ಚಾರಣ... ನೆನಪಿನ ತೋರಣ
ಡಿಸೆಂಬರ್ ಬಂತು ಅಂದಾಗ... ನಮ್ಮ ಮಂಜು (ಎ ಮಂಜುನಾಥ) ಚಾರಣದ ಬಗ್ಗೆ ಚಿಂತನ ಮಂಥನ ಶುರು ಮಾಡುತ್ತಿದ್ದ... ಬೆಳಗಿನ ವಾಕಿಂಗ್ನಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು... ಕೊನೆಗೆ ಅವನೇ ನಿರ್ಧರಿಸುತ್ತಿದ್ದ ಒಂದು ಜಾಗಕ್ಕೆ ಹೋಗುವುದು ಮಾಮೂಲು. ಅವನು BSNL ನಲ್ಲಿ ಕೆಲಸ ಮಾಡುತ್ತಿದ್ದ... ಹಾಗಾಗಿ ಅವನಿಗೆ ಕರ್ನಾಟಕದ ಬಹು ಭಾಗದ ಜನರೊಡನೆ ಸಂಪರ್ಕವಿತ್ತು.... ಅಲ್ಲಿನ ಅನುಕೂಲಗಳು... ಇಳಿದು ಕೊಳ್ಳುವ ಜಾಗ ಎಲ್ಲವನ್ನು ಸುಗಮವಾಗಿ ಆಯ್ಕೆ ಮಾಡುತ್ತಿದ್ದ... ಅವನ ಯೋಜನೆ ಹೇಗಿರುತ್ತಿತ್ತು ಎಂದರೆ... ಹೋಗುವವರು ಯಾರು... ಏನೇನು ತಗೊಂಡು ಹೋಗಬೇಕು... ಯಾರು ಅದನ್ನು ಹೊರಬೇಕು .... ಹಾಗೂ ಯಾವ್ಯಾವ ದಿನ ಏನೇನು ತಿಂಡಿ ಅಡಿಗೆ ಆಗಬೇಕು ...ಅದಕ್ಕೆ ಬೇಕಾದ ಸಾಮಾನುಗಳು, ಪಾತ್ರೆಗಳನ್ನೂ ಸೇರಿ...ಎಲ್ಲವನ್ನೂ ಕೂಲಂಕುಶವಾಗಿ ಯೋಚಿಸಿ ಪಟ್ಟಿಮಾಡಿ... ತಯಾರಾಗಿರುತ್ತಿದ್ದ. ನಾನಂತೂ ಅವನು ಹೇಳಿದ್ದನ್ನು ಕೇಳಿ ಒಪ್ಪಿಗೆಯ ಠಸ್ಸೆ ಒತ್ತುತ್ತಿದ್ದೆ... ಅದು ಅವನಿಗೆ ಸಮಾಧಾನ ಕೊಡುತ್ತಿತ್ತು...
ಹೋಗುವವರ ಪಟ್ಟಿಯಲ್ಲಿ ಅಂಬೂರಿನ ರವಿಕುಮಾರ್ ಗೆ ಆದ್ಯತೆ ಇತ್ತು... ಅವನು ಇದ್ದದ್ದು ತಮಿಳುನಾಡಿನ ಅಂಬೂರಿನಲ್ಲಾದರೂ, ಹಳೆಯ ಸ್ನೇಹದ ಬಂಧನಕ್ಕೆ ಒಳಗಾಗಿ ನಮ್ಮೊಡನೆ ಬರುತ್ತಿದ್ದ. ಅಂಬೂರ್ ನ ವಿಶೇಷತೆ ಎಂದರೆ ಅವನ ತಮಿಳು ಮಿಶ್ರಿತ ಕನ್ನಡ... ಹಾಸ್ಯ ಮಾತುಗಾರ, ಚಾರಣದ ಚಿಕ್ಕ ಅಡುಗೆಯವ... ಮಾಡುತ್ತಿದ್ದದ್ದು ಚಹಾ... ಅದಕ್ಕೆ ಸ್ವಲ್ಪ ಉಪ್ಪು ಹಾಕುವುದು ಅವನ ವಿಶೇಷತೆ... ನಾನು ಕಾಫಿ, ಟೀ ಕುಡಿಯುವನಲ್ಲವಾದ್ದರಿಂದ... ಬೂಸ್ಟ್ ನ ಪಟ್ಟಣದಿಂದ.. ನನಗಾಗಿ ಯಾರಿಗೂ ಗೊತ್ತಾಗದಂತೆ ಕೊಡುತ್ತಿದ್ದ... Partner in crime. ದುರ್ದೈವ ಈಗ ಅವನು ನಮ್ಮೊಂದಿಗಿಲ್ಲ.... ಅವನ ನೆನಪು ಮಾತ್ರ ಆಗಾಗ ಕಾಡುತ್ತೆ... ಅಂಬೂರ್ ನಿನಗಿದೋ ನನ್ನ ನೆನಪಿನ ಅಶ್ರು ತರ್ಪಣ...
ಈ ಚಾರಣ ತಂಡದ ವಿಶೇಷ ಅಂದರೆ... ಬಹಳ ಜನ ಮಂಜುವಿನ ನೆಂಟರು... ನಾನು, ಭಾಸ್ಕರ ಅಂಬೂರ್ ಹಾಗೂ ಜೈ ಸಿಂಹ ಇದಕ್ಕೆ ಹೊರತು(ವಿರೋಧಕ್ಕಾಗಿಯೇ ವಿರೋಧ ಪಕ್ಷ ಎಂದರೂ ಸರಿಯೆ) ಹಾಗಾಗಿ ತರಲೆ ಮಾಡಲು ನಮ್ಮದೇ ಗುಂಪು... ಸಮಯ ಸಂದರ್ಭ ನೋಡಿ ನೆಂಟರು ಸಹ ನಮ್ಮೊಡನೆ ಬರುತ್ತಿದ್ದದ್ದು ತುಂಬಾ ಹಾಸ್ಯಮಯವಾಗಿರುತ್ತಿತ್ತು... ಇಂಥ ಸಮಯದಲ್ಲಿ... ವೋಟ್ ಮಾಡಿ ನಿರ್ಧಾರ ಮಾಡೋಣ ಅನ್ನುವುದು ಒಂದು ಚಿಂತನೆ ಅಂಬೂರ್ ದು. ಅಂಬೂರ್ ಶುರು ಮಾಡುತ್ತಿದ್ದ ವೋಟ್ ಫಾರ್ ಡಿಸಿಆರ್( ನಾನು.... ವಿರೋಧ ಪಕ್ಷದ ಅವಿರೋಧ ನಾಯಕ) ಸುಲಭವಾಗಿ ಕೆಲವು ವೋಟುಗಳು ನನಗೆ ಬೀಳುತ್ತಿದ್ದವು... ಆದರೆ ಅವಿಯ ಓಟು (ಅವಿನಾಶ್) ನನಗೆ ಬೀಳುತ್ತಲೇ ಇರಲಿಲ್ಲ... ತಮಾಷೆ ಎಂದರೆ ಮಂಜುವಿನ ವೋಟೂ ನನಗೆ ಬಿದ್ದಿದೆ... ಆದರೆ ಅವಿನಾಶನ ಓಟು ಮಂಜುಗೆ ಮಾತ್ರ.. ಅದನ್ನು ಪಡೆಯಲು ನನಗೆ ಸಾಧ್ಯವಾಗಲೇ ಇಲ್ಲ.
