ಕಣ್ಣು.. ಅದ ಮಾಡದಿರಿ ಮಣ್ಣು
ಪಂಚೇಂದ್ರಿಯಗಳು ನಮ್ಮ ದೇಹದ sensor ಗಳು. ನಮ್ಮ ಎಲ್ಲ ದೈನಂದಿನ ಕೆಲಸಗಳಲ್ಲಿ ಪೂರಕವಾಗಿ ಇರುವ ಈ sensor ಗಳು ಬಹು ಪ್ರಾಮುಖ್ಯತೆ ಪಡೆದಿವೆ. ಎಲ್ಲ ಇಂದ್ರಿಯಗಳಿಗೂ ಅದರದೇ ಸ್ಥಾನವಿದೆ, ಅದರಲ್ಲೂ ಕಣ್ಣು ಪಂಚೇಂದ್ರಿಯಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನಮ್ಮ ಸುತ್ತಲಿನ ಎಲ್ಲ ಆಗುಹೋಗುಗಳನ್ನು ಮೊದಲು ಗಮನಿಸುವುದು ಕಣ್ಣು....
ಕಣ್ಣು ಸುತ್ತಲಿನ ಸೌಂದರ್ಯವನ್ನು ನೋಡಲಷ್ಟೇ ಅಲ್ಲ, ಅದು ನಮ್ಮ ಸೌಂದರ್ಯವನ್ನು ಹೆಚ್ಚಿಸುವ ಅಂಗ. ಸೌಂದರ್ಯ ಎನ್ನುವ ಪದ ಬಂದ ಕೂಡಲೇ ಅದರ ಜೊತೆ ಬರುವುದು ಹೆಣ್ಣು. ಹೆಣ್ಣಿಗೂ ಕಣ್ಣಿಗೂ ಅವಿನಾಭಾವ ಸಂಬಂಧ. ಹೆಣ್ಣು ಸಂಸಾರದ ಕಣ್ಣು ಎಂದಾಗ, ಕಣ್ಣಿಗಿರುವ ಪ್ರಾಶಸ್ತ್ಯ ಸಂಸಾರದಲ್ಲಿ ಹೆಣ್ಣಿಗೂ ಇದೆ ಎಂದು ಹೇಳಿದೆ. ಕವಿಗಳು ಕಾದಂಬರಿ ಕಾರರು ಹೆಣ್ಣಿನ ವರ್ಣನೆಯಲ್ಲಿ ಕಣ್ಣಿಗೆ ಮೊದಲ ಸ್ಥಾನವನ್ನು ಕೊಟ್ಟಿದ್ದಾರೆ.
ಇನ್ನು ಕಣ್ಣಿನ ಶಕ್ತಿಯ ವಿಷಯಕ್ಕೆ ಬಂದಾಗ " ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ" , ನಮ್ಮ ರಾಜಕುಮಾರ ಹಾಡಿದ ಹಾಡಿಗಿನ್ನ ಬೇಕೆ? " ಹೆಣ್ಣಿನ ಮೇಲೆ ಕಣ್ಣಿಡುವಾಗ ನಿಗಾ ತುಂಬಬೇಕು, ಕಣ್ಣಲ್ಲಿ ಕಣ್ಣಿಡಬೇಕು ಛಲಬೇಕು" " ಕಣ್ಣು ಕಣ್ಣು ....." ಇಂದ ಶುರುವಾಗುವ ಕೆಲ ಹಾಡುಗಳು, ಇವೆಲ್ಲಾ ಕಣ್ಣಿನ ಬಣ್ಣನೆ.
ಹೆಣ್ಣಿನ ಕಣ್ಣೀರು ಎಂಥ ಕಲ್ಲು ಹೃದಯದ ಗಂಡಸರನ್ನು ಕರಗಿಸುತ್ತದೆ ಎನ್ನುವುದು ಸ್ವಲ್ಪ ಉತ್ಪ್ರೇಕ್ಷೆಯಾದರೂ ಸತ್ಯಕ್ಕೆ ಹತ್ತಿರವಾಗಿದೆ ಅಲ್ಲವೇ?
