ದೇವಸ್ಥಾನದ ಊಟ - ಪ್ರಸಾದ
ಹೋದ ಭಾನುವಾರ, ಕಲ್ಯಾಣಿ ತೋಟದ ರಾಯರ ಮಠದಲ್ಲಿ ಒಂದು ಸೀಮಂತ ಕಾರ್ಯಕ್ರಮ ಇತ್ತು... ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮದಲ್ಲಿ, ಗಂಡಸರಿಗೆ ಪ್ರಾಮುಖ್ಯತೆಯೇ ಇಲ್ಲ, ಊಟಕ್ಕೆ ಮಾತ್ರ ಲೆಕ್ಕ. ನನಗೆ ತುಂಬಾ ಬೇಕಾದವರಾದ್ದರಿಂದ ನಾನು ಊಟಕ್ಕೇ ಹೋಗಿದ್ದೆ. ದೇವಸ್ಥಾನ, ರಾಯರ ಮಠ ಇಂಥ ಜಾಗಗಳಲ್ಲಿ ನೆಲದ ಮೇಲೆ, ಬಾಳೆ ಎಲೆ ಊಟ , ಹಾಗೂ ಉಡುಗೆ ತೊಡಿಗೆಯಲ್ಲಿ ಒಂದಷ್ಟು ಶಿಸ್ತು ಇರುತ್ತದೆ. ಆದರೆ ಇಲ್ಲಿ ಎರಡಕ್ಕೂ ಪ್ರಾಮುಖ್ಯತೆ ಇರಲಿಲ್ಲ... ಎಲ್ಲರಿಗೂ ಟೇಬಲ್ ಮೇಲೆ ಊಟ, ಅವರಿಷ್ಟ ಬಂದ ಉಡುಗೆ. ಸ್ವಲ್ಪ ಆಶ್ಚರ್ಯ ಎನಿಸಿತು.. ಆದರೆ ಜಾಗ ಮಾಡಿಕೊಂಡು ಕುಳಿತುಕೊಳ್ಳುವ ಕಲೆ ಮಾತ್ರ ಯಾವಾಗಿನಂತೆ ಇತ್ತು. ಊಟ ಸೊಗಸಾಗಿತ್ತು... ಹಸಿವೆಯೂ ಜೊತೆಗೂಡಿತ್ತು... ಹೇಳಬೇಕೇ ಕಂಠಪೂರ್ತಿ ಉಂಡಿದ್ದಾಯ್ತು. ಮಾತಿನ ಮಧ್ಯೆ ನನ್ನ ಬ್ಲಾಗ್ ಬರವಣಿಗೆಯ ವಿಷಯ ಬಂತು... ಇಂದಿನ ಕಾರ್ಯಕ್ರಮದ ಬಗ್ಗೆ ಬ್ಲಾಗುಂಟಾ? ಎಂಬ ಪ್ರಶ್ನೆಯು ಎದುರಾಯಿತು.. ಆಗಿನ ನನ್ನ ಉತ್ತರ ...ಯಾವ ಸ್ಪೂರ್ತಿಯೂ ಇಲ್ಲ... ಆ ಕಾರ್ಯಕ್ರಮದ ಬಗ್ಗೆ ತಳಕು ಹಾಕುವ ನನ್ನ ಅನುಭವ / ನೆನಪು ಯಾವುದು ಗೋಚರಿಸುತ್ತಿಲ್ಲ .... ಆದರೆ ತಲೆಯಲ್ಲಿ ಹುಳಕೊರೆಯಿತು.... ದಾರಿಯೂ ಕಾಣಿಸಿತು ಹಾಗಾಗಿ ಈ ಲೇಖನ...
