ಅಮ್ಮನ ಮಡಿಲು.. ಅಪ್ಪನ ಹೆಗಲು

 ಅಮ್ಮನ ಮಡಿಲು.. ಅಪ್ಪನ ಹೆಗಲು







ಬುಧವಾರ ಸುಮಾರು 12 ಗಂಟೆ ಸಮಯದಲ್ಲಿ ಮನೆಗೆ ಬರ್ತಾ ಇದ್ದೆ. ಸಣ್ಣಗೆ ಹನಿ ಹಾಕ್ತಾ ಇತ್ತು.... ಕೆಂಪು ದೀಪ ಅಡ್ಡ ಬಂತು ಅಂತ ನನ್ನ ಗಾಡಿಯನ್ನು ನಿಲ್ಲಿಸ್ದೆ.... ಪಕ್ಕದಲ್ಲಿ ಸ್ಕೂಟರ್ ನ ಮುಂದಿನ ಜಾಗದಲ್ಲಿ ನಿಂತಿದ್ದ ಮಗುವಿನ ಕಣ್ಣಲ್ಲಿ ನೀರು ಹರೀತಿತ್ತು.... ಮನಸ್ಸು ತಡೆಯದೆ ಕೇಳಿದೆ ' ಯಾಕೋ ಮರಿ ಅಳ್ತಾ ಇದ್ದೀಯಾ'  ಅಂತ. ಉತ್ತರ ಕೊಟ್ಟಿದ್ದು ಮಗುವಿನ ಅಮ್ಮ... ನೋಡಿ ಹನಿ ಬರ್ತಾ ಇದೆ ತಲೆ ಮೇಲೆ ಟೋಪಿ ಹಾಕು ಅಂದ್ರೆ ಬೇಡ ಅಂತ ಹಠ ಮಾಡ್ತಾಳೆ.... ಕೋಪ ಬಂತು ತಲೆ ಮೇಲೆ ಮಟಕ್ದೆ.. ಅದಕ್ಕೆ ಅಳು.    ಮಗು ಅಮ್ಮನ ತೊಡೇನ ತಬ್ಬಿ ಕೊಳ್ತು, ಅಮ್ಮ ಮಗುನ ಮುದ್ದು ಮಾಡಿ ಕಣ್ಣೀರು ಒರೆಸಿದ್ಲು ಅಷ್ಟರಲ್ಲಿ ಹಸಿರು ದೀಪ ಬಂತು ನನ್ನ ದಾರಿ ನಾನು ಹಿಡಿದೆ.   ಅಮ್ಮನಿಂದನೆ ನೋವಾಗಿದ್ರು, ಅಮ್ಮನ ಪ್ರೀತಿಯ ಅಪ್ಪುಗೆ ಆ ಮಗುವಿಗೆ ಸಮಾಧಾನ ಕೊಡ್ತು... ಅದೇ ಅಲ್ವಾ ಅಮ್ಮನ ಅಪ್ಪುಗೆಯ ವಿಶೇಷತೆ.

"ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನಿನ್ನ ಸಂಗ ಆಡಲೆಂದು ಬಂದೆ ನಾನು...." ಕಪ್ಪು ಬಿಳುಪು ಚಿತ್ರದ ಈ ಹಾಡಿನ ದೃಶ್ಯದಲ್ಲಿ ಕಲ್ಪನಾ ಅವರ ಅಭಿನಯ ನೋಡಿದಾಗ ಅಮ್ಮನ ತೋಳಿನ ಹಿತವಾದ ಅನುಭವದ ಕಲ್ಪನೆ ತಾನಾಗಿ ನಮ್ಮ ಮುಂದೆ ಬರುತ್ತದೆ

