ಸಾವು - ನೋವು - ಮರೆವು
ನನ್ನ ಬ್ಲಾಗ್ ಹೆಸರು ಸಿಹಿ ಕಹಿ ನೆನಪುಗಳು ಎಂದಾದರೂ.... ಇಂದು ನಾನು ಯೋಚಿಸುತ್ತಿರುವ ವಿಚಾರ ಮರೆವಿನ ಬಗ್ಗೆ... ಮರೆವೂ ಸಹ ನೆನಪಿನ ಇನ್ನೊಂದು ಮುಖ ತಾನೇ.... ಬಾರದ ನೆನಪು.
ಒಂದು ಕುಟುಂಬಕ್ಕೆ ಹಾಗೂ ಅವರ ಸುತ್ತು ಮುತ್ತಿನವರಿಗೆ ತುಂಬಾ ನೋವು ತರುವುದು ಸಾವು.... ಸಾವು ಸಹಜ ... ಕಟ್ಟಿಟ್ಟ ಬುತ್ತಿ ಎಂದು ಗೊತ್ತಿದ್ದರೂ..... ಸಾವಿಗೆ ತುಂಬಾ ಹತ್ತಿರ ಆಗುತ್ತಿದ್ದಾರೆ ಎಂದು ತಿಳಿದ ನಂತರವೂ.... ವ್ಯಕ್ತಿಯ ಕೊನೆಯನ್ನು ಬಹುಭಾಗ ಒಪ್ಪಿಕೊಂಡಿದ್ದರೂ ಸಹ.... ಸಾವು ಸಂಭವಿಸಿದಾಗ ಅದನ್ನು ಒಪ್ಪಿ ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವೇ....
ಸಾವು ಸಂಭವಿಸಿದಾಗ, ದುಃಖ... ಅದರ ಪರಿಣಾಮವಾಗಿ ಅಳು ಸಾಮಾನ್ಯ... ಅದರಲ್ಲೂ ಜನ ಬರುತ್ತಿದ್ದಂತೆ... ಅಳುವಿನ ಅಲೆ ಅಪ್ಪಳಿಸುತ್ತದೆ. ಹಾಗಾಗಿ ಶವವನ್ನು ಆದಷ್ಟು ಬೇಗ ಸ್ಮಶಾನಕ್ಕೆ ಕಳಿಸುವುದು... Out of sight is out of mind ಎನ್ನುವುದು ಎಷ್ಟು ಸತ್ಯ ಅಲ್ಲವೇ? ತಲೆಯ ಮೇಲೆ ನೀರು ಬಿದ್ದಾಗ ದುಃಖವೂ ಸಾಕಷ್ಟು ಶಮನವಾಗುತ್ತದೆ...
ಇಲ್ಲಿ ಈಗ ನಮ್ಮೊಂದಿಗೆ ಇಲ್ಲದ ಸ್ನೇಹಿತ ಶ್ರೀನಿವಾಸ್ ನಟನೆಯೊಂದಿಗೆ ತಮಾಷೆಯಾಗಿ ಹೇಳುತ್ತಿದ್ದ ಪ್ರಸಂಗ ಪ್ರಸ್ತುತವೆನಿಸುತ್ತದೆ....
