್ತು ಖಾರದ್ದು( ಕೊಟ್ಟೆ ಕಡುಬು), ಜಿಲೇಬಿ,ಬೋಂಡಾ ಒಗ್ಗರಣೆ ಹಾಕಿದ ಮಜ್ಜಿಗೆ... ಅನ್ನ ಮೊಸರು... ಇದೆಲ್ಲದರ ಜೊತೆಗೆ ಆರ್ ಕೆ ಪಿ ಅವರ ವೈಯುಕ್ತಿಕ ವಿಚಾರಣೆ... ಬಲವಂತದಿಂದ ವಡೆ ತಿನ್ನಿಸುವ ಪರಿ.... ಇಷ್ಟೆಲ್ಲಕ್ಕೂ ನನ್ನ ಹೊಟ್ಟೆಯಲ್ಲಿ ಜಾಗ ಹೊಂದಿಸುವುದೇ ದೊಡ್ಡ ಸವಾಲಾಯಿತು.. ಹೇಗೋ ಮುಗೀತು ಅನ್ನುವಷ್ಟರಲ್ಲಿ.... ಬಂದಿದ್ದು ಐಸ್ ಕ್ರೀಮ್ ಹಾಗೂ ಬೀಡಾ ( ಬಿಸಿಲಿತ್ತು.. ತಂಪಾಗಿರಲಿ ಎಂದಿರಬೇಕು... ಇವೆರಡನ್ನೇ ನಾನು ತಿನ್ನದೇ ಬಿಟ್ಟಿದ್ದು).

ಆರಂಭವಾದ ಎಲ್ಲವೂ ಅಂತ್ಯವಾಗಲೇಬೇಕು ಎನ್ನುವುದು ಜಗದ ನಿಯಮ... ಜೊತೆಗೆ ಎಲ್ಲ ಅಂತ್ಯವೂ ಮತ್ತೊಂದು ಆರಂಭಕ್ಕೆ ಮುನ್ನುಡಿ ಎಂಬುದು ಅಷ್ಟೇ ಸತ್ಯ..... ಅದರ ಸೂಚನೆಯಾಗಿ ಸಿಕ್ಕಿದ್ದೇ 10.5 2024 ರಿಂದ 19.5.2024 ರ ವರೆಗೆ ರುದ್ರಪಟ್ಟಣದಲ್ಲಿ ನಡೆಯುವ ಮುಂದಿನ ಸಂಗೀತೋತ್ಸವದ ಆಹ್ವಾನಪತ್ರಿಕೆ.... ನೋಡೋಣ.... ಹೇಗಿದೆಯೋ ಆ ಸಮಯ...

ಅಂದರಿಕಿ ವಂದನಮು....ನಮಸ್ಕಾರ. 





    

Comments

  1. ಸೂಪರ್ ಸರ್ ತುಂಬಾ ಚೆನ್ನಾಗಿ ಬರೆದಿದ್ದೀರಿ ದೇವರು ಕೊಟ್ಟ ವರ ನಿಮಗೆ ಸಾಧನೆ ಇನ್ನು ಇದೆ ಮಾಡಿ

    ReplyDelete
  2. ಮುಟ್ಟಿದ್ದಕ್ಮೂರು ವರುಷ ಎಂಬಂತೆ, ನಂಗೆ 3 ವರ್ಷ ತ್ಯಾಗರಾಜರ ಆರಾಧನೆ ತಪ್ಪಿದೆ ಸರ್, ಬಹಳ ನೆನಪುಗಳು ನುಗ್ಗಿ ಬಂದವು

    ReplyDelete
  3. ಜಯಸಿಂಹ14 February 2024 at 12:55

    ಅಣ್ಣನಿಗೆ ಸಮಯಾನಿಕಿ ತಗು ಮಾಟಲಾಡೆನೆ ಸಂದರ್ಭಕ್ಕೆ ಶೋಭಿಸುವ ಮಾತುಗಳು ಕರಗತ. ವಂದನಮುಲು.

    ReplyDelete
  4. Sogasagide chikkappa

    ReplyDelete
  5. ಮಾನ್ಯರೇ,

    ಅದರ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವರಿಗೂ ಸ್ವಲ್ಪವಾದರೂ ಸವಿಯುಣಿಸುವ ಶಕ್ತಿ ಸಂಗೀತಕ್ಕಿದೆ ಎಂಬುದು ನಿಜ.

    ರುದ್ರಪಟ್ಟಣದಲ್ಲಿ ಇಂದಿಗೂ ಬಹಳಷ್ಟು ಸಂಗೀತಗಾರರ ಕುಟುಂಬವಿದೆಯೆಂದು ಕೇಳಿದ್ದೇನೆ. ನಿಮಗೆ ಸಂಗೀತದ ಒಲವಿದೆಯೆಂದು ತಿಳಿದು ಸಂತೋಷವಾಯಿತು. ಅಲ್ಲಿಗೆ ಆಡುಮುಟ್ಟದ ಸೊಪ್ಪಿಲ್ಲ ಎಂದಂತಾಯಿತು.

    ಸಂಗೀತದಷ್ಟೇ ಒಳ್ಳೆಯ ಭೋಜನದ ಸವಿಯನ್ನೂ ಸಹಾ ಉಣಬಡಿಸಿದ್ದೀರಿ. ಓದುಗರು ಬಾಯಿಚಪ್ಪರಿಸಿರುತ್ತಾರೆ.