ಮನೆಯಲ್ಲಿ ಹೆಂಡತಿ ಇರಲಿಲ್ಲ, ನಾನೊಬ್ಬನೇ... ಸಂಜೆಯಾದರೆ ಮತ್ತೆ ಜಿಟಿ ಜಿಟಿ ಮಳೆ, ಮಬ್ಬು ಬೆಳಕಿನ ವಾತಾವರಣ.. ತಿನ್ನಕ್ಕೆ ಏನಾದರೂ ಬಿಸಿ ಬಿಸಿ ಪಕೋಡ ಬೋಂಡಾ ಇದ್ರೆ ಚೆನ್ನಾಗಿರುತ್ತೆ ಅನಿಸ್ತು.. ಆದರೆ ಅದು ತಕ್ಷಣ ನನಗೆ ಸಿಗುವಂತೆ ಇರಲಿಲ್ಲ.  ಮನಸ್ಸು ಹಿಂದಕ್ಕೆ ಓಡಿತು... ನಾನು ಹಳ್ಳಿಯಲ್ಲಿದ್ದಾಗ ಇಂತದೇ ವಾತಾವರಣದಲ್ಲಿ.... ಅಲ್ಲಿ ಸಿಕ್ಕಿದ ಬೇರೆ ಬೇರೆ ಸೊಪ್ಪುಗಳನ್ನು ಸೇರಿಸಿ ಮಾಡಿದ ಪಕೋಡ... ಅಮ್ಮನ ಕೈನ ರುಚಿಯೇ ರುಚಿ.   ಇದೇ ವಾತಾವರಣದ ಇನ್ನೊಂದು ಪ್ರಸಂಗವೂ ನೆನಪಿಗೆ ಬಂತು.  

ಆಗಿನ ಕಾಲದಲ್ಲಿ ಮಡಿಗೆ ಬಹಳ ಪ್ರಾಮುಖ್ಯತೆ..... ಅದರಲ್ಲೂ ಹೆಣ್ಣಿನ ಮುಟ್ಟಿನ ದಿನಗಳಲ್ಲಿ ಆಕೆ ಮೂರು ಮಾರು ದೂರ. ಇದು ನಮ್ಮ ಮನೆಯಲ್ಲೂ ಇದ್ದ ವಾಡಿಕೆ.  ಅಮ್ಮ ಒಳಗಿಲ್ಲದಿದ್ದಾಗ ನಾನು ಸಾಮಾನ್ಯವಾಗಿ ನಮ್ಮಪ್ಪನ ಜೊತೆಯಲ್ಲಿ ಇರುತ್ತಿದ್ದೆ... ಹೀಗೊಂದು ದಿನ ಇದೇ ಮಳೆ ಇದೇ ವಾತಾವರಣ ಅಮ್ಮ ದೂರ... ನನಗೋ ಅಮ್ಮನ ಹತ್ತಿರ  ಹೋಗಬೇಕೆಂಬುವ ಆಸೆ. ಅಪ್ಪ ಬೇಡ ಎಂದು ಹೇಳಿದಷ್ಟು ಆಸೆ ಮತ್ತಷ್ಟು ಪ್ರಬಲವಾಗುತ್ತಿದೆ.. ಅಪ್ಪನ ಭಯ.. ಅಮ್ಮನ ಹತ್ತಿರ ಹೋಗುವ ಆಸೆ.. ಇದು ಕಣ್ಣೀರಲ್ಲಿ ಕೊನೆಗೊಂಡಿತು.  ಅಮ್ಮನ ಮನಸ್ಸು ಕರಗಿತೇನೋ... ಎಲ್ಲ ಬಟ್ಟೆಯನ್ನು ಬಿಚ್ಚಿ ಅಮ್ಮನ ಬಳಿ ಹೋಗಲು ಸಿಕ್ಕಿತು ಅನುಮತಿ. ಯಾವ ಸಂಕೋಚವೂ ಇಲ್ಲದೆ ಹಾಕಿದ್ದ ಚಡ್ಡಿ ಮತ್ತು ಶರ್ಟನ್ನು ಕಿತ್ತೆಸೆದು ಅಮ್ಮನ ಬಳಿ ಓಡಿ... ಅವಳನ್ನು ಅಪ್ಪಿ ಕುಳಿತೆ... ಆ ಸಡಗರ ಆ ಸಂತೋಷ ಪದಗಳಿಗೆ ನಿಲುಕದು.  ಮತ್ತದೇ ಅಮ್ಮನ ಅಪ್ಪುಗೆಯ ಬೆಚ್ಚನೆಯ ಸವಿನೆನಪು.

