ಎಮ್ಮೆ ಹಾಲು- ಮೊದ್ದುರಂಗ
"ಎಮ್ಮೆ ಹಾಲು ಕುಡಿದು ಕುಡಿದು ರಂಗ ಮೊದ್ದಾಗ್ತಾನೆ" ಇದು ನನ್ನ ಕೆಲ ಸ್ನೇಹಿತರು ನನಗೆ ಛೇಡಿಸುತ್ತಿದ್ದ ರೀತಿ. ನಾನು ಪಾಠ ಹೇಳಿಕೊಡಲು ಹೋಗುತ್ತಿದ್ದ ಆ ಮನೆಯ ಅಜ್ಜಿ ಕೊಡುತ್ತಿದ್ದ ಎಮ್ಮೆಯ ಹಾಲನ್ನು ಕುಡಿಯುತ್ತಿದ್ದದ್ದು ಸತ್ಯ... ಆದರೆ ನನ್ನ ಬುದ್ಧಿ ಮೊದ್ದಾಗಿತ್ತಾ.... ಅದು ಅವರ ಅಭಿಪ್ರಾಯ.... ನನ್ನದು ಅದೇ ಆಗಿರಬೇಕಿಲ್ಲ ಅಲ್ಲವೇ?
ಪಾಠ ಹೇಳಿ ಕೊಡುವುದು ನನಗೆ ಚಿಕ್ಕಂದಿನಿಂದ ಬಂದ ಒಂದು ಹವ್ಯಾಸ... ನಾನು 5ನೇ ಕ್ಲಾಸಿನಲ್ಲಿ ಓದುತ್ತಿದ್ದಾಗಿನಿಂದ ನನ್ನ ಜೊತೆಯವರಿಗೆ / ನನಗಿಂತ ಚಿಕ್ಕವರಿಗೆ ಪಾಠ ಹೇಳಿ ಕೊಡುತ್ತಿದ್ದೆ.... ಅಂಥವರಲ್ಲಿ ನನ್ನೂರ ರಾಮದಾಸನೂ ಒಬ್ಬ. ಒಂದು ದಿನ ರಾಮದಾಸ ಕೈಯಲ್ಲಿ ಏನೋ ತೋರಿಸುತ್ತಾ ರಂಗಣ್ಣಾ.. ರಂಗಣ್ಣಾ.. ಎಂದು ಕೂಗಿದ... ಹತ್ತಿರ ಬಂದಾಗ ಅವನ ಕೈಯಲ್ಲಿ ಕಂಡದ್ದು ನಾಲ್ಕಾಣೆಯ ನಾಣ್ಯ. ಅದನ್ನು ನನಗೆ ಕೊಟ್ಟು... "ನಮ್ಮಮ್ಮ ಕೊಟ್ಟಳು... ನಿನಗೆ.... ಪಾಠ ಹೇಳಿ ಕೊಟ್ಟಿದ್ದಕ್ಕೆ..." ಅಂದ.... ನನಗೂ ಖುಷಿ... ತಂದು ನಮ್ಮಮ್ಮನಿಗೆ ಹೆಮ್ಮೆಯಿಂದ ತೋರಿಸಿ ಹೇಳಿದೆ.... ನಮ್ಮಮ್ಮನ ತಕ್ಷಣದ ಪ್ರತಿಕ್ರಿಯೆ.." ನಾಲ್ಕಕ್ಷರ ಹೇಳಿಕೊಟ್ಟು.. ದುಡ್ಡು ಇಸ್ಕೊಂಡ್ಯಾ... ರಂಗಪ್ಪಾ....." .. ಅಲ್ಲಿ ಅಸಮ್ಮತಿಯಿತ್ತು... ನಂತರ ತಿಳಿ ಹೇಳಿದ್ದು.... ನಾನು ಅರ್ಥ ಮಾಡಿಕೊಂಡಿದ್ದು....ಪಾಠ ಹೇಳಿಕೊಟ್ಟು ದುಡ್ಡು ತಗೋಬಾರದು ಅಂತ. ಅಂದಿನಿಂದ ಇದುವರೆಗೂ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ.