ಮನೆಯಲ್ಲಿ ಯಜಮಾನರ ಸಾವು.... ಯಜಮಾನಿಗೆ ಅತೀವ ದುಃಖ... ಸತ್ತ ಮೇಲೆ ಸುಮಾರು 20 ಗಂಟೆಗಳ ನಂತರ ಶವ ಮನೆಯಿಂದ ಹೋಯಿತು ....ತಲೆಯ ಮೇಲೆ ನೀರು ಬಿತ್ತು.. ಅಷ್ಟು ಹೊತ್ತೂ ನೀರನ್ನೂ ಕುಡಿಯದ ಯಜಮಾನಿಗೆ ಮನೆಯವರೆಲ್ಲ ಹೇಳಿದರೂ ಬರುತ್ತಿದ್ದ ಉತ್ತರ " ಅಯ್ಯೋ ಅವರೇ ಹೋದಮೇಲೆ ನನಗೇನು ಬೇಕು..." ಬಲವಂತದ ಮೇಲೆ ಕಾಫಿ ಕುಡಿಯಲು ಒಪ್ಪಿಸಿ.. ಕೊಟ್ಟ ಕಾಫಿಯನ್ನು ಬೆರಳಲ್ಲಿ ಮುಟ್ಟಿ ಬಿಸಿ ಸಾಲದು ಎಂದು ಹೇಳಿದ ಯಜಮಾನಿ.. ಮತ್ತೆ ಬಿಸಿ ಮಾಡಿದ ಕಾಫಿಯನ್ನು ಕುಡಿದು... ಮುಂದಿನ ಆಗು ಹೋಗುಗಳು, ಮಾಡಿಸಬೇಕಾದ... ಯಜಮಾನರಿಗೆ ಇಷ್ಟವಾದ ... ಅಡಿಗೆ... ಹೀಗೆ ವಾಸ್ತವಕ್ಕೆ ಮರಳಿದ್ದು. ಸ್ಮಶಾನ ವೈರಾಗ್ಯ ಇದೇ ಅಲ್ಲವೇ...
ಎಂಥ ನೋವಿದ್ದರೂ ಕಾಲಕ್ರಮೇಣ ಅದನ್ನು ಮರೆತು ಸಹಜ ಜೀವನಕ್ಕೆ ಮರಳುವುದು ಜೀವನ ಕಾಲಚಕ್ರದ ನಿಯಮ... ಮರೆವೇ ಇಲ್ಲದಿದ್ದರೆ... ಈ ನೋವು ಸತತ ವಾಗಿದ್ದರೆ... ಮನುಷ್ಯನ ಜೀವನ ಊಹಿಸಲೂ ಭಯಂಕರ... ಮರೆವು ವರವಾಗಿದ್ದು ಇಲ್ಲಿ..." ಮರೆವೆಂಬುದು ಮಹದೌಷಧ"
ಮರೆವು ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಒಂದು ಶಾಪ... ಪಾಪ ಓದಿದ್ದೆಲ್ಲವೂ ಪರೀಕ್ಷೆಯಲ್ಲಿ ಬರೆಯುವ ಸಮಯದಲ್ಲಿ ಜ್ಞಾಪಕಕ್ಕೇ ಬರುವುದಿಲ್ಲ... ಮರೆವು ತನ್ನ ಪ್ರಾಬಲ್ಯವನ್ನು ಮೆರೆದು... ವಿದ್ಯಾರ್ಥಿಗಳನ್ನು ಸಂಕಟಕ್ಕೆ ಈಡು ಮಾಡುತ್ತದೆ.
ಶಾಪವೂ ಮರೆವಿಗೆ ಕಾರಣವಾಗಿರುವ ಪ್ರಸಂಗಗಳು ನಮ್ಮ ಸಾಹಿತ್ಯಗಳಲ್ಲಿವೆ... ಮೊದಲನೆಯದು ಕಾಳಿದಾಸನ ಶಕುಂತಲೆ... ದುಶ್ಯಂತನ ನೆನಪಿನಲ್ಲಿ ತಲ್ಲೀನಳಾಗಿದ್ದ ಶಕುಂತಲೆಯು ದೂರ್ವಾಸ ಮುನಿಯನ್ನು ಗಮನಿಸಲಿಲ್ಲ ಎಂಬ ಕಾರಣಕ್ಕೆ... ಕೊಟ್ಟ ಶಾಪದಿಂದ... ಶಕುಂತಲೆಯನ್ನು ದುಶ್ಯಂತ ಮರೆಯುವ ಹಾಗೆ ಆಯಿತು... ಸದ್ಯ ಶಾಪ ವಿಮೋಚನೆಯ ಕಾರಣದಿಂದ ಉಂಗುರವನ್ನು ನೋಡಿ ದುಶ್ಯಂತ ಗುರುತಿಸುವಂತಾಯ್ತು...
