ಪ್ರೇಮ..ಜ್ವರ..ಹಾಗೂ ನವಂಬರ್


ಪ್ರೇಮದಲ್ಲಿ ಬಿದ್ದವರಿಗೆ, ಜ್ವರ ಬೇಗ ಕಾಣಿಸಿಕೊಳ್ಳುತ್ತಂತೆ.... ಇದು ಒಂದು ಅಭಿಪ್ರಾಯ.... ಇಲ್ಲೊಂದು ವಿಶಿಷ್ಟ ಜ್ವರ....ಸಾಮಾನ್ಯವಾಗಿ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು ಅಕ್ಟೋಬರ್ ಕೊನೆಯ ವಾರದಲ್ಲಿ.... ನವಂಬರ್ ಒಂದಕ್ಕೆ ತುತ್ತ ತುದಿಯನ್ನು ಮುಟ್ಟಿ... ನಂತರ ನಿಧಾನವಾಗಿ.... ಕ್ಷೀಣಿಸಿ ನವೆಂಬರ್ ಕೊನೆಗೆ ಇಳಿದು ಹೋಗುತ್ತೆ.  ಕರೋನಾದಂತೆ ಭಯಂಕರವಲ್ಲದಿದ್ದರೂ...  ಅದರಷ್ಟೇ ಬೇಗ ಹರಡುವ ಖ್ಯಾತಿಯನ್ನು ಹೊಂದಿದೆ. ಈ ಪ್ರೇಮ ಜ್ವರ ಕಾಣಿಸಿಕೊಂಡಿದ್ದು 1956 ರಲ್ಲಿ.. ಹಾಗೂ ಇದು ಪ್ರತಿ ವರ್ಷವೂ ತಪ್ಪದೇ , ಇದೇ ಸಮಯದಲ್ಲೇ ಕಾಣಿಸಿಕೊಳ್ಳುತ್ತಿದೆ.... ಇದುವೇ ಈ ಪ್ರೇಮ ಜ್ವರದ ವಿಶೇಷತೆ.

ನಿಮಗೆ ಅರ್ಥವಾಗಿದೆ ಅನ್ಕೋತೀನಿ..... ಹೌದೂರಿ.... ಅದೇ ...ಅದೇ.... ಕನ್ನಡದ ಮೇಲಿನ ಪ್ರೀತಿಯ, ಅಭಿಮಾನದ "ಪ್ರೇಮ ಜ್ವರ".  ಇದು ಜಗದಲ್ಲೆಡೆ ನೆಲೆಸಿರುವ  ಕನ್ನಡಿಗರಿಗೆ/ ಕನ್ನಡದ ಅಭಿಮಾನಿಗಳಿಗೆ ಮಾತ್ರ ಬರುವ ಜ್ವರ.....ಅದೇ ಕನ್ನಡ ರಾಜ್ಯೋತ್ಸವದ ಜ್ವರ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಬರೆದ ಹುಯಿಲಗೋಳ ನಾರಾಯಣರಾಯರ ಮನದಾಳದ ಆಸೆಯಂತೆ 1956 ರಲ್ಲಿ ಕನ್ನಡ ಮೂಲ ಭಾಷೆಯಾದ ಪ್ರದೇಶಗಳು ಒಂದುಗೂಡಿ ಕನ್ನಡ ನಾಡಿನ ಉದಯವಾಯಿತು..... ಹೆಸರಾಯಿತು ಕರ್ನಾಟಕ... ಉಸಿರಾಗಲಿ ಕನ್ನಡ ಎನ್ನುವ ಆಸೆ ಮಾತ್ರ ಇನ್ನೂ ಪೂರ್ಣವಾಗಿಲ್ಲ...ಸರ್ಕಾರದ ದೊಡ್ಡ ಅಧಿಕಾರಿಗಳೂ ಸಹ ಈ ವಿಚಾರದಲ್ಲಿ ನಿಷ್ಕ್ರಿಯರು... 

ಯಾಕೋ ನಮ್ಮ ಕನ್ನಡ ನಾಡಿನ... ಅದರಲ್ಲೂ ಬೆಂಗಳೂರಿನ ಜನರಿಗೆ ಕನ್ನಡದ ಭಾಷೆ ಬಗ್ಗೆ ಅಭಿಮಾನದ ಕೊರತೆ....

ನವಂಬರ್ ಕನ್ನಡಿಗ ಎಂದು ಹೆಸರು ಪಡೆದ ಕರ್ನಾಟಕದ ಜನ... ಪ್ರೇಮ ಜ್ವರದ ಕಾವಿನಲ್ಲಿ ಮಾತ್ರ ಕನ್ನಡದ ಬಡಬಡಿಕೆ.....ಬುಡುಬುಡಿಕೆ...

