ಎಳ್ಳು ಬೆಲ್ಲ - ಒಳ್ಳೆ ಮಾತು
ಸತತವಾಗಿ ಎರಡನೆಯ ವರ್ಷವೂ ಸಂಕ್ರಾಂತಿ ಹಬ್ಬದ ಆಚರಣೆ ಇಲ್ಲ.... ಹತ್ತಿರದವರ ಸಾವಿನ ಸೂತಕದ ಛಾಯೆ ಹಬ್ಬದ ಮೇಲೆ. ಆದರೆ ನೆನಪಿನ ಓಟದ ಮೇಲೆ ಯಾವ ಸೂತಕದ ಛಾಯೆಯೂ ಬೀಳದು..
ಸಂಕ್ರಾಂತಿ ಎಂದರೆ ಮೊದಲು ಹೊಳೆಯುವುದೇ.. ಎಳ್ಳು ಬೆಲ್ಲ.... ಜೊತೆ ಜೊತೆಗೆ ಸಕ್ಕರೆ ಅಚ್ಚು, ಕಬ್ಬು.... ನಂತರ.. ಕುಸುರಿ ಎಳ್ಳು, ಯಲಚೀ ಹಣ್ಣು, ಅವರೆಕಾಯಿ, ಗೆಣಸು, ಕಳ್ಳೆಕಾಯಿ... ಹೀಗೆ..
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು... ಎನ್ನುವುದು ಸಾಂಪ್ರದಾಯಿಕವಾಗಿ ಹೇಳುವ ಮಾತು... ಆದರೆ ಎಳ್ಳು ಬೆಲ್ಲ ತಿಂದಾಗ ಮಾತ್ರ ಒಳ್ಳೆಯ ಮಾತೇ... ಬೇರೆಲ್ಲ ತಿಂದಾಗ ಬೇಡವೇ... ಇದು ನನ್ನನ್ನು ಕಾಡುವ ಪ್ರಶ್ನೆ... ಯಾಕೋ ಸಮಂಜಸವಾದ ಉತ್ತರ ನನಗಿನ್ನೂ ಸಿಕ್ಕಿಲ್ಲ... ಯಾರಾದರೂ ಹೇಳಬಹುದೇ..
ಎಳ್ಳು ಈ ಹವಾಮಾನಕ್ಕೆ ಬೇಕಾದ ಎಣ್ಣೆಯ ಅಂಶವನ್ನು ಹೊಂದಿರುವ ಧಾನ್ಯ... ಹಾಗಾಗಿ ಅದನ್ನು ತಿನ್ನುವುದು ಒಳ್ಳೆಯದು. "ಕೊಟ್ಟು ತಿನ್ನು" ಎನ್ನುವುದು ಹಿಂದಿನವರು ರೂಢಿಸಿಕೊಂಡಿದ್ದ ಒಂದು ಸಂಪ್ರದಾಯ. ಹಾಗಾಗಿ ಬೆಳೆದ ಎಳ್ಳನ್ನು ಬೇರೆಯವರಿಗೆ ಕೊಡಬೇಕು. ಆದರೆ ಇಲ್ಲೊಂದು ಸಂದಿಗ್ಧ... ಎಳ್ಳನ್ನು ಯಾರೂ ಸುಲಭವಾಗಿ ದಾನವಾಗಿ ತೆಗೆದುಕೊಳ್ಳಲು ಒಪ್ಪುವುದಿಲ್ಲ... ಅದು ಋಣದ ದ್ಯೋತಕವೂ ಹೌದು... ಅದಕ್ಕೆ ನಮ್ಮ ಪೂರ್ವಜರಿಗೆ ನಾವು ತಿಲತರ್ಪಣ ಕೊಡುವುದು... ಬರೀ ಎಳ್ಳು ತಿನ್ನಲು ಸಹ ರುಚಿಕರವಾಗಿರುವುದಿಲ್ಲ... ಹಾಗಾಗಿ ಅದಕ್ಕೆ ಒಂದಷ್ಟು ವ್ಯಂಜನಗಳು (ಬೆಲ್ಲ, ಒಣಕೊಬ್ಬರಿ ಚೂರುಗಳು, ಕಡಲೆಬೀಜ, ಹುರಿಗಡಲೆ) ಸೇರಿಸಿ ಅದನ್ನು ತಿನ್ನಲು ರುಚಿಕರವಾಗಿ ಮಾಡಿ ಕೊಡುವುದು. ಗಮನಿಸಿ ...ಎಳ್ಳು ಕೊಟ್ಟಾಗ, ಸಾಮಾನ್ಯವಾಗಿ ನಾವು ಸಹ ಅವರಿಗೆ ಎಳ್ಳನ್ನು ಕೊಡುವುದು ವಾಡಿಕೆ... ಇದು ಅಲ್ಲಿಗಲ್ಲಿಗೆ ಋಣ ಸಂದಾಯ ಮಾಡಿದಂತೆ ಆಗಬಹುದು ಎಂದೇ ಇರಬೇಕೆಂದು ನನ್ನ ಅನಿಸಿಕೆ.