ನನ್ನ ಮೊದಲ ಚಾರಣ ಶೃಂಗೇರಿಯಿಂದ ಹೊರನಾಡಿಗೆ ಕಾಲ್ನಡಿಗೆಯಲ್ಲಿ ಪಯಣ... ಬೆಳಿಗ್ಗೆ ತಿಂಡಿ ತಿಂದು ಹೊರಟಾಗ ಉತ್ಸಾಹ ಉತ್ತುಂಗದಲ್ಲಿತ್ತು... ನಾವು ಆರಿಸಿಕೊಂಡ ದಾರಿ ಹೊರನಾಡು ಮುಟ್ಟಲು ಸುಮಾರು ಮೂರು ತಾಸಿನ ಸಮಯ ಎಂದು ಅಲ್ಲಿನ ಜನರ ಅಭಿಪ್ರಾಯ... ಬಹುಶಃ ಅದು ಅವರ ಅಭ್ಯಾಸ ಹಾಗೂ ನಡಿಗೆಯ ವೇಗಕ್ಕೆ ಸರಿ ಇರಬಹುದು.... ನನ್ನ ಮನಸ್ಸಿನ ಲೆಕ್ಕ ಹೆಚ್ಚೆಂದರೆ ಅದು ಆರಾಗಬಹುದು.... ದಾರಿ ಮಧ್ಯದಲ್ಲಿ ಒಬ್ಬ ಆಗಂತುಕ.. ಹೇಳಿದ ಕಡಿದಾದ ಆದರೆ ಬಹು ಹತ್ತಿರದ ದಾರಿಯನ್ನು ನಾವು ಆಯ್ಕೆ ಮಾಡಿಕೊಂಡು ಹೊರಟು ಕಾಡಿನ ಮಧ್ಯದಲ್ಲಿ ಎಲ್ಲಿ ದಾರಿ ತಪ್ಪಿದೆವೋ .... ಸೂರ್ಯ ಮುಳುಗುವ ಹೊತ್ತಾದರೂ ಹೊರನಾಡು ಇರಲಿ... ಜನವೂ ಕಣ್ಣಿಗೆ ಕಾಣಲಿಲ್ಲ... ಒಂದು ಕ್ಷಣ ನನ್ನ ಮನಸ್ಸಿಗೆ ಬಂದ ಆಲೋಚನೆ... ಇದ್ದಕ್ಕಿದ್ದಂತೆ ಹುಲಿ ಬಂದರೆ... ಯಾರೊಡನೆಯೂ ಹೇಳಲಿಲ್ಲ... ಸುಮಾರು ಸಮಯದ ನಂತರ ಕಂಡದ್ದು ಎರಡು ಮೂರು ಮನೆ ಇರುವಂತಹ ಒಂದು ಜಾಗ... ಅವರಲ್ಲಿ ಮಾತಾಡಿ ನಮ್ಮ ಪರಿಸ್ಥಿತಿಯನ್ನು ಹೇಳಿ... ಅವರಲ್ಲಿಯೇ ತಂಗಿ ಅಡಿಗೆ ಮಾಡಿ ಅವರನ್ನು ಜೊತೆ ಸೇರಿಸಿಕೊಂಡು ಊಟ ಮಾಡಿ, ಆಟವಾಡಿ ಕಳೆದ ರಾತ್ರಿ ಬಲು ಸೊಗಸು... ನಿಜಕ್ಕೂ ಅಲ್ಲಿನ ಜನಗಳ ಪ್ರೀತಿ ಮತ್ತು ಆದರ ಸ್ಮರಣೀಯ.... ಬೆಳಿಗ್ಗೆ ಬೇಗ ಎದ್ದು ಬಿಸಿ ಬಿಸಿ ನೀರ ಸ್ನಾನ ಮಾಡಿ ಅವರ ಮನೆಯ ನಾಯಿಯನ್ನು ಕರೆದುಕೊಂಡು ತೋಟದಲ್ಲಿ ಓಡಾಡಿದ ಗಳಿಗೆಗಳು ಮೊದಲ ಅನುಭವ.
ಇನ್ನು ಕೆಲಸದ ಹಂಚಿಕೆ... ಕಿಟ್ಟಿ( ಕೃಷ್ಣಮೂರ್ತಿ ಮಂಜು ಸೋದರಮಾವ) ದೊಡ್ಡಡಿಗೆಯವರು.. ಕಿಟ್ಟಿ ಬಂದಾಗ ಅಡಿಗೆ ಕೆಲಸ ನಮಗೆ ಸಮಸ್ಯೆಯೇ ಆಗುತ್ತಿರಲಿಲ್ಲ....ಎಲ್ಲಾ ಆತನ ಜವಾಬ್ದಾರಿ. ಸಾಮಾನುಗಳನ್ನು ತೆಗೆದುಕೊಡುವುದು ಮಂಜು, ಈರುಳ್ಳಿ... ತರಕಾರಿ ಹೆಚ್ಚುವುದು ನಾನು ಹಾಗೂ ಆ ಸಮಯಕ್ಕೆ ಒದಗಿದ ಯಾರಾದರೂ ಸಹಾಯಕರು, ಅಲ್ಪ ಸ್ವಲ್ಪ ಸಹಾಯ ಮಾಡಿ ಕಿಟ್ಟಿಮಾಡಿದ ಅಡಿಗೆ ವಿಶ್ಲೇಷಣೆ ಮಾಡುತ್ತಾ... ಅದಕ್ಕೆ ಮಂಜು ಮತ್ತು ಕಿಟ್ಟಿ ಕೊಡುವ ಸಮಜಾಯಿಷಿಯನ್ನು ಕೇಳುತ್ತಾ... ಹಾಗೆ ಮಾಡಿದಾಗ ಉಳಿಸಿದ( ಕಮಿಷನ್)ಹಣವನ್ನು ಲೆಕ್ಕ ಹಾಕುತ್ತಾ ಊಟ ಮಾಡುವುದೇ ಒಂದು ಮೋಜು. ಆದರೆ ಊಟ ಆದ ಮೇಲೆ ಪಾತ್ರೆ ತೊಳೆಯುವ ಕೆಲಸ ರಘು, ಕುಮಾರ, ಅವಿನಾಶ್ (ಇವರೆಲ್ಲರೂ ಮಂಜುವಿನ ನೆಂಟರೆ.. )..ಅವರದೇ. ನಂತರ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ಮುಂದಿನ ಪಯಣಕ್ಕೆ ತಯಾರಿ.