ನನ್ನ ನೆನಪಿನಾಳದಿಂದ ಕೆದಕಿದಾಗ... ಮೊದಲ ದೇವಸ್ಥಾನದ ಸಾರ್ವಜನಿಕ ಊಟ ಮಾಡಿದ್ದು ಜಾಲದ ಅಕ್ಕಯ್ಯಮ್ಮನ ಬೆಟ್ಟದ ತಪ್ಪಲಿನಲ್ಲಿ ನಡೆದ ಪರ್ವದಲ್ಲಿ. ನಮ್ಮಪ್ಪನ ಜೊತೆಯಲ್ಲಿ ಊಟಕ್ಕೆ ಕೂತಿದ್ದೆ... ವಯಸ್ಸು ಐದಾರು ವರ್ಷ ಇರಬಹುದು... ಹಾಕಿಕೊಂಡಿದ್ದದ್ದು ಲಾಡಿಯಿಂದ ಕಟ್ಟುವ ಚಡ್ಡಿ, ಮೇಲೊಂದು ಶರ್ಟು... ಅಷ್ಟೇ ಆಗಿನ ಉಡುಗೆ.... ಭರ್ಜರಿಯಾಗಿ ಉಂಡಿರಬೇಕು... ಕಟ್ಟಿದ್ದ ಲಾಡಿ ಬಿಗಿಯಾಗಿ... ಹೊಟ್ಟೆಯನ್ನು ಕುಯ್ಯುತ್ತಿತ್ತು... ಊಟದ ಮಧ್ಯೆ ಅಪ್ಪನಿಗೆ ನನ್ನ ಕಷ್ಟ ಹೇಳಿಕೊಂಡೆ, ಅವರು ಎಡಗೈಯಿಂದ ನನ್ನ ಲಾಡಿಯನ್ನು ಎಳೆಯಲು ಹೋಗಿ ಕಗ್ಗಂಟಾಯಿತು... ನನಗೆ ಅಳು... ಏನು ತೊಚಿತೋ, ನಮ್ಮಪ್ಪ ಲಾಡಿಯನ್ನೇ ಜೋರಾಗಿ ಎಳೆದು ಕಿತ್ತರು.... ಅಬ್ಬ... ಆ ಕಿರಿಕಿರಿಯಿಂದ ಮುಕ್ತಿ... ಚಡ್ಡಿಯನ್ನು ಎಡಗೈಲಿ ಹಿಡಿದು ಓಡಾಡಿದ್ದು..ಇದರ ಜೊತೆಗೆ ಪಾಯಸದ ರುಚಿಯೂ ಚೆನ್ನಾಗಿ ನೆನಪಿದೆ.
ದೇವಸ್ಥಾನದ ಊಟಗಳು ಸಾಮಾನ್ಯವಾಗಿ ಚಂದ... ಅದರಲ್ಲೂ.. ಊಟದ ತನಕ ಏನೂ ತಿನ್ನದೇ ಹಸಿದಿರುವ ಕಾರಣಕ್ಕೆ... ತಿಂದದ್ದು ನಾಲಿಗೆಗೂ ರುಚಿ, ಬಿಸಿಬಿಸಿಯಾಗಿ ತಿನ್ನುವುದರಿಂದ ಆರೋಗ್ಯವೂ ಸಹ. ಸಾಮಾನ್ಯವಾಗಿ ತಿನ್ನುವುದಕ್ಕಿಂತ ಒಂದು ಕೈ ಹೆಚ್ಚು ಅನ್ನುವ ಅನುಭವ ನನ್ನದು. ಅಲ್ಲಿ ಊಟ ಮಾಡುವುದು ಒಂದು ಕಲೆ... ಟ್ರೆಕ್ಕಿಂಗ್ ಹೋದಾಗ, ದೇವಸ್ಥಾನವೇನಾದರೂ ನಮ್ಮ ದಾರಿಯಲ್ಲಿ ಇದ್ದರೆ, ಅಲ್ಲಿ ಊಟ ಮಾಡುವುದೂ ಕಾರ್ಯಕ್ರಮದ ಒಂದು ಭಾಗ... ಇಂಥ ಒಂದು ಸಮಯದಲ್ಲಿ ನಮ್ಮ ಎದುರಿಗೆ ಕುಳಿತಿದ್ದ ಆಜಾನುಬಾಹು ವ್ಯಕ್ತಿ... ತಲೆ ತುಂಬ ಕೂದಲು , ಜುಟ್ಟು, ಕೈಗೆ ಚಿನ್ನಾಭರಣಗಳು, ನೋಡಿದರೆ ಗೌರವ ಉಕ್ಕುವ ಮುಖಚರ್ಯೆ. ಎಲ್ಲರಿಗೂ ಊಟ ಬಡಿಸಿದ್ದಾರೆ... ಎಲ್ಲರ ಎಲೆಯ ಮೇಲೂ ಒಂದೊಂದು ಅನ್ನದ ಬೆಟ್ಟ... ನನ್ನ ಮುಂದೆ ಕುಳಿತ ವ್ಯಕ್ತಿಯ ಎಲೆಯ ಮೇಲೂ ಆಕಾರಕ್ಕೆ ತಕ್ಕಂಥ ಅನ್ನದ ಬೆಟ್ಟ. ಅನ್ನವು ಬಿಸಿ, ಮೇಲೆ ಬಡಿಸಿದ ಸಾರೂ ಬಿಸಿ... ಅನ್ನ ಸಾರನ್ನು ಎಲೆಯ ಮೇಲೆ ಒಂದು ಕಡೆ ನಿಲ್ಲಿಸುವುದೇ ಒಂದು ಸಾಹಸ... ಆದರೆ ನಮ್ಮ ಮುಂದಿದ್ದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಅನ್ನ ಸಾರನ್ನು ತುಪ್ಪದ ಸಮೇತ ಕಲೆಸಿ, ಮಧ್ಯ ಬೆರಳು ಮತ್ತು ಉಂಗುರದ ಬೆರಳನ್ನು ಉಪಯೋಗಿಸಿ, ಅನ್ನ ಸಾರನ್ನು ಕೈ ತುಂಬ ಹೆಕ್ಕಿ ತಿಂದದ್ದನ್ನು ನೋಡಿ ನಾನು ಬೆಕ್ಕಸ ಬೆರ ಗಾದೆ ...ಜೊತೆಗೆ... ಮೆಚ್ಚುಗೆಯು ಸಹ...
ಹೊರನಾಡಿನ ಅನ್ನಪೂರ್ಣೇಶ್ವರಿಯ ದೇವಸ್ಥಾನದ ನಮ್ಮ ಮೊದಲ ಅನುಭವ... ಆಗಿನ್ನು ನದಿಗೆ ಸೇತುವೆಯೂ ಇರಲಿಲ್ಲ.. ನಾವು ಹೋದಾಗ ಬೇಸಿಗೆ, ಹಾಗಾಗಿ ನದಿಯಲ್ಲಿ ನೀರಿನ ಹರಿವು ಕಡಿಮೆಯಿತ್ತು... ನದಿಯಲ್ಲಿ ಈಜಾಡಿ ಕಾಲ್ನಡಿಗೆಯಲ್ಲಿ ಹೊರನಾಡನ್ನು ಮುಟ್ಟಿದಾಗ ಸುಮಾರು ಸಂಜೆ ಆಗಿತ್ತು... ವಾವ್... ದೇವಸ್ಥಾನದವರ ಆತಿಥ್ಯ ಅಪಾರ.... ಸಮಯಕ್ಕೆ ಸರಿಯಾಗಿ ಊಟ ತಿಂಡಿ, ರಾತ್ರಿ ಮಲಗಲು ಹಾಸಿಗೆ, ಅಂದಿನ ಅನುಭವ ವಿಶಿಷ್ಟವಾಗಿತ್ತು... ನಾನೆಂದೂ ಕಂಡಿರದಂತಹದ್ದು.... ನಾಗರೀಕ ಸೌಲಭ್ಯಗಳು ಹೆಚ್ಚಾಗಿ ಸ್ವಲ್ಪಮಟ್ಟಿಗೆ ವಾಣಿಜ್ಯೀಕರಣಗೊಂಡರೂ... ಈಗಲೂ ಅಲ್ಲಿನ ಅನ್ನಪೂರ್ಣೇಶ್ವರಿಯ ಪ್ರಸಾದ ಒಂದು ಹೆಗ್ಗಳಿಕೆ.