ಜೀವನದ ಒಂದು ಹಂತದಲ್ಲಿ..... ಸ್ವಲ್ಪ ಭಿನ್ನವಾಗಿ ಯೋಚಿಸಿದ್ದು ಉಂಟು... ನನಗಾಗ ಹಾಸನದಲ್ಲಿ ಇಂಜಿನಿಯರಿಂಗ್ ಸೀಟ್ ಸಿಕ್ಕಿತ್ತು.... ಮನೆಯ ಪರಿಸ್ಥಿತಿಯಲ್ಲಿ ನನ್ನನ್ನು ಅಲ್ಲಿ ಕಳಿಸಲು ಸಾಧ್ಯವಾಗುವುದಿಲ್ಲ ಎಂದು ನಿರ್ಧಾರವಾಯಿತು... ನನಗೆ ನಿರಾಶೆ...... ಬೆಂಗಳೂರಿನಲ್ಲೇ ಎಸ್ ಜೆ ಪಾಲಿಟೆಕ್ನಿಕ್ ಗೆ ಸೇರಿದ್ದಾಯಿತು.... ಒಮ್ಮೆ ಅಮ್ಮನ ಬಳಿ ಮಾತಾಡುತ್ತಾ... ನಾನು ಒಂದಷ್ಟು ಜನಕ್ಕೆ ಪಾಠ ಹೇಳಿಕೊಟ್ಟು ಹಾಸನದಲ್ಲಿ ಓದಬಹುದಿತ್ತಲ್ಲವಾ ..ಎಂದು ಹೇಳಿದಾಗ ಅಮ್ಮ ಹೇಳಿದ್ದು.... ನಿನಗೆ ಛಾತಿ ಇರಬಹುದು... ಪ್ರಾಪ್ತಿಯೂ ಇರಬೇಕು ಮಗನೇ... ನಿನ್ನಲ್ಲಿ ಒಂದು ರೂಪಾಯಿ ಇದ್ದರೆ... ನೂರು ರೂಪಾಯಿ ಯಷ್ಟು ವ್ಯವಹಾರ ಮಾಡುವ ಛಾತಿ ಇರಬಹುದು.. ಆದರೆ ನಿನಗೆ ಪ್ರಾಪ್ತಿ 50 ಇದ್ದರೆ.. ನಿನಗೆ ಒಂದು ರೂಪಾಯಿ ಸಿಗುವುದಿಲ್ಲ... ಅರ್ಧ ಮಾತ್ರ... ಅದೇ ಪ್ರಾಪ್ತಿ... ಬೊಗಸೆ ತುಂಬಾ ತೆಗೆದುಕೊಂಡದ್ದೆಲ್ಲಾ ನಮ್ಮದಾಗುವುದಿಲ್ಲ.... ಕೆಳಗೆ ಬಿದ್ದದ್ದನ್ನು ಕೃಷ್ಣಾರ್ಪಣಮಸ್ತು ಎಂದು ನಂಬಿ, ತೃಪ್ತಿ ಪಡೆದರೆ ನೆಮ್ಮದಿ, ಇಲ್ಲದಿರೆ ನೋವು.... ಜಾಣನಾಗು...
ಓದು ಮುಂದುವರಿಸಲು ಬಡತನದಲ್ಲಿದ್ದ ಎಷ್ಟೋ ಮಂದಿ ಭಿಕ್ಷಾನ್ನ , ವಾರಾನ್ನ ಮಾಡಿಕೊಂಡು ಓದನ್ನು ಮುಂದುವರಿಸಿದ್ದನ್ನು ಕಂಡಿದ್ದೇನೆ , ಕೇಳಿದ್ದೇನೆ ಸಹ... ನನ್ನ ದೊಡ್ಡ ಮಾವ ಶ್ರೀ ಹೆಚ್ ಪಿ ನರಸಿಂಹಮೂರ್ತಿಯವರು ಸಾಕಷ್ಟು ಸಲ ಹೇಳಿದ ಅವರ ಅನುಭವ ಕಥನದ ಸಂಕ್ಷಿಪ್ತ ಉಲ್ಲೇಖ....