ಇನ್ನು ಮಹಾಭಾರತದ ಕರ್ಣನ ವಿಷಯಕ್ಕೆ ಬಂದರೆ... ಕ್ಷತ್ರಿಯ ಎಂಬ ವಿಷಯವನ್ನು ಮುಚ್ಚಿಟ್ಟು..... ಬಿಲ್ಲು ವಿದ್ಯೆ ಕಲಿತ ಕಾರಣದಿಂದ... ವಿದ್ಯೆಯನ್ನು ಉಪಯೋಗಿಸುವ ಸಮಯಕ್ಕೆ ಮರೆಯಲಿ ಎಂಬ ಪರಶುರಾಮರ ಶಾಪ.... ಕರ್ಣನ ಪತನಕ್ಕೆ ಕಾರಣವಾಯಿತು.
ಮಾಡಲು ಇಷ್ಟವಾಗದ ಕೆಲಸದಿಂದ ತಪ್ಪಿಸಿಕೊಳ್ಳಲು ಸುಲಭವಾದ " ಅಯ್ಯೋ ಮರೆತೇ ಹೋಯಿತು" ಅನ್ನುವ ಸಬೂಬು...
ಹಾಗೇ ಮರೆತಂತೆ ನಟಿಸುವುದು.. ಜಾಣ ಮರೆವು..
ಮತ್ತೆ ಮತ್ತೆ ಮರೆವಿನ ಮೊರೆ ಹೋಗುವುದು ಭಂಡತನ..
ನಮಗಿಷ್ಟವಾದ ವಿಷಯ ಮರೆಯುವುದಿಲ್ಲ ಅನ್ನುವುದು ಸತ್ಯ ಎಂದು ನನ್ನ ಆಪ್ತ ಸಮಾಲೋಚನೆಯ ಸಮಯದಲ್ಲಿ ಅರಿತಿದ್ದೇನೆ.... ಓದಿದ್ದು ಮರೆಯುತ್ತೆ ಎಂದು ಹೇಳುವ ಮಕ್ಕಳು.... ತಮಗಿಷ್ಟವಾದ ಆಟ, ಅದರಲ್ಲೂ ಕ್ರಿಕೆಟ್, ಚಲನಚಿತ್ರ, ನೆಚ್ಚಿನ ಹೀರೋ... ವಿಷಯವಾಗಿ ವರ್ಷಗಳ ಹಿಂದೆ ನಡೆದ ಸಾಕಷ್ಟು ವಿವರಗಳನ್ನು ತಕ್ಷಣ ನೀಡಬಲ್ಲರು... ಹಾಗಾದರೆ ಅವರಿಗೆ ಮರೆವಿನ ಸಮಸ್ಯೆ ಇದೆಯೇ?
ಇನ್ನು ವಯೋ ಸಹಜವಾದ ಮರೆವು.... ಇಟ್ಟ ವಸ್ತುವನ್ನು ಎಲ್ಲೋ ಹುಡುಕುವುದು.... ಯಾವುದೋ ಕೆಲಸಕ್ಕೆ ಹೊರಟು ಅದನ್ನೇ ಮರೆತು ಬೇರೊಂದು ಕೆಲಸಕ್ಕೆ ತೊಡಗಿಸಿಕೊಳ್ಳುವುದು.... ಒಂದು ಕೆಲಸವನ್ನು ಮಾಡಲು ಹೊರಟು... ಇನ್ನೇನು ಅದಕ್ಕೆ ತೊಡಗಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅದನ್ನೇ ಮರೆಯುವುದು... ಹೆಸರುಗಳನ್ನು ಮರೆಯುವುದು... ಇವೆಲ್ಲ ಸಾಮಾನ್ಯ.... ಹಾಗೂ ಕ್ಷಣಿಕ ಮರೆವು.. ಮತ್ತೆ ನೆನಪು ಬರುವಂಥವು....