ಶಹಾಬಾದಿನಲ್ಲಿದ್ದಾಗ, ಬ್ರಹ್ಮಚಾರಿಗಳ ಗುಂಪು ಹತ್ತಿರದ ಮಳಖೇಡ ದೇವಸ್ಥಾನಕ್ಕೆ ಸೈಕಲ್ಲಿನಲ್ಲಿ ಹೋದ ಅನುಭವ, ಅಲ್ಲಿ ರಾತ್ರಿ ಮಠದ ಊಟ( ಆಗಿನ ನಮ್ಮ ತಂಡದ ಲೀಡರ್ ಕೆ ಎಸ್ ಶೇಷಗಿರಿ... ಮಠದವರ ಹತ್ತಿರ... ನಾವು ಎಂಟು ಜನ ಬಂದಿದ್ದೀವಿ ನಮಗೆ ಊಟ ಬೇಕು.. ಆಗುತ್ತಾ... ಅಂತ ಕೇಳಿ) ಸೊಗಸಾಗಿತ್ತು.
ನಾನಿನ್ನು ತುಂಬಾ ಚಿಕ್ಕವ... ಎರಡನೆಯ ಅಕ್ಕ ಭಾವ ಮಾಗಡಿಯಲ್ಲಿ ಇದ್ದರು... ಹಾಗಾಗಿ ಮಾಗಡಿ ಜಾತ್ರೆಯ ಊಟಕ್ಕೆ ಹೋಗಿದ್ದು.... ಊಟಕ್ಕಿಂತ ಹೆಚ್ಚಾಗಿ ನನಗೆ ನೀರು ಬಡಿಸುತ್ತಿದ್ದವರು ಹೇಳುತ್ತಿದ್ದ.." ಸೀತಾಳ ಪಾತಾಳ ಪಚ್ಚ ಕರ್ಪೂರ ಗಂಗೋದಕಾ..." ತುಂಬ ಪ್ರಭಾವ ಬೀರಿದ್ದು.. ಬಹಳಷ್ಟು ದಿನ ನಾನು ನೀರು ಬಡಿಸುವಾಗ ಇದನ್ನು ಹೇಳುತ್ತಿದ್ದೆ. ಇಂಥ ವಿಶೇಷ ದಿನಗಳ ಊಟದ ಮಧ್ಯದಲ್ಲಿ.. ಸಿಹಿ ತಿನ್ನುವ ಸಮಯದಲ್ಲಿ ಯಾರಾದರೂ ದೇವರ ನಾಮವನ್ನು ಹೇಳುವುದು ಒಂದು ರೂಡಿ... ಹಾಡಿನ ನಂತರ ಹೇಳುವ " ಭೋಜನಕಾಲೇ ಸೀತಾ ಕಾಂತ ಸ್ಮರಣೆ" ಅಂದಾಗ ಎಲ್ಲರೂ ಜೈ ಜೈ ರಾಮ್ ಎಂದು ದನಿಗೂಡಿಸುವ ಆಚರಣೆಯೂ ನೆನಪಿನಲ್ಲಿಡುವಂತದ್ದು.
ಬಹುಶಃ ಮಂತ್ರಾಲಯದಲ್ಲಿ ಇರಬೇಕು.. ಊಟದ ಸಮಯದಲ್ಲಿ ಒಬ್ಬ ವಿಧವೆ ಅಜ್ಜಿ.. ಮಜ್ಜಿಗೆ ಹುಳಿ ಬಂದಾಗ " ಹೋಳು ಹೋಳಂಥದ್ದು ಹಾಕೋ ಮರಿ... ನಾವು ಒಪ್ಪತ್ತು ತಿನ್ನೋ ಮುಂಡೆ ಮಕ್ಕಳು" ಅಂತ ಕೇಳಿದಾಗ ನನಗೆ ನಗು... ಜೊತೆ ಜೊತೆಗೆ ಇನ್ನೊಂದು ಯೋಚನೆ.... ಮಾಡುವ ಒಂದು ಊಟ.... ಜೊತೆಗೆ ಬಡತನವೂ ಸೇರಿದರೆ... ಇಂಥ ಯಾಚನೆಗೆ ದಾರಿ ಮಾಡಿಕೊಡುತ್ತದೇನೋ.... ಮನಸ್ಸಿಗೆ ನೋವು.