ಇನ್ನು ಗುರುವನ್ನು ನಮಿಸುವಾಗ.... ಅಜ್ಞಾನದ ಕತ್ತಲನ್ನು ಜ್ಞಾನದ ಸಲಾಕೆಯಿಂದ ತಿವಿದು, ಕಣ್ಣನ್ನು ತೆರೆಸಿದವನೇ ಗುರು ಎಂದು ಹೇಳುತ್ತೇವೆ.
ಕಣ್ಣಿನ ವಿಚಾರ ಬಂದಾಗ, ನನಗೆ ತಕ್ಷಣ ನೆನಪಿಗೆ ಬರುವುದು ಕಣ್ಣಿಲ್ಲದವರ ಬಗ್ಗೆ, ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳು. ಇದರ ಜೊತೆಗೆ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರು. ಇವರ ಸಾಧನೆಗಳು ಕಣ್ಣಿದ್ದ ವರಿಗಿಂತಲೂ ಒಂದು ಕೈ ಮೇಲೆ ಎನಬಹುದು. ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ.. ಅಂಧಕಲಾವಿದರು, ಹೀಗೆ ಇಂತಹ ಹಲವಾರು ಅಂಧ ಸಾಧಕರಿದ್ದಾರೆ..
ನಾನು ಹಲವಾರು ಸಲ ಅಂಧ ವ್ಯಕ್ತಿಗಳೊಡನೆ ಒಡನಾಡಿದ್ದೇನೆ ಅವರ ವಿಶೇಷ ಶಕ್ತಿ ನನಗೆ ಸೋಜಿಗವೆನಿಸಿದೆ. ಅವರು ಕಿವಿಗೊಟ್ಟು ಕೇಳುವ ಪರಿ, ಏಕಾಗ್ರತೆ, ಮಾತಿನ ಏರುಪೇರುಗಳನ್ನು ಸೂಕ್ಷ್ಮವಾಗಿ ಗುರುತಿಸುವ ಶಕ್ತಿ, ತಮ್ಮಲ್ಲಿರುವ ಕೋಲನ್ನೇ ಕಣ್ಣು ಮಾಡಿಕೊಂಡು ನಡೆದಾಡುವ ರೀತಿ, ದೇವರು ಅವರಿಗೆ ಕೊಟ್ಟ ವರ ಅನ್ನಿಸಿದೆ. ನಾಲ್ಕಾರು ಬಾರಿ ನಾನು ಅಂಧರಿಗೆ ಪರೀಕ್ಷೆಯಲ್ಲಿ ಬರೆದು ಸಹಕರಿಸಲು ಹೋಗಿದ್ದೇನೆ. ಫೋನ್ನಲ್ಲಿ ಒಂದೆರಡು ಬಾರಿ ಮಾತನಾಡಿದ್ದೇ.... ಅವರು ನನ್ನನ್ನು ಹೆಸರು ಸಮೇತ ಗುರುತು ಹಿಡಿದಿದ್ದು ನನಗೆ ತುಂಬಾ ಸಂತೋಷದ ವಿಚಾರ. ಇನ್ನು ಅಂಧ ವ್ಯಕ್ತಿಗಳಿಗಾಗಿ ನಡೆಸಿದ ಒಂದು ರಸಪ್ರಶ್ನೆ ಕಾರ್ಯಕ್ರಮದ ವಿಶಿಷ್ಟ ಅನುಭವ ನನಗಾಯಿತು. ಅವರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದ ರೀತಿ, ಬ್ರೈಲ್ ಲಿಪಿಯಲ್ಲಿ ಕೆಲ ಉತ್ತರಗಳನ್ನು ಬರೆದ ಶೈಲಿ ಮತ್ತು ವೇಗ....ವಾಹ್....
