ಉಪವಾಸ. .. NETಉಪವಾಸ
ಹೋದ ವರ್ಷ ಉತ್ಥಾನ ದ್ವಾದಶಿ ದಿನ ನಮ್ಮ ಕುಟುಂಬದ ಮುವ್ವತ್ತಕ್ಕೂ ಮೀರಿ ಜನ ಒಂದು ಪ್ರವಾಸದಲ್ಲಿದ್ದೆವು.. ಅದರ ಹೆಸರು ಉತ್ವಾನ್ ದ್ವಾದಶಿ ಟ್ರಿಪ್... ವರ್ಷ ಉರುಳಿದೆ.... ಈ ವರ್ಷ ಈ ಏಕಾದಶಿ ಸ್ವಲ್ಪ ವಿಶೇಷ.... ನಮ್ಮ ವೈಶಾಖ್ ಹಾಗೂ ಸೌಮ್ಯ ದಂಪತಿಗೆ ಮಗ ಹುಟ್ಟಿದ ಸಂಭ್ರಮ.... ಆ ಸಂಭ್ರಮದಲ್ಲಿ ಸೌಮ್ಯನಿಗೆ ಊಟ ಇಲ್ಲ... ಅದು ಸಹಜ... ಸಂತೋಷದಲ್ಲಿ ವೈಶಿಯೂ ಊಟ ಮಾಡಿರಲಿಕ್ಕಿಲ್ಲ.... ಅವನಿಗೂ ಉಪವಾಸ....
ನನಗೂ ನನ್ನ ಹೆಂಡತಿಗೂ ಈ ಏಕಾದಶಿ / ದ್ವಾದಶಿಯೆಲ್ಲಾ ಹೊರಗುಳಿದ ಸಂದರ್ಭ.... ಉಪವಾಸವೂ ಸಹ... ಆದರೆ ಇದ್ದಿದ್ದು ಆಸ್ಪತ್ರೆಯಲ್ಲಿ.... ವಿಜಯಳ ಆರೋಗ್ಯ ಸ್ವಲ್ಪ ತಾಳ ತಪ್ಪಿದ್ದರಿಂದ... ಈ ಲೇಖನ ರೂಪುಗೊಂಡದ್ದು.. ಕರಡನ್ನು ಬರೆದದ್ದು ಆಸ್ಪತ್ರೆಯಲ್ಲೇ.... ಮನೆಗೆ ಹೋಗಲು ಅನುಮತಿಗಾಗಿ ಡಾಕ್ಟರನ್ನು ಕಾಯುತ್ತಾ.....
ಕೃಷ್ಣ ಹುಟ್ಟಿದಾಗ ತುಂಬಾ ಜನಕ್ಕೆ ಸಂತೋಷ... ಸಂತೋಷದ ಭರದಲ್ಲಿ ಹಸಿವೆ ಕಾಡಿಲ್ಲ... ಹಾಗಾಗಿ ಉಪವಾಸ... ಇನ್ನು ಕೆಲವರು ಸಿಹಿ ತಿಂದು ಸಂಭ್ರಮಿಸಿದರು... ಅವರವರ ಭಾವಕ್ಕೆ ತಕ್ಕಂತೆ.
ಉಪವಾಸಕ್ಕೂ ಏಕಾದಶಿಗೂ ವಿಶೇಷ ನಂಟು... ಚಾಂದ್ರಮಾನ ಪಂಚಾಂಗದ ಪ್ರಕಾರ ಏಕಾದಶಿ 11ನೇ ದಿನ.. ಅಂದು .....ವೈಜ್ಞಾನಿಕವಾಗಿ ಸಹ ತಿಳಿದಂತೆ .....ವಾತಾವರಣದಲ್ಲಿ ವಾಯು ಭಾರ(atmospheric prssure) ಕಡಿಮೆ ಇರುತ್ತದೆ... ಹಾಗಾಗಿ ಉಪವಾಸ ಮಾಡಿದಾಗ ಹಾಗೂ ಬರಬಹುದಾದ ನಿಃಶಕ್ತಿ ಕಡಿಮೆ ಸ್ತರದಲ್ಲಿ ಇರುತ್ತದೆ. ಅದಕ್ಕೆ ಏಕಾದಶಿಯಂದು ಉಪವಾಸವನ್ನು ಮಾಡುವ ಸಂಪ್ರದಾಯ ರೂಢಿಯಲ್ಲಿರುವುದು. ನಮ್ಮ ಹಿರಿಯರ ಜ್ಞಾನ ಸಾಂಪ್ರದಾಯಿಕವೆನಿಸಿದರೂ... ವೈಜ್ಞಾನಿಕವಾಗಿರುತ್ತಿತ್ತು.
