ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು
ಹಣಕಾಸಿನ ಕಷ್ಟ, ದೈಹಿಕ ಕಷ್ಟ ಇದಕ್ಕೆ ಪರಿಹಾರ ಹುಡುಕುವುದು ಅಷ್ಟು ಕಷ್ಟವಲ್ಲ... ಆದರೆ ಮಾನಸಿಕ ಕಷ್ಟಕ್ಕೆ ಪರಿಹಾರ ಅಷ್ಟು ಸುಲಭವಲ್ಲ... ಇಂಥ ಸಮಯದಲ್ಲಿ ಎಲ್ಲಾ ವೈರುಧ್ಯಗಳೊಡನೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ..
ಒಂದು ದಶಕದ ಹಿಂದಿನ ಮಾತು... ನನಗೂ ಹೀಗೆ ಅನಿಸಿತ್ತು.... ಒಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು.. ನೆರೆದಿದ್ದ ಒಂದಷ್ಟು ಜನರ ಜೊತೆ ಹರಟೆ ಹೊಡೆದು ಕೊಟ್ಟ ಸಿಹಿಯನ್ನು ತಿಂದು... ಎಲ್ಲರನ್ನೂ ಕಳಿಸಿಯಾದ ಮೇಲೆ... ಸ್ವಲ್ಪ ಹೊತ್ತಿನಲ್ಲೇ ಏನೋ ಕಿರಿಕಿರಿ, ಹೊಟ್ಟೆಯ ಮೇಲಿನ ಹಾಗೂ ಎದೆ ಕೆಳಗಿನ ಜಾಗದಲ್ಲಿ ಸ್ವಲ್ಪ ನೋವು... ಬರುಬರುತ್ತ ಆ ನೋವು ಜಾಸ್ತಿ ಆಯ್ತು, ಸಾಮಾನ್ಯವಾಗಿ ಇಂಥ ನೋವುಗಳಿಗೆ ನಾನು ಅಷ್ಟು ಪ್ರಾಮುಖ್ಯತೆ ಕೊಡುವುದಿಲ್ಲ.. ಆದರೆ ಆಗಿನ ನೋವು ತಾರಕ ಮುಟ್ಟುತ್ತಿತ್ತು... ತಡೆಯಲಾರದೆ ನನ್ನ ಹೆಂಡತಿಗೆ ಹೇಳಿಕೊಂಡೆ... ಮೊದಲೇ ಗಾಬರಿಯ ಆತಂಕ ಸ್ವಭಾವದ ಹೆಣ್ಣು.. ಈಗ ಕಂಗೆಟ್ಟಳು... ಹತ್ತಿರದ ಡಾಕ್ಟರ್ ಬಳಿ ಹೋಗಿ ಅವರು ಕೊಟ್ಟ ಮಾತ್ರೆ ತೆಗೆದುಕೊಂಡು... ಅವರು ಅನುಮಾನಿಸಿದಂತೆ.... ಹೇಗಾದರಾಗಲಿ ಬೇರೆ ಡಾಕ್ಟರನ್ನು ನೋಡುವುದೆಂದು ಯೋಚಿಸಿ ತಕ್ಷಣವೇ ಸಾರಿಗೆ ( ಕೃಷ್ಣ ಎನ್ ಸಾರ್ಥಕ್... ಈಗ ಅವನು ಚಲನಚಿತ್ರ ನಿರ್ಮಾಪಕ) ಫೋನ್ ಮಾಡಿದಳು. ಜೊತೆಗೆ ಬಂದವನು ನನ್ನ ಭಾವಮೈದುನ ರಘು ( ಎಚ್ ಕೆ ರಘು, ಸಾಕಷ್ಟು ಪ್ರಸಿದ್ಧಿ ಪಡೆದ ಗಾಯಕ ). ತನ್ನ ಪರಿಚಯದ ಕಡೆಯ ಡಾಕ್ಟರ್ ಗೆ ಫೋನ್ ಮಾಡಿದ ನನ್ನ ಹೆಂಡತಿ.. ನನ್ನನ್ನು ಕರೆದುಕೊಂಡು ಹೋಗಿ ಜಯನಗರದ ಶಾಂತಿ ಆಸ್ಪತ್ರೆಗೆ ಸೇರಿಸಿದಳು... ಅವಳು ಆಮೇಲೆ ಹೇಳಿದಂತೆ ಅವರು ರಾತ್ರಿ ಇಡೀ ಪಟ್ಟ ಪಾಡು.... ಹೇಳತೀರದು... ಔಷಧಿಯ ಪ್ರಭಾವವೋ ಏನೋ... ನನಗೂ ರಾತ್ರಿಯೆಲ್ಲ ಅರೆಬರೆ ಎಚ್ಚರ.