ಮಹಾಭಾರತದ ಗಾಂಧಾರಿಯ ಪಾತ್ರ... ಕಣ್ಣಿದ್ದು ಕುರುಡಿಯಂತೆ ಜೀವನ ನಡೆಸಿದ್ದು, ವಿಶೇಷ ವ್ಯಕ್ತಿತ್ವದ ಮಾದರಿ. ಇನ್ನು ಆಕೆಯ ಕಣ್ಣಿನ ಶಕ್ತಿಯ ವರ್ಣನೆಯಲ್ಲಿ, ದುರ್ಯೋಧನನನ್ನು ತನ್ನ ಕಣ್ಣಿಂದ ನೋಡಿ ವಜ್ರಕಾಯನನ್ನಾಗಿ ಮಾಡಿದ ಪ್ರಸಂಗ... ದುರ್ಯೋಧನನ ದುರದೃಷ್ಟವೋ ಏನೋ... ಆತ ಮರೆ ಮಾಡಿಕೊಂಡಿದ್ದ ತನ್ನ ತೊಡೆಯು ಆ ಶಕ್ತಿಯನ್ನು ಪಡೆಯದೆ, ಅವನ ಅಂತ್ಯ ತೊಡೆಯ ಕಾರಣದಿಂದಲೇ ಆಯಿತೆನ್ನುವುದು ಕಥಾ ಭಾಗ.
ಕಥೆ ಅಂದರೆ ಕೂಡಲೇ ನೆನಪಾಗುವುದು ಚಿಕ್ಕಂದಿನಲ್ಲಿ ಕೇಳಿದ ಬೇಡರ ಕಣ್ಣಪ್ಪ, ಈಶ್ವರನಿಗೇ ತನ್ನ ಕಣ್ಣು ಕಿತ್ತು ಕೊಟ್ಟ ಕಥೆ.... ಹಾಗೂ ಹದಿಬದೆಯ ಧರ್ಮ ಪದ್ಯದ " ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು" ಸಾಲು.
ನಾವುಗಳು ಚಿಕ್ಕವರಿದ್ದಾಗ ನಮಗೆ ಹೇಳುತ್ತಿದ್ದ ಮಾತು” ಸುಳ್ಳು ಹೇಳಬೇಡ ಹೇಳಿದ್ರೆ ಕಣ್ಹೋಗುತ್ತೆ". ನಾವು ಹೇಳುವುದು ಸತ್ಯ ಅಂತ ಪ್ರಮಾಣಿಸಬೇಕಾದರೆ "ನನ್ ಕಣ್ಣಾಣೆಗೂ" ಅಂತ ಕಣ್ಣಿನ ಪ್ರಮಾಣ, ಇನ್ನು ಕಣ್ಣಿರುವ ನವಿಲುಗರಿ ಪುಸ್ತಕದ ಮಧ್ಯದಲ್ಲಿ ಇಟ್ಕೊಂಡಿದ್ರೆ ಅದು ಮರಿ ಹಾಕತ್ತೆ ಅನ್ನುವ ಮುಗ್ಧತನ, ಅತ್ತಿ ಹಣ್ಣು, ಕಣ್ಣಿಗೆ ಬಹಳ ಒಳ್ಳೆಯದು, ಅದರಲ್ಲೂ ಒಳಗಡೆ ಸಣ್ಣ ಸೊಳ್ಳೆತರ ಹುಳಗಳು ಇದ್ದರೆ ಅದನ್ನು ಓಡಿಸಿ, ಎರಡರ್ಧವನ್ನು ಒಂದಕ್ಕೊಂದು ಉಜ್ಜಿ ಅದನ್ನು ನೆಕ್ಕಿ ಸವಿಯುವುದು ಒಂದು ಪರಿ. ಮನೆಯಲ್ಲಿ ಓಡಾಡ್ತಾ ಇರುವಾಗ ಕಾಲನ್ನು ಯಾವುದಾದರೂ ಸಾಮಾನಿಗೆ ತಗಲಿಸಿದರೆ ನಮ್ಮಮ್ಮ ಹೇಳುತ್ತಿದ್ದ ಮಾತು" ದೇವರು ಕಾಲಿಗೂ ಎರಡು ಕಣ್ಣು ಕೊಡಬೇಕಾಗಿತ್ತು" .