"ಲಂಘನಂ ಪರಮೌಶಧಂ " ಎನ್ನುವ ಸಂಸ್ಕೃತ ನುಡಿಗಟ್ಟು... ಉಪವಾಸಕ್ಕೆ ಔಷಧೀಯ ರೂಪದ ಉನ್ನತ ಸ್ಥಾನ ಕೊಟ್ಟಿರುವುದು ವೇದ್ಯ. ತಿಂಗಳಿಗೆ ಎರಡು ಬಾರಿ ಬರುವ ಏಕಾದಶಿ ಯಂದು ಉಪವಾಸ ಮಾಡುವುದು ನಮ್ಮ ಜೀರ್ಣಾಂಗಗಳ ಸ್ವಾಸ್ಥ್ಯಕ್ಕೆ ಪೂರಕ.. ಅವಕ್ಕೂ ಒಂದಷ್ಟು ವಿಶ್ರಾಂತಿ ಕೊಡುವ ಮೂಲಕ.... ಜೊತೆಗೆ ದೇಹದಲ್ಲಿರುವ ವಿಷಕಾರಿ ವಸ್ತುಗಳು ಹೊರ ಹೋಗಲು ಅನುಕೂಲ.. ಹಾಗಾದಾಗ ದೇಹದ ಆರೋಗ್ಯ ತಂತಾನೆ ಉತ್ತಮಗೊಳ್ಳುವುದು... ಇದು ಈ ನುಡಿಗಟ್ಟಿನ ಭಾವಾರ್ಥವಲ್ಲವೇ?
ನನ್ನ ಚಿಕ್ಕಂದಿನ ಏಕಾದಶಿ ಅನುಭವ.... ನಮ್ಮಜ್ಜಿಗಾಗಿ ಮಾಡುತ್ತಿದ್ದ ಫಲಹಾರದ ಒಂದು ಭಾಗವನ್ನು ಸವಿದು ಅನುಭವಿಸಿದ್ದದ್ದು...
ತುಂಬಾ ಖುಷಿಯಿಂದ ಹೇಳುತ್ತಿದ್ದದು ಮಂಗಗಳ ಉಪವಾಸದ ಪದ್ಯ... ಅದರಲ್ಲೂ" ಏನೂ ತಿನ್ನದೇ ಮಟ-ಮಟ ನೋಡುತ ಇದ್ದವು ಮರದಲಿ ಕುಳಿತಲ್ಲೇ.. " ಹಾಗೂ "ಸುಲಿದೇ ಇಡುವ ಆಗದೆ ಎಂದಿತು ಆಸೆಯ ಮರಿ ಕಪಿಯೊಂದಾಗ " ಎನ್ನುವ ಸಾಲಿನ ಕಲ್ಪನೆ... ಕೋತಿಗಳು ಉಪವಾಸದಲ್ಲಿ ಕುಳಿತಿರಬಹುದಾದ ಹಾಗೂ ಸುಲಿದ ಬಾಳೆಹಣ್ಣನ್ನು ಕೈಯಲ್ಲಿ ಹಿಡಿದು ಆಸೆಯಿಂದ ನೋಡುತ್ತಿರಬಹುದಾದ ಮರಿ ಕಪಿಯ ದೃಶ್ಯ ಈಗಲೂ ಕಣ್ಣು ಮುಚ್ಚಿದರೆ ಚಲನಚಿತ್ರದ ತುಣುಕಿನಂತೆ ಕಾಣುತ್ತದೆ.
ಮತ್ತೊಂದು ಖುಷಿ ಕೊಟ್ಟ ಪದ್ಯ " ಆಚೆ ಮನೆ ಸುಬ್ಬಮ್ಮಂದು ಏಕಾದಶಿ ಉಪವಾಸ.. ಎಲ್ಲೋ ಸ್ವಲ್ಪ ತಿಂತಾರಷ್ಟೇ ಉಪ್ಪಿಟ್ಟು ಅವಲಕ್ಕಿ ಪಾಯಸ” ....ಅದರಲ್ಲೂ ಅದರಲ್ಲಿ ಬರುವ ತಿಂಡಿಗಳ ವರ್ಣನೆ.... ಅವೆಲ್ಲವನ್ನೂ ಚಪ್ಪರಿಸುವಷ್ಟು ಆಸೆ.
ಇನ್ನು ನಮ್ಮಜ್ಜಿ ಉಪವಾಸ ಮಾಡಿ ದಿನದ ಕೊನೆಯ ಹೊತ್ತಿಗೆ ಸಪ್ಪಗೆ ಕೂಡುತ್ತಿದ್ದಳೆಂದು ನನ್ನ ಅನಿಸಿಕೆ... ಸುಸ್ತಾಗಿರಬಹುದು.... ಅಂತಹ ಒಂದು ಸಮಯದಲ್ಲಿ ಅಜ್ಜಿ ಹೇಳಿದ ತಮಾಷೆಯ ಹಾಡು." ಏಕಾಶಿ ಬಂದೆನ್ನ ಎದೆ ಮೇಲೆ ಕೂತಿದೆ ಏನ್ ಮಾಡ್ಲೇನ್ಮಾಡ್ಲಿ.... ತಿನ್ಬೇಕು ಅನಿಸ್ತಿದೆ... ತಿನ್ನಬಾರ್ದು ಅಂತಿದೆ ಏನ್ ಮಾಡ್ಲೇನ್ಮಾಡ್ಲಿ"... ಮನಸ್ಸಿನ ತುಮುಲ ಎದ್ದು ತೋರುತ್ತದೆ ಅಲ್ಲವೇ?
ಉಪವಾಸವು ಸಹ ಅವರವರ ಅನುಕೂಲಕ್ಕೆ ತಕ್ಕಂತೆ ಮಾರ್ಪಾಟಾಗಿದೆ...
ಒಂದು ನಿಟ್ಟುಪವಾಸ.. ನಿರ್ಜಲ ಉಪವಾಸ ...ಏನೂ ತಿನ್ನದೇ, ನೀರನ್ನು ಸಹ ಕುಡಿಯದೆ ಇರುವುದು.... ನಾನು ಹೈ ಸ್ಕೂಲ್ ಓದುತ್ತಿದ್ದಾಗ ಗಾಂಧಿ ಬಜಾರ್ ಮನೆಯಲ್ಲಿ ಇದ್ದ ಒಬ್ಬರು( ಬಹುಶಃ ಅವರ ಹೆಸರು ನಾಗರಾಜ್ ಇರಬಹುದು) ಅವರು ನಿರ್ಜಲ ಉಪವಾಸ ಮಾಡುತ್ತಿದ್ದದ್ದನ್ನು ನಾನು ನೋಡಿದ್ದೇನೆ.. ಬಾಯಿಯಲ್ಲಿನ ಎಂಜಲನ್ನು ಸಹ ನುಂಗದೆ ಹೊರಗೆ ಉಗುಳುತ್ತಿದ್ದದ್ದು.... ಸಾಮಾನ್ಯ ದಿನಗಳಲ್ಲಿ ಅವರು ಸಿಗರೇಟ್ ಅನ್ನು ಸೇದುತ್ತಿದ್ದದ್ದು.... ಸೇದಲು ತವಕಿಸುತ್ತಿದ್ದದ್ದನ್ನು ಕಂಡಿದ್ದೇನೆ ....ಆದರೆ ಉಪವಾಸದ ದಿನದಂದು ಸಿಗರೇಟ್ ಅನ್ನು ಮುಟ್ಟುತ್ತಿರಲಿಲ್ಲ.. ಹೊಗೆ ಒಳಗೆ ಹೋಗುವುದೆಂದು.. ನಿಜವಾಗಲೂ ಇದು ಅವರ ಮನೋ ನಿಗ್ರಹ.
