ಜೀವನ ಕಲಿಸಿದ ವ್ಯವಹಾರದ ಪಾಠಗಳು

ದಸರಾ...ದೇಶಕ್ಕೆ... ಅದರಲ್ಲೂ ಕನ್ನಡ ನಾಡಿಗೆ ವಿಶೇಷ ಹಬ್ಬ.. ನಾಡ ಹಬ್ಬ ಸಹ. ಇದರ ಒಂದು ವಿಶೇಷ ಭಾಗ ಆಯುಧ ಪೂಜೆ... ನಾವು ಚಿಕ್ಕ ಕಾರ್ಖಾನೆಯನ್ನು ನಡೆಸುತ್ತಿದ್ದಷ್ಟು ದಿನವೂ ಆಯುಧ ಪೂಜೆಯನ್ನು ಆಚರಿಸಿದ್ದಿದೆ.... ಶುರುವಿನ ದಿನಗಳಲ್ಲಿ, ಹಣಕ್ಕಾಗಿ ಕಷ್ಟವಿದ್ದಾಗ ಪೂಜೆಯನ್ನು ಬಿಡದೆ ಕ್ಲುಪ್ತವಾಗಿ ಮಾಡಿ ಮುಗಿಸುತ್ತಿದ್ದೆವು.

ಹಣಕ್ಕೆ ಪರದಾಡದೆ ಆಯುಧ ಪೂಜೆಯನ್ನು ಮಾಡುವ ಹಂತ ತಲುಪಲು ಸವೆಸಿದ ದಾರಿ ಬಹುದೀರ್ಘ, ಕಠಿಣ ಹಾಗೂ ಸವಾಲಿಂದ ಕೂಡಿತ್ತು. ಆ ಕಲಿಕೆ ಸುದೀರ್ಘವೂ ಮತ್ತು ದುಬಾರಿ ಖರ್ಚಿನದೂ ಆಗಿತ್ತು.

 ಈ ಹಂತದಲ್ಲಿ ಆಯುಧ ಪೂಜೆ ನಿಜಕ್ಕೂ ಒಂದು ಸಂಭ್ರಮ.... ಎಲ್ಲ ಕೆಲಸಗಾರರಿಗೂ ಬಟ್ಟೆ, ಬೋನಸ್, (ಹಣ್ಣುಗಳು, ಸಿಹಿ ಹಾಗೂ ಹಣದ ಕವರನ್ನು ನಮ್ಮ ಕೆಲಸದವರಿಗೆ ಕೊಡುತ್ತಿದ್ದದ್ದು ನಮ್ಮಪ್ಪ- ಅವರಿರುವವರೆಗೂ) ಹಾಗೂ ಪೂಜೆಯ ದಿನ  ಬಂದ ಇಷ್ಟರು ಹಾಗೂ ಸ್ನೇಹಿತರು ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುವುದು. ಇದೊಂದು ಸಂಪ್ರದಾಯದಂತೆ ಸುಮಾರು 30 ವರ್ಷಗಳ ಕಾಲ ಸತತವಾಗಿ ನಡೆಯಿತು.

70ರ ದಶಕದಲ್ಲಿ ಸಣ್ಣ ಕೈಗಾರಿಕೆಗಳ ಪ್ರಾರಂಭಕ್ಕೆ ಸರ್ಕಾರ, ಬ್ಯಾಂಕುಗಳಿಂದ ತುಂಬಾ ಪ್ರೋತ್ಸಾಹವಿತ್ತು. ಸಾಲಗಳನ್ನು ಸುಲಭವಾಗಿ ಕೊಡುತ್ತಾರೆ ಎನ್ನುವ ಒಂದು ಕಾರಣವೇ ಸಾಕಾಗಿತ್ತು... ನನ್ನ ಮನಸ್ಸಿಗೆ ಸಣ್ಣ ಕೈಗಾರಿಕೆ ಶುರು ಮಾಡಲು ಸಿಕ್ಕಿದ ಪ್ರೋತ್ಸಾಹ.

