ಕಾರ್ತಿಕ ಮಾಸ - ಕೈ ತುತ್ತು - ವನಭೋಜನ


 

ಕೆಲ ದಿನಗಳ ಹಿಂದೆ ಒಂದು ಕಾರ್ಯಕ್ರಮ... ಸಂಜೆ ಸ್ನೇಹಿತನ ಮನೆಯಲ್ಲಿ ಎಲ್ಲ ಸೇರಿದ್ದೆವು ಹರಟೆ ,ಆಟ, ನಂತರ ಇದ್ದದ್ದೇ ಊಟ...   ಊಟ ಮನೆಯಲ್ಲಿನ ಸಣ್ಣ ಕೈದೋಟದಲ್ಲಿ ಮಾಡಲು ತಯಾರಾದೆವು... ಇದ್ದ ಒಂದು ಮರ ಎನ್ನಬಹುದಾದ ದೊಡ್ಡಗಿಡ ಹಾಗೂ ಹೂ ಗಿಡಗಳು ಇವುಗಳ ಮಧ್ಯೆ ತಿಳಿ ಬೆಳಕಿನಲ್ಲಿ, ಕೈಯಲ್ಲಿ ತಟ್ಟೆ ಹಿಡಿದು ಹರಟೆ ಹೊಡೆಯುತ್ತಾ ಊಟ ಮಾಡಿದ್ದು ....ಒಂದು ಕೈ ಹೆಚ್ಚೇ..ತಿಂದದ್ದು. . ಮಾತಿನ ಮಧ್ಯೆ ಬೆಳದಿಂಗಳು ಇದ್ದರೆ ಚೆನ್ನಾಗಿರುತ್ತೆ ಅಂತ ಒಂದು ಚಿಂತನೆ... ಬೆಂಗಳೂರು ಬೆಳಕಲ್ಲಿ ಬೆಳದಿಂಗಳ ಸವಿ ಕಷ್ಟ .....ಎಲ್ಲ ದೀಪಗಳು ಆರಿ ಬೆಳದಿಂಗಳಿದ್ದರೆ ಚನ್ನಲ್ಲವೇ.. ಬೆಳದಿಂಗಳ ಊಟ ನೆನಪುಗಳನ್ನ ಮುಂದೆ ತಂತು. ದೊಡ್ಡಜಾಲದಲ್ಲಿ ನಾನಿದ್ದ ಸಮಯದಲ್ಲಿ ವಿದ್ಯುತ್  ಇಲ್ಲದ ಕಾಲ... ಬೆಳಕಿಗೆ ಒಂದು ಸೀಮೆಎಣ್ಣೆ ದೀಪ... ಸಂಜೆ ನನ್ನಪ್ಪ ದೀಪದ ಗಾಜನ್ನು ಬೂದಿ ಹಾಕಿ ಚೆನ್ನಾಗಿ ಒರೆಸಿ ಪಳ ಪಳ ಮಾಡಿ ದೀಪಕ್ಕೆ ಇಡುತ್ತಿದ್ದದ್ದು.... ಅದೇ ಬೆಳಕಿಗೆ ನಮ್ಮ ಜೀವನ ಹೊಂದಿಕೊಂಡಿತ್ತು...  ಹಾಗಾಗಿ ಬೆಳದಿಂಗಳು ಇರುವ ದಿನಗಳು ನಮಗೆ ಹೆಚ್ಚಿನ ಉತ್ಸಾಹ ಕೊಡುತ್ತಿದ್ದವು... ಆಗೆಲ್ಲ ತುಳಸಿ ಕಟ್ಟೆಯ ಹತ್ತಿರ ಕೈತುತ್ತು ಊಟ ನಮಗೆಲ್ಲಾ ಖುಷಿಯ ಸಂಗತಿ..... ಮೊದಲ ಕಾರಣ ಉಂಡತಟ್ಟೆಯನ್ನು ತೊಳೆಯುವ ಕೆಲಸದಿಂದ ತಪ್ಪಿಸಿಕೊಳ್ಳಬಹುದಲ್ಲ..... ಜೊತೆಗೆ ಅಜ್ಜಿ/ ಅಮ್ಮ ಏನೆಲ್ಲ ಸೇರಿಸಿ ಹದ ಮಾಡಿ ಕಲಸಿ ಹಾಕುತ್ತಿದ್ದ ಕೈತುತ್ತಿನ ರುಚಿಗೆ ಅದರದೇ ಆದ ಮಹತ್ವ ( ಇಲ್ಲೊಂದು ವಿಚಾರ.. ಪಾಯಸ/ ಸಿಹಿ ತಿಂದ ದಿನ ಗಂಡು ಮಕ್ಕಳು ಉಂಡ ತಟ್ಟೆಯನ್ನು ತೊಳೆಯಬಾರದು ಎನ್ನುವ ಪದ್ಧತಿ ನಮ್ಮ ಮನೆಯಲ್ಲಿತ್ತು. ಬೇರೆಲ್ಲ ದಿನ  ನಮ್ಮ ತಟ್ಟೆಯನ್ನು ನಾವೇ ತೊಳೆಯ ಬೇಕಾದದ್ದು ಕಡ್ಡಾಯ.... ಸುಗ್ರೀವಾಜ್ಞೆ ಎನ್ನಲೇ?)