ಇನ್ನು ಕೆಲವರು ಅನ್ನ ತಿನ್ನಬಾರದು... ಎಂದು ನಂಬುವವರು.. ಹಾಗಾಗಿ ಅಕ್ಕಿಯಿಲ್ಲದ ಫಲಹಾರವನ್ನು ಒಂದು ಬಾರಿ ತಿನ್ನುವುದು ಅವರ ಉಪವಾಸದ ಕ್ರಮ.
ಅನ್ನವನ್ನು ಭಿನ್ನ ಮಾಡಿ ತಿಂದರೆ ಅದಕ್ಕೆ ದೋಷವಿಲ್ಲ ಎಂದು ನಂಬುವ ಕೆಲವರು ಅಕ್ಕಿಯಿಂದ ತಯಾರಾದ ತಿನಿಸುಗಳನ್ನು ತಿನ್ನುತ್ತಿದ್ದದ್ದು ಒಂದು ಕ್ರಮ.
ನಮ್ಮಪ್ಪನಿಗೆ 100 ವರ್ಷ ದಾಟಿದ ಮೇಲೆ ಉಪವಾಸ ಮಾಡುವುದು.. ಕಷ್ಟವಾಗುತ್ತಿತ್ತು. ಹಾಗಾಗಿ ಅಕ್ಕಿಯ ಜೊತೆಗೆ ಹೆಸರುಬೇಳೆ ಬೆರೆಸಿ ಮಾಡಿದ ಹುಗ್ಗಿ.. ಅದರ ಜೊತೆಗೆ ಹುಣಸೆ ಗೊಜ್ಜಿನ ನಂಚಿಕೆ... ವಾವ್.. ನಾನು ತಪ್ಪದೆ ನಮ್ಮಪ್ಪನ ಜೊತೆಯಲ್ಲಿ ಏಕಾದಶಿ ಉಪವಾಸದ ಸವಿಯನ್ನು... ಅದರ ಜೊತೆಗೆ ಊಟವನ್ನೂ ಪೇರಿಸುತ್ತಿದ್ದೆ...
ಏಕಾದಶಿಯಲ್ಲಿ... ವೈಕುಂಠ ಏಕಾದಶಿ.... (ತಿರುಪತಿಯಲ್ಲಿ ಅದನ್ನು ಮುಕ್ಕೋಟೇಕಾದಶಿ ಎಂದು ಕರೆಯುವ ರೂಡಿ ಉಂಟು) ವಿಶೇಷ.. ಅಂದು ವಿಷ್ಣು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಾನೆ ಎಂಬ ನಂಬಿಕೆ ...ಹಾಗಾಗಿ ಅಂದು ವಿಷ್ಣುವಿನ ದರ್ಶನ ಒಂದು ಭಾಗ್ಯ... ಉತ್ತರದ ಬಾಗಿಲಿನ ಮೇಲೆ ದಕ್ಷಿಣಾಭಿಮುಖವಾಗಿ ಇಟ್ಟಿರುವ ವೆಂಕಟೇಶ್ವರನ ಮೂರ್ತಿಯ ಕೆಳಗೆ ಹೋದರೆ ಸ್ವರ್ಗ ಪ್ರಾಪ್ತಿ ಎಂದು ನಂಬಿಕೆ...
ಪ್ರಜ್ಞಾ ಪೂರ್ವಕವಾಗಿ ಹೋಗಿರದಿದ್ದರೂ.... ತಿರುಪತಿಯಲ್ಲಿ ಒಂದು ವರ್ಷ ನನಗೆ ಆ ಭಾಗ್ಯ ದೊರೆತದ್ದು.... ಮಾರನೆಯ ದಿವಸ ಜನವರಿ ಒಂದನೆಯ ತಾರೀಕು ಆಗಿದ್ದ ಕಾರಣದಿಂದ , ಅಲ್ಲಿನ ನಿವಾಸಿಗಳಿಗೆ ಕಲ್ಪಿಸಿದ ಅವಕಾಶ... ಹಾಗಾಗಿ ನಮಗೂ ಸಿಕ್ಕಿದ್ದು... ಒಂದು ವಿಶೇಷ ಅನುಭವ. ಅಂದು ತಿಂದ ಮೊಸರನ್ನದ ಸವಿಯೇ ಸವಿ.