ನಾವು ಆಚರಿಸುವ ಬೇರೆಲ್ಲ ಹಬ್ಬವು... ಅದರದರ ದಿನಕ್ಕೆ ತಕ್ಕಹಾಗೆ ಬರುತ್ತದೆ (ಚಾಂದ್ರಮಾನ ಪಂಚಾಂಗದ ಅನುಸಾರ... ಚಂದ್ರ ಮತ್ತು ಭೂಮಿಯ ನಡುವಿನ ನಂಟು) ಆದರೆ ಸಂಕ್ರಾಂತಿ ಮಾತ್ರ ಜನವರಿ 14 ಅಥವಾ 15 ಇರುತ್ತದೆ.. ಕಾರಣ ಇದು ಸೂರ್ಯ ಮತ್ತು ಭೂಮಿಯ ಮಧ್ಯೆ ಇರುವ ನಂಟಿನ ಪರಿಣಾಮ. (ಸೌರಮಾನ ಪದ್ಧತಿ)... ಕ್ಷಮಿಸಿ... ತುಂಬಾ ವೈಜ್ಞಾನಿಕ ಎನಿಸಿದರೆ.
ಚಿಕ್ಕಂದಿನ ಸಂಕ್ರಾಂತಿ.. ಶುರು ಆಗುತ್ತಿದ್ದದ್ದು.. ಕಬ್ಬು ತಿನ್ನುವುದರ ಮೂಲಕ.... ಅಮ್ಮ ಹೆಚ್ಚಿ ಕೊಟ್ಟ ಕಬ್ಬಿನ ಚೂರುಗಳನ್ನು ತಿನ್ನುವುದು...ಮೊದಲ ಹಂತ.. ನಂತರದ ದಿನಗಳಲ್ಲಿ.. ಸಾಧ್ಯವಾದಷ್ಟು ಉದ್ದವಾದ ಕಬ್ಬಿನ ಜಲ್ಲೆಯನ್ನು.. ಹಲ್ಲಿನಿಂದ ಸಿಗಿದು.. ಸಿಪ್ಪೆ ತೆಗೆದು... ರಸವನ್ನು ಜಗಿದು ಜಗಿದು ಆಸ್ವಾದಿಸುವ ಖುಷಿ... ಬಲ್ಲವನೇ ಬಲ್ಲ ಬೆಲ್ಲದ ಸವಿಯ.... ಕಬ್ಬು ತಿನ್ನುವುದರಲ್ಲೂ ಗೆಳೆಯರ ಮಧ್ಯದಲ್ಲಿ ಪೈಪೋಟಿ ಇರುತ್ತಿತ್ತು. ಕಬ್ಬು ಜಗಿದು ತಿಂದಾಗ ಹಲ್ಲುಗಳು ಥಳಥಳ ಹೊಳೆಯುತ್ತದೆಂದು ನಮಗೆ ಹೇಳುತ್ತಿದ್ದದ್ದು. ಇನ್ನು ಆಲೆಮನೆಗೆ ಹೋಗುವ ಸಂಭ್ರಮ.. ಕಬ್ಬನ್ನು ನುರಿಯುತ್ತಿದ್ದ ಜಾಗದಿಂದಲೇ ಕಬ್ಬಿನ ರಸವನ್ನು ಹಿಡಿದು ಕುಡಿಯುವುದು.. ಪಾಕ ಹದಕ್ಕೆ ಬರುತ್ತಿದ್ದಾಗಲೇ ಒಂದಷ್ಟು ಬೆಲ್ಲವನ್ನು ಸವಿಯುವುದು.... ಒಂದು ತಟ್ಟೆಯಲ್ಲಿ ಕಡಲೆ ಬೀಜ.. ಹುರಿಗಡಲೆ... ಕೊಬ್ಬರಿ ಚೂರುಗಳನ್ನು ಹರಡಿ ಅದರ ಮೇಲೆ ಬೆಲ್ಲದ ಪಾಕವನ್ನು ಸುರಿದು " ಪಾಕಿನಪೊಪ್ಪು" ಮಾಡಿಕೊಂಡು ತಿನ್ನುವುದು.... ಪಾಕವನ್ನು ಅಚ್ಚಿಗೆ ಹೊಯ್ದು ತಣ್ಣಗಾದ ಮೇಲೆ ಅದನ್ನು ತಿನ್ನುವುದು... ಹೀಗೆ ವೈವಿಧ್ಯಮಯ ತಿನ್ನಾಟ.. ಈಗಲೂ ಯಾವುದಾದರೂ ಆಲೆ ಮನೆ ಕಂಡಾಗ ಒಳನುಗ್ಗುವ... ಸಾಧ್ಯವಾದಷ್ಟು ಆಸ್ವಾದಿಸುವ ಅಭ್ಯಾಸ ಇದೆ.
