ಶಾಮಣ್ಣನ ಶತಾಭ್ಧಿ ಸಂಭ್ರಮ...

ಹೋದ ಭಾನುವಾರ ನನ್ನ ಮಾವ ಶ್ರೀ. ಹೆಚ್. ಪಿ. ಕೃಷ್ಣಮೂರ್ತಿಯವರ 96 ನೇ ಹುಟ್ಟು ಹಬ್ಬದ  ಪ್ರಯುಕ್ತ ಅವರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಅಳಿಯಂದಿರು, ಸೊಸೆಯಂದಿರು...ಎಲ್ಲ ಒಟ್ಟಾಗಿ ಸೇರಿ UD Residency ಹೋಟೆಲ್ ನಲ್ಲಿ ಸಂಭ್ರಮಿಸಿದೆವು. ವಿಶೇಷ ಅಂದರೆ ನಮಗೆಲ್ಲಾ ಭರ್ಜರಿಯಾಗಿ ಭೋಜನ ಕೊಡಿಸಿದ್ದು ನಮ್ಮ ಮಾವ. ಸಾಮಾನ್ಯವಾಗಿ ಇದು ನಾವು ಮಾಡಬೇಕಾದ್ದು.....ಇನ್ನೊಂದು ವಿಶೇಷ...ಕೇಕ್ ಜೊತೆಗೆ...ನನ್ನ ನಾದಿನಿ ಮಣಿ ಕೈಯ್ಯಾರ ಮಾಡಿ ತಂದಿದ್ದ  ಹಾಲ್ ಬಾಯಿಯನ್ನು ಕತ್ತರಿಸಿ ಎಲ್ಲರೂ ತಿಂದಿದ್ದು. 

ತಕ್ಕಮಟ್ಟಿನ ಹರಟೆ, photo session, ಪುಷ್ಕಳವಾದ ಊಟ, ಉಡುಗೊರೆ ಕೊಡುವುದು ಎಲ್ಲಾ  ಸಾಂಗೋಪಾಂಗವಾಗಿ ನಡೆಯಿತು.  ಅದರಲ್ಲಿ  ನನ್ನ ಮೊಮ್ಮಗಳು ವಿಸ್ಮಯ ಕೊಟ್ಟ greeting card  ಸಹ ಒಂದು.  

ಈ greeting card ಮಾಡಲು ನನ್ನ ಮೊಮ್ಮಗಳ (ನನ್ನ  ಮಾವನ ಮರಿ ಮಗಳು) ತಯಾರಿ, ತಾತನ ಹೆಸರಿನ ಸ್ಪೆಲ್ಲಿಂಗ್ ಕೇಳಿ ಬರೆದದ್ದು, ಹೀಗೆ...ಉತ್ಸಾಹಕ್ಕೆ ಎಣೆಯಿರಲಿಲ್ಲ.... ಇದನ್ನು ನೋಡುತ್ತಾ...ನನ್ನ ನೆನಪಿಗೆ ಬಂದದ್ದು .. ನನ್ನಣ್ಣನ ಮೊಮ್ಮಗಳು... ಮುರಳಿಯ ಮಗಳು ಮಾಧುರಿ(ನಮ್ಮಪ್ಪನಿಗೆ ಮರಿ ಮಗಳು). ನಮ್ಮಪ್ಪನ 100 ನೇ ವರ್ಷದ ಹುಟ್ಟು ಹಬ್ಬದ ಸಮಯದಲ್ಲಿ, ನಾವು ಹೊರ ತಂದ ಸ್ಮರಣ ಸಂಚಿಕೆಗೆ ಮಾಧುರಿ ಬರೆದ ಲೇಖನ. ಒಂದಕ್ಷರವೂ ಬರೆಯಲು ಬರದ, ಆದರೆ ಬರೆಯುವ ಉತ್ಸಾಹ ತುಂಬಿದ.. ಮಗುವಿನ ಬರವಣಿಗೆ, ”ಮಾಧುರಿಯ ತೊದಲ್ ಲಿಪಿ" ಯಾಗಿ ಸಂಚಿಕೆ ಸೇರಿತು.