ಆಗ ನನ್ನಲ್ಲಿ ಇದ್ದದ್ದು ಏನು ಬೇಕಾದರೂ ಸಾಧಿಸಬಲ್ಲೆ ಎಂಬ ಹುಮ್ಮಸ್ಸು... ಇದಕ್ಕೆ ಒಂದು ಕಾರಣವೂ ಇತ್ತು... ನಾನು ಶಹಬಾದ್ ಬಿಟ್ಟು.. ಬೆಂಗಳೂರಿನ Mantons  Bangalore private Limited, ನಲ್ಲಿ ನನ್ನ 26ನೆಯ ವಯಸ್ಸಿನಲ್ಲಿ ಡಿಸೈನ್ ಆಫೀಸ್ ನ incharge ಆಗಿ ಆಯ್ಕೆಯಾಗಿದ್ದು... ಅದು ಸಹ ನನ್ನಲ್ಲಿದ್ದ technical competance ಗಾಗಿ ಎಂದು ಅಲ್ಲಿನ ಡೈರೆಕ್ಟರ್ ಆದ ಎಂ ಜಿ ದಾಮೋದರ್ ಅವರು ನನಗೆ ಹೇಳಿದ್ದು.... ಜೊತೆಗೆ ಬಿಸಿನೆಸ್ ಮ್ಯಾನೇಜ್ಮೆಂಟ್ ಒಂದು ಸಬ್ಜೆಕ್ಟ್ ಸಹ ಓದಿದ್ದೆ (ಪುಸ್ತಕ ಓದಿ ಈಜು ಕಲಿತಂತೆ) ಹಾಗಾಗಿ ನಾನೊಬ್ಬ ತುಂಬಾ ಜಾಣ ಎಂಬುವ ಹಮ್ಮಿತ್ತು( ಈ ನೀರ ಗುಳ್ಳೆ ಬಹುಬೇಗ ಒಡೆಯಿತು... ನಾವು ನಮ್ಮ ಕೈಗಾರಿಕೆ ಪ್ರಾರಂಭ ಮಾಡಿದ ಕೆಲವೇ ದಿನಗಳಲ್ಲಿ).

ಇಲ್ಲಿ ಎಂ ಜಿ ದಾಮೋದರ್ ಅವರ ಒಡನಾಟದ ಬಗ್ಗೆ ಒಂದಷ್ಟು ಹೇಳಲೇಬೇಕು..ವಯಸ್ಸಿನಲ್ಲಿ ಅವರು ತುಂಬಾ ಹಿರಿಯರು... ಅನುಭವಿಗಳು... ಕೆಲಸಲ ಅವರ ಜೊತೆ technical discussions with client ಎಂದು ಹೋಗುತ್ತಿದ್ದೆ... ಆ ಸಮಯದಲ್ಲಿ ಒಂದಷ್ಟು ಅನುಭವದ ಮಾತುಗಳನ್ನು ಹೇಳುತ್ತಿದ್ದರು... ಒಂದು ಸಾರಿ ನನಗೆ ಹೇಳಿದ್ದಿದೆ...." ರಂಗನಾಥ ರಾವ್ .. ನೀವು technically competent ಅನ್ನುವುದು ಎಂ ಡಿ ನಿಮ್ಮನ್ನು ಆಯ್ಕೆ ಮಾಡಿದಾಗಲೇ ನಾನು ಒಪ್ಪಿಕೊಂಡಿದ್ದೇನೆ.. ಆದರೆ ನಿಮ್ಮ,  ಜನಗಳ ಜೊತೆಗಿನ ಒಡನಾಟ ತುಂಬಾ ಬದಲಾವಣೆ ಆಗಬೇಕು( ಎಳೆ ನಿಂಬೆಕಾಯಿ ಎಂದು ನೇರವಾಗಿ ಹೇಳಲಿಲ್ಲ.. ಆದರೆ ಭಾವ ಮಾತ್ರ ಅದೇ ಇತ್ತು). ನಿಮ್ಮ ಬರೀ ನಿಯತ್ತು ಹಾಗೂ ನೇರ ಮಾತು.. ಎಷ್ಟೋ ಸಲ ನಿಮಗೆ ಮುಳುವಾಗಬಹುದು.. ಅದರಲ್ಲೂ ಈಗಿರುವ ನಿಮ್ಮ ಸುತ್ತಮುತ್ತಲಿನ ಜನರ ಮನಸ್ಸಿನಲ್ಲಿ ನೀವು ಅವರ ದಾರಿಗೆ ಮುಳ್ಳಾಗುತ್ತಿದ್ದೀರಾ ಎಂದಿದೆ... ಅವರೆಲ್ಲರೂ ಚಾಣಾಕ್ಷರು ನೀವು ಹುಷಾರಾಗಿರಬೇಕು...