    ನಿರೂಪಣಾ ಶೈಲಿ ಎಂದಿನಂತೆ ವಾಚಕರನ್ನು ಹಿಡಿದಿಟ್ಟುಕೊಳ್ಳುತ್ತದೆ.ಮುಂದಿನ ಲೇಖನಕ್ಕೆ ಕಾಯುವಂತೆ ಮಾಡುತ್ತಿದೆ.

    ವಂದನಾಪೂರ್ವಕವಾಗಿ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
  6. Very well written. Congratulations

    ReplyDelete
  7. M V Chandrashekhar14 February 2024 at 20:08

    Superb Bhava, truly very well written, Congratulations 👏👏

    ReplyDelete
  8. All is well.To read,write, and listen,is appreciated.Namaste.God bless you and your family.

    ReplyDelete
  9. My knowledge of music is ಶೂನ್ಯ. Still, the blog was a ಸುಶ್ರಾವ್ಯ music to me. Like hearing a melodious song , I read the blog repeatedly, especially the detailed list of delicacies offered to you at the ತ್ಯಾಗರಾಜರ ಆರಾಧನೆ as the concluding distribution of ಪ್ರಸಾದ! Mind boggling and mouth watering!! Some stories we read again and again for the language and curiosity it generates in every line to continue to read. And this blog tops such stories. By the by, please make a blog on the receipe of all the items you have mentioned. Some we have tasted and a few never heard.
    Thanks for sharing sir!
    ವಾಸು

    ReplyDelete
  10. ನಾಗೇಂದ್ರ ಬಾಬು19 February 2024 at 08:53

    ಎಂದಿನಂತೆ ಸರಳವಾಗಿ ಮನಮುಟ್ಟುವಂತೆ ವಿವರಣೆ, ಸಂಗೀತ ನಮ್ಮ ಸಂಸ್ಕೃತಿ ಕೊಟ್ಟ ಒಂದು ದಿವ್ಯ ಔಷಧಿ...ಇತ್ತೀಚೆಗೆ ಸ್ವಲ್ಪ ಮರೆಯಾದಂತೆ ಕಂಡರೂ ಮತ್ತೊಮ್ಮೆ ನಮ್ಮ ಯುವ ಸಮುದಾಯ ಅದರತ್ತ ಆಕರ್ಷಿತ ಆಗುತ್ತಿರುವುದು ಸಂತಸದ ವಿಷಯ...ನಿಮ್ಮ ಬಹಳಷ್ಟು ಬರಹಗಳ ನಾಲಿಗೆಯಲ್ಲಿ ನೀರೂರಿಸುವ ವಿವಿಧ ಭಕ್ಷಗಳ ವಿವರಣೆ ಅಮೋಘ.....ಹೀಗೆ ಇನ್ನಷ್ಟು ಉತ್ತಮ ಬರಹಗಳನ್ನು ನಿರೀಕ್ಷೆ ಮಾಡುತ್ತೇನೆ
    ಬಾಬು

    ReplyDelete
  11. ತ್ಯಾಗರಾಜರ ಆರಾಧನೆ -ರುದ್ರಪಟ್ಟಣ ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ರುದ್ರಪಟ್ಟಣದ ಕಾವೇರಿ ನದಿ ತೀರದಲ್ಲಿ ನಡೆದ ಆರಾಧನೆ ಮತ್ತು ಸಂಗೀತ ಉತ್ಸವ ಹಾಗೂ ಅದರಲ್ಲಿ ತಮ್ಮ ಸಕ್ರಿಯ ಭಾಗವಹಿಸುವಕೆ ತಿಳಿದು ಬಹಳ ಖುಷಿಯಾಯಿತು.ತಮ್ಮ ಊರಿನ ಕೆರೆಯಲ್ಲೂ ಸಹ ನಡೆಯುವ ಉತ್ಸವವನ್ನೂ ತಿಳಿದು ಬಹಳ ಸಂತೋಷವಾಯಿತು.ರುದ್ರಪಟ್ಟಣದಲ್ಲಿ ಆರಾಧನೆ ನಂತರ ನೀಡುವ ಪ್ರಸಾದದಲ್ಲಿ 30ಕ್ಕಿಂತಲೂ ಹೆಚ್ಚಿನ ಐಟಂಗಳನ್ನು ತಿಳಿದು ಬಾಯಲ್ಲಿ ನೀರೂರಿಸುತ್ತದೆ.ರುದ್ರಪಟ್ಟಣದ ನನ್ನ ಸ್ನೇಹಿತ ಪಂಡರಿನಾಥ್(ಅವರು ಈಗಿಲ್ಲ) ಅವರ ನೆನಪುಗಳು ಬಂದವು.ಹಾಗು ಅರಕಲಗೂಡು ತಾಲೂಕಿನಲ್ಲಿ (ರುದ್ರಪಟ್ಟಣ ಇದೇ ತಾಲೂಕು)ನಾನು 1976-77 ರಲ್ಲಿ ಕೆಲಸ ಮಾಡಿದ ನೆನಪುಗಳು ಮತ್ತು ನನ್ನ ಮಗನಾದ ಸುನೀಲ್ 2020-21ರಲ್ಲಿ

    ReplyDelete
  12. ಬ್ಯಾಂಕಿನಲ್ಲಿ ಕೆಲಸ ಮಾಡಿದ ನೆನಪುಗಳು ಬಂದವು.ತಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು. ದೇವೇಂದ್ರಪ್ಪ

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