ಹೆಣ್ಣು ಮಕ್ಕಳ ಎಳ್ಳು ಬೀರುವ ಸಂಭ್ರಮ ಯಾವಾಗಲೂ ಚೆನ್ನ. ಕ್ರೋಶ ಹಾಕಿ ತಯಾರು ಮಾಡಿದ ಹೊದ್ದಿಕೆಗಳನ್ನು ತಟ್ಟೆಯ ಮೇಲೆ ಮುಚ್ಚಿಕೊಂಡು ಹೋಗಿ ಕೊಟ್ಟುಬರುವುದು... ಇಲ್ಲಿ ತಮ್ಮ ಕೌಶಲ್ಯದ ಪ್ರದರ್ಶನ ಸಹ ಇರುತ್ತಿತ್ತು.. ನೋಡಿದವರು ಸಹಜವಾಗಿ ಮೆಚ್ಚಿ ಭೇಷ್ ಎನ್ನುತ್ತಿದ್ದದ್ದು ಒಂದು ಸೌಜನ್ಯ... ಕೆಲವರಲ್ಲಿ ಅದು ಅಸೂಯೆಯನ್ನು ಮೂಡಿಸಿದ್ದೂ ಉಂಟು.
ಮದುವೆಯಾದ ಮೊದಲ ಐದು ವರ್ಷ... ಐದು ಜನರಿಗೆ.. ವಿಶೇಷ ಬಾಗಿನ ಕೊಡುವುದು ಸಂಕ್ರಾಂತಿ ಹಬ್ಬದ ಒಂದು ಸಂಪ್ರದಾಯ. ಇದರಲ್ಲಿ ಮೊದಲನೆಯ ವರ್ಷ 5 ಹಣ್ಣು... ಹಾಗೆ ಹೆಚ್ಚಿಸಿಕೊಂಡು ಐದನೇ ವರ್ಷಕ್ಕೆ 25 ಹಣ್ಣು ಕೊಡುವುದು ವಾಡಿಕೆ. ಪಾಪ ಗಂಡ 125 ಬಾಳೆಹಣ್ಣನ್ನು ಹೊತ್ತು ಹೆಂಡತಿಯ ಜೊತೆ ಓಡಾಡುವ ಕಾಯಕ (ಅನಿವಾರ್ಯವೂ ಸಹ).
ಇಂಥ ಒಂದು ಸಮಯದಲ್ಲಿ ನನ್ನಣ್ಣ ಸತ್ತಿ ಸಾರ್ ಕೊಟ್ಟ ಸಲಹೆ... ಬಾಳೆಹಣ್ಣಿನ ಬದಲು ದ್ರಾಕ್ಷಿ ಹಣ್ಣು ಕೊಟ್ಟರೆ ಏನಾಗುತ್ತೆ? ಕೊಡಬಹುದಲ್ಲ ಅದೂ ಹಣ್ಣೇ.... ಒಪ್ಪಿದವರು ಯಾರೂ ಕಾಣೆ.
ಹೊಸ ಮಗುವನ್ನು ಹೊತ್ತ ದಂಪತಿಗಳು.. ತಮ್ಮ ಪರಿಚಯದವರ ಮನೆಗಳಿಗೆ ಹೋಗಿ ಎಳ್ಳು ಬೀರಿ ಬರುವ ಅನುಭವ ಮರೆಯಲಾಗದ್ದು. ಈ ಸಮಯದಲ್ಲಿ ಪುಟ್ಟ ಬೆಳ್ಳಿ ಬಟ್ಟಲನ್ನು ಅಥವಾ ಕೃಷ್ಣನ ಬೆಳ್ಳಿಯ ಗೊಂಬೆಯನ್ನು ಕೊಡುವ ಪರಿಪಾಠವೂ ಇದೆ.