ನಮ್ಮಪ್ಪ (ಡಿ.ಚಂದ್ರಶೇಖರಯ್ಯ - ನಾವೆಲ್ಲ ಕರೆಯುತ್ತಿದ್ದದ್ದು ಶಾಮಣ್ಣ ಎಂದು) ನೂರನೇ ವರ್ಷಕ್ಕೆ ಕಾಲಿಟ್ಟದ್ದು 2003 ನೇ ಇಸವಿ.... ನೂರು ವರ್ಷ ಬಾಳಿದ ನಮ್ಮಪ್ಪನಿಗೆ ಒಂದು ಸುಂದರ ಸಮಾರಂಭ ಮಾಡಬೇಕೆಂದು ಮಕ್ಕಳು ಮೊಮ್ಮಕ್ಕಳು ಎಲ್ಲ ಸೇರಿದ್ದ( 2002 ರ ಕೊನೆಯ ಭಾಗದಲ್ಲಿ) ಮೈಸೂರಿನಲ್ಲಿ, ರವಿ ಮನೆಯಲ್ಲಿ ನಡೆದ ಅಣ್ಣ ಅತ್ತಿಗೆಗೆ ಸಂಭಂಧಪಟ್ಟ (ಯಾವ ಕಾರ್ಯಕ್ರಮ ಅಂತ ಯಾಕೋ ನೆನಪೇ ಬರ್ತಾಯಿಲ್ಲ) ಕಾರ್ಯಕ್ರಮದಲ್ಲಿ ನಿರ್ಧಾರವಾಯಿತು. ಸಮಾರಂಭವನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ಎಲ್ಲರೂ ಯೋಚಿಸಿ ಮುಂದೆ ಸೇರಿ ಚರ್ಚಿಸಿ ಮುಂದುವರೆಯುವುದು ಎಂದು ನಿರ್ಧರಿಸಿದೆವು. ನನಗೆ ನೆನಪಿರುವಂತೆ ಇಂತಹ 4 ಸಭೆಗಳು ನಡೆದವು. ಮೊದಲ ಹಂತದಲ್ಲಿ... ಕಾರ್ಯಕ್ರಮದ ದಿನಾಂಕವನ್ನು  27.04.2003, ಭಾನುವಾರ, ಎಂದು ನಿಗದಿಪಡಿಸಿ, ನಿಜಗುಣ ಛತ್ರವನ್ನು ಆಯ್ಕೆ ಮಾಡಿ,  ಮುಂಗಡ ಹಣವನ್ನು ಕೊಟ್ಟು ಬಂದಿದ್ದು.

ಸಮಾರಂಭಕ್ಕೆ ಒಂದು ನಿರ್ದಿಷ್ಟ ಹೆಸರು ಇರಬೇಕೆಂದು ಬಂದ ಹಲವಾರು ಸಲಹೆಗಳಲ್ಲಿ ” ಶಾಮಣ್ಣನ ಶತಾಬ್ಧಿ ಸಂಭ್ರಮ” ಎಂದು ನಿರ್ಧರಿಸಿದೆವು. ಸಮಾರಂಭದ ರೂಪುರೇಷೆಗೆ ಬಂದ ಸಲಹೆಗಳು ಸಾಕಷ್ಟಿದ್ದವು. ಅವುಗಳನ್ನೆಲ್ಲ ಕ್ರೋಢೀಕರಿಸಿ ಒಂದು ಸ್ಥೂಲರೂಪಕ್ಕೆ ತಂದಿದ್ದಾಯ್ತು.

ಈ ನಿಟ್ಟಿನಲ್ಲಿ ಎರಡು ಮುಖ್ಯ ವಿಷಯಗಳು ದೀರ್ಘ ಚರ್ಚೆಗೆ ಅನುವು ಮಾಡಿ ಕೊಟ್ಟಿದ್ದು... ಮೊದಲನೆಯದು ಊಟ.... ಸಮಾರಂಭದ ದಿನ ಏಕಾದಶಿಯಾಗಿದ್ದರಿಂದ... ಜೊತೆಗೆ ಬರುವವರು ಸಾಕಷ್ಟು ಹಿರಿಯರು ಇರುವುದರಿಂದ ಅವರಿಗೆ ಏಕಾದಶಿ ಫಲಹಾರದ ಆಯ್ಕೆ ಇರಬೇಕು.  ಸಮಾರಂಭ ವಿಶಿಷ್ಟ ಸಂಪ್ರದಾಯವಾದ್ದರಿಂದ ಬಾಳೆ ಎಲೆಯಲ್ಲಿ ಹಬ್ಬದ ಊಟ ಇರಲೇಬೇಕು ಹಾಗಾಗಿ ಅದೂ ಒಪ್ಪಿಗೆಯಾಯಿತು.... ಇದರ ಮಧ್ಯೆ ಒಂದಷ್ಟು ಯುವತಲೆಗಳು... ಮೂಗು ಮುರಿದವು... ತಮಗೆ ಸ್ವಲ್ಪ ಆಧುನಿಕ ತಲೆಮಾರಿನ ಊಟ ಬೇಕು... ಜೊತೆಗೆ ಬರುವ  ಜನಕ್ಕೆ ಒಟ್ಟಿಗೆ ಊಟ ಹಾಕಲು( 1200 ಜನದ ಊಟ ಆಯ್ತೆಂದು ನಂತರದ ಲೆಕ್ಕ) ತುಂಬಾ ಕಷ್ಟ ಆಗುತ್ತದೆ ಹಾಗಾಗಿ buffet (ಕೈ ತಟ್ಟೆ ಊಟ) ಬೇಕೇ ಬೇಕು , ಅದಕ್ಕೆ ತಕ್ಕ ಹಾಗೆ ಅಡಿಗೆ ಆಗಬೇಕು... ಅಂದರೆ ಮೂರು ತರಹದ ಊಟೋಪಚಾರ.. ಮೂರು ತರಹದ ವಿತರಿಸುವ ಜವಾಬ್ದಾರಿ. ಇದನ್ನು ಅಡಿಗೆಯವರೊಂದಿಗೆ ಚರ್ಚಿಸಿ...  ತಯಾರಿಸಬೇಕಾದ ಎಲ್ಲ ತಿನಿಸುಗಳನ್ನು ಪಟ್ಟಿಮಾಡಿದೆವು. (ಈ ಪಟ್ಟಿಯನ್ನು, ಸಂಬಂಧಿಸಿದ ಊಟದ ಕೋಣೆಯಲ್ಲಿ, ಕಾಣುವ ಹಾಗೆ ಅಂಟಿಸಿತ್ತು.... ಆಯ್ಕೆ ಮಾಡಲು ಅನುಕೂಲವಾಗಲು.)