ಕಣ್ಣ ಮುಚ್ಚಾಲೆ ಆಟ ನಮ್ಮ ಜೀವನದ ಒಂದು ಭಾಗವೇ ಆಗಿತ್ತು. ಒಂದು ದಿನ ಆಟದ ಸಮಯದಲ್ಲಿ ಯಾರಿಗೂ ಕಾಣಬಾರದೆಂದು, ನಮ್ಮ ಹಳ್ಳಿಯ ಯಾವುದೋ ಮೂಲೆಯ ಒಂದು ಕಂಬದ ಹಿಂದೆ ಬಚ್ಚಿಟ್ಟಿ ಕೊಂಡಿದ್ದು, ಎಷ್ಟು ಹೊತ್ತಾದರೂ ಯಾರು ಗುರುತಿಸಿಲ್ಲ ಎಂಬ ಖುಷಿ. ಇನ್ನೂ ಸಮಯ ಕಳೆದಾಗ ಹೊಟ್ಟೆಯ ಹಸಿವು ...ಮನೆಯ ಕಡೆ ಗಮನ ಹರಿಯಿತು. .... ಮನೆಗೆ ಬಂದಾಗ ತಿಳಿದದ್ದು.. ನನ್ನಣ್ಣನು ಸೇರಿ ಎಲ್ಲ ಸ್ನೇಹಿತರು ಆಟವನ್ನು ಮುಗಿಸಿ ಮನೆಗೆ ಬಂದಿದ್ದರು.. ನಾನು ಮಾತ್ರ ಗೆದ್ದೆನೆಂಬ ಭಾವದಿಂದ ಪೆದ್ದನಂತೆ ಅಲ್ಲೇ ಕುಳಿತಿದ್ದೆ.
ಗಣಪತಿ ಹಬ್ಬಕ್ಕೆ ನಮಗೆ ವಿಗ್ರಹ ಮಾಡಿಕೊಡುತ್ತಿದ್ದದ್ದು ನಮ್ಮ ಹಳ್ಳಿಯ ಸಕಲ ಕಲಾವಲ್ಲಭ ಸುಬ್ಬಣ್ಣಯ್ಯ ( ಸುಬ್ಬರಾಯಾಚಾರ್ಯರು). ಇವರ ಮನೆಯ ಮಕ್ಕಳೆಲ್ಲಾ ಇದಕ್ಕೆ ಸಹಾಯ ಮಾಡುತ್ತಿದ್ದರು, ಆದರೆ ಕಣ್ಣನ್ನು ಇಡುವುದು ಮಾತ್ರ, ಸುಬ್ಬಣ್ಣಯ್ಯನೇ ಆಗಬೇಕು, ಅದಕ್ಕಾಗಿ ಕಾದು ಕೂತು, ಗಣೇಶನಿಗೆ ಕಣ್ಣಿಟ್ಟ ನಂತರ (ಕಣ್ಣು ಬರೆದ ) ಮನೆಗೆ ತೊಗೊಂಡು ಹೋಗಲು ಅನುಮತಿ.
ಚಿಕ್ಕಂದಿನಲ್ಲಿ ಜೋಳದ ಕಡ್ಡಿಯ ಬೆಂಡಿನಲ್ಲಿ ಕನ್ನಡಕವನ್ನು ಮಾಡಿಕೊಂಡು ಹಾಕಿಕೊಂಡು ಆಡುವುದೇ ಖುಷಿ. ಊವರ್ಚಿ ಹೂವಿನ ಮರದ ಎಲೆಯ ತೊಟ್ಟು ತುಂಬಾಉದ್ದ, ಅದನ್ನು ಬಗ್ಗಿಸಿ ಅಡ್ಡವಾಗಿ ಸಿಕ್ಕಿಸಿಕೊಂಡರೆ ಅದು ಒಂದು ಕನ್ನಡಕ.
