ಶಹಾಬಾದ್ ..ಬಿಟ್ಟರೂ ಬಿಡದ ನಂಟು
ನಾನು ಶಹಾಬಾದ್ ಬಿಟ್ಟು ಈ ಡಿಸೆಂಬರ್ ಗೆ 50 ವರ್ಷಗಳು ಮುಗಿದವು.... ಆದರೆ ಇಂದಿಗೂ ಶಹಾಬಾದ್ ಹೆಸರು ಕೇಳಿದರೆ ಏನೋ ಒಂದು ರೀತಿಯ ಪುಳಕ ಹಾಗೂ ಅಭಿಮಾನ. ಏನು ವಿಶೇಷವೋ ಆ ಶಹಾಬಾದಿನ ಮಣ್ಣಲ್ಲಿ... ಅದರ ಸೆಳೆತ ಸ್ವಲ್ಪವೂ ಕಡಿಮೆಯಾಗಿಲ್ಲ... ನಂಟು ಬಲು ಅಂಟು.... ಬಿಸಿಲೂ ಉಂಟು... ಸಿಮೆಂಟಿನ ಧೂಳೂ ಉಂಟು...
ಬಿರು ಬೇಸಿಗೆಯಲ್ಲಿ... ಮಧ್ಯಾಹ್ನ ಆಫೀಸಿಗೆ ಹೋಗುವಾಗ, ತಲೆಗೆ ಹ್ಯಾಟ್ ಕಡ್ಡಾಯ... ಆಫೀಸ್ ಒಳಗೆ ಹೋದ ತಕ್ಷಣ ಫ್ಯಾನ್ ಕೆಳಗೆ ಒಂದೆರಡು ನಿಮಿಷ ವಿಶ್ರಾಂತಿ ಅವಶ್ಯಕ. ನಮ್ಮ ಆಫೀಸ್ ಸಮಯ ಬೆಳಿಗ್ಗೆ 8 ರಿಂದ 12 ಮಧ್ಯಾಹ್ನ 2 ರಿಂದ 5.... ಹಾಗಾಗಿ ಮಧ್ಯಾಹ್ನ ಊಟ ಆದ ನಂತರ ಒಂದು ನಿದ್ದೆ ಬಲು ಸಹಜವಾಗಿ ಬರುತ್ತಿತ್ತು...12.20 ಕ್ಕೆ ಹಾಸಿಗೆಯ ಮೇಲೆ 2.05 ಕ್ಕೆ ಮತ್ತೆ ಆಫೀಸ್.
ಶಹಾಬಾದ್ ನಂಟು ಬೆಳೆಯಲು ಕಾರಣ ನನ್ನ ಸ್ನೇಹಿತ ಎಚ್ ಪಿ ರಂಗನಾಥ್... ಅವನಾಗಲೇ ಶಹಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ.... ಅವರ ಸಂಬಂಧಿ.. ಎಂ ಎಸ್ ವೆಂಕಟರಾಮು ಅವರ ಪರಿಚಯದಿಂದ. ಇಂಟರ್ವ್ಯೂನಲ್ಲಿ ಒಂದು ಪ್ರಶ್ನೆ " why do you want to come to this desert like place" ಕೇಳಿದವರು ಯಾರೋ ಗೊತ್ತಿಲ್ಲ.... ಅವರ ಮನಸ್ಸಿನ ಭಾವನೆಯನ್ನು ಹೊರ ಹಾಕಿದರಾ?
ಉತ್ತರ ಏನು ಹೇಳಿದೆನೋ ಗೊತ್ತಿಲ್ಲ.... ಆದರೆ ಕೆಲಸ ಅಂತೂ ಸಿಕ್ಕಿತ್ತು.... ಹಾಗಾಗಿ ನಾನು ಶಹಾಬಾದ್ ವಾಸಿಯಾದೆ.
ಇರಲು ರಂಗನಾಥನ ಮನೆ... ಊಟಕ್ಕೆ ಕ್ಯಾಂಟೀನ್... ಜೊತೆಗೆ ಒಂದು ಸುರಕ್ಷತೆಯ ಕವಚ... ಗಿರಿಜಮ್ಮ ಮತ್ತು ವೆಂಕಟರಾಮು ದಂಪತಿಗಳಿಂದ.... ಜೀವನ ಮೊದಲಾಯಿತು...
ಶಹಾಬಾದ್ ಸೇರಿದ್ದು ಜನವರಿ ತಿಂಗಳು.. ಹಾಗಾಗಿ ಮೊದಲನೆಯ ಬೇಸಿಗೆ ಇಣುಕುತ್ತಿತ್ತು. ಜೂನ್ ತಿಂಗಳ ವೇಳೆಗೆ ಅದರ ಪ್ರಭಾವ ನನ್ನ ಮೇಲೆ ಅತಿಯಾಗಿ ಬೀರಿತ್ತು... ಕಂಕುಳಲ್ಲಿ ಕಲ್ಲಿನಂತ ಗುಳ್ಳೆಗಳು...( ಸತ್ತಿ... ಕೆಆರ್ ಸತ್ಯನಾರಾಯಣನ ಮಾತಲ್ಲಿ ಅದು ಕಂಕುಳ ಶಂಖ).. ಅಸಾಧ್ಯ ನೋವು... ಅಲ್ಲಿಯೇ ಇದ್ದ ಡಿಸ್ಪೆನ್ಸರಿಯಲ್ಲಿ ಪರಿಹಾರ... ಮೂರ್ನಾಲ್ಕು ಇಂಜೆಕ್ಷನ್ ತಗೊಂಡೆ... ನೋವು ಕಡಿಮೆಯಾಯಿತು. ಅದಕ್ಕಿಂತ ಮುಖ್ಯವಾದ ವಿಚಾರ ಎಂದರೆ... ಅಲ್ಲಿನ ಡಾಕ್ಟರ್ ಬಳಿ ಹೋಗಿ.... ಕೆಲಸಕ್ಕೆ ಹೋಗಿಲ್ಲ ಅಂದರೆ...off duty.....seal ಹಾಕಿ ರಜಾ ಸಿಗುತ್ತಿದ್ದದ್ದು. ಒಂದು ಪಿಸುಮಾತು ತೇಲುತ್ತಿತ್ತು ಡಾಕ್ಟರ್ ಬಹಳಷ್ಟು ಸಲ ಬರೆದುಕೊಡುತ್ತಿದ್ದದ್ದು APC ಎಂಬ ಟ್ಯಾಬ್ಲೆಟ್.... ಅವರು ತೆಲುಗು ಮೂಲದವರಾದ್ದರಿಂದ APC ಅಂದರೆ ಏಮೀ ಪನಿಕಿ ರಾನ ಚತ್ತ.... ಏನು ಕೆಲಸಕ್ಕೆ ಬರದ ಕಸ ಎಂಬರ್ಥ.... ಎಂಬುದು.
ಈ ಸಮಯದಲ್ಲೇ ಒಂದು ಮಧ್ಯಾಹ್ನ... ಶಂಕರಲಿಂಗ ಪ್ರಭು ಜೊತೆಯಲ್ಲಿ... ಕೆಲಸದ ವಿಚಾರವಾಗಿ ಏನೋ ವಿಚಾರ ವಿನಿಮಯ ನಡೆಸಿದ್ದೆ... ಆಗ ಬಂದದ್ದು ಖುರಾನ ಹೆಸರಿನ ಡಿಜಿಎಂ... ನನ್ನ ಬಳಿಯೇ ನಿಲ್ಲಬೇಕೇ? ಏನನಿಸಿತೋ ಕೇಳಿದ ಮೊದಲ ಪ್ರಶ್ನೆ "how long you are here" ನನ್ನ ಉತ್ತರ five months.... ನನಗೆ ಸಿಕ್ಕ ಪ್ರತ್ಯುತ್ತರ.."at this rate you will not be here for five more months"... ಈಗ ನೆನೆದರೆ ನಗು. ಆದರೆ ಆಗ ಭಯವಾಗಿದ್ದಂತೂ ಸತ್ಯ.
ನನಗೆ ಮತ್ತು ನನ್ನ ಜೊತೆಯಲ್ಲೇ ಕೆಲಸಕ್ಕೆ ಸೇರಿದ ಎ ವಿ ಶ್ರೀನಿವಾಸನ್( ಎ ವಿ ಸೀನ) ಇಬ್ಬರಿಗೂ ಒಂದು ಕ್ವಾರ್ಟರ್ ಅಲಾಟ್ ಆಗಿತ್ತು.... ಆದರೆ ನಾನು ಇದ್ದದ್ದು ರಂಗನಾಥ್ ಜೊತೆಯಲ್ಲಿ.... ಹಾಗಾಗಿ ಎವಿ ಸೀನ... ಒಬ್ಬನೇ ಇದ್ದ... ಕೆಲವೇ ಸಮಯದಲ್ಲಿ ಅವನಿಗೆ ಮದುವೆ ನಿಶ್ಚಯವಾಯಿತು... ಅವನು ಸಂಸಾರ ಹೂಡಲು ಜಾಗ ಇದ್ದದ್ದು... ಅದಕ್ಕೆ ನನ್ನ ಒಪ್ಪಿಗೆ ಇದ್ದದ್ದು ಎಲ್ಲಾ ಅಲಿಖಿತ ಒಪ್ಪಂದ...... ಮದುವೆ ಮುಗಿಸಿ ಮದುಮಗಳೊಡನೆ(ಲಕ್ಷ್ಮಿ) ಬಂದ ...ನಮ್ಮ ಎವಿ ಸೀನ ...ನಾವುಗಳೆಲ್ಲ ಅವರನ್ನು ಸ್ವಾಗತಿಸಿ... ಅವರ ಮನೆಯಲ್ಲಿ ಬಿಟ್ಟು, ಒಂದಷ್ಟು ಹರಟೆ ಹೊಡೆದು ಬಂದಾಗ ಸಂಜೆ ಸುಮಾರು 6 ಗಂಟೆ. ರಾತ್ರಿ 9:30ರ ಸುಮಾರಿಗೆ ನಾನು ಒಂದು ಚಾಪೆ, ದಿಂಬು ಮತ್ತು ಹೊದ್ದಿಗೆಯೊಂದಿಗೆ ಎವಿ ಸೀನನ ಮನೆಯ ಬಾಗಿಲು ತಟ್ಟಿದೆ.... ನನ್ನ ಅವತಾರ ನೋಡಿ ಲಕ್ಷ್ಮಿಯ ಮುಖದಲ್ಲಿ ಗಾಬರಿಯಿತ್ತು...." ಎಚ್‌ಪಿ ಜೊತೆ ಜಗಳ ಆಗೋಯ್ತು... ನಾನಲ್ಲಿ ಇರೋಕಾಗಲ್ಲ ದಯವಿಟ್ಟು ಇಲ್ಲಿರ್ತೀನಿ ಜಾಗ ಕೊಡಿ.... ನಾನ್ ರೂಮಲ್ಲಿ ಮಲ್ಕೊತೀನಿ ಅಂತ ಬಾಗಿಲ ಹತ್ತಿರ ಚಾಪೆ ಹಾಕಿಕೊಂಡು ಅದರ ಮೇಲೆ ಕೂತೆ... ಸ್ವಲ್ಪ ಹೊತ್ತು ನಿಃಶಬ್ದ... ಬಹುಶಃ ಸೀನನಿಗೆ ಗೊತ್ತಾಗಿತ್ತು ಇದು ನನ್ನ ತರಲೆಯೆಂದು.... ಒಂದಷ್ಟು ಹೊತ್ತು ಸತಾಯಿಸಿ ಜಾಗ ಖಾಲಿ ಮಾಡಿದೆ.... ಲಕ್ಷ್ಮಿ ಈ ವಿಚಾರವಾಗಿ ಬಹಳಷ್ಟು ದಿನ ಹೇಳ್ತಾ ಇದ್ದಿದ್ದು " ರೀ..ರಂಗ... ಎಷ್ಟು ಗಾಬರಿ ಮಾಡಿದ್ರಿ ಅವತ್ತು.. ಮರೆಯಕ್ಕೆ ಆಗಲ್ಲ".... ಗಂಡ ಹೆಂಡತಿ ಇಬ್ಬರೂ ನಮ್ಮ ಜೊತೆಯಲ್ಲಿಲ್ಲ... ಆದರೆ ಬಾಂಧವ್ಯ ಮಾತ್ರ ಮರೆಯಕ್ಕೆ ಆಗಿಲ್ಲ.
