ಘ್ನಾನಪೀಠ...
ಘ್ನಾನಪೀಠ...
ಶೀರ್ಷಿಕೆಯಲ್ಲಿ ಕಾಗುಣಿತ ತಪ್ಪು ಅನಿಸ್ತಾ ಇದೆಯಾ? ನಿಮ್ಮ ಯೋಚನೆ ತಕ್ಕಮಟ್ಟಿಗೆ ಸರಿ ಇದೆ, ಚಿತ್ರಕ್ಕೂ ಶೀರ್ಷಿಕೆಗೂ ಅರ್ಥಾರ್ಥಕ್ಕೆ ಸಂಭಂದ ಇಲ್ಲ ಅನ್ಸತ್ತಾ? ನೀವು ನೂರಕ್ಕೆ ನೂರು ಸರಿ. ಆದರೆ ಸ್ವಲ್ಪ ತಾಳಿ ನಾನು ಯೋಚನೆ ಮಾಡಿಯೇ ಬರೆದಿದ್ದೇನೆ...
ಅದಕ್ಕೂ ಮೊದಲು ನಾನು ನನ್ನೆಲ್ಲಾ ಓದುಗರಿಗೆ ಸಪ್ರೇಮ ನಮಸ್ಕಾರಗಳನ್ನ ತಿಳಿಸುತ್ತೇನೆ. ಯಾಕೆ ಗೊತ್ತಾ... ಹೊಸ ದಾರಿಯಲ್ಲಿ ನಿಮ್ಮನ್ನು ಮುಟ್ಟಿದ ನನ್ನ ಬ್ಲಾಗ್ " ಎಂಟು ವರ್ಷಕ್ಕೆ ಮಗ ದಂಟು ಅಂದ" ಅನ್ನು ನನ್ನ ಊಹೆಗೂ ಮೀರಿ ನೋಡಿ, ಅಭಿಪ್ರಾಯಗಳನ್ನು ತಿಳಿಸಿದ್ದಕ್ಕಾಗಿ. ಅದರಲ್ಲೂ ನನ್ನ ಪುಟ್ಟ ನಾದಿನಿ ಮನಸಿ (ಡಾ// H R ಮನಸ್ವಿನಿ MD (Ayu) , MSc, DFSM) ...ಮಾಡಿದ "ನಿಮ್ಮಿಂದ ಸ್ಪೂರ್ತಿ ಪಡೆದು ನಾನು ಬ್ಲಾಗ್ ಬರೀತೀನೀ ಅಂತ ನೀವ್ಯಾಕೆ ಬರೀಲಿಲ್ಲ" ಅನ್ನುವ ಆಕ್ಷೇಪಣೆ... ನನಗೂ ಸಂತೋಷ ಆಯ್ತು... ನನ್ನಿಂದ ಅವಳಿಗೆ ಸ್ಪೂರ್ತಿ ಸ್ಪುರಿಸಿತಲ್ಲ ಅಂತ. ಮನಸ್ವಿನಿಯ ಬರವಣಿಗೆ ಚೆನ್ನಾಗಿ ಮುಂದುವರೆಯಲಿ ಎಂದು ಆಶಿಸುತ್ತಾ....
ವಿಷಯಾಂತರ ಆಗಿದ್ದಕ್ಕೆ ಕ್ಷಮೆ ಇರಲಿ ಮತ್ತೆ ನನ್ನ ವಿಷಯಕ್ಕೆ ಬರ್ತೀನಿ...
ಘ್ನಾನಪೀಠ.. ಕನ್ನಡಪ್ರಭದಲ್ಲಿ ಬರುವ ಒಂದು ಪ್ರಶ್ನೋತ್ತರ ಅಂಕಣ... ಆ ಅಂಕಣದ ಲೋಗೋ ಸರಿಸುಮಾರು ಇಂತಿದೆ.