ನನಗೆ ಆಗಿನ ಕಾಲಕ್ಕೆ ತಿಳಿಸಿಕೊಟ್ಟಂತೆ.... ದೂರ ಕೂಡುವುದಕ್ಕೆ ಕಾರಣ.... ಕಾಗೆ.  ಕಾಗೆ ನಮ್ಮನ್ನು ಮುಟ್ಟಿದರೆ ಮೈಲಿಗೆ ಎಂಬುದು ವಿಚಾರ.  ನಮ್ಮಮ್ಮ ದೂರ ಕೂತಾಗ ನನಗೆ ಬಹಳ ಸಲ ಕಾಗೆಯ ಮೇಲೆ ಕೋಪ ಬರುತ್ತಿತ್ತು.. ಕಾಗೆಗೆ ಕಲ್ಲು ಹೊಡೆಯುವಷ್ಟು ಕೋಪ... ಎಸೆದದ್ದೂ ಉಂಟು. 

 ಕೆಲ ಸಲ ಅನುಮಾನವೂ ಆಗುತ್ತಿತ್ತು. ಕಾಗೆ ಯಾಕೆ ನಮ್ಮಮ್ಮನನ್ನೇ ಮುಟ್ಟುತ್ತೆ , ಅಪ್ಪನನ್ನು ಯಾಕೆ ಮುಟ್ಟುವುದಿಲ್ಲ? ಈ ಪ್ರಶ್ನೆಗೆ ಆಗ ಉತ್ತರ ಸಿಕ್ಕಿರಲಿಲ್ಲ....

ಅಮ್ಮ ಹೊಡೆದು ಬೈದು ಮಾಡಿದರೂ... ನೋವಿಗೆ ಅಮ್ಮ ಕಾರಣವಾದರೂ... ಅದೇ ಅಮ್ಮನೇ ಮುದ್ದು ಮಾಡಿ ಸಮಾಧಾನ ಮಾಡಿ, ಅಪ್ಪಿ ಮುದ್ದಿಸಿದರೆ ನೋವೆಲ್ಲಾ ಮಂಗಮಾಯ. 

ಮಧ್ಯಾಹ್ನ ಅಮ್ಮನ ಜೊತೆ ಮಲಗುವುದು ಅವಳ ಕೊರಳಲ್ಲಿದ್ದ ತಾಯಿತವನ್ನು ಡೋಲು ಮಾಡಿ ಹೊಡಿಯೋದು,  ಅಮ್ಮನ ಅರೆ ನಿದ್ರೆ,  ನನ್ನ ಚೇಷ್ಟೇ... ಬೈಸಿಕೊಳ್ಳುವುದು ನನ್ನ ಚಿಕ್ಕಂದಿನ ಹಿತವಾದ ಪ್ರಿಯವಾದ ಆಟ. 

ನನ್ನ   ಆತ್ಮೀಯರು ಪದ್ಮನಾಭ ಅವರ ಮನೆಯ ಹೆಸರು " ಮಡಿಲು"  ಅದನ್ನು ಕಂಡಿದ್ದು ಬಹಳ ಹಿಂದೆ, ಆದರೆ ಅದು ನನ್ನ ಮನಸ್ಸಿನಲ್ಲಿ ಬಲವಾಗಿ ಕುಳಿತಿದೆ.  ಪ್ರಾಯಶಃ ಅಮ್ಮನ ಮಡಿಲಿನ ಬೆಚ್ಚನೆಯ ಆತ್ಮೀಯ ವಾತಾವರಣ ಮನೆಯಲ್ಲಿ ತುಂಬಿರಲಿ ಎಂಬ ಅಭಿಲಾಷೆಯಿಂದ ಇಟ್ಟಿರಬಹುದು. ಆ ವಾತಾವರಣ ಆ ಮನೆಯಲ್ಲಿ ಸದಾ ಇರಲಿ ಎಂದು ನನ್ನ ಆಶಯ.