ಎರಡನೆಯದು ಬಂದವರಿಗೆ ಕೊಡುವ ತಾಂಬೂಲ... ಸಾಮಾನ್ಯವಾಗಿ ತೆಂಗಿನಕಾಯಿ ಕೊಡುವುದು ಒಂದು ಪದ್ಧತಿ. ನಮ್ಮದು ವಿಶೇಷ ಸಮಾರಂಭ ಹಾಗಾಗಿ ವಿಶೇಷ ತಾಂಬೂಲ ಕೊಡಬೇಕು ಎಂದು ಒಕ್ಕೊರಲಿನ ಠರಾವು. ಧುತ್ ಎಂದು ಮುಂದೆ ನಿಂತ ಪ್ರಶ್ನೆ  ....ಏನು ಕೊಡುವುದು? ಬಂದ ಸಲಹೆಗಳು.. ಪುಸ್ತಕ, ಹಣ್ಣು, ಸ್ಮರಣಿಕೆ... ಹೀಗೆ... ಅಯ್ಯೋ ಯಾವ್ ಪುಸ್ತಕ ಕೊಡೋದು... ಬೇರೆ ಬೇರೆ ವಯಸ್ಸವರು ಬರ್ತಾರೆ.. ಅವರಿಗಾಗಿ ಆಯ್ಕೆ ಕೊಡಕ್ಕಾಗುತ್ತಾ.. ಇನ್ನು ಹಣ್ಣನ್ನ ತಿಂದು ಮುಗಿಸುತ್ತಾರೆ.... ಹಾಗಾದರೆ ಸ್ಮರಣಿಕೇನೇ ಬೆಸ್ಟಲ್ಲ್ವಾ... ಆದರೆ ಏನು ಕೊಡೋದು.. prize ತರ ಆಗತ್ತೆ .....ಕೊಡಕಾಗುತ್ತಾ?... ಹೀಗಿರುವಾಗ ಒಂದು ಮೂಲೆಯಿಂದ ಒಂದು ಸಲಹೆ...ಚಿನ್ನದ ಹೂ ಕೊಡೋಣ.....ಓ...ಬಜೆಟ್ ಜಾಸ್ತಿ ಆಗತ್ತೆ.......ಹಾಗಾದ್ರೆ  ಬೆಳ್ಳಿ ಹೂ ಕೊಡೋಣ... ಅದಕ್ಕೆ ಒಂದು ಬಾಲ ಬಂತು... ಚಿನ್ನದ ಲೇಪ ಮಾಡಿ ಕೊಡೋಣ.... ಆ.....ಅದೇ ಸರಿ......ಈಗ ಬಂತು ಹಣದ ಲೆಕ್ಕ... ಹೂ ಎಷ್ಟು ದೊಡ್ಡದು ಮಾಡಿಸಬೇಕು,  ಎಷ್ಟು ಖರ್ಚಾಗುತ್ತೆ.... ಕಡೆಗೆ ಒಂದು ಮಲ್ಲಿಗೆ ಹೂ ನಷ್ಟು ಮಾಡ್ಸೋದು... ಅದು ಕಳೀದೆ ಇರೋ ಹಾಗೆ ಒಂದು ಡಬ್ಬೀಲಿ ಹಾಕಿಕೊಡುವುದು.... ಅದೂ ಕಾಣೋ ಹಾಗೆ ...

ಒಂದು ಪುಸ್ತಕ ಮಾಡಬೇಕು .. ಸ್ಮರಣ ಸಂಚಿಕೆ ತರ... ಇದು ಎಲ್ಲರಿಗೂ ಇಷ್ಟ. ಆದರೆ.. ಅದರ ಓದುಗರ ಸಂಖ್ಯೆ ಯೋಚನೆ ಮಾಡಿದಾಗ... ಪ್ರಿಂಟ್ ಮಾಡ್ಸೋದು ಬೇಡ.... ಒಂದಷ್ಟು ಕಾಪಿ ಮಾತ್ರ ಜೆರಾಕ್ಸ್ ಮಾಡಿ.. ಬೈಂಡಿಂಗ್ ಮಾಡಿಸೋಣ ಅಲ್ಲಿ ಇಡೋಣ.. ಓದುವವರು ಓದಲಿ... ಒಪ್ಪಿಗೆ ಆಯಿತು... ತಕ್ಷಣ ಮತ್ತೊಂದ್ ಸಲಹೆ... ನಾವು ಒಂದೆರಡು ಖಾಲಿ ಪುಸ್ತಕ  ಮತ್ತೆ ಪೆನ್ ಇಡೋಣ.. ಬಂದವರು ಅವರ ಅಭಿಪ್ರಾಯ ಬರೆಯಲಿ.....