ಅದನ್ನು ನೋಡಿದಾಗೆಲ್ಲಾ ನನಗನಿಸೋದು " ಉತ್ತರ ಹೊಳಿಯಕ್ಕೆ ಅದು ಪ್ರಶಸ್ತ ಜಾಗ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ" ಅಂತ. ಜೊತೆಗೆ ನನ್ನ ಅಭಿಪ್ರಾಯವನ್ನು ಪುಷ್ಟೀಕರಿಸುವ ಒಂದು ಅಂಕಣದ ಚಿತ್ರವಾದರೂ ಇದೆಯಲ್ಲಾ ಎಂಬ ಸಂತೋಷ. ಯಾಕಂದ್ರೆ ನನಗೂ ಸ್ವಲ್ಪ ಜಾಸ್ತಿಯಾಗೇ ಇದೆ, ಘ್ನಾನಪೀಠದಲ್ಲಿ ಕೂತು ಓದು, ಚಿಂತನೆಗಳನ್ನು ಮಾಡುವುದು.
"ಅವರವರ ಹುಚ್ಚು ಅವರವರಿಗೆ ಆನಂದ " ಒಂದು ನಾಣ್ಣುಡಿ.
ನನಗನಿಸಿದಂತೆ ಎಲ್ಲ ವ್ಯಕ್ತಿಗಳಲ್ಲೂ ಒಂದಷ್ಟು ಅಭ್ಯಾಸಗಳು( ಕೆಲವರ ದೃಷ್ಟಿಯಲ್ಲಿ ಅವು ದುರಭ್ಯಾಸಗಳು ನನ್ನ ದೃಷ್ಟಿಯಲ್ಲಿ ತಿಕ್ಕಲುತನಗಳು) ಇರುತ್ತೆ.. ಕೆಲವು ಕ್ರಿಯೆಗಳು ಸುಲಭವಾಗಿ ಹೊರನೋಟಕ್ಕೆ ಕಾಣತ್ತೆ , ಇನ್ನು ಕೆಲವು ಯಾರಿಗೂ ಕಾಣಿಸುವುದೇ ಇಲ್ಲ. ಈ ತಿಕ್ಕಲುತನಗಳು ಮುಂದುವರಿಯಲು ಕಾರಣ.. ಅದರಲ್ಲಿ ಸಿಗುವ ಸಂತೋಷ ಮತ್ತು ತೃಪ್ತಿ, ಹಾಗಾಗಿ ಅದು ಒಳ್ಳೆಯದೇ.. ನೋಡುವವರಿಗೆ ಮಾತ್ರ ಅದು ತಿಕ್ಕಲುತನ.
ಈ ಅಭ್ಯಾಸ ನನಗೆ ಆಂಟಿದ್ದು ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಸಮಯ (1960). ಗಾಂಧಿ ಬಜಾರ್ ನ ಒಂದು ಮನೆಯಲ್ಲಿ/ ವಠಾರದಲ್ಲಿ ಇದ್ದಾಗ. ಆಗಿನ್ನೂ ಎಲೆ ಹಾಕಿದ ಮಂಕರಿಯಲ್ಲಿ ಮಲವನ್ನು ಸಂಗ್ರಹಿಸುತ್ತಿದ್ದ ಕಾಲ. ವಠಾರದ ಎಲ್ಲರಿಗೂ ಎರಡೇ ಕಕ್ಕಸು ಮನೆ. ಅದಕ್ಕೂ ಬಾಗಿಲಿಲ್ಲ. ಆದರೆ ಗೋಡೆಕಟ್ಟಿ ಒಂದು ಅಂಕಣ ಮಾಡಿ.. ಮತ್ತೊಂದು ಅಡ್ಡ ಗೋಡೆ , ಹಾಗಾಗಿ ಅಲ್ಲಿಗೆ ನೇರ ದೃಷ್ಟಿ ತಾಕದು. ಅಲ್ಲಿ ನಲ್ಲಿಯೂ ಇಲ್ಲ.... ಬಕೆಟ್ನಲ್ಲಿ ನಾವೇ ನೀರು ತಗೊಂಡು ಹೋಗಿ... ಬಾಗಿಲಲ್ಲಿ ಇಟ್ಟರೆ ಅದು ಒಳಗಿರುವುದರ ಸಂಕೇತ. ಅಲ್ಲಿಗೆ ಪ್ರತಿದಿನ ಒಬ್ಬ ಹಿರಿಯರು ಪೇಪರ್ ತೆಗೆದುಕೊಂಡು ಒಳಹೋಗುವುದನ್ನು ಗಮನಿಸುತ್ತಿದ್ದೆ. ಮೊದಮೊದಲು ತುಂಬಾ ಕುತೂಹಲ. ಸ್ವಲ್ಪ ದಿನಗಳ ನಂತರ ನನಗೆ ತಿಳಿದದ್ದು ಆ ಹಿರಿಯರು ಕೆ. ಅನಂತ ಸುಬ್ಬರಾಯರು ಎಂದು. ಇವರು ಟೈಪ್ ರೈಟರ್ ನಲ್ಲಿ ಕನ್ನಡ ಅಕ್ಷರಗಳನ್ನು ಅಳವಡಿಸಿ " ಅನಂತ ಕೀಬೋರ್ಡ್" ಎಂಬ ಹೆಸರಿನಲ್ಲಿ ಅವಿಷ್ಕಾರ ಮಾಡಿದವರು.