ಇನ್ನು ಮರೆವಿನಿಂದ ಆಗುವಂಥ ಕೆಲವು ಪೇಚಿನ ಪ್ರಸಂಗಗಳು...
ಒಲೆ ಮೇಲೆ ಹಾಲಿಟ್ಟು.. ಗಮನಿಸ್ಕೊಂಡೇ ಇದ್ದು ಯಾವುದೋ ಕ್ಷಣದಲ್ಲಿ ಮರೆತು ಬೇರೆ ಕಡೆ ಗಮನಿಸುವ ಸಮಯದಲ್ಲೇ ಹಾಲು ಉಕ್ಕಿ ಸುರಿಯುವುದು.... ಶುಕ್ರವಾರವಾದರೆ ಲಕ್ಷ್ಮಿ ಬಂದಳು ಅನ್ನುವ ಸಮಾಧಾನ ಇಲ್ದಿದ್ರೆ ಅಯ್ಯೋ ಹಾಲೆಲ್ಲ ಉಕ್ ಹೋಯಿತು ಅನ್ಕೊಳೋದು.
ಅಡಿಗೆಗೆ ಉಪ್ಪು ಹಾಕೋದು ಬಹಳಸಲ ಮರೆವಿನಿಂದ ಎಡವಟ್ಟಾಗುವುದು ಉಂಟು. ಉಪ್ಪು ಹಾಕಿದ್ದು ಮರೆತು ಹೋಗಿ ಮತ್ತೆ ಉಪ್ಪು ಹಾಕಿದರೆ ಮಾಡಿದ ಉಪ್ಪಿಟ್ಟು
ಉಪ್ ಪ್ ಪ್ ಪ್ಪಿಟ್ಟು ಆಗಿರತ್ತೆ.
ಸಮಾರಂಭಕ್ಕೆ ನಾವು ಆಹ್ವಾನಿತರು... ಮರೆತು ಹೋಗಿ ಬೇರೆಲ್ಲೋ ನಿರತರು... ನಂತರ ನೆನಪಾದಾಗ ಪೆಚ್ಚು ಪೆಚ್ಚು..
ನಮ್ಮನೆಯ ಸಮಾರಂಭ ...ಕರೆಯುವವರ ಯಾದಿಯು ತಯಾರು... ಆ ಸಂದರ್ಭದಲ್ಲಿ ನಮಗೆ ತುಂಬ ಬೇಕಾದವರನ್ನು ಬಿಟ್ಟಿರುತ್ತೇವೆ ಅಥವಾ ಕರೆಯುವುದನ್ನು ಮುಂದೂಡಿ ಮರೆತಿರುತ್ತೇವೆ... ಹಸೆಮಣೆ ಮೇಲೆ ಕೂತಾಗ ನೆನಪು.. ಕೈ ಕೈ ಹಿಸಿಕಿಕೊಳ್ಳುವ ಸಮಯ.
ನನ್ನ ಅನುಭವ... ಏನಾದರೂ ಹೊರಗೆ ಹೋಗುವಾಗ ತೆಗೆದುಕೊಂಡು ಹೋಗಬೇಕಾದ ವಸ್ತುವನ್ನು ನನ್ನ ಸ್ಕೂಟರ್ ಕೀ ಜೊತೆಗೆ ಇಡುವ ಅಭ್ಯಾಸ... ಬೆಳಗೆದ್ದು ಸ್ಕೂಟರ್ ಕೀ ತಗೊಳ್ಳಲು ಅದರ ಜಾಗದ ಬಳಿ ಬಂದಾಗ ಕೀ ಇಲ್ಲ... ಎಲ್ಲಿಟ್ಟಿದ್ದು ನೆನಪಿಲ್ಲ... ಹುಡುಕಾಟ ಶುರು...
ಅಂಗಡಿಯಿಂದ ತರಬೇಕಾದ ಸಾಮಾನುಗಳ ಚೀಟಿಯನ್ನು ಬರೆದು ಅಂಗಡಿಗೆ ಹೋಗುವಾಗ ಅದನ್ನು ಮರೆತು ಪರದಾಡುವುದು ಒಂದು ರೀತಿ.