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇರಬೇಕು, ಆಡಳಿತ ಭಾಷೆಯಾಗಬೇಕು ಎಂದು ಹೋರಾಡಿದವರಲ್ಲಿ ಬಹು ಮಂದಿ ಇದ್ದರೂ... ನಾ ಕಣ್ಣಾರೆ ಕಂಡದ್ದು ಅನಕೃ, ನಾಡಿಗೇರ ಕೃಷ್ಣರಾಯರು, ಬೀಚಿ... ಇವರುಗಳ ಸಂದೇಶ ಸೂಕ್ತವಾಗಿದ್ದರೂ ತಲುಪುತ್ತಿದ್ದದ್ದು ಓದು ಬರಹ ಬರುತ್ತಿದ್ದವರಿಗೆ ಮಾತ್ರ..... ಎಂದು ನನ್ನ ಅನಿಸಿಕೆ.... 

ಮ. ರಾಮಮೂರ್ತಿಯವರು ಕನ್ನಡದ ಬಾವುಟವನ್ನು ಪ್ರಚುರಗೊಳಿಸಿದಾಗ ಒಂದಷ್ಟು ಸ್ಪೂರ್ತಿ ಬಂದದ್ದು..... ವಾಟಾಳ್ ನಾಗರಾಜ್ ಅವರು ಬೀದಿಗಿಳಿದು ಮಾಡುತ್ತಿದ್ದ ಹೋರಾಟ, ಚಳುವಳಿಗಳೇ ಸಾಮಾನ್ಯ ಜನರನ್ನು ಜಾಗ್ರತಗೊಳಿಸಿದ್ದು ಎಂಬುದು ಸತ್ಯ. ನಂತರವೇ ಕನ್ನಡಕ್ಕೆ ಒಂದಷ್ಟು ಸ್ಥಾನ ಮಾನ ಸಿಕ್ಕಿದ್ದು... ಸಿಗಬೇಕಾದ್ದು ಇನ್ನೂ ಬಹಳಷ್ಟು ಇದೆ.

ಇದರಿಂದ ಕನ್ನಡ ರಾಜ್ಯೋತ್ಸವ ..... ರಾಜ್ಯದ ಮೂಲೆ ಮೂಲೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಆಚರಿಸಲು ಶುರುವಾಯಿತು.... ಒಂದಷ್ಟು ಕನ್ನಡ ಕಲಿಗಳು ಈ ಕಾರ್ಯಕ್ರಮವನ್ನೇ ಹಣ ಮಾಡುವ ದಂಧೆಯಾಗಿ ಮಾಡಿಕೊಂಡದ್ದೂ ಸತ್ಯ.... ಬಹಳ ಹಿಂದೆ ನಾ ಬರೆದ ನಾಲ್ಕು ಸಾಲು ಹೀಗಿದೆ.. ಮೊದಲ ಎರಡು ಸಾಲು ಹೊರ ಪ್ರೆರಣೆಯಿಂದ ಕೊನೆಯ ಎರಡು ಸಾಲು ನನ್ನ ಲೇಖನಿಯಿಂದ....

ಕನ್ನಡಕ್ಕೆ ಕೈ ಎತ್ತು ಓ ನನ್ನ ಕಂದ

ಅದು ಆಗುವುದು ಕಲ್ಪವೃಕ್ಷ..

ಕಂದ ..ಎತ್ತಿದ...ರಾಜ್ಯೋತ್ಸವಕ್ಕೆ  ಚಂದ

ಅದು ಆಯಿತು ಲಕ್ಷ... ಲಕ್ಷ..

ಕನ್ನಡ ಹೋರಾಟಗಾರರ ಗುಂಪುಗಳು ಬಹಳವಾದವು... ಅದಕ್ಕೆ ಮೂಲ ವ್ಯಕ್ತಿಗತ ಪ್ರತಿಷ್ಠೆಗಳು, ಹಣದ ದಾಹ ಹಾಗೂ ರಾಜಕೀಯ ಪ್ರೇರಣೆ...ಇದೇ ಕನ್ನಡದ ದುರ್ದೈವ.