ಅವರಲ್ಲಿ ಒಂದಷ್ಟು ಸಲಿಗೆ ಬೆಳೆದ ನಂತರ ನಾನು ಗಮನಿಸಿದ್ದು- ಅವರು ಯಾವಾಗಲೂ ಏನಾದರೂ ಕೆಲಸವನ್ನು ಮಾಡುತ್ತಲೇ ಇರುತ್ತಿದ್ದರು. ತಾಯಿ ಇಲ್ಲದ ತಮ್ಮ ಮಕ್ಕಳಿಗೆ ತಾವೇ ಅನ್ನ ಮಾಡಿ, ಹೋಟೆಲ್ ನಿಂದ (ಕೆಫೆ ಇಂಡಿಯಾ) ಸಾಂಬಾರ್ ತಂದು ಕೊಡುತ್ತಿದ್ದರು. ಉಳಿದ ಸಮಯದಲ್ಲಿ ಏನೋ ಓದು, ಟೈಪ್ ರೈಟರ್ ಮೇಲಿನ ಕನ್ನಡ ಅಕ್ಷರಗಳನ್ನು ಜೋಡಿಸುವ ಕೆಲಸ, ರಟ್ಟಿನ ಮೇಲೆ ಕೀಬೋರ್ಡ್ ನ ವಿನ್ಯಾಸ, ಅದರ ಅಕ್ಷರಗಳು ಬರೆದು ತಮ್ಮ ಮಕ್ಕಳಿಗೆ ಅದರ ಮೇಲೆ ಬೆರಳಾಡಿಸಿ ಕನ್ನಡ ಅಕ್ಷರಗಳನ್ನು ಟೈಪ್ ಮಾಡುವ ಕಲೆ ಹೇಳಿಕೊಡುವುದು ಹೀಗೆ.... ಚಿಕ್ಕ ಮನೆಯಲ್ಲಿ ಜೀವನ ಆದರೆ ಜೀವನ ಮಾತ್ರ ಕನ್ನಡದ ಕೆಲಸಕ್ಕಾಗಿ ಮೀಸಲು. ಅವರನ್ನು ಕೇಳಿಯೇ ಬಿಟ್ಟೆ... ಯಾಕೆ ಪೇಪರನ್ನು ಕಕ್ಕಸು ಮನೆಯಲ್ಲಿ ಓದುತ್ತೀರಾ ಎಂದು... ಅವರ ಉತ್ತರ.. ಸಮಯದ ಸದುಪಯೋಗ ಹಾಗೂ ಅಲ್ಲಿ ಸಿಗುವ ಏಕಾಗ್ರತೆ ( ಈ ಪದಗಳು ನಾನು ಹೇಳಿದ್ದು.... ಆದರೆ ಅವರು ಹೇಳಿದ ರೀತಿ ಮಾತ್ರ ಇದನ್ನೇ ಸೂಚಿಸಿದ್ದು).