ಇನ್ನು ಸ್ಟೇಜು.... ಸ್ವಲ್ಪ ವಿಶೇಷವಾಗಿ ಮಾಡಿಸೋಣ ಅಂತ.. ನಾಲ್ಕಾರು ಡಿಸೈನ್ ನೋಡಿ.... ಮನೆಯ ಬಾಗಿಲು... ಒಳಗೆ ಅಮ್ಮನಿರುವಂತೆ, ನಮ್ಮಮ್ಮನ ಫೋಟೋ, ವೇದಿಕೆ ಹೆಸರು ...ಅಚ್ಚಕ್ಕನ ವೇದಿಕೆ (ನಮ್ಮಮ್ಮ ಲಕ್ಷ್ಮಿದೇವಮ್ಮ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದಿದ್ದು ”ಅಚ್ಚಕ್ಕ”).


ಒಟ್ಟು ಐದು ತಲೆಮಾರಿನ ಜನ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರಿಂದ.... ಶಾಮಣ್ಣನನ್ನು ಬಿಟ್ಟು ಉಳಿದ ನಾಲ್ಕು ತಲೆಮಾರಿನ ಎಲ್ಲ ಸದಸ್ಯರಿಗೆ ಬ್ಯಾಡ್ಜ್ ಕೊಡಬೇಕು.... ಪ್ರತಿಯೊಂದು ತಲೆಮಾರಿಗೂ ಬೇರೆ ಬೇರೆ ಬಣ್ಣದ ಬ್ಯಾಡ್ಜ್ ಇರಬೇಕು....  ಇದಕ್ಕೂ ಒಪ್ಪಿಗೆ... ವಿಶೇಷ ಎಂದರೆ ಐದನೇ ತಲೆಮಾರಿನ ಸಿಂಚನ.. ಒಬ್ಬಳೇ (ಸಿಂಚನ ನಮ್ಮ ದೊಡ್ಡಕ್ಕನ ಮಗಳ, ಮಗಳ ,ಮಗಳು)

ಇದು ಕಾರ್ಪೊರೇಟ್ ಫಂಕ್ಷನ್ ತರ ತಿರುವು ತಗೋಳ್ತಿದೆ ಅನ್ನಿಸ್ತು.... ಮತ್ತೆ ಎಲ್ಲರ...ಅಭಿಪ್ರಾಯ... ಇರ್ಲಿ ಬಿಡಿ ಅದೊಂದು ಹೊಸ ಪ್ರಯೋಗ ...ಒಪ್ಪಾಯ್ತು.....

ತುಂಬಾ ಜನ ಬಂದಾಗ... ಮುಖ್ಯ ವೇದಿಕೆಯ ಹತ್ತಿರ ಜಾಗ ಇರಲ್ಲ... ಆದರೆ ಆಚೆ ಕೂತ ಜನಕ್ಕೆ ಕಾಣಲ್ಲ... ಹಾಗಾಗಿ ಆಚೆನೂ ಒಂದು ವೇದಿಕೆ ಹಾಕಿ ಅಲ್ಲಿ ಮಕ್ಕಳಿಗಾಗಿ ಮ್ಯಾಜಿಕ್,  ಒಂದಷ್ಟು ಭಾವಗೀತೆ ಮತ್ತು ಭಕ್ತಿ ಗೀತೆಗಳ ಗಾಯನ... ಯೋಗಾಸನ ಪ್ರದರ್ಶನ... ಕಾರ್ಯಕ್ರಮಗಳ  ಸಂಯೋಜನೆ  ಆಯ್ತು.

ಇನ್ನು ಆಮಂತ್ರಣ ಪತ್ರಿಕೆ ಅದನ್ನು ವಿಶೇಷವಾಗಿ ಯೋಚಿಸಿ..ಯೋಜಿಸಿ.... ಅದಕ್ಕೆ ಒಂದು ರೂಪ ಕೊಟ್ಟಾಯ್ತು. ಪತ್ರಿಕೆಯಲ್ಲಿ ಕಾರ್ಯಕ್ರಮದ ವಿಷಯ 10 ಭಾಗವಾದರೆ ಶಾಮಣ್ಣನ ಪರಿವಾರದ ಎಲ್ಲ ಸದಸ್ಯರ ಹೆಸರುಗಳು ಮಿಕ್ಕ ಭಾಗವಾಗಿತ್ತು.... ವೃಕ್ಷ ಬೆಳೆದಂತೆ ಹಿರಿಯ ಮಕ್ಕಳಿಂದ ಶುರುವಾಗಿ ಕಿರಿಯರು ವೃಕ್ಷದ ತುದಿಯಲ್ಲಿರುವಂತೆ... ಜೊತೆಗೆ..... ರೆಂಬೆಗಳು, ಬಿಳಲುಗಳು....