ಸಂಜೆ ಇದ್ದ ಜಾಗದಲ್ಲಿ ಆಟಗಳು... ಅದರಲ್ಲೂ ಕ್ರಿಕೆಟ್ ಅಂತೂ ಇರಲೇಬೇಕು... ಕ್ರಿಕೆಟ್ ಆಡದಿದ್ರೆ fast bowler ರಘುಗೆ ( ಮಂಜು ಹೆಂಡತಿಯ ಸೋದರ ಮಾವ) ಮಹಾಕೋಪ... ಅದಕ್ಕಾಗಿ ಚೆಂಡನ್ನು ತರುತ್ತಿದ್ದೆವು. ದಾರಿಯ ಮಧ್ಯದಲ್ಲಿ ಯಾವುದಾದರೂ ಕಷ್ಟದ, ಸಾಹಸದ ಕೆಲಸವನ್ನು ಸವಾಲ್ ಆಗಿ ಕೊಡುವುದು... ಅದಕ್ಕೆ ತಕ್ಷಣವೇ ಬಹುಮಾನ... ಸಾಕಷ್ಟು ಸಲ ಅದನ್ನು ಗೆದ್ದವರಿದ್ದಾರೆ... ಬಹುಮಾನದ ಹಣ ನನ್ನಲ್ಲಿಯೇ ಉಳಿಯಬೇಕೆಂದಾಗ ಅದು ಅಸಾಧ್ಯವಾದ ಕೆಲಸವನ್ನು ಹೇಳುವುದು ಒಂದು ವಿಧಾನ.
ರಾತ್ರಿ ಊಟವಾದ ನಂತರ, ಹಾಡು ಅಂತ್ಯಾಕ್ಷರಿ,.. ಇದರಲ್ಲಿ ಎಲ್ಲರೂ ಪಾಲ್ಗೊಂಡರೂ... ಬಾಬು, ಪ್ರಸಾದ್ (ಇಬ್ಬರು ಅಣ್ಣ ತಮ್ಮಂದಿರು ಮಂಜುವಿನ ಸೋದರತ್ತೆಯ ಮಕ್ಕಳು) ಸ್ವಲ್ಪ ಮುಂದೆ. ಅನುಕೂಲವಾದ ಬೆಳಕಿದ್ದರೆ ಇಸ್ಪೀಟ್ ಆಟ...
ಬಹುತೇಕ ಎಲ್ಲ ಚಾರಣಗಳ ಮೇಲ್ನೋಟ ಇಷ್ಟೇ ಇರುತ್ತಿತ್ತು... ಜಾಗ ಬೇರೆ... ಪರಿಸರ ಬೇರೆ....ಭೇಟಿಯಾಗುತ್ತಿದ್ದ ಜನ ಬೇರೆ ಬೇರೆ.. ನಮ್ಮೊಡನೆ ಅವರ ಒಡನಾಟ ಮಾತ್ರ ಬಹುತೇಕ ಒಂದೇ ಇರುತ್ತಿತ್ತು... ಮನೆಯ ಎಲ್ಲ ಜನ, ಕೆಲಸದವರು ತೋರಿಸುತ್ತಿದ್ದ ಪ್ರೀತಿ ಆದರ ....ನಮ್ಮೊಡನೆ ಬೆರೆತು ಒಂದಾಗುತ್ತಿದ್ದ ಪರಿ ಅಚ್ಚು ಮೆಚ್ಚು. ಅವರ ಜೀವನದ ಅನುಭವಗಳ ವಿನಿಮಯ, ಕೆಲವೊಮ್ಮೆ ಒಗಟುಗಳ, ಗಾದೆಗಳ ಆಟ... ಹೀಗೆ.
ಅವರು ನೀರಿಗಾಗಿ... ಗುಡ್ಡಗಳ ಮೇಲಿನ ನೀರಿನ ಹರಿವಿಗೆ ಪೈಪುಗಳನ್ನು ಜೋಡಿಸಿ ಮನೆಗೆ ನಲ್ಲಿಗಳನ್ನು ಹಾಕಿಕೊಂಡಿರುವುದು, ಕೆಲವರು ಆ ನೀರಿನಿಂದಲೇ ಸಣ್ಣ ಮಟ್ಟಿಗೆ ವಿದ್ಯುತ್ ತಯಾರಿಸಿಕೊಳ್ಳುವುದು... ತಮಗೆ ಬೇಕಾದ ಎಲ್ಲ ಅನುಕೂಲಗಳನ್ನು, ಅವರಿಗಿರುವ ಶಕ್ತಿಗೆ ಅನುಸಾರವಾಗಿ ಮಾಡಿಕೊಂಡಿರುವುದು ಹೆಮ್ಮೆ ಎನಿಸುತ್ತದೆ.
ತುಂಬ ನೋವಾದ ಸಂಗತಿ... ಮಳೆಗಾಲದಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪಡುತ್ತಿದ್ದ ಪರಿಪಾಟಲು... ಯಾವ ವಾಹನಗಳೂ ಮಳೆಯಿಂದ ಬರದ ಕಾರಣ... ಕಂಬಳಿಯಲ್ಲಿ ಸುತ್ತಿ ರೋಗಿಯನ್ನು ನಾಲ್ಕು ಜನ ಸೇರಿ ಹೊತ್ತೋಯ್ಯ ಬೇಕಾದ ಪರಿಸ್ಥಿತಿ... ಈಗ ಸಾಕಷ್ಟು ಬದಲಾವಣೆಗಳಾಗಿವೆ. ಇನ್ನು ಮಳೆಗಾಲದ ಜಿಗಣೆಗಳ ಕಾಟ ....ಅದಕ್ಕೆ ಪರಿಹಾರ ... ಸುಣ್ಣ, ಹೊಗೆ ಸೊಪ್ಪು.... ಕೂಡ ಕೇಳಲು ಕುತೂಹಲಕರವಾಗಿತ್ತು.