ಕೈ ತುತ್ತನ್ನು ನೆನೆದಾಗ ಧುತ್ತೆಂದು ಬರುವ ನೆನಪು ಬೆಟ್ಟಹಲಸೂರು.... ನಾವುಗಳು ರಜೆಯಲ್ಲಿ ಬೆಟ್ಟಹಲಸೂರಿಗೆ ಹೋಗಿ ಒಂದಷ್ಟು ದಿನ ಕಾಲ ಕಳೆದು ಬರುವುದು ಒಂದು ಸಂಪ್ರದಾಯ... ಒಂದು ರಾತ್ರಿ ಬೆಟ್ಟಹಲಸೂರು ಅಜ್ಜಿ ನಮಗೆಲ್ಲಾ ಕೈತುತ್ತು ಹಾಕುತ್ತಿದ್ದರು... ನಾವೆಲ್ಲ ನಮ್ಮದೇ ಲೋಕದಲ್ಲಿ ಹರಟುತ್ತಾ ತಿನ್ನುತ್ತಿದ್ದೆವು... ಆಗ ಇದ್ದಕ್ಕಿದ್ದಂತೆ ಒಂದು ಎಚ್ಚರಿಕೆಯ ಕೂಗು ...ಆಚೆ ಕಡೆಯಿಂದ.... ಕಿಟಕಿಯ ಹತ್ತಿರ ಹಾವು ಬಂದಿದೆ ಮನೆಯೊಳಕ್ಕೆ ಹರಿಯುತ್ತಿದೆ.. ಎಂದು... ನಾವೆಲ್ಲ ಭಯದಿಂದ ಚೆಲ್ಲಾಪಿಲ್ಲಿ... ಅಜ್ಜಿ ಎಲ್ಲರನ್ನೂ ಅಲ್ಲಿಂದ ಆಚೆಗೆ ಕರೆತಂದಳು... ಯಾರೋ ಓಡಿಸಿದರು ...ಹಾವು ಮನೆಯೊಳಗೆ ಬರಲಿಲ್ಲ.. ಆಚೆ ಹೋದರೂ ಅದನ್ನು ನೋಡುವ ಯೋಗ ಇರಲಿಲ್ಲ..ಕಣ್ಮರೆಯಾಗಿತ್ತು.

ಕೈತುತ್ತು ಊಟದ ಪ್ರಿಯನಾಗಿ, ನನಗೆ ತುಂಬಾ ಮೆಚ್ಚುಗೆಯಾದದ್ದು... ಸ್ನೇಹ ಸೇವಾ ಟ್ರಸ್ಟ್ ನವರು ಪ್ರತಿ ವರ್ಷವೂ ಕಾರ್ತಿಕ ಮಾಸದಲ್ಲಿ ಆಚರಿಸುವ ಕಾರ್ತಿಕ ದೀಪೋತ್ಸವ ಹಾಗೂ ಅಲ್ಲಿನ ಮಕ್ಕಳಿಗೆ... ಕೈತುತ್ತು ಊಟದ ಕಾರ್ಯಕ್ರಮ. ಯಾವುದೇ ಅಮ್ಮಂದಿರು ತಮ್ಮ ಮನೆಯಿಂದ ಊಟ ತಂದು, ಅಲ್ಲಿಗೆ ಬರುವ ಮಕ್ಕಳಿಗೆ, ಕೈ ತುತ್ತು ಹಾಕುವ ಈ ಕಾರ್ಯಕ್ರಮ ವಿಶಿಷ್ಟವಾದದ್ದು... ಯಾವುದೋ ಅಮ್ಮ ಮತ್ಯಾವುದೋ ಮಕ್ಕಳು... ಆದರೆ ಅವರನ್ನು ಭಾವನಾತ್ಮಕವಾಗಿ ಬೆಸೆದದ್ದು... ಕೈ ತುತ್ತು ಊಟ... ಎಷ್ಟು ಸೊಗಸಲ್ಲವೇ?