ಬೆಳಿಗ್ಗೆ ಹೊತ್ತಿಗೆ ನನಗೆ ಹೃದಯ ಸಂಬಂಧಿ ತೊಂದರೆಗಳು ಏನೂ ಇಲ್ಲವೆಂದು ತಿಳಿದಾಗ ಸಲ್ಪ ಸಮಾಧಾನ... ಆದರೆ ಇನ್ನೊಂದಷ್ಟು ಟೆಸ್ಟುಗಳು ಮುಂದುವರಿದವು( ಇದು ಈಗೀಗ ಮಾಮೂಲಿಯಾಗಿದೆ.. ಬೇಕೋ ಬೇಡವೋ ಮಾಡಬೇಕಾದ ಟೆಸ್ಟ್ ಗಳ ಯಾದಿ ಮಾತ್ರ ದೊಡ್ಡದಾಗಿರುತ್ತದೆ)
ಕೊನೆಗೆ ಮಾರನೇ ದಿವಸ ನನಗೆ ಒಂದು ಆಪರೇಷನ್.. ನನ್ನ ಗಾಲ್ ಬ್ಲಾಡರ್ ತೆಗೆದುಹಾಕುವ ನಿರ್ಧಾರ.. ಆಪರೇಷನ್ ಗೆ ನನ್ನನ್ನು ತಯಾರು ಮಾಡುತ್ತಿದ್ದ ರೀತಿ, ಬಲಿ ಕೊಡಲು ಮೀಸಲಿದ್ದ ಕೋಣನಿಗೆ ಮಾಡಿದ ಅಲಂಕಾರದಂತೆ ಕಂಡಿದ್ದು ಸತ್ಯ. ಆಪರೇಷನ್ ಸಹ ಮುಗಿದು ಎರಡನೇ ದಿನ ಮನೆಗೆ ವಾಪಸ್ ಬಂದಿದ್ದಾಯ್ತು... ಮೂರು ದಿನದ ಖರ್ಚು ಸುಮಾರು ಒಂದುವರೆ ಲಕ್ಷ.....
ಆ ದಿನಗಳು ನನ್ನ ಜೀವನದ ಪರೀಕ್ಷೆಯ ದಿನಗಳು ಅಂತ ನನಗೆ ಅನಿಸಿದೆ.... ಸಮಸ್ಯೆಗಳು/ ಕಷ್ಟಗಳ ಸರಮಾಲೆ, ನಾನಾ ದಿಕ್ಕುಗಳಿಂದ.... ಮಕರ ಸುತ್ತು ಅಂದಹಾಗೆ, ಹಣದ ವೃಥಾ ಖರ್ಚು... ಅನಾರೋಗ್ಯ, ಮನಸ್ಸಿಗೆ ಕಿರಿಕಿರಿ , ಜಾಗ ಬದಲಾವಣೆ, ಕೆಲ ಜನರ ಬಾಯಿಗೆ ಆಹಾರ... ಹೀಗೆ...
ಯಾವುದೂ ಸ್ಥಿರವಲ್ಲ ಎನ್ನುವುದು ಎಷ್ಟು ನಿಜ ಅಂದರೆ ಅದನ್ನೂ ನಾನು ಆ ದಿನಗಳಲ್ಲಿ ಕಂಡಿದ್ದೇನೆ.
” ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಾಸ್ತು ಹರತಿ ಪ್ರಾಣಾನ್, ವೈದ್ಯೋ ಪ್ರಾಣಾನ್ ಧನಾನಿ ಚ" ಈ ಸಂಸ್ಕೃತ ಸುಭಾಷಿತದ ಭಾವಾರ್ಥದಂತೆ, ಯಮರಾಜ ಪ್ರಾಣವನ್ನು ಸೆಳೆದರೆ, ವೈದ್ಯ ಪ್ರಾಣದ ಜೊತೆಗೆ ಧನವನ್ನೂ ಸೆಳೆಯುತ್ತಾನೆ. ಇದು ಈಗಿನ ವಾಣಿಜ್ಯೀಕರಣಗೊಂಡ ವೈದ್ಯಕೀಯ ರಂಗದ ವಸ್ತು ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.... ರೋಗಿ ಆಸ್ಪತ್ರೆಗೆ ಹೋದಾಗ ಮೊದಲು ಕೇಳುವ ಪ್ರಶ್ನೆ... ಇನ್ಶೂರೆನ್ಸ್ ಇದೆಯಾ ಎಂದು... ನಂತರ ಮುಂದಿನ ಎಲ್ಲಾ ಘಟ್ಟಗಳು... ಹಣಕ್ಕೆ ಮೊದಲ ಸ್ಥಾನ. ಸೇವಾ ಮನೋಭಾವನೆಯಿಂದ ಕೂಡಿರಬೇಕಾಗಿದ್ದ ವೈದ್ಯಕೀಯ ವೃತ್ತಿ ಈಗೀಗ, ಹಣ ಮಾಡುವ ದಂಧೆಯಾಗಿ ಪರಿವರ್ತಿತವಾಗಿದೆ ಎಂದು ಹೇಳಲು ನೋವಾಗುತ್ತದೆ... ಆದರೆ ಸತ್ಯವನ್ನು ಮರೆಮಾಚಲಾಗುವುದಿಲ್ಲ ಅಲ್ಲವೇ?
ನನ್ನ ವಿಚಾರದಲ್ಲಿಯೂ ಸಹ... ಆಪರೇಷನ್ ಮಾಡಲು ಹೇರಲಾದ ಮಾನಸಿಕ ಒತ್ತಡ... ಎಂಥವರನ್ನು ಹಣ್ಣು ಮಾಡುತ್ತದೆ.... ಹಾಗಿರುವಾಗ, ವ್ಯಾಮೋಹದಿಂದ ತುಂಬಿದ ನನ್ನ ಹೆಂಡತಿಯು, ಆ ಸಂದರ್ಭದಲ್ಲಿ... ಅದರಲ್ಲೂ ಒಂದಷ್ಟು ಮುಂದಾಗುವ ತೊಂದರೆಗಳನ್ನು ವಿಶಧೀಕರಿಸಿ.." ನಿಮ್ಮಿಷ್ಟ... ನಿರ್ಧಾರ ನಿಮ್ಮದು" ಎಂದಾಗ (ಯಾರಾದರೂ) ಬೇಡ ಎನ್ನಲು ಸಾಧ್ಯವೇ?
ಆನಂತರದ ಕೆಲ ಅಭಿಪ್ರಾಯಗಳು (ಮರಣೋತ್ತರ ಸಮೀಕ್ಷೆಗಳೇ ಇರಬಹುದು)... ತರಾತುರಿಯಲ್ಲಿ ಮಾಡಿದ ಆಪರೇಷನ್ ಬಗ್ಗೆ ಒಂದಷ್ಟು ಅಡ್ಡ ಮಾತುಗಳು ಕೇಳಿಬಂದವು... ಪ್ರಾಯಶಃ, ಅದು ನನ್ನ ಮೂಗಿನ ನೇರಕ್ಕೆ ಇದ್ದಿದ್ದರಿಂದ... ಸರಿ ಅಂತ ಅನಿಸಿದ್ದು ಉಂಟು.
ಈ ಸಮಯದಲ್ಲೇ ವಿಧಿಯಾಟ... ಅನ್ನುವ ಪದ ನನ್ನ ನೆರವಿಗೆ ಬಂದು ಸಮಾಧಾನ ಮಾಡಿದ್ದು.
ಇನ್ನೊಂದು ಸಂಗತಿ, ಇದೇ ಸಮಯದಲ್ಲೇ ನನಗೆ ಮೂರು ಸಂಬಂಧಗಳಲ್ಲಿ... ಊಹಿಸಲಾಗದ ಬದಲಾವಣೆಗಳು ಕಂಡು ಬಂದದ್ದು. ಮುಖ್ಯವಾಗಿ ನನ್ನ ಅಳಿಯ ಪ್ರದೀಪ್ (ಆಗಿನ್ನೂ ನನ್ನ ಮನಸ್ಸು ವಸ್ತು ಸ್ಥಿತಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ) .. ನಾನು ಆಸ್ಪತ್ರೆ ಸೇರಿದಾಗ ಅಲ್ಲಿನ ರಿಸೆಪ್ಷನ್ ನಲ್ಲಿ ಮಾತನಾಡಿ ಮುಂಗಡ ಹಣವನ್ನು ಕಟ್ಟಿದ್ದು.... ನಮಗೆ ಗೊತ್ತೇ ಆಗಿರಲಿಲ್ಲ... ಈ ಒಂದು ಕ್ರಿಯೆ, ಭಾಂದವ್ಯ ಬೆಸೆಯಲು ಬುನಾದಿ ಹಾಕಿತೇನೋ...
ಕಾರಣಾಂತರಗಳಿಂದ ಇನ್ನೊಂದು ಸಂಬಂಧ ಕಮರಿ ಹೋಯಿತು, ಮತ್ತೊಂದು ಸಂಬಂಧದಲ್ಲಿ ಅಸಹನೆ ಮೂಡಿತು.... ಮತ್ತದೇ ವಿಧಿ...retire to fate ಅಂತಾರಲ್ಲ ಹಾಗೆ.
ನಾನು ಸುಮಾರು ಐದು ವರ್ಷದವನಿದ್ದಾಗ, ಜ್ವರ ಬಂದಿತ್ತು, ನಮ್ಮಪ್ಪ ನನ್ನನ್ನು ದೇವನಹಳ್ಳಿಯ ಒಬ್ಬ ಡಾಕ್ಟರ ಬಳಿ ಕರೆದುಕೊಂಡು ಹೋಗಿದ್ದರು... ಅವರ ಮನೆಗೆ ಹೋಗಿದ್ದು ಅಂತ ನೆನಪು... ನನ್ನ ಕೈಗೆ ದಪ್ಪನಾದ ಪೂರಿಯನ್ನು ಕೊಟ್ಟು.. ಖುಷಿಯಿಂದ ಅದನ್ನು ತಿನ್ನುತ್ತಿರುವಾಗ ನನಗೆ ಇಂಜೆಕ್ಷನ್ ಕೊಟ್ಟಿದ್ದು ಚೆನ್ನಾಗಿ ನೆನಪಿದೆ.
ಮದರಾಸಿನಲ್ಲಿದ್ದಾಗ, ಟೈಫಾಯ್ಡ್ ಜ್ವರ ಬಂದು, ಜ್ವರದಲ್ಲಿಯೇ ಬೆಂಗಳೂರಿಗೆ ಬಂದು, ಬೌರಿಂಗ್ ಆಸ್ಪತ್ರೆಗೆ ಸೇರಿದ್ದು. ಒಂದು ರಾತ್ರಿ ತುಂಬಾ ಚಳಿ, ನನಗೆ ಮುಸುಕು ಹಾಕಿ ಮಲಗಬೇಕು... ಹಾಗೆ ಮಲಗಿದಾಗೆಲ್ಲ ಆಸ್ಪತ್ರೆಯ ಸಿಬ್ಬಂದಿ ಬಂದು, ಮುಸುಕು ತೆಗೆದು, ಬುದ್ಧಿ ಹೇಳಿ ಹೋಗಿದ್ದರು. ಆಮೇಲೆ ತಿಳಿಯಿತು ಆಸ್ಪತ್ರೆಯಲ್ಲಿ ಮುಖ ಮುಚ್ಚಿದರೆ, ರೋಗಿಯ ಕೊನೆಯಾಯಿತು ಅಂತ.( ಅದಕ್ಕೆ ಇರಬೇಕು ನಿನ್ನ ಮುಖ ಮುಚ್ಚಾ ಅಂತ ಬಯ್ಯೋದು)
ಅಲ್ಲಿನ ಇನ್ನೊಂದು ನೆನಪು.... ರಾತ್ರಿ ಜೋರು ಮಳೆ, ನನ್ನಪ್ಪ ಶಾಮಣ್ಣ ನನ್ನ ಜೊತೆ.. ಮೂಸಂಬಿಯ ರಸ ನನಗೆ ಮುಖ್ಯ ಆಹಾರ. ಕುಡಿಯಲು ಮೂಸಂಬಿಯ ರಸ ತೆಗೆಯುತ್ತಿದ್ದದ್ದು, ಅದರ ವಾಸನೆ ನನಗೆ ಸಹಿಸಲು ತುಂಬಾ ಕಷ್ಟವಾಗಿತ್ತು, ಕುಡಿದಾಗ ವಾಂತಿಯಾಗುವಷ್ಟು ಕಷ್ಟ... ಎಷ್ಟೋ ವರ್ಷಗಳ ಕಾಲ ನಾನು ಮೋಸಂಬಿಯನ್ನೇ ಮುಟ್ಟುತ್ತಿರಲಿಲ್ಲ.
ನನ್ನ ಮೆಚ್ಚಿನ ಲೇಖಕರು ಬೀchi ಹಾಸ್ಯ ಭರಿತ ವಾಗಿ ಹೇಳಿದಂತೆ " ಖಾಯಿಲೆ ಆದರೆ ಡಾಕ್ಟರ್ ಹತ್ರ ಹೋಗಿ, ಪಾಪ ಅವರು ಕಷ್ಟಪಟ್ಟು ಓದಿರ್ತಾರೆ ಸಂಪಾದನೆ ಬೆಡವೇ, ಅವರು ಬರೆದ ಚೀಟಿ ತಗೊಂಡು ಔಷಧಿ ಅಂಗಡಿ ಹೋಗಿ, ಔಷಧಿ ತಗೊಳ್ಳಿ... ಅವರೂ ಬದುಕ ಬೇಕಲ್ಲ... ಇನ್ನು ತಗೊಂಡ ಔಷಧಿಯನ್ನು ಮೋರಿಗ್ ಹಾಕಿ... ಯಾಕಂದ್ರೆ ನೀವು ಬದುಕಬೇಕಲ್ಲ".... ವ್ಯಂಗ್ಯವಾದರೂ...... ಸತ್ಯಕ್ಕೆ ಹತ್ತಿರ ತಾನೆ..
ಹಾಗಂತ ಎಲ್ಲಾ ಡಾಕ್ಟರ್ ಗಳು ಹೀಗೇ ಇರುತ್ತಾರೆ ಎನ್ನಲಿಕ್ಕಾಗದು.... ಸಾಕಷ್ಟು ಜನ, ಸೇವಾ ಮನೋಭಾವದ.... ತಕ್ಕುದಾದ ದುಡ್ಡನ್ನು ತೆಗೆದುಕೊಳ್ಳುವ ಡಾಕ್ಟರ್ ಗಳು ಈಗಲೂ ಇದ್ದಾರೆ... ಸಾಕಷ್ಟು ವಿರಳ.. ನಾನು ಹತ್ತಿರದಲ್ಲಿ ಕಂಡಂತೆ... ನನ್ನ ಮಾರ್ಗದರ್ಶಕರಾದ ಡಾಕ್ಟರ್ ಸಿ ಆರ್ ಚಂದ್ರಶೇಖರ್, ನಿವೃತ್ತ ಮನೋವೈದ್ಯರು, ನಿಮ್ಹಾನ್ಸ್, ಅವರು ಯಾವುದೇ ಹಣದ ಅಪೇಕ್ಷೆ ಇಲ್ಲದೆ ಈಗಲೂ ತಮ್ಮ ಸೇವೆಯನ್ನು ಜನಗಳಿಗೆ ಕೊಡುತ್ತಿದ್ದಾರೆ.... ನನಗಂತೂ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುವ ಹೆಮ್ಮೆ ಇದೆ.
ಏನಿದು, ಬರೀ ಕೊರೆತ, ಶೀರ್ಷಿಕೆ ಹತ್ತಿರಕ್ಕೂ ಬರಲಾರದ ವಿಷಯ ಎಂದು ಕೋಪ / ಬೇಜಾರು ಬಂದಿದ್ದರೆ... ಸಹಜ. ಅದೇ ವಿಷಯಕ್ಕೆ ಈಗ ಬಂದೆ.... ಕೆಲವು ಸಲ ಮಾತನಾಡುವಾಗ ಅಕ್ಷರಗಳ ಸ್ಥಾನಪಲ್ಲಟ ಆಗುವುದಿದೆ... ಇನ್ನು ಕೆಲವರು ಅದನ್ನೇ ಭಾಷೆಯನ್ನಾಗಿ ಮಾಡಿಕೊಂಡಿರುತ್ತಾರೆ... ಇನ್ನು ಕೆಲವರಿಗೆ ಕೆಲ ಅಕ್ಷರ ಬಾಯಲ್ಲಿ ಹೊರಡುವುದಿಲ್ಲ... ಒಪ್ಪುತ್ತೀರಾ..?
ಸಾಕಷ್ಟು ವರ್ಷಗಳ ಹಿಂದೆ ಮಯೂರದಲ್ಲಿ ಅಂಗೈಯಲ್ಲಿ ಅರಮನೆ ಎಂಬುವ ಶೀರ್ಷಿಕೆಯಲ್ಲಿ ಪ್ರಕಟವಾದ ಒಂದು ಬರಹ... ಮನೆಗೆ ಹೆಂಗಸರು ಬಂದಿರುತ್ತಾರೆ.... ನಮ್ಮ ಸಂಪ್ರದಾಯದಂತೆ ಕುಂಕುಮ, ತಾಂಬೂಲ ಕೊಡಬೇಕು.. ಮನೆಯಲ್ಲಿ ಯಾವ ಹಣ್ಣು ಇಲ್ಲ... ಎಚ್ಚೆತ್ತುಕೊಂಡ ಮಗಳು ತಾಯಿಯನ್ನು ಕೇಳುತ್ತಾಳೆ" ಳಾಬೆ ಹಣ್ಣು ರತಲಾ" ಅದಕ್ಕೆ ಬಂದವರು ತಕ್ಷಣ ಉತ್ತರಿಸುತ್ತಾರೆ " ರಪವಾಗಿಲ್ಲ ಡಿಬಿ"... ಎಲ್ಲರೂ ನಕ್ಕಿದ್ದು.. ಅರ್ಥವಾಯಿತೆಂದು ನಂಬಲೇ.... ನಮ್ಮ ಮನೆಯ ಹತ್ತಿರ ಇದ್ದ ಒಂದು ಮಗು "ರ" ಕಾರದ ಬದಲಿಗೆ "ಲ"ಕಾರ ಉಪಯೋಗಿಸುತ್ತಿದ್ದಳು.... ನನ್ನ ನೋಡಿದ ತಕ್ಷಣ ಅವಳಿಗೆ ಖುಷಿ... ಲಂಗ ಮಾಮ ಬಂದ್ರು.. ಲಂಗ ಮಾಮ ಬಂದ್ರು ಅಂತ ಕುಣೀತಿತ್ತು... ಅದರ ಉತ್ಸಾಹಕ್ಕೆ ನಾನು ಋಣಿ
ಮತ್ತೆ ನನ್ನ ಆಸ್ಪತ್ರೆಯ ವಾಸದ ಸಮಯಕ್ಕೆ ಹಿಂತಿರುಗುತ್ತೇನೆ... ನನಗೆ ಅರೆಬರೆ ಜ್ಞಾನ... ನೋಡಲು ಬಂದವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಅನ್ನಬಹುದೇನೋ.. ಇದನ್ನು ಡಾಕ್ಟರ್ ಸಹ ಎತ್ತಿ ಆಡಿದರು.... ಏನಾಗಿತ್ತು ಎಂದು, ಯಾರೋ ಕೇಳಿದ ಪ್ರಶ್ನೆಗೆ... ಸಿಕ್ಕಿದ ಉತ್ತರ "ಬಾಲ್ ಗ್ಲ್ಯಾಡರ್ ನಲ್ಲಿ ಕಲ್ಲು" ಆಗಿ ಈಗ ಅದನ್ನೇ ತೆಗೆದು ಹಾಕಿದ್ದಾರೆ.....ಬ ಮತ್ತು ಗ ಅಕ್ಷರಗಳ ಸ್ಥಾನ ಬದಲಾವಣೆ... ಇದನ್ನು ನೆನೆದು ಸಾಕಷ್ಟು ಸಲ ನಕ್ಕಿದ್ದಿದೆ.. ನಿಮಗೂ ಅದನ್ನು ತಲುಪಿಸಿದ್ದೇನೆ.... ನಿಮ್ಮಿಷ್ಟ...
ಕೊನೆಯದಾಗಿ ನನ್ನದೊಂದು ಅರಿಕೆ ....ನಿಮ್ಮೆಲ್ಲರಲ್ಲಿ... ಯಾವುದೇ ಹಂತದಲ್ಲಿ ಆಸ್ಪತ್ರೆಗೆ ಹೋಗಲೇ ಬೇಕಾಗಿ ಬಂದರೆ (ಅಂತಹ ಸಮಯ ಬರದೇ ಇರಲಿ ಎಂದೇ ನನ್ನ ಆಶಯ) ಅಲ್ಲಿನ ಡಾಕ್ಟರ್ ಗಳು ಬೇಗ ನಿರ್ಧಾರ ತಗೊಳ್ಳಿ ಎಂದು ಹೇಳುವ ಸೂಚನೆಯನ್ನು... ಗಾಬರಿಯಿಂದ ತೆಗೆದುಕೊಳ್ಳಬೇಡಿ. ದಯಮಾಡಿ , ಇನ್ನೊಬ್ಬ ಪರಿಣಿತರಿಂದ ಅಭಿಪ್ರಾಯವನ್ನು ಪಡೆಯಿರಿ... ಈಗಂತೂ ಆನ್ಲೈನ್ ನಲ್ಲಿ ಎರಡನೇ ಅಭಿಪ್ರಾಯ ಕೊಡುವ ತಾಣಗಳಿವೆ.... ಉಪಯೋಗಿಸಿ... ಏನೇ ಆದರೂ ಕೊನೆಗೆ ನಮ್ಮ ಕರ್ಮ ಸಿದ್ದಾಂತಕ್ಕೆ ಹೋಗುವುದೇ ಸಮಂಜಸ... ಆಗುವುದನ್ನು ತಪ್ಪಿಸಲು ನಾವು ಶಕ್ತರಲ್ಲ.
ಎಲ್ಲಾ ಒಳ್ಳೆಯದಾಗಲಿ.... ನಮಸ್ಕಾರ
ತುಂಬ ತುಂಬ ಓಳ್ಳೆಯ ಅಭಿಪ್ರಾಯ. ಆದರೆ ಆಪರೇಶನ್ ಆಯಿತು ಎಂಬ ದುಃಖ
ReplyDeleteಅನುಭವ ಹಾಗೂ ಸಮಯೋಚಿತ
ReplyDeleteExcellent title. Namaste.
ReplyDelete2ನೇ ಅಭಿಪ್ರಾಯ ಪಡೆಯುವ ಬಗ್ಗೆ ಸೂಚನೆ ನೀಡಿರುವುದು ಸಮಂಜಸವಾಗಿದೆ.
ReplyDeleteROFL SM very nice
ReplyDeleteಹೌದು ಎರಡನೇ ಭಾರಿ ಅಭಿಪ್ರಾಯ ಪಡೆಯುವುದು ಒಳ್ಳೆಯದು
ReplyDelete