ಕೆಲವೊಂದು ಅವಿಸ್ಮರಣೀಯ ಘಟನೆಗಳು ನೆನಪಿನಾಳದಿಂದ ಮುನ್ನುಗ್ಗುತಿವೆ.
ಮೊದಲನೆಯದು 2004 ರ ಸುನಾಮಿ... ಹಿಂದಿನ ಸಂಜೆ ನಾವು ಕುದುರೆಮುಖದ ತುದಿಯಲ್ಲಿದ್ದೆವು... ಸಾಮಾನ್ಯವಾಗಿ ಮೇಲಕ್ಕೆ ಹೋದಾಗ ಒಂದು ಕೋಲಿಗೆ ಯಾವುದಾದರೂ ಬಟ್ಟೆಯನ್ನು ಕಟ್ಟಿ ಬಾವುಟ ಹಾರಿಸಿ ಸಂತೋಷ ಪಡುವುದು ನಾವು ಮಾಡುತ್ತಿದ್ದ ಒಂದು ಚಟುವಟಿಕೆ... ಅಂದು ಗಾಳಿ ವಿಪರೀತವಾಗಿತ್ತು... ಬಾವುಟ ನೆಲಕ್ಕೆ ಸಮಾನಂತರವಾಗಿ ಹಾರುತ್ತಿತ್ತು... ನಮ್ಮ ನಮ್ಮಲ್ಲೇ ಗಾಳಿಯ ಶಕ್ತಿಯ ಬಗ್ಗೆ ಮಾತನಾಡಿಕೊಂಡೆವು, " ಹಾರಿಹೋಗ್ತೀಯಾ ಹುಷಾರು" ಎನ್ನುವ ಸೂಚನೆಯನ್ನು ಒಬ್ಬರಿಗೊಬ್ಬರು ಕೊಟ್ಟದ್ದಿದೆ.... ನಂತರ ತಿಳಿದದ್ದು... ಸುನಾಮಿಯ ಆಘಾತಕರ ಸುದ್ದಿ...
ಮತ್ತೊಂದು ನಾವು ಕಿಗ್ಗದಿಂದ ಹೊರಟು ಹೊರನಾಡು ( ಅಲ್ಲಿಗೇನ ? ಸ್ವಲ್ಪ ಅನುಮಾನ ಯಾಕಂದ್ರೆ ನಾವು ನಮ್ಮ ಗುರಿಯನ್ನು ಮುಟ್ಟಲೇ ಇಲ್ಲ) ಮುಟ್ಟುವುದು ನಮ್ಮ ಗುರಿ. ಬೆಳಿಗ್ಗೆ ತಿಂಡಿಯನ್ನು ತಿಂದು ಹೊರಟಿದ್ದು ನಮ್ಮ ಪಟಾಲಮ್ಮು... ಸಾಕಷ್ಟು ವಿಚಾರಿಸಿ... ಹೋಗುವ ದಾರಿಯನ್ನು ನಿರ್ಧಾರ ಮಾಡಿದ್ದಾಯ್ತು... ಮೊದಲು ಘಟ್ಟವನ್ನು ಇಳಿಯುವ ದಾರಿ.. ಮಾತುಕತೆ, ಆಟ ನೋಟ ಉತ್ಸಾಹದಿಂದ ಇತ್ತು... ದಾರಿಯಲ್ಲಿ ಅಡ್ಡಲಾಗಿ ಜುಳು ಜುಳು ಹರಿಯುವ ನೀರು.... ಮತ್ತೇನು ಅಲ್ಲೇ ಅಡಿಗೆ ಮಾಡಿ ಊಟ ಮಾಡುವ ನಿರ್ಧಾರ.. ಆ ಕೆಲಸವು ಸುಗಮವಾಗಿ ನಡೆಯಿತು... ಹರಿಯುವ ನೀರನ್ನು ದಾಟಲು ಬೇಕಾದ ಜಾಗ ಹುಡುಕಿಕೊಂಡು ಓಡಾಡುತ್ತಾ ಮತ್ತೆ ಮತ್ತೆ ಹತ್ತಿ ಇಳಿದರೂ... ನಾವುಗಳು ನೀರನ್ನು ದಾಟುವ ಜಾಗ ಸಿಗಲಿಲ್ಲ.... ಸುದೈವ ಈ ಹಂತದಲ್ಲಿ ಒಬ್ಬ ವ್ಯಕ್ತಿ ಸಿಕ್ಕಿ ನೀರನ್ನು ದಾಟುವ ಜಾಗಕ್ಕೆ ಕರೆದೊಯ್ದು... ಅಲ್ಲಿಂದ ಮುಂದಿನ ದಾರಿಯನ್ನು ಹೇಳಿ ಆತ ಮಾಯವಾದ... ಆ ಸಮಯಕ್ಕೆ ಆಗಲೇ ನಮ್ಮ ಉತ್ಸಾಹ ಮತ್ತು ಶಕ್ತಿ ಸಾಕಷ್ಟು ಕುಗ್ಗಿತ್ತು... ನೀರನ್ನು ದಾಟಿ ಘಟ್ಟವನ್ನು ಏರುವಷ್ಟರಲ್ಲಿ ಕತ್ತಲೆ ಆವರಿಸಿತ್ತು... ಡಿಸೆಂಬರ್ ನ ಚಳಿ ಕೊರೆಯಲು ಶುರು ಮಾಡಿತ್ತು... ಕಣ್ಣು ಕಾಣದ ಹಾದಿ ಹಾಗಾಗಿ ಅಲ್ಲಿಯೇ ಎಲ್ಲಾದರೂ ರಾತ್ರಿ ಕಳೆಯುವ ನಿರ್ಧಾರ ಮಾಡಿ... ನೀರಿನಿಂದ ದೂರದ ಜಾಗ (ನೀರರಸಿ ಬರುವ ಕಾಡುಪ್ರಾಣಿಗಳಿಂದ ಆದಷ್ಟು ದೂರ ಇರುವ ಚಿಂತನೆ) ಕಲ್ಲು ಬಂಡೆ ಇದ್ದ ಸ್ವಲ್ಪಮಟ್ಟಿನ ಸಮತಲವಾದ ಜಾಗವನ್ನು ಆಯ್ದು ಠಿಕಾಣಿ ಹಾಕಿದೆವು.. ಎಲ್ಲ ಸೇರಿ ಸುತ್ತ ಮುತ್ತ ಓಡಾಡಿ ಸಾಧ್ಯವಾದಷ್ಟು ಒಣಗಿದ ಸೌದೆಯನ್ನು ಜೋಡಿಸಿದೆವು.. ಬೆಂಕಿಯನ್ನು ಉರಿಸಿ ಬಿಸಿ ಮಾಡಿಕೊಂಡು... ಜೊತೆಗೆ ಯಾವುದೇ ಪ್ರಾಣಿ ಹತ್ತಿರ ಬರುವುದಿಲ್ಲ ಎನ್ನುವ ಧೈರ್ಯ ಮಾಡಿಕೊಂಡು ಮುಂದುವರಿದವು. ರಾತ್ರಿ ಊಟದ ಚಿಂತೆ ಬಂದಾಗ ನಮ್ಮ ತಿಳಿವಿಗೆ ಬಂದದ್ದು ಅಡಿಗೆ ಮಾಡಲು ನಮ್ಮ ಬಳಿ ನೀರಿಲ್ಲ... ಬಾಟಲಿಗಳಲ್ಲಿ ಇರುವಷ್ಟು ನೀರು ಮಾತ್ರ... ಬೆಳಗಿನ ತನಕ ಅದರಲ್ಲಿ ಕಳೆಯಬೇಕು.. ತಿನ್ನಲು ಸುಲಭವಾಗಿ ಸಿಕ್ಕಿದ್ದು ಈರುಳ್ಳಿ ಮತ್ತು ಕಾಂಗ್ರೆಸ್ ಕಡ್ಲೆಕಾಯಿ ಬೀಜ.... ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಕಡ್ಲೆಕಾಯಿ ಬೀಜದ ಜೊತೆ ಹೇಗೋ ತಿಂದು ಇದ್ದ ನೀರನ್ನು ಕುಡಿದು ...ರಾತ್ರಿ ಇಬ್ಬಿಬ್ಬರಾದರು ಪಾಳಿಯಲ್ಲಿ... ಎದ್ದಿದ್ದು ಬೆಂಕಿಯ ಉರಿ ಸತತವಾಗಿ ಇರುವುದನ್ನು ನೋಡಬೇಕು ....ಮಿಕ್ಕವರು ನಿದ್ದೆ ಮಾಡಬೇಕು.... ಇದು ಆದ ತೀರ್ಮಾನ...