ಸಾಮಾನ್ಯವಾಗಿ ಅವರು ವಾರಾನ್ನಕ್ಕೆ ಆ ಮನೆಗೆ ಊಟಕ್ಕೆ ಹೋಗುತ್ತಿದ್ದದ್ದು ಮಧ್ಯಾಹ್ನ ಒಂದು ಗಂಟೆಗೆ.... ಒಂದು ದಿನ ಯಾವುದೋ ಚಲನಚಿತ್ರವನ್ನು ನೋಡಲು ಹೋಗಿ ಬರಲು ತಡವಾಗಿದೆ... ಮನೆಯ ಯಜಮಾನರು... ಬೈದು ಹೇಳಿದ್ದು "ಸರಿಯಾದ ಸಮಯಕ್ಕೆ ಬಂದರೆ ಮಾತ್ರ ಬಾ.... ನೋಡು ಆ ವಯಸ್ಸಾದ ಹೆಂಗಸು ಊಟವೂ ಮಾಡದೇ ನಿನಗಾಗಿ ಕಾದು ಕೂತಿದ್ದಾಳೆ... ಜವಾಬ್ದಾರಿ ಬೇಡವೇ.."
ಆ ಮಹಾತಾಯಿಯನ್ನು ನೋಡಿದೆ ಸುಸ್ತಾಗಿ, ತಲೆ ಕೆಳಗೆ ಮಣೆಯನ್ನಿಟ್ಟು ಮಲಗಿದ್ದರು... ಹಣೆಯಲ್ಲಿಟ್ಟಿದ್ದ ಕುಂಕುಮ... ಶೆಖೆಗೆ ಸಲ್ಪ ಸೋರಿತ್ತು.... ಅವರ ಬಳಿ ಕ್ಷಮೆ ಯಾಚಿಸಿದೆ.... ಅವರು ನನಗೆ ಸಮಾಧಾನ ಮಾಡಿ "ಬಾ ಮಗು ಊಟ ಮಾಡು... ಇನ್ಮೇಲೆ ತಡ ಮಾಡಬೇಡ... ನನಗೂ ಕಾಯೋದು ಕಷ್ಟ... ಅದನ್ನು ನೋಡಿದರೆ ಯಜಮಾನ್ರಿಗೆ ಕೋಪ.... ಯಾಕೆ ಹೀಗೆ ಮಾಡಿ ಒಂದು ಮನೇನ ಕಳ್ಕೊಳ್ತೀಯಾ".... ಇದು ಅವರ ಮಾತುಗಳು. ಹಿಂದಿನವರ ಬಾಂಧವ್ಯ... ಕಷ್ಟದಲ್ಲಿರುವ ಮಕ್ಕಳಿಗಾಗಿ ಮರುಗುವ ಮನಸ್ಸು.. ಎಷ್ಟು ಜನಕ್ಕೆ ಜೀವನದ ದಾರಿಯಲ್ಲಿ.. ನೆಮ್ಮದಿ ಹಾಗೂ ಹೊಟ್ಟೆ ತುಂಬಾ ಊಟ ಕೊಟ್ಟಿದೆಯೋ....
ಈಗ ನಮ್ಮ ಶೀರ್ಷಿಕೆ ವಿಷಯಕ್ಕೆ ವಾಪಸ್ ಬರ್ತೀನಿ... ನಾನು ಆ ದಿನಗಳಲ್ಲಿ Bangalore Institute of Engineering ನಲ್ಲಿ... ಮೇಷ್ಟ್ರು.... ಬೆಳಿಗ್ಗೆ ಕ್ಲಾಸು 12 ಗಂಟೆಗೆ ಮುಗಿಯೋದು... ಸಾಮಾನ್ಯವಾಗಿ ಮಧ್ಯಾಹ್ನವೆಲ್ಲ ಆರಾಮ... ಆಗೆಲ್ಲ ಸಂಜೆ ನಾಗಸಂದ್ರ ಸರ್ಕಲ್ ಬಳಿಯಿದ್ದ... ನನ್ನ ಫ್ರೆಂಡ್ ಶಿವಶಂಕರನ ದೊಡ್ಡಮ್ಮನ ಮನೆಯ ಹತ್ತಿರ ನಮ್ಮ ಅಡ್ಡ. ಆ ಮನೆಯ ವಿಶಾಲು (ಈಗ ನಮ್ಮ ಜೊತೆಯಲ್ಲಿಲ್ಲ....) ತುಂಬಾ ಅಭಿಮಾನದ ಹುಡುಗಿ. ಮುಗ್ಧೆ ಸಹ... ಅವರ ಎದುರು ಮನೆಯಲ್ಲಿ ಒಂದು ಹುಡುಗಿಗೆ ಲೆಕ್ಕ ಹೇಳಿಕೊಡುವವರು ಬೇಕಾಗಿದ್ದಾರೆ.... ನಮ್ಮ ವಿಶಾಲು... ನನಗೆ ತಿಳಿಯದೆಯೇ ಅವರಿಗೆ ಆಶ್ವಾಸನೆ ಕೊಟ್ಟಿದ್ದಾಳೆ... ನಮ್ಮ ರಂಗ ಪಾಠ ಹೇಳಿಕೊಡುತ್ತಾನೆ ಎಂದು. ನನಗ್ಯಾಕೋ ಅಷ್ಟು ಇಷ್ಟ ಆಗಲಿಲ್ಲ... ಆದರೆ ವಿಶಾಲು ತನ್ನ ಗೌರವದ ಪ್ರಶ್ನೆಯನ್ನು ನನ್ನ ಮುಂದೆ ಇಟ್ಟು.. ಬಲವಂತವಾಗಿ ನನ್ನನ್ನು ಒಪ್ಪಿಸಿದಳು..... ಹಾಗಾಗಿ ನಾನು ದಿನ ಲೆಕ್ಕ ಹೇಳಿಕೊಡುವ ಕಾಯಕವನ್ನು ನಡೆಸಲೇ ಬೇಕಾಗಿತ್ತು.... ನನಗದು ಇಷ್ಟವೂ ಸಹ... ಸ್ವಲ್ಪ ಮುಜುಗರ, ಕಾರಣ ಬೇರೆಯವರ ಮನೆಗೆ ಹೋಗಿ ಪಾಠ ಹೇಳುವುದು ನನಗೆ ಹೊಸದು.... ನಾನು ಅದಕ್ಕೆ ಹಣ ತೆಗೆದುಕೊಳ್ಳುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದೆ... ಅವರು ಒಂದು ಲೋಟ ಹಾಲಾದರೂ ಕುಡಿಯಬೇಕೆಂದು.... ಮತ್ತದೇ ವಿಶಾಲು ಕಡೆಯಿಂದ ಹೇಳಿಸಿ ಒಪ್ಪಿಸಿದರು. ಹಾಗಾಗಿ ಆ ಮನೆಯ ಅಜ್ಜಿ ಆಗ್ರಹಪೂರ್ವಕ ಪ್ರೀತಿಯಿಂದ ಕೊಡುತ್ತಿದ್ದ ಒಂದು ಲೋಟ ಹಾಲನ್ನು ಕುಡಿಯುತ್ತಿದ್ದೆ. ಅವರು ಮನೆಯ ಮುಂದೆ ಎಮ್ಮೆ ಹಾಲನ್ನು ಕರೆಸಿಕೊಳ್ಳುತ್ತಿದ್ದರಿಂದ... ಅದು ಎಲ್ಲರಿಗೂ ತಿಳಿದಿತ್ತು..... ಹುಡುಗಿ ಪಾಸಾಗ್ತಾಳೆ ಆದರೆ ಅಷ್ಟರಲ್ಲಿ ರಂಗ ಎಮ್ಮೆಹಾಲು ಕುಡಿದು ಕುಡಿದು ಮೊದ್ದು ಆಗೋಗ್ತಾನೆ... ಅಂತ ರೇಗಿಸುವುದು ನಡೀತಾ ಇತ್ತು... ಕಾಕತಾಳಿಯವಾಗಿ ಆ ಸಮಯಕ್ಕೆ To sir with love ಅನ್ನುವ ಇಂಗ್ಲೀಷ್ ಚಿತ್ರ ಬಿಡುಗಡೆಯಾಗಿತ್ತು. ಹುಡುಗರೆಲ್ಲ ನನ್ನ ಹತ್ತಿರ ಬಂದು ಟು ಸರ್ ವಿತ್ ಲವ್ ಅಂತ ಹೂ ಕೊಟ್ಟ ಹಾಗೆ ನಾಟಕ ಮಾಡುವುದು, ಕಾಲೆಳೆಯುವುದು ನಡೆಯುತ್ತಿತ್ತು. ಒಂದು ಮಧುರ ನೆನಪು.