ನಿಮ್ಮ ಸ್ಥಾನ ಬರೀ ಕೆಲಸ ಮಾಡುವುದಲ್ಲ.. ಆದರೆ ಬೇರೆಯವರಿಂದ ಕೆಲಸವನ್ನು ತೆಗೆಸಬೇಕು ಹಾಗೂ ಬೇರೆ ವಿಭಾಗದವರೊಡನೆ ವ್ಯವಹರಿಸಬೇಕು... ಇಲ್ಲಿ ನಿಮ್ಮ ಚಾಣಾಕ್ಷತನದ ಅವಶ್ಯಕತೆ ತುಂಬಾ ಇದೆ... ಅದನ್ನು ಬೇಗ ಕರಗತ ಮಾಡಿಕೊಳ್ಳಬೇಕು."

ನನಗೆ ಮೂರು ದಿನ ರಜೆ ಬೇಕಾಗಿತ್ತು... ಅದರ ಬಗ್ಗೆ ಎಂಜಿ ದಾಮೋದರ್ ಅವರ ಬಳಿ ಮಾತಾಡಿದಾಗ... ಅವರು ಹೇಳಿದ ಮಾತು ಇನ್ನೂ ಹಸಿರಾಗಿದೆ... ರಂಗನಾಥ್ ರಾವ್ ಮೂರು ದಿನ ಅಲ್ಲದಿದ್ದರೆ 30 ದಿನ ರಜ ತಗೋಳಿ.. ಆದರೆ ಯಾವುದೇ ಕಾರಣಕ್ಕೂ... ಯಾರೂ... ಕೆಲಸ ಹಿಂದುಳಿಯಲು/ ನಿಲ್ಲಲು ಕಾರಣ ನೀವು ಎಂದು .. ನಿಮ್ಮ ಕಡೆ ಬೆರಳು ಮಾಡಬಾರದು.... ಒಂದನೇ ತಾರೀಕು ಬಂದು ನಿಮ್ಮ ಸಂಬಳ ತಗೊಂಡು ಹೋಗಬಹುದು... ನಂದೇನು ಅಭ್ಯಂತರ ಇಲ್ಲ... ಇದು ನನ್ನ ಮೇಲಿದ್ದ ಜವಾಬ್ದಾರಿಯನ್ನು ಅವರು ಎತ್ತಿ ತೋರಿಸಿದ ರೀತಿ... ಜೀವನದ ಮೊದಲ ವ್ಯವಹಾರ ಜ್ಞಾನದ ಪಾಠ.

ಮುಲಾಜಿಗೆ ಬಿದ್ದು ಅಥವಾ ಸಹಾಯ ಸಿಗುತ್ತದೆ ಎಂದು, ಪರಿಚಯದವರು/ ಸಂಬಂಧಿಗಳೊಡನೆ ವ್ಯವಹಾರ ಮಾಡಬಾರದು.... ಹಾಗೂ ಅತಿಯಾಗಿ ನಂಬಿ ಮೋಸ ಹೋಗಬಾರದು ಎಂದು ಅರಿತುಕೊಂಡಿದ್ದು... ಕಣ್ಣು ಮುಚ್ಚಿ, ನಂಬಿ ಸಹಿ ಮಾಡಿಕೊಟ್ಟ ಒಂದು ಕಾಗದವನ್ನೇ ಮುಂದಿಟ್ಟುಕೊಂಡು ನಮ್ಮ ಮೇಲೆ ನ್ಯಾಯಾಲಯದಲ್ಲಿ ತಕರಾರು ಹೂಡಿದ, ಆ ಕಾಲಕ್ಕೆ ವೃಥಾ ಕಷ್ಟಕೋಟಲೆಗೆ ದೂಡಿದ ಮಂಡ್ಯದ KS ಶಾಮಣ್ಣನವರು, ಹಾಗೂ ನನ್ನಣ್ಣನ ಸ್ನೇಹಿತ ಜಗದೀಶ್.  ಇವರುಗಳು ಕಲಿಸಿದ ಪಾಠಕ್ಕೂ ನಾನು ಋಣಿ. 

ಇನ್ನೊಂದು ಮುಖ... ಕೇಳಿದ ತಕ್ಷಣ ನಮ್ಮ ಸಾಲಕ್ಕೆ... ತಮ್ಮ ಸಂಬಳದ ಆಧಾರದ ಮೇಲೆ ಜಾಮೀನುದಾರರಾಗಿ, ಸಹಿ ಮಾಡಿಕೊಟ್ಟ ನನ್ನ ದೊಡ್ಡ ಮಾವ ಶ್ರೀ ಎಚ್ ಪಿ ನರಸಿಂಹಮೂರ್ತಿಯವರು ಹಾಗೂ ನನ್ನಣ್ಣ ಸತ್ತಿ ಸರ್ ಇಬ್ಬರನ್ನು ಸ್ಮರಿಸಲೇಬೇಕು...