ಸಾಮಾನ್ಯವಾಗಿ ನನಗೆ ಕೆಲವರು ಮುಖತಃ ಇನ್ನು ಕೆಲವರು ದೂರವಾಣಿ ಮೂಲಕ ಮಾತಾಡುತ್ತಾರೆ... ಆತ್ಮೀಯತೆ ಇರುತ್ತದೆ ಆದರೆ ಯಾರೆಂದು ತಿಳಿಯವಲ್ಲದು... ತಕ್ಷಣ ನಾನು ಅವರ ಕ್ಷಮೆ ಯಾಚಿಸಿ ಗುರುತಿಸಲಾಗಿಲ್ಲ ಎಂದು ಹೇಳಿದಾಗ... ಅವರೇ ನನಗೆ ಸಮಾಧಾನ ಮಾಡಿ... ಬಹಳ ಜನಾನ ನೀವು ಭೇಟಿಯಾಗ್ತಿರ್ತೀರಾ ನೆನಪಲ್ಲಿ ಇಟ್ಕೊಳ್ಳೋದು ಕಷ್ಟ ಅಂತ ಹೇಳಿ... ಎಲ್ಲಿ ಭೇಟಿಯಾಗಿದ್ದನ್ನು ಹೇಳುತ್ತಾರೆ... ಇವರು ಸಾಮಾನ್ಯವಾಗಿ ಆಪ್ತ ಸಮಾಲೋಚನೆಗೆ ಸಂಬಂಧಪಟ್ಟ ವ್ಯಕ್ತಿಗಳಾಗಿರುತ್ತಾರೆ.
ಇನ್ನು public memory is short ಅನ್ನುವ ಮಾತಿದೆ.... ಹೌದು... ರಾಜಕಾರಣಿಗಳು ಕೊಟ್ಟ ಆಶ್ವಾಸನೆಗಳನ್ನು... ಹಾಗೂ ಮಾಡಿದ ಎಡವಟ್ಟುಗಳನ್ನು ಬಹುಬೇಗ ಮರೆತು... ಅವರ ಸವಿ ಮಾತುಗಳಿಗೆ ಮರುಳಾಗಿ ಮತ್ತೆ ಅವರನ್ನೇ ಆಯ್ಕೆ ಮಾಡುವ ಜನ ನಾವು.
ಮರೆವೂ ಒಂದು ಖಾಯಿಲೆಯಾಗಿ ಕಾಡಬಹುದು ಅದೇ dementia... ಮರೆವಿನ ಖಾಯಿಲೆ. ಇದು ಕ್ರಮೇಣ Alzheimer's ಖಾಯಿಲೆಯಾಗಿ ತಿರುಗಬಹುದು... ಹಾಗಾಗಿ ಸಕಾಲದ ಚಿಕಿತ್ಸೆ, ಅದರ ಅಡ್ಡ ಪರಿಣಾಮವನ್ನು ಕಡಿಮೆಗೊಳಿಸಬಹುದು. NIMHANS ನ geriatric clinic and services ವಿಭಾಗ ಈ ನಿಟ್ಟಿನಲ್ಲಿ ಸಮುದಾಯಗಳೊಡನೆ ಸಂಪರ್ಕಿಸಿ, ಅಂಥವರನ್ನು ಗುರುತಿಸಿ... ಸೂಕ್ತ ಚಿಕಿತ್ಸೆ / ಹಾಗೂ ಅವರನ್ನು ನೋಡಿಕೊಳ್ಳುವವರಿಗೆ ಸೂಕ್ತ ತರಬೇತಿ ಕೊಡುವ ಯೋಜನೆಯನ್ನು ಕೈಗೊಂಡಿದೆ.... ಇದರ ಒಂದು ಸಣ್ಣ ಭಾಗವಾಗಿ ಕೆಲಸ ಮಾಡಿದ ಸಂತೋಷ ನನಗಿದೆ.