ಹಳ್ಳಿಯಲ್ಲಿ, ಗೋಪಾಲಕೃಷ್ಣಯ್ಯ ಅನ್ನುವ ಒಬ್ಬ ರಿಟೈರ್ಡ್ ಮೇಷ್ಟ್ರು ಇದ್ದರು... ಅವರು ನನ್ನ ಸ್ನೇಹಿತರಾದ ಅಣ್ಣ ತಮ್ಮಂದಿರು ಮೂರ್ತಿ ಮತ್ತು ಮುಕುಂದನಿಗೆ, ಪ್ರತಿದಿನ ಸಂಜೆ ಪಾಠ ಹೇಳಿಕೊಡುತ್ತಿದ್ದರು.... ಆ ಕಾಲಕ್ಕೆ ಅವರು ಮನೆ ಪಾಠ ಹೇಳಿಸುವಷ್ಟು ಉಳ್ಳವರು. ಅಮರಕೋಶದ ಪಠಣ ನಿತ್ಯವೂ ಇರುತ್ತಿತ್ತು.... ನಾನು ಕೆಲ ಸಲ ಅವರ ಮನೆಯ ಹೊರಗೆ ಕುಳಿತು ಕೇಳಿಸಿಕೊಳ್ಳುತ್ತಿದ್ದೆ, ತಕ್ಕಮಟ್ಟಿಗೆ ಕಲಿಯುತ್ತಿದ್ದೆ ಸಹ. ತಮಾಷೆಯಾಗಿ ಅಮರವನ್ನು ... ಯಸ್ಯಜ್ಞಾನ ದಯಾಸಿಂಧೋ.... ಮೊದಲ ಭಾಗದ ಜೊತೆಗೆ ಗೋಡೆ ಬಿದ್ರೆ ಅಲ್ಲೇ ಸಂದೋ.... ಹಾಗೇ .. ಅಮರ ನಿರ್ಜರಾದೇವಾ... ಸಾಲನ್ನು ಅಮರ ನಿನಗೆ ಜ್ವರ ಬರ ನನಗೆ ರಜ ಬರ ಎಂದು ಹೇಳಿ ಬೈಸಿಕೊಂಡದ್ದು ಇದೆ.
ಯೋಗಾ ಯೋಗವೇನೋ ನಾನು ಬೇರೆಯ ಊರಿನಲ್ಲಿದ್ದಾಗ ಸಹ, ಅಲ್ಲಿಯ ಮಕ್ಕಳಿಗೆ ಪಾಠ ಹೇಳಿದ್ದೇನೆ.... ಮದ್ರಾಸಿನಲ್ಲಿ ಸುಮಾರು ಎಂಟು ತಿಂಗಳ ಕಾಲ ರೈಲ್ವೆ ಕಾರ್ಖಾನೆಯಲ್ಲಿ ಅಪ್ರೆಂಟಿಸ್ ಟ್ರೈನಿಂಗ್ ಮಾಡುತ್ತಿದ್ದೆ... ನಮ್ಮ ಇನ್ ಚಾರ್ಜ್ ಅಲ್ಲಿಯ ಫೋರ್ಮನ್, ಒಬ್ಬ ಆಂಗ್ಲೋ ಇಂಡಿಯನ್, ಹೆಸರು ಫೆರೀರೋ... ಹೇಗೋ ನನ್ನನ್ನು ಗುರುತಿಸಿ ಅವರ ಅವಳೀ ಹೆಣ್ಣು ಮಕ್ಕಳಿಗೆ ಹಿಂದಿ ಪಾಠ ಮಾಡಲು ಗೊತ್ತುಪಡಿಸಿದ್ದರು... ಊಟಕ್ಕೆ ಹೋಗುವಾಗ ಅವರ ಮನೆಯ ಮುಂದೆಯೇ ಹೋಗಬೇಕಿತ್ತು.. ಹಾಗಾಗಿ ಸ್ವಲ್ಪ ಮುಂಚೆ ಹೊರಟು ಅವರ ಮನೆಗೆ ಹೋಗುತ್ತಿದ್ದೆ... ನನ್ನನ್ನು ನೋಡಿದ ತಕ್ಷಣ ಅವರು ಹೇಳುತ್ತಿದ್ದದ್ದು... ಗಿಗ್ಗಿ ಪಿಗ್ಗಿ your tution master has come.....