ರಾಜ್ಯೋತ್ಸವ ಪ್ರಶಸ್ತಿಗಳು... ಮೂಲತಃ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾದರೂ... ಕಾಲಕ್ರಮೇಣ ಅದು ರಾಜಕೀಯ ಸುಳಿಯಲ್ಲಿ ಸಿಕ್ಕಿ, ಹಣ, ರಾಜಕೀಯ ಪ್ರಭಾವಗಳು ಪ್ರತಿಭೆಗಳನ್ನು ಗುರುತಿಸಲು ಆಧಾರವಾಗಿರುವುದು ದುಃಖದ ಸಂಗತಿ.

ಆರಂಕುಶವಿಟ್ಟೊಡಂ, ನೆನೆವುದೆನ್ನ ಮನಂ, ಬನವಾಸಿ ದೇಶವಂ... ಎಂದ ಪಂಪನ ಅಭಿಮಾನವಾಗಲೀ, ನರಕಕ್ಕಿಳಿಸಿ ನಾಲಿಗೆ ಸೀಳ್ಸಿ , ಬಾಯಿ ಒಲ್ಸಾಕಿದ್ರೂನು , ಮೂಗಲ್ ಕನ್ನಡ ಪದವಾಡ್ತೀನಿ ನನ್ ಮನಸನ್ ನೀ ಕಾಣೆ... ಎಂದ ಜಿಪಿ ರಾಜಾರತ್ನಂ ಅವರ ವಾಣಿಯಾಗಲೀ.... ಕನ್ನಡಿಗನ ಮೇಲೆ ಹೆಚ್ಚು ಪರಿಣಾಮ ಬೀರಿದಂತೆ ಕಾಣುವುದಿಲ್ಲ... ಬೇರೆ ಭಾಷಿಕರ ಜೊತೆ ಮಾತನಾಡುವಾಗ, ಅವರ ಭಾಷೆಗೆ ಜೋತು ಬೀಳುವ, ಕನ್ನಡಿಗರ ಜೊತೆ ಮಾತನಾಡುವಾಗ ಇಂಗ್ಲೀಷ್ ಉಪಯೋಗಿಸುವ ಮನೋಭಾವ ಬದಲಾಗೇ ಇಲ್ಲ.... ಮೊದಲು ಕನ್ನಡ ಭಾಷೆಗೆ ಆದ್ಯತೆ, ಭಾಷೆ ನೆಲ ಜಲದ ವಿಷಯ ಬಂದಾಗ, ಯಾವ ರಾಜಕೀಯ ಗುಂಪಿರಲೀ  ಅಥವಾ ಸಿದ್ಧಾಂತ ಇರಲಿ... ಒಂದಾಗುವ ಮನೋಭಾವ ಕನ್ನಡಿಗರಿಗೆ ಬರುವುದು ಯಾವಾಗಲೋ?

ಬೇರೆ ರಾಜ್ಯದವರು ಅದರಲ್ಲೂ ತಮಿಳರು.. ಈ ವಿಚಾರಗಳಲ್ಲಿ ಮಾರ್ಗದರ್ಶಕರು...ಅವರ ರಾಜಕೀಯ ಪಕ್ಷ ಯಾವುದಾದರು.... ಈ ವಿಚಾರಕ್ಕೆ ಪ್ರತಿರೋಧ ಒಡ್ಡುವುದಿಲ್ಲ.... ರಾಜ್ಯದ ಪರವಾಗಿ ಚಿಂತನೆ ಇರುತ್ತದೆ..

ಇದೆಲ್ಲದರ ಮಧ್ಯೆ ಕಂಪ್ಯೂಟರ್, ಫೋನ್.. ಹಾಗೂ ಇತರ app ಗಳಲ್ಲಿ ಕನ್ನಡಕ್ಕೆ ಸ್ಥಾನ ದೊರಕಿರುವುದು ಸಂತೋಷದ ವಿಚಾರ... ಈ ಲೇಖನ ಬರೆಯಲು ಸಹ ಮಾತಿನಿಂದ ಬರಹ ಮೂಡಿಸುವ appನ್ನು ಉಪಯೋಗಿಸಿದ್ದೇನೆ.

ಇಷ್ಟೆಲ್ಲ ಹೇಳಿದ ಮೇಲೆ... ಒಂದು ಹಂತದಲ್ಲಿ ನನಗೂ ಈ ಜ್ವರ ಬಂದಿತ್ತು  ಎನ್ನುವುದು ಸತ್ಯ...  ಕೆಲಕಾಲ ಕಾಡಿದ್ದಿದೆ. 