ಅದೊಂದು ಚಾತುರ್ಮಾಸದ ದ್ವಾದಶಿಯ ದಿನ... ನಾವು ಉಡುಪಿಯಲ್ಲಿದ್ದೆವು.... ಉಡುಪಿಯ ಮಠದಲ್ಲಿ ದ್ವಾದಶಿಯ ಊಟ ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು(?)... ಚಾತುರ್ಮಾಸದ ಅಡುಗೆಯ ವಿಶೇಷ ಎಂದರೆ... ಕೆಲ ಪದಾರ್ಥಗಳು ಆ ಸಮಯದಲ್ಲಿ ವರ್ಜ್ಯ... ಉಪಯೋಗಿಸುವುದೇ ಇಲ್ಲ... ಅಂದು ಮೆಣಸಿನಕಾಯಿ ಇಲ್ಲದ ಅಡಿಗೆ... ಖಾರಕ್ಕೆ ಉಪಯೋಗಿಸಿದ್ದು ಕಾಳು ಮೆಣಸು... ಬೇರೆ ರೀತಿಯದೆ ಖಾರ... ರುಚಿಯು ಸಹ ಬೇರೆಯೇ.... ವಿಶಿಷ್ಟ ಊಟ ಮಾಡಿದ ಅನುಭವ... ಸಮಯ ಮತ್ತು ರುಚಿ ಎರಡೂ.
ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಅಡಿಗೆ ಮತ್ತು ಊಟದ ಮನೆಯ ಶುಚಿತ್ವ ಶ್ಲಾಘನೀಯ.
ಮದುವೆಯಾದ ಹೊಸದರಲ್ಲಿ ನಮ್ಮ ಮಾವನ ಮನೆಯ ಊರ ದೇವರು ಹೂವಿನ ಕಟ್ಟೆ ರಂಗನಾಥನ ಜಾತ್ರೆ... ಇನ್ನೂ ಅಲ್ಲಿ ವಿದ್ಯುತ್ ಬಂದಿರಲಿಲ್ಲ... ನೀರು ಸಹ... ಕೆಳಗಡೆಯ ಬಾವಿಯಿಂದ ತರಬೇಕಿತ್ತು.... ನಾವು ಜಾತ್ರೆಯ ಹಿಂದಿನ ದಿನ ರಾತ್ರಿ ಜಾಗ ತಲುಪಿದೆವು... ಅಂದಿನ ರಾತ್ರಿಊಟ ಮಾಡಿದ ಹಲಸಿನ ಕಾಯಿಯ ಹುಳಿ ಹಾಗೂ ಹೂರಣದ ಒಬ್ಬಟ್ಟು... ಈಗ ತಿಂದಷ್ಟು ಸವಿ. ಪ್ರಾಯಶಃ ಅಂದಿನ ಹಿರಿಯ ತಲೆಗಳ ಕೈಚಳಕ ಇರಬಹುದು. ಈಗಲೂ ಊಟವಿದೆ, ನಾವುಗಳೆಲ್ಲ ಬಡಿಸುವುದೂ ಇದೆ, ಆದರೆ ಅಂದಿನ ರುಚಿ.....
ನನ್ನ ಮೇಲೆ ವಿಶೇಷ ಪ್ರಭಾವ ಬೀರಿದ ಊಟ ಇದ್ದರೆ ಅದು ಘಾಣಗಾಪುರದ ಮಧುಕರಿ ಪ್ರಸಾದ. ಮಧ್ಯಾಹ್ನ 12 ಗಂಟೆಗೆ ಬಹಳಷ್ಟು ಮನೆಗಳ ಮುಂದೆ... ಪ್ರಸಾದದ ರೂಪದಲ್ಲಿ ಅವರ ಕೈಲಾದಷ್ಟು... ಅವರಿಗೆ ಅನುಕೂಲ ವಾದ ಪದಾರ್ಥವನ್ನು ಬಂದವರಿಗೆ ಕೊಡುವುದು... ಇದನ್ನು ನಾವುಗಳೂ ಮಾಡಬಹುದು... ಮುಂದಿನ ಭಾಗ...ನಾವೂ ಸಹ ಹೀಗೆ ಕೊಟ್ಟ ಪ್ರಸಾದ ಭಿಕ್ಷೆಯನ್ನು ಸಂಗ್ರಹಿಸಿ ತಿನ್ನುವುದು....ದೇವರೆದುರು ಸಮಾನತೆ. ಪಾಂಡುರಂಗ ಪ್ರತಿದಿನವೂ ಭಿಕ್ಷಕ್ಕೆ ಬರುತ್ತಾನೆ ...ಯಾವ ರೂಪದಲ್ಲಾದರೂ ಸರಿ...ಎಂಬ ನಂಬಿಕೆ...ಹಾಗಾಗಿ ಯಾವ ಪ್ರಾಣಿ ಬಂದರೂ ಅದೇ ಪ್ರಸಾದವನ್ನೇ ಕೊಡುವ ಪದ್ಧತಿ.
ಹಳ್ಳಿಯಲ್ಲಿದ್ದಾಗ ಅಕ್ಕಯ್ಯಮ್ಮನ ಬೆಟ್ಟಕ್ಕೆ ಮಂಗಳವಾರ ಅಥವಾ ಶುಕ್ರವಾರ ಹೋಗುವುದು..ಒಂದು ಸಂಭ್ರಮ. ದೊಡ್ಡ ಹಿತ್ತಾಳೆ ಡಬ್ಬಿಯಲ್ಲಿ ಚಿತ್ರಾನ್ನ, ಆಲೂಗಡ್ಡೆ ಪಲ್ಯ, 5, 6 ಜನ ತಿಂದರೂ ಕರಗದ ಅನುಭವ.
ಈಚೆಗೆ ವಾಟ್ಸಪ್ ನಲ್ಲಿ ಓಡಾಡಿದ ಒಂದು ಚಿತ್ರ... ಅಮೆರಿಕದಲ್ಲಿ ರಾಯರ ಆರಾಧನೆ ಸಮಯದಲ್ಲಿ, ಬಾಳೆ ಎಲೆಯ ಊಟ ಮಾಡಿದ್ದು... ದೇಶ ಯಾವುದಾದರೇನು ಮನಸ್ಸು ಮಾತ್ರ ಅದೇ.... ದೇವಸ್ಥಾನದ ಊಟಕ್ಕೆ ಒಂದಷ್ಟು ಭಕ್ತಿ ಪೂರ್ವಕ ಪ್ರಾಮುಖ್ಯತೆ ಇದ್ದೇ ಇದೆ.
ಊಟದ ವಿಚಾರದ ನಂತರ ದೇವಸ್ಥಾನದ ಪ್ರಸಾದ...
ನನ್ನ ಊರಿನ ಭಜನೆಗೆ ಮಾಡುತ್ತಿದ್ದ ರಸಾಯನ...ನಾಟಿ ಬಾಳೆ ಹಣ್ಣು..ಸ್ವಲ್ಪ ಹುಳಿ..ಅದಕ್ಕೆ ಬೆಲ್ಲ, ಕಾಯಿ, ಕೆಲ ಸಲ ಏಲಕ್ಕಿ...ಅದರದೇ ಸ್ವಾದ...ನಾವು ಆಸೆಯಿಂದ ಕಾಯುತ್ತಿದ್ದದ್ದು.
ತುಂಬಾ ಇಷ್ಟವಾದ ಪ್ರಸಾದ ಅಂದರೆ ತಿರುಪತಿಯ ಲಾಡು...ಅವಕಾಶ ಸಿಕ್ಕರೆ ಒಂದು ಲಾಡು ಪೂರಾ ತಿನ್ನುವ ಅಭಿಲಾಷೆ ಇಂದಿಗೂ ಇದೆ....ಅಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದ...ಶ್ರೀನಿವಾಸ ಮೂರ್ತಿ...ಯಾವಾಗಲೂ ನನಗಾಗಿ ಒಂದು ಪೂರ್ತಾ ಲಾಡು ಕಾದಿರುಸುತ್ತಿದ್ದ.
ಸಜ್ಜನರಾವ್ ಸರ್ಕಲ್ ಬಳಿ ಇರುವ ಸತ್ಯನಾರಾಯಣ ದೇವಸ್ಥಾನದ ಪ್ರಸಾದ ಹಾಗೂ ಸೌತಡ್ಕ ಗಣಪತಿಯ ಅವಲಕ್ಕಿ ಪಂಚಕಜ್ಜಾಯ ನನಗೆ ತುಂಬಾ ಪ್ರಿಯ.
ಉಜ್ಜಯಿನಿಯ ಕಾಲಭೈರವ ದೇವಸ್ಥಾನದ ಮಧ್ಯದ ಪ್ರಸಾದ ಕೆಲವರಿಗೆ ಸಂಕೋಚ, ಮುಜುಗರ, ಆದರೆ ಕೆಲವರಿಗೆ ಭಕ್ತಿಯ ಭಾವ...ಲೋಕೋ ವಿಭಿನ್ನ ರುಚಿಃ.
ಧನುರ್ಮಾಸದ ಹುಗ್ಗಿಯ ಪ್ರಸಾದ ಬಹುತೇಕ ದೇವಸ್ಥಾನದಲ್ಲೂ ಇದ್ದು...ಅದು ಸುಗ್ಗಿ.
ಶ್ರೀರಂಗಪಟ್ಟಣದ ಆದಿರಂಗ, ಶಿವನಸಮುದ್ರದ ಮಧ್ಯ ರಂಗ ಹಾಗೂ ಶ್ರೀರಂಗಂನ ಅಂತ್ಯ ರಂಗ ..ಮೂವರೂ ರಂಗಂದಿರ ದರುಶನ ಒಂದೇ ದಿನ ಮಾಡಿದರೆ ತುಂಬಾ ಒಳ್ಳೆಯದು ಅಂತ ಪ್ರತೀತಿ. ಧನುರ್ಮಾಸದ ಒಂದು ದಿನ ನಮ್ಮ ಒಂದು ಆತ್ಮೀಯ ಗುಂಪು ಬೆಳಿಗ್ಗೆ 5.30 ಕ್ಕೆ ಶ್ರೀರಂಗಪಟ್ಟಣದಿಂದ ಪ್ರಾರಂಭಿಸಿ, ಮಧ್ಯ ರಂಗ ದರ್ಶನಮಾಡಿ...ಪ್ರಯಾಣ ಮಾಡೀ...ಮಾಡಿ ಸಂಜೆ ಸುಮಾರು 7 ಗಂಟೆಗೆ ಶ್ರೀರಂಗಂ ತಲುಪಿ ಅಲ್ಲಿನ ರಂಗನಾಥ ದರ್ಶನ ಮಾಡಿ ಹೊರ ಬರುವಾಗ ಕೊಟ್ಟ ಪ್ರಸಾದ..ಕಜ್ಜಾಯದ ರುಚಿ ಅಮೋಘ. ಮತ್ತಷ್ಟು ಕಜ್ಜಾಯ ಕೊಂಡು ತಿಂದ ಖುಷಿ ಅವಿಸ್ಮರಣೀಯ.
ಈಶಾವಾಸ್ಯೋಪನಿಷತ್ ನಲ್ಲಿ ಹೇಳಿರುವಂತೆ " ತೇನ ತ್ಯಕ್ತೇನ ಭುಂಜಿತಃ" ... ನಿನಗಾಗಿ ದೇವರು ಏನು ನಿಗದಿಪಡಿಸಿದ್ದಾನೆ, ಅದನ್ನು ತಿನ್ನು.... ಸಂತೋಷಪಡು... ಹಾಗೇ " ಅನ್ನದಗುಳಿನ ಮೇಲೆ ತಿನ್ನುವರ ಹೆಸರು"......
ನಾವು ತಿನ್ನುವ ಎಲ್ಲ ಸಮಯದ ಪದಾರ್ಥಗಳು ನಮಗಾಗಿ ಮೀಸಲಿಟ್ಟದ್ದು... ಅದೇ ದೇವರ ಪ್ರಸಾದ, ದೇವಸ್ಥಾನದಲ್ಲೇ ಆಗಬೇಕಿಲ್ಲ... ಅಲ್ಲವೇ?
ನಮಸ್ಕಾರ. ...
ಪ್ರಸಾದದ ಸವಿರುಚಿಯನ್ನೇ ಉಣಿಸಿದ್ದೀರಿ.
ReplyDeleteನೆನ್ನೆ ತಾನೆ ಉಜ್ಜೈನಿ ಕಾಲ ಬೈರವ ನ ದರ್ಶನ ಪಡೆದು ಮದ್ಯ ಅಭಿಷೇಕದ ಬಗ್ಗೆ ತಿಳಿಯಿತು ಅದರೆ ಪ್ರಸಾದ ಕೂಡ ಇದೆ ಎಂದು ಗೊತ್ತಿರಲಿಲ್ಲ, ದೇವಸ್ಥಾನದ ಊಟದ ವಿಷಯದಲ್ಲಿ ದಕ್ಷಿಣ ಭಾರತ ಅದರಲ್ಲೂ ಮುಖ್ಯವಾಗಿ ಕರ್ನಾಟಕ ಮತ್ತು ತಿರುಪತಿ ಅದ್ವಿತೀಯ...ನಾನು ಕೂಡ ತಿರುಪತಿ ಲಾಡ್ ಪ್ರೇಮಿ...ಪ್ರಸಾದ ಹಾಗೂ ಊಟದ ಬಗ್ಗೆ ರುಚಿಕರವಾದ ಬರಹ
ReplyDeleteಧನ್ಯವಾದಗಳು
ಬಾಬು
Sooperb chikkappa
ReplyDeleteನಾವೇ ಸವಿದಷ್ಟು ಸಂತೋಷವಾಯಿತು ಧನ್ಯವಾದಗಳು.
ReplyDeleteSuper narration sir ..
ReplyDeleteSuper
ReplyDeleteವಿವಿಧ ದೇವಾಲಯಗಳು, ಜಾತ್ರೆ, ಸಮಾರಾಧನೆಗಳಲ್ಲಿ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿಗಳಲ್ಲಿ ಮಾಡುವ ವಿಧ ವಿಧದ ಖಾದ್ಯಗಳಿಲ್ಲದೆ ಮಿತಭೋಜನವಿದ್ದರೂ, ಹಸಿವಿಂದಲೋ, ಅಥವಾ ಸ್ಥಳಮಹಿಮೆಯಿಂದಲೋ ಭೋಜನ ರುಚಿಸಿ ಸ್ವಲ್ಪ ಹೆಚ್ಚಾಗೇ ಸೇವಿಸುತ್ತೇವೆಂಬುದು ಸತ್ಯ. ಎಲ್ಲಾ ತರಹದ ಊಟಗಳ ಪರಿಚಯವನ್ನು ಅಕ್ಷರ ರೂಪದಲ್ಲೇ ಮಾಡಿಸಿ, ಬಾಯಿ ಚಪ್ಪರಿಸಿ, ತೇಗು ಬರಿಸಿದ್ದೀರಿ. ಧನ್ಯವಾದಗಳು.
ReplyDeleteಆದರೆ ನನಗೆ ಹಬ್ಬ ಜಾತ್ಗ್ರೆಗಳ ಊಟಕ್ಕಿಂತ, ತಿಥಿ, ಶ್ರಾದ್ಧದ ದಿನಗಳ ಊಟವೇ ಅಚ್ಚುಮೆಚ್ಚು. ಕಜ್ಜಾಯ,ಉದ್ದಿನವಡೆ,ಸಜ್ಜಪ್ಪ,ಸುಕ್ಕಿನುಂಡೆ, ಹೆಸರುಬೇಳೆ ಪಾಯಸ, ಗೆಣಸಿನ ತೊವ್ವೆ, ಬಾಳೆಕಾಯಿಯ ಪಲ್ಯ ಇತ್ಸಾದಿಗಳ ಸವಿಯೇ ಸವಿ.
ವಿಶ್ವಾಸಿ,
ಗುರುಪ್ರಸನ್ನ,
ಚಿಂತಾಮಣಿ
ವಿವಿಧ ಊಟ, ಪ್ರಸಾದಗಳ ವೈವಿಧ್ಯತೆಯ ಜೊತೆ ಜೊತೆಯಲ್ಲೇ ದೇವರ, ದೇವಾಲಯಗಳ, ಸ್ಥಳಗಳ ಪರಿಚಯವನ್ನೂ ಮಾಡಿಸಿ, (ನಾವು ಅಲ್ಲಿ ಭೇಟಿ ನೀಢಿದ್ದರೆ ಅದರ ನೆನಪು ಬರುವಂತೆ) ಅವುಗಳ ಸವಿದಂತೆ ಚಪ್ಪರಿಸುತ್ತಾ ಚಿತ್ರ ಕಣ್ಣಮುಂದೆ ಕಟ್ಟುವಂತಿದೆ ನಿಮ್ಮ ಲೇಖನ. ಧನ್ಯವಾದಗಳು.
ReplyDelete