ಇನ್ನು ನಾನು ಶಹಾಬಾದಲ್ಲಿದ್ದಾಗಲೂ ಸಹ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದೇನೆ... ಜೀವನದ ಬಹುತೇಕ ಘಟ್ಟಗಳಲ್ಲಿ ಈ ಕಾಯಕವನ್ನು ಪ್ರೀತಿಯಿಂದ ಮಾಡಿದ ಹೆಮ್ಮೆ ಇದೆ.
ತುಂಬಾ ಮೆಚ್ಚುಗೆಯಿಂದ ಪಾಠ ಹೇಳಿಕೊಟ್ಟಿದ್ದು ಮುರಳಿ ಮಾಧವನಿಗೆ ( ಒಂದು ರೀತಿಯಲ್ಲಿ ಗುರು ಸ್ಥಾನದಲ್ಲಿದ್ದವ....ನಮ್ಮ ಮನೆಯಲ್ಲಿ ವ್ರತಗಳನ್ನು ಹಾಗೂ ನಮ್ಮ ಫ್ಯಾಕ್ಟರಿಯಲ್ಲಿ ದಸರಾ ಪೂಜೆ ಯನ್ನು ಮಾಡಿಸುತ್ತಿದ್ದವ) ಈ ಮುರಳಿಯ ವಿಶೇಷತೆ.... ನನ್ನ ಬಳಿ ಬಂದು ಲೆಕ್ಕ ಹೇಳಿಸಿಕೊಂಡು, ಅದನ್ನು ಮತ್ತೊಬ್ಬ ತನ್ನ ಶಿಷ್ಯನಿಗೆ ಹೇಳಿಕೊಡುತ್ತಿದ್ದದ್ದು.... ಮುಂದಿನ ಹರಿವು...
ಇನ್ನೊಂದು ಸಂಗತಿ...Bangalore Institute of Engineering ನಲ್ಲಿ ಕೆಲಸ ಮಾಡುತ್ತಿದ್ದಾಗ.... ಅಲ್ಲೇ ನಡೆಯುತ್ತಿದ್ದ AMIE classes ಗೆ.... ಅಲ್ಲಿನ ಪ್ರಿನ್ಸಿಪಾಲ್ ಶ್ರೀ. ಎನ್. ವೆಂಕೋಬರಾಯರ mathematics ಕ್ಲಾಸ್ ಗೆ ಹೋಗುತ್ತಿದ್ದೆ. ಅಲ್ಲಿಯೇ ವೈಸ್ ಪ್ರಿನ್ಸಿಪಾಲ್ ಆಗಿದ್ದವರು ಶ್ರೀ. ಆರ್. ಗೋಪಾಲಾಚಾರ್ ಅವರು ( ಇವರ ಮಗ ಶ್ರೀ R G ಪ್ರಹ್ಲಾದ್, ಶಹಾಬಾದ್ ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು). ಇವರಿಬ್ಬರ ಒತ್ತಾಸೆಯಿಂದ.. ನಾನುAMIE classes ಗೆ Engineering drawing ಪಾಠ ಮಾಡುವ ಅವಕಾಶ ಒದಗಿತು. ನನ್ನ ಜೊತೆಯಲ್ಲಿ ಕೂತು mathematics ಕಲಿಯುತ್ತಿದ್ದ ಸಹಪಾಠಿಗಳಿಗೆ.. ಶನಿವಾರದ ದಿನ ನಾನು ಪಾಠ ಮಾಡುತ್ತಿದ್ದೆ... ನನ್ನ ಜೀವನದ ಒಂದು ಒಳ್ಳೆಯ ಅವಕಾಶ.