ಬಹಳಷ್ಟು ಜನ ಬ್ರಹ್ಮಚಾರಿಗಳೇ ಇದ್ದಿದ್ರಿಂದ ರಾತ್ರಿ ಊಟ ಕ್ಯಾಂಟೀನ್ ನಲ್ಲಿ ಮಾಡಕ್ಕೆ ಅವಕಾಶ ಇತ್ತು. ಊಟ ಅಷ್ಟು ಚೆನ್ನಾಗಿರಲ್ಲ ಅಂತ ಒಂದ್ ಅಭಿಪ್ರಾಯ... ಆದರೆ ಬೇರೆ ಏನು ದಾರಿ ಇಲ್ಲದೆ ಇರೋದ್ರಿಂದ ಅನಿವಾರ್ಯವಾಗಿ ಊಟ ಮಾಡಲೇಬೇಕು... ಹೀಗಿರುವಾಗ ಒಂದಿನ ಎವಿ ಸೀನನ ಆಡಿಯೋ ರೆಕಾರ್ಡ್ ಪ್ಲೇಯರ್ ಇದ್ದ ರೇಡಿಯೋವನ್ನು ಅದಕ್ಕೊಂದು ವೈರ್ ಸಿಕ್ಕಿಸಿ.... ಮೈಕ್ ತರಹ ಕಾಣುವ ಹಂಗೆ ಒಂದು ಕರ್ಚೀಫ್ ಮುಚ್ಕೊಂಡು... ಕ್ಯಾಂಟೀನ್ ನಲ್ಲಿ ನಾಲ್ಕಾರು ಜನದ ಇಂಟರ್ ವ್ಯೂ.... ಮಾಡುವ ಹಂಗೆ ನಟಿಸಿ ಅವರ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡುವಂತೆ.... ಕೆಲವರು ಊಟದ ಬಗ್ಗೆ ಚೆನ್ನಾಗಿಲ್ಲ ಎನ್ನುವ ಅಭಿಪ್ರಾಯವನ್ನು ಬಹಳ ಕಟು ಮಾತುಗಳಿಂದ ಹೇಳಿದರೆ.. ಇನ್ನು ಕೆಲವರು ಹುರುಳಿಕಾಯಿ ಪಲ್ಯವನ್ನು ವಾರಕ್ಕೆ ಎರಡು ಸಲವಾದರೂ ಮಾಡಬೇಕು.... ಚಪಾತಿ ಚೆನ್ನಾಗಿರಬೇಕು ಹೀಗೆ ಸಲಹೆಗಳು. ಮಾರನೇ ದಿನ ಆಫೀಸಿನಲ್ಲಿ ಗುಲ್ಲೋ ಗುಲ್ಲು... ನಂತರವೇ ಎಲ್ಲರಿಗೂ ತಿಳಿದಿದ್ದು ಅದೊಂದು ಡೋಂಗಿ ಇಂಟರ್ವ್ಯೂ ಎಂದು.... ನಮಗೆ ಖುಷಿ.
ಶಹಾಬಾದಿನಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ... ಅಂತಹುದರಲ್ಲಿ ನಮ್ಮ ಮನೆಯಲ್ಲಿ ನೀರು ತುಂಬಿತ್ತು ಎನ್ನುವ ವಿಚಾರ "STRT 10/2 ನಲ್ಲಿ ಫ್ಲಡ್ಸ್ " ಎಂದೇ ನಮ್ಮ ಸ್ನೇಹಿತರ ಗುಂಪಿನಲ್ಲಿ ಜನಜನಿತವಾಗಿತ್ತು.... ಅಂದು ನಾನು HP ರಂಗನಾಥ್ ತಡರಾತ್ರಿ ಸುಮಾರು 2 ಗಂಟೆ ಇರಬಹುದು.... ಹೈದರಾಬಾದ್ ನಿಂದ ಬಂದೆವು... ಮನೆಯ ಬೀಗ ತೆಗೆದರೆ ಎಲ್ಲೆಲ್ಲೂ ನೀರು.... ನಮಗೆ ಗಾಬರಿ... ಒಳಗೆ ಹೋಗಿ ನೋಡಿದರೆ ಹಾಸಿಗೆಯೆಲ್ಲ ನೀರಿನಲ್ಲಿ ತೇಲುವಂತಿತ್ತು( ಆಗಿನ್ನು ನಾವು ಮಂಚವನ್ನು ಕೊಂಡಿರಲಿಲ್ಲ).. ಮನೆಯ ಒಂದು ಮೂಲೆಯ ಸುಮಾರು ಎರಡು ಚದರ ಅಡಿ ಜಾಗದಲ್ಲಿ ಕೂತು ಬೆಳಗಾಗುವವರೆಗೆ ಇಬ್ಬರು ಕಾಲ ಕಳೆದೆವು.... ಹಾಸಿಗೆ ಬಿಸಿಲಿಗೆ ಹಾಕಿ... ಮನೆಯನ್ನು ಸಮ ಮಾಡಿಕೊಂಡು..... ನಂತರ ತಿಳಿದದ್ದು ಕುಡಿಯುವ ನೀರಿಗಾಗಿ ಅಡುಗೆ ಮನೆಯಲ್ಲಿ ಇದ್ದ ನಲ್ಲಿಯನ್ನು ನಾವು ಮುಚ್ಚದೆ ಹೋಗಿದ್ದು... ನೀರು ಜೋರಾಗಿ ಬಂದು ಚಿಮ್ಮಿ ಮನೆಯೆಲ್ಲ ಹರಡಿತ್ತು.... ಇದು ನಮ್ಮ ಮರೆವಿನ ಫಲವೋ ಅಥವಾ ಬೇಜವಾಬ್ದಾರಿಯೋ ತಿಳಿಯದು.... ಇದು ಎರಡನೇ ಬಾರಿಯಾದದ್ದೂ ಈಗ ಇತಿಹಾಸ.
ಇನ್ನೊಂದು ನೆನಪು... ಅದು ಮಲ್ಲವ್ವ..... ಮಲ್ಲವ್ವ ನಮ್ಮ ಮನೆಯಲ್ಲಿ ಕೆಲಸ ಮಾಡಲು ಬರುತ್ತಿದ್ದ ಒಂದು ಚಿಕ್ಕ ಹುಡುಗಿ.... ಸುಮಾರು ಹತ್ತು ವರ್ಷವಿರಬಹುದು.... ಕೆಲಸ ಬಲು ಚುರುಕು... ಯಾವ ಮಟ್ಟಕ್ಕೆಂದರೆ ಭಾನುವಾರ ನಾವು ಮಲಗಿದ್ದ ಹಾಸಿಗೆಯ ಸುತ್ತ, ಹಾಗೇ ಗುಡಿಸಿ, ಒರಸಿ ತನ್ನ ಪಾಡಿಗೆ ತಾನು ಹೋಗುತ್ತಿದ್ದವಳು... ನಮ್ಮ ಮುಂದೆ ಒಂದು ಮಾತೂ ಆಡದಿದ್ದ ಹುಡುಗಿ ಒಂದು ದಿವಸ ಯಾರಿಗೋ " ಯಾಕಲೇ ಭಾಢ್ಯ" ಎಂದು ಬೈದಿದ್ದು ಕೇಳಿಸಿಕೊಂಡಿದ್ದೇನೆ. ಒಂದೆರಡು ದಿನ ಕೆಲಸಕ್ಕೆ ಬರಲಿಲ್ಲ... ನಂತರ ಮಲ್ಲವನ ಅಮ್ಮ ನಮ್ಮ ಮನೆಗೆ ಬಂದು " ಯಾರೋ ಹೇಳಿದರು ಮಲ್ಲವ್ವ ರಂಗ ಸಾಬ್ರು ಮನೇಲಿ ಇದಾಳೆ ಅಂತ" ಇಬ್ಬರೂ ರಂಗಗಳೇ... ನಮ್ಮ ಮನೆಯಲ್ಲಿ ಇಲ್ಲ ಎಂದು ಖಚಿತಪಡಿಸಿಕೊಂಡು ಹೋದಳಾಕೆ... ಕೆಲ ದಿನಗಳ ನಂತರ ತಿಳಿದದ್ದು ಮಲ್ಲವ್ವ ಬೊಂಬಾಯಿಗೆ ಹೋದಳೆಂದು.... ಯಾವ ವಿಷ ಚಕ್ರದಲ್ಲಿ ಸಿಲುಕಿದಳೋ.... ಬೆಳೆಯುತ್ತಿದ್ದ ಒಂದು ಸುಂದರ ಗಿಡ... ಯಾವುದೋ ಪ್ರಲೋಭನೆಯಿಂದ ಮುರುಟಿತು... ನೆನೆದರೆ ಈಗಲೂ ಬೇಸರ.
ಭಾನುವಾರಗಳಂದು ತರಕಾರಿ ಹಾಗೂ ಹಣ್ಣುಗಳನ್ನು ತರಲು ಶಹಾಬಾದ್ ಮಾರುಕಟ್ಟೆಗೆ ಹೋಗುವುದು ವಾಡಿಕೆ... ಅಲ್ಲೇ ಇದ್ದ ಒಂದು ಹೋಟೆಲ್ನಲ್ಲಿ ಏನಾದರೂ ತಿಂಡಿಯನ್ನು ತಿಂದು.. ತರಕಾರಿ ತರುವುದು... ಬಂದು ಮಲಗುವುದು... ನಂತರ ಎದ್ದು ಅಡಿಗೆ ಊಟ. ನಾವೇ ಅಡಿಗೆಯನ್ನು ಮಾಡುತ್ತಿದ್ದ ದಿನಗಳಲ್ಲಿ ಭಾನುವಾರ ಸೊಪ್ಪಿನ ಹುಳಿ ಹಾಗೂ ಪಾಯಸ... ದಿನ ಕಳೆದಂತೆ ತರಕಾರಿಯೂ ಖಾಲಿ... ವಾರದ ಕೊನೆಗೆ ಆಲೂಗಡ್ಡೆ ಈರುಳ್ಳಿ ಹುಳಿ...... ಖಾತ್ರಿ.