ಕೆಲ ದಿನಗಳ ಹಿಂದೆ ನನ್ನ ಹೆಂಡತಿಯ ಸ್ನೇಹಿತರ ಪಟಾಲಮ್ಮು ಮನೆಯಲ್ಲೇ ಇತ್ತು, ನಾನು ಸಹ ಮನೆಯಲ್ಲಿ ಇದ್ದೆ. ಅವರ ಮಾತುಗಳ ವರಸೆ ತಮ್ಮ ತಮ್ಮ ಗಂಡಂದಿರ ಗುಣಗಾನ ದಲ್ಲಿ ಮುಳುಗಿತ್ತು. ಆ ಮಾತುಗಳನ್ನು ಕೇಳುತ್ತಾ ನನಗೆ ನೆನಪಾದದ್ದು ನ್ಯಾಷನಲ್ ಕಾಲೇಜಿನ ನಮ್ಮ ಸಂಸ್ಕೃತದ ಪ್ರಾಧ್ಯಾಪಕರು ವರದದೇಶಿಕಾಚಾರ್ ಅವರು ( ಮುಂದೆ ಸನ್ಯಾಸತ್ವ ಸ್ವೀಕರಿಸಿ ಶ್ರೀ ರಂಗಪ್ರಿಯ ಸ್ವಾಮಿಗಳು ಎಂದು ಹೆಸರು ಮಾಡಿದವರು) ಹೇಳುತ್ತಿದ್ದ ಸಂಸ್ಕೃತ ಸುಭಾಷಿತದ ಕೊನೆಯ ಸಾಲು " ಪರಮಪಿ ಚತುರೌ ಮಮ ಭರ್ಥಾ ಯದ್ ಸ್ವಯಮಪಿ ಲಿಖಿತಂ ಸ್ವಯಂ ನ ವಾಚಯತಿ" ... ಇದರ ಭಾವಾರ್ಥ..." ತಾನೇ ಬರೆದಿದ್ದನ್ನು ತಾನು ಓದಲಾರದ ನನ್ನ ಗಂಡ ". ಅವಗುಣವನ್ನು ಎತ್ತಿ ತೋರಿಸುವ ಅಂಶವೇ ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ.
ಈ ಸಂದರ್ಭದಲ್ಲಿ ಒಬ್ಬರ ಹೇಳಿಕೆ...." ನನ್ ಗಂಡ ಟಾಯ್ಲೆಟ್ ಗೆ ಪೇಪರ್ ಹಿಡ್ಕೊಂಡು ಹೋದರೆ ಯಾವಾಗ ಬರ್ತಾರೆ ಅಂತ ಹೇಳಕ್ಕಾಗಲ್ಲ" ತಕ್ಷಣವೇ ದನಿಗೂಡಿಸಿದ್ದು ನನ್ನ ಹೆಂಡತಿ. ಅವಳ ಅನುಭವದ ಮಾತು ಹೀಗಿತ್ತು....
ಕನ್ನಡಕ ಏರಿಸಿ, ಓದಲು ಪೇಪರ್, ವಾರಪತ್ರಿಕೆ, ಪುಸ್ತಕ ಹೀಗೆ ಯಾವುದಾದರೂ ಓದುವ ಸಾಮಗ್ರಿ ಹುಡುಕುತ್ತಿದ್ದಾರೆ...ಅಂದರೆ ನಮ್ಮನೆಯವರ ಪಯಣ ಟಾಯ್ಲೆಟ್ ಕಡೆಗೆ ಅನ್ನುವುದು ಖಾತ್ರಿ. ಎಷ್ಟೋ ಸಲ ನಾನೇ ಕರೆದಿದ್ದೇನೆ... ಪುಣ್ಯಕ್ಕೆ ಅವ್ರ್ಗೆ ಒಂದು ಟಾಯ್ಲೆಟ್ ಇದೆ ಹಾಗಾಗಿ ಯಾರಿಗೂ ಕಾಯುವ ಅವಶ್ಯಕತೆ ಇಲ್ಲ. ಅವಳ ಮಾತು ನೂರಕ್ಕೆ ನೂರು ಸತ್ಯ.