ಶಾಮಣ್ಣನ ಪರಿವಾರದ 7 ಮಕ್ಕಳು 19 ಮೊಮ್ಮಕ್ಕಳು 23 ಮರಿ ಮಕ್ಕಳು, ಒಬ್ಬ ಮರಿ ಮರಿ ಮಗಳು ...   ( "ಮರಿ ಮರಿ ಮಗಳು" ಹೆಸರನ್ನು ಸೂಚಿಸಿದ್ದು ಹಿರಿಯರಾದ ನಿಘಂಟು ತಜ್ಞ ಶ್ರೀ ಜಿ. ವೆಂಕಟಸುಬ್ಬಯ್ಯನವರು... ಅವರು ಬರೆದ ಪತ್ರವು ಜೋಪಾನವಾಗಿ ನನ್ನ ಬಳಿ ಇದೆ).

ಆಹ್ವಾನ ಪತ್ರವನ್ನು ಯಾರಿಗೆ ಕೊಡಬೇಕು ಹಾಗೂ ಅದನ್ನು ತಲುಪಿಸುವ ಜವಾಬ್ದಾರಿ, ಎಲ್ಲರೂ ವಹಿಸಿಕೊಂಡು... ಎಷ್ಟು ಜನವನ್ನು ಕರೆದಿದ್ದಾರೆ , ಸಂಭವನೀಯವಾಗಿ ಬರುವ ಜನವೆಷ್ಟು ಎನ್ನುವುದನ್ನು ಆದಷ್ಟೂ ಮುಂಚಿತವಾಗಿ ಕೊಡಬೇಕೆಂದು ನಿರ್ಧಾರ.

ಇಷ್ಟೆಲ್ಲ ನಿರ್ಧಾರವಾಗಲು ನಡೆದ ಸಭೆಗಳಿಗೆ 20 ರಿಂದ 25 ಜನ ಸೇರುತ್ತಿದ್ರಿಂದ, ಅದೂ ಸಹ ಒಂದು ಸಣ್ಣ ಕಾರ್ಯಕ್ರಮದಂತೆಯೇ ನಡೆದವು.. ಸಂಭ್ರಮ ಅಲ್ಲಿಂದಲೇ ಶುರು.

ಇದೆಲ್ಲಾ ಚಿಂತನೆಗಳು ನಮ್ಮ ಸುತ್ತಲೇ ತಿರುಗುತ್ತಿದ್ದವು... ನಮ್ಮಪ್ಪನ ಮನಸ್ಸಿನ ಭಾವ/ ಆಸೆ ಏನು ಎಂದು ತಿಳಿಯಬೇಕಲ್ಲವೇ.... ನಮ್ಮಪ್ಪನ ಆಸೆ, ನಮ್ಮೂರು ದೊಡ್ಡಜಾಲಕ್ಕೆ ಹೋಗಿ ಈಶ್ವರನ ಪೂಜೆ ಮಾಡಿ, ಹತ್ತಿರದ ಅಕ್ಕಯ್ಯಮ್ಮನ ಬೆಟ್ಟಕ್ಕೆ ಹೋಗಿ ಬರಬೇಕು ಎಂದು. ಬೆಟ್ಟದಲ್ಲಿ ಮಂಗಳವಾರ, ಶುಕ್ರವಾರ ಮಾತ್ರ ಪೂಜೆ... ಹಾಗಾಗಿ ಆ ಎರಡು ದಿನದಲ್ಲೇ ಆಯ್ಕೆ ಮಾಡಬೇಕು... ಹೋಗಬೇಕು... ಈಗ ನಮ್ಮಪ್ಪನ ಮಕ್ಕಳ ಉತ್ಸಾಹಕ್ಕೆ ಎಣೆಯಿಲ್ಲದಾಯಿತು. ಎಲ್ಲರೂ ತಾವು ಬರುತ್ತೇವೆ ಎಂದು ಹೊರಟೇ ಬಿಟ್ಟರು... ಸರಿ ಈ ಒಂದು  ಸಡಗರದ ಕಾರ್ಯಕ್ರಮ.. ಮಧ್ಯ ತೂರಿತು... ಒಂದು ವ್ಯಾನ್ ಬುಕ್ ಮಾಡಿ.. ಶಾಮಣ್ಣ, ಹೆಣ್ಣು ಮಕ್ಕಳು ಅಳಿಯಂದಿರು, ಗಂಡು ಮಕ್ಕಳು ಸೊಸೆಯಂದಿರು (ಸತ್ತೀ ಸರ್ ಅತ್ತಿಗೆ ಬಿಟ್ಟು.. ಅವರು ಇಂದೋರಿನಲ್ಲಿ ಇದ್ದ ಕಾರಣ) ಹೊರಟೆವು. ಬೆಟ್ಟಕ್ಕೆ ಹೋಗುವಾಗೆಲ್ಲ ತೆಗೆದುಕೊಂಡು ಹೋಗುತ್ತಿದ್ದ ಚಿತ್ರಾನ್ನ, ಆಲೂಗಡ್ಡೆ ಪಲ್ಯ ಇರಲೇಬೇಕೆಂದು ನನ್ನ ಒತ್ತಾಸೆ.. ಅದರ ಜೊತೆಗೆ ಬೇರೆಲ್ಲ ತಿನಿಸನ್ನು ತೆಗೆದುಕೊಂಡು ಹೊರಟಿತು ನಮ್ಮ ಪಟಾಲಮ್ಮು. ದೊಡ್ಡಜಾಲ ಮುಟ್ಟಿದಾಗ, ನಮ್ಮ ಸಡಗರ, ಜೊತೆಗೆ ಊರಿನಲ್ಲಿದ್ದ ನಮ್ಮ ಹಿತೈಷಿ, ಹಾಗೂ ಅಭಿಮಾನಿಗಳ ಸಡಗರ... ಮಾತು ....ಮಾತು.. ಹಳೆಯ ನೆನಪುಗಳು... ಹೀಗೆ ಮೊದಲ ಹಂತ ಮುಗಿದು, ಈಶ್ವರನ ಪೂಜೆ ಮುಗಿಸಿ, ಆಹ್ವಾನ ಪತ್ರಿಕೆ ಹಂಚಿ, ಅಂತೂ ಊರು ಬಿಟ್ಟು ಬೆಟ್ಟ ಸೇರಿದೆವು... ಬೆಟ್ಟ ಹತ್ತಲು ನಮ್ಮಪ್ಪನ ಉತ್ಸಾಹ ಉತ್ತುಂಗದಲ್ಲಿತ್ತು...  ಹತ್ತಲು ನಮ್ಮ ಸಹಾಯ ತೆಗೆದುಕೊಂಡರೂ ಸಹ.... ಬೆಟ್ಟದ ಅಕ್ಕಯ್ಯಮ್ಮನ ಪೂಜೆ ಮುಗಿಸಿ... ಅಲ್ಲಿನ ಶಾಸ್ತ್ರಿಗಳೊಡನೆ ಒಂದಷ್ಟು ಹಳೆಯ ನೆನಪುಗಳನ್ನು ಹಂಚಿಕೊಂಡು, ತಂದ ಬುತ್ತಿಯನ್ನು ಖಾಲಿ ಮಾಡಿ....