ಜೀವನ ಯಾನದಲ್ಲಿ, ಪ್ರಸನ್ನ ಆಪ್ತ ಸಲಹಾ ಕೇಂದ್ರದಲ್ಲಿ counselling training ಗೆ, ನನ್ನ ಸ್ನೇಹಿತ ಆನಂದ್ ಜೊತೆಗೆ ಸೇರಿಕೊಂಡು.... ಅಲ್ಲೇ ಕೌನ್ಸಲಿಂಗ್ ಮಾಡುತ್ತಾ... ಪಂಕಜ ಮೇಡಂ ಮತ್ತು ಡಾಕ್ಟರ್ ಸಿ ಆರ್ ಚಂದ್ರಶೇಖರ್ ಅವರ ಪ್ರೋತ್ಸಾಹದಿಂದ ಅಲ್ಲಿಯ ಟ್ರೈನಿಂಗ್ ಪ್ರೋಗ್ರಾಮ್ ನಲ್ಲಿ ಕೌನ್ಸಲಿಂಗ್ ಬಗ್ಗೆ ಮಾತನಾಡುವ ಅವಕಾಶ ನಮ್ಮಿಬ್ಬರಿಗೂ ಸಿಕ್ಕಿದ್ದು ಒಂದು ಮಜಲು.... ಮುಂದುವರಿದ ಭಾಗವಾಗಿ ಡಾಕ್ಟರ್ ಸಿ ಆರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೌನ್ಸಲಿಂಗ್ ಟ್ರೈನಿಂಗ್ ಕಾರ್ಯಕ್ರಮಗಳು ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಇತರ ಭಾಗಗಳಲ್ಲಿ ನಡೆದಾಗ ನಾವಿಬ್ಬರೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದು ನನಗಂತೂ ತುಂಬಾ ಸಂತೋಷ ಕೊಡುವ ವಿಚಾರ...
ಹೀಗೆ ಬೆನ್ನು ತಟ್ಟಿ ನನ್ನನ್ನು ಪ್ಪ್ರೋತ್ಸಾಹಿಸಿದ ಎಲ್ಲ ಹಿರಿಯ ಜೀವಗಳಿಗೆ ನಾನು ಋಣಿ... "ಎಂದರೋ ಮಹಾನುಭಾವುಲು ಅಂದರೀಕಿ ವಂದನಮು" ಬಹು ಸೂಕ್ತ.
ಕೊನೆಯದಾಗಿ... ನನ್ನದೊಂದು ಆಸೆ... ಪ್ರಾಥಮಿಕ ಶಾಲೆಯ, ಅದರಲ್ಲೂ ಸರ್ಕಾರಿ ಶಾಲೆಯ ಮಕ್ಕಳಿಗೆ, ಗಣಿತವನ್ನು ಆಟ ಆಡುತ್ತಾ ಕಲಿಯಲು ಸೂಕ್ತವಾದ, ಜೊತೆಗೆ ಸುಲಭವಾಗಿ ಮತ್ತೆ ಮತ್ತೆ ಲೆಕ್ಕಗಳನ್ನು ಮಾಡಿಸಲು ಅನುಕೂಲ ವಾಗುವಂತಹ computer program ಮಾಡಬೇಕು. ಅದು ಸಂಪೂರ್ಣವಾಗಿ ಉಚಿತವಾಗಿರಬೇಕು ಎಂದು... ಈ ನಿಟ್ಟಿನಲ್ಲಿ ಮೂರನೇ ತರಗತಿಯಿಂದ ಶುರುವಾಗಿ ಐದನೆಯ ತರಗತಿಯ ವರೆಗೆ ಅನುಕೂಲವಾಗುವ ಹಾಗೆ ಪಾಠಗಳನ್ನು ರಚಿಸಿದ್ದೇನೆ... ಸುಂಕೇನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಜೊತೆಯಲ್ಲಿ ಈ ಎಲ್ಲ ಪಾಠಗಳನ್ನು ಹಂಚಿಕೊಂಡಿದ್ದೇನೆ... ಮಕ್ಕಳು ಉತ್ಸುಕರಾಗಿ ಭಾಗವಹಿಸಿದರೆಂದು ನನ್ನ ಅನಿಸಿಕೆ. ಕಾಯಕ ಮುಂದುವರೆದಿದೆ.....ಸಾಗುತ್ತಿದೆ....
ಈ ಕೆಲಸದಲ್ಲಿ... ನನ್ನ ಕೈಜೋಡಿಸಲು ನಿಮ್ಮಲ್ಲಿ ಯಾರಿಗಾದರೂ ಇಚ್ಛೆ ಇದ್ದರೆ , ದಯವಿಟ್ಟು ನನ್ನ ಜೊತೆ ಮಾತಾಡುತ್ತೀರಾ? ನನ್ನ ಫೋನ್ ನಂಬರ್.. 9741128413.