ಈ ಏಕಾದಶಿಯ ಸಂದರ್ಭದಲ್ಲಿ ನನ್ನ ಅಜ್ಜಿ ಹೇಳುತ್ತಿದ್ದ ಮತ್ತೊಂದು ಹಾಡು "ಮುಕ್ಕೋಟೇಕಾದಶಿ ದಿವಸ ಸ್ವಾಮಿ ದಕ್ಷಿಣ ದಿಕ್ಕಿಗೆ ಬಂದ...." ಇಷ್ಟು ಮಾತ್ರ ಜ್ಞಾಪಕವಿದೆ.
ನಮ್ಮಪ್ಪನ ನೂರನೆಯ ವರ್ಷದ ಕಾರ್ಯಕ್ರಮ " ಶಾಮಣ್ಣನ ಶತಾಬ್ದಿ ಸಂಭ್ರಮ" ಆಗಿದ್ದು ಏಕಾದಶಿ ದಿನವೇ...
ಇನ್ನು ಏಕಾದಶಿಯನ್ನು ಅಂತ್ಯಗೊಳಿಸುವ ಮಾರನೆಯ ದಿನದ ಪಾರಣೆ.... ಯಾರೋ ಹೇಳಿದಂತೆ " ಕಾಗೆ ಕರ್ ಅನ್ನುವಷ್ಟರಲ್ಲಿ ಬಡಿದು ಬಾಯಲ್ಲಿ ಹಾಕಿರಬೇಕು" ... ಉಪವಾಸದ ನಂತರದ ಹಸಿವನ್ನು ತಣಿಸುವ ಆತುರ ಎಷ್ಟಿರುತ್ತದೆ ಎಂದು ಸೂಚಿಸುತ್ತದೆ.
ಉಡುಪಿಯಲ್ಲಿ ದ್ವಾದಶಿಯಂದು... ಬೆಳ್ಳಂ ಬೆಳಗ್ಗೆ ಮಾಡಿದ ಪಾರಣೆಯ ಊಟ ಮುಗಿಸಿ ಹೊರ ಬಂದಾಗ... ಸೂರ್ಯ ಇನ್ನೂ ಮೇಲಕ್ಕೆ ಏರಿರಲಿಲ್ಲ....
ಏಕಾದಶಿ ಅಲ್ಲದಿದ್ದರೂ ಉಪವಾಸ ಮಾಡುವ ಮತ್ತೊಂದು ದಿನ ಶಿವರಾತ್ರಿ. ಇಲ್ಲಿ ಉಪವಾಸದ ಅರ್ಥ ಹತ್ತಿರದಲ್ಲಿಯೇ ಇರುವುದು.... ಅಂದರೆ ದೇವರ ಹತ್ತಿರ ಇದ್ದು... ಬೇರೆಲ್ಲ ವಿಷಯಾಸಕ್ತಿಗಳನ್ನು ದೂರ ಮಾಡಿ... ದೇವರ ಧ್ಯಾನದಲ್ಲಿ ಇರುವುದು....
ಒಂದು ಸಣ್ಣ ಕಥೆ ಚಿಕ್ಕಂದಿನಲ್ಲಿ ಕೇಳಿದ್ದು "ಒಬ್ಬ ಬೇಡ ಬೇಟೆಗಾಗಿ ಕಾಡಿಗೆ ಬಂದ.. ದುರದೃಷ್ಟವಶಾತ್ ಸಂಜೆಯ ತನಕ ಯಾವ ಬೇಟೆಯೂ ಸಿಗಲಿಲ್ಲ... ಇನ್ನೇನು ನಿರಾಶೆಯಿಂದ ಮನೆಗೆ ಹೋಗುವ ಯೋಚನೆಯಲ್ಲಿದ್ದಾಗ.. ಹತ್ತಿರದಲ್ಲಿ ಹುಲಿ.. ಭಯದಿಂದ ಮರದ ಮೇಲೆ ಹತ್ತಿ ಒಂದು ರೆಂಬೆಯನ್ನು ಹಿಡಿದು ಕೂತು ಕಾಲ ಕಳೆಯುತ್ತಿದ್ದಾಗ.. ನಿದ್ದೆಯಿಂದ ದೂರವಾಗಲು ಅಲ್ಲೇ ಕೈಗೆ ಸಿಕ್ಕಿದ ಎಲೆಗಳನ್ನು ಕಿತ್ತು...ಎಣಿಸುತ್ತ ಕೆಳಗೆ ಎಸೆಯುತ್ತಿದ್ದ... ಬೆಳಗಾಗುವ ವೇಳೆಗೆ ಹುಲಿ ಜಾಗ ಖಾಲಿ ಮಾಡಿತ್ತು ...ಕೆಳಗೆ ಬಂದು ನೋಡಿದರೆ.... ರಾತ್ರಿ ಹತ್ತಿದ್ದ ಮರ ಬಿಲ್ವಪತ್ರೆಯದು... ಕೆಳಗೆ ಎಸೆದಾಗ ಬಿದ್ದದ್ದು ಒಂದು ಶಿವಲಿಂಗದ ಮೇಲೆ... ಅನಾಯಸವಾಗಿ ಶಿವರಾತ್ರಿಯ ಉಪವಾಸ, ಜಾಗರಣೆ ಹಾಗೂ ಶಿವಪೂಜೆ... ಇದಲ್ಲವೇ ಯೋಗಾಯೋಗ.