ಭಾನುವಾರ ಸಂಜೆ, ಭಂಕೂರು ಗಣಪತಿಯ ಕಡೆಗೋ, ಗುಲ್ಬರ್ಗ ರೋಡ್ ಗಣಪತಿಯ ಕಡೆಗೋ ನಮ್ಮ ವಾಕಿಂಗ್... ಹೊಸದಾಗಿ ಮದುವೆಯಾದ ಪರಿಚಯದ ಜೋಡಿ ವಾಕಿಂಗ್ ನಲ್ಲಿದ್ದರೆ.. ಅವರಿಗೆ ಗೋಳು ಹೊಯ್ಕೊಂಡದ್ದು ಇದೆ. ಕೆಲ ಭಾನುವಾರಗಳು ಗುಲ್ಬರ್ಗ ಪ್ರವಾಸಕ್ಕೆ ಮೀಸಲು.
ಕ್ಯಾಂಟೀನ್ ಊಟ ಸಾಕಾಯ್ತು, ಅಡಿಗೆ ಮಾಡಿ ಸುಸ್ತಾಯಿತು... ಕೊನೆಗೆ ಹೊಳೆದದ್ದು ನಮ್ಮದೇ ಮೆಸ್. ಶೇಷಗಿರಿ, ಸತ್ಯನಾರಾಯಣ, ರಘು, ನಾವಿಬ್ಬರೂ ರಂಗನಾಥ್.. ಸೇರಿ ಮಾಡಿದ್ದು... ನನಗಾಗಿ ಅಲಾಟ್ ಆಗಿದ್ದ ಒಂದು ಕ್ವಾಟರ್ಸಿನಲ್ಲಿ.
ಅಡಿಗೆ ಮಾಡಲು ಬಂದಾಕೆ " ಮೆಸ್ಸಮ್ಮ"... ಹೆಸರು ಗೊತ್ತಿಲ್ಲ... ಮೆಸ್ಸಮ್ಮನಿಗೆ ಶೇಷಗಿರಿ ದೊಡ್ಡಸಾಬ... ಅವನು ಹೇಳಿದ್ದು ವೇದವಾಕ್ಯ... ನಾವೆಲ್ಲ ಹೇಳಿದರೆ " ಇಲ್ರೀ ದೊಡ್ ಸಾಬರು ಹೇಳಾರೆ" ಎಂಬ ಉತ್ತರ. ಶೇಷಗಿರಿ ನಮ್ಮ ರುಚಿಯ ಅಡಿಗೆ ಮಾಡುವುದನ್ನು ಹೇಳಿಕೊಟ್ಟಿದ್ದು ... ಆಕೆ ಮಾಡುತ್ತಿದ್ದ ಒಬ್ಬಿಟ್ಟು... ತುಂಬಾ ರುಚಿಯಾಗಿರುತ್ತಿತ್ತು. ನಾವು ಬಿಟ್ಟ ನಂತರ ಆಕೆ ಒಂದು ಸಣ್ಣ ಹೋಟೆಲ್ ಮಾಡಿದ್ದಳು ಎಂಬ ಸುದ್ದಿ ಮುದ ನೀಡಿತು.
ನಾನು ತುಂಬಾ ಮೆಚ್ಚಿದ ವ್ಯಕ್ತಿಗಳಲ್ಲಿ ಪೋಸ್ಟ್ ಮ್ಯಾನ್ ಇಸ್ಮಾಯಿಲ್ ಒಬ್ಬರು. ಈತ ನಮಗೆ ತಲುಪಿಸುತ್ತಿದ್ದ ಕಾಗದಗಳ ಪರಿ... ಹಾಗೂ ನಮಗೆ ಬೇಕಾದ ಸ್ಟ್ಯಾಂಪ್ ವಗೈರೆ ತಂದು ನಮ್ಮ ಜಾಗಕ್ಕೆ ಕೊಡುತ್ತಿದ್ದ ವಿಶಿಷ್ಟ ಸೇವೆ ಮೆಚ್ಚುವಂಥದ್ದು.... ಅದಕ್ಕಾಗಿ ಆತ ಬಯಸುತ್ತಿದ್ದದ್ದು ದೀಪಾವಳಿ ಬಕ್ಷೀಸು ಮಾತ್ರ.
ಆಫೀಸಿನಲ್ಲಿ... ನನಗೆ ಹತ್ತಿರವಾಗಿ ಕುಳಿತುಕೊಳ್ಳುತ್ತಿದ್ದ ಡಿ ವಿ ಲೇಲೆ, ತುಂಬಾ ಹಿರಿಯರು.. ಸಿಗರೇಟ್ ಸೇದುತ್ತಾ... ಚಿಟಿಕೆ ಹೊಡೆಯುತ್ತಿದ್ದ ರೀತಿ ಇನ್ನೂ ನೆನಪಿದೆ. ಜೀವನ್ ಜೋಶಿ ಹಾಗೂ ರಮೇಶ್ ಕುಮಾರ್ ಆಫೀಸಿನಲ್ಲಿ ತುಂಬಾ ಒಡನಾಡಿದವರು...
ವೃತ್ತಿಜೀವನದ ಮೊದಲ ಗುರು.. ಗಣೇಶ್ ಭಟ್ಟರು, ಜೊತೆ ಜೊತೆಗೆ ಎಸ್ ಎಸ್ ಮುತ್ತಾತಿ ಹಾಗೂ ಎಎಸ್ಎನ್ ಶಾಸ್ತ್ರಿ.... ಇವರುಗಳ ಕಾರ್ಯ ಶೈಲಿ ಮತ್ತು ಮಾರ್ಗದರ್ಶನ ಈಗಲೂ ನನ್ನ ಕೈ ಹಿಡಿದಿದೆ.