ಅದು ನಾನು ಶಹಾಬಾದ್ ನಲ್ಲಿದ್ದ ಸಮಯ‌‌.. ಬ್ರಹ್ಮಚಾರಿಗಳ ಗುಂಪು.. ಸಮಯವಿದ್ದಾಗಲೆಲ್ಲ ಹರಟೆ... ತರಲೇ.. ಹೀಗೆ.. ಅಂತಹ ಒಂದು ಸಮಯದಲ್ಲೇ ಬಂದ ಒಂದು ಸಲಹೆ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡಬೇಕು ಎಂದು.... ಇಲ್ಲೊಂದು ತೊಡಕು ಇತ್ತು.... ಸಾಮಾನ್ಯವಾಗಿ ಅಲ್ಲಿನ ಕಾಲೋನಿಯ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿದ್ದದ್ದು.... ಬೆಂಗಳೂರು ಮೂಲದ ಆಫೀಸರ್ ಹಂತದ ಜನರಿಂದ ಎಂಬ ಭಾವನೆ ಅಲ್ಲಿನ ಜನರಲ್ಲಿ ಮೂಡಿತ್ತು.  ಹಾಗಾಗಿ ಬೇರೆ ವರ್ಗದವರು ಹಾಗೂ ಸ್ಥಳೀಯ ಜನರನ್ನು ಒಳಗೊಂಡು ಕಾರ್ಯಕ್ರಮ ಮಾಡಬೇಕು ಎಂಬುದು ಕೆಲವರ ಅಭಿಪ್ರಾಯವಾಗಿತ್ತು... ಜೊತೆಗೆ ಹಣಕ್ಕಾಗಿ... ಚಂದ ಎತ್ತ ಬಾರದು ಎಂದು ನಿರ್ಧಾರವಾಯಿತು... ಒಂದಷ್ಟು ಜನ ಸಮಾನ ಮನಸ್ಕರು ಪ್ರತಿ ತಿಂಗಳು ಹತ್ತು ರೂಪಾಯಿಯಂತೆ ಸೇರಿಸಿ.... ನವಂಬರ್  ನಲ್ಲಿ ಕಾರ್ಯಕ್ರಮ ನಡೆಸುವಾಗ ಬಾಕಿ ಹಣವನ್ನು ನಮ್ಮ ನಮ್ಮಲ್ಲೇ ಹೊಂದಿಸುವುದೆಂದು ಮನಸು ಮಾಡಿದೆವು... ಕಡಿಮೆ ಖರ್ಚಿನಲ್ಲಿ ಆಗಬೇಕು... ಹಾಗಾಗಿ ಕಾರ್ಯಕ್ರಮದ ವೇದಿಕೆ ತಯಾರಾಗಿದ್ದು ನಮ್ಮಗಳ ಮಂಚ ಹಾಗೂ ನಮ್ಮ ಮನೆಯ(STRT 10)  ಮುಂದಿದ್ದ ಎತ್ತರದ ಕಾಲುದಾರಿ.  ವೇದಿಕೆಗೆ ಬೇಕಾದ ಮರದ ಕಂಬಗಳು, ಮೇಲೆ ಹೊದಿಸಲು ಟಾರ್ಪಲಿನ್... ವಿದ್ಯುತ್ ದೀಪಗಳು.. ಕಂಪನಿಯ ಕಡೆಯಿಂದ ತೆಗೆದುಕೊಂಡು.... ಒಳಗಿನ ಭಾಗಕ್ಕೆ ಬೆಡ್ ಶೀಟ್ ಗಳನ್ನು ಪರದೆಯಂತೆ ಹಾಕಿ... ಮುಂದಿನ ಪರದೆಗಾಗಿ ಬಟ್ಟೆಯನ್ನು ಕೊಂಡು ತಂದು, ಅದನ್ನು ಹೊಲಿದದ್ದು ಲಂಬು ಸೀನ ( AV ಶ್ರೀನಿವಾಸ್ .... ಈಗ ಅವನು ನಮ್ಮೊಂದಿಗೆ ಇಲ್ಲ) ಅದನ್ನು ಮೊದಲ ವರ್ಷವೇ ಮಾಡಿ ಉಪಯೋಗಿಸಿದ್ದು ಒಂದು ದಾಖಲೆ...

ವೇದಿಕೆಯನ್ನು ಕಟ್ಟಲು ಮುಂದಾಳತ್ವ ವಹಿಸಿತ್ತಿದ್ದದ್ದು...KS ಶೇಷಗಿರಿ. ಈ ಎಲ್ಲ ಕೆಲಸಗಳನ್ನು ಮಾಡುವಾಗ ನಮಗೆ ದೇಹ ಶಕ್ತಿ ಸಹ ಎಲ್ಲೇ ಮೀರಿ ಇರುತ್ತಿತ್ತು.  