ನನ್ನೂರು ದೊಡ್ಡಜಾಲದಲ್ಲಿದ್ದ ಸಮಯದಲ್ಲಿ.. ಸಂಕ್ರಾಂತಿಯ ಒಂದು ಆಕರ್ಷಣೆ... ಎತ್ತು ಹಸು ಕರುಗಳ ಅಲಂಕಾರ... ಅದರಲ್ಲೂ ಜೋಡೆತ್ತುಗಳಿಗೆ ಮಾಡುತ್ತಿದ್ದ ಅಲಂಕಾರ ನೋಡಲು ಸಂಭ್ರಮ... ಯಾರ ಎತ್ತುಗಳು ಸುಂದರವಾಗಿ ಕಾಣುತ್ತಿವೆ ಎಂದು ನಮ್ಮಲ್ಲೇ ಚರ್ಚೆ. ಸಂಜೆ ಕಿಚ್ಚು ಹಾಯಿಸುವುದು ಒಂದು ವಿಶೇಷ ಕಾರ್ಯಕ್ರಮ .... ಇದರಲ್ಲಿ ದನ ಕರುಗಳು ಬೆಂಕಿಯ ಜ್ವಾಲೆಗಳ ಮೂಲಕ ಹಾದು ಹೋಗಬೇಕು... ಹಾಗಾದಾಗ ಚಳಿಗಾಲದಲ್ಲಿ ಅವುಗಳ ಮೈ ಮೇಲೆ ಕೂತ " ಉಣ್ಣೆ" ಎಂಬುವ ಒಂದು ಹುಳ ನಾಶವಾಗುವುದೆಂದು ಕೇಳಿದ್ದೇನೆ.
ಮಲ್ಲಪ್ಪ... ನಮ್ಮೂರಿನ ಎಲ್ಲ ದನುಕರುಗಳ ಮೇಯಿಸುವಿಕೆಯ ಜವಾಬ್ದಾರಿಯನ್ನು ಹೊತ್ತವ. ಬೆಳಿಗ್ಗೆ ಎದ್ದು ಕೈ ಕಾಲು ಮುಖ ತೊಳೆದು ಹಣೆಗೆ ನಾಮವನ್ನು ಹಾಕಿಕೊಂಡು... ಸೂರ್ಯನಿಗೆ ನಮಸ್ಕಾರ ಮಾಡಿ..( ಊಟ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ) ಊರಿನ ಬೀದಿಯಲ್ಲಿ ಹೊರಟರೆ ಎಲ್ಲರೂ ದನಗಳನ್ನು ಆತನ ಮಂದೆಯೊಳಕ್ಕೆ ಸೇರಿಸುತ್ತಿದ್ದರು. ಊರ ಹೊರಗೆ ಹೋಗುವಷ್ಟರಲ್ಲಿ ದನಕರುಗಳ ಒಂದು ದೊಡ್ಡ ಮಂದೆಯೇ ಇರುತ್ತಿತ್ತು. ಹತ್ತಿರದ ಕುರುಚಲ ಕಾಡಿಗೆ (ದಿನ್ನೆ ಎಂದು ಕರೆಯುತ್ತಿದ್ದ ತಾಣ) ಬಂದು ಸಂಜೆಯ ತನಕ ಮೇಯಲು ಬಿಟ್ಟು ನಂತರ ಎಲ್ಲವನ್ನು ಊರಿಗೆ ತಲುಪಿಸುವ ಜವಾಬ್ದಾರಿ ಆತನದು. ಸಂಕ್ರಾಂತಿಯ ದಿನ.. ಊರ ಹೊರಗಿದ್ದ ಕಾಟಿಮರಾಯನ ಹುತ್ತದ ಬಳಿ ಮಂದೆಯನ್ನು ಇಟ್ಟುಕೊಂಡು... ಕಿಚ್ಚು ತಯಾರಾದ ಸುದ್ದಿ ಸಿಕ್ಕಿದ ಬಳಿಕ ದನಗಳ ಮಂದೆಯನ್ನು ಕರೆತಂದು ಊರ ಮುಂದೆ ಹಾಕಿದ ಕಿಚ್ಚು... ಸಾಲು ಬೆಂಕಿಯನ್ನು ದಾಟುವಂತೆ ಮಾಡುವುದು.... ಊರ ಜನರೆಲ್ಲರ ಸಹಕಾರದಿಂದ. ಬೆಂಕಿಗೆ ಭಯ ಬಿದ್ದು ಓಡುವ ಕರುಗಳನ್ನು... ಹಿಡಿದು ಬೆಂಕಿಯ ಕಡೆಗೆ ಬಲವಂತದಿಂದ ಓಡಿಸುತ್ತಿದ್ದದ್ದನ್ನು ನೋಡಿ ನಕ್ಕು ಖುಷಿಪಟ್ಟದ್ದು ಎಷ್ಟು ಬಾರಿಯೋ.