ಈ ಲೇಖನದ ರೂಪುರೇಷೆ ಮನಸ್ಸಿನಲ್ಲಿ ತಯಾರಾಗುತ್ತಿದ್ದಾಗ ಬಂದ ಸುದ್ದಿ ನನ್ನ ಅತ್ತಿಗೆಯ ಅನಿರೀಕ್ಷಿತ ಸಾವು. ಅವರ ಕಣ್ಣುಗಳನ್ನು ದಾನ ಮಾಡಲು ಸರಿಯಾದ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳಲು ನಾನು ಏನೂ ಮಾಡಲಿಲ್ಲ ಎನ್ನುವ ಅಪರಾಧಿ ಭಾವ ನನ್ನಲ್ಲಿದೆ. ನನ್ನತ್ತಿಗೆಯ ಅಣ್ಣ (ಕಂಠಣ್ಣ) ಮಧ್ಯ ವಯಸ್ಸಿನಲ್ಲಿ ಕಣ್ಣನ್ನು ಕಳೆದುಕೊಂಡವರು. ಅವರು ತಮ್ಮ ತಂಗಿಯನ್ನು ನೋಡಲು(ಅಂತಃಕರಣದ ಒಳಗಿನ ಕಣ್ಣು ಎನ್ನಲೇ?) ಪ್ರಯಾಸದಿಂದ ಬಂದು, ತಮ್ಮ ತಂಗಿಯನ್ನು ನೋಡಿಕೊಂಡು ಹೋದದ್ದು ಮನ ಕಲಕಿತು.
ಕಣ್ಣು ಭಾವನೆಗಳ ಸೂಸುವ ಬಹು ಮುಖ್ಯ ಅಂಗ. ಕಣ್ಣೀರು ನೋವಾಗಿರುವುದರ ಕುರುಹು. ಅದೇ ಕಣ್ಣೀರನ್ನು ಹೊರಬೀಳದಂತೆ ತಡೆದುಕೊಂಡಾಗ ನೋವನ್ನು ಯಾರಿಗೂ ತೋರಿಸಬಾರದೆಂಬ ಭಾವ. ಆಪ್ತ ಸಮಾಲೋಚನೆಯ ಸಮಯದಲ್ಲಿ, ಅಪರಿಚಿತರಾದರೂ ನಮ್ಮ ಮುಂದೆ ಅತ್ತರು ಎಂದರೆ, ಬಂದವರಿಗೆ ನಮ್ಮ ಮೇಲೆ ಒಂದಷ್ಟು ಅಪ್ತತೆ ಹಾಗೂ ವಿಶ್ವಾಸ ಬೆಳೆದಿದೆ ಎಂಬ ಸೂಚನೆ.