ಒಂದಿಬ್ಬರು ನಿದ್ದೆ ಮಾಡಿರಬಹುದು... ಮಿಕ್ಕವರೆಲ್ಲ ಮಾತಾಡುತ್ತಾ ಕೂತಿದ್ದಾಗ ದೂರದಿಂದ ಬೆಳಕು ಕಂಡಿತು.. ಅದು ಟಾರ್ಚ್ ಇಂದ ಬಿಟ್ಟ ಬೆಳಕು... ಆ ಬೆಳಕಿಗೆ ನಮ್ಮ ಕಡೆಯಿಂದ ಕೂಡ ಸ್ಪಂದನೆ ಹೋಯಿತು... ಆಗ ಯಾರೋ ನೆನಪಿಸಿದ್ದು... ಅಲ್ಲಿ ಇದ್ದ ನಕ್ಸಲರ ಕಾಟ, ಹಾಗಾಗಿ ಭಯವೂ ಆಯಿತು ಮತ್ತೆ ಟಾರ್ಚ್ ನಮ್ಮ ಕಡೆಯಿಂದ ಬಿಡಬಾರದೆಂದು ತೀರ್ಮಾನ... ಒಳಗೆ ಎಲ್ಲೋ ಒಂದು ಭಯ... ನಕ್ಸಲರು ಕರುಣೆ ಇಲ್ಲದೆ ಕೊಲ್ಲಬಹುದು ಎನ್ನುವ ಕಾರಣದಿಂದ... ಜೀವ ಹಿಡಿಯಲ್ಲಿಟ್ಟು ರಾತ್ರಿ ಕಳೆದೆವು.... ಬೆಳಗಾಗುವುದನ್ನು ಕಾಯುತ್ತಾ.. ಬೆಳಗಾದ ನಂತರ ಜನಜೀವನದ ಕುರುಹುಗಾಗಿ ಹುಡುಕಾಟ... ಆಗ ಕಂಡಿದ್ದೆ ದೂರದೆಲ್ಲೆಲ್ಲೋ ಒಂದಿಬ್ಬರ ಓಡಾಟ.. ಈ ಕಡೆಯಿಂದ ಎಲ್ಲರೂ ಒಕ್ಕೊರಲಿಂದ ಕೂಗಿ ಸನ್ನೆ ಮಾಡಿ... ಕೊನೆಗೆ ಅವರು ಸುಮಾರು ಹತ್ತಿರ ಬಂದು ನಾವು ಅವರೊಡಗೂಡಿ ಹತ್ತಿರದ ಹಳ್ಳಿಗೆ ಬಂದು ಸೇರಿದವು.... ಮಾತಿನಲ್ಲಿ ಮುಂದುವರಿದಾಗ ತಿಳಿದದ್ದು... ರಾತ್ರಿ ನಕ್ಸಲರು ಅವರ ಊರಿಗೆ ಬಂದು ಹೋಗಿದ್ದರು... ಹಳ್ಳಿಯವರು ನಮ್ಮ ಬೆಂಕಿಯನ್ನು ಗಮನಿಸಿದ್ದರು... ಅವರಿಗೆ ನಾವು ನಕ್ಸಲರ ಕಡೆಯವರು ಇರಬಹುದಾ ಎಂಬ ಅನುಮಾನ.... ಆ ದಿನ ನನ್ನ ಮನಸ್ಸಿನ ತುಮುಲ, ಆತಂಕ ಇಷ್ಟು ಜನದ ಕ್ಷೇಮ ಎಲ್ಲ ನೆನೆಸಿದಾಗ ಈಗಲೂ ಮೈ ಜುಮ್ ಎನ್ನುತ್ತದೆ.... ಕೊನೆಗೆ ಬಸ್ ಹತ್ತಿ..ಬಂದದ್ದು ಕಿಗ್ಗಕ್ಕೇ....