ಇನ್ನು ನನ್ನದೇ ಅನುಭವಕ್ಕೆ ಬಂದರೆ ಹತ್ತಿರದವರ ಮೊದಲ ಸಾವು ಕಂಡದ್ದು ನನ್ನ ಹನ್ನೆರಡನೆಯ ವಯಸ್ಸಿನಲ್ಲಿ... ನನ್ನ ಅಜ್ಜಿ ಸತ್ತಾಗ.. ಅತ್ತ ನೆನಪಿದೆ.... ತುಂಬಾ ದುಃಖವಾಯಿತಾ... ನೆನಪಿಲ್ಲ. ಆದರೆ ತಿಥಿಯ ಊಟ ಸವಿದದ್ದು ಚೆನ್ನಾಗಿ ನೆನಪಿದೆ. ಚಿಕ್ಕಪ್ಪ ನಂಜಣ್ಣಯ್ಯ ಮಾಡುತ್ತಿದ್ದ ಹಾಸ್ಯ... ಅರ್ಧ ಹಾಕು ಅಂತ ಕೇಳಿದಾಗ.. ಮಾಡಿದ್ದರಲ್ಲಿ ಅರ್ಧ ನಿನಗೆ ಹಾಕಿದರೆ ಬೇರೆಯವರಿಗೆ ಏನು ಮಾಡಬೇಕು... ಇದನ್ನು ಮರೆತಿಲ್ಲ. ಇದಾದ 26 ವರ್ಷಗಳ ನಂತರ ತುಂಬಾ ನೋವು ಪಟ್ಟದ್ದು ನನ್ನಮ್ಮ ಸತ್ತಾಗ.
ನನ್ನೂರು ದೊಡ್ಡಜಾಲದಲ್ಲಿ.... ಯಾರಾದರೂ ಸತ್ತಾಗ... ಶವಸಂಸ್ಕಾರ ಆಗುವವರೆಗೂ ಬಹಳಷ್ಟು ಮನೆಗಳಲ್ಲಿ ಒಲೆ ಹಚ್ಚಿ ಅಡಿಗೆ ಮಾಡುತ್ತಿರಲಿಲ್ಲ.... ಹಾಗೂ ಸಾವಿನ ಮನೆಯವರಿಗೆ ಸೂತಕ ಮುಗಿಯುವವರೆಗೂ ಊಟವನ್ನು ಬೇರೆ ಮನೆಯವರು ತಂದುಕೊಡುತ್ತಿದ್ದದ್ದು ಸಂಪ್ರದಾಯವಾಗಿತ್ತು. ಈ ಸಂಪ್ರದಾಯಗಳು ಈಗೀಗ ಕಡಿಮೆಯಾಗುತ್ತಿದೆ... ಕಾಲಾಯ ತಸ್ಮೈ ನಮಃ
ಕೊನೆಯದಾಗಿ ಸಾವಿನ ಬಗ್ಗೆ ನಾನು ಮರೆಯಲಾಗದ ನನ್ನ ಕನಸಿನ ಬಗ್ಗೆ ಹೇಳಿ ವಿರಮಿಸುತ್ತೇನೆ.... ಊರಿನಲ್ಲಿ ಶವದ ಮೆರವಣಿಗೆ ಆದಾಗ ನಾನು ಒಂದು ಜಗಲಿಯ ಮೇಲೆ ನಿಂತು ನೋಡಿದ್ದೆ.... ಅಂದಿನ ಕನಸಿನಲ್ಲಿ... ನಾನು ಸತ್ತಿದ್ದೆ... ನನ್ನ ಶವದ ಮೆರವಣಿಗೆ ಆಗುತ್ತಿತ್ತು.. ನಾನು ಜಗಲಿಯ ಮೇಲೆ ನಿಂತು ನೋಡುತ್ತಿದ್ದೆ.... ಎಷ್ಟು ವಿಚಿತ್ರ ಮನಸ್ಸಿನ ಓಟಗಳು.