ಆಗಲೇ ಹೇಳಿದ ಹಾಗೆ... ನಾವು ಕಾರ್ಖಾನೆ ಮಾಡಲು ಇದ್ದ ಮುಖ್ಯವಾದ ಪ್ರೋತ್ಸಾಹ ಸಾಲ.  ಬ್ಯಾಂಕ್ ನಿಂದ ನಿತ್ಯದ ವ್ಯವಹಾರಕ್ಕೆ ಒಂದಷ್ಟು ಸಾಲ ಪಡೆದಾಯ್ತು... ನಮ್ಮ ಹಣದ ಬೇಡಿಕೆಗೂ ಸಂಪಾದನೆಗೂ ತಾಳಮೇಳವಿರಲಿಲ್ಲ,  ಹಾಗಾಗಿ ಸಾಲ ಹೆಚ್ಚು ಮಾಡುವುದು ಅನಿವಾರ್ಯ... ಸೀಮಿತವಾದರೂ ಜೀವನ ಸಾಗಲೇಬೇಕಲ್ಲ... ಇಂಥ ಒಂದು ಸಂದಿಗ್ಧ ಸಮಯದಲ್ಲಿ ಸಿಕ್ಕವರು ಒಬ್ಬ ಬ್ಯಾಂಕ್ ಮ್ಯಾನೇಜರ್.... ಅವರು ಬ್ಯಾಂಕಿನಿಂದ ಯಾವ ಕಷ್ಟವೂ ಇಲ್ಲದೆ ಸಾಲದ ಹಣ ತೆಗೆಯುವ ದಾರಿಯನ್ನು ಹೇಳಿಕೊಟ್ಟರು... ಅದು ಅಡ್ಡ ದಾರಿಯೇ... ಅದಕ್ಕಾಗಿ ಅವರ ಋಣ ಸಂದಾಯವೂ ಆಯ್ತು... ಒಂದು ಸುಲಭದ  ದಾರಿ ಗೊತ್ತಾದ ಮೇಲೆ ಅದನ್ನು ಪದೇ ಪದೇ ಉಪಯೋಗಿಸುವುದು ಸಹಜ ತಾನೇ?..."ಕ್ಷಣದ ಸುಖಕ್ಕೋಸ್ಕರ.. ಮಣದ ಸುಖ ಕಳಕೊಂಡಂಗೆ" ..ಆಯ್ತು.   ಮುಂದೆ ಅದರಿಂದಾಗುವ ಅಡ್ಡ ಪರಿಣಾಮಗಳ ಪರಿವೆಯೇ ಇಲ್ಲದೆ.

ತಗೊಂಡ ಸಾಲದ ಮೇಲಿನ ಬಡ್ಡಿ ವಿಷದಂತೆ ಏರುತ್ತಿತ್ತು... ಅದರಿಂದಾಗುವ ಪರಿಣಾಮದ ಬಗ್ಗೆ ಯೋಚಿಸುವಷ್ಟು ಜಾಣತನ ಇರಲಿಲ್ಲವೇನೋ... ಅಥವಾ ಅಸಹಾಯ ಪರಿಸ್ಥಿತಿಯೂ ಕಾರಣ ಇರಬಹುದು. 

ಸಾಲದ ಮೇಲಿನ ಬಡ್ಡಿಯ ಬಗ್ಗೆ ತಿಳಿಸಿಕೊಟ್ಟವರು.ಶ್ರೀ. ಸುರೇಶ್ ಬಗಾಡಿಯ.."ಸಾಲದ ಬಡ್ಡಿಯ ಮೀಟರ್ ರಾತ್ರಿಯೂ ಓಡುತ್ತೆ ಅದೂ ಎರಡರಷ್ಟು ವೇಗದಲ್ಲಿ... ಯಾಕಂದ್ರೆ ರಾತ್ರಿ ನಮ್ಮ ಸಂಪಾದನೆ ಇರೋದಿಲ್ಲ... ನಿಮ್ಮ ಹಣದ ಮೇಲೆ ಹತೋಟಿ ಇರಬೇಕಾದರೆ ಸಾಲದ ಮೇಲಿನ ಬಡ್ಡಿಯನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು.. ಅಂದ್ರೆ ಸಾಲವನ್ನು ಆ ಸಮಯಕ್ಕೆ ತೀರಿಸಬೇಕು”.. ಇನ್ನೊಂದು ಸಲಹೆ... ಲಾಭದ ಲೆಕ್ಕಾಚಾರ.. ಇದು ಬಡ್ಡಿಗೆ ನೇರ ಸಂಬಂಧ ಇರುವಂತದ್ದು... ಅದರ ಲೆಕ್ಕಾಚಾರ ಹೇಳಿಕೊಟ್ಟದ್ದು.