ಇನ್ನು ರೈತನ ಸುಗ್ಗಿಯ ಸಂಭ್ರಮ ಹೇಳತಿರದು... ಸಂಕ್ರಾಂತಿಗೆ ಸ್ವಲ್ಪ ಮುಂಚೆ ತಾನು ಬೆಳೆದ ಪೈರುಗಳನ್ನು ತಂದು ಕಣದಲ್ಲಿ ಹಾಕಿ ಕಾಳುಗಳನ್ನು ಬೇರ್ಪಡಿಸಿ ಕಣದ ಮಧ್ಯೆ ರಾಶಿ ಹಾಕಿ.... ರಾತ್ರಿ ಆದ ನಂತರ ರಾಶಿಯ ಪೂಜೆ.... ಕಣವನ್ನು ಬೆಳಗಿಸಲು ಹಚ್ಚುತ್ತಿದ್ದ ದೀಪಗಳು/ ಪಂಜಿನ ಬೆಳಕಿನ ಮಧ್ಯೆ... ನೋಡಿದ್ದು ಈಗಲೂ ಕಣ್ಣು ಕಟ್ಟಿದಂತಿದೆ.
ರಾಶಿಯ ಮೇಲೆ ಹೂವಿನ ಅಲಂಕಾರ, ಮಂಗಳಾರತಿ ಆದನಂತರ ಅದನ್ನು ಅಳೆದು ಮೂಟೆಗೆ ತುಂಬುವುದು. ಅಳೆಯಲು ಉಪಯೋಗಿಸುತ್ತಿದ್ದ ಕೊಳಗ (ಸುಮಾರು 10 ಅಳತೆಯ ಸೇರು ಹಿಡಿಯುವಂತದು).. ಮೊದಲ ಕೊಳಗದ ಎಣಿಕೆ 'ಲಾಭ' ದಿಂದ ಶುರುವಾಗುತ್ತಿತ್ತು... (ಒಂದು ಎಂದು ಎಣಿಸುವುದು ನಿಶಿದ್ಧ).. ಅದೊಂದು ಅಪರಿಮಿತ ನಂಬಿಕೆ, ಲಾಭ ಆಗುವುದೆಂದು.
ಎಳ್ಳು ತಿನ್ನುವ ವಿಷಯಕ್ಕೆ ಬಂದಾಗ... ನಾನು ಮಾಡ್ತಾ ಇದ್ದಿದ್ದು.. ಬಹಳಷ್ಟು ಎಳ್ಳನ್ನ ಕೆಳಗಡೆ ಬಿಟ್ಟು ಬೇರೆ ಎಲ್ಲವನ್ನೂ ತಿನ್ನೋದು..... ಸಕ್ರೆ ಅಚ್ಚಂತೂ ಪ್ರಿಯ.... ಅದರಲ್ಲೂ ಕೋಳಿ ಆಕಾರದ ಅಚ್ಚನ್ನು ತಮಾಷೆ ಮಾಡಿಕೊಂಡು ತಿನ್ನುತ್ತಿದ್ದದ್ದು ಇನ್ನೂ ನೆನಪಿದೆ. ನಮ್ಮಪ್ಪನಿಗೆ ಹಲ್ಲುಗಳು ಬೇಗ ಇಲ್ಲವಾದ ಕಾರಣ... ಎಳ್ಳನ್ನು ಕುಟ್ಟಾಣಿಯಲ್ಲಿ ಕುಟ್ಟಿ ಪುಡಿ ಮಾಡಿ ಕೊಡುತ್ತಿದ್ದದ್ದೂ ಉಂಟು.
ಶಹಾಬಾದಿನಲ್ಲಿದ್ದಾಗ... ನನ್ನ ಸ್ನೇಹಿತ ಜೀವನ್ ಜೋಶಿ... ಈಗ ಅವನಿಲ್ಲ.... ಮೊದಲ ಸಲ.. ಸಣ್ಣ ಎಳ್ಳಿನ ಪಟ್ಟಣಕೊಟ್ಟು " ತಿಲ್ಗುಳ್ ವ್ಯಾಳಾ.. ಗೂಡ್ ಗೂಡ್ ಬೋಲಾ" ಎಂದು ಹೇಳಿ ಅದರ ಅರ್ಥವನ್ನು ತಿಳಿಸಿದಾಗ... ಅದು ನಾವು ಹೇಳುವ "ಎಳ್ಳು ತಿಂದು ಒಳ್ಳೆ ಮಾತಾಡು" ಎನ್ನುವ ಪ್ರತಿರೂಪವೇ ಎಂದು ತಿಳಿದದ್ದು.
ಚಳಿಗಾಲ ಮುಗಿದು ಬೇಸಿಗೆಕಾಲ ಶುರುವಾಗುವ ಸಮಯ... ಜೊತೆಗೆ ಉತ್ತರಾಯಣ ಪುಣ್ಯಕಾಲದ ಪ್ರಾರಂಭ. ಉತ್ತರಾಯಣ ಪುಣ್ಯ ಕಾಲದಲ್ಲಿ ಸಾಯುವುದು.. ಸ್ವರ್ಗಕ್ಕೆ ಹೋಗುವ ರಹದಾರಿ ಎನ್ನುವ ನಂಬಿಕೆ. ಹಾಗಾಗಿಯೇ ಇಚ್ಛಾಮರಣಿಯಾದ ಭೀಷ್ಮ ಉತ್ತರಾಯಣ ಕಾಲಕ್ಕಾಗಿ ಕಾದು ಪ್ರಾಣತ್ಯಾಗ ಮಾಡಿದ್ದು.