ಡಿಸೈನ್ ಆಫೀಸ್ ಮ್ಯಾನೇಜರ್ ಎಎಲ್ ಪಸ್ತಾಲ.... ತುಂಬ ಖಡಕ್ ಎಂದು ಪ್ರತೀತಿ... ಅವರ ಮಾತು ಕೇಳಿದ ತಕ್ಷಣ ಎಲ್ಲ ಇದರೂ ... ನಾವು ನಮ್ಮ ಜಾಗಕ್ಕೆ ಓಡುತ್ತಿದ್ದೆವು.. ಆಗ ಅವರು ಹೇಳುತ್ತಿದ್ದ "aye...why are you flying like chickens" ನೆನೆಸಿದರೆ ನಗೆ ಬರುತ್ತದೆ... ಆಗಂತೂ ಭಯ ಇತ್ತು.
" ನೀರು ಕುದಿಸಿ ಒಂದು ಕೈಯಲ್ಲಿ ರವೆ ಒಂದು ಕೈಯಲ್ಲಿ ಉಪ್ಪು ಹಿಡುಕೊಂಡು ದಬಾರ್ ದಬಾರಂತ ಹಾಕಿ ಬೇಯಿಸಿದರೆ ಉಪ್ಪಿಟ್ಟು... ಸಕ್ರೆ ರವೆ ಹಾಕಿದ್ರೆ ಕೇಸರಿ ಬಾತ್" ಎಂದು ಹೇಳಿದ ಶ್ರೀನಾಥ..." ಏನಯ್ಯ ಮಾಡ್ಲಿ.. ಚಪ್ಲಿ ಕಿತ್ತೋಗಿದೆ ಅದಕ್ಕೆ ಯಾವಾಗಲೂ ಶೂ ಅಂತ ಹೇಳಿದ ಗುರು..." ನನ್ ಪ್ರಕಾರ ಈಗ ರಾತ್ರಿ 12 ಗಂಟೆ".. ಅಂತ ಅಮೆರಿಕ ಸಮಯದ ಬಗ್ಗೆ ಹೇಳಿದ ಆರ್ ಎಲ್ ಶ್ರೀನಿವಾಸ... ನಾವು ಅದನ್ನು ವಿಪರೀತ ಅರ್ಥೈಸಿದ್ದು.... ಸತ್ತಿ ಆಡುತ್ತಿದ್ದ ತಮಾಶೆಯ ಮಾತುಗಳು... ಅದರಲ್ಲೂ ಪೋಲಿತನ ತುಂಬಿರುತ್ತಿದ್ದ ತುಣುಕುಗಳು.. ಎಲ್ಲವೂ ನನ್ನ ಸ್ಮೃತಿ ಪಟಲದ ಮೇಲೆ ಆಗಾಗ ಹಾಯ್ದು ಹೋಗುತ್ತವೆ...ತುಂಬ ನಗೆ ಮಿಂಚುತ್ತದೆ.
ಎಸ್ ಎಸ್ ಮುತ್ತಾತಿಯವರು.." ಯಾಕ್ರೀ ರಂಗನಾಥ್" ಅಂತ ಕೇಳಿದಾಗ ನಾನು ಸ್ವಲ್ಪ ಗಾಬರಿಯಾಗಿ " ಯಾಕೂ ಇಲ್ಲ" ಎಂದು ಹೇಳಿ.... ಏನ್ರೀ ಬದಲು.. ಯಾಕ್ರೀ ಅಂತ ಉಪಯೋಗಿಸುವ ಶೈಲಿಯನ್ನು ಅರ್ಥ ಮಾಡಿಕೊಂಡೆ.
STRT 10 ನೇ ಬ್ಲಾಕ್ ನ ಒಡನಾಡಿದ ನಿವಾಸಿಗಳು... ಸಿವಿಕೆ ಮನೆಯವರು... ಅದರಲ್ಲೂ ಮೂರು ಮಕ್ಕಳು ನಾಗೇಂದ್ರ, ವಾಸು ಹಾಗೂ ವಿಜಿ (ಈಗಲೂ ಸಂಪರ್ಕದಲ್ಲಿದ್ದಾರೆ), ಶಂಕರ್ ಲಿಂಗ ಪ್ರಭು, ನವಲಿ ಹನುಮಂತರಾವ್, ಆರ್ ಎಸ್ ಕೃಷ್ಣಸ್ವಾಮಿ, ದೇಸಾಯಿ , ರಾಮಾಚಾರ್ ಹಾಗೂ ವಿಶ್ವನಾಥ್ ಮನೆಯವರುಗಳು...
ಇನ್ನು ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಗೆಳೆಯರ ಬಳಗ ಇದರ ನೆನಪುಗಳು ಬಹಳ... ಈಗಾಗಲೇ ಹಂಚಿಕೊಂಡಿದ್ದೇನೆ ಸಹ.
ತಿರಂದಾಸ್ ಮತ್ತು ಎಸಿಸಿ ಸಿನಿಮಾಗಳಲ್ಲಿ ಬಂದ ಎಲ್ಲ ಚಿತ್ರಗಳು, ಎಸಿಸಿ ಕ್ಲಬ್ನಲ್ಲಿ ಆಗುತ್ತಿದ್ದ ಕೆಲ ವಿಶೇಷ ಕಾರ್ಯಕ್ರಮಗಳು, ಹೌಸೀ ಆಟ... ಪ್ರಮುಖ ಆಕರ್ಷಣೆಗಳು.