ವ್ಯಾಪಾರಂ ದ್ರೋಹ ಚಿಂತನಂ... ಎನ್ನುವ ನುಡಿಗಟ್ಟು ಬಹಳ ಜನದ ಅನುಭವದಿಂದ ಬಂದಿರಲೇಬೇಕು.... ತುಂಬಾ ನಿಸ್ಪೃಹವಾಗಿ ಇದ್ದಾಗಲೂ ಕೆಲ ಸಮಯ ಕಷ್ಟವಾಗಬಹುದು...20 ರೂಪಾಯಿಯ ಮಾರಾಟಕ್ಕೂ ಬಿಲ್ ಮಾಡುತ್ತಿದ್ದ ನಾವುಗಳು...commercial tax department ದೃಷ್ಟಿಯಲ್ಲಿ.... ತಪ್ಪಿತಸ್ಥರು..... ಒಂದು ತಪ್ಪು ಕಂಡು ಹಿಡಿದು  ಅದು criminal offence ಎಂದು ಎತ್ತಿ ತೋರಿಸಿ, ತಮ್ಮ ಬೇಳೆ ಬೇಯಿಸಿಕೊಂಡವರು... ಹೀಗಾಗಿ ಬರೀ ಪ್ರಾಮಾಣಿಕತೆಯಿಂದ ಏನೂ ಉಪಯೋಗವಿಲ್ಲ... ಹೇಗಿದ್ದರೂ ಒಂದಷ್ಟು ಶಾಖಾಯ ಲವಣಾಯ ಖರ್ಚು ಇದ್ದದ್ದೇ,  ಹಾಗಾಗಿ ಒಂದಷ್ಟು ಮೋಸ ಮಾಡಿದರೆ ಏನೂ ತಪ್ಪಲ್ಲ.... ಇದೊಂದು ಪಾಠ...

ಇನ್ನೊಂದು ತಪ್ಪು ಕಲ್ಪನೆ.... ಒಬ್ಬ ಟೈಪಿಸ್ಟ್ ಇರ್ಬೇಕು, separate cabin ಇರಬೇಕು, ಫೋನ್ ಬಂದಾಗ ಟೈಪಿಸ್ಟ್ ತಗೊಂಡು, ನಮಗೆ ಕನೆಕ್ಷನ್ ಕೊಡಬೇಕು... ಹೀಗೆ...      ಇಂಥ ಕಲ್ಪನಾ ಲೋಕ/ ಕನಸಿನ ಲೋಕದಿಂದ ಹೊರಬಂದು, ವ್ಯಾವಹಾರಿಕವಾಗಿ ಕೆಲಸ ಮಾಡಬೇಕು, ಬರೀ ಕತ್ತೆಯ ಥರ ದುಡಿಯೋದು ಕಾರ್ಖಾನೆ ನಡೆಸುವ ಲಕ್ಷಣ ಅಲ್ಲ, ಅಂತ ಸಹ ...ಜೀವನವೇ ಕಲಿಸಿತು.

ಇಷ್ಟು ಕಲಿಯುವ ಹೊತ್ತಿಗೆ, ನಮ್ಮ ಹಡಗು ಮುಳುಗಲು ಶುರುವಾಗಿತ್ತು, ನೀರು ಕುತ್ತಿಗೆಯ ತನಕ ಬಂದಿತ್ತು...  ಹಾಯಾಗಿ ಕೈತುಂಬ ಬರುತ್ತಿದ್ದ ಸಂಬಳದ ಕೆಲಸವನ್ನು ಬಿಟ್ಟು ಈ ಕಷ್ಟಕ್ಕೆ ಗುರಿಯಾಗ ಬೇಕಿತ್ತಾ ಎಂದು ಆಡಿಕೊಂಡವರ ಪಿಸುಮಾತು ಕಿವಿಗೆ ಬಿದ್ದು.. ಮನಸ್ಸಿಗೆ ಕೊಂಚ ಬೇಸರವಾಗಿದ್ದೂ ಹೌದು. ಹಾಗೆಯೇ ಇದರಿಂದ ಹೊರಬಂದು, ಈ ಮಾರ್ಗದಲ್ಲಿಯೇ ಈಜಿ, ಗೆದ್ದು ಜೀವನ ಮಾಡಬೇಕೆಂಬ ಛಲ/ ಹಂಬಲವೂ ಬಲವಾಗಿತ್ತು.  ಈಗ ನನ್ನ ಮುಂದಿದ್ದ ದಾರಿ.... ಹೇಗಾದರೂ ಮಾಡಿ ಮುಳುಗುವುದನ್ನು ತಪ್ಪಿಸಿಕೊಂಡು ತೇಲಲು ಒಂದು ಮಾರ್ಗವನ್ನು ಕಂಡುಕೊಳ್ಳುವುದು.  ಈ ಹಂತದಲ್ಲೇ ಪೀಣ್ಯ ಮೇಲಿನ ಕಾರ್ಖಾನೆಯ ಆಸ್ತಿಯ ಮೇಲಿನ ವ್ಯಾಮೋಹ ಕಳೆದುಕೊಂಡು... ಅದರಿಂದ ಹೊರಬಂದು,ದೊಡ್ಡ ಸಾಲದಿಂದ ಮುಕ್ತಿ ಪಡೆದು, ಒಂದಷ್ಟು ಸಾಲವನ್ನು ತಲೆಯ ಮೇಲೆ ಹೊತ್ತು ಹೊರ ಬಂದಿದ್ದು.