ಬಹಳಷ್ಟು ಕಡೆ ಓಡಾಡಿರುವುದರಿಂದ ನನಗೆ ಸ್ಥಳಗಳ ಗುರುತು/ ನೆನಪು ಸರಿಯಾಗಿಲ್ಲ ಆದರೆ ಒಂದು ಜಾಗದಲ್ಲಿ ನಮ್ಮ ಪ್ರಸಾದ್.. ಇಳಿಯುವಾಗ ಜಾರಿ ಬಿದ್ದು ಉರುಳಿ ಮುಖಕ್ಕೆ ಗಾಯ ಮಾಡಿಕೊಂಡಿದ್ದು ತುಂಬಾ ಆತಂಕ ಉಂಟು ಮಾಡಿತ್ತು... ಅಂದಿನ ಚಾರಣ ಅಲ್ಲಿಗೆ ಮುಗಿದಿತ್ತು.... ಪ್ರಸಾದ್ ಬಗ್ಗೆ ಒಂದು ಮಾತು... ಅವರ ಶಿಸ್ತು ಮತ್ತು ತಯಾರಿ ನನಗೆ ತುಂಬಾ ಮೆಚ್ಚುಗೆ... ಚಾರಣದ ಸಮಯದಲ್ಲಿ ಸಮಯಕ್ಕೆ ಬೇಕಾದ ಏನಾದರೂ ಆಗಲಿ ಅದನ್ನು ಕೊಡುತ್ತಿದ್ದದ್ದು ನಮ್ಮ ಪ್ರಸಾದ್... ಸೂಜಿ ದಾರ ಇರಲಿ, ಬ್ಯಾಂಡೇಜ್, ಕೆಲ ಮಾತ್ರೆಗಳು, ointment... ಕೊನೆಗೆ ಒಂದು ಸಾರಿ ಸ್ಪೇರ್ ಚಪ್ಪಲಿ ಕೂಡ ಕೊಟ್ಟಿದ್ದು ನಮ್ಮ ಪ್ರಸಾದ್...the English man...
ಇನ್ನು ಕೆಲ ಮನಸ್ಸಿಗೆ ಮುದ ಕೊಟ್ಟ ಪ್ರಸಂಗಗಳು... ಅಡಿಕೆ ತೋಟದಲ್ಲಿ ಅಡಿಕೆಯ ಗೊನೆಯನ್ನು ಹಗ್ಗದ ಮೂಲಕ ಇಳಿಸಿದ್ದು.....ಅಲ್ಲೇ ಸಿಕ್ಕ ಪರಂಗಿ ಕಾಯಿಯನ್ನು ಹೆಚ್ಚಿ ಪಲ್ಯ ಮಾಡಿ ಮನೆಯವರಿಗೂ ಕೊಟ್ಟು ನಾವು ತಿಂದದ್ದು...ಚಾರಣದ ಕೊನೆಯ ದಿನ ಅಲ್ಲಿನ ಮನೆಯವರನ್ನು ಸೇರಿಸಿ ಒಂದು ಕಾರ್ಯಕ್ರಮ ಮಾಡುವುದು ಹಾಗೂ ಅಲ್ಲಿನ ಗಿಡಗಳಿಂದಲೇ ಆಯ್ದು ಒಂದು ಹೂಗುಚ್ಛವನ್ನು ಮಾಡಿ ಅವರಿಗೆ ಕೊಡುವುದು..... ನೀರಲ್ಲಿ ವಿಧವಿಧವಾದ ಆಟ...ಕಾಡೊಳಗೆ ಹೋಗಿ, ಹಿಂತಿರುಗುವಾಗ, ಕತ್ತಲಾದಾಗ ಜೊತೆಯಲ್ಲಿ ಬಂದಿದ್ದವರು ಅಲ್ಲಿಯೇ ತಯಾರಿಸಿದ ಪಂಜನ್ನು ಹಚ್ಚಿಕೊಂಡು ಆ ಬೆಳಕಿನಲ್ಲಿ ಕಾಡಿನ ಮಧ್ಯೆ ದಾರಿಯನ್ನು ಸವೆಸಿದ್ದು....ಅಲ್ಲಿನ ಗದ್ದೆಗಳಲ್ಲಿ ಅವರ ಜೊತೆಗೂಡಿ ಒಂದಷ್ಟು ಕೆಲಸ ಮಾಡಿದ್ದು.... ಸಂಜೆ ಊರಿನ ಒಂದಷ್ಟು ಜನ ಸೇರಿ ಅಲ್ಲಿನ ಸಂಪ್ರದಾಯದಂತೆ.... ಅಡಿಕೆ ಸುಲಿಯುವ ಕಾರ್ಯಕ್ರಮ, ಆ ಸಮಯದ ಮಾತುಕತೆ .... ಗುಂಪಿನಿಂದ ಬೇರೆಯಾದಾಗ ಒಬ್ಬರಿಗೊಬ್ಬರ ಕೂಗು ಪ್ರತಿ ಕೂಗು, ಎಲ್ಲದರ ಮಧ್ಯೆ ವಿರೋಧ ಪಕ್ಷದ ಮಾತುಗಳು.... ಮಂಜು ಹೊಸದಾಗಿ ಖರೀದಿಸಿದ ಕಾರಿನ ಮೂಲ ಧನ ಎಲ್ಲಿತ್ತು ಎಂಬುದರ ಬಗ್ಗೆ ವಿಶ್ಲೇಷಣೆ.... ನೆಂಟರ ವಿಷಯದ ಪಕ್ಷಪಾತ ಹೀಗೆ ಮಾತು ತುಂಬಾ ವಿನೋದವಾಗಿರುತ್ತಿತ್ತು... ಹೀಗೆ ಕಳೆದ ಸಮಯ ಬಹಳ ದಿನಗಳವರೆಗೆ ನಮ್ಮ ನೆನಪಿನಲ್ಲಿ ಉಳಿದು.. ಒಂದಷ್ಟು ಚೈತನ್ಯ ತುಂಬುತ್ತಿತ್ತು...
ಮೇಲೆ ಹೆಸರಿಸಿದವರಲ್ಲದೆ, ನಮ್ಮ ಜೊತೆ ಆಗಾಗ ಸೇರಿಕೊಂಡದ್ದು ನಂಜುಂಡ,ಮೋಹನ... ಮುಂದಿನ ಪೀಳಿಗೆಯ ಅಲೋಕ್, ಅಮೋಘ, ವಿಜಯ್.. ಹಾಗೂ ಕೆಲವು ಸಾರೀ ಮಾತ್ರ ಬಂದ ಹೆಸರು ಮರೆತ ವ್ಯಕ್ತಿಗಳು.... ಎಲ್ಲರಿಗೂ ನನ್ನ ನಮನಗಳು, ಅಭಿನಂದನೆಗಳು ಹಾಗೂ ಜೊತೆಯಲ್ಲಿ ಹಂಚಿಕೊಂಡ ಸಂತೋಷಕ್ಕೆ ಧನ್ಯವಾದಗಳು...