ನಮ್ಮ ಕಂಪನಿಯ ಮೊದಲ ಲೇಡಿ ಎಂಪ್ಲಾಯಿ... ಹೆಸರು ಕಲ್ಯಾಣಿ ಕುಟ್ಟಿ.... ಲೈಬ್ರರಿಯಲ್ಲಿ ಕೆಲಸ... ಲೈಬ್ರರಿ ನಾನು ಕೆಲಸ ಮಾಡುತ್ತಿದ್ದ ಡಿಸೈನ್ ಆಫೀಸ್ ನ ಒಂದು ಭಾಗ ... ಡಿಸೈನ್ ಆಫೀಸಿಗೆ ಕಳೆ ಬಂತು ಅನ್ನುವುದು ನಮ್ಮ ಮಾತಿನ ಭಾಗವಾಗಿತ್ತು.
ನನಗೊಂದು ಅವ್ಯಕ್ತ ನೋವಿತ್ತು... ಅದು ಡಿಪ್ಲೋಮಾ ಓದಿದವರನ್ನು ಎರಡನೇ ದರ್ಜೆಯವರ ತರಹ ನೋಡುವ ದೃಷ್ಟಿಕೋನ... ಅದರಿಂದ ಹೊರಬರುವ ಆಸೆ ಕೈಗೂಡಿದ್ದು 46 ತಿಂಗಳ ನಂತರ.... ಅಂತೂ ಶಹಾಬಾದನ್ನು ಬಿಟ್ಟು ಬರುವ ಸಮಯ... ಡಿಸೈನ್ ಆಫೀಸ್ ನಲ್ಲಿ ಹೊರಹೋಗುವ ವ್ಯಕ್ತಿಗಳಿಗೆ ಬೀಳ್ಕೊಡುವ ಸಂಪ್ರದಾಯ ಇತ್ತು. ಅದರಲ್ಲಿ ನಾನು ಸಕ್ರಿಯವಾಗಿ ಭಾಗವಹಿಸುತಿದ್ದೆ.... ನಾನೂ ಆ ಬೀಳ್ಕೊಡುಗೆಯನ್ನು ಪಡೆದಿದ್ದೇನೆ... ಆ ಸಮಯದಲ್ಲಿ ತೆಗೆದ ಫೋಟೋವನ್ನು ಟೆಂಗಳಿ ನನಗೆ ನೆನಪಾಗಿ ಕೊಟ್ಟಿದ್ದು ಈಗಲೂ ನನ್ನ ಬಳಿ ಇದೆ.
ವೈಯುಕ್ತಿಕ ನೆಲೆಯಲ್ಲಿ... ನನ್ನ ವೃತ್ತಿ ಜೀವನಕ್ಕೆ ಒಳ್ಳೆಯ ತಳಹದಿ, ನನ್ನ AMIE ಓದಿನ ಮುಂದುವರಿಕೆ, ಕೆಲ ಕಾಲ ಜಾರಿಯಲ್ಲಿದ್ದ ತಬಲಾ ಕಲಿಕೆ.... (ನಟರಾಜ ನನ್ನ ಗುರು... ಲಕ್ಷ್ಮಣ ಶಾಸ್ತ್ರಿಗಳು ಗುಲ್ಬರ್ಗದಲ್ಲಿ ತಬಲವನ್ನು ಕೊಡಿಸಿ ಪ್ರೇರೇಪಿಸಿದ ಮಾರ್ಗದರ್ಶಕರು...) ಹಾಗೂ ನನ್ನಲ್ಲಿದ್ದ ಆಸಕ್ತಿಗಳ ಅಭಿವ್ಯಕ್ತಿಗೆ ಪೂರಕವಾಗಿ ಇದ್ದ ವಾತಾವರಣ... ಇದು ನನಗೆ ಶಹಾಬಾದ್ ಕೊಟ್ಟ ಉಡುಗೊರೆ. ನನ್ನ ಸರ್ವತೋಮುಖ ಬೆಳವಣಿಗೆಗೆ ಸ್ಫೂರ್ತಿ ಸಿಕ್ಕ ಸ್ಥಳ ಶಹಾಬಾದ್... ಹಾಗಾಗಿ ಅದರ ಬಗ್ಗೆ ನನಗೆ ವಿಶೇಷ ಒಲವು ಎಂಬ ನಂಬಿಕೆ. 46 ತಿಂಗಳುಗಳ ಕಾಲ ಇದ್ದರೂ ಸಹ..46 ವರ್ಷದಷ್ಟು ನೆನಪುಗಳ ಸರಮಾಲೆ ನನ್ನಲ್ಲಿದೆ.. ಅದನ್ನು ಸಾಧ್ಯವಾದಾಗಲೆಲ್ಲ ಮತ್ತೆ ಮತ್ತೆ ನೆನಪಿಸಿಕೊಂಡು ಖುಷಿಪಡುವುದು ನಡೆದೇ ಇದೆ..
