ಗಣೇಶ ಬಂದ ಕಾಯ್ ಕಡುಬು ತಿಂದ
ಗಣೇಶ ಬಂದ ಕಾಯ್ ಕಡುಬು ತಿಂದ ಹೊಟ್ಟೆ ಮೇಲೆ ಗಂಧ, ಚಿಕ್ಕ ಕೆರೇಲ್ಬಿದ್ದ ದೊಡ್ಡ ಕೆರೇಲಿ ಎದ್ದ... ಇದು ನಾವು ಗಣೇಶನಿಗೆ ಹೇಳುತ್ತಿದ್ದ ಪದ... ಯಾಕೆ ಚಿಕ್ಕ ಕೆರೆಯಲ್ಲಿ ಬಿದ್ದ, ದೊಡ್ಕೆರೇಲೀ ಎದ್ದ.. ಇವತ್ತೂ ಗೊತ್ತಿಲ್ಲ.
ಸಾಮಾನ್ಯವಾಗಿ ಹಬ್ಬ ಅಂದ್ರೆ ಎರಡು ಕಾರಣಕ್ಕೆ ಖುಷಿ ಒಂದು ಶಾಲೆ ಇಲ್ಲ ಮಜಾ, ಎರಡು ಹಬ್ಬದ ಊಟ... ಗಣೇಶನ ಹಬ್ಬ ಅಂದ್ರೆ ಕಡುಬು,ಚಿಗಳಿ, ತಂಬಿಟ್ಟು... ಹಿಂದಿನ ದಿನ ಗೌರಿ ಹಬ್ಬದ ಪ್ರಯುಕ್ತ ಮಾಡಿದ ಒಬ್ಬಟ್ಟು... ಹೀಗೆ ತಿನ್ನುವುದೇ ಒಂದು ಮೋಜು..
ಗಣೇಶನ ಹಬ್ಬದ ಸಂಭ್ರಮ, ಗೌರಿ ಪೂಜೆಯಿಂದ ಶುರು... ಗೌರಿ ಪೂಜೆಗೆ ಮಣ್ಣನ್ನು ಊರ ಕೆರೆಯಿಂದ ಸಂಗ್ರಹಿಸಿ ತರುವ ಒಂದು ಸಂಪ್ರದಾಯ... ಇದು ಓಲಗ ಬಾಜಾ ಭಜಂತ್ರಿ ಯೊಂದಿಗೆ ಊರ ಮುಖ್ಯರಸ್ತೆಯ ಮೂಲಕ ಕೆರೆಗೆ ಹೋಗಿ ಪೂಜೆ ಮಾಡಿ, ಅಲ್ಲಿಂದ ತಂದ ಮಣ್ಣಿನ ಗೌರಿ(? ಇಲ್ಲಿ ನನಗೆ ಸಂಪೂರ್ಣ ಮಾಹಿತಿ ಇಲ್ಲ)ಯನ್ನು ಪೂಜೆ ಮಾಡುವುದು ನಮ್ಮನೆಯಲ್ಲಿ ಚಾಚೂ ತಪ್ಪದೆ ನಡೆಯುತ್ತಿತ್ತು.. ಆ ದಿನಗಳಲ್ಲಿ ಮಳೆ ಸಾಮಾನ್ಯ.. ಕೆರೆಗೆ ಹೋದಾಗೆಲ್ಲ ಮಳೆ ಹನಿಯಲ್ಲಿ ನೆಂದ ನೆನಪಿದೆ. ಇನ್ನು ಗಣೇಶನ ವಿಗ್ರಹ ಮಾಡಿಕೊಡುವುದು ನಮ್ಮ ಸುಬ್ಬಣ್ಣಯ್ಯ ( ಸಕಲ ಕಲಾವಲ್ಲಭ ಸುಬ್ರಾಯಾಚಾರ್). ಗಣೇಶನ ಹಬ್ಬದ ದಿವಸವೇ ವಿಗ್ರಹಕ್ಕೆ ಬಣ್ಣ ಹಚ್ಚುವ ಕೆಲಸ ಮುಗಿಯುತ್ತಿದ್ದದ್ದು... ಅದರೊಳಗೂ ಗಣೇಶನ ಕಣ್ಣುಬರೆಯಲು ಸುಬ್ಬಣ್ಣಯ್ಯನೇ ಆಗಬೇಕು. ಸುಬ್ಬಣ್ಣಯ್ಯನ ಮಕ್ಕಳು " ಹೋಗಯ್ಯ ಮೇಷ್ಟ್ರನ್ನ ಕೇಳಿ ದುಡ್ಡು ಇಸ್ಕೊಂಡು ಬಾ... ಗಣೇಶನ್ ಕೊಡ್ತೀನಿ" ಅನ್ನೋರು.. ಮೇಷ್ಟ್ರು ಅಂದ್ರೆ ನಮ್ಮಪ್ಪ. ಆದರೆ ಸಾಂಪ್ರದಾಯಿಕವಾಗಿ ತಟ್ಟೆಯಲ್ಲಿ ಅಕ್ಕಿ, ಅಡಿಕೆ, ವಿಳ್ಳೇದೆಲೆ.. ದಕ್ಷಿಣೆ... ಕೆಲ ಸಲ ಹಣ್ಣು ಸಹ... ಇದನ್ನು ಕೊಟ್ಟು... ತಟ್ಟೆಯಲ್ಲಿ ಸ್ವಲ್ಪ ಅಕ್ಕಿ ಉಳಿಸಿಕೊಂಡು, ಗಣೇಶನ ಮೂರ್ತಿ ಮನೆಗೆ ತರುತ್ತಿದ್ದದ್ದು.