ನಂತರದ ಕಾರ್ಯಕ್ರಮಗಳಲ್ಲೂ ನಾವೇ ಭಾಗಿ... ನಾಟಕ ಮಾಡುವವರೂ ನಾವೇ.... ಒಂತರಾ ಖುಷಿ.

ಕಾರ್ಯಕ್ರಮಕ್ಕೆ ಒಬ್ಬ ಅತಿಥಿ ಅವಶ್ಯಕತೆ... ಅತಿಥಿಯನ್ನು ಗುರುತಿಸಿ ಗೊತ್ತು ಮಾಡಲು ಒಂದು ಸಾಹಸ.... ಬೇರೆ ಊರಿಂದ ಆಹ್ವಾನಿಸುವಷ್ಟು ಆರ್ಥಿಕ ಚೈತನ್ಯ ಇಲ್ಲ ಹಾಗಾಗಿ ಅಲ್ಲಿಯ ಕಾಲೇಜಿನ ಅಧ್ಯಾಪಕರೇ ನಮ್ಮ ಕೈಯ ಅಳತೆಯಲ್ಲಿ ಸಿಗುವವರು.... ಅದರಲ್ಲಿ ಮುಖ್ಯರು ..ಕನ್ನಡದ ಲೇಖಕರೂ ಆದ ವಸಂತ ಕುಷ್ಟಗಿ ಯವರು... ಒಂದು ವರ್ಷ ನಮ್ಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದವರು.

ಇನ್ನು ಎಲ್ಲರಿಗೂ ತಿಳಿಸಲು ಕರಪತ್ರ ಬೇಕು... ಕರಪತ್ರ ಮುದ್ರಣ ಮಾಡಿಸಬೇಕು... ಶಹಾಬಾದ್ ಊರಿಗೆಲ್ಲ ಇದ್ದದ್ದು ಒಂದೇ ಪ್ರಿಂಟಿಂಗ್ ಪ್ರೆಸ್.( ಊರಿಗೆಲ್ಲ ಒಬ್ಬಳೇ ಪದ್ಮಾವತಿ)... ಅಲ್ಲಿದ್ದ ಕೆಲಸಗಾರರಿಗೆ ಕನ್ನಡ ಭಾಷೆಯ ಮೇಲಿನ ಹಿಡಿತ ಅಷ್ಟಕ್ಕಷ್ಟೇ... ಕರಡು ಪ್ರತಿಗಳನ್ನು ಓದುವಾಗ ಸಿಗುತ್ತಿದ್ದ ತಪ್ಪುಗಳು... ಅದರಿಂದ ಆಗುತ್ತಿದ್ದ ಹಾಸ್ಯ ಭರಿತ ಅರ್ಥಗಳು ಕೊಟ್ಟರೂ... ಅದನ್ನು ಸರಿಪಡಿಸುವುದು ಕಷ್ಟದಾಯಕವಾಗಿತ್ತು...

ಸಾಂಸ್ಕೃತಿಕ ಕಾರ್ಯಕ್ರಮಗಳು ವಿರಳವಾಗಿದ್ದ ಆ ದಿನಗಳಲ್ಲಿ... ಕನ್ನಡ ರಾಜ್ಯೋತ್ಸವ  ಕಾರ್ಯಕ್ರಮಕ್ಕೆ ತುಂಬಾ ಜನ ಸೇರುತ್ತಿದ್ದರು... ಇದು ಸಂತೋಷ ಕೊಡುತ್ತಿತ್ತು... ಭೇಷ್, ಚೆನ್ನಾಗಿತ್ತು ಎನ್ನುವ ಮಾತುಗಳು ಮೈಯ್ಯುಬ್ಬುವಂತೆ ಮಾಡಿತ್ತು ಎಂಬುದಂತೂ ಸತ್ಯ...