ಕೊನೆಯದಾಗಿ ನನ್ನ ಚಿಕ್ಕಂದಿನ ಅನುಭವ... ಚಾರಣ ಎಂಬ ಪದದ ಅರಿವಿಲ್ಲದಿದ್ದರೂ.... ಬೆಟ್ಟವನ್ನು ಹತ್ತಿ ಒಂದಷ್ಟು ಸಾಹಸ ಮಾಡಿದ್ದು ನೆನಪಿದೆ. ನನ್ನೂರು ದೊಡ್ಡಜಾಲದ ಹತ್ತಿರದ ಅಕ್ಕಯ್ಯಮ್ಮನ ಬೆಟ್ಟ ನಮಗೆ ಪ್ರಿಯ... ವಿದ್ಯಾನಗರಕ್ಕೆ ಓದಲು ಹೋಗುವಾಗ ನಾವು ಬೆಟ್ಟದ ಒಂದು ಭಾಗವನ್ನು ಹಾದು ಹೋಗುತ್ತಿದ್ದೆವು. ಈ ಬೆಟ್ಟವನ್ನು ಎರಡು ಮೂರು ಕಡೆಯಿಂದ ಹತ್ತಿ ಇಳಿದು, ಅಲ್ಲೊಂದಷ್ಟು ಸಾಹಸ ಮಾಡಿ ಬಿದ್ದು ಗಾಯ ಮಾಡಿಕೊಂಡು.... ಬುತ್ತಿ ಕಟ್ಟಿಕೊಂಡು ಹೋಗಿದ್ದ ಚಿತ್ರಾನ್ನ ಆಲೂಗಡ್ಡೆ ಪಲ್ಯವನ್ನು ತಿಂದು ಸಂತೋಷಪಟ್ಟಿದ್ದು ಲೆಕ್ಕವಿಲ್ಲದಷ್ಟು ಸಲ. ಇದರ ಜೊತೆಗೆ ಬೆಟ್ಟಹಲಸೂರು ಬೆಟ್ಟ, ನಂದಿ ಬೆಟ್ಟ ಹಾಗೂ ಸಾವನದುರ್ಗ ಬೆಟ್ಟಗಳನ್ನು ಸಾಕಷ್ಟು ಬಾರಿ ಹತ್ತಿ ಇಳಿದ ನೆನಪು ಹಸಿರಾಗಿದೆ.
ಕರೋನಾ ಮಹಾಮಾರಿಯ ಆಗಮನದಿಂದ ನಿಂತ ಚಾರಣ ಕಾರ್ಯಕ್ರಮ.. ಇನ್ನೂ ಶುರುವಾಗಿಲ್ಲ.... ಆಗಲಿದೆ ಎನ್ನುವ ಆಶಾಭಾವನೆಯೂ ಯಾಕೋ ಕಾಣುತ್ತಿಲ್ಲ..
ಕಾಲಾಯ ತಸ್ಮೈ ನಮಃ...
ಚಾರಣದ ಸವಿನೆನಪುಗಳನ್ನು ಸವಿಯಲು ಆಗಾಗ ಕೆಲವರು ಒಂದಷ್ಟು ಚಿತ್ರಗಳನ್ನು ಹಂಚಿಕೊಳ್ಳುವುದರಿಂದ ಸಹಾಯವಾಗಿದೆ...
ಈ ಲೇಖನ ಬಾಬುಗೆ ( ನಾಗೇಂದ್ರ ಬಾಬು) ಸಮರ್ಪಿತ... ಚಾರಣದ ಬಗ್ಗೆ ಬರೆಯಬೇಕೆಂಬ ಸಲಹೆ ಅವನಿಂದ ಎರಡು ಬಾರಿ ಬಂದಿತ್ತು... ಈಗ ಕೈಗೂಡಿದೆ...ನಮಸ್ಕಾರ. .
ತುಂಬ ಸೊಗಸಾಗಿ ನಮ್ಮ ಚಾರಣದ ಬಹುತೇಕ ವಿಷಯವನ್ನ ನೀವು ಇಲ್ಲಿ ವ್ಯಕ್ತಪಡಿಸಿದ್ದೀರ..!!
ReplyDeleteSuper sir these are the golden moments in our life
ReplyDeleteನಾವೇ ಚಾರಣ ಮಾಡುತ್ತಿದ್ದೇವೆ ಎಂಬ ಅನಿಸಿಕೆ ಬಂತು.ಚೆನ್ನಾಗಿ ಬರೆದಿದ್ದೀರಿ
ReplyDeleteVery nice sir . Appreciate your enthusiasm. Your smile always gives me strength
ReplyDeleteಸೊಗಸಾದ ಲೇಖನ...ನಾನು ಕೂಡ ಈ ಚಾರಣ ತಂಡದ ಸದಸ್ಯನಾಗಿ ಬಹಳ ಅವಿಸ್ಮರಣೀಯ ಅನುಭವ.... ನಿಮ್ಮ ಹಾಗೂ ಜಯಸಿಂಹ ಜೊತೆ ಸಾಹಿತ್ಯದ ಸಂಭಾಷಣೆ....ಸ್ಥಳದಲ್ಲೇ ಸೃಜನಶೀಲವಾಗಿ ಆಡದಂತ ಆಟಗಳು...ಮುದ್ದೆ ಊಟ, ಎಲೆ ಅಡಿಕೆ...ಬಹಳ ಮುದ ನೀಡುವ ಅನುಭವಗಳು...ಒಮ್ಮೆ ಸಣ್ಣ ದ್ವೀಪದಲ್ಲಿ ಆಚಾನಕ್ಕೆ ರಾತ್ರಿ ಉಳಿಯುವ ನಿರ್ಧಾರ ಚಳಿ...ಹಾಸಲು ಹೊದಯಲು ಇಲ್ಲದೆ ಕಳೆದ ರಾತ್ರಿ... ಹಿಂತಿರುಗಿ ನೋಡಿದರೆ ಸಾಕಷ್ಟು ಅಪಾಯ ಇದ್ದ ನಮ್ಮ ಮಟ್ಟಿಗೆ ಸಾಹಸ ದಿಂದ ಕೂಡಿದ ಅನೇಕ ಚಾರಣ ಒಟ್ಟಾಗಿ ಮಾಡಿದ್ದೇವೆ....ಮೂಲ ಕಾರಣಕರ್ತ ಮಂಜುನಾಥ್ ಗೆ ಮತ್ತು ಬರವಣಿಗೆಯ ಮೂಲಕ ನೆನಪುಗಳನ್ನು ಕೆದಕಿದ ನಿಮಗೆ ಧನ್ಯವಾದಗಳು
ReplyDeleteಬಾಬು