ಇನ್ನು ಕಣ್ಣು ಮಿಟುಕಿಸಿ ಸೂಚನೆ ಕೊಡುವುದನ್ನು ಬಹುಶಃ ಎಲ್ಲರೂ ಮಾಡಿದ್ದೇವೆ ಅಥವಾ ಸೂಚನೆಯನ್ನು ತೆಗೆದುಕೊಂಡಿದ್ದೇವೆ. (ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕಣ್ಣು ಮಿಟುಕಿಸಿದ ವಿಡಿಯೋ ದೃಶ್ಯಗಳನ್ನ ನೀವೆಲ್ಲ ನೋಡಿಯೇ ಇರುತ್ತೀರಿ). ಚಿಕ್ಕಂದಿನಲ್ಲಿದ್ದಾಗ ಯಾವುದೋ ಕಾರಣಕ್ಕೆ ದುಃಖ... ಕಣ್ಣಲ್ಲಿ ನೀರು... ಅಪ್ಪ ಯಾಕೋ ಅಳ್ತೀಯಾ... ಅಂದಾಗ ಹೇಳುವ ಧೈರ್ಯ ಇಲ್ಲದೆ, ಅಳ್ತಾ ಇಲ್ಲ.. ಕಣ್ಣಿಗೆ ಧೂಳು ಬಿದ್ದಿತ್ತು ಅದಕ್ಕೆ ... ಇದು ಸಬೂಬು. ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವುದು ಆತ್ಮವಿಶ್ವಾಸದ ಸಂಕೇತ. ನಾವು ಚಿಕ್ಕವರಿದ್ದಾಗ , ತಪ್ಪು ಮಾಡಿದಾಗ ತಲೆತಗ್ಗಿಸಿ ಕಣ್ಣ ನೋಟ ತಪ್ಪಿಸಿ ಮಾತನಾಡಿದ್ದನ್ನು ನೆನೆಸಿಕೊಳ್ಳಿ... ಕಣ್ಣು ಸತ್ಯವನ್ನು ಹೇಳುತ್ತದೆ ಹಾಗಾಗಿ ಸತ್ಯವನ್ನು ಮುಚ್ಚಿಡಲು, ಕಣ್ಣು ತಪ್ಪಿಸಲು ತಲೆ ತಗ್ಗಿಸುವುದು.
ಚಿಕ್ಕಂದಿನಲ್ಲಿ ದುಃಖವಿಲ್ಲದ ಕಣ್ಣೀರು, ವಯಸ್ಸಾದಂತೆ ಕಣ್ಣೀರಲ್ಲದ ದುಃಖ, .. ಎಂಥ ಸತ್ಯದ ಮಾತಲ್ಲವೇ ಇದು.
ಕಣ್ಣಿನ ಶಕ್ತಿಯ ಉತ್ತುಂಗ ಪ್ರದರ್ಶನ ನನ್ನ ದೃಷ್ಟಿಯಲ್ಲಿ , ನಮ್ಮ ಶಿವ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟಿದ್ದು. ಅಬ್ಬಬ್ಬ ಎಂಥಾ ಶಕ್ತಿ.. ಸದ್ಯ ನಮಗೆಲ್ಲ ಆ ಶಕ್ತಿಯನ್ನು ದೇವರು ಕೊಟ್ಟಿಲ್ಲ ಇಲ್ಲದಿದ್ದರೆ ಎಷ್ಟು ಜನ, ಕ್ಷಣ ಕ್ಷಣದಲ್ಲೂ ಸುಟ್ಟು ಬೂದಿಯಾಗುತ್ತಿದ್ದರು.
ಕಾಮಲೆ ಕಣ್ಣಿಗೆ ಎಲ್ಲವೂ ಹಳದಿ, ಈ ನುಡಿಗಟ್ಟು ಅಕ್ಷರಶಃ ಸತ್ಯವಾದರೂ, ಅನ್ವಯಿಸುವುದು ಮಾತ್ರ ಬೇರೆಯದೇ ರೀತಿ. ನಮ್ಮ ಪೂರ್ವ ನಿರ್ಧಾರಿತ ದೃಷ್ಟಿಕೋನದಿಂದ ನಮಗೆ ಬೇಕಾದಂತೆ ನಾವು ನೋಡುವುದು... ವಸ್ತು ಸ್ಥಿತಿ ಬೇರೆ ಏನೇ ಇರಲಿ... ಇದು ಕಾಮಾಲೆ ಕಣ್ಣು. ನೆತ್ತಿಗೇರಿದೆ ಕಣ್ಣು ಎಂದಾಗ ಅದು ದುರಹಂಕಾರಿ ಮನೋಭಾವದ ಗುರುತು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ... ಇದು ತಾರತಮ್ಯದ ಸೂಚನೆ. ಕುರುಡು ಕಣ್ಣಿಗಿಂತ ಮೆಳ್ಳಗಣ್ಣು ಶ್ರೇಷ್ಠ ಎನ್ನುವ ಮಾತು ..ಏನೂ ಇಲ್ಲದಿರುವುದಕ್ಕಿಂತ ಸ್ವಲ್ಪವಾದರೂ ಇದೆ ಎನ್ನುವ ತೃಪ್ತಿ. ತೇಲಗಣ್ಣು ಮೇಲ್ಗಣ್ಣು ಎಂದು ಹೇಳುವುದು ವ್ಯಕ್ತಿಯು ಸಾವಿನಂಚನ್ನು ತಲುಪಿದ್ದಾನೆ ಎಂಬ ಸೂಚನೆ.