ಹೀಗೊಂದು ರಾಜ್ಯೋತ್ಸವ ಮುಗಿದು ನಾವೆಲ್ಲ ... ನಾವೇ ಕಟ್ಟಿದ ರಂಗಮಂದಿರದಲ್ಲೇ ಕೂತು ವಿಶ್ಲೇಷಣೆ ಮಾಡುತ್ತಾ, ಊಟ ಮಾಡಿ  ಮಲಗುವಷ್ಟರಲ್ಲಿ ನಡುರಾತ್ರಿ ದಾಟಿತ್ತು.... ಒಂದು ಹಂತದಲ್ಲಿ ನಮ್ಮ ಮಾತುಕತೆ ಖುಷಿಯ ತುತ್ತ ತುದಿಯಲ್ಲಿದ್ದಾಗ ನಮ್ಮ ಗಲಾಟೆಯೂ ಅಷ್ಟೇ ಜೋರಾಗಿದ್ದಿರ ಬಹುದು... ಆಗ ನಮ್ಮ ನೆರೆಮನೆಯ CVK ( ಸಿವಿ ಕೃಷ್ಣಮೂರ್ತಿಯವರು, ನಮಗೆಲ್ಲ ಪ್ರೇರಣೆ ಕೊಡುತ್ತಿದ್ದವರು, ತಮಾಷೆಯ ಸ್ವಭಾವದವರು .. ನಾವು ಸಾವಿರಕ್ಕೆ ಒಬ್ಬ ಸಿವಿಕೆ ಅಂತ ಅವರನ್ನು ತಮಾಷೆ ಮಾಡುತ್ತಿದ್ದದ್ದೂ ಉಂಟು.... ಈಗ ನಮ್ಮೊಂದಿಗೆ ಇಲ್ಲ) ತಮ್ಮ ಸ್ವಭಾವತಃ ಜೋರು ಧ್ವನಿಯಲ್ಲಿ.. ಕೋಪ ಪ್ರದರ್ಶಿಸುತ್ತಾ... Gentleman... Remember there are twelve houses in this building and all of us have to sleep... Will you stop this shouting now"... ಅಂತ  ರಾಜ್ಯೋತ್ಸವ ಕಾರ್ಯಕ್ರಮವಾದ ಕೆಲವೇ ಘಂಟೆಗಳಲ್ಲಿ ಇಂಗ್ಲೀಷ್ ನಲ್ಲಿ ಬೈದದ್ದು.. ತುಂಬಾ ತಮಾಷೆಯಾಗಿತ್ತು. ನಾವೆಲ್ಲ ಸ್ಥಬ್ಧರಾಗಿದ್ದೆವು... ಮುಂದೆ ಮಾತಿಲ್ಲದೆ   ನಿದ್ದೆ ಮಾಡಿದೆವು.  ಖುಷಿಯ ಸಂಗತಿ ಎಂದರೆ ಮಾರನೆಯ ದಿನ ಬೆಳಿಗ್ಗೆ ಕಾಫಿ ಲೋಟಗಳೊಂದಿಗೆ ಬಂದ ಸಿವಿಕೆ ಎಲ್ಲರನ್ನೂ ಎಬ್ಬಿಸಿ ಕಾಫಿ ಕೊಟ್ಟು ಹೇಳಿದ್ದು... "ಹೆಂಗಿತ್ತು ನನ್ನ ಆವಾಜ್".... ಅಲ್ಲೆಲ್ಲಾ ನಗೆಯ ಬುಗ್ಗೆ.

ಜಿ ಬಿ ಸುಂದರ ಕುಮಾರ್ , ತಮಿಳುನಾಡಿನಲ್ಲಿ ಬೆಳೆದ ಕನ್ನಡಿಗ.. ಹಾಗಾಗಿ ಕನ್ನಡದ ಪದಗಳು ಆತನ ಬಾಯಲ್ಲಿ ವಿಶಿಷ್ಟವಾಗಿರುತ್ತಿತ್ತು... ಬಲು ಉತ್ಸಾಹಿ, ನಾಟಕದಲ್ಲಿ ಪಾತ್ರ ಮಾಡುವ ಉಮೇದು.... ನಾಟಕದ ಮೂಕನ ಪಾತ್ರ ಸುಂದರ ಕುಮಾರ್ ಪಾಲು.. ಮಾತಿಲ್ಲ ಬರೀ ಸಂಙ್ಞೆ ಮಾತ್ರ... ನಾಟಕದ ತಾಲೀಮಿಗೆ ತಪ್ಪದೇ ಬರುತ್ತಿದ್ದ ಮೊದಲ ವ್ಯಕ್ತಿಯೇ .. ಸುಂದರ ಕುಮಾರ್.... (ನಾವು ಅವನನ್ನು ಪ್ರೀತಿಯಿಂದ ಕರೆಯುತ್ತಿದ್ದದ್ದು ಸುಂದ್ರೀ, ಅದು ಈಗಲೂ ಕೆಲವು ಸಲ ಪ್ರಯೋಗವಾಗುತ್ತೆ ) ಯಾರಾದರೂ ತಮ್ಮ ಪಾಲಿನ ಮಾತುಗಳನ್ನು ತಪ್ಪಿಸಿದರೆ ... ಸರಿ ಮಾಡುತ್ತಿದ್ದದ್ದು ಇದೇ ಸುಂದ್ರಿ... ಎಲ್ಲ ಪಾತ್ರಗಳ ಮಾತು ಗೊತ್ತು ...ತನ್ನ ಪಾತ್ರಕ್ಕೆ ಮಾತ್ರ ಮಾತೇ ಇಲ್ಲ...