ನಾವು ಚಾರಣದ ಬಗ್ಗೆ ಕೇಳಿದ್ದಿವಿ ಆದರೆ ಇಷ್ಟೊಂದು ವಿಸ್ತಾರವಾಗಿ ಅಲ್ಲ ನಿಮ್ಮ ಚಾರಣದ ವಿವರಣೆಯನ್ನು ಓದುವಾಗ ನಾವು ಸಹ ಅದರಲ್ಲಿ ಭಾಗಿಯಾಗಿದ್ದೇವೆ ಎನ್ನುವ ಅನುಭವವಾಯಿತು ಬಹಳ ಸೊಗಸಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದೀರಿ
Deleteನಮ್ಮ ಗುಂಪಿನ ಚಾರಣದ ಬಗ್ಗೆ ಬರೆದಿದ್ದಕ್ಕೆ ಧನ್ಯವಾದ ಅಣ್ಣ. ಹಾಗೇ ನಮ್ಮ ಮಂಜುವಿನ ಚಲನಶೀಲರಾದ ಸಕಲ ಬಂಧುಗಳಿಗೂ ಧನ್ಯವಾದ. ಅವರೆಲ್ಲ ಉತ್ಸಾಹದ ಚಿಲುಮೆಗಳು.ಮಾರ್ಗಾಯಾಸ ಪರಿಹರಿಸುವ ಶುದ್ಧ ಜಲಬಿಂದುಗಳು.ಇನ್ನು ನಮ್ಮ ಚಾರಣದಲ್ಲಿ ದಾರಿಯಲ್ಲಿ ಸಿಕ್ಕ ಹೊಳೆಯಲ್ಲಿ ಸ್ನಾನ, ಅಲ್ಲೇ ಅಡುಗೆ ಊಟ ತಿಂಡಿ ರಾತ್ರಿಯ ಹೊತ್ತು ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು,ಯಾವುದನ್ನೂ ಮರೆಯುವುದರಿಂದ ಹಾಗಿಲ್ಲ. ಮಹಾಮನೆಗೆ ಚಾರಣದ ಸಮಯದಲ್ಲಿ ದಾರಿಯಲ್ಲಿ ಸಿಕ್ಕ ಹೆಗ್ಗಡೆಯವರ ಮನೆಯನ್ನು ನೋಡಿ ಅಲ್ಲಿ ರಾತ್ರಿ ಉಳಿದುಕೊಂಡಿದೆ ಅಂತ ಕೇಳಿದರೆ ನಾವು ಆಗುಂತಕರಾದರೂ ಇರುವುದಕ್ಕೆ ಸಮ್ಮತಿಸಿ ಬೆಳಿಗ್ಗೆಯ ಫಲಹಾರವನ್ನೂ ನೀಡಿ ಆತಿಥ್ಯದ ಡೆಫನಿಷನ್ ಆದ ಹೆಗ್ಗಡೆಯವರ ಕುಟುಂಬದವರನ್ನು ಮರೆಯಲಾದೀತೆ?ಇಂತಹ ಅನೇಕ ಅವಿಸ್ಮರಣೀಯ ಅನುಭವ ನಮಗಾಗಿದೆ. -ಜಯಸಿಂಹ
ReplyDeleteಮರೆಯುವ
Deleteಹಾಗಿಲ್ಲ ಅಂತ ಓದಿಕೊಳ್ಳಿ
ಚಾರಣದ ಬಗ್ಗೆ ಅನುಭವ ಗಳನ್ನು ಬಹಳ ಅತ್ಯುತ್ತಮವಾಗಿ ಬರೆದಿರುತ್ತೀರಿ.ಚಾರಣದ ಸ್ಥಳ ನಿಗದಿಪಡಿಸುವುದು,ಚಾರಣದ ಸಹೋದ್ಯೋಗಿ ಗಳಿಗೆ ವಹಿಸುವ ಜವಾಬ್ದಾರಿ,ದಾರಿ ಕಾಣದಾದಾಗ ರಾತ್ರಿ ಒಂದು ಕಡೆ ತಂಗುವ ಅನುಭವ,ಮದ್ಯ ಸಿಕ್ಕ ಹಳ್ಳಿ ಜನರ ಜೊತೆ ಬೆರೆತು ಆಡುವ ಆಟಗಳು ಮತ್ತು ಅವರಲ್ಲಿರುವ ಪ್ರತಿಭೆಗಳ ಬಗ್ಗೆ ಅವರೊಡನೆ ಸೌಹಾರ್ದತೆ ಸ್ಪರ್ಧೆ ಚೆನ್ನಾಗಿ ಮೂಡಿ ಬಂದಿವೆ.. ತಮಗೆ ಹಾರ್ದಿಕ ಅಭಿನಂದನೆಗಳು
ReplyDeleteಉಲ್ಲೇಖಿತ ಆಂಗ್ಲ ಪದ್ಯ ಅರ್ಥವತ್ತಾಗಿದೆ.
ReplyDeleteಇನ್ನು ಚಾರಣದ ನಿರೂಪಣೆ ಎಂದಿನಂತೆ ಸೊಗಸು. ಚಾರಣದ ಸಹವರ್ತಿಗಳ ಸ್ವಭಾವ, ವರ್ತನೆಯೂ ಚೆನ್ನಾಗಿ ಚಿತ್ರಿತವಾಗಿದೆ. ಚಾರಣಕ್ಕೆ ಆಯ್ದುಕೊಂಡ ಮಲೆನಾಡಿನ ತಾಣಗಳು ಸೂಕ್ತವಾದದ್ದೇ.
ಕಾಡು ಪ್ರಾಣಿಗಳು, ನಕ್ಸಲರು, ಮರಗಳ್ಳರು ಚಾರಣದಲ್ಲಿ ಸಹಜವೇ.(ಅಡವಿಯೊಳಗೊಂದು ಮನೆಯ ಮಾಡಿ ಮೃಗಪಕ್ಷಿಗಳಿಗಂಜಿದೊಡೆಂತಯ್ಯಾ!)
ಆದರೂ ಅದರ ಅನುಭವವು ಹಿತಕರವಾಗಿದೆ.
ಇದೇ ರೀತಿ ನಿಮ್ಮ ನೆನಪಿನ ಬುತ್ತಿಯಿಂದ ಒಂದೊಂದೇ ಕೈ ತುತ್ತು ಹಾಕುತ್ತಿರಿ. ನಾವುಗಳು ಸವಿಯುತ್ತಿರುತ್ತೇವೆ.
ಆದರಗಳೊಂದಿಗೆ,
ಗುರುಪ್ರಸನ್ನ,
ಚಿಂತಾಮಣಿ
ವಿಸ್ತಾರವಾದ ಚಾರಣ ಅನುಭವದ ಲೇಖನ ಸೊಗಸಾಗಿದೆ. ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರಾ, ಈಗ ಚಾರಣಕ್ಕೆ ಹೋಗುತ್ತಿಲ್ಲವೇ, ನನಗೂ ಬರುವ ಆಸೆ ಆಯ್ತು .
ReplyDeleteನಮಸ್ಕಾರ🙏
ರತನ್