ನನ್ನ ಶಿವರಾತ್ರಿಯ ಆಚರಣೆ... ಫಲಹಾರ ಮಾಡಿ ... ಶಿವನಿಗೂ ನಮಸ್ಕಾರ ಮಾಡಿ... ಜಾಗರಣೆಯನ್ನು ಮಾಡುವಲ್ಲಿ ವಿಫಲನಾಗಿದ್ದೇ ಹೆಚ್ಚು.... ಭಾಗಶಃ ಪುಣ್ಯ ನನ್ನದು.
ಈಗ ಇನ್ನೊಂದು ಚಿಂತನೆ... ನಾವೆಲ್ಲ ಮೊಬೈಲ್ ಫೋನಿನ ದಾಸರಾಗುತ್ತಿದ್ದೇವೆ.... ಈಗಿನ ಯುವಕರು, ಮಕ್ಕಳಂತೂ ಫೋನ್ ಇಲ್ಲದೆ ಜೀವನವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅದಕ್ಕೆ ವ್ಯಸನಿಗಳಾಗಿದ್ದಾರೆ.... ಇದೊಂದು ಸಾಮಾಜಿಕ ಪಿಡುಗಾಗಿದೆ.... ಜೊತೆಗೆ ಇದಕ್ಕೊಂದು ಪರಿಹಾರ ಕಂಡುಹಿಡಿಯುವ ಅನಿವಾರ್ಯವೂ ಮಾನಸಿಕ ತಜ್ಞರು ಹಾಗೂ ಸಮಾಲೋಚಕರ ಮುಂದಿದೆ.. mobile de -addiction ಬಗ್ಗೆ ವಿಶೇಷ ಚಿಂತನೆಗಳು ಕಾರ್ಯಾಗಾರಗಳು ನಡೆಯುತ್ತಿವೆ....
ನಾನು ಮೊಬೈಲನ್ನು ಆಟವಾಡಲು, ಹಾಗೂ internet ಉಪಯೋಗಿಸಿ, ಸಾಮಾಜಿಕ ತಾಣಗಳಲ್ಲಿ ಹರಿದಾಡುವ ಅಭ್ಯಾಸವನ್ನು ರೂಢಿಸಿ ಕೊಂಡಿದ್ದೇನೆ... ಕೆಲವು ಸಲ ಅದು ಅತಿರೇಕಕ್ಕೆ ಹೋಗಿದ್ದೂ ಇದೆ... ಹಾಗಾಗಿ ನಾನೊಂದು ಮಾರ್ಗವನ್ನು ಕಂಡುಕೊಂಡಿದ್ದೇನೆ... ಅದೇ NET ಉಪವಾಸ. ಪ್ರತಿ ಭಾನುವಾರ ರಾತ್ರಿ ನಾನು ಇಂಟರ್ನೆಟ್ ಆಫ್ ಮಾಡಿ... ಫೋನನ್ನು ನಿಜ ಅರ್ಥದಲ್ಲಿ ದೂರವಾಣಿಯಂತೆ ಉಪಯೋಗಿಸುತ್ತೇನೆ... ಇದು ಮಂಗಳವಾರ ಬೆಳಿಗ್ಗೆ ತನಕ ಜಾರಿಯಲ್ಲಿರುತ್ತದೆ.. ಅನಿವಾರ್ಯ ಕಾರಣಗಳ ಹೊರತಾಗಿ... ಇದನ್ನು ಪಾಲಿಸುತ್ತಿದ್ದೆನೆ...NET ಉಪವಾಸವನ್ನು ಮಾಡುತ್ತಿರುವುದರಿಂದ ಸೋಮವಾರದ ದಿನ ನಾನು ಬಿಡುವಾಗಿರುತ್ತೇನೆ... ಜೀವನ ಶೈಲಿಯೇ ಬೇರೆಯಾಗಿರುತ್ತದೆ...