ಹೆಣ್ಣಿನ ಪಾತ್ರ ಮಾಡಲು.. ಈ ಬ್ರಹ್ಮಚಾರಿಗಳ ತಂಡಕ್ಕೆ ಯಾರೂ ಬರುತ್ತಿರಲಿಲ್ಲವೋ ಏನೋ... ಹಾಗಾಗಿ ನಾವೇ ನಿಭಾಯಿಸುವುದು ಅನಿವಾರ್ಯವಾಗಿತ್ತು... ನಾನೊಂದು ಸಲ... ಭೀಮಸೇನ ದೇಶಪಾಂಡೆ ( ಹೆಸರು ಮಾತ್ರ ಭೀಮಸೇನ ...ಇದ್ದಿದ್ದು ನರಪೇತಲ)  ಹೆಣ್ಣಿನ ಪಾತ್ರ ಮಾಡಿದ್ದೆವು...

ನಾನಲ್ಲಿದ್ದ ನಾಲ್ಕು ವರ್ಷಗಳ ಕಾಲವೂ ಸತತವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು.. ನವಂಬರ್ ಕನ್ನಡಿಗನಾಗಿ ನನ್ನ ಪಾತ್ರ. ಸಾಕಷ್ಟು ವರ್ಷಗಳು ಈ ಕಾರ್ಯಕ್ರಮಗಳು ಮುಂದುವರಿದು... ಈಗ ಎಲ್ಲವೂ ಸ್ತಬ್ದ... ಎಂದು ಹೇಳಲು ಬಹಳ ದುಃಖವಾಗುತ್ತದೆ.... ಕಾರಣಾಂತರಗಳಿಂದ ಫ್ಯಾಕ್ಟರಿಯೇ ಮುಚ್ಚಿ.. ಎಲ್ಲ ಜನಗಳು ಅಲ್ಲಿಂದ ದೂರವಾದದ್ದು ನೋವಿನ ಸಂಗತಿ. ಏರಿಳಿತಗಳು ಜೀವನದ ಅವಿಭಾಜ್ಯ ಅಂಗಗಳು.... ಒಪ್ಪಲೇಬೇಕು.

ಕನ್ನಡಿಗರಾಗಿ ನಾವು ಕನಿಷ್ಠ ಏನು ಮಾಡಬಹುದು... ಎಂಬ ಯೋಚನೆ ನನಗೆ ಬಹಳ ಸಲ ಬಂದಿದ್ದಿದೆ... ಗೊಂದಲ ಆದದ್ದೂ ಇದೆ... ವೈಯುಕ್ತಿಕ ನೆಲೆಯಲ್ಲಿ ಕನ್ನಡದಲ್ಲಿ ಯೋಚಿಸಿ, ಕನ್ನಡದಲ್ಲಿ ಮಾತನಾಡಿ, ಮನೆಯಲ್ಲಿ ಮಕ್ಕಳಿಗೆ ಕನ್ನಡದ ವಾತಾವರಣ ಕಲ್ಪಿಸಿ... ಕನ್ನಡ ಪುಸ್ತಕ, ಪತ್ರಿಕೆಗಳನ್ನು ಕೊಂಡು ಓದಿ... ಕನ್ನಡ ನಾಟಕ, ಚಲನಚಿತ್ರಗಳನ್ನು ನೋಡಿ,  ಕನ್ನಡಕ್ಕಾಗಿ ಮಾಡುವ ಎಲ್ಲ ಕೆಲಸಗಳಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೈಜೋಡಿಸಿದರೆ.. ಅದುವೇ ನಾವು ಮಾಡುವ ಕನ್ನಡ ಸೇವೆ.... 

ಬೇರೆ ಭಾಷೆಗಳ ಎಷ್ಟೋ ಪದಗಳು ಕನ್ನಡ ಭಾಷೆಯಲ್ಲಿ ಮಿಳಿತವಾಗಿ, ಕನ್ನಡವೇ ಆಗಿದೆ.. ಇದು ಭಾಷೆ ವಿಸ್ತಾರ ಗೊಳ್ಳುವ ಪರಿ.