ಇನ್ನು ವನ ಭೋಜನದ ಮೊದಲ ನಿದರ್ಶನ... ನನ್ನ ಹಳ್ಳಿಯಲ್ಲಿ ಕಂಡ... ರೈತ ಮಹಿಳೆ ತನ್ನ ಗಂಡನಿಗೆ ಊಟವನ್ನು ಒಂದು ಮಂಕರಿಯಲ್ಲಿ ಇಟ್ಟುಕೊಂಡು, ಅವನು ಕೆಲಸಮಾಡುವ ಹೊಲಗದ್ದೆಗಳ ಬಳಿಗೇ ಹೊತ್ತೊಯ್ದು... ಹತ್ತಿರದ ಗಿಡಮರಗಳ ನೆರಳಲ್ಲಿ ಕೂತು ಊಟ ಮಾಡುವುದು...  ಅಮ್ಮನ ಜೊತೆ ಬಂದಿದ್ದ ಪುಟ್ಟ ಮಗುವನ್ನು ಮುದ್ದಿಸಿ, ಸ್ವಲ್ಪ ಆಟವಾಡಿ... ಸಣ್ಣ ನಿದ್ದೆ ತೆಗೆದು ಕೆಲಸ ಮುಂದುವರಿಸುವುದು.... ಅದೊಂದು ರಸಮಯ ಸನ್ನಿವೇಶ ಅಂತ ನನ್ನ ಅನಿಸಿಕೆ.. ಜೊತೆಗೆ ಜೀವನ ಚೈತನ್ಯ ಸಹ. ನಾನು ಅವರನ್ನು ಗಮನಿಸಿದಾಗ..." ಬಾ  ರಂಗಣ್ಣ ಬಾಡೂಟ ತಿನ್ನುವ... ನಿಮ್ಮನೇಲಿ ಹೇಳಲ್ಲ" ಅಂತ ತಮಾಷೆಯಾಗಿ ರೇಗಿಸಿದ್ದಿದೆ. ನನಗೋ ಎಲ್ಲಿ ಕೊಟ್ಟುಬಿಡುತ್ತಾರೋ ಎಂಬ ಭಯ ಹಾಗೂ ಆತಂಕ.

ಹಿಂದಿನ ಕಾಲದ ಪ್ರಯಾಣಿಕರು ಊರಿಂದ ಊರಿಗೆ ಹೋಗುವಾಗ ತಂದ ಬುತ್ತಿಯನ್ನು ತಿನ್ನುತ್ತಿದ್ದದ್ದೇ..ನೀರು ನೆರಳು ಇರುವ ಜಾಗದಲ್ಲಿ... ಅನಾಯಾಸ ವನ ಭೋಜನ ಆಗಿನ ಕಾಲದ ಜೀವನದ ಒಂದು ಭಾಗವೇ ಆಗಿತ್ತು.  ಈಗೀಗ resort ಗಳು ಹಾಗೂ ಉಳ್ಳವರು ಕಟ್ಟಿರುವ ತೋಟದ ಮನೆಗಳು ವನಭೋಜನಕ್ಕೆ ಸೂಕ್ತ ಜಾಗಗಳು.