ಈಗೊಂದು ಹಾಡು ಕೇಳಿಸುತ್ತಿದೆ ಅದರಲ್ಲಿ... ಹೆಚ್ಚು ಕಿವಿಗೆ ಬಿದ್ದದ್ದು " ಮರ ನೆಟ್ಟು... ಮರ ನೆಟ್ಟು"... ಜೊತೆ ಜೊತೆಗೆ ಕಿಟಕಿಯಿಂದ ಸಾಕಷ್ಟು ಮರಗಳು ಕಾಣುತ್ತಿವೆ... ಹಾಗಾಗಿ ಹೊಳೆದದ್ದು ಇನ್ನೊಂದು ಉಪವಾಸ.. ಅದೇ "ಮರ ನೆಟ್ಟುಪವಾಸ".... ನಾವೆಲ್ಲರೂ ಆಗಾಗ ಒಂದೊಂದು ಮರವನ್ನು ನೆಟ್ಟು ಬೆಳೆಸಿದರೆ ಅದೇ ನಾವು ಪರಿಸರಕ್ಕೆ ಹಾಗೂ ಮುಂದಿನ ಪೀಳಿಗೆಗೆ ಕೊಡಬೇಕಾದ ಕಾಣಿಕೆ ಹಾಗೂ ಕರ್ತವ್ಯ...
" ಮರ ನೆಟ್ಟು ಉಪವಾಸ" ಮಾಡುತ್ತಾ ಪರಿಸರದ ಪೂಜೆಯನ್ನು ಮಾಡುವ ಮನಸ್ಸು ನಮಗೆಲ್ಲರಿಗೂ ಆ ಪರಿಸರ ದೇವರು ಕೊಡಲೆಂದು ಆಶಿಸುತ್ತಾ..
ನಮಸ್ಕಾರ.
ಏಕಾದಶಿ ಉಪವಾಸ ಮಾಡಲು ಅಗದಿದ್ರು ನೆಟ್ ಉಪವಾಸಕ್ಕೆ ಪ್ರೇರಣೆ ನೀಡಿತು ನಿಮ್ಮ ಬರಹ, ಧನ್ಯವಾದಗಳು ಚಿಕ್ಕಪ್ಪ
ReplyDeletethank you...ಹೆಸರು ಬರೆದರೆ ಚೆನ್ನ...ಯಾರು ಅಂತ ಗೊತ್ತಾಗತ್ತೆ
Deleteಈಗ ತಾನೆ ಊಟ ಮಾಡಿ ನಿಮ್ಮ ಉಪವಾಸದ ಲೇಖನ ಓದಿದೆ. ಮತ್ತೊಂದು ಸುಂದರ ಬರಹ, ಸಮಕಾಲೀನರ ತಮ್ಮ ತಮ್ಮ ಮನದ ಭಾವನೆಗಳನ್ನು ನಿಮ್ಮ ಅಪಾರ ನೆನಪಿನ ಶಕ್ತಿ ಇಂದ ಸರಳ ಭಾಷಾ
ReplyDeleteಪದ ಪ್ರಯೋಗದ ಮೂಲಕ ಉತ್ತಮ ಬರಹ ವಾಗಿ ಮೂಡಿಸಿದ್ದೀರಾ
ಧನ್ಯವಾದಗಳು
ಬಾಬು
ಧನ್ಯವಾದಗಳು. ..ಮೆಚ್ಚುಗೆಗೆ
Deleteಮನೋನಿಗ್ರಹಕ್ಕೆ ಹಿರಿಯರು ಹಾಕಿದ ಸಂಪ್ರದಾಯದ ಲೇಪ ನಮ್ಮ ಪರಂಪರೆಯಲ್ಲಿರುವ ವೈಜ್ಞಾನಿಕತೆಗೆ ಹಿಡಿದ ಕೈಗನ್ನಡಿ. ಮೋಬೈಲ್ ಚಟಕ್ಕೆ ನಿಮ್ಮ ನೆಟ್ ಉಪವಾಸ ಅನುಕರಣೀಯ.