ನಾನು ಶಹಬಾದಿನಲ್ಲಿ ಇದ್ದಾಗ, AMIE ಪರೀಕ್ಷೆಗೆ ಕಟ್ಟಿದ್ದೆ.. ಅಲ್ಲಿ ಯಾವ ವಿಧವಾದ ಅನುಕೂಲಗಳು ಇಲ್ಲದ ಕಾರಣ ನನ್ನ ಸ್ವಂತ ಪರಿಶ್ರಮದಿಂದ ಓದಬೇಕಾಗಿತ್ತು. Solid Geometry ಒಂದು ವಿಷಯ.. ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟಪಡುತ್ತಿದ್ದೆ... ಆದರೆ ಯಾವುದೋ ಒಂದು ಗಳಿಗೆಯಲ್ಲಿ ಅದಕ್ಕೆ ಸಮರ್ಪಕವಾದ ಉತ್ತರ ನನಗೆ ದೊರಕಿದ್ದು ಟಾಯ್ಲೆಟ್ ನ ಮೂಲೆಯನ್ನು ನೋಡುತ್ತಿದ್ದಾಗಲೇ....Maths 1 and 2 ಒಂದೇ ಪ್ರಯತ್ನದಲ್ಲಿ ಪಾಸು ಮಾಡಿದೆನೆಂಬ ಹೆಗ್ಗಳಿಕೆ , ಅಲ್ಲಿನ ಸಮುದಾಯದಲ್ಲಿ.
ಬಹಳಷ್ಟು ಸಮಸ್ಯೆಗಳಿಗೆ ಉತ್ತರ ಸಿಗುವುದು ಸ್ನಾನದ ಮನೆ/ ಶೌಚಾಲಯದಲ್ಲಿ.. ಬಹುಶಃ ಯಾರ ಹಂಗೂ, ತೊಂದರೆಯೂ ಇಲ್ಲದ ಜಾಗ. ಜೊತೆಗೆ ಅಲ್ಲಿನ ಏಕಾಂತತೆ ನಮ್ಮ ಯೋಚನಾಲರಿಯನ್ನು ಕೇಂದ್ರೀಕರಿಸಲು ಸಹಾಯ ಮಾಡಬಹುದು. ಅದರಲ್ಲಿಯೂ ಸ್ನಾನ ಮಾಡುವಾಗ ಮೈಮೇಲೆ ಬೀಳುವ ನೀರು, ನಲ್ಲಿಯಿಂದ ಬೀಳುವ ನೀರಿನ ಶಬ್ದ ಇವು ನಮ್ಮ ಬುದ್ಧಿಯನ್ನು ಪ್ರಚೋದಿಸಬಹುದು ಎನ್ನುವ ಅಭಿಪ್ರಾಯ ನನ್ನದು.
ಹಾಗಾಗಿ ಅಲ್ಲವೇ ಆರ್ಕಿಮಿಡಿಸ್ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿದಾಗ ಖುಷಿಯಿಂದ ಬರಿಮೈಯ್ಯಲ್ಲೇ ಬಚ್ಚಲುಮನೆಯಿಂದ ಯುರೇಕಾ ಎಂದು ಕೂಗಿ ಹೊರಬಂದದ್ದು.
ಕಾಕತಾಳಿಯವೋ ಎನ್ನುವ ಹಾಗೆ ಈ ಲೇಖನ ಬರೆಯಲು ಸ್ಪೂರ್ತಿ ಬಂದದ್ದು ನನಗೆ ಅಲ್ಲಿಂದಲೇ...
ಕೆಲವರಿಗೆ ಅದು ಕೊಳಕಿನ ಜಾಗ.... ನಮ್ಮಲ್ಲಿರುವ ಕೊಳಕಿಗಿನ್ನವೇ ಎಂದು ನನ್ನ ಅನಿಸಿಕೆ..
ಇನ್ನೊಂದು ಅಭಿಪ್ರಾಯ ಪುಸ್ತಕ ಪೇಪರ್ ಎಲ್ಲವೂ ದೇವರ ಸಮಾನ.. ಅದು ಸರಸ್ವತಿ ತಾನೆ? ಅಲ್ಲಿಗೆ ತೆಗೆದುಕೊಂಡು ಹೋಗಬಹುದಾ? ಒಂದು ದೃಷ್ಟಿಯಲ್ಲಿ ಇದು ಸರಿ ಇರಬಹುದು. ಆದರೆ ತಕ್ಷಣ ನನಗೆ ಜ್ಞಾಪಕ ಬರುವುದು ದೇವರು ಸರ್ವಾಂತರ್ಯಾಮಿ ಹಾಗೂ ಸರ್ವಶಕ್ತ. ಹಾಗಾದರೆ ದೇವರು ಅಲ್ಲೂ ಇರಲೇಬೇಕಲ್ಲ... ಇದನ್ನು ವಿತಂಡವಾದ ಎನ್ನುವವರಿದ್ದಾರೆ.. ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ.