ಮರೆವು ಯಾರಿಗೂ ಕಾಯಿಲೆಯ ರೂಪದಲ್ಲಿ ಶಾಪವಾಗದಿರಲಿ.... ಎಂದು ಆಶಿಸುತ್ತಾ...
ಅಯ್ಯೋ.. ನಮಸ್ಕಾರ ಹೇಳಕ್ಕೆ ಮರೆತನಾ?
ಇಲ್ಲ ನೆನಪಿಗೆ ಬಂತು... ಎಲ್ಲರಿಗೂ ನಮಸ್ಕಾರ
Bahala chennagide chikkappa
ReplyDeleteChennagide Bhavaji
ReplyDeleteನಾನು ಬ್ಲಾಗ್ ಓದಿದ ತಕ್ಷಣ ಮರೇವಿಗೆ ಹೆದರಿ ಬರೆಯುತ್ತಿದ್ದಿನಿ, ಮಜವಾಗಿದೆ ಮರೆವು ಮರಣದ ಆಟ ಈ ಬದುಕಿನಲ್ಲಿ.
ReplyDeleteD C Ranga, ನಿಮ್ಮ ಬರಹ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದಕ್ಕಾಗಿ ನಿಮ್ಮ ಬರಹ ವನ್ನು ಓದುವುದಕ್ಕೆ ಕಾಯುತ್ತಿರುತ್ತೇನೆ.
ReplyDeleteಜಾತಸ್ಯ ಮರಣಂ ಧ್ರುವಂ ಜನಿಸಿದ್ದೆಲ್ಲಾ ಒಂದಲ್ಲ ಒಂದು ದಿವಸ ಮರಣಿಸಲೇಬೇಕು ಹುಟ್ಟು ಸಾವು ಜೀವನದಲ್ಲಿ ಬಯಸಿದಾಗ ಕಾಣದಂತ ಎರಡು ಮುಖಗಳು ಯಕ್ಷಪ್ರಶ್ನೆಯಲ್ಲಿ ಇದೊಂದು ಅತಿ ಮುಖ್ಯವಾದ ಪ್ರಶ್ನೆ ಇಷ್ಟೆಲ್ಲಾ ಗೊತ್ತಿದ್ದರೂ ದುಃಖಿಸುವುದು ಸಹಜ . ನಿಮ್ಮ ಈ ವಿಡಂಬನೆ ಅತ್ಯಂತ ಮನೋಜ್ಞವಾಗಿದೆ ಧನ್ಯವಾದಗಳು ಮರವು ಸಹ ಒಂದು ವರವೇ ಆಗಿದೆ ಆದರೂ ಸಹ ಒಮ್ಮೊಮ್ಮೆ ಬೇಡದ ನೆನಪುಗಳು ಮನದ ಅಂತರಾಳದಿಂದ ಎದ್ದು ಬಂದು ತೊಂದರೆ ಕೊಡುತ್ತವೆ . ಧನ್ಯವಾದಗಳು ರಂಗಣ್ಣ.
ReplyDeleteಲೇಖನವನ್ನು ಸಿದ್ಧಪಡಿಸಿ ಬ್ಲಾಗಿಗೆ ಹಾಕಲು ಮರೆಯದಿದ್ದುದಕ್ಕೆ ಅಭಿನಂದನೆಗಳು.
ReplyDeleteವಿವಿಧ ಮರೆವಿನ ಪ್ರಸಂಗಗಳು ಚೆನ್ನಾಗಿವೆ.ಎಂದಿನಂತೆ ನಿರೂಪಣೆ ಚೆನ್ನಾಗಿದೆ. ನೋವುಗಳು ಮತ್ತು ಪ್ರಮುಖವಾಗಿ ಸಾವನ್ನು ಮರೆಮಾಚಲು ಮರೆವು ಒಂದು ವರವೆಂದೇ ಹೇಳಬಹುದು. ನಿಮ್ಮ ನೆನಪಿನ ಶಕ್ತಿ ಅಗಾಧ.