ಏನಾದರೂ ಮಾತೃಭಾಷೆಯ ಬಗ್ಗೆ ಪ್ರೇಮ, ಪ್ರೀತಿ ಹಾಗೂ ಬೇರೆ ಭಾಷೆಗಳ ಬಗ್ಗೆ ಗೌರವ ಇರಬೇಕು.  

ನವಂಬರ್ ನಲ್ಲಿ ಮಾಡುವ ವಿಜೃಂಭಣೆಯೂ ಇರಲಿ ,    ಜೊತೆಗೆ ಕನ್ನಡ ನಮ್ಮ ದಿನ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿರಲಿ, ಕನ್ನಡಿಗನಿಗೆ ಕನ್ನಡದ ಭಾಷೆ, ನೆಲ ಜಲದ ಬಗ್ಗೆ ಸಾತ್ವಿಕ ಅಭಿಮಾನ ಇರಲಿ ಎಂದು ಆಶಿಸುತ್ತಾ

ಕನ್ನಡಮ್ಮನಿಗೆ ಜೈಕಾರ ಹೇಳೋಣ..

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...





    

Comments

  1. ಕನ್ನಡವೆನಲು ನನಗೆ ಅಕ್ಕರೆ
    ಏಕೆಂದರೆ ಅದು ಕಲ್ಲು ಸಕ್ಕರೆ

    ಲೇಖನದಲ್ಲಿನ ಕನ್ನಡದ ಕಂಪು, ನೆನಪಿನ ಬುತ್ತಿ ನಮಗಾಗಿದೆ ರಸಪಾಕ. ಸವಿಯೋಣ.

    ಕನ್ನಡದ ಅಂದಿನ ಆರೋಹಣ ಹಾಗೂ ಇಂದಿನ ಅವರೋಹಣ ನಲಿವು-ನೋವಿನ ಅಂಶವಾಗಿದೆ.ಲೇಖನದಲ್ಲಿ ಸೂಚಿತವಾಗಿರುವುದನ್ನು ನೈಜವಾಗಿ ಪಾಲಿಸಿದರೆ ಸಾಕು. ಕನ್ನಡ ಉಳಿಯುತ್ತದೆ, ಬೆಳೆಯುತ್ತದೆ. ಅಳಿಯಲು ಬಿಡದಿರೋಣ.

    ನವೆಂಬರ್ ಮಾಹೆ ಮುಗಿದೊಡನೆ ಕನ್ನಡದ (ಪ್ರೇಮ) ಜ್ವರ ತಾನಾಗಿಯೇ ಇಳಿದುಹೋಗುತ್ತದೆ ಎಂಬುದನ್ನು ಸುಳ್ಳು ಮಾಡೋಣ. ಕನ್ನಡಕ್ಕೆ ಹೃದಯದಲ್ಲಿ ಸ್ಥಾನ ನೀಡಿದರೆ ಸಾಕು. ಆಚರಣೆ ಸುಲಭವಾಗುತ್ತದೆ.

    ಸಿರಿಗನ್ನಡಂ ಗೆಲ್ಗೆ
    ಸಿರಿಗನ್ನಡಂ ಬಾಳ್ಗೆ

    ಆದರಗಳೊಡನೆ,

    ಗುರುಪ್ರಸನ್ನ
    ಚಿಂತಾಮಣಿ

    ReplyDelete
  2. Jyoti Walishetti1 November 2023 at 09:30

    November kannada jwara

    ReplyDelete
  3. ಪ್ರೇಮಾ ಪ್ರೀತೀ ನನ್ನುಸಿರು....
    ಕನ್ನಡ ನಮ್ಮೆಲ್ಲರ ಉಸಿರು....
    ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ....
    ಜೈ ಕರ್ನಾಟಕ ಮಾತೆ 🙏
    ಜೈ ಭುವನೇಶ್ವರಿ ದೇವಿ 🙏

    ReplyDelete
  4. ಈ ಬರಹದಲ್ಲಿನ ಶಹಾಬಾದಿನ ನಿಮ್ಮೆಲ್ಲರ ಚೇಷ್ಟೆಗಳನ್ನು ನೋಡಿ ಆನಂದಿಸಿದ CVK ಮಗನ ಅಭಿನಂದನೆಗಳು...!!! 😜

    ReplyDelete
  5. M V Chandrashekhar1 November 2023 at 17:29

    Great Memories 👏👍 very sharp & emotional Memories pen down excellently on a day to remember. Congrats Sir 💐💐

    ReplyDelete
  6. Bhala chennagide chikkappa

    ReplyDelete
  7. ಲೇಖನ ಅತ್ಯುತ್ತಮ ವಾಗಿದೆ 💐👌🙏

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