ಸುಮಾರು ನಮ್ಮದೇ ರೀತಿಯ ಭವಣೆ ಪಡುತ್ತಿದ್ದ ಜನಗಳೊಂದಿಗೆ ಮಾತಾಡುತ್ತಿದ್ದಾಗ ಒಂದು ತರಲೆ ಸಲಹೆ... ನಮಗೆ ಯಾರ ಮೇಲಾದರೂ ದ್ವೇಷ ಸಾಧಿಸಬೇಕಾದರೆ ಅವರನ್ನು ಪುಸಲಾಯಿಸಿ ಒಂದು ಸಣ್ಣ ಕಾರ್ಖಾನೆ ಮಾಡಲು ಸಫಲರಾದರೆ ಅವರ ಮೇಲಿನ ದ್ವೇಷ ತೀರಿಸಿದಂತೆ... ಇದು ಕೈಲಾಗದವರ ಚಿಂತನೆಯ ಪರಿ...

ವ್ಯವಹಾರವನ್ನು ಹೇಗೆ ಮಾಡಲೇಬಾರದೆಂದು ಕಲಿಸಿಕೊಟ್ಟ ಪೀಣ್ಯದ ಕಾರ್ಖಾನೆಗೆ... ಎಷ್ಟು ಧನ್ಯವಾದ ಹೇಳಿದರೂ ಸಾಲದು.... ಅದೇ ನನ್ನ ಮುಂದಿನ ಜೀವನಕ್ಕೆ ದಾರಿದೀಪವಾಯಿತು.

ಬೇರೆ ಮಾರ್ಗಗಳ ಅನ್ವೇಷಣೆ, ಪ್ರಯತ್ನ, ಎಲ್ಲ ದಿಕ್ಕಿನಲ್ಲೂ ಸಾಗುತ್ತಾ.... ಕೊನೆಗೆ ನನ್ನ ಓದು.. ಮೆಕ್ಯಾನಿಕಲ್ ಇಂಜಿನಿಯರಿಂಗ್.. ಹಾಗೂ ನನಗೆ ಡಿಸೈನಿಂಗ್ ನಲ್ಲಿ ಇದ್ದ ಶಕ್ತಿಯನ್ನೇ ಉಪಯೋಗಿಸಿ ಮುಂದುವರೆಯುವುದೆಂದು ನಿರ್ಧರಿಸಿ ಆ ದಿಕ್ಕಿನಲ್ಲಿ ಧನಾತ್ಮಕ ಚಿಂತನೆ ಮತ್ತು ಕಾರ್ಯವಿಧಾನ ಅಳವಡಿಸಿಕೊಂಡು ಪ್ರಯತ್ನ ಮಾಡುತ್ತಿದ್ದಾಗ ಸಿಕ್ಕಿದ್ದೇ.... ಬಿಎಚ್ಇಎಲ್ ನ ಬಾಗಿಲು... ಜೊತೆಗೆ ಅಲ್ಲಿನ ಪರಿಚಯದ ಮುಖ, ಶಹಾಬಾದ್ ನಲ್ಲಿದ್ದ ಶ್ರೀ ಬಿ ಆರ್ ಗುರುಪ್ರಸಾದ್ ಅವರ ಪ್ರೋತ್ಸಾಹ.

