ಪಂಚವಟಿಯಲ್ಲಿ ...ಕೃಷ್ಣ...
ಹೋದ ಭಾನುವಾರ ವೈಯಕ್ತಿಕ ಕಾರ್ಯನಿಮಿತ್ತ ಮೈಸೂರಿಗೆ ಹೋಗಬೇಕಾಗಿತ್ತು... ಸಾಮಾನ್ಯವಾಗಿ ಮೈಸೂರಿಗೆ ಹೋದಾಗ ಅಣ್ಣನ ಮನೆಯಲ್ಲಿ( ಸತ್ತಿ ಸರ್) ಊಟ ಉಪಚಾರ... ಆದರೆ ಈ ಬಾರಿ ಅತ್ತಿಗೆ ಊರಲ್ಲಿರದ ಕಾರಣ ಹೋಟೆಲ್ ಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ನಾವು ಊಟಕ್ಕೆ ಬಂದಿದ್ದು ಪಂಚವಟಿಗೆ... ವಾತಾವರಣ / ಪರಿಸರ ಚೆನ್ನಾಗಿತ್ತು... ಒಳಗೆ ಹೋದಾಕ್ಷಣ ಕಣ್ಣಿಗೆ ಕಂಡದ್ದು ಸುಂದರವಾದ ಕೃಷ್ಣನ ವಿಗ್ರಹ. ಊಟಕ್ಕೆ ಕೂತಾಗ ಮತ್ತೊಮ್ಮೆ ಅದೇ ವಿಗ್ರಹ ಕಣ್ಣಿಗೆ ಬಿತ್ತು... ಆಗ ಬಂದ ಯೋಚನೆ ಪಂಚವಟಿಗೂ ಕೃಷ್ಣನಿಗೂ ಹೇಗೆ ಸಂಬಂಧ??.... ನನ್ನ ರಾಮಾಯಣ ಮಹಾಭಾರತದ ಜ್ಞಾನಕ್ಕೆ ಹಾಗೂ ನನ್ನ ಬುದ್ಧಿವಂತಿಕೆಗೆ ನಾನೇ ಮೆಚ್ಚಿಕೊಂಡೆ.. ಹೇಳಿಕೊಂಡೆ ಪಂಚವಟಿಯಲ್ಲಿ ಕೃಷ್ಣ ಹೇಗೆ.... ಅದು ರಾಮಾಯಣದ ರಾಮ ಸೀತೆ ಲಕ್ಷ್ಮಣ ಇದ್ದ ಜಾಗ.... ಕಬ್ಬಿಣದ ಅಂಗಡಿಯಲ್ಲಿ ನೊಣಕ್ಕೇನು ಕೆಲಸ... ತಕ್ಷಣ ಇನ್ನೊಂದು ಮನಸ್ಸು ಹೇಳಿತು.. ಅಯ್ಯಾ.. ರಂಗನಾಥ ಪಂಚವಟಿ ಹೋಟೆಲ್ ನ ಹೆಸರು... ಕೃಷ್ಣ.... ದೇವರ ವಿಗ್ರಹ.. ಬಹುಶಃ ಹೋಟೆಲ್ ಯಜಮಾನರ ಆರಾಧ್ಯ ದೈವ ಇರಬಹುದಲ್ಲವೇ..???. ಯೋಚಿಸಬೇಕಾದ್ದೆ...
ಸಾಮಾನ್ಯವಾಗಿ ಅಚ್ಚ ಸಸ್ಯಾಹಾರಿ ಹೋಟೆಲ್ ನಡೆಸುವ ಕಲೆ ಉಡುಪಿ ಮಂಗಳೂರು ಕಡೆಯವರಿಗೆ ಕರಗತವಾಗಿದೆ... ಸಹಜವಾಗಿ ಉಡುಪಿ ಕೃಷ್ಣ.. ಪೊಡವಿಗೊಡೆಯ... ಅವರಿಗೆ ಅಚ್ಚುಮೆಚ್ಚು... ಅದಲ್ಲದೆ ಹೆಸರು ಅವರ ಇಷ್ಟಕ್ಕೆ ಸಂಬಂಧಪಟ್ಟವಿಷಯ..ಅವರ ಆಯ್ಕೆ... ಅದನ್ನು ಪ್ರಶ್ನೆ ಮಾಡಲು ನಾನ್ಯಾರು.. ಹೊಳೆನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇ? ನನಗೆ ನಾನೇ ಸಮಾಧಾನ ಮಾಡಿಕೊಂಡೆ.
ಈ ಕೃಷ್ಣ ಚಿಂತನೆ ತಲೆಗೆ ಬಂದಾಗ ಜ್ಞಾಪಕಕ್ಕೆ ಬಂದಿದ್ದು ಕೃಷ್ಣ ಜನ್ಮಾಷ್ಟಮಿ ಇನ್ನು ಕೆಲವೇ ದಿನದಲ್ಲಿ ಇದೆ..ಎಂದು. ಇದು ಕಾಕತಾಳಿಯವೋ ಅಥವಾ ಕೃಷ್ಣಪ್ರೇರಣೆಯೋ.. ಆ ಕೃಷ್ಣನೇ ಬಲ್ಲ... ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ.. ಎಂದು ಹೇಳುತ್ತಿದ್ದ ಅಜ್ಜಿಯ ಹಾಡು ಕಿವಿಯಲ್ಲಿದೆ... ಆದರೆ ಕೃಷ್ಣನಾಗಿ ನಾನು ಪಟ್ಟ ಪಾಡು..... ನನ್ನಕ್ಕ ಗಿರಿಜಾಂಬ.. ತನ್ನ ಗೆಳತಿಯರ ಜೊತೆಗೂಡಿ ನೃತ್ಯ ಕಾರ್ಯಕ್ರಮದ ತಾಲೀಮು... ಅದರಲ್ಲಿ ನಾನು ಕೃಷ್ಣನಾಗಿ ಕೊಳಲನ್ನು ಕೈಯಲ್ಲಿ ಹಿಡಿದು ಮಧ್ಯದಲ್ಲಿ ಕೃಷ್ಣನ ಭಂಗಿಯಲ್ಲಿ ನಿಲ್ಲಬೇಕು, ಅವರೆಲ್ಲ ಸುತ್ತಲೂ ಹಾಡು ಹೇಳಿಕೊಂಡು ನೃತ್ಯ ಮಾಡಬೇಕು... ಅವರ ನೃತ್ಯಾಭ್ಯಾಸ ನಿರಂತರ ...ನನಗೆ ಬೇಜಾರು.. ಕೈ ಕೆಳಗಿಳಿಸಿದರೆ, ಭಂಗಿ ಬದಲಾಯಿಸಿದರೆ... ಅವರಿಗೆ ಕೋಪ.. ನನ್ನ ತಲೆಯ ಮೇಲೆ ಕುಟ್ಟಿ ......ಸರಿಯಾಗಿ ನಿಲ್ಲುವ ಶಿಕ್ಷೆ...
ಮತ್ತೊಂದು ಕಾಕತಾಳಿಯ... ನಮ್ಮಮ್ಮ ಹೆತ್ತ ಎಂಟು ಮಕ್ಕಳಲ್ಲಿ ನಾನು ಕೊನೆಯವ.. ಹಾಗಾಗಿ ಕೃಷ್ಣ.... ಕೃಷ್ಣ ಎಂಬುವ ಹೆಸರು ಈಗಾಗಲೇ ಒಬ್ಬ ಮಗನಿಗೆ ಇಟ್ಟಿದ್ದರಿಂದ.. ನನಗೆ ಸಮಾನ ಹೆಸರು.. ಹಾಗಾಗಿ ನಾನು ರಂಗ.
ಹೆಸರು.. ನಾಮಪದ.... ಒಬ್ಬ ವ್ಯಕ್ತಿ, ವಸ್ತು, ಪ್ರಾಣಿ ಅಥವಾ ಸ್ಥಳವನ್ನು ಗುರುತಿಸಲು ಬೇಕಾದ ಒಂದು ಪದ (ಇದು ಕನ್ನಡ ವ್ಯಾಕರಣದ ಪಾಠ)
ಹೆಸರಲ್ಲಿ ಏನಿದೆ? ಎನ್ನುವ ಕೇಳಿಕೆ ಕೆಲಸಲ ಸರಿ ಏನೋ ಅನಿಸುತ್ತೆ... ಶೇಕ್ಸ್ ಪಿಯರ್ ಹೇಳಿದಂತೆ ” call rose by any other name it smells as sweet" ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದರ ಸುವಾಸನೆ ಬದಲಾಗದು.
ಇದರ ಇನ್ನೊಂದು ಮುಖ... ಬೀಚಿಯವರ " ಸುಖವಿಲ್ಲಾ".. ಮನೆಯ ಹೆಸರು..... ಬೀಚಿಯವರ ಹೆಸರೇ ಭೀಮಸೇನ ಆದರೆ ಅವರು ನರಪೇತಲ ಅಲ್ಲದಿದ್ದರೂ ಭೀಮಕಾಯರಂತೂ ಆಗಿರಲಿಲ್ಲ.. ಹೆಸರಲ್ಲಿ ಏನಿದೆ? . ನನ್ನ ಸೋದರ ಸಂಬಂಧಿ ಅಪ್ಪಯ್ಯ ಹೇಳುತ್ತಿದ್ದ ಒಂದು ಪದ್ಯ... ಅಂದವಿಲ್ಲ ಚಂದವಿಲ್ಲ ಸುಂದರಮ್ಮ, ದುಡ್ಡಿಲ್ಲ ಕಾಸಿಲ್ಲ ಸಂಪತ್ ಕುಮಾರ್... ರೆಕ್ಕೆ ಇಲ್ಲ ಪುಕ್ಕ ಇಲ್ಲ ಗರುಡ ಅಯ್ಯಂಗಾರ್" ... ಹೆಸರು ಲಕ್ಷ್ಮಿಪತಿ... ಆದರೆ ಪತಿಯಾಗೋ ಸೌಭಾಗ್ಯ ಮುಪ್ಪಾದರೂ ಬಂದಿಲ್ಲ.... ಹಾಗಾದ್ರೆ ಹೆಸರಿಗೆ ಏನು ಅರ್ಥ, ಪ್ರಾಮುಖ್ಯತೆ ಇಲ್ಲವೇ? ... ಅದಕ್ಕೇ ಇರಬಹುದು ಸಾರ್ಥಕನಾಮ ಅನ್ವರ್ಥನಾಮ ಅನ್ನುವ ವ್ಯಾಕರಣದ ವಿಶೇಷಣಗಳ ಪ್ರಯೋಗ.
ಹೆಸರು ಮಾಡಬೇಕು ಅನ್ನೋದು.. ಒಂದು ತರಹದ ಗೀಳು .. ಅದನ್ನು ಸಾಧಿಸಲು ಕೆಲವರು (ಅದರಲ್ಲೂ ನಮ್ಮ ರಾಜಕಾರಣಿಗಳು) ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಅದಕ್ಕೇ ನಮ್ಮ ಡಿವಿಜಿಯವರು ಹೇಳಿರುವುದು... ಮನ್ನಣೆಯ ದಾಹವದು ಎಲ್ಲದಕೂ ತೀಕ್ಷ್ಣ ತಮ, ಕೊಲ್ಲುವುದದಾತ್ಮವನೇ ಮಂಕುತಿಮ್ಮ ಎಂದು.
ಕೆಲವು ಸಲ ಹೆಸರು ಸಹ ಮುಖ್ಯವಾಗುತ್ತದೆ... ಕೆಲವರಿಗೆ ತಮ್ಮ ಅಂತಸ್ತು ತೋರಿಸುವ ಹೆಸರು (designation) ಬೇಕು... ಅದಕ್ಕೆ ಪೂರಕವಾಗಿ ಮತ್ತೊಂದು ಇಂಗ್ಲೀಷ್ ನ ಹೇಳಿಕೆ ಇದೆ...call me a scavenger but pay me fat salary.... ಇಲ್ಲಿ ಹಣಕ್ಕೆ ಪ್ರಾಮುಖ್ಯತೆ.. ಹೆಸರಿಗಲ್ಲ.
ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಬರಹ ಬಂದಿತ್ತು... ಅದರಲ್ಲಿ ಊರ ಹೆಸರನ್ನು ತೋರಿಸುವ ಚಿತ್ರವನ್ನು ಹಾಕಿ ಊರಿನ ಹೆಸರು " ಮುಂಡೆ" ಎಂದು ಬರೆದಿತ್ತು. ಸಾಮಾನ್ಯವಾಗಿ ಬಸ್ ಕಂಡಕ್ಟರ್ಗಳು... ಯಾರ್ರೀ ಬೆಂಗಳೂರು, ಯಾರ್ರೀ ಮೈಸೂರು.. ಎಂದು ಹೇಳುವುದು.... ಮೇಲಿನ ಊರಿನ ಹೆಸರನ್ನು ಕರೆಯುವಾಗ ಕಂಡಕ್ಟರ್ಗಳ ಪರಿಸ್ಥಿತಿ ಹೇಗಿರಬೇಡ?...... ಅವರು ಹೇಳಿದ್ದನ್ನು ಯಾರಾದರೂ ಪ್ರಶ್ನೆ ರೂಪದಲ್ಲಿ ಸ್ವೀಕರಿಸಿದರೆ.... ಜಟಾಪಟಿ ಆಗ ಬಹುದು ಅಲ್ಲವೇ?
ಹನುಮಂತನಗರದಲ್ಲಿ... ಸುಮಾರು 50 ವರ್ಷಗಳ ಹಿಂದೆ ಪ್ರಾರಂಭವಾದ, ನಿರ್ಮಲಾ ಸ್ಟೋರ್ಸ್ ಎಂಬ ಬಸ್ ನಿಲ್ದಾಣ ಈಗಲೂ ಚಾಲ್ತಿಯಲ್ಲಿದೆ... ಆದರೆ ನಿರ್ಮಲಾ ಸ್ಟೋರ್ಸ್ ಮಾತ್ರ ಅಲ್ಲಿಲ್ಲ... ಹೆಸರಿನ ಬಾಳಿಕೆ- ತಾಳಿಕೆ ಎಷ್ಟಿದೆ ಅಲ್ವಾ?
" ನೀನ್ಯಾಕೋ ನಿನ್ನ ಹಂಗ್ಯಾಕೋ.. ರಂಗ.. ನಿನ್ನ ನಾಮದ ಬಲವೊಂದಿದ್ದರೆ ಸಾಕೋ".... ಎನ್ನುವಾಗ ದಾಸವರೇಣ್ಯರು ದೇವರಿಗಿನ್ನ ಅವನ ಹೆಸರೇ ಸಾಕು ಎಂದರೆ... ಇನ್ನೊಂದು ಹೇಳಿಕೆ ರಂಗಧಾಮ ನಿನ್ನ ನಂಬಿದವರಿಗೆ ಮೂರು ಪಂಗನಾಮ ಎಂಬುದೂ ಚಾಲ್ತಿಯಲ್ಲಿದೆ.
ಪುಟ್ಟ ಮಕ್ಕಳನ್ನು ಮುದ್ದು, ಚಿನ್ನ, ಬಂಗಾರ ವಜ್ರ,ವೈಢೂರ್ಯ,ಪಾಪು, ಕುಚ್ಚಿ ಮುಚ್ಚಿ, ಹೀಗೆ ಅರ್ಥವಿರುವ ಅರ್ಥವಿಲ್ಲದ ಹೆಸರುಗಳಿಂದ ಕರೆದು ಮುದ್ದು ಮಾಡುತ್ತೇವೆ. ಕಿಟ್ಟ, ಕಿಟ್ಟಿ, ಕುಳ್ಳಿ, ಪಾಪುಳ್ಳಿ, ತಾಮಣ್ಣಯ್ಯ, ಇವೆಲ್ಲಾ ನಾ ಕೇಳಿದ ಹೆಸರುಗಳು.
ಅಮ್ಮ ನನ್ನನ್ನು ಪ್ರೀತಿಯಿಂದ ಕರೆಯುತ್ತಿದ್ದ ರಂಗಾ... ರಂಗಪ್ಪ ಹಾಗೂ ಕೋಪ ಬಂದಾಗ ರಂಗ್....ಗಪ್ಪಾ... ಇವು ಇಂದಿಗೂ ನನ್ನ ಪ್ರಿಯವಾದ ಶಬ್ದಗಳು.... ತರಲೆ ಮಾಡಿದಾಗ ನಮ್ಮಮ್ಮ ನನ್ನನ್ನು ಹೋಲಿಸುತ್ತಿದ್ದದ್ದು ಜೋರಾಪಾತಾ ಎಂಬ ಹಾವಿಗೆ... ಅದು ಬಾಲ ಹಿಡಿದರೆ ಕಚ್ಚತ್ತೆ.. ತಲೆಯನ್ನು ಹಿಡಿದರೆ ಬಾಲದಲ್ಲಿ ಹೊಡೆಯುತ್ತೆ.. ಇದು ಅಮ್ಮ ಕೊಟ್ಟ ಅಭಿಧಾನ.. ಬೈಗುಳವಾದರೂ ನನಗೆ ಹೆಮ್ಮೆ.
ನನ್ನ ಪರಿಚಯದ ಗುಂಪಿನಲ್ಲಿ, ರಂಗ, ರಂಗನಾಥ, ಡಿಸಿ, ಡಿಸಿ ರಂಗ, ಡಿಸಿಆರ್, ತಮಾಷೆಯಾಗಿ ಡೆಪ್ಯೂಟಿ ಕಮಿಷನರ್, ಎಂದು ಕರೆಯುವುದುಂಟು... ನಾನು ಡಿಸಿ ಎಂದರೆ ಡಬಲ್ ಕ್ರ್ಯಾಕ್ ಕೂಡ ಆಗುತ್ತದೆ ಎಂದು ಹಾಸ್ಯ ಮಾಡಿದ್ದೂ ಇದೆ.
ಹೆಸರಿನ ಬಗ್ಗೆ ಈಚೆಗೆ ಒಂದು ಜಿಜ್ಞಾಸೆ ನಡೆಯಿತು.... ನಮ್ಮ ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ. ನಂಜನಗೂಡಿನ ಈಶ್ವರನ ದೇವಸ್ಥಾನದ ಹೆಸರು ಶ್ರೀಕಂಠೇಶ್ವರ ದೇವಸ್ಥಾನ.. ಆದರೆ ದೇವರನ್ನು ನಂಜುಂಡೇಶ್ವರ ಎಂದು ಕರೆಯುವುದುಂಟು... ಯಾಕೆ ಹೀಗೆ... ನಂಜನು ಉಂಡವನು ನಂಜುಂಡ... ಉಂಡ ನಂಜಿನಿಂದ ಕಂಠ ಕಪ್ಪಾದವನು ಶ್ರೀಕಂಠ (ಶ್ರೀಗೆ ಕಪ್ಪು ಎನ್ನುವ ಅರ್ಥವೂ ಉಂಟು). ಹಂಗಾಗಿ ಎರಡರ ಭಾವವು ಒಂದೇ...
ನಾನು ರಾಷ್ಟ್ರೀಯ ವಿದ್ಯಾಲಯದಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ನಮಗೆ ಸೋಶಿಯಲ್ ಸ್ಟಡೀಸ್ ಪಾಠ ಮಾಡುತ್ತಿದ್ದ ಡೀವಿಕೆ( ಡಿ ವಿ ಕೃಷ್ಣಮೂರ್ತಿ) UNO ದ ಸೆಕ್ರೆಟರಿ ಜನರಲ್ ಹೆಸರು ಡ್ಯಾಗ್ ಹ್ಯಾಮರ್ಶೀಲ್ಡ್.. ಎಂದು... ಅದನ್ನು ಇಂಗ್ಲಿಷ್ ನಲ್ಲಿ ಬರೆಯುವಾಗ Dag Hammarskjoeld ಎಂದು ಬರೆಯಬೇಕೆಂದು ಹೇಳಿದಾಗ... ನಮ್ಮ ಕ್ಲಾಸಿನಲ್ಲಿದ್ದ ಬುದ್ಧಿವಂತ ಹಾಗೂ ಅಷ್ಟೇ ತರಲೆಯಾಗಿದ್ದ ಚಂದ್ರಶೇಖರನ ಚಿಂತನೆ...ಡಿವಿಕೆ ಹೆಸರನ್ನು kfrgkftyold ಎಂದು ಬರೆಯಬಾರದೇ... ಅದಕ್ಕೆ ಡಿವಿಕೆ ಹೇಳಿದ್ದು." ಲೋ ಚಂದ್ರ, ನನ್ನ ಹೆಸರನ್ನ ನಾನು ಹೆಂಗ್ ಬರೀತೀನಿ ಹಂಗೇ ಬರೀಬೇಕು ಕಣೋ , ತಲಹರಟೆ ಮಾಡಬಾರದು" . ನಾಮಪದಗಳನ್ನು ಅದರಲ್ಲೂ ವ್ಯಕ್ತಿಗಳ ಹೆಸರನ್ನು ನಮ್ಮ ಇಷ್ಟದಂತೆ ಬರೆಯಬಾರದು... ಅವರು ಹೇಗೆ ಬರೆಯುತ್ತಾರೋ ಹಾಗೇ ಬರೆಯಬೇಕು.
ಇನ್ನು ಹೆಸರು ಕೇಳುವಾಗ.. ಪುಟ್ಟ ಮಕ್ಕಳನ್ನು" ಏನು ಪುಟ್ಟ ನಿನ್ನಹೆಸರು" ಅಥವಾ " ನಮ್ಮ ಪಾಪು ಹೆಸರೇನು"... ಹೊಸದಾಗಿ ಕ್ಲಾಸಿಗೆ ಬಂದ ಹುಡುಗಿಯನ್ನು "ಏನಮ್ಮ ನಿನ್ನ್ ಹೆಸರು"... ತಪ್ಪು ಮಾಡಿದ ಮಕ್ಕಳ ಹೆಸರು ಗುರುತಿಸಲು ಮೇಷ್ಟ್ರು ಹೇಳೋದು" ಯಾರದು ಗಲಾಟೆ ಮಾಡೋದು"... ಇನ್ನು ಪೊಲೀಸ್ನವರು ವಿಚಾರಣೆ ವೇಳೆ" ಏನೋ ನಿನ್ಹೆಸರು".. ಯಾರಾದರೂ ಹಿರಿಯರು ಬಂದ್ರೆ" ತಮ್ಮ ಹೆಸರೇನು ಸ್ವಾಮಿ"... ಇನ್ನೂ ಗೌರವವಾಗಿ...." ತಮ್ಮ ನಾಮಧೇಯ ಏನು?"... ಹೀಗೆ.....ವ್ಯಕ್ತಿಯಿಂದ ವ್ಯಕ್ತಿಗೆ, ಸಮಯದಿಂದ ಸಮಯಕ್ಕೆ ಪದಗಳು, ಧ್ವನಿಯ ಏರಿಳಿತಗಳು ವ್ಯತ್ಯಾಸವಾಗುತ್ತದೆ.
ಪ್ರವರ ಸಮೇತ ಹೆಸರು ಹೇಳಿ, ಪರಿಚಯಿಸಿಕೊಂಡು, ನಮಸ್ಕರಿಸುವ ಕ್ರಮವೂ ಉಂಟು.
ಕೆಲ ಮನೆಗಳಲ್ಲಿ ಮುದ್ದು ಮಾಡಲು ಬೈಗುಳಗಳನ್ನು ಬೆರೆಸುವುದು ಉಂಟು.... ಯಾಕೋ ಅದನ್ನು ಉಲ್ಲೇಖಿಸಲು ನನಗೆ ಸ್ವಲ್ಪ ಮುಜುಗರ.
ಹೈಸ್ಕೂಲಿನಲ್ಲಿ ಓದಿದ ಇಂಗ್ಲಿಷ್ ಪದ್ಯ ಒಂದರಲ್ಲಿ... ಒಬ್ಬ ರಾಜ ತನ್ನ ಗೋರಿಯ ಕಲ್ಲಿನ ಮೇಲೆ ಬರೆಸಿದ ಸಾಲುಗಳು "HERE LIES ....OZIMONDIAS... THE KING OF KINGS"... ಅದು ತನ್ನ ಬಗೆಗಿದ್ದ ಅಹಂಕಾರದ ಪ್ರತಿಕ ಎನ್ನಬಹುದೇನೋ.
"ಯಂಶೈವಾಸಮುಪಾಸ್ಯತೇ ಶಿವ ಇತಿ..." ನ್ಯಾಷನಲ್ ಕಾಲೇಜಿನಲ್ಲಿ ಪ್ರಾರ್ಥನಾ ಶ್ಲೋಕವಾಗಿತ್ತು... ಶೈವರು ಶಿವನನ್ನು, ವೇದಾಂತಿಗಳು ಬ್ರಹ್ಮನನ್ನು, ಬೌದ್ಧರು ಬುದ್ಧನನ್ನು, ವಿಚಾರಪಟುಗಳು ಕರ್ತೃವೆಂದು, ಜೈನರು ಅರಿಹಂತ್ ಎಂದು, ಮೀಮಾಂಸಕರು ಕರ್ಮವೆಂದು ನಂಬಿ ಪೂಜೆ ಮಾಡುತ್ತಾರೆ...
ಹೀಗೆ ದೇವನೊಬ್ಬನಾದರೂ ನಾಮ ಹಲವು....ನಾಮ ಅಂದಾಗ ನೆನಪಾಗಿದ್ದು ದೇವಸ್ಥಾನದ ಆನೆಯ ಹಣೆಯ ಮೇಲೆ ಯಾವ ರೀತಿಯ ನಾಮ ಹಾಕಬೇಕೆಂದು ನ್ಯಾಯಾಲಯದಲ್ಲಿ ಹೋರಾಡಿದ ದೈವಭಕ್ತರು.....
" ಆಕಾಶಾತ್ ಪತಿತಂ ತೋಯಂ ಯಥಾ ಗಚ್ಚತಿ ಸಾಗರಂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ" ಹೇಗೆ ಆಕಾಶದಿಂದ ಬಿದ್ದ ನೀರ ಹನಿಗಳು ಸಾಗರದೆಡೆಗೆ ಸಾಗುತ್ತವೋ ಹಾಗೆ ಎಲ್ಲ ದೇವರಿಗೂ ಮಾಡಿದ ನಮಸ್ಕಾರ ಕೇಶವನೆಡೆಗೆ ಸಾಗುತ್ತದೆ.. ಇದು ಭಾವಾರ್ಥ..
ನನಗೆ ತುಂಬ ಹಿಡಿಸಿದ ಈ ಶ್ಲೋಕದೊಂದಿಗೆ .... "ಕಾಯೇನ.. ವಾಚಾ...." ಶರೀರ, ಮಾತು, ಮನಸು, ಇಂದ್ರಿಯ, ಬುದ್ಧಿ ತಿಳಿದೋ, ಪ್ರಕೃತಿ ಜನ್ಯ ಸ್ವಭಾವದಿಂದಲೋ, ಮಾಡಿದ ಎಲ್ಲವನ್ನೂ ನಾರಾಯಣನಿಗೆ ಸಮರ್ಪಿಸುತ್ತೇನೆ.....Total Surrender...ಸಂಪೂರ್ಣ ಸಮರ್ಪಣೆ.... ಕೃಷ್ಣಾರ್ಪಣಮಸ್ತು...
ಕೃಷ್ಣ ನಮಸ್ಕಾರ.....
ಮೊದಲು ಹೋಟೆಲ್ ನಲ್ಲಿ ಕೃಷ್ಣ ನ ವಿಗ್ರಹ ಚೆನ್ನಾಗಿದೆ. ನಂತರ ಅಕ್ಕಂದಿರ ನಾಟ್ಯಾಭ್ಯಾಸ,😂 ನಾಮಪದಗಳು ನನ್ನ ಅನುಭವ .ನನಗೆ ಸೀತಾ ಸರ್ಕಲ್ ನಿಲ್ದಾಣ ಇದೆ ಅಂತ ಗೊತ್ತಿರಲಿಲ್ಲ ಇದು ಹಳೆ ವಿಚಾರ ಕತ್ರಿಗುಪ್ಪೆ ಯಲ್ಲಿ ನಮ್ಮ ಅಕ್ಕನ ಮನೆ ಇತ್ತು. ನನಗೆ ಹೊಸದು ನಿಲ್ದಾಣ ಬಂದಾಗ ಕಂಡೆಕ್ಟರ್ ಚೆನ್ನಾ ಸೀತಾ ಇಳ್ಳಿರಿ ನನಗೆ ಒಂದು ಕ್ಷಣ ತಬ್ಬಿಬ್ಬು ನನ್ನ ಹೆಸರು ಇವರಿಗೆ ಹೇಗೆ ಗೊತ್ತು ಅಂತ ಆಮೇಲೆ ಅದು ನಿಲ್ದಾಣ ದ ಹೆಸರು ಅಂತ. ನೀವು ಹೇಳಿದ ಸನ್ನಿವೇಶ ನನಗೆ ಈಗ ನೆನಪು ಬಂತು .👍
ReplyDeleteToo good chikkappa
ReplyDeleteಭಾರತ ಅಥವಾ ಇಂಡಿಯಾ ಯಾವುದು ಸರಿ ಎನ್ನುವ ವಿವಾದದ ರಾಮಾಯಣ ದ ಸಂದರ್ಭದಲ್ಲಿ ಕೃಷ್ಣನಿಂದ ಪ್ರಾರಂಭವಾಗಿ ನಾಮಪದದ ಅವಶ್ಯಕತೆ ಮತ್ತು ಗೊಂದಲ ಗಳನ್ನು ಸರಳವಾಗಿ ತಿಳಿಸಿದ್ದೀರಾ.. ಪಾಸ್ಪೋರ್ಟ್ ಮತ್ತು ಆಧಾರ್ಗಳಲ್ಲಿ first name, last name ಸಾಕಷ್ಟು ಗೊಂದಲ ಉಂಟುಮಾಡಿದೆ... ಏನೇ ಇರಲಿ ಹೆಸರoತು
ReplyDeleteಎಲ್ಲಕ್ಕೂ, ಎಲ್ಲರಿಗೂ ಬೇಕಾದ ಅನಿವಾರ್ಯತೆ. ಮೊದಲಿಗೆ ಎಲ್ಲಕ್ಕೂ ಹೆಸರಿಟ್ಟ ಮಹಾನುಭಾವರಿಗೆ ನನ್ನ ನಮನ
ಧನ್ಯವಾದಗಳು
ಬಾಬು
ಬರಹ ಸುಲಲಿತವಾಗಿದೆ. ಓದುಗರ ನೆನಪಿನ ಕೀಲಿ ತೆರೆದುಕೊಳ್ಳುತ್ತದೆ. ಇದೊಂದು
ReplyDeleteಹೊಸ ಪ್ರಯತ್ನ. ಮುಂದುವರೆಯಲಿ.
ಆದರಗಳೊಡನೆ,
ಗುರುಪ್ರಸನ್ನ,
ಚಿಂತಾಮಣಿ