ಇನ್ನು " ಶಾಮಣ್ಣನ ಶತಾಬ್ಧಿ ಸಂಭ್ರಮ"ದ ಹಿಂದಿನ ದಿನದ ಸಂಜೆ ನಾವು ಛತ್ರಕ್ಕೆ ಬಂದಾಗ ನಮ್ಮಪ್ಪ ಮೊಮ್ಮಕ್ಕಳ ಜೊತೆ ಸಂಭ್ರಮಿಸಿದ ಸಂದರ್ಭದಲ್ಲಿ... ನಡೆದ ಘಟನೆ.. ಮಕ್ಕಳ ಬಾಯಿಂದ ಕೇಳಿದ್ದು...

ಹಾರ ಹಿಡಿದು ನಿಂತಿದ್ದ ಎರಡು ಬಾಲಕಿಯರ ವಿಗ್ರಹವನ್ನು ಮೊಮ್ಮಕ್ಕಳು ತೋರಿಸಿ.. ನೋಡಿ ತಾತ ನಿಮ್ಮನ್ನ ಸ್ವಾಗತ್ಸಕ್ಕೆ ಹಾರ ಹಿಡ್ಕೊಂಡು ನಿಂತಿದ್ದಾರೆ... ಇದಕ್ಕೆ ನಮ್ಮಪ್ಪನ ಉತ್ತರ.. ಎಲ್ಲೋ ಸುಮ್ನೆ ನಿಂತಿದ್ದಾರೆ....... ನನಗೆ ಹಾರ ಹಾಕಲೇ ಇಲ್ಲ... ವಾವ್ ಶತಮಾನದ ಅಂಚಿನ ಶಾಮಣ್ಣನ ರಸಿಕತೆ. 

ಅಂದು ಶುರುವಾದ ಹೋಮ ಹವನ ಕಾರ್ಯಕ್ರಮಗಳು..  ಮಾರನೇ ದಿವಸವೂ ಮುಂದುವರಿದಾಗ ನಮ್ಮೆಲ್ಲರ... ಹಾಗೂ ಆಹ್ವಾನಿತರ ಪಾಲ್ಗೊಳ್ಳುವಿಕೆಯ ಸಂಭ್ರಮ  ವಿವರಿಸಲು ಪದಗಳೇ ಸಿಗುತ್ತಿಲ್ಲ...

ಅದರಲ್ಲೂ ಶಾಮಣ್ಣನಿಗೆ "ಮಾರ್ಜನ" ದ ಭಾಗವಂತೂ.. ಸ್ಮರಣೀಯ.   ಬಂದವರೆಲ್ಲರೂ... ನೂರೆಂಟು ಕಲಶದಿಂದ ಶಾಮಣ್ಣನ ತಲೆಯ ಮೇಲೆ,  ಜರಡಿಯ ಮೂಲಕ , ನೀರನ್ನು ಹಾಕುವಾಗಿನ ಉತ್ಸಾಹ.. ಆತುರ... ಸ್ವಲ್ಪ ನೂಕು ನುಗ್ಗಲಿಗೆ ಕಾರಣವಾದರೂ... ಎಲ್ಲರ ಸಂಯಮ ಹಾಗೂ ಹೊಂದಾಣಿಕೆ ಇಂದ ಎಲ್ಲವೂ ಸುಗಮವಾಗಿ ನೆರವೇರಿತು...