ಗಣೇಶನನ್ನು ಬಿಡಲು ಮತ್ತದೇ ಕೆರೆಗೆ... ಗಣೇಶನ ಬಿಡುವಾಗ ಸಾಧ್ಯವಾದಾಗಲೆಲ್ಲ.... ಅನುಮತಿ ಸಿಕ್ಕಾಗಲೆಲ್ಲಾ... ನೀರಲ್ಲಿ ಇಳಿದು ಆಟವಾಡಿದ್ದಿದೆ. ಗಣಪತಿಯನ್ನು ಬಿಟ್ಟಾದ ನಂತರ ಚಿತ್ರಾನ್ನ ಮೊಸರನ್ನ ಕೈಗೆ ಕೊಟ್ಟು ಮೂಸಿ ನೋಡಿ ನೀರಿಗೆ ಹಾಕಬೇಕು ಅನ್ನುವುದು ಒಂದು ರೂಢಿ ಇತ್ತು.... ಘಮ್ಮೆನ್ನುವ ಅನ್ನವನ್ನು ನೀರಿಗೆ ಎಸೆಯಲು ಬಹಳ ಬೇಜಾರು ಮಾಡಿಕೊಂಡಿದ್ದೇನೆ... ಆದರೆ ಗಣೇಶನ ಭಯ... ತಪ್ಪದೇ ನೀರಿಗೆ ಹಾಕಿದ್ದೇನೆ ಸಹ. ಅಲ್ಲಿಂದ ಹಿಂತಿರುಗಿ ಬರುವಷ್ಟರಲ್ಲಿ.. ಮನೆಯ ಒಳಗೆ ಬರುವಾಗ ನಮ್ಮಜ್ಜಿ ಹಾಕುತ್ತಿದ್ದ ದೋಸೆಯ ಚುರ್ ಎನ್ನುವ ಶಬ್ದ... ಹಬ್ಬದಲ್ಲಿ ಮಾಡಿದ್ದ ಕೋಸಂಬರಿ... ಮತ್ತು ಇನ್ನೇನೇನು ಉಳಿದಿದ್ದನ್ನು.. ಸೇರಿಸಿ ಮಾಡಿದ ದೋಸೆಯೋ.. ಅದರ ರುಚಿ ಈಗಲೂ ಬಾಯಿ ಚಪ್ಪರಿಸುವಷ್ಟು ಸೊಗಸು. ಈ ಸಂಪ್ರದಾಯವನ್ನು ಈಚಿನ ತನಕ.. ನಮ್ಮ ಮನೆಯಲ್ಲಿ ನನ್ನ ಹೆಂಡತಿ ನಡೆಸಿಕೊಂಡು ಬರುತ್ತಿದ್ದಳು.. ನಾನಂತೂ ಆ ದೋಸೆಯನ್ನು ಸವಿದಿದ್ದೇನೆ... ಈಗ ನಾವಿಬ್ಬರೇ ಇರುವುದರಿಂದ ಮಣ್ಣಿನ ಗಣೇಶ ತರುವುದು ತಪ್ಪಿ... ಬಿಡುವ ಸಂಪ್ರದಾಯವು ತಪ್ಪಿ... ದೋಸೆಯೂ ತಪ್ಪಿದೆ.
ಬೆಂಗಳೂರಿಗೆ ಬಂದ ಮೇಲೂ ಗಣೇಶನನ್ನು ತರಲು ತಟ್ಟೆಯಲ್ಲಿ ಅಕ್ಕಿ ಹಾಕಿಕೊಂಡು ಅಂಗಡಿಗೆ ಹೋಗಿ, ಕೊಂಡ ಗಣೇಶನನ್ನು... ತಟ್ಟೆಯಲ್ಲಿಟ್ಟು ತಂದು ಆರತಿ ಮಾಡಿ ಮನೆಯೊಳಗೆ ತರುವ ಪದ್ಧತಿ ಹಾಗೇ ಇತ್ತು.... ಬಿಡಲು ಮಾತ್ರ ಕೆರೆ ಇಲ್ಲದ ಕಾರಣ ಹತ್ತಿರದ ಯಾವುದಾದರೂ ಮನೆಯ ಬಾವಿಯಲ್ಲಿ, ಮನೆಯವರು ಒಪ್ಪಿದರೆ, ಬಿಡಲು ಸಾಧ್ಯವಾಗುತ್ತಿತ್ತು..... ಮಾವಳ್ಳಿಯಲ್ಲಿದ್ದಾಗ ಲಾಲ್ ಬಾಗ್ ಕೆರೆಯಲ್ಲಿ ಬಿಟ್ಟು ಬರುತ್ತಿದ್ದೆವು... ಇಲ್ಲಿನ ಒಂದು ತಮಾಷೆ ಪ್ರಸಂಗ... ನನ್ನಣ್ಣನ ಸ್ನೇಹಿತರು ಗಣೇಶನನ್ನು ಬಿಡಲು ಲಾಲ್ ಬಾಗ್ ಗೆ ಹೋದಾಗ..... ಚಿನ್ನದ ಉಂಗುರ ಕಳೆದಿದೆಯೆಂದು ಹುಡುಕುವ ಸೋಗು ಮಾಡಿ , ಸಾಕಷ್ಟು ಜನರು ಸೇರಿದ ಮೇಲೆ ಅಲ್ಲಿಂದ ಜಾಗ ಖಾಲಿ ಮಾಡಿ ಗಣೇಶನನ್ನು ಬಿಟ್ಟು ವಾಪಸ್ಸು ಬರುವಾಗಲೂ ಇನ್ನೂ ಜನ ಹುಡುಕುತ್ತಿದ್ದದ್ದು... ಅವರನ್ನು ಏನೆಂದು ಕೇಳಿ ಮನಸ್ಸಿನಲ್ಲಿ ನಕ್ಕು... ದೂರ ಬಂದು ತಾವು ಮಾಡಿದ ನಾಟಕದ ಯಶಸ್ಸಿನ ಬಗ್ಗೆ ಸಂಭ್ರಮಿಸಿದ್ದವರು. ನಾನೂ ಖುಷಿ ಪಟ್ಟವನು....