ಗೋವಿಂದರಾಜು ಬೆಂಗಳೂರಿಗೆ ಬಂದ ಮೇಲೆ ಮುತುವರ್ಜಿ ವಹಿಸಿ ಶಹಾಬಾದ್ ಫ್ರೆಂಡ್ಸ್ ಅಸೋಸಿಯೇಷನ್ ಅಂತ ಶುರು ಮಾಡಿ... ಆಗಾಗ ನಾವೆಲ್ಲ ಭೇಟಿ ಮಾಡಿ ಸಮಯ ಕಳೆಯುತ್ತಿದ್ದದ್ದು ಶಹಾಬಾದಿನ ದಿನಗಳ ನೆನಪಿಗೆ ಒಂದು ವೇದಿಕೆ ಆಗಿತ್ತು.... ಇದನ್ನೇ ವಿಜೃಂಭಣೆಯಾಗಿ ಎರಡು ವರ್ಷಗಳ ಕಾಲ ನಡೆಸಿದವರು ಹಾಗೂ ಒಂದು ದಿನದ ಟ್ರಿಪ್ಪನ್ನು ಆಯೋಜಿಸಿದವರು ರಂಜನ್ ಶಾಸ್ತ್ರಿ, ಗಿರೀಶ್ ತಂಡದವರು...2019 ರ ನಂತರ ಮುಂದುವರೆದಿಲ್ಲ.... ಕರೋನವೂ ಒಂದು ಕಾರಣ ಇರಬಹುದು.... ಆ ಸಮಯದಲ್ಲಿ ಎಲ್ಲರೂ ಭೇಟಿಯಾಗಿ ಒಂದು ದಿನ ಕಳೆದದ್ದು ಸೊಗಸಿನ ಕ್ಷಣಗಳು.
ಮುಂದೆಯೂ ಇದು ನಡೆಯಲಿ ಎಂಬುದು ನನ್ನ ಆಶಯ...
ಹೇಗೆ ಮುಗಿಸಲಿ ಈ ಲೇಖನವನ್ನು... ಎರಡು ವರ್ಷದ ಕೆಳಗೆ ಅಚಾನಕ್ಕಾಗಿ... ಶಹಾಬಾದ್ ಮಾರ್ಗವಾಗಿ ಹೋಗಬೇಕಾಗಿ.... ಆಗ ಕಾಲೋನಿಯಲ್ಲಿ ಸುತ್ತಾಡಿ...STRT 10/2... ಒಳಹೊಕ್ಕು ಬಂದದ್ದು ಮೈ ನವಿರೇಳಿಸುವ ಅನುಭವ... ಶಹಾಬಾದಿಗೆ ಋಣಿ ಎನ್ನಲೇ, ಜೈ ಅನ್ನಲೇ, ಮತ್ತೆ ಆ ಜೀವನ ಮರುಕಳಿಸಲಿ ಎನ್ನಲೇ.... ಹೇಗಾದರೂ.... ಓ ಶಹಾಬಾದ್.... ನೀನು ನನ್ನ ಮನದಾಳದಲ್ಲಿ ನೆಲೆಸಿದ ಆತ್ಮೀಯ ಗೆಳೆಯ.. ನಿನಗಿದೋ ನನ್ನ ಹೃತ್ಪೂರ್ವಕ ನಮಸ್ಕಾರ...
Wonderful memories half a century back.
ReplyDeleteExcellent narration of our Golden days
I wish to mention some more.
We all used to meet at ball batminton ground and discuss about Rajyotsava . Our firs enacment of a small kit in Dasara nada habba function in SahabD Town. Our first musical performance in Bhankur village. K R Sathi's maiden Harikathe in Local kannada.
These are the few things flashed back in my memory
Thank you for sharing our shahabad memories ,it’s so refreshing to read the writings takes us to Shahabad nicely done rangnath ji..we all should thank you Govindraj uncle sunder kumar Badriprasad and our Ranjan shastry ..thank you for remembering me-let’s all meet soon-Girish megharaj
ReplyDeleteಸುಂದರವಾದ ನೆನಪುಗಳು, ಶಹಾಬಾದ್ ನೆನಪುಗಳು ನಮ್ಮ ಹೃದಯದಲ್ಲಿ ಅಚ್ಚೊತ್ತಿವೆ.
ReplyDeleteಮನದಾಳದ ಆನಂದದ ಅನುಭವ ಶಹಬಾದಿ ನಲ್ಲಿ - ರಸಪೂರ್ಣವಾಗಿದೆ ಬರವಣಿಗೆ.
ReplyDeleteYou have good memory Ranganath.
ReplyDeleteGreat Experience penned down beautifully.. your writing has taken back to Shahabad days..characters changes and most of our experiences are common. thanks
ReplyDeleteಮುಂಜಾನೆಯ ಶುಭೋದಯ.ಶಹಾಬಾದಿನಲ್ಲಿ ತಮ್ಮ 46 ತಿಂಗಳುಗಳ ಅನುಭವಗಳನ್ನು 50 ವರ್ಷ ಆದ ಮೇಲೆ ಶಹಾಬಾದಿನ ಹವಾಮಾನ ಪರಿಸ್ಥಿತಿ,ಕಂಪನಿಗೆ ಸಂಬಂಧಿಸಿದ ಮನೆಗಳಲ್ಲಿ ವಾಸಿಸುವ ಸಂದರ್ಭದಲ್ಲಿ ಆದ ಅನುಭವ, ಸ್ನೇಹಿತರೊಂದಿಗೆ ತಮ್ಮ ಒಡನಾಟ,ಕಂಪನಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳೊಡನೆ ತಮ್ಮ ಜಡನಾಟ ಇವೆಲ್ಲವೂಗಳನ್ನು ಉತ್ತಮವಾಗಿ ಬರೆದಿರುತ್ತೀರಿ.ತಮ್ಮಜ್ನಾಪನಶಕ್ತಿಗೆ ಅನಂತ ಧನ್ಯವಾದಗಳು.2024 ರ ಹೊಸ ವರ್ಷದಲ್ಲಿ ತಮಗೆ ಉತ್ತಮ ಆರೋಗ್ಯ, ಸಂತೋಷ ಹಾಗೂ ನೆಮ್ಮದಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.ದೇವೇಂದ್ರಪ್ಪ.
ReplyDelete