ನಮ್ಮ ವಿದ್ಯಾನಗರದ ಶಾಲೆಯಲ್ಲಿ  "ವನಭೋಜನ" ಒಂದು ವಾರ್ಷಿಕ ಕಾರ್ಯಕ್ರಮ... ಅಂದು ಎಲ್ಲಾ ವಿದ್ಯಾರ್ಥಿಗಳು ಉಪಾಧ್ಯಾಯರುಗಳು... ಅಲ್ಲಿದ್ದ ದೊಡ್ಡ ತೋಟದಲ್ಲಿ ಒಟ್ಟಾಗಿ ಕುಳಿತು ತಂದಿದ್ದನ್ನು ಹಂಚಿಕೊಂಡು ತಿನ್ನುವ ಒಂದು ಕಾರ್ಯಕ್ರಮ. ಆಗಿನ ಕಾಲಕ್ಕೆ ಅದೇ ಒಂದು ಸಂತೋಷ ಕೂಟ... ನಮ್ಮ ಮೇಷ್ಟ್ರುಗಳಿಗೆ ನಾವು ತಂದ ಊಟ ಕೊಡುವ ಹುಮ್ಮಸ್ಸು..." ಎಷ್ಟು ಜನ ಕೊಟ್ಟಿದ್ದು ತಿನ್ನಕ್ಕಾಗುತ್ತೋ" ಅಂತ ಹೇಳಿ ನಯವಾಗಿ ನಿರಾಕರಿಸುತ್ತಿದ್ದದ್ದು. ಅವರ ಜೊತೆಯಲ್ಲಿ ಕೂತು ಊಟ ಮಾಡುವುದು ಒಂದು ಹೆಮ್ಮೆ.   ಇಲ್ಲಿ ನೆನಪಾಗುವುದು...... ಒಂದು ಬಾರಿ ಮನೆಯ ಪರಿಸ್ಥಿತಿ ಹೇಗಿತ್ತೋ... ಅಮ್ಮ ಹೇಳಿದ್ದು ...ಬೇಕಾದರೆ ಮುದ್ದೆ ಮಾಡ್ಕೊಡ್ತೀನಿ ತಗೊಂಡ್ ಹೋಗು ಅಂತ... ಆದರೆ ಮುದ್ದೆ ತಗೊಂಡು ಹೋಗೋಕೆ ನನಗೆ ನಾಚಿಕೆ ಜೊತೆಗೆ ಅವಮಾನ... ನಾವು ಬಡವರು ಅಂತ ತೋರಿಸಿಕೊಳ್ಳುವ ಇಷ್ಟ ಇಲ್ಲ... ಬರಿ ಕೈಯಲ್ಲಿ ಹೋಗಿದ್ದೆ... ಎಲ್ಲರೂ ಊಟಕ್ಕೆ ಹೊರಟರು... ನನಗೆ ದುಃಖ... ಸುಬ್ರಾವ್ ಮೇಷ್ಟ್ರು ( ನಮ್ಮ ಹತ್ತಿರದ ಸಂಬಂಧಿಯೂ ಸಹ)... ತಾವು ತಂದಿದ್ದ ಒಂದು ಸಣ್ಣ ಡಬ್ಬಿಯನ್ನು ನನಗೆ ಕೊಟ್ಟು ..ಸಮಾಧಾನ ಮಾಡಿ ಕರೆದುಕೊಂಡು ಹೋಗಿದ್ದರು (ಪ್ರಾಯಶಃ ನಮ್ಮ ಮನೆಯ ಸ್ಥಿತಿ-ಗತಿ ಅವರಿಗೆ ಚೆನ್ನಾಗಿ ಗೊತ್ತಿರಬೇಕು). ಚಿತ್ರಾನ್ನದ ರುಚಿ ಇಂದಿಗೂ ಬಾಯಲ್ಲಿದೆ.... ಇದರ ಇನ್ನೊಂದು ಮುಖ.. ಮತ್ಸ್ಯಮೂರ್ತಿ .. ನಾವು ಮಚ್ಚಿ ಅಂತ ಕರೆಯುತ್ತಿದ್ದ ಮತ್ಸ್ಯಮೂರ್ತಿ.. ಹತ್ತಿರದ ಹುತ್ತನಹಳ್ಳಿಯಿಂದ ಬರುತ್ತಿದ್ದ ಒಬ್ಬ ಹುಡುಗ... ವನಭೋಜನಕ್ಕೆ ಅವನು ತಂದಿದ್ದು ಮುದ್ದೆ... ಅದೂ ಒಂದು ಡಬರಿಯಲ್ಲಿ.. ಅದಕ್ಕೊಂದು ತಟ್ಟೆ ಮುಚ್ಚಿ ಬಟ್ಟೆಯಲ್ಲಿ ಕಟ್ಟಿಕೊಂಡು ಬಂದಿದ್ದ ...ಮಚ್ಚಿಯ ಆತ್ಮವಿಶ್ವಾಸ ಇಂದಿಗೂ ಬೆರಗುಗೊಳಿಸುತ್ತದೆ... ಈಗ ಮುದ್ದೆ ಊಟ ಮಾಡುತ್ತೇನೆ ಎನ್ನುವುದು ಹೆಮ್ಮೆಯ ವಿಷಯ... ಕಾಲಾಯ ತಸ್ಮೈ ನಮಃ..

ವನ ಭೋಜನದ ಮುಂದಿನ ಮಜಲು ಕಾರ್ತಿಕ ಮಾಸದಲ್ಲಿ ಮಾಡುವ ಧಾತ್ರಿ ಪೂಜೆಯ ಅಂಗವಾಗಿ ಧಾತ್ರಿ ಹೋಮ, ಹವನ.. ಈ ಕಾರ್ಯಕ್ರಮದಲ್ಲಿ ಪೂಜೆಗೆ ಬೇಕಾಗುವ ಸಾಮಗ್ರಿಗಳ ಜೊತೆ ಅಡಿಗೆ ಮಾಡಲು ಬೇಕಾಗುವ ಪಾತ್ರೆ ಪಡಗಗಳು ಎಲ್ಲವನ್ನೂ ತೋಟಕ್ಕೆ ಹೊತ್ತೊಯ್ದು ನೆಲ್ಲಿಕಾಯಿ ಮರಕ್ಕೆ ಪೂಜೆ ಮಾಡಿ ಹೋಮ ಹವನಗಳನ್ನು  ಮುಗಿಸಿ, ಅಲ್ಲಿಯೇ ಅಡಿಗೆ ಮಾಡಿ ಊಟ ಮಾಡಿ ಏನೂ ಮನೆಗೆ ತರದೆ ಅಲ್ಲಿಯೇ ಉಳಿದಿದ್ದನ್ನು ವಿಲೇವಾರಿ ಮಾಡುವ ಸಂಪ್ರದಾಯ. ನನ್ನಕ್ಕ ಗಿರಿಜಾಂಬ ಅವರ ಊರು ಕರಲಮಂಗಲದಲ್ಲಿ ಮಾಡುತ್ತಿದ್ದ ಧಾತ್ರಿ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನೆನಪು ಚೆನ್ನಾಗಿದೆ.   ಅಲ್ಲೇ ಇರುವ ಬಾವಿಯಲ್ಲಿನ ನೀರು ತಂದು ಅಡಿಗೆ ಮಾಡಲು ಕೈಜೋಡಿಸಿ, ಇರುವ ಜಾಗದಲ್ಲೇ ಅನುವು ಮಾಡಿಕೊಂಡು ಕೂತು ಬಾಳೆ ಎಲೆಯಲ್ಲಿ... ಓಡುವ ಸಾರನ್ನು ಹಿಡಿದಿಡುತ್ತಾ ಊಟ ಮಾಡುವುದು ಸೊಗಸು. ಊಟದ ನಂತರ ಒಂದಿಷ್ಟು ಹಾಡು, ಆಟಗಳು ಮನಸ್ಸಿಗೆ ಮುದ.