ಹಾಗೇ ಸುಮ್ಮನೆ: ವೈಭವದ ಮದುವೆ ಹಾಗೂ ಭರ್ಜರಿ ಊಟವಾದ ನಂತರ ಕಪಿ(ಕನ್ಯಾ ಪಿತೃ) ನೀಡಿದ ದಕ್ಷಿಣೆಯನ್ನು ಪುರೋಹಿತರು ಸೊಂಟಕ್ಕೆ ಸಿಕ್ಕಿಸಿಕೊಳ್ಳುವಾಗ ಮಾಂಗಲ್ಯ ಧಾರಣೆ ಮಾಡಿಸಲು ಮರೆತಿದ್ದು, ವಧುವಿನ ತಾಳಿ ಅವರ ಸೊಂಟದಲ್ಲೇ ಇದ್ದದ್ದು ಕಂಡು ಏನು ಮಾಡಬೇಕೆಂದು ತೋಚದೇ ಗಾಬರಿಯಾಗಿಬಿಟ್ಟರಂತೆ.
ಆದರಗಳೊಡನೆ,
ಗುರುಪ್ರಸನ್ನ,
ಚಿಂತಾಮಣಿ
ಸಾವಿನ ಮನೆಯ ವಿಷಯ ಓದಿದಾಗ ನನಗೂ ಮರೆವಿನ ಕಾಯಿಲೆ ಇದ್ದಿದ್ರೇ ಚೆನ್ನಿತ್ತು ಅನ್ನಿಸಿತ್ತು.😥
ReplyDeleteಹಾಗೇ ಗುರುವಾರ ಅನ್ನೋದು ಮರೆತರೆ ಹೇಗೆ? ಅಂತ ಕೂಡ ಅನ್ನಿಸಿತು😃
ತಮ್ಮ ಸಾವು,ನೋವು ಮತ್ತು ಮರೆವು ಶೀರ್ಷಿಕೆ ಉತ್ತಮವಾಗಿ ಮೂಡಿ ಬಂದಿದೆ.ಧನ್ಯವಾದಗಳು.ಸಾವು ಅನಿವಾರ್ಯ ಹಾಗೂ ಅದರ ನೋವು ಕ್ರಮೇಣವಾಗಿ ಮರೆತು ಹೋಗುತ್ತದೆ ಎಂಬುದು ಸತ್ಯವಾದ ಮಾತು.ಮರೆವಿನ ಅಡಿಯಲ್ಲಿ ಮಕ್ಕಳು ಪರೀಕ್ಷೆಯಲ್ಲಿ ಉತ್ತರ ಮರೆಯುವುದು,ಶಾಪದ ಮರೆವು(ದುಶ್ಯಂತ-ಶಾಕುಂತಲೆ ಮತ್ತು ಕರ್ಣನ ದೃಷ್ಟಾಂತಗಳು) ಹಾಗೂ ವಯೋಸಹಜ ಮರೆವಿನ ಅನೇಕ ಉದಾಹರಣೆಗಳು ನಿಜವಾದ ಮಾತು.ತಮ್ಮ ಅನುಭವದ ಸಾವು ನೋವು ಹಾಗೂ ಮರೆವು ಉತ್ತಮವಾಗಿ ವಿವರಣೆ ನೀಡಿರುತ್ತೀರಿ.ಕೊನೆಯದಾಗಿ ವಯೋಸಹಜ ಮರೆವಿನಿಂದ ಡಿಮೆನ್ಸಿಯ ,ಆಲ್ಜಿಮರ್ ಕಾಯಿಲೆಗಳಿಗೆ ತಿರುಗುವ ಬಗ್ಗೆ ತಿಳುವಳಿಕೆ ಸಂದೇಶ ನೀಡಿರುತ್ತೀರಿ.ಉತ್ತಮ ಶೀರ್ಷಿಕೆ.ಮತ್ತೊಮ್ಮೆ ಧನ್ಯವಾದಗಳು
ReplyDeleteಅದ್ಭುತ, ಎಂದಿನಂತೆ,👍
ReplyDelete