ಸಂಕ್ರಾಂತಿಯ ಇನ್ನೊಂದು ವಿಶೇಷ ಅಡಿಗೆ.. ಸಿಹಿ ಮತ್ತು ಖಾರ ಹುಗ್ಗಿ. ಅದರಲ್ಲೂ ಹಿದುಕಿದ ಅವರೆಕಾಳು ಹಾಕಿ ಮಾಡಿದ ಹುಗ್ಗಿಯಂತೂ ನನಗಿಷ್ಟ. ನಾನು ಬೆಳಗಿನ ವಾಯು ವಿಹಾರಕ್ಕೆ ಹೋಗುವ ತಿಮ್ಮೇಶ ಪ್ರಭು ಉದ್ಯಾನವನದ ಹರಿಹರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿಯ ತನಕ ಒಂದು ತಿಂಗಳ ಕಾಲ ಬೆಳಿಗ್ಯೆ ಹುಗ್ಗಿಯ ಪ್ರಸಾದ ಖಾತ್ರಿ.
ಇನ್ನು ಪ್ರಸಿದ್ಧ ಗವಿ ಗಂಗಾಧರ ದೇವಸ್ಥಾನದಲ್ಲಂತೂ ಸಂಕ್ರಾಂತಿಯ ದಿನ ಈಶ್ವರ ಲಿಂಗದ ಮೇಲೆ ಸೂರ್ಯನ ಬೆಳಕಿನ ಕಿರಣ ಬೀಳುವ ಸಂಭ್ರಮ ನೋಡಲು ಅದೆಷ್ಟು ಭಕ್ತರು ಕಾತುರತೆಯಿಂದ ಕಾಯುತ್ತಾರೆ. ನಾನಂತೂ ನನ್ನ 13 ನೆಯ ವಯಸ್ಸಿನಲ್ಲಿ ಗರ್ಭಗುಡಿಯಲ್ಲೇ ಲಿಂಗದ ಪಕ್ಕದಲ್ಲಿ ನಿಂತು ಆ ಕ್ಷಣವನ್ನು ಆನಂದಿಸಿದ ಭಾಗ್ಯವಂತ.
ಈ ಸಮಯದಲ್ಲೇ ಅಯ್ಯಪ್ಪ ಭಕ್ತರು ಮಾಲೆ ಹಾಕಿ, ಭಜನೆಗಳನ್ನು ಮಾಡಿ, ಶಬರಿಮಲೆ ಯಾತ್ರೆಗೆ ಹೊರಡುವ ಸಮಯ... ಸಂಕ್ರಾಂತಿಯಂದು ಮಕರ ಜ್ಯೋತಿಯನ್ನು ನೋಡಿ ಬರುವ ಸಂಭ್ರಮ.
ಇಂದಿನ ಕಾಲಮಾನದಲ್ಲಿ ಮನೆಯಲ್ಲಿ ಎಳ್ಳು ಮಾಡುವ ಸಂಭ್ರಮದಿಂದ ವಂಚಿತರಾಗುವವರು ಬಹಳ ಮಂದಿ ಮಹಿಳೆಯರು... ಕಾರಣ ಏನೇ ಇರಲಿ. ಇದು ಮತ್ತಷ್ಟು ಮಂದಿ ಮಹಿಳೆಯರಿಗೆ ಎಳ್ಳು ಮಾಡಿ ಹಣ ಸಂಪಾದಿಸುವ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ.
ವಿಜಯನಗರದ ಕಾಲದಲ್ಲಿ ರಸ್ತೆ ಬದಿಯಲ್ಲಿ ಬೆಲೆಬಾಳುವ ವಸ್ತುಗಳನ್ನು ಮಾರುತ್ತಿದ್ದರಂತೆ... ಸಂಕ್ರಾಂತಿ ಕಾಲಕ್ಕೆ ಬೆಂಗಳೂರಿನ ರಸ್ತೆಯ ಬದಿಯಲ್ಲಿ ಸಿದ್ಧಪಡಿಸಿದ ಎಳ್ಳು ಮಾರಾಟಕ್ಕಿಟ್ಟಿರುವುದು ಸಾಮಾನ್ಯ ದೃಶ್ಯ. ಇದು ಆಧುನಿಕ ಮಹಿಳೆಗೆ ಸಿಕ್ಕಿರುವ ಒಂದು ವರ.