ನಂತರದ ಘಟ್ಟದಲ್ಲಿ ಬಂದವರೆಲ್ಲ ಶಾಮಣ್ಣನಿಗೆ ನಮಸ್ಕರಿಸಿ, ಗೌರವ ಕಾಣಿಕೆಗಳನ್ನು ಕೊಡುವಷ್ಟು ಹೊತ್ತು.. ನಮ್ಮಪ್ಪನ ಉತ್ಸಾಹ ಕೊಂಚವೂ ತಗ್ಗದೆ, ಎಲ್ಲರನ್ನೂ ಮಾತಾಡಿಸಿ, ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದ್ದು, ಅವರ ಸಂಕಲ್ಪ ಶಕ್ತಿಯ ದ್ಯೋತಕ.

ನನ್ನ ಮನಸ್ಸಿನ ಮೂಲೆಯಲ್ಲಿ ಹೇಗಾಗುತ್ತೋ ಎಂದು ಇದ್ದ ಆತಂಕ ತಾನೇ ತಾನಾಗಿ ಮರೆಯಾಗಿ, ಅಲ್ಲಿ ಧನ್ಯತಾಭಾವ ಆವರಿಸಿತ್ತು.

ನೂರಕ್ಕೆ 98 ಭಾಗ ನಾವು ಅಂದುಕೊಂಡಂತೆ ನಡೆಯಿತು... ಎರಡು ಭಾಗದ ಹಿನ್ನೆಡೆ ಎದ್ದು ಕಾಣಲಿಲ್ಲ... ಇದು ಸಾಧ್ಯವಾದದ್ದು ಶಾಮಣ್ಣನ ಪರಿವಾರದ, ಹಾಗೂ ಕೆಲ ಹಿತೈಷಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ.

ಶಾಮಣ್ಣನ ಪರಿವಾರದ ಬಹುತೇಕ ಸದಸ್ಯರು ಇದ್ದರೂ ನಮ್ಮಮ್ಮ ಇಲ್ಲದ ಕೊರಗು ನನಗೆ ಕಾಡಿತು, ಆದರೆ ವೇದಿಕೆಯೇ ಅವಳದು, ಹಿಂದಿನ ಶಕ್ತಿಯೂ ಅವಳೇ... ಚಿತ್ರ ರೂಪದಲ್ಲಿ ಇದ್ದಳು. ಈ ಕೊರಗು ನಮ್ಮಪ್ಪನನ್ನು ಕಾಡಿರಬಹುದು... ಅದು ಅಗೋಚರ.

ಈಗಲೂ ಕೆಲವರು ಸಿಕ್ಕಾಗ.. ಅಂದಿನ ದಿನದ ವಿಶೇಷವನ್ನು ನೆನೆಯುತ್ತಾರೆ... ನಾವು ನಿಮಿತ್ತ ಮಾತ್ರರು... ಅದು ನಮ್ಮಪ್ಪನ ಯೋಗಾ ಯೋಗ... ಹಾಗೂ ನಮ್ಮ ಭಾಗ್ಯ ಸಹ.

ಎಲ್ಲಕ್ಕೂ ಕೊನೆಯಂಬುದು ಇರಲೇಬೇಕಲ್ಲ... ಆ ಕೊನೆಯಿಂದಲೇ ಮತ್ತೊಂದು ಅಧ್ಯಾಯ ಶುರು... ಅದೇ ನಮ್ಮ ಈ ಸಂಭ್ರಮದ ಕೊನೆಯ ಸಭೆ... ಈ ಸಭೆಯಲ್ಲಿ ...ಬಂದಿದ್ದ... ರಾಶಿ ಉಡುಗೊರೆಗಳನ್ನು ನೋಡಿ, ಕಾರ್ಯಕ್ರಮದ ವಿಶ್ಲೇಷಣೆಯನ್ನು... ಅವರವರ ದೃಷ್ಟಿಕೋನದಲ್ಲಿ ವಿಮರ್ಶೆ ಮಾಡಿ, ಹಾಗೂ ಕೆಲವರು ಬರೆದಿದ್ದ ಅಭಿಪ್ರಾಯಗಳನ್ನು ಓದಿ... ಬಂದವರು ಬರದವರ ಬಗ್ಗೆ ಮಾತನಾಡಿ.. ಯಥಾಪ್ರಕಾರ ಊಟ ಮಾಡಿ , ಶಾಮಣ್ಣನ ಶತಾಬ್ದಿ ಸಂಭ್ರಮಕ್ಕೆ ಮಂಗಳ ಹಾಡಿದ್ದಾಯ್ತು.