ಉದ್ದೇಶ ವನಭೋಜನ ಅಲ್ಲದಿದ್ದರೂ... ಅದರ ಸವಿಯನ್ನು ಉಂಡಿದ್ದು ನಮ್ಮ trekking ಕಾರ್ಯಕ್ರಮಗಳಲ್ಲಿ. ನಾನು ಭಾಗವಹಿಸಿದ ಸುಮಾರು 15 ವರ್ಷಗಳು, ಡಿಸೆಂಬರ್ 25ರ ಆಸು ಪಾಸಿನಲ್ಲಿ , ಸುಮಾರು ನಾಲ್ಕು ದಿನಗಳ ಕಾಲ, ನಮ್ಮ ಹತ್ತು ಹನ್ನೆರಡು ಜನ ಇರುತ್ತಿದ್ದ ಚಾರಣದ ತಂಡ ಪ್ರಕೃತಿಯ ಮಡಿಲಲ್ಲಿ, ಬೆಟ್ಟಗಳು, ಕಣಿವೆಗಳು,  ನೀರ ಝರಿಗಳು, ದಟ್ಟ ಕಾಡುಗಳ ಮಧ್ಯೆ ಕಾಲ ಕಳೆಯುತ್ತಿದ್ದದ್ದು ಒಂದು ರೋಚಕ ಅನುಭವ. ಇದನ್ನು ಮುತುವರ್ಜಿ ವಹಿಸಿ ಆಗ ಮಾಡುತ್ತಿದ್ದದ್ದು ಮಂಜು ( AM ನಾಥ್).

ನಮ್ಮ ಜೊತೆಯಲ್ಲಿ ಅಡಿಗೆ ಸಾಮಾನುಗಳು, ಪಾತ್ರೆ ಪಡಗಗಳು, ಪಾತ್ರೆ ತೊಳೆಯಲು ಬೇಕಾದ ಪರಿಕರಗಳು, ಗ್ಯಾಸ್ ಸ್ಟವ್ ಹೀಗೆ ಸಕಲ ಸಂಸಾರದೊಡನೆ ಹೊರಡುತ್ತಿದ್ದೆವು. ಮೊದಲೊಂದು ಖಚಿತ ಗಮ್ಯ ಸ್ಥಾನ... ನಂತರ ಬೀಡು ಬಿಟ್ಟದ್ದೆ ಬಿಡದಿ. ನೀರು ಕಂಡ ಕಡೆ ಸ್ನಾನ ಅಲ್ಲೇ ಅಡಿಗೆ ಮಾಡಿ ತಿಂದು ಪಾತ್ರೆ ತೊಳೆದು ಮುಂದಕ್ಕೆ ಪಯಣ. ತಿಂಡಿ ಊಟ ಆ ಸಮಯಕ್ಕೆ ತಕ್ಕಂತೆ ಪರಿಸರದ ಮಧ್ಯದಲ್ಲಿ ಕಾಡು ಮರಗಳ ನೆರಳಿನಲ್ಲಿ. ಕೆಲ ಕಡೆ ಬೆಳಕು ಬೀಳದ ದಟ್ಟ ಕಾಡಿನಲ್ಲಿ ನಮ್ಮ ಊಟ... ವನಭೋಜನ ತಾನೇ?  ಅನಾಯಾಸವಾಗಿ ಕೆಲ ರಾತ್ರಿಗಳು ಬೆಳದಿಂಗಳಲ್ಲಿ ಊಟ ಮಾಡಿದ್ದೇವೆ... ನಾನು ಹಾಕಿದ ಕೈತುತ್ತು ಕೂಡ ಬಹುತೇಕ ಎಲ್ಲ ತಂಡದವರು ಸುಖಿಸಿದ್ದಾರೆ...ಅದೂ ಒಂದು ಥರ ನನಗೆ ತೃಪ್ತಿ   ತಂದ ಘಳಿಗೆಗಳು.