ಈ ಹಂತದಲ್ಲಿ ನನ್ನ ಗುರಿ ಒಂದೇ..... ಯಾವುದಾದರೂ ಸರಿ, ಕೆಲಸವನ್ನು ಹುಡುಕುವುದು, ಅದರ ಮೇಲೆ ಸಂಪೂರ್ಣ ಶ್ರಧ್ಧೆ ವಹಿಸಿ ಕೆಲಸ ಮಾಡುವುದು.... ಹಳೆಯ ದಿನಗಳಲ್ಲಿ ಕಂಡ ಕನಸುಗಳನ್ನೆಲ್ಲ ಪಕ್ಕಕ್ಕೆ ಸರಿಸಿ... ಕಲಿತ ಪಾಠಗಳನ್ನು ವ್ಯವಹಾರದಲ್ಲಿ ಅಳವಡಿಸಿಕೊಳ್ಳುತ್ತಾ, ವಸ್ತು ಸ್ಥಿತಿಯನ್ನು ಗಮನಿಸಿ, ಅದಕ್ಕೆ ಪೂರಕವಾದ ಜೀವನಶೈಲಿಯನ್ನು ರೂಢಿಸಿಕೊಂಡು, ಕೆಲಸವನ್ನೇ ಜೀವನಶೈಲಿಯಾಗಿ ಮಾಡಿಕೊಂಡು ಮುನ್ನಡೆದಿದ್ದು... ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿ ಕೊಟ್ಟಿತು... ಸಾಲದ ಹೊರೆಯೂ ಕಡಿಮೆಯಾಗಿ... ಪಯಣ ಸರಿ ದಾರಿಯಲ್ಲಿತ್ತು.

ಯೋಗಾ ಯೋಗ ...ಸಣ್ಣ ಸಣ್ಣ ಕೆಲಸಗಳಿಂದ ಶುರುವಾದ ಬಿ ಹೆಚ್ ಇ ಎಲ್ ನ ಸಂಬಂಧ, ಗಟ್ಟಿಯಾಗಿ, ಕೈತುಂಬ ಕೆಲಸ ಸಿಕ್ಕಿ.... ನನ್ನ ಬೆಳವಣಿಗೆಗೆ ಕಾರಣವಾಗಿ... ನನ್ನ ಅನ್ನದಾತ ಎಂದು ಅಭಿಮಾನದಿಂದ ಹೇಳುವಷ್ಟರ ಮಟ್ಟಿಗೆ ಬೆಳೆದಿತ್ತು. ಅನ್ನಕ್ಕೆ ಬೇಕಾದ ಸಾರೂ ಸಹ ಸಿಗುವಂತೆ ,... ಬೇರೆಯ ಅವಕಾಶಗಳೂ ಸಿಗುತ್ತಾ ಹೋದವು... ಮುಂದೆ ಧನ್ಯತಾ ಭಾವ.

ಇಲ್ಲೊಂದು ನೆನಪು ...ಜೀವನದ ಕಟು ಸತ್ಯವನ್ನು ತೆರೆದಿಡುತ್ತದೆ... ಪೀಣ್ಯದ ಫ್ಯಾಕ್ಟರಿಯಲ್ಲಿ ನಾಲ್ಕಾರು ತೆಂಗಿನ ಸಸಿಗಳನ್ನು ನೆಟ್ಟಿದ್ದೆವು.. ಅವು ಬೆಳೆದು ಫಲ ನೀಡುವ  ವೇಳೆಗೆ, ಅಲ್ಲಿಂದ ಭಾಗಶಃ ಹೊರ ಬಂದಿದ್ದೆವು.... ಕಾರ್ಯನಿಮಿತ್ತ.. ಒಂದು ಸಲ ಅಲ್ಲಿಗೆ ಹೋದಾಗ... ಅಲ್ಲಿ ನಾವಿದ್ದಾಗಲಿಂದಲೂ ಕೆಲಸ ಮಾಡುತ್ತಿದ್ದ, ಗೋಪಾಲ ತೆಂಗಿನ ಮರದಿಂದ ಎಳನೀರು ಕಿತ್ತು ನನ್ನ ಮೋಟರ್ ಬೈಕ್ ಗೆ ಕಟ್ಟಿ, ನಮ್ಮಪ್ಪನಿಗೆ ಕೊಡಲು ಹೇಳಿ ಕಳಿಸಿದ್ದ. ದುರ್ದೈವ ಮನೆಗೆ ಬಂದು ನೋಡಿದರೆ ಏನೂ ಇಲ್ಲ.... ಬೆಳೆಸಲು ಕಷ್ಟಪಟ್ಟರೂ... ಅದರ ಫಲ ಅನುಭವಿಸುವ ಯೋಗ ಇಲ್ಲ... ನಮ್ಮದಲ್ಲದ್ದು ಎಂದಿಗೂ ನಮಗೆ ದಕ್ಕದು.