ಹಿರಣ್ಯ ಕಶ್ಯಪುವಿಗೆ ಪ್ರಹ್ಲಾದ ಹೇಳಿದಂತೆ ಆ ಕಂಬದಲ್ಲಿಯೂ ಇರುವನು ಈ ಕಂಬದಲ್ಲಿಯೂ ಇರುವನು ಅಲ್ಲಿಯೂ ಇರುವನು ನನ್ನಲ್ಲಿಯೂ ಇರುವನು ನಿನ್ನಲ್ಲಿಯೂ ಇರುವನು.. ಎಲ್ಲೆಲ್ಲಿಯೂ ಇರುವನು... ಹೀಗೆ...
ಇಲ್ಲೊಂದು ಪ್ರಸಂಗವನ್ನು ನಿಮಗೆ ಹೇಳಲೇಬೇಕು... ಪ್ರಾಯಶಃ ನೀವೂ ಟಿವಿಯಲ್ಲಿ ನೋಡಿರುತ್ತೀರಿ ಅಥವಾ ವಾಟ್ಸಪ್ ನಲ್ಲಿ ಬಹಳ ಜನ ಮತ್ತೆ ಮತ್ತೆ ಹಂಚಿದ್ದಾರೆ ಅಲ್ಲಾದರೂ ನೋಡಿರುತ್ತೀರಿ. ವಂಶಿಕ ಒಬ್ಬಳು ಬಾಲ ದೈತ್ಯ ಪ್ರತಿಭೆ (ಮಾಸ್ಟರ್ ಆನಂದ್ ಅವರ ಮಗಳು). ಹಿರಣ್ಯಕಶ್ಯಪುವಿನ ಪಾತ್ರ ಅದ್ಭುತವಾಗಿ ನಿರ್ವಹಿಸಿದಳು, ಅವಳ ನಟನೆ ರಾಜಕುಮಾರ್ ಅವರ ನೆನಪನ್ನು ತರುತ್ತಿತ್ತು..
ನರಸಿಂಹಾವತಾರದ ವ್ಯಕ್ತಿ ಕಂಬದಿಂದ ಹೊರ ಬಂದಾಗ, ವಂಶಿಕ ಭಯದಿಂದ ಅತ್ತಿದ್ದು ಹಾಗೂ ಭಯದಿಂದ ಪ್ರಹ್ಲಾದನ ಹಿಂದೆ ಬಚ್ಚಿಟ್ಟುಕೊಂಡಿದ್ದು, ಆ ಪ್ರಸಂಗಕ್ಕೆ ಒಂದು ವಿಶೇಷ ತಿರುವು ನೀಡಿತು. ಆದರೆ ಜೀವನಕ್ಕೆ ಎಷ್ಟು ಹತ್ತಿರ ಅಲ್ಲವೇ?
ಇದಲ್ಲವೇ ನಾಟಕಕ್ಕೂ ನಿಜ ಜೀವನಕ್ಕೂ ಇರುವ ವ್ಯತ್ಯಾಸ. ವೇಷವೇ ಬೇರೆ ವೇಷದ ಭಾವವೇ ಬೇರೆ, ನಿಜ ಜೀವನದ ರೀತಿಯೇ ಬೇರೆ.....
ಕೊನೆಗೆ ನಿಮ್ಮಲ್ಲೊಂದು ನಿವೇದನೆ... ನಿಮಗೇನಾದರೂ ವಿಶೇಷವಾದ ತಿಕ್ಕಲುತನವಿದ್ದರೆ ದಯಮಾಡಿ ತಿಳಿಸಿ... ನನಗೂ ಸಾಕಷ್ಟು ಜೊತೆಗಾರರಿದ್ದಾರೆ ಎಂಬುವ ಸಮಾಧಾನ ನನ್ನದಾಗಲಿ.
ನಮಸ್ಕಾರ.
ತುಂಬಾ ಚೆನ್ನಾಗಿ ಇದೆ ನನಗೂ blog ಬರೆಯಬೇಕು ಅನಿಸುತ್ತಿದೆ
ReplyDeleteAs usual amazing chikkappa
ReplyDeleteನಿಮ್ಮ ನೆನಪಿನ ಶಕ್ತಿಗೆ ನನ್ನ ನಮಸ್ಕಾರ. ಲೇಖನ ನನ್ನ ಹತ್ತು ಹಲವು ಹಳೆಯ ನೆನಪುಗಳನ್ನು ಮೆಲುಕು ಹಾಕುವ ಹಾಗೆ ಮಾಡಿದ್ದಂತೂ ನಿಜ ರಂಗಾ.
Deleteತುಂಬಾ ಚೆನ್ನಾಗಿದೆ ತಾತ
ReplyDeleteನಮ್ಮಲ್ಲಿರುವ ಙಾನವು ಹೊರಹೊಮ್ಮಲು ಪ್ರಶಾಂತವಾದ ಯಾವುದೇ ಸ್ಥಳವಾಗಬಹುದು. ಸ್ಥಳಾತೀತವಾದ ಭಾವನೆಗೆ ಯಾವುದೇ ಬೇಲಿ ಬೇಕಾಗಿಲ್ಲ.
ReplyDelete*ಹುಚ್ಚರ ಸಂತೆ, ಹುಚ್ಚರ ಸಂತೆ ಈ ಲೋಕವೆಲ್ಲಾ ಮ್ಯಾಕ್ಸಿಮಮ್ಮು ಹುಚ್ಚರೇ ಕಣೋ* ಎಂದು ಒಂದು ಹಾಡೇ ಇದೆ. ನೀವೊಬ್ಬರೇ ಹುಚ್ಚರಲ್ಲ.....ನಾವು ನಿಮ್ಮಜೊತೆಗಿದ್ದೇವೆ.
ನಿಮ್ಮ ಬರವಣಿಗೆಯ ದೋಣಿ ಸಾಗಲಿ ಮುಂದೆ ಹೋಗಲಿ,, ದೂರ ತೀರವ ಸೇರಲಿ. ನಿಮ್ಮ ಭಾವನೆ ಬರವಣಿಗೆಯಲಿ ಕರಗಲಿ, ನಮ್ಮಗಳ ಮನದಾಳದಲಿ ಮುಳುಗಲಿ.
ಆದರಗಳೊಡನೆ,
ಗುರುಪ್ರಸನ್ನ,
ಚಿಂತಾಮಣಿ.
I am with u re toilet experience. Waiting for paper to come to go to toilet where I get all the ideas of do's and don't. Blogs r interesting and goes on reading till the end.
ReplyDeleteವೀಣಾ ಬನ್ನಂಜೆ ನಿನ್ನೆ ತಮ್ಮ ಪ್ರವಚನದಲ್ಲಿ ಇದೇ ಮಾತನ್ನು ಹೇಳಿದ್ದಾರೆ. ಯಾವುದೇ ಅಹಂ ಮತ್ತು ಆಲೋಚನೆಯಿಲ್ಲದೆ ನಿಮ್ಮ ಸ್ವಂತ ಆಲೋಚನೆಗಳಲ್ಲಿ ಮುಕ್ತವಾಗಿ ಕಳೆದುಹೋಗುವ ವಾಶ್‌ರೂಮ್‌ನಲ್ಲಿ ಮಾತ್ರ ನೀವು ನೀವೇ ಆಗಿದ್ದೀರಿ. ತುಂಬಾ ಸೊಗಸಾಗಿ ಹಾಕಿದ್ದಾರೆ. ಅತ್ಯುತ್ತಮ.
ReplyDeleteನಿಮ್ಮ ತಿಕ್ಕಲುತನ ಭಹಿರಂಗ ಪಡಿಸಿ, ಇತರರ ತಿಕ್ಕಲು ತನವನ್ನು ಬಹಿರಂಗ ಪಡಿಸಲು ಪ್ರೋತ್ಸಾಹಿಸಿದ ನಿಮಗೆ ಧನ್ಯವಾದಗಳು🙏 ಚೆನ್ನಾಗಿದೆ
ReplyDelete