ಮೊದಲ ಸಂಕ್ರಾಂತಿಯಂದು... ಪುಟ್ಟ ಮಕ್ಕಳಿಗೆ ಸಕ್ಕರೆಯಲ್ಲಿ ಮಾಡಿದ ಗುಂಡಿನ ಸರದ ಹಾರ ಹಾಕಿ, ಕಬ್ಬಿನ ಚೂರು, ಯಲಚಿ ಹಣ್ಣು, ಕಾಸು ಎಲ್ಲವನ್ನು ಕುಡಿಕೆಯಲ್ಲಿ ಹಾಕಿ ತಲೆಯ ಮೇಲಿಂದ ಎರೆದು (ಸುರಿದು) ಆರತಿ ಮಾಡಿ ಸಂಭ್ರಮಿಸುವುದು ಒಂದು ಪರಿ.
ಈ ವರ್ಷ ಸಂಕ್ರಾಂತಿ ಹಬ್ಬಕ್ಕೆ ಮತ್ತೊಂದು ದೊಡ್ಡ ಹಬ್ಬ ಥಳಕು ಹಾಕಿಕೊಂಡಿದೆ... ಅದೇ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ.. ಬನ್ನಿ ನಾವೆಲ್ಲರೂ ಅದರಲ್ಲಿ... ಇದ್ದಲ್ಲಿಂದಲೇ ಪಾಲ್ಗೊಂಡು ಸಂಭ್ರಮಿಸೋಣ...
ಜೈ ಶ್ರೀ ರಾಮ್.
ಸಂಕ್ರಾಂತಿ ಹಬ್ಬದ ಸುಂದರ ನಿರೂಪಣೆ,
ReplyDelete50-60 ರಲ್ಲಿ ಜನಿಸಿದ ಎಲ್ಲರಿಗೂ ಬಹುತೇಕ ಹಿಂದಿನ ಆಚರಣೆ, ಸಂಭ್ರಮ ಬರೀ ನೆನಪು
ಆಧುನಿಕತೆಯ ಹೆಸರಿನಲ್ಲಿ ಸಮಯದ ಅಭಾವ ಸಣ್ಣ ಸಣ್ಣ ಖುಷಿ ಕಳೆದು ಕೊಳ್ಳುವಂತೆ ಮಾಡಿದೆ...ಹಾ...ಮುಂದಿನ ವಾರ ಎಲ್ಲ ರಾಮಮಯ...ಮತ್ತೊಂದು ಉತ್ತಮ ಲೇಖನದ ನಿರೀಕ್ಷೆ ಯೊಂದಿಗೆ
ಧನ್ಯವಾದಗಳು
ಬಾಬು
ಕುಂದಾಪುರದ ಕಡೆ ಈ ರೀತಿ ಎಳ್ಳ ಬೀರುವ ಪದ್ಧತಿ ಇಲ್ಲ. ಅಲ್ಲಿ ಸಮುದ್ರ ಸ್ನಾನ ಹಾಗೂ ದೇವಸ್ಥಾನದಲ್ಲಿಇರಿ ಉತ್ತರಾಯಣದ ಪೂಜೆ .
ReplyDeleteಆದರೆ ನಾವು ಹುಟ್ಟಿ ಬೇಳದದ್ದು ಎಲ್ಲಾ blore ಗ್ರಾಮಾಂತರ. ಇಲ್ಲಿಯ ಪದ್ಧತಿ ಅಳವಡಿಸಿಕೊಂಡು ಹಬ್ಬ ಮಾಡುತ್ತೇವೆ.ನನ್ನ ಅಮ್ಮ ನನ್ನ ಮಗನಿಗೆ ಎಲಿಚಿ ತಲೆಯ ಮೇಲೆ ಸುರಿದು ಆರತಿ ಮಾಡಿದ್ರು. ಈಗಲೂ ನಾವೆಲ್ಲ ಇಲ್ಲಿರೀತಿಯೆ ಹಬ್ಬ ಮಾಡುತ್ತೇವೆ.ಮೊನ್ನೆ ಊರಿಗೆ ಹೋದಾಗ ಎಲ್ಲುಬೆಲ್ಲ ಹಂಚಿ ಬಂದೆ. ಇಲ್ಲಿನ ಹಬ್ಬದ ಸೊಬಗನ್ನು ಚೆನ್ನಾಗಿ ವಿವರಿಸಿದ್ದೀರಿ. ಹೀಗೆ ಬರೀತಾ ಇರಿ.sir
ಸಂಕ್ರಾಂತಿಯ ದಿನ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎನ್ನುವುದು ನಮ್ಮ ಹಿರಿಯರು ಪ್ರಾಸಕ್ಕಾಗಿ ಮಾಡಿರಬಹುದೇನೋ? ಇರಲಿ.