ಈಗ ಹಿಂತಿರುಗಿ ನೋಡಿದಾಗ... ಜೀವನ  ಪಾಠ ಕಲಿಸುವ ಮುಂಚಿನ ನನ್ನ ದಡ್ಡತನ... ಮಿತಿಮೀರಿತ್ತು ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ.....  ಹಾಗೂ ಈ ಕಲಿಕೆಯು ಜೀವನದ ಕೊನೆಯುಸಿರಿನೊಂದಿಗೆ ನಿಲ್ಲಬೇಕು ಎಂಬುದು ನನ್ನ ಆಸೆ.

ಎಲ್ಲ ಕಷ್ಟಗಳನ್ನು... ನನ್ನ ಚಿಕ್ಕ ವಯಸ್ಸಿನಲ್ಲಿ, ಶಕ್ತಿ ಇರುವ ಸಮಯದಲ್ಲಿ.... ಜೊತೆಗೆ ಅದಕ್ಕೆ ಬೇಕಾದ ಧೀಃ ಶಕ್ತಿಯನ್ನು ಕೊಟ್ಟ ಆ ದೇವರಿಗೆ ಏನು ಹೇಳಲಿ.... ಅನ್ಯತಾ ಶರಣಂ ನಾಸ್ತಿ... ತ್ವಮೇವ ಶರಣಂ  ಮಮ...





    

Comments

  1. ನಿಮ್ಮ ವ್ಯವಹಾರಿಕ ಕ್ಷೇತ್ರದ ಏರಪೇರುಗಳನ್ನು, ನೋವು ನಲಿವುಗಳನ್ನು ಆಯುಧಪೂಜೆಯ ವಿವರಣೆಯೊಂದಿಗೆ ಹಂತಹಂತವಾಗಿ ಪರಿಚಯ ಮಾಡಿಕೊಟ್ಟಿದ್ದೀರಿ.

    ವಿವಿಧ ಸಮಯಗಳಲ್ಲಿ ನಿಮಗೆ ಸಲಹೆ-ಸೂಚನೆಗಳನ್ನು ನೀಡಿದವರ ವಿವರ ಹಾಗೂ ಪಾಠವನ್ನೂ ತಿಳಿಸಿದ್ದೀರಾ. ಇದು ಇಂದಿನ ಸ್ಟಾರ್ಟಪ್ ಪ್ರಾರಂಭಿಸುವವರಿಗೆ ಒಂದು ದಾರಿದೀಪವಾಗಬಲ್ಲದು.ನಿಮ್ಮ ಜೀವನದ ಆಗುಹೋಗಳು ಇತರರಿಗೆ ಉಪಯೋಗವಾಗುತ್ತಿರುವದು ಸಂತಸದ ಸಂಗತಿ.

    ಮುಂದುವರೆಸಿ...ಶುಭವಾಗಲಿ.

    ReplyDelete
    Replies
    1. ಗುರುಪ್ರಸನ್ನ,
      ಚಿಂತಾಮಣಿ

      Delete
  2. ಎಲ್ಲವನ್ನು ಸ್ವವಾನುಭವದಿಂದ ಕಲಿಯಲು ಜೀವನದ ಸಮಯ ಸಾಲದು. ವಿವೇಕಿಯಾದವನು ಅನ್ಯರ ತಪ್ಪಿನಿಂದ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾನೆ ಎಂಬ ವಿವೇಕಾನಂದರ ಮಾತಿನಂತೆ. ಹಿರಿಯರ ಸಲಹೆಗಳು ಅನುಭವದ ಮಾತುಗಳು ಜೀವನಕ್ಕೆ ಉಪಯುಕ್ತ. ಅನುಭವದ ಬುತ್ತಿಯ ಬಿಚ್ಚಿ ಬಡಿಸಿದ್ದೀರಿ

    ReplyDelete
  3. Beautiful. Very sincere presentation. Compliments to you, Ranganath.
    Guruprasad.

    ReplyDelete
  4. ನಿಮ್ಮ ಹಂತ ಹಂತದ ಅನುಭವಗಳು, ಸೋಲು ಗೆಲುವು, ನೋವು ನಲಿವುಗಳನ್ನು ಅರ್ಥಪೂರ್ಣವಾಗಿ ಉಲ್ಲೇಖಿಸಿದ್ದೀರಿ. ನಡೆಯುವ ಹಾದಿಗೆ ಎಚ್ಚರಿಕೆಯ ಗಂಟೆಯಂತಿದೆ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