ಅಮ್ಮ ಮಗುವಿನ ಸಂಬಂಧ ಪ್ರಾಣಿ-ಪಕ್ಷಿಗಳಲ್ಲೂ ಅಷ್ಟೇ ಗಾಢವಾಗಿದೆ.  ಅಮ್ಮ ಮಕ್ಕಳ ಸಂಬಂಧ ಒಡನಾಟ ಮುದ್ದಾಡುವ ರೀತಿ, ಸಾಕಷ್ಟು ವಿಡಿಯೋ ತುಣುಕುಗಳಲ್ಲಿರುವಂತೆ ಕೋತಿ,  ನಾಯಿ , ಬೆಕ್ಕು ಎಲ್ಲ ಪ್ರಾಣಿ ಪಕ್ಷಿಗಳ ಮರಿಗಳೂ ತಾಯಿಯ ಮಡಿಲಲ್ಲಿ ನಲಿದಾಡುವುದನ್ನು ನೀವು ನೋಡಿರುತ್ತೀರಿ.  ಇದಲ್ಲದೆ ಎಷ್ಟೇ ಗುಂಪಿನ ಮಧ್ಯದಲ್ಲಿದ್ದರೂ ಸಹ ಮಗು/ ಮರಿ ತನ್ನ ಅಮ್ಮನನ್ನು ಗುರುತಿಸಿ ಅವಳ ಮಡಿಲು ಸೇರುವುದು ನಾವು ಪ್ರತಿನಿತ್ಯ ಕಾಣುವ ಅಂಶ.  ಮನುಷ್ಯ ಅಥವಾ ಪ್ರಾಣಿ ಯಾವುದಾದರೇನು ಅಮ್ಮನ ಮಡಿಲಲ್ಲಿ ಮಕ್ಕಳು ಸಂಭ್ರಮಿಸುವುದು ಒಂದೇ ರೀತಿ.

ಸಾಮಾನ್ಯವಾಗಿ ಅಮ್ಮನಿಗೆ ಕಥೆ ಕವನಗಳಲ್ಲಿ ಸಿಗುವ ಪ್ರಾಮುಖ್ಯತೆ ಅಪ್ಪನಿಗೆ ಸಿಕ್ಕಿಲ್ಲ ಅನ್ನುವುದು ಸತ್ಯ. ಬಹುಶಃ ಅಮ್ಮ ಒಂಬತ್ತು ತಿಂಗಳು ಹೊತ್ತು, ನೋವನ್ನು ಸಹಿಸಿ ಹೆರುತ್ತಾಳೆ.... ಇಲ್ಲಿ ಅಮ್ಮನ ಪಾತ್ರ ಬಹು ಮುಖ್ಯ ಹಾಗೂ ಅಪ್ಪನ ಪಾತ್ರ ಗೌಣ. ಹಾಗಾಗಿ ಅಪ್ಪನನ್ನು ಗುರ್ತಿಸುವುದು ಕಡಿಮೆಯೇ ಇರಬಹುದೇ?  

ಹುಟ್ಟಿನ ನಂತರದ ಜೀವನದಲ್ಲಿ ಮಕ್ಕಳ ರಕ್ಷಣೆ ಮತ್ತು ನಿರ್ವಹಣೆಯ ಭಾರಕ್ಕೆ ಅಪ್ಪನ ಹೆಗಲೇ ಬಹು ಮುಖ್ಯ.  ನನಗನಿಸಿದಂತೆ ಇನ್ನೊಂದು ಕಾರಣ ಸಾಮಾನ್ಯವಾಗಿ ಮಕ್ಕಳು ಅಪ್ಪನಿಂದ ಸ್ವಲ್ಪ ದೂರವೇ... ಅಪ್ಪನ ಭಯ ಹಾಗೂ ಶಿಸ್ತು ಕಾರಣ... ಜೊತೆ ಜೊತೆಗೆ ಅಮ್ಮ ಆಗಿಂದಾಗ್ಗೆ ಕೊಡುವ  " ಇಲ್ಲ ಅಂದ್ರೆ ಅಪ್ಪಂಗೆ ಹೇಳ್ತೀನಿ ಅಷ್ಟೇ" ಎನ್ನುವ ಎಚ್ಚರಿಕೆಯ ಚಾಟಿ ಏಟು.

ಅಪ್ಪನಿಂದ ಏನಾದರೂ ಪಡೆಯಬೇಕಾದರೆ ಆ ಅಹವಾಲು ಅಮ್ಮನ ಮೂಲಕವೇ ಅಪ್ಪನಿಗೆ ತಲುಪಿದರೆ ಕೆಲಸ ಆದಂತೆ.

ಈಚೆಗೆ ಕೇಳಿದ " ಅಪ್ಪ ಐ ಲವ್ ಯು" ಅನ್ನುವ ಹಾಡು ಅಪ್ಪನಿಗಾಗಿ ಬರೆದ / ಕೇಳಿದ ಮೊದಲನೆಯದು ಇರಬಹುದೇ?