ReplyDeleteಮಾಗಿಯ ಚಳಿಯಿಂದ ಚರ್ಮದ ರಕ್ಷಣೆಗಾಗಿ ನಮ್ಮ ಪೂರ್ವಜರು ಈ ರೀತಿಯ ಜಿಡ್ಡಿನ ಅಂಶಗಳ ಮಿಶ್ರಣ ಮಾಡಿದ್ದಾರೆ.
ನಗರ ಪ್ರದೇಶದ ಜನರಿಗಿಂತ ರೈತಾಪಿ ಜನರಿಗೆ ಇದು ಸಡಗರ, ಸಂಭ್ರಮದ ಹಬ್ಬ. ಇನ್ನು ದಾನ ಕೊಡುವುದು,ವೈದಿಕ ಕಾರ್ಯಗಳಲ್ಲಿ ಬಳಸುವುದು ಕರಿ ಎಳ್ಳು.
ಹಬ್ಬದ ಆಚರಣೆಯ ದಿನಾಂಕ ನಿಗಧಿ,ವೈಙಾನಿಕ ಅಂಶ, ಬಾಲ್ಯದ ಸವಿ ನೆನಪುಗಳು, ಕಿಚ್ಚು ಹಾಯಿಸುವುದು, ಹೆಣ್ಣು ಮಕ್ಕಳಿಗೆ ವಿಶೇಷ, ದನ ಮೇಯಿಸುವಿಕೆ, ಸಂಕ್ರಾಂತಿ ಉಡುಗೊರೆ, ಬಾಳೆ ಹಣ್ಣುಗಳ ವಿತರಣೆ ಈ ರೀತಿ ಹಲವಾರು ಶೋಭೆಗಳಿಂದ ಲೇಖನ ಅಲಂಕಾರಗೊಂಡಿದ್ದು, ಎಳ್ಳು-ಬೆಲ್ಲದ ಮಿಶ್ರಣವನ್ನು ತಿಂದಷ್ಟೇ ಸೊಗಸಾಗಿದೆ. ಅಂತೂ ಲೇಖಕರು ಕೋಳಿಯನ್ನು ಸಕ್ಕರೆ ಅಚ್ಚಿನ ರೂಪದಲ್ಲಿ ತಿಂದಿದ್ದಾರೆ!
ಇನ್ನು ಎಳ್ಳು-ಬೆಲ್ಲ ತಿನ್ನದೆಯೂ ಒಳ್ಳೆಯ ಮಾತನಾಡುತ್ತಾ, ಒಳ್ಳೆಯ ಕೆಲಸಗಳನ್ನು ಮಾಡಲು ಸಂಕಲ್ಪ ಮಾಡೋಣ.
ಜೈ ಶ್ರೀರಾಮ್.
ಒಳಿತಾಗಲಿ...ಶುಭವಾಗಲಿ.
ಗುರುಪ್ರಸನ್ನ,
Deleteಚಿಂತಾಮಣಿ
ಎಳ್ಳು ಬೆಲ್ಲ ಒಳ್ಳೆ ಮಾತು ಶೀರ್ಷಿಕೆಯು ಅನೇಕ ಉತ್ತಮ ಅಂಶಗಳಿಂದ ಚೆನ್ನಾಗಿ ಮೂಡಿ ಬಂದಿದೆ.ಧನ್ಯವಾದಗಳು.ಎಳ್ಳಿನ, ಎಳ್ಳು ಬೆಲ್ಲದ ಮಹತ್ವ,ಕಬ್ಬಿನ ಆಲೆಮನೆ, ತಮ್ಮೂರಿನಲ್ಲಿ ಎತ್ತುಗಳ ಅಲಂಕಾರ, ದನಗಳ ಕಿಚ್ಚು, ದೇವಸ್ಥಾನದಲ್ಲಿ ಹಿಚುಕಿದ ಅವರೆ ಬೇಳೆ ಪಾಯಸ, ಗಂಗಾಧರೇಶ್ವರ ಸ್ವಾಮಿ ಮೇಲೆ ಸೂರ್ಯ ದೇವನ ಕಿರಣಗಳು ಬೀಳುವುದನ್ನು ನೋಡಲು ಜನಗಳ ಕಾತರ ಹಾಗೂ ರೈತರ ಸುಗ್ಗಿಯ ಸಂಭ್ರಮದ ವಿಶೇಷತೆಗಳಿಂದ ಕೂಡಿದೆ.ಒಟ್ಟಾರೆ ಎಳ್ಳು ಬೆಲ್ಲ ತಿಂದು ಹಾಗೂ ಏನೇ ತಿಂದರೂ ಒಳ್ಳೆ ಮಾತನಾಡೋಣ ಎಂಬುದು ಉತ್ತಮ ಸಂದೇಶವಾಗಿರುತ್ತದೆ.ಮತ್ತೊಮ್ಮೆ ಧನ್ಯವಾದಗಳು.ದೇವೇಂದ್ರಪ್ಪ
ReplyDelete