ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು

 ಚಿಕ್ಕಂದಿನಲ್ಲಿ ಕಂಡ ಪಾತ್ರಗಳು, ವ್ಯಕ್ತಿಗಳು

ಹರಿ ಭಜನೆಯಾನಂದ ಕಿರು ಶಿಶುವಿನಾನಂದ... ಹೀಗೊಂದು ಪದ್ಯದ ಸಾಲು...

ನಿಜಕ್ಕೂ ಚಿಕ್ಕ ಮಕ್ಕಳ ಒಡನಾಟ ದೇವರ ಭಜನೆಯಷ್ಟೇ ಆನಂದ ಕೊಡುವುದು.. ಈಗಂತೂ ನನ್ನ ಮೊಮ್ಮಗಳ ಒಡನಾಟದಿಂದ ನನ್ನ ಜೀವನ ಶೈಲಿಯೇ ಸಾಕಷ್ಟು ಬದಲಾವಣೆಯಾಗಿದೆ... ಅದರಲ್ಲೂ ಅವಳು ನಮ್ಮ ಮನೆಯಲ್ಲಿ ಬಂದಿದ್ದಾಗ, ನನ್ನ ದಿನಚರಿಯೆಲ್ಲ ಅವಳ ಸುತ್ತ ಸುತ್ತುತ್ತಿರುತ್ತದೆ.  ಅವಳ ಜೊತೆ ಕಣ್ಣ ಮುಚ್ಚಾಲೆ, ಗಿಡಗಳಿಗೆ ನೀರು ಹಾಕುವುದು, ಇಸ್ಪೀಟ್, ಮೊಬೈಲ್ ಗೇಮ್ಸ್, ಜೊತೆಯಲ್ಲಿ ಊಟ, ಮಧ್ಯಾಹ್ನದ ನಿದ್ದೆ, ಬೆಳಿಗ್ಗೆ ಸ್ಕೂಲ್ ವ್ಯಾನಿಗೆ ಬಿಡುವುದು... ಇದೆಲ್ಲಾ ಅವಳು ನನ್ನನ್ನು ಪುಸಲಾಯಿಸಿ, ಮಾಡಿಸುವ ಕೆಲಸಗಳು.  ಅವಳ ಆ ಪ್ರೀತಿಯ ಕರೆಗೆ ಇಲ್ಲ ಅನ್ನಲು ಮನಸ್ಸೇ ಬರುವುದಿಲ್ಲ... ಕೆಲ ಸಲ  ನನ್ನ ಮೈ ಹಾಗೂ ಮನಸ್ಸು  ಸಹಕರಿಸದಿದ್ದರೂ... ನಿದ್ದೆ ಮಾಡುತ್ತಿದ್ದಾಗ ಬಂದು ಮೆತ್ತಗೆ ಕಾಲ್ಕೆರೆಯುವುದು, ಕಿವಿಯಲ್ಲಿ ಏನಾದರೂ ಪಿಸುಗುಟ್ಟುವುದು ಹೀಗೆ ಕೆಲ ಚೇಷ್ಟೆಗಳು . 

Click here

ಈಚೆಗೆ ಅವಳು ಹಾಕಿದ ಕಿತ್ತೂರು ಚೆನ್ನಮ್ಮನ ವೇಷ ಹಾಗೂ ಅವಳಾಡಿದ ಮಾತುಗಳು...  ಆ ತಯಾರಿಯಲ್ಲಿ ಅವಳು ಪಟ್ಟ ಸಂಭ್ರಮ, ನನ್ನನ್ನು ಎಲ್ಲದಕ್ಕೂ ಒಳಗೊಳ್ಳುವಂತೆ ಮಾಡಿದ್ದು, ನನ್ನ ಚಿಕ್ಕಂದಿನ ದಿನಗಳಲ್ಲಿ ನಾನು ಸಡಗರಿಸಿದ, ಸಂಭ್ರಮಿಸಿದ ಕ್ಷಣಗಳನ್ನು ನೆನಪು ಮಾಡಿಸಿತು... ನನ್ನ  ಹಳ್ಳಿಯ ದಿನಗಳ ಜೀವನದಲ್ಲಿ ಕೆಲವು ಕ್ಷಣಗಳಾದರೂ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು/ ಪಾತ್ರಗಳು ನನ್ನ ಕಣ್ಣಮುಂದೆ ಹಾದುಹೋದವು... ನಿಮಗಿದೋ... ಅವುಗಳ ಪರಿಚಯ...

ಮೊದಲನೆಯದು ನಮ್ಮ ಪಕ್ಕದ ಮನೆ ಮುನಿಯಮ್ಮ... ಹಾಲು ಕರೆಯುವಾಗ ನನ್ನನ್ನು ಕರೆದು, ನನ್ನ ಲೋಟಕ್ಕೆ ಒಂದಿಷ್ಟು ಹಾಲು ಕರೆದು ಕುಡಿಯಲು ಕೊಡುತ್ತಿದ್ದಾಕೆ.. 

ದೇವನಹಳ್ಳಿಯ ಬಟ್ಟೆ ಅಜ್ಜಿ... ಬಟ್ಟೆ ಮಾರುವವಳು... ಬಂದಾಗಲೆಲ್ಲ ನನಗೆ ಸೀಬೆಹಣ್ಣು.... ಚಕ್ಕೋತ ಹಣ್ಣು ತಂದುಕೊಟ್ಟು ಮುದ್ದು ಮಾಡುತ್ತಿದ್ದಾಕೆ....

ನಾನು ಹೊತ್ತು ತಂದ ಸಣ್ಣ ಸೌದೆಯ ಹೊರೆಯನ್ನು ನೋಡಿ ತಮಾಷೆ ಮಾಡಿ  ಜೋರಾಗಿ ನಕ್ಕು ಆಡಿಕೊಂಡಾಕೆ  ... ನನ್ನ ಕೋಪವನ್ನು ತಣಿಸಲು ತನ್ನ ಅಂಗಡಿಯಿಂದ ಬೆಲ್ಲ ಹುರಿಗಡಲೇ ಕೊಟ್ಟು ಸಮಾಧಾನ ಮಾಡಿದಾಕೆ.....

ಅಂಗಡಿ ಅಕ್ಬಸಮ್ಮ.... ಹೋದಾಗಲೆಲ್ಲ.. ರಂಗಣ್ಣ ಬಾ ಅಂತ ಬಾಯಿ ತುಂಬ ಕರೆದು ತಿನ್ನಲು ಏನಾದರೂ ಕೊಡುತ್ತಿದ್ದಾಕೆ...

ಬೆಟ್ಟಹಲಸೂರು ದೊಡ್ಡಮ್ಮ... ಊರಿಗೆ ಹೋದಾಗಲೆಲ್ಲ.. ಪ್ರೀತಿಯಿಂದ ಮಾತಾಡಿಸಿ... ಒಣಕೊಬ್ಬರಿ ಅವಲಕ್ಕಿ ಬೆಲ್ಲ ಕೊಡುತ್ತಿದ್ದವಳು.... ಇದೇನಿದು, ತಿನ್ನಲಿಕ್ಕೆ ಕೊಟ್ಟವರನ್ನು ಮಾತ್ರ ನೆನೆಸಿಕೊಳ್ಳೋದಾ ಅಂತ ಅನಿಸ್ತಿದೆಯಾ.... ಹೌದೂರೀ ಚಿಕ್ಕಂದಿನಲ್ಲಿ ತಿನ್ನಕ್ಕೊಟ್ಟಿದ್ದೇ ತುಂಬಾ ದೊಡ್ಡ ವಿಷಯ.... ನನಗೆ....ಅದು ಅವರು ತೋರಿದ ಪ್ರೀತಿ.

ರಾತ್ರಿ ಬಹಳ ಬೇಗ ನಿದ್ದೆ... ನನಗೆ ಸರಿಹೊತ್ತು,  ಆದರೆ ಬೇರೆಲ್ಲರಿಗೂ ಇನ್ನೂ ಸಂಜೆ... ಇಂತಹ ಸಮಯದಲ್ಲಿ ಬರುತ್ತಿದ್ದ ನೆಂಟರು... ನಾನು ಕರೆಯುತ್ತಿದ್ದದ್ದು ಅವರನ್ನು ತಲೆ ಸವರುವ ಚಿಕ್ಕಪ್ಪ ಅಂತ.... ಅವರು ನನ್ನ ಪಕ್ಕದಲ್ಲಿ ಕೂತು ತಲೆ ಸವರುತ್ತ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದದ್ದು.... ತಲೆ ಸವರಿಸಿಕೊಳ್ಳುವ ಹಿತ ಇಂದಿಗೂ ಸವಿ ಸವಿ..

ಊರ ಮುಂದಿನ ತಾತ (ಹೆಸರು ಗೊತ್ತಿರಲಿಲ್ಲ) ಹೇಳಿಕೊಡುತ್ತಿದ್ದ ಪದ್ಯಗಳು.. ಅದರಲ್ಲಿ ಓಂ ಸಿವಾಯ ನಮಃ ಕ್ಕೆ ಅರ್ಥ..

ಓ.... ಓಗರ ಮಡಿಕೆ....

ಸ... ಸರಿ ಮಾಡು..

ನ.. ನನ್ ಮುಂದಿಕ್ಕು...

ಮ.. ಮಟ್ಟ್ ಮಾಯ...  ಎಂಥ ಹಾಸ್ಯ ಮನೋಭಾವ...

ಆಗ ನಮಗೆ ಮೇಷ್ಟ್ರು ಅಂದ್ರೆ ಗಂಡಸರು ಮಾತ್ರ.... ಅವರನ್ನು ಸಾ(ರ್)... ಎಂದು ಕರೆಯುವುದು ರೂಡಿ.. ಇದ್ದಕ್ಕಿದ್ದಂತೆ ನಮ್ಮೂರಿಗೆ ಬಂದವರು ಸುಶೀಲ ಪುಷ್ಪಾವತಿ ಮೇಡಂ... ಅವರನ್ನು ಸಾ..ಎಂದೇ ಕರೆಯುವುದು... ಮಿಸ್.. ಎಂದು ಕರೆಯಲು ಹೇಳಿಕೊಟ್ಟರೂ, ಕರೆಯಲು ಏನೋ ನಾಚಿಕೆ.... ಅಂತ ಮೇಡಂಗೆ ಮನೆಯಿಂದ ಕುಡಿಯಲು ನೀರು ತೆಗೆದುಕೊಂಡು ಹೋಗಿ ಕೊಡುವುದು ಒಂದು ದೊಡ್ಡಸ್ಥಿಕೆ.. ಹೆಮ್ಮೆ... ಅವರು ಕೊಟ್ಟ ಜೀವನದ ಮೊದಲ ಚಾಕಲೇಟಿನ ಸವಿ ಇನ್ನೂ ನೆನಪಿದೆ.

ನಮ್ಮ ನಾಟಕದ ಪ್ರಾರ್ಥನೆ......" ಶ್ರೀ ಕರಿಮುಖ ಸೌಖ್ಯದಾತಾ... ಲೋಕಾಧೀಶ.. ಪಾಲಿಸು.. ನಮಿಪೆವು ಶ್ರೀ.." ಇಲ್ಲಿ ಕರಿ ಎಂದರೆ ಕಪ್ಪು ಎಂದು ಅರ್ಥೈಸಿ.. ನನಗೆ ಕೆಂಪು ಮುಖ, ಬಿಳಿ ಮುಖ, ಹಳದಿ ಮುಖ ಹೀಗೆ ಬದಲಾಯಿಸಿ ಹಾಡನ್ನು ಹೇಳಿಸುತ್ತಿದ್ದ ಬ್ರಹ್ಮಾಚಾರಿ...

" ಚಿಂತೆಯ ಬೇಗೆಯು, ಸುಡುತೀದೆ ಜೀವವ.. ಆವ ಜನ್ಮದ ಪಾಪ.. ಕಪ್ಪಾಗಿ..".. ಕಪ್ಪಾದ ಹೆಣ್ಣಿನ ಗೋಳು ಎಂಬ ಜಾನಪದ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲು ಹೇಳಿಕೊಟ್ಟ ಕಾವೇರಿಯಪ್ಪ ಮೇಷ್ಟ್ರು..

ವೈವಿಧ್ಯಮಯ ಕೋಲಾಟವನ್ನು ಹೇಳಿಕೊಟ್ಟ ಗಂಗರಾಮಯ್ಯ ಮೇಷ್ಟ್ರು...

ಶೆಟ್ಟಿಗೆರೆ  ಹನುಮಂತರಾಯರು... ನಮ್ಮ ನೆಂಟರು ಹಾಗೂ ನಮ್ಮ ಪ್ರೀತಿಯ ಎಸ್ ಹೆಚ್ ಸುಬ್ರಾವ್ ಮೆಷ್ಟರ ಅಪ್ಪ... ಅವರು ಸಂಜೆಯ ಪಾಠಶಾಲೆ ನಡೆಸುತ್ತಿದ್ದರು..." ಬೆಳಕು" ಪತ್ರಿಕೆ ಹಾಗೂ ಗ್ರಂಥಾಲಯದಲ್ಲಿದ್ದ ಸಣ್ಣ ಕಥೆಗಳ ಪುಸ್ತಕಗಳನ್ನು ಓದಲು ಕೊಟ್ಟು ಪ್ರೋತ್ಸಾಹಿಸಿದವರು.. ಬೆಳೆಯಿತು ಮೂಗು ನೋಡಣ್ಣ ಎಂಬ ಕಥೆಯ ಚಿತ್ರದಲ್ಲಿನ ಬೆಳೆದ ಮೂಗು, ಗಿಡಮರಗಳ ಮಧ್ಯೆ ತೂರಿದ ಹಾಗೆ ಕಂಡ ನೋಟ ಹಸಿರಾಗಿದೆ.

ಊರಿಗೆ ಮೊದಲನೆಯ ಬಾರಿ ಕುದುರೆಯನ್ನು ಕೊಂಡು ತಂದ.. ಗುರು ಶ್ರೀ ಅಪ್ಪಯಣ್ಣಾ ಚಾರ್ ಎಂದೇ ಕರೆಯಬೇಕಾಗಿದ್ದ, ನಮ್ಮ ಮೇಲೆಲ್ಲಾ ತುಂಬ ಕೋಪ ತೋರಿಸುತ್ತಿದ್ದ (ಕುಡಿಯುತ್ತಾರೆ ಎಂಬ ಪುಕಾರಿದ್ದ) ಆಂಜನೇಯ ದೇವಸ್ಥಾನದ ಅರ್ಚಕರು.

ಊರ ಮುಂದಿದ್ದ ಕ್ಷೌರಿಕ ಮನೆತನದ ನಾಣಿ...( ಕ್ಷಮೆ ಇರಲಿ... ನಾನು ಅವರನ್ನು ಯಾವಾಗಲೂ ಕರೆಯುತ್ತಿದ್ದದ್ದು ಹಜಾಮರ ನಾಣಿ ಎಂದೇ....ಅದು.. ಅವರಿಗೆ ಒಪ್ಪಿಗೆ ಇತ್ತೂ ಸಹ).. ಆತ ನನ್ನನ್ನು ಕರೆಯುತ್ತಿದ್ದದ್ದು ಉಡತಿ (ಅಳಿಲು) ಮರಿಯೆಂದು.. ನಮಗೆಲ್ಲಾ ಆ ಮನೆಯ ಹಿರಿಯರೇ ಬಂದು ಕ್ಷೌರ ಮಾಡುತ್ತಿದ್ದದ್ದು... ಇನ್ನೂ ಮಡಿವಂತಿಕೆಯ  ಕಾಲ, ಅವರನ್ನು ಮುಟ್ಟಲು ಇದ್ದ ನಿಷಿದ್ಧ... ಈ ಮಡಿವಂತಿಕೆಯನ್ನೇ ಉಪಯೋಗಿಸಿ ನನ್ನನ್ನು ಹಿಡಿಯಲು ಬಂದು ಆಟ ಆಡಿಸುತ್ತಿದ್ದ ನಾಣಿ... ಎರಡು ಕೈಮದ್ಯೆ ನನ್ನನ್ನು ಸೇರಿಸಿಕೊಂಡು.. ನನ್ನನ್ನು ಮುಟ್ಟದೆ, ಹೆದರಿಸಿಕೊಂಡು ಗೋಡೆಯ ಪಕ್ಕಕ್ಕೆ ನನ್ನನ್ನು ನಿಲ್ಲಿಸಿ ನನಗೆ ಅಳು ಬರುವ ಹಾಗೆ ಮಾಡಿ.. ಸಂತೋಷಪಡುತ್ತಿದ್ದ ನಾಣಿ... ನೆನಸಿದರೆ ಈಗ ತುಂಬಾ ಖುಷಿಯಾಗುತ್ತದೆ... ಆಗ ನನಗೆ ಪ್ರಾಣ ಸಂಕಟ ನಾಣಿ ಎಂಬ ಬೆಕ್ಕಿಗೆ ಚೆಲ್ಲಾಟ..

ನಮ್ಮ ಮನೆಗೆ ಬರುತ್ತಿದ್ದ  ದಾಸಯ್ಯ... ನಾವು ಗೆಳೆಯರು ಓದುತ್ತಿದ್ದರೆ.. ಆತನಿಗೆ ಸಂತೋಷ... ಒಂದು ದಿನ ನಾವು ಲೆಕ್ಕ ಮಾಡಲು ತಿಣುಕುತ್ತಿದ್ದಾಗ ಬಂದ ಆತ.. ಅದೇನು ಮಹಾ ಸುಲಭ ನಾನು ಮಾಡ್ತೀನಿ ಅಂತ ಹೇಳಿ ಹೋದವನು ಮತ್ತೆ ಬಂದಾಗ ಕೇಳಿದರೆ..." ತಿಕ್ಡಿ ಬಂದೈತೆ ಕಣಪ್ಪ" ಅಂತ ಹೇಳಿ ಯಾಮಾರಿಸಿದವನು..

ಕರಡಿ ಗೊರವಯ್ಯ ವೇಷಧಾರಿ, ತಲೆಗೆ ಕರಡಿ ಚರ್ಮದ ವಿಶಿಷ್ಟ ಪೇಟ, ಮೈಮೇಲೆ ಕವಡೆಯಿಂದ ಅಲಂಕರಿಸಿದ ವಸ್ತ್ರಗಳು,  ಕೈಯಲ್ಲಿ ಕೋಲು .... ನನಗೆ ಬಲು ಭಯ, ನೋಡಲು ಆಸೆ... ಅಮ್ಮನ ಹಿಂದೆ ನಿಂತು, ಅವಳು ಕೊಟ್ಟ ರಾಗಿಯನ್ನು ತೊಗೊಂಡು ಹೋದ ಮೇಲೆ, ಹೊರ ಬರುವುದು.

ಇನ್ನು ನಿಜ ಕರಡಿಯನ್ನೇ ಜೊತೆಯಲ್ಲಿ ಕರೆತಂದು,  ಝಲ್ ಝಲ್ ಎಂದು ಶಬ್ದ ಮಾಡುವ ಆಟಿಕೆಯನ್ನು ಕಟ್ಟಿದ್ದ ಕೋಲನ್ನು ಹಿಡಿದು ಅದನ್ನು ಶಬ್ದ ಮಾಡುತ್ತಾ, ಅದಕ್ಕೆ ತಕ್ಕ ಹಾಗೆ ಕರಡಿಯ ಮೈಯನ್ನು ಅಲ್ಲಾಡಿಸುವ ಹಾಗೆ ಮಾಡುತ್ತಾ ಬರುತ್ತಿದ್ದ ಕರಡಿ ಆಡಿಸುವಾತ... ನನಗೋ ಯಾವಾಗಿನಂತೆ ಭಯ,ಆದರೆ ಕರಡಿಯ ಮೇಲೆ ಕೂಡಿಸಿ ನಂತರ ಕರಡಿಯ ಕೂದಲನ್ನು ಉಡಿದಾರಕ್ಕೆ ಕಟ್ಟಿಕೊಂಡರೆ ಭಯ ಹೋಗುತ್ತೆ ಅನ್ನುವ ನಂಬಿಕೆಯಿಂದ ನನ್ನನ್ನು ಕರಡಿಯ ಮೇಲೆ ಬಲವಂತವಾಗಿ ಕೂಡಿಸಿದಾಗ... ನನ್ನ ಚೆಡ್ಡಿ ಒದ್ದೆಯಾದದ್ದು ಮಾತ್ರ ಭದ್ರವಾಗಿ ತಲೆಯಲ್ಲಿ ಕೂತಿದೆ.

ಇನ್ನು ನಾನೇ ಮಾಡಿದ ಯಕ್ಷಿಣಿ.  ಇದಕ್ಕೆ ನನಗೆ ಜೊತೆಯಾದವನು ನಮ್ಮೂರಿನ ನಾಣಿ ( ನಾರಾಯಣಾಚಾರ್).  ಇದರಲ್ಲಿ ಗುಂಪಿನ ಮಧ್ಯೆ ಯಾರನ್ನೋ ಕರೆದಂತೆ ಮಾಡಿ, ನಾಣಿಯನ್ನೇ ನಾನು ಆಯ್ಕೆ ಮಾಡುವುದು.  ನಾಣಿಯ ಜೊತೆ ಮಾತನಾಡುತ್ತಾ ಹೆಸರು ಕೇಳುವುದು, ಯಾವೂರು, ಏನ್ ಮಾಡ್ತೀಯಾ ಹೀಗೆ ವಿಚಾರಿಸುತ್ತಾ ಅವನ ಜ್ಞಾನ ತಪ್ಪಿಸಿದಂತೆ ಮಾಡಿ ನೆಲದ ಮೇಲೆ ಮಲಗಿಸಿ ಮುಖ ಮುಚ್ಚುವಂತೆ ಒಂದು ಬಟ್ಟೆಯನ್ನು ಮುಚ್ಚುವುದು... ಆನಂತರ ನಾವಿಬ್ಬರೂ ಮೊದಲೇ ಮಾತನಾಡಿಕೊಂಡಂತೆ.... ನಾನು ಯಾರನ್ನಾದರೂ ತೋರಿಸುವುದು, ಅವರು ಹಾಕಿದ ಬಟ್ಟೆ ಕಲರ್ ಕೇಳುವುದು, ಜನರ ಮಧ್ಯದಲ್ಲಿರುವ ದೊಡ್ಡವರನ್ನು ತೋರಿಸಿ ಯಾರೆಂದು ಕೇಳುವುದು, ಹೀಗೆ ಸಮಯೋಚಿತವಾಗಿ ನಾಲ್ಕೈದು ಪ್ರಶ್ನೆಗಳಿಗೆ ಸರಿಯಾದ ಉತ್ತರ ದೊರಕಿಸಿಕೊಡುವುದು.... ಜನಕ್ಕೆ ಇದು ನಿಜಕ್ಕೂ ಯಕ್ಷಿಣೆಯಂತೆ ಕಾಣುತ್ತಿತ್ತು.. ಚಪ್ಪಾಳೆ ಸಿಗುತ್ತಿತ್ತು. ಹೀಗೊಂದು ಸಲ ನಮ್ಮಿಬ್ಬರ ಮಧ್ಯೆ  ಮಾತಾಡಿಕೊಂಡ ಹಾಗೆ ಕೇಳಬೇಕಿದ್ದ ಪ್ರಶ್ನೆ ಅದಲು ಬದಲಾಗಿ ಅಭಾಸವಾದದ್ದೂ ಉಂಟು.

ಮೂವರು ಶಾಸ್ತ್ರಿಗಳು ನನ್ನ ಚಿಕ್ಕಂದಿನ ಪ್ರಿಯರು... ಮೊದಲಿಗೆ ಗಂಗಾಧರ ಶಾಸ್ತ್ರಿಗಳು, ಇವರು ನಮ್ಮ ಮನೆಯ ವ್ರತಗಳನ್ನು ಮಾಡಿಸುವವರು... ಹಾಗೂ ಪಕ್ಕದ ಅಕ್ಕಯ್ಯಮ್ಮನ ಬೆಟ್ಟದ ಪೂಜಾರಿಗಳು. ಸ್ಥಳ ಕುದುರೆಗೆರೆ ನಾಲ್ಕಾರು ಊರುಗಳಲ್ಲಿ ಪೂಜೆ ಮಾಡಿಸಬೇಕು, ಎಷ್ಟೋ ಸಲ ನಮ್ಮ ಮನೆಗೆ ಪೂಜೆಗೆ ಬರುವ ಹೊತ್ತಿಗೆ ಎರಡು ಗಂಟೆಯಾಗಿರುತ್ತಿತ್ತು.. ... ಗಂಗಾಧರ ಶಾಸ್ತ್ರಿಗಳ ವಿಶೇಷವೆಂದರೆ, ಅವರು ಮನೆಯಲ್ಲಿ ಕಾಲಿಡುವಾಗಲೇ ಗಂಟೆ ಬಾರಿಸುತ್ತಾ" ಲಕ್ಷ್ಮಿಂದೇವಮ್ಮನವರೆ ಬನ್ನಿ" ಎಂದು ಅಮ್ಮನಿಗೆ ಕೂಗಿ ಹೇಳಿ "ಆಗಮಾರ್ಥಂತು ದೇವಾನಂ" ಎಂದು ಪ್ರಾರಂಭ ಮಾಡುತ್ತಿದ್ದರು.

ಎರಡನೆಯವರು, ದೇವನಹಳ್ಳಿ ರಾಮಾಶಾಸ್ತ್ರಿಗಳು.. ಇವರು ನಮ್ಮ ಮನೆಯ ಎಲ್ಲ ಶ್ರಾದ್ಧ ಕಾರ್ಯಗಳಿಗೆ ಬರುವವರು... ಬೆಳಿಗ್ಗೆ ಬೇಗ ಟ್ರೈನಿನಲ್ಲಿ ಬಂದು... ಆರಾಮವಾಗಿ ಮಾತನಾಡುತ್ತಾ ಬಾಳೆ ಎಲೆಯಲ್ಲಿ ದೊನ್ನೆ ಕಟ್ಟುತ್ತಿದ್ದ ಚಿತ್ರ ಇಂದಿಗೂ ನನ್ನ ಮನ ಪಟಲದಲ್ಲಿದೆ.

ಮೂರನೇಯವ್ರು ನರಿಹರಿ ಶಾಸ್ತ್ರಿಗಳು, ಬಲು ಮಾತುಗಾರ, ನಮ್ಮಪ್ಪನ ಜೊತೆಗಾರ, ಹಾಗೂ ನಮ್ಮ ತಾತನ ಪ್ರೀತಿಯ ಶಿಷ್ಯ... ಹಾಗಾಗಿ ನಮ್ಮ ತಾತನ ತಿಥಿಗೆ ತಪ್ಪದೇ ಬರುತ್ತಿದ್ದ ಅತಿಥಿ. ನಮ್ ಶಿವರಾಯಣ್ಣನ ಪ್ರಸಾದ ತಿನ್ನೋದು ನನ್ನ ಹಕ್ಕು ಅನ್ನುವಷ್ಟು ಪ್ರೀತಿ. ಇರುವಷ್ಟು ಹೊತ್ತು ಮಾತು ಮಾತು ಮತ್ತು ಮಾತು... ಒಂದಷ್ಟು ಹಾಸ್ಯ... ನಾನು ಅಸ್ಥೆಯಿಂದ ಕೇಳುತ್ತಿದ್ದೆ.

ಬೆಳಗಿನ ಜಾವ, ಬುಡುಬುಡಿಕೆ ಸದ್ದಿನೊಂದಿಗೆ ತನ್ನದೇ ಆದ ಶೈಲಿಯಲ್ಲಿ ರಾಗಬದ್ಧವಾಗಿ ಪ್ರಾಸ ಬದ್ಧವಾಗಿ ಏನನ್ನೋ ಹೇಳಿಕೊಂಡು ಬರುತ್ತಿದ್ದ..." ಶುಭವಾಗತೈತೆ ಶುಭವಾಗುತೈತೆ" ಅಥವಾ " ದಕ್ಷಿಣ ದಿಕ್ಕಿನಲ್ಲಿ ಗಂಡ ಕಾದೈತೆ" ಎಂಬುದು ಮಾತ್ರ ಅರ್ಥ ಆಗುತ್ತಿತ್ತು... ಬೆಳಗಾದ ಮೇಲೆ ಮನೆಗೆ ಬಂದು ಅಪ್ಪನನ್ನು ಕಾಡಿ... ಒಂದು ಬಟ್ಟೆ ತೆಗೆದುಕೊಂಡು. ಏನಾದರೂ ತಿನ್ನಲು ತೆಗೆದುಕೊಂಡು ಹೋಗುತ್ತಿದ್ದ ಬುಡುಬುಡಿಕೆಯವ....

ಶೃಂಗಾರ ಮಾಡಿದ ಎತ್ತನ್ನು (ಗಂಗೆತ್ತು) ... ಜೊತೆಯಲ್ಲಿ ಕರೆತಂದು... ಸರಾಗವಾದ ಹಾಡುಗಳ ಓಲಗದೊಂದಿಗೆ.. ಬರುತ್ತಿದ್ದ ವ್ಯಕ್ತಿ... ಜೊತೆಯಲ್ಲಿ ಇರುತ್ತಿದ್ದ ಇನ್ನೊಂದು ಹಸು..ಸೀತಮ್ಮ.. ಸೀತಮ್ಮನ್ನ ಮದುವೆಯಾಗುತ್ತೀಯೇನೋ ರಾಮ ಎಂದು ಎತ್ತನ್ನು ಕೇಳಿ ಅದು ಇಲ್ಲ ಎಂದು ತಲೆ ಆಡಿಸಿದರೆ ಅದಕ್ಕೆ ಪೂಸಿ ಮಾಡಿ... ಹೌದು ಎನ್ನಿಸಿ ಮದುವೆಯ ಆಟ ಆಡಿಸುತ್ತಿದ್ದದ್ದು ನೋಡಲು ತುಂಬಾ ಕೌತುಕ ಎನಿಸುತ್ತಿತ್ತು.

ನಮ್ಮ ಪ್ರೀತಿಯ ಶ್ರೀನಿವಾಸ್ ಮೇಷ್ಟ್ರು.... ಇವರು ನಮಗೆ ಹೇಳಿಕೊಡುತ್ತಿದ್ದ   ನಾಟಕಗಳು, ಅವರು ಹುಲಿ ವೇಷ ಧರಿಸಿ ಕುಣಿದು ಕುಪ್ಪಳಿಸುತ್ತಿದ್ದ ರೀತಿ... ನಮಗೂ ಸೊಂಟಕ್ಕೆ ಟವಲ್ ಬಿಗಿದು ಅದನ್ನು ಹಿಡಿದು ಎತ್ತಿ ನಮಗೆ ಕುಣಿಯಲು ತೋರಿಸಿಕೊಡುತ್ತಿದ್ದ ರೀತಿ...ಸ್ಮರಣೀಯ..

ಎರಡು ಕೈಯಲ್ಲಿ.. ಹಾರ್ಮೋನಿಯಂ ನುಡಿಸುತ್ತಾ ಹಾಡು ಹೇಳುತ್ತಿದ್ದ ಮುತ್ತಣ್ಣನನ್ನು ನೋಡುವುದೇ ಒಂದು ಸೋಜಿಗ...

ಕೊನೆಯದಾಗಿ.. ನನ್ನ  ಕಣ್ಣಿಗೆ ಬೀಳದಿದ್ದ, ಆದರೆ ಅವರ ಬಗ್ಗೆ ಒಂದು ವಿಶೇಷ ಗೌರವ ಹಾಗೂ ಭಯ ಹೊಂದಿದ್ದ... ವಿದ್ಯಾನಗರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನ ಕುಲಪತಿಗಳು ..... ಅವರ ಕೊಠಡಿಯ ಮುಂದೆ ಓಡಾಡುವಾಗ ಹೆಜ್ಜೆಯನ್ನು ಕೂಡ ಮೆಲ್ಲಗೆ ಹಾಕಬೇಕಾದ ನಿಯಮ. ಅವರ ಕಲ್ಪನೆ ಇನ್ನೂ ನನಗೆ ನಿಲುಕಿಲ್ಲ.

ಎಲ್ಲರಿಗೂ ತುಂಬಿದ ಮನದ ನಮನಗಳು.

ಈ ನೆನಪಿನ ಸರಣಿಯ ಎಲ್ಲಾ ಪಾತ್ರಗಳು ಹಾಗೂ ವ್ಯಕ್ತಿಗಳ ಚಿತ್ರಣ ನಿಮಗೆ ಇಷ್ಟವಾಗಿದೆ ಎಂದು ಭಾವಿಸಲೆ?... ಆಗಿಲ್ಲ ಅಂದ್ರೆ ನನಗಿರೋದ್ ಒಂದೇ ದಾರಿ.. ಕ್ಷಮಿಸಿಬಿಡಿ.. ಅಂತ ಕೇಳೋದು..

ನಮಸ್ಕಾರ



    

Comments

  1. Amazing chikkappa

    ReplyDelete
  2. ನಿಮ್ಮ ನೆನಪಿನ ಶಕ್ತಿಗೊಂದು ಸಲಾಮ್

    ReplyDelete
  3. ನಿಮ್ಮ ಚಿಕ್ಕಂದಿನಿಂದಲೂ ಸುತ್ತ ಒಳ್ಳೆಯ ಪಾತ್ರಗಳೆ ತುಂಬಿದೆ.. ಅದನ್ನು ನೆನಪಿನ ಆಳ ದಿಂದ ತೆಗೆದು ಸರಳವಾಗಿ ವಿವರಿಸುವ ನಿಮ್ಮ ಭಾಷೆಯ ಹಿಡಿತ ಸೊಗಸಾಗಿದೆ.. ಓದುಗರಿಗೂ ಕೂಡ ನೂರೊಂದು ನೆನಪು ಮನಸ್ಸಿನಲ್ಲಿ ಹಾದು ಹೋಗುವುದು ಖಚಿತ
    ಬಾಬು

    ReplyDelete
    Replies
    1. Sweet child wood memories show your lucky days started early.GOD bless you with same luck for ever.

      Delete
  4. ಎಲ್ಲರಿಗೂ ಈ ತರಹದ ಬಾಲ್ಯದ ಮರೆಯಲಾಗದ ವ್ಯಕ್ತಿಗಳು, ಘಟನೆಗಳು ಇದ್ದೇ ಇರುತ್ತದೆ. ನೀವು ನಿಮ್ಮ ನೆನಪಿನ ಬುತ್ತಿ ತೆರೆದಾಗ, ನಮ್ಮಗಳ ನೆನಪಿನ ಬುತ್ತಿಗಳು ಬಿಚ್ಚಿಕೊಳ್ಳುತ್ತವೆ. ನಾವು ಗತಕಾಲಕ್ಕೆ ತೆರಳಿ, ನೆನಪುಗಳು ಕಣ್ಣಮುಂದೆ ಹರಿದಾಡುತ್ತವೆ. ಮರೆಯುವ ಮಾತೇ ಇಲ್ಲ. ಎಲ್ಲವೂ ಚಿತ್ತದ ಮುಂದೆ ಹಾದುಹೋಗುವ ಮೆರವಣಿಗೆಯಾಗಿ ಮೈಮನಸ್ಸು ಮುದಗೊಳ್ಳುತ್ತವೆ.

    ಅದಕ್ಕೆ ಕಾರಣರಾಗುವ ನಿಮಗೆ ಅನಂತ ಧನ್ಯವಾದಗಳು.

    ಗುರುಪ್ರಸನ್ನ,
    ಚಿಂತಾಮಣಿ.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