ಇನ್ನು ಔಟ್ ಆಫ್ ಸೈಟ್ ಇಸ್ ಔಟ್ ಆಫ್ ಮೈಂಡ್ ಎನ್ನುವ ಇಂಗ್ಲಿಷ್ ಹೇಳಿಕೆ, ಬಹಳ ದಿನ ನೋಡಿ ಒಡನಾಡದಿದ್ದರೆ ಮನಸ್ಸಿನಿಂದ ಒಂದಷ್ಟು ದೂರವಾಗುತ್ತಾರೆ ಎನ್ನುವುದು.. ಅನುಭವದ ಮಾತು.
ಕುರುಡಿ ಕುಣಿತಕ್ಕೆ ಮನೆಯವರೆಲ್ಲ ಎದ್ದು ಕೂತಿದ್ರು, ಕುಂಟನಿಗೆ ಎಂಟು ಚೇಷ್ಟೇ ಕುರುಡನಿಗೆ ನಾನಾ ಚೇಷ್ಟೆ ಅನ್ನುವುದು ಗಾದೆ ಮಾತುಗಳು.
ಇನ್ನು ಶಕುನಗಳನ್ನು ನಂಬುವವರು ಕಣ್ಣು ಅದುರುವುದನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಅದು ಒಳ್ಳೆಯದಿರಲಿ, ಇಲ್ಲದಿರಲಿ . ಹಲ್ಲಿ ಕಣ್ಣಿನ ಹುಬ್ಬಿನ ಮೇಲೆ ಬಿದ್ದರೆ ಅದು ಸಂಪತ್ತಿನ ನಾಶದ ಸೂಚನೆ ಎಂಬುದು ಹಲ್ಲಿ ಪತನ ಫಲ ಕೊಟ್ಟ ದ್ದು. ನಂಬುವುದು ಬಿಡುವುದು ನಿಮ್ಮ ಇಚ್ಛೆಗೆ ಬಿಟ್ಟಿದ್ದು.
ಕಣ್ಣುಮಿಟುಕಿಸದೇ ಒಬ್ಬರನ್ನ ಒಬ್ಬರು ನೋಡಿ ಸೋಲು ಗೆಲುವನ್ನು ನಿರ್ಧರಿಸುವ ಆಟ, ಮೊದಲು ಕಣ್ಣು ಮಿಟುಕಿಸಿದವರಿಗೆ ಸೋಲು ... ಇದೇ ಬಾಹುಬಲಿ ಮತ್ತು ಭರತ ಮಾಡಿದ ದೃಷ್ಟಿಯುಧ್ಧ.
ಕಣ್ಣಳತೆಯಲ್ಲೆ ಇರಲಿ ಎಂದಾಗ ಸೂಕ್ಷ್ಮವಾಗಿ ಗಮನಿಸುತ್ತಿರು ಎಂದು ಹೇಳಿದಂತೆ. ಒಳಗಿನ ಕಣ್ಣು ತೆರೆದು ನೋಡು ಎನ್ನುವುದು ತನ್ನನ್ನು ತಾನು ವಿಶ್ಲೇಷಣೆ ಮಾಡಿಕೊಳ್ಳುವ ಸೂಚನೆ ಅದು ಅಧ್ಯಾತ್ಮಿಕತೆಯ ಮೊದಲಘಟ