ReplyDeleteThank you...ನಿಮ್ಮ ಹೆಸರು ಬರೆದರೆ ...ಖುಷಿಯಾಗತ್ತೆ
Deleteಉಪವಾಸ ದೇಹದ ಆರೋಗ್ಯಕ್ಕೆ, ನೆಟ್ ಉಪವಾಸ ಮನದ ಆರೋಗ್ಯಕ್ಕೆ .ನೆಟ್ ಉಪವಾಸ ಪ್ರಾರಂಭಿಸಬೇಕೆನಿಸಿದೆ
ReplyDeleteಧನ್ಯವಾದ ಸುಮಾ..ಶುರು ಮಾಡಿ
Deleteಎಂದಿನಂತೆ ಚೆನ್ನಾಗಿದೆ ಈ ಲೇಖನ ಕೂಡ. ಅಭಿನಂದನೆಗಳು.
ReplyDeleteಧನ್ಯವಾದ. ..ನಿಮ್ಮ ಹೆಸರು ಬರೆದರೆ ಚೆನ್ನಾಗಿರತ್ತೆ...
Deleteಏಕಾದಶಿ ಮತ್ತು ಶಿವರಾತ್ರಿ ಉಪವಾಸದ ಮಹತ್ವ ಹಾಗೂ ತಮ್ಮ ಅನುಭವಗಳನ್ನು ಉತ್ತಮವಾಗಿ ಬರೆದಿದ್ದೀರಿ.ವೈಕುಂಠ ಏಕಾದಶಿಯ ಬಗ್ಗೆಯೂ /ಪ್ರಸ್ತಾಪ ಮಾಡಿದ್ದೀರಿ.ತಮ್ಮ ನೆನೆಪಿನ ಶಕ್ತಿ ಇನ್ನೂ ಉತ್ತಮವಾಗಿದೆ.ತಮ್ಮೆಲ್ಲರಿಗೂ ಒಳ್ಳೆಯದಾಗಲಿ
ReplyDeleteಧನ್ಯವಾದ ಸರ್
Deleteಸತತವಾಗಿ ಯಾವುದೇ ಕಾರ್ಯ ಮಾಡುತ್ತಿದ್ದಾಗ ಅದಕ್ಕೊಂದು ವಿರಾಮ ದೊರೆತರೆ, ಕೆಲಸದ ವೇಗ ಹಾಗೂ ಗುಣಮಟ್ಡ ಹೆಚ್ಚುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.
ReplyDeleteಅದನ್ನು ನೆನಪು ಮಾಡಿಸುತ್ತದೆ ಈ ಲೇಖನ.
ಉಪವಾಸದಿಂದ ದೈಹಿಕ ಆರೋಗ್ಯ ಹಾಗೂ ಮೊಬೈಲ್ ಉಪವಾಸದಿಂದ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ.
ಇದರ ಜೊತೆಗೆ ಪರಿಸರ ವೃದ್ಧಿಗಾಗಿ ಗಿಡನೆಡುವ ಯೋಜನೆಯು ಶ್ಲಾಘನೀಯ.
ಇವೆಲ್ಲ ಧನಾತ್ಮಕ ಅಂಶಗಳಿಂದ ಕೂಡಿದ ಲೇಖನ ಉತ್ತಮವಾಗಿದ್ದು ಅನುಸರಣಾ ಯೋಗ್ಯವಾಗಿದೆ. ಧನ್ಯವಾದಗಳು.
ಆದರಗಳೊಡನೆ,
ಗುರುಪ್ರಸನ್ನ,
ಚಿಂತಾಮಣಿ