ನಮಸ್ಕಾರ
ನಿಮ್ಮ ಕಲಿಸುವ ಹಂಬಲ ಬಹಳ ಒಳ್ಳೆಯ ಕಾಯಕ..ಇದರಿಂದ ಬಹುತೇಕ ರಿಗೆ ಸಹಾಯಕವಾಗಿದೆ ಎಂಬುದರ ಬಗ್ಗೆ ಅನುಮಾನವೇನಿಲ್ಲ..ದಯಮಾಡಿ ಮುಂದುವರಿಸಿ..ಧನ್ಯವಾದಗಳು ಮತ್ತು ಶುಭಾಶಯ ಗಳು.
ReplyDeleteಶ್ರೀ ಗುರುಭ್ಯೋ ನಮಃ
ReplyDeleteನಿಮ್ಮ ಬರವಣಿಗೆ ಮತ್ತೆ ಕನ್ನಡ ಭಾಷೆಯ ಮೇಲಿನ ಹಿಡಿತ ಅದ್ಭುತ. ಹಾಗೆ, ನಮ್ಮ ಊರಿನವರು ಎಂಬುದು ಮತ್ತಷ್ಟು ಹೆಮ್ಮೆ. ದೊಡ್ಡಜಾಲದ ನಿಮ್ಮ ಎಲ್ಲಾ ಸ್ನೇಹಿತರ ಹೆಸರು ಮತ್ತೆ ಸಂದರ್ಭದ ಉಲ್ಲೇಖ, ಅದರಲ್ಲೂ, ರಾಮ ದಾಸ ನನ್ನ ಅಣ್ಣಾ ಮುಕುಂದ, ಮೂರ್ತಿಬಾಲ್ಯದ ಬಗ್ಗೆ ನನಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ಹೀಗೆ ನಿಮ್ಮ ನೆನಪಿನ ಯಾನ ಹೀಗೆ ಮುಂದುವರಿಯಲಿ.🙏🏼🙏🏼.
ReplyDeleteಎಂದಿನಂತೆ ಮನೆ ಪಾಠ, ವಾರಾನ್ನ, ಹಣದ ವ್ಯಾಪ್ತಿ-ಪ್ರಾಪ್ತಿ, ಬಡಮಕ್ಕಳಿಗೆ ಗಣಕಯಂತ್ರದ ಉಚಿತ ಪಾಠ ಈ ರೀತಿ ಹಲವಾರು ಆಯಾಮಗಳಲ್ಲಿ ವೀಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೀರಾ.
ReplyDeleteಎಮ್ಮೆ ಹಾಲು ಕುಡಿದರೆ *ನಿಮ್ಮ್ಮಂತೆ* ಆಗುವ ಆಗಿದ್ದರೆ ನಾನು ಕುಡಿಯುತ್ತಿದ್ದೆನಲ್ಲಾ!
ಅಂದಹಾಗೆ ನಾನು ಸಹಾ ಪಿಯುಸಿ ಓದುವಾಗಿನಿಂದ ಸುಮಾರು ಹತ್ತು ವರ್ಷ ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದೀನಿ ಹಾಗೂ ಈ ಸಣ್ಣ ಆದಾಯದಿಂದಲೇ ನನ್ನ ವಿದ್ಯಾಭ್ಯಾಸ, ಇತರ ಸಣ್ಣಪುಟ್ಟ ಖರ್ಚುಗಳನ್ನು ನಿಭಾಯಿಸಿದ್ದೇನೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡಲು ಙಾನಕ್ಕಿಂತ ತಾಳ್ಮೆ, ಸಮಾಧಾನ ಅತ್ಯಂತ ಮುಖ್ಯ ಎಂಬುದು ನನ್ನ ಅನುಭವ.
ನಿಮ್ಮ ಬರಹ, ಒಳ್ಳೆಯ ಕೆಲಸಗಳಿಗೆ ಶುಭವಾಗಲಿ ಎಂಬ ಹಾರೈಕೆಯೊಂದಿಗೆ.
ಗುರುಪ್ರಸನ್ನ,
ಚಿಂತಾಮಣಿ