ಎಷ್ಟೋ ಸಲ ಮನೆಯಲ್ಲಿ ಕೊಳದಪ್ಪಲೆ ಇಟ್ಟು ಅದರಲ್ಲಿ ಗಣೇಶನನ್ನು ಬಿಟ್ಟು... ಕರಗಿದ ನಂತರ ಯಾವುದಾದರೂ ಗಿಡದ ಬುಡಕ್ಕೆ ಹಾಕಿದ್ದು ಉಂಟು. ಈಗ ಮನೆಯಲ್ಲಿರುವ ಗಣೇಶನ ಮೂರ್ತಿಗೆ ಪೂಜೆ ಮಾಡುವುದರಿಂದ ಬಿಡುವ ಯೋಚನೆಯೂ ಇಲ್ಲ. ಗಣೇಶನ ಕಥೆಯಲ್ಲಿ ಸೂಚಿಸಿದಂತೆ.... ಮೂರ್ತಿಯನ್ನು ಚಿನ್ನದಲ್ಲಾಗಲಿ ಬೆಳ್ಳಿಯಲ್ಲಾಗಲಿ, ಹಿತ್ತಾಳೆ, ತಾಮ್ರದಲ್ಲಾಗಲಿ ತಯಾರಿಸಿ. ಪೂಜಿಸಿ ಅದನ್ನು ದಾನ ಕೊಡಬೇಕು ಎಂಬುದು ಕ್ರಮ... ಮಾಡಲು ಶಕ್ತಿ ಇಲ್ಲದವರು ಮಣ್ಣಿನಲ್ಲಾದರೂ ಮಾಡಿ ದಾನ ಕೊಡಬೇಕು..... ವ್ಯಾವಹಾರಿಕವಾಗಿ ಮಣ್ಣಿನ ಮೂರ್ತಿಯನ್ನು ದಾನ ತೆಗೆದುಕೊಳ್ಳುವವರು ಯಾರು ಎಂಬ ಪ್ರಶ್ನೆ... ಹಾಗಾಗಿ... ಗಂಗಮ್ಮನ ಪಾಲು...? ನೀರಿಗೆ ಬಿಡುವುದು.... ಅನುಕೂಲ ಸಿಂಧು.....
ಹಳ್ಳಿಯಲ್ಲಿ ಕಡುಬು ಮಾಡಲು ಅದಕ್ಕೆ ಮೀಸಲಾದ ಕಡುಬಿನ ತಪ್ಪಲೆ ಇತ್ತು... ಕಡುಬು ಜೋಡಿಸಿ ತಪ್ಪಲೆಯಲ್ಲಿಡಲು ಹಿತ್ತಾಳೆಯ ಕಂಠವಿಲ್ಲದ ತಟ್ಟೆಗಳಿದ್ದವು. ಅದರಲ್ಲಿ... ಸೊನ್ನೆ, ಚಚ್ಚೌಕ, ನಕ್ಷತ್ರ, ಮುಮ್ಮೂಲೆ ಹೀಗೆ ಬೇರೆಬೇರೆಯ ರೂಪದ ತೂತುಗಳು ಇರುತ್ತಿದ್ದವು... ಹಬೆ ಮೇಲಕ್ಕೆ ಏರಲು ಮಾರ್ಗ. ಅದಕ್ಕೆ ದಾರ ಕಟ್ಟಿ ತಪ್ಪಲೆಯ ಒಳಗೆ ಇಡುತ್ತಿದ್ದರು. ತಪ್ಪಲೆಯ ಹೊರ ಭಾಗಕ್ಕೆ ಬೂದಿಯನ್ನು ಬಳಿದು ಒಲೆಯ ಮೇಲಿಡುತ್ತಿದ್ದದ್ದು..... ಮಸಿ ಕಟ್ಟಿದರೆ ತೊಳೆಯಲು ಸುಲಭವಾಗಲಿ ಎಂದು.
ಇನ್ನು ಹಳ್ಳಿಯಲ್ಲಿ ಪೂಜೆಯ ವಿಷಯ... ಎರಡು ದಿನ ಮುಂಚೆಯೇ ನಾವುಗಳು ಊರ ಸುತ್ತಮುತ್ತ ಓಡಾಡಿ ಬೇರೆ ಬೇರೆ ತರದ ಹೂಗಳು, ಪತ್ರೆಗಳು, ಗರಿಕೆ ಹುಲ್ಲು.. ಹೀಗೆ ಸಂಗ್ರಹಿಸಿ ತಂದಿರುತ್ತಿದ್ದೆವು. ಹೂ ಕೊಳ್ಳುತ್ತಿದ್ದ ನೆನಪು ನನಗೆ ಸರಿಯಾಗಿಲ್ಲ.... ತಾವರೆ ಹೂ ಮಾತ್ರ ವರಲಕ್ಷ್ಮಿ ಹಬ್ಬಕ್ಕೆ ಕೊಂಡು ತರುತ್ತಿದ್ದದ್ದು ನೆನಪಿದೆ.
ಮನೆಯಲ್ಲಿದ್ದ ದೇವರ ಮಂಟಪವನ್ನು ಜೋಡಿಸುವುದು, ಬಾಳೆ ಕಂದು ಕಟ್ಟುವುದು, ಒಂದಷ್ಟು ಹೂವಿನ ಅಲಂಕಾರ ಮಾಡುವುದು ನಮ್ಮಗಳ ಜವಾಬ್ದಾರಿಯಾಗಿತ್ತು. ಪೂಜೆ ಮಾಡಿಸಲು ಬರುತ್ತಿದ್ದ ಕುದುರೆಗೆರೆಯ ಗಂಗಾಧರ ಶಾಸ್ತ್ರಿಗಳು... ಅವರದೇ ಆದ ಕೆಲಸದ ಬಾಹುಳ್ಯದಲ್ಲಿ ತಡವಾಗಿ ಬರುತ್ತಿದ್ದು... ನಾವು ಕಾದು ಹಸಿವಿನಿಂದ ಬಳಲುತ್ತಿದ್ದದ್ದು ಸಹಜವೇ ಆಗಿತ್ತು... ಬೆಂಗಳೂರಿಗೆ ಬಂದ ನಂತರ ಸಮಯಕ್ಕೆ ಸಿಕ್ಕಿದವರು ಪೂಜೆ ಮಾಡಿಸುತ್ತಿದ್ದರು. ಅವರಲ್ಲಿ ಚಿಕ್ಕಪ್ಪ ನಂಜಣ್ಣಯ್ಯ, ಗುಂಡಣ್ಣ (ಈಗ ಅಮೆರಿಕದಲ್ಲಿರುವ ಸತ್ಯನಾರಾಯಣ ಶಾಸ್ತ್ರಿಗಳು), ಮುರಳಿ ಮಾಧವ, ಕೆಇಬಿ ಕೃಷ್ಣಮೂರ್ತಿಗಳು, ಹಾಗೂ ಗುರುಗಳು ಕೃಷ್ಣಮೂರ್ತಿಗಳು.... ಕಾಲಕ್ರಮೇಣ ಕ್ಯಾಸೆಟ್ ಶಾಸ್ತ್ರಿಗಳ ಮೊರೆ ಹೋಗಿ ಈಗ ಆ ಕಾಲವು ಮುಗಿದು ಆನ್ಲೈನ್ ಶಾಸ್ತ್ರಿಗಳ ಯುಗ ನಡೆಯುತ್ತಿದೆ.
ಕಾಲಕ್ಕೆ ತಕ್ಕ ಹಾಗೆ ಈಗ ಗಣೇಶನ ಅಲಂಕಾರಕ್ಕೆ ಕೃತಕ ಬಾಳೆಕಂದು, ಹಾರ, ಹೂಗಳು ಉಪಯೋಗಕ್ಕೆ ಬಂದಿದೆ.
ಆದರೆ ಗಣೇಶನ ಗಂಧದ ವಿಚಾರ ಮಾತ್ರ.. ಅದೇ ಇದೆ.. ಕೆಂಪು ಬಣ್ಣದ ಗಂಧವೇ ಆಗಬೇಕು. ಹಳ್ಳಿಯಲ್ಲಿ ಕೆಂಪು ಗಂಧವನ್ನು ರಕ್ತ ಚಂದನದ ಬೊಂಬೆಯನ್ನು ಸಾಣೆ ಕಲ್ಲಿನ ಮೇಲೆ ತೇದಿ ತೆಗೆಯುತ್ತಿದ್ದೆವು... ಈಗ ಆ ತರದ ಬೊಂಬೆಗಳು... ನಮ್ಮ ಕೈ ಅಳತೆಯಲ್ಲಿ ಸಿಗದಿದ್ದ ಕಾರಣ, ಶ್ರೀಗಂಧದ ಚಕ್ಕೆಯನ್ನು ತೇದಿದ ಗಂಧಕ್ಕೆ ಕುಂಕುಮ ಬೆರೆಸಿ... ಕೆಂಪು ಮಾಡುತ್ತೇವೆ.
ಮನೆ ಮನೆಗೆ ಹೋಗಿ ಗಣಪತಿಗೆ ನಮಸ್ಕಾರ ಮಾಡಿ ಬರುವುದು, ಹಳ್ಳಿಯ ಜೀವನಕ್ಕೆ ಮುಗೀತು. ಪೂಜೆ ಮಾಡಿದಾಗ ಶಾಸ್ತ್ರಿಗಳು ಕೊಡುತ್ತಿದ್ದ ಮಂತ್ರಾಕ್ಷತೆಯನ್ನು ಜೊತೆಯಲ್ಲೇ ಇಟ್ಟುಕೊಂಡು ರಾತ್ರಿ ಚಂದ್ರನನ್ನು ನೋಡಿದರೆ, ಅಪವಾದ ಬರುತ್ತದೆ ಎಂಬ ಭಯದಿಂದ, ಮಂತ್ರಾಕ್ಷತೆಯನ್ನು ಚಂದ್ರನ ಕಡೆ ಎಸೆದು.. ಅಪವಾದದ ಭಯ ದಿಂದ ಹೊರ ಬರುತ್ತಿದ್ದೆವು.
ವಿದ್ಯಾನಗರ ಶಾಲೆಯಲ್ಲಿ ಓದುತ್ತಿದ್ದಾಗ, ಅಲ್ಲಿ ದೊಡ್ಡ ಗಣಪತಿಯ ಮೂರ್ತಿಯನ್ನು ಇಟ್ಟು, ನಾವು ದೊಡ್ಡಜಾಲದ ಎಂಟು ಜನ ಹುಡುಗರು ಅದರ ಅಲಂಕಾರ ಮಾಡಿ ಊರಿಗೆ ಹೋಗಲು ರಾತ್ರಿ ಆಗುತ್ತಿತ್ತು.. ನಮ್ಮ ಶ್ರೀನಿವಾಸ್ ಮೇಷ್ಟ್ರು ಜೊತೆಯಲ್ಲಿ ಬಂದು ನಮ್ಮ ಊರಿಗೆ ಬಿಟ್ಟು ಅವರ ಊರು ಬೆಟ್ಟಹಲಸೂರಿಗೆ ಹೋಗುತ್ತಿದ್ದರು.... ಗಣಪತಿಯನ್ನು ವಿಸರ್ಜಿಸುವ ಮೆರವಣಿಗೆ, ಮಧ್ಯದಲ್ಲಿ ವಿದ್ಯಾ ಗಣಪತಿಗೆ ಜೈ, ಮಹಾಗಣಪತಿಗೆ ಜೈ ಎಂಬ ಜೈಕಾರ, ತೋಟದ ಬಾವಿಯಲ್ಲಿ ಅದನ್ನು ಮುಳುಗಿಸುವ ಸಂಭ್ರಮ ಅದಾದ ನಂತರ ಚಿತ್ರಾನ್ನ ಮೊಸರನ್ನ ಸವಿಯುವ ಕ್ಷಣಗಳು ಬಹು ಸುಂದರ.
ಮೊದಲ ಬಾರಿಗೆ 1967 ರಲ್ಲಿ ನಾನು ಮದ್ರಾಸಿಗೆ ಹೋಗಬೇಕಾಗಿ, ಮನೆಯಿಂದ ದೂರ... ಗಣೇಶ ಹಬ್ಬವನ್ನು ಅಲ್ಲಿಯೇ ನಮ್ಮ ಪರಿಚಯದ ಸುನಂದ ಅವರ ಮನೆಯಲ್ಲಿ ಮಾಡುವ ಪ್ರಸಂಗ ಒದಗಿ ಬಂತು.... ಅಲ್ಲಿನ ಪುಳ್ಳೈಯಾರ್ ಪೂಜೆಯ ವಿಶಿಷ್ಟ ಅನುಭವವಾಯಿತು.
ಇನ್ನು ಶಹಾಬಾದಿನ ಜೀವನದ ಗಣೇಶನ ಹಬ್ಬದ ಪ್ರಸಂಗಗಳು ಸ್ಮರಣೀಯ.... ನಾವು ಒಂದಷ್ಟು ಜನ ಬ್ರಹ್ಮಚಾರಿಗಳು ಒಂದೆಡೆ ಸೇರಿ ಗಣೇಶನನ್ನು ಇಟ್ಟು ಪೂಜೆ ಮಾಡುತ್ತಿದ್ದೆವು... ಪೂಜೆ ಮಾಡಿಸುತ್ತಿದ್ದದ್ದು ನಾವು ಅವಧಾನಿಗಳು ಎಂದು ಕರೆಯುತ್ತಿದ್ದ ಅರ್. ಎಲ್ ಶ್ರೀನಿವಾಸ್.... ಸಂಜೆ ಗಣಪತಿಯನ್ನು ಬಿಡಲು ಹೋದಾಗ ಗಣಪತಿಗೆ ಜೈಕಾರಗಳು ಮೊಳಗುತ್ತಿದ್ದವು... ಮಧ್ಯೆ ಅದೇನು ಕುಶಾಲು ಬಂದಿತ್ತೋ ನಮ್ ಸತ್ತಿಗೆ( ಕೆ ಆರ್ ಸತ್ಯನಾರಾಯಣ.. ಈಗ ನಮ್ಮೊಂದಿಗಿಲ್ಲ.. ಮಹಾ ಮಾತುಗಾರ. ಅವನಿದ್ದಲ್ಲಿ ಹಾಸ್ಯದ ಹೊನಲಿಗೆ ಕೊರತೆ ಇರುತ್ತಿರಲಿಲ್ಲ) ಕಾಮಣ್ಣ ಮಕ್ಕಳು ಎಂದು ಘೋಷಿಸಿದ... ನಾವೆಲ್ಲ ಒಕ್ಕೊರಲಿನಿಂದ ಅದಕ್ಕೆ ಕಳ್ಳ ಸೂಳೆ ಮಕ್ಕಳು ಎಂದು ಸೇರಿಸಿದ್ದಾಯಿತು. ಸಂಧರ್ಭಾವಧಾನದ ನಮ್ಮ ಅವಧಾನಿ, ತಕ್ಷಣ ಬೈದಿದ್ದು.. ಸತ್ತಿ..ಯು ..ರಿಯಲಿ ಡೋಂಟ್ ಹ್ಯಾವ್ ಕಾಮನ್ ಸೆನ್ಸ್ ಐ ಸೇ... ಕಾರ್ಯಕ್ರಮವೇನೋ ಮುಕ್ತಾಯವಾಯಿತು, ಆದರೆ ಸತ್ತಿಗೆ ಬೈಗುಳ ಮಾತ್ರ ಮುಂದುವರೆದಿತ್ತು.. ಜೊತೆ ಜೊತೆಗೆ ನಾವೆಲ್ಲ ಅದನ್ನೇ ನೆನೆಸಿಕೊಂಡು ನಗುವುದು ನಡೆದಿತ್ತು..
ಮತ್ತೊಂದು ವರ್ಷದ ಕಹಿ ನೆನಪು... ನಾನು ಮತ್ತು ರಘು ( ಕೆ ಎಸ್ ರಘುನಾಥ್) ಇಬ್ಬರು ಪೂಜೆಗೆ ಬೇಕಾದ ಸಾಮಾನುಗಳನ್ನು ತರಲು ಶಹಾಬಾದ್ ಊರಿಗೆ ಸೈಕಲ್ ಮೇಲೆ ಹೋಗಿದ್ದೆವು... ಕೆಟ್ಟಘಳಿಗೆ... ರಘುನಾಥ್ ಸೈಕಲ್ಲು, ಒಂದು ಮಗುವಿಗೆ ತಗಲಿ ಮಗು ಕೆಳಗೆ ಬಿತ್ತು.. ಜನ ಮುತ್ತಿದರು... ಮಾತುಕತೆಯ ನಂತರ ಮಗುವಿನ ಔಷಧೀಯ ಖರ್ಚಿಗೆ 20 ರೂಪಾಯಿ ಕೊಟ್ಟು ಅಲ್ಲಿಂದ ಹಿಂತಿರುಗಿದೆವು.... ಹಬ್ಬದ ಸಂಭ್ರಮದಲ್ಲಿ ಮರೆತುಬಿಟ್ಟೆವು . ಮಾರನೆಯ ದಿನ ಗಣಪತಿಯ ಪೂಜೆ ಕೊನೆಯ ಹಂತಕ್ಕೆ ಬಂದಿತ್ತು, ಆಗ ನಮ್ಮ ಮನೆಯ ಮುಂದೆ ಯಾರೋ ವ್ಯಕ್ತಿ ಬಂದು ಕೂಗಾಡುತ್ತಿದ್ದ... ಚೆನ್ನಾಗಿ ಜ್ಞಾಪಕವಿರುವ ಭಾಗ " ಕೋನ್ ಲಿಯ ಬೀಸ್ ರೂಪಾಯ್.... ಉಸ್ಕಾ...." ಮುಂದೆ ಕೆಟ್ಟ ಭಾಷೆ. ವಿಚಾರಿಸಲಾಗಿ... ಆತ ಆ ಮಗುವಿನ ಕಡೆಯವನು... ಮತ್ತಷ್ಟು ಹಣ ಕೇಳುವ ಆಸೆಯಿಂದ ಬಂದವನು.. ಅವನ ಕೂಗಾಟ ಮುಗಿಲನ್ನು ಮುಟ್ಟಿತ್ತು. ನಮ್ಮಿಬ್ಬರನ್ನು ಆಚೆ ಕರೆಯುವಂತೆ ಒತ್ತಾಯ... ನಾನು ರಘು ಗುಬ್ಬಚ್ಚಿಯಂತೆ ಮುದುರಿದ್ದೆವು... ಸಾಕಷ್ಟು ಸಮಯದ ಗೊಂದಲದ ನಂತರ ಅಲ್ಲಿಗೆ ಬಂದವರು ಅಂಕಲ್, ( ಅವರ ಹೆಸರ ಜ್ಞಾಪಕಕ್ಕೆ ಬರುತ್ತಿಲ್ಲ.. ಆದರೆ ಅವರ ಮುಖ ಚರ್ಯೆ ಮಾತ್ರ ನನ್ನ ಕಣ್ಣ ಮುಂದಿದೆ) ಅವರು ಸಹ ನಮ್ಮ ಫ್ಯಾಕ್ಟರಿಯಲ್ಲೇ ಕೆಲಸ ಮಾಡುತ್ತಿದ್ದವರು, ನಮ್ಮ ರಸ್ತೆಯಲ್ಲಿ ಇದ್ದವರು... ಬಂದೊಡನೆ ಅವರು ಆ ವ್ಯಕ್ತಿಯನ್ನು ಕುತ್ತಿಗೆ ಪಟ್ಟಿ ಹಿಡಿದು ನಿಲ್ಲಿಸಿದರು... ವಿಚಾರಣೆಗೆ ಮತ್ತೆ ಊರಿಗೆ ಹೋಗೋ ನಿರ್ಧಾರವಾಯಿತು.. ಅಂಕಲ್ , ಬಂದ ವ್ಯಕ್ತಿ ಮತ್ತು ನಾವುಗಳು ಎಲ್ಲರೂ ಮೆರವಣಿಗೆ ಶಹಾಬಾದ್ ಊರಿನತ್ತ.... ದಾರಿಯಲ್ಲಿ ಮತ್ತೆ ಮತ್ತೆ ಆತನ ಕೂಗಾಟ, ಇದ್ದಕ್ಕಿದ್ದಂತೆ ಅಂಕಲ್ ಅವನ ಕೆನ್ನೆಗೆ ಪಠಾರ್ ಎಂದು ಬಾರಿಸಿದರು... ಏನಾಯ್ತೋ..ಅವನು ಊರ ಕಡೆ ಓಟಕಿತ್ತ.... ಅಂಕಲ್ ನಮಗೆ ಹೇಳಿದ್ದು..." ನೀವೆಲ್ಲ ಫುಕ್ಕಲರಾಗಬಾರದು.. ಧೈರ್ಯ ಇರಬೇಕು... ಹೋಗಿ ಎಲ್ಲ ಊಟ ಮಾಡಿ".. ಅಬ್ಬಾ...ಎಂಥ ಸಮಾಧಾನ.... ಇದನ್ನು ಬರೆಯುವಾಗ ಸಹ ನನಗೆ ಒಂದು ದೊಡ್ಡ ನಿಟ್ಟುಸಿರು ಹೊರಗೆ ಬಂತು....
ನಾವಿದ್ದ ಕಾಲನಿಯ ಹತ್ತಿರವೇ ಇದ್ದ ಭಂಕೂರು ಗಣಪತಿ... ಒಂದು ದೊಡ್ಡ ಸುಂದರ ಮೂರ್ತಿ... ಆಕಾಶವೇ ಅದಕ್ಕೆ ಸೂರು.... ಎಷ್ಟೋ ಸಲ ನನ್ನ ಬೆಳಗಿನ ವಾಕಿಂಗ್ ಈ ಗಣಪತಿಯ ಬಳಿಗೆ...ಈ ಗಣಪತಿಗೆ ಹರಕೆಯ ಸೇವೆ ಎಂದರೆ...ಹೊಸ ಬಣ್ಣ ಬಳಿಯುವುದು..ಅದೆಷ್ಟು ಬಾರಿ ಬಣ್ಣ ಬದಲಾಗಿದೆಯೋ..ಆ ಗಣಪನೇ ಬಲ್ಲ...
ಈಗ ಪರಿಸರದ ದೃಷ್ಟಿಯಿಂದ.... ಬಣ್ಣ ಹಚ್ಚಿದ ಗಣೇಶ ಮೂರ್ತಿಗಳನ್ನು , ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ಮಾಡಿದ ಮೂರ್ತಿಗಳನ್ನು ಉಪಯೋಗಿಸಬಾರದು ಎಂದು ಸರ್ಕಾರದ ಆದೇಶ... ಆದರೆ ನಮ್ಮ ಜನ ಆಡಂಬರದ ಹಿಂದೆ ಬಿದ್ದು ಇದನ್ನೇ ಮಾಡುತ್ತಿದ್ದಾರೆ.... ತಕ್ಕಮಟ್ಟಿನ ಸಮಾಧಾನದ ವಿಷಯ ಎಂದರೆ ಈಗಿನ ಮಕ್ಕಳು “ಪರಿಸರ ಗಣೇಶ” ನ ಅವಶ್ಯಕತೆಯನ್ನು ಅರಿಯುತ್ತಾ.. ಅದನ್ನು ಅಳವಡಿಸುವ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದಾರೆ... ಶಾಲೆಗಳು ಹಾಗೂ ಬೇರೆ ಸಮಾಜಮುಖಿ ಸಂಘ ಸಂಸ್ಥೆಗಳು ಮಣ್ಣಿನ ಗಣೇಶನನ್ನು ಮಾಡುವ ತರಬೇತಿ... ಹಾಗೂ ಪರಿಸರದ ಪ್ರಾಮುಖ್ಯತೆಯನ್ನು ಎತ್ತಿ ಹೇಳುವ ವಿಷಯಗಳನ್ನು ಮಕ್ಕಳಿಗೆ ತಿಳಿಸುತ್ತಿವೆ.
ಯಾವುದೇ ಪೂಜೆ ಇರಲಿ ಮೊದಲು ವಿಘ್ನ ವಿನಾಶಕ ಗಣಪತಿಗೆ ಅಗ್ರ ಪೂಜೆ... ಸಾರ್ವಜನಿಕ ಕಾರ್ಯಕ್ರಮಗಳಲ್ಲಿ.. ಗಜಮುಖನೇ ಗಣಪತಿಯೇ ನಿನಗೆ ವಂದನೆ ...ಎಂದು ಶುರುವಾದ ಹಾಡಿನ ಭರಾಟೆ ಎಲ್ಲ ತರಹದ ಚಿತ್ರಗೀತೆಗಳ ಸಂಗಮ... ಆರ್ಕೆಸ್ಟ್ರಾಗಳ ಹಾಡಿನ ಉತ್ತುಂಗ ಸೇವೆ...ಅದು ಗಣೇಶನಿಗೆ ಸಂಬಂಧವೇ ಇಲ್ಲದಿರಬಹುದು.... ಜನರಂಜನೆಗೆ ಮಾತ್ರ.
ಎಲ್ರಿಗೂ ಗಣೇಶನ ಆಶೀರ್ವಾದ ಸಂಪೂರ್ಣ ಸಿಗಲಿ ಎಂದು ಪ್ರಾರ್ಥಿಸುತ್ತಾ... ಇಂಥ ವಿಶೇಷ ಮಹತ್ವವುಳ್ಳ ಗಣೇಶನಿಗೆ.. ಜೈಕಾರ ಹಾಕಿ ಮತ್ತೆ ಮುಂದಿನ ವರ್ಷ ಬೇಗ ಬಾ ಎಂದು ಹೇಳುತ್ತಾ... ವಿದಾಯ ಹೇಳೋಣವೇ... ಗಣಪ... ಇದೋ ನಿನಗೆ 21 ನಮಸ್ಕಾರಗಳು..
ಗಣೇಶನ ಕಥೆ ಚೆನ್ನಾಗಿದೆ ಜೈ ಗಣೇಶ.
ReplyDeleteಸನಾತನ ಧರ್ಮದ ಬಗ್ಗೆ ಒಂದು ಕಡೆ ಸಲ್ಲದ ಆರೋಪ, ಅಪಪ್ರಚಾರ ನಡೆಸಲಾಗುತಿರುವಾಗ ಎಲ್ಲರ ಮೆಚ್ಚಿನ ಗಣಪ ನಮ್ಮ ಮನೆಗಳಲ್ಲಿ ಒಂದು ರೀತಿಯ ಸಡಗರ ತುಂಬಿದ್ದು ಈ ಹಬ್ಬಗಳು ಭಾರತದಾದ್ಯಂತ ನಮ್ಮ ಆರ್ಥಿಕತೆಗೆ ನೀಡುವ ಕೊಡುಗೆ ಅಪಾರ... ಒಮ್ಮೆ ಯೋಚಿಸಿ... ಹೂವು, ಹಣ್ಣು, ಪೂಜಾ ಸಾಮಗ್ರಿ... ಗರಿಕೆ ಹುಲ್ಲನ್ನು ಕೂಡ ಮಾರಿ ಜೀವನ ನಡೆಸುವ, ಹಾಡು, ಸಂಗೀತ, ಪ್ರಸಾದ, ಪ್ರವಾಸ ಎಲ್ಲಾ ಕೋಟಿ ಕೋಟಿ ಜನರಿಗೆ ಉದ್ಯೋಗಾವಕಾಶ ನೀಡಿದೆ, ವಿಜ್ಞಾನದ ವಿಘ್ನ ನಿವಾರಣೆಗೂ ಕೂಡ ವಿನಾಯಕನ ನೆರವು ಬಯಸುವ ನಮ್ಮ ಸಂಸ್ಕೃತಿ ವಿಶಿಷ್ಟ, ಹಾಗೆ ನಿಮ್ಮ ನೆನಪಿನ ಸುಳಿ ಇಂದ ಬಂದ ಲೇಖನ ಸುಂದರವಾಗಿ ಮೂಡಿಬಂದಿದೆ
ReplyDeleteಬಾಬು
ಹಬ್ಬಗಳಲೆಲ್ಲಾ ಗಣೇಶನ ಹಬ್ಬ ಬಹಳ ಆನಂದ ಹಾಗೂ ಮನಸ್ಸಿಗೆ ಮುದ ನೀಡುವುದಾಗಿದೆ.
ReplyDeleteನಾನು ಎಲ್ಲೋ ಕೇಳಿರುವಂತೆ ಕೋಪ,ಅಸೂಯೆ,ದ್ವೇಷ ಇತ್ಯಾದಿಗಳಿಂದ ಕೂಡಿರುವ ಚಿಕ್ಕ ಕೆರೆಯಲ್ಲಿ ನಮ್ಮ ಮನದ ಅವಗುಣಗಳನ್ನು ಬಿಟ್ಟು, ತ್ಯಾಗ,ಶಾಂತಿ,ಸುಖ,ಸಂಭ್ರಮದಿಂದ ಕೂಡಿರುವ ದೊಡ್ಡದಾದ ಕೆರೆಯಲ್ಲಿ ಮುಂದಿನ ವರ್ಷ ಏಳೋಣವೆಂದು ಈ ರೀತಿ ಹೇಳುವುದೇ ಅದರ ಉದ್ದೇಶವಂತೆ.
ಗಣೇಶನ ಹಬ್ಬದ ಆಚರಣೆ ಕಾಲಕ್ರಮದಲ್ಲಿ ಹಲವಾರು ಆಯಾಮಗಳನ್ನು ಪಡೆದಿದ್ದರೂ ಆಗಿನ ದಿನಗಳ ಆಚರಣೆಯ ಸೊಬಗು, ಸೊಗಡೇ ಚೆಂದ, ಚೇತೋಹಾರಿ.
ಹಳೆಯ ಸುಂದರ ನೆನಪುಗಳನ್ನು ಸ್ಮೃತಿಪಟಲದಿಂದ ಎಬ್ಬಿಸಿ, ಗತವೈಭವಕ್ಕೆ ಕರೆದೊಯ್ದ ತಮಗೆ ಧನ್ಯವಾದಗಳು.
ಗುರುಪ್ರಸನ್ನ,
ಚಿಂತಾಮಣಿ
ತುಂಬಾ ಚೆನ್ನಾಗಿ ಬರೆದಿದ್ದೀರಿ🙏👍
ReplyDelete