ಚಿಕ್ಕಂದಿನಲ್ಲಿ ಬೆಳಿಗ್ಗೆ ಹಾಸಿಗೆಯ ಮೇಲಿದ್ದಾಗಲೇ... ಅಪ್ಪನ ತೊಡೆಯ ಮೇಲೆ ಕೂತು, ಹೊದ್ದಿಗೆಯಲ್ಲಿ ಅವಿತುಕೊಂಡು ಇರುವುದು... ಅಪ್ಪ ಅಮ್ಮನನ್ನು ರಂಗ ಎಲ್ಲಿ ಎಂದು ಕೇಳಬೇಕು.... ಅಮ್ಮ ನನಗೆ ಗೊತ್ತಿಲ್ಲ ಎಂದು ಹೇಳಬೇಕು... ನಾನು ಒಳಗೆ ಕೂತು ಸಂತೋಷ ಪಡಬೇಕು... ಅಮ್ಮನಿಗೆ ಗೊತ್ತೇ ಇಲ್ಲ ಎಂಬ ನಂಬಿಕೆಯಿಂದ ಅಲ್ಲಿಂದ ಹೊರ ಬಂದು ಅಮ್ಮನ ತೋಳ್ ತೆಕ್ಕೆಗೆ ಹೋಗುವುದು.... ಸಿಹಿ ಸಿಹಿ ಸಮಯ. ಇದನ್ನು ನಾನು ನನ್ನ ಮಗಳು ಮತ್ತು ಮೊಮ್ಮಗಳೊಡನೆ ಆಡಿ ನನ್ನಪ್ಪನ ಜೊತೆಯ ಸವಿನೆನಪನ್ನು ಸುಖಿಸಿದ್ದೇನೆ.

ಜಾತ್ರೆ, ಉತ್ಸವ ಇಂಥ ಕಡೆಯಲ್ಲಿ, ಜನಜಂಗುಳಿಯಲ್ಲಿ ಅಪ್ಪನ ಹೆಗಲೇರಿ ಕೂತು, ಎಲ್ಲವನ್ನೂ ನೋಡುವ ಹಾಗೂ ಸುರಕ್ಷಿತವಾಗಿರುವ ಸಿಂಹಾಸನ ಇನ್ನೆಲ್ಲಿ ಸಿಗಲು ಸಾಧ್ಯ?

ಅಪ್ಪನ ಹೆಗಲ ಮೇಲೆ ಕೂತು, ಅವರ ದೊಡ್ಡ ಕಿವಿಯ ಜೊತೆ ಆಟವಾಡುವುದು ನನಗೆ ತುಂಬಾ ಇಷ್ಟ. ನಾನು ಕೊನೆಯ ಮಗ ಸಹ, ಹಾಗಾಗಿ " ಕಿರಿ ಮಗ ಕಿವಿ ಕಿತ್ತರೂ ಚೆನ್ನ" ಎಂಬ ಮಾತು ಸಾರ್ಥಕವೇನೋ...

ಈಗ ಅಮ್ಮನೂ ಇಲ್ಲ ಅಪ್ಪನೂ ಇಲ್ಲ ಆದರೆ ಅವರ ಜೊತೆಯಲ್ಲಿ ಕಳೆದ ಬೆಚ್ಚನೆಯ ಕ್ಷಣಗಳ ಸವಿನೆನಪು ಮಾತ್ರ.. ಜೀವನ ಮುಂದುವರಿಯಬೇಕು, ನಾವು ಅಪ್ಪನ , ತಾತನ ಪಾತ್ರ ನಿರ್ವಹಿಸುವ ಘಟ್ಟಕ್ಕೆ ಬರಬೇಕು.... ಆ ಕ್ಷಣಗಳನ್ನು ಮುಂದಿನ ಪೀಳಿಗೆಗೆ ಹಂಚಬೇಕು ಅಲ್ಲವೇ?   ಏನಂತೀರಾ?

ನಮಸ್ಕಾರ.