ಶಾಮಣ್ಣನ ಆಶೀರ್ವಾದ ಎಲ್ಲ ಪರಿವಾರದವರಿಗೆ ಹಾಗೂ ಅವರ ಪ್ರಿಯರಿಗೆ ಸದಾ ಇರಲೆಂದು ಆಶಿಸುತ್ತಾ.... ಈ ಸಂಭ್ರಮದ ನೆನಪಿನ ಮೆರವಣಿಗೆಗೆ ಮಂಗಳ ಹಾಡುವೆ...

ನಮಸ್ಕಾರ












    

    

Comments

  1. ನಾಗೇಂದ್ರ ಬಾಬು15 October 2023 at 10:09

    ಇದೊಂದು ಅಪರೂಪದ ಸಂಭ್ರಮದ ಆಚರಣೆ, ಶತಕದ ಸಾಧನೆ (ವಯಸ್ಸಿನ) ಬಹಳ ವಿರಳ, ನಿಮ್ಮ ಕುಟುಂಬದ ಸದಸ್ಯರು ಈ ಅವಕಾಶವನ್ನು ಭರ್ಜರಿಯಾಗಿ ಆಚರಿಸಿ ರುವಿರಿ ಮತ್ತು ಸುಂದರವಾಗಿ ಬರವಣಿಗೆ ಮೂಲಕ ನಮ್ಮನ್ನು ಭಾಗಿ ಮಾಡಿದ್ದೀರಿ
    ನೀವು ಕೂಡ ಶತಕ ಬಾರಿಸಲಿ ಎಂದು ಬಯಸುತ್ತೇನೆ
    ಧನ್ಯವಾದಗಳು
    ಬಾಬು

    ReplyDelete
  2. ಶತಾಯುಷಿಗಳ ನೂರರ ಸಂಭ್ರಮ ಕಣ್ಣಿಗೆ ಕಟ್ಟಿದಂತಿತ್ತು. ಅದರ ಪೂರ್ವ ಸಿದ್ಧತೆ ಹಾಗೂ ಆಚರಿಸಿದ ರೀತಿ ಸಹ ವಿಶಿಷ್ಟ. ಶತಾಯುಷಿಗಳೇ ತುಂಬಿರುವ ನಿಮ್ಮ ಕುಟುಂಬದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರಲಿ. ನಿನ್ನ ನೂರರ ಸಂಭ್ರಮವನ್ನು ನನಗೂ ನೋಡುವ ಭಾಗ್ಯ ಸಿಗಲಿ..ನಿಮ್ಮ ಸೋದರಮಾವನಿಗೆ ನನ್ನ ಗೌರವಪೂರ್ವಕ ನಮಸ್ಕಾರ
    ಗಳು.

    ReplyDelete
  3. ಎಷ್ಟೊಂದು ರೀತಿಯಲ್ಲಿ ಆ ಕಾರ್ಯಕ್ರಮ ನಿಯೋಜಿಸಿದ್ದೀರಾ .ನಿಮ್ಮ ಕುಟುಂಬದ ಬಗ್ಗೆ ಚೆನ್ನಾಗಿ
    ವಿವರಿಸಿದ್ದೀರ
    ಶತಾಯುಷಿ ಗಳ ಸಂಭ್ರಮ💐💐💐

    ReplyDelete
  4. ನಿಮ್ಮ ಮಾವ, ತಂದೆಯ ದೀರ್ಘ ಆರೋಗ್ಯ, ಆಯಸ್ಸು ಕಂಡು ಸಂತೋಷವಾಯಿತು. ಪ್ರಸ್ತುತ ಕಾಲಘಟ್ಟದಲ್ಲಿ ಹಿರಿಯರೆಂದರೆ ಮೂಗು ಮುರಿಯುವ, ಅಸಹ್ಯಿಸಿಕೊಳ್ಳುವವರು ಖಂಡಿತಾ ಓದಲೇಬೇಕಾದ ಲೇಖನ.

    ಮಿಗಿಲಾಗಿ ಅವರುಗಳ ಜನ್ನದಿನವನ್ನು ಸಂಭ್ರಮ,ಸಡಗರ,ಆಸಕ್ತಿಯಿಂದ ಆಚರಿಸಿದ ನಿಮ್ಮ ಪರಿವಾರದವರೆಲ್ಲರಿಗೂ ನಲ್ಮೆಯ ನಮನಗಳು.

    ಲೇಖನಕ್ಕೆ ಪೂರಕವಾದ. ಚಿತ್ರಗಳು ಶೋಭೆ ಹೆಚ್ವಿಸಿವೆ.

    ನಿಮ್ಮ ಕುಟುಂಬದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಲಿ ಹಾಗೂ ಅದು ಇತರರಿಗೂ ಮಾದರಿಯಾಗಿ ಸಮಾಜದಲ್ಲಿ ಈ ಸಂಭ್ರಮ, ಸೊಗಡು ಮತ್ತಷ್ಟು ಪಸರಿಸಲಿ ಎಂಬ ಹಾರೈಕೆ ಯೊಂದಿಗೆ.

    ನಿಮ್ಮ ವಿಶ್ವಾಸಿ,

    ಗುರುಪ್ರಸನ್ನ,
    ಚಿಂತಾಮಣಿ.

    ReplyDelete
  5. Nice explanation about celebration and your family

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