ಚಿಕ್ಕಂದಿನ ಮತ್ತೊಂದು ವಿಶೇಷ ವನಭೋಜನ...  ಬೆಂಗಳೂರಿನ ಲಾಲ್ ಬಾಗ್ ನಲ್ಲಿ  ಮಾಡಿದ ಊಟ. ಅದು ಶಂಕರನಾರಾಯಣ ರಾವ್ ಮೇಷ್ಟ್ರು  ನಮ್ಮನ್ನು ಬೆಂಗಳೂರು ಪ್ರವಾಸಕ್ಕೆ ಕರೆತಂದಿದ್ದಾಗ.... ಇದರ ಹಿನ್ನೆಲೆಯನ್ನು ಹೇಳಲೇಬೇಕು ಎಂಬುವ ತುಡಿತ ನನ್ನದು ... ಬೆಂಗಳೂರು ಪ್ರವಾಸದ ಖರ್ಚು ಒಂದು ರೂಪಾಯಿ.... ನಮ್ಮಪ್ಪ ಪ್ರೋತ್ಸಾಹಿಸಲಿಲ್ಲ...ಅವರದೇ ಕಾರಣಗಳಿಗಾಗಿ..  ನನಗೆ ಅತೀವ ನಿರಾಶೆ... ಕೊನೆ ಗಳಿಗೆಯಲ್ಲಿ ಶಂಕರ್ ನಾರಾಯಣ ರಾವ್ ಮೇಷ್ಟ್ರು ಅವರ ಖರ್ಚಿನಲ್ಲಿ ನನ್ನನ್ನು ಪ್ರವಾಸಕ್ಕೆ ಸೇರಿಸಿಕೊಂಡರು.... ಆ ಋಣ ಈ ಜನ್ಮದಲ್ಲಿ ತೀರಿಸಲಾಗದ ಹೊರೆ... ಅದನ್ನು ಕೃತಜ್ಞತಾ ಪೂರ್ವಕವಾಗಿ ಸಾಧ್ಯವಾದಾಗಲೆಲ್ಲ ನೆನೆಸಿಕೊಂಡು, ಬೇರೆಯವರೊಂದಿಗೆ ಹಂಚಿಕೊಂಡು, ಶಂಕರನಾರಾಯಣರಾವ್ ಮೇಷ್ಟರನ್ನು ನೆನೆಸಿಕೊಂಡು ಗೌರವ ಸಲ್ಲಿಸಿದಾಗ ಮಾತ್ರ , ಭಾಗಶಃ ಋಣ ಸಂದಾಯ ಎಂದು ನನ್ನ ನಂಬಿಕೆ.

ಬೆಳದಿಂಗಳಿಗೆ ಪ್ರಾಮುಖ್ಯ ಬರಬೇಕಾದರೆ ಕತ್ತಲೆ ಇದ್ದಾಗ ಮಾತ್ರ.... ಕಾರ್ತಿಕ ಮಾಸದ ಸಮಯದಲ್ಲಿ ಬೇಗ ಕತ್ತಲೆಯಾಗುವುದರಿಂದ...  ಚಂದ್ರನ ಬೆಳಗುವಿಕೆಗೆ ಸಮಯ ಜಾಸ್ತಿ. ದೀಪೋತ್ಸವಗಳು ಸಹ ಕಾರ್ತಿಕ ಮಾಸದಲ್ಲಿ ಜಾಸ್ತಿ ನಡೆಯುವುದು... ಸಂಜೆ ಮನೆ ಬಾಗಿಲಿಗೆ,  ತುಳಸಿಯ ಕಟ್ಟೆಯ ಬಳಿ ದೀಪ ಇಡುತ್ತಿದ್ದದ್ದು ಚೆನ್ನಾಗಿ ನೆನಪಿದೆ.  ಜೊತೆಗೆ ನಮ್ಮಜ್ಜಿ.. ಹತ್ತಿಯಿಂದ ತಾನೇ ಹೊಸೆದ 108 ಬತ್ತಿಯ ದೀಪವನ್ನು ದೊಡ್ಡ ಹಣತೆಯಲ್ಲಿ ಇಟ್ಟು,  ಸುಮಾರು ಅರ್ಧ ಸೇರಿಗೂ ಮಿಕ್ಕಿ ಎಣ್ಣೆಯನ್ನು ಹಾಕಿ ಮುಸ್ಸಂಜೆಯಲ್ಲಿ ತುಳಸಿ ಕಟ್ಟೆಯ ಪಕ್ಕದಲ್ಲಿ ಹಚ್ಚಿ ತಾನೂ ಕೂತು ಹೇಳುತ್ತಿದ್ದ " ಹಕ್ಕಿಯ ಗೂಡಲ್ಲಿ ಹರಳ ನಿಟ್ಟಿದ್ದೇನೋ ರಾಮ ರಾಮ.. ಹೆತ್ತ ತಾಯಿ ತಂದೆಗಳು ಮತ್ತಾಗಲಾರರು ರಾಮ ರಾಮ... ಪಂಕ್ತೀಲಿ ಪರ ವಂಚನೆಯನ್ನು ರಾಮ ರಾಮ.." ಹೀಗೆ ರಾಮ ನಾಮದ ನೀಳ ಹಾಡು ಹೇಳುತ್ತಾ ಎಷ್ಟು ಹೊತ್ತು ಕೂತಿರುತ್ತಿದ್ದಳೋ ನನ್ನರವಿಗಿಲ್ಲ.. ಆದರೆ ಹಾಡು ಮಾತ್ರ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿದೆ... ಅಜ್ಜಿಗೆ ಕೇಳುತ್ತಿದ್ದೆ..ಯಾಕೆ ಕಾರ್ತಿಕದಲ್ಲೇ ದೀಪ ಹಚ್ಚುತಿಯೇ ಎಂದು... ಅಜ್ಜಿ ಹೇಳಿದ ಉತ್ತರ ...ಬೇಗ ಕತ್ತಲಾಗುತ್ತೆ.. ಹಕ್ಕಿಗಳಿಗೆ ದಾರಿ ತಪ್ಪುತ್ತೆ.... ಹಾಗಾಗಿ ದೀಪ ಹಚ್ಚಿದರೆ ಹಕ್ಕಿಗಳು ಅದರ ಗೂಡು ತಲುಪಲು ಅನುಕೂಲ ಆಗುತ್ತೆ ಎಂದು... ಇದರ ವಿಶ್ಲೇಷಣೆ ಮಾಡುವ ವಯಸ್ಸು ಅದಾಗಿರಲಿಲ್ಲ. ಈಗ ಮಾಡುವ ಮನಸ್ಸಿಲ್ಲ.. ಅಜ್ಜಿ ಹೇಳಿದ್ದು ನಂಬುವುದು ಮಾತ್ರ ಗೊತ್ತಿತ್ತು... ಅದನ್ನು ಬದಲಾಯಿಸಬೇಕೇಕೆ?

ಕಾರ್ತಿಕ ಮಾಸದ ಕೊನೆ... ಬೆಳಕಿನ ಹಬ್ಬ ದೀಪಾವಳಿಯ ಆಗಮನ...ಬೆಳಕಿನ ಮೆರವಣಿಗೆ ಮುಂದುವರಿಕೆ...

ಎಲ್ಲರ ಜೀವನದಲ್ಲಿ ಕತ್ತಲೆಯ ಅಧ್ಯಾಯ  ಬೇಗ ಮುಗಿದು ಬೆಳಕು ಬರಲಿ ಎಂದು ಆಶಿಸುತ್ತಾ..

ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. .......



    

Comments

  1. ಚಿಕ್ಕಪ್ಪ ನಿಮ್ಮ ಕೈ ತುತ್ತಿನ ರುಚಿ ನಮಗೂ ಸಿಕ್ಕಿದೆ, ಅಜ್ಜಿಯ ಹಬ್ಬ(ವೈದಿಕ)ದ ದಿನ ಸಂಜೆಗೆ ನವೀಲರು ಕಾಯಿತ್ತಿದುದು ನಿಮ್ಮ ಕೈ ತುತ್ತಿಗೆ

    ReplyDelete
  2. ಕೈತುತ್ತಿನ ಒಕ್ಕಣೆ ಸರಳ ಸುಂದರವಾಗಿದೆ. ದಯವಿಟ್ಟು ಸ್ನೇಹ ಸೇವಾ ಟ್ರಸ್ಟ್ ನ ವಿವರ ನೀಡಿ. ಈಗಲೂ ಅಲ್ಲಿ ಕೈ ತುತ್ತಿನ ಸಂಪ್ರದಾಯ ಮುಂದುವರಿದಿದೆಯೇ ?

    ReplyDelete
  3. ಕೈ ತುತ್ತಿನ ರುಚಿ ನಮಗೂ ಸಿಕ್ಕಿತು. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏

    ReplyDelete
  4. It was very interesting to read.Is it your own script? Really good.

    ReplyDelete
  5. ನಾಗೇಂದ್ರ ಬಾಬು12 November 2023 at 14:53

    ಇತ್ತೀಚಿನ ದಿನಗಳಲ್ಲಿ ಭಾಗಶಃ ಮರೆತು ಹೋಗಿರುವ ಕೈ ತುತ್ತು ಊಟ ನಿಮ್ಮ ಬರಹದ ಮೂಲಕ ನನಗೂ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು...ಚಾರಣದ ಕೈತುತ್ತು ಆನಂತರ ಎಲೆ ಅಡಿಕೆ ನಾವುಗಳೇ ತಯಾರಿಸಿದ ಅಡುಗೆ...ಹರಟೆ...ಎಲ್ಲವೂ ಮಧುರ...3-4 ವರ್ಷದ ನಂತರ ಈ ವರ್ಷ ಒಂದು ಸಣ್ಣ ಚಾರಣದ ಪ್ರಯತ್ನ ಮಾಡೋಣ
    ಚಾರಣದ ಬಗ್ಗೆ ಒಂದು ಪ್ರತ್ಯೇಕ ಬರಹ ಬರಲಿ
    ಧನ್ಯವಾದಗಳು
    ಬಾಬು

    ReplyDelete
  6. Namma maneyalli balcony yelli Kai tuttu hakkiddu nenapaythu chikappa

    ReplyDelete
  7. ಈಗಿನ ಮಕ್ಕಳು ಅಜ್ಜಿ,ತಾತ, ಕೈತುತ್ತು, ವನಭೋಜನ ಗಳಿಂದ ಪೂರ್ಣವಾಗಿ ವಂಚಿತ ರಾಗಿದ್ದಾರೆ. ಇವುಗಳ ಸವಿಯನ್ನು ಮಕ್ಕಳಿಗೆ ಮಾಡಿಕೊಡಬೇಕಾದುದು ಹಿರಿಯರ ಕರ್ತವ್ಯ. ದಯಮಾಡಿ ಸ್ನೇಹ ಸೇವಾ ಟ್ರಸ್ಟ್ ನ ವಿಳಾಸ, ವಿವರಗಳನ್ನು ನಿಮ್ಮ ವೀಕ್ಷಕರಿಗೆ ನೀಡಿ.ಉಪಯೋಗ ಮಾಡಿಕೊಳ್ಳುವವರು ಮಾಡಿಕೊಳ್ಳುತ್ತೇವೆ.

    ಇನ್ನು ಇವುಗಳ ಪ್ರಸ್ತುತಪಡಿಸಿರುವ ಶೈಲಿ ಅಭಿನಂದನೀಯ. ಲೇಖಕರಾದ ನೀವು, ಹಾಗೂ ವಾಚಕರಾದ ನಾವುಗಳು ಸೇರಿ ವನಭೋಜನ, ಕೈತುತ್ತುಗಳ ,ಸವಿಯ ಪರಿಚಯ ಮಾಡಿಕೊಳ್ಳುವುದಾದರೇ ಇನ್ನೂ ಒಳ್ಳೆಯದೇ.!

    ನೋವು, ಕಷ್ಡ, ಜೀವನದ ಜಂಜಾಟಗಳ ಮಧ್ಯೆ, ಇಂತಹ ಬದುಕಿನ ಆನಂದದ ಕ್ಷಣಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅಜ್ಜಿ, ಅಮ್ಮ ಈಗ ಇಲ್ಲ.

    ಮುಖ್ಯವಾಗಿ ಈ ಬಗ್ಗೆ, ಆಸಕ್ತಿ ಇರಬೇಕಾದ್ದು ಅಗತ್ಯ, ಅನಿವಾರ್ಯ.

    ಆದರಗಳೊಡನೆ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
  8. ರತ್ನಪ್ರಭಾ
    ಕಾರ್ತಕ ಮಾಸದ ನಿಮ್ಮ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಿಮ್ಮ ಹಳೆಯ ನೆನಪಿನ ಬುತ್ತಿ, ನಿಮ್ಮ ತಲೆಯಲ್ಲಿ ಮಾಸದೆ ಇರುವುದು ಸೋಜಿಗ.ಇದೊಂದು ಒಂದು ಸಕರಾತ್ಮಕ ಚಿಂತನೆ, ನಿಮ್ಮ ಅಮೂಲ್ಯ ಸಮಯವನ್ನು ಓದುಗರು ಸದುಪಯೋಗ ಪಡಿಸಿಕೊಳ್ಳಲಿ, ಇದೊಂದು ಸೇವೆ, ಹೀಗೆ ಸಾಗಲಿ ನಿಮ್ಮ ಬರವಣಿಗೆ, ಹಿಂದಿನ ನೆನಪಿನ ಬುತ್ತಿ ನಾವೆಲ್ಲರೂ ಸವಿಯೋಣ

    ReplyDelete
  9. ಈಗಲೂ ಮುದ ನೀಡುವ ಪ್ರಸಂಗಗಳು. kachuguli ಇಡುತ್ತ, ಕಣ್ಣೀರು , ನಗು, ಕರುಣೆ ಗಳನ್ನು ಪ್ರತಿ ಸಾಲು ಒಗ್ಗೂಡಿಸಿ, ನಮ್ಮ ಇತಿಹಾಸದ nenapinaldalli ಧುಮುಕಿಸಿ, ನಾನು New Jersey ಯಲ್ಲಿ ಇದ್ದು ನಿಮ್ಮ ಬ್ಲಾಗ್ ಓದುತ್ತಿದ್ದೇನೆ ಎಂಬ ಸತ್ಯದ ಅರಿವು ಆಗುತ್ತಿಲ್ಲವಲ್ಲ ! ಧನ್ಯವಾದಗಳು ನಮ್ಮ ದೀಪಾವಳಿಯnnu ಮತ್ತಷ್ಟು belagisiddakke!!

    ReplyDelete
  10. ನಿಮ್ಮ ಕೈ ತುತ್ತು ಲೇಖನ ತುಂಬಾ ಚೆನ್ನಾಗಿದೆ. ಇದು ಓದಿದ ನಂತರ ನೀವು ಸ್ನೇಹಾ ಸೇವಾ ಸಂಸ್ಥೆಯ ಕೈ ತುತ್ತು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. Especially ನಿಮ್ಮ ಕೈ ತುತ್ತು ತಿಂದವರ comments ಓದಿದ ಮೇಲೆ ನೀವು ಈ ಸಲ SST ಕೈ ತುತ್ತು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