    

Comments

  1. ತುಂಬಾ ಚೆನ್ನಾಗಿದೆ. ಆ ಹಳೆಯ ನೆನಪು ಹೇಳಲಾಗದ ಸಂತೋಷ್ ಖುಷಿ ಕೊಟ್ಟಿದೆ

    ReplyDelete
  2. ಉತ್ತಮ ಬರಹ ನಮ್ಮ ಚಾರಣದ ಬಗ್ಗೆ ಒಂದು ಲೇಖನ ಬರಲಿ

    ReplyDelete
  3. ನಮ್ಮ ಅಮ್ಮ ಅಪ್ಪನ ಜೊತೆ ಕಳೆದ ಸವಿನೆನಪುಗಳು ನುಗ್ಗಿ ಬಂದೌ ಸರ್, ಚುಮುಚುಮು ಮಳೆಯ ಸಮಯದಲ್ಲಿ ಹಿತವಾದ ನೆನಪುಗಳ ಮೆರವಣಿಗೆಯ ಜೊತೆಗೆ ನಿಮ್ಮ ಚೆಂದವಾದ ಬರವಣಿಗೆ ಹೀಗೆಯೇ ಸಾಗಲಿ

    ReplyDelete
  4. ಅಮ್ಮನ ಮಡಿಲು ಅಪ್ಪನ ಹೆಗಲು ಚನ್ನಾಗಿ ಮೂಡಿಬಂದಿದೆ ಧನ್ಯವಾದಗಳು ರಂಗನಾಥ್.

    ReplyDelete
  5. Very nice.it returns my memorable days. Keep writing sir.

    ReplyDelete
  6. Dr .Latha .v. R30 July 2023 at 17:15

    Good write up . Sundara sihinenepugala padamale chennagide . Thande thayiya ಒಡನಾಟದ ಸಿಹಿ ಉಂಡವರೆ ಭಾಗ್ಯವಂತರು

    ReplyDelete
  7. ಈ ಲೇಖನದ ವಸ್ತು ಬಹುಶ: ಬಹುತೇಕ ಜನರ ಅನುಭವವೂ ಹೌದು. ಅದು ಸುಪ್ತವಾಗಿದ್ದು ತಮ್ಮಈ ಬರಹದಿಂದ ಹೊರಬಂದಿರಲಿಕ್ಕೂ ಸಾಕು.
    ನಮ್ಮಗಳನ್ನು ಬಾಲ್ಯದ ಮಧುರ ನೆನಪುಗಳಿಗೆ ಕೊಂಡೊಯ್ದುದಕ್ಕೆ ಧನ್ಯವಾದಗಳು.

    ಅಮ್ಮ ಒಂಬತ್ತು ತಿಂಗಳು ಹೊತ್ತರೆ ಅಪ್ಪ ಮಗುವನ್ನು ಒಂಬತ್ತು ವರ್ಷ ಹೊರುತ್ತಾನೆಂಬುದೂ ಸತ್ಯವಾದ ಮಾತು.

    ಆದರಗಳೊಡನೆ,

    ಗುರುಪ್ರಸನ್ನ,
    ಚಿಂತಾಮಣಿ

    ReplyDelete
  8. ಅನುಭವಿಸಿ, ಆನಂದಿಸಿರುವ, ಸಿದ್ಧತೆ ರಹಿತ ಬಾಲ್ಯದ ನೆನಪು ತುಂಬಾ ಸವಿ. ಈ ಲೇಖನ ಬಾಲ್ಯದಲ್ಲಿನ ಅನುಭವಕ್ಕಿಂತ ಅಪ್ಪ, ತಾತ ಆದ ಮೇಲೆ ನಿಧಾನವಾಗಿ ಕುಳಿತು ಮೆಲುಕು ಹಾಕಿದಾಗ , ನಮ್ಮವರೊಡನೆ ಹಂಚಿಕೊಳ್ಳುವಾಗ ಸಿಗುವ ಆನಂದ ನಿಮ್ಮ ಬರವಣಿಗೆ ಯಲ್ಲಿ ಎದ್ದು ಕಾಣುತ್ತದೆ. ನಾವೂ ಯೋಚಿಸುವಂತೆ ಮಾಡಿದ್ದಂತೂ ನಿಜ.

    ReplyDelete
  9. ಇಷ್ಟು ಸಂಸ್ಕಾರ ವಂತರಾಗಿ ಬೆಳಸಿದ ನಿಮ್ಮ ತಂದೆ ತಾಯಿಗೆ 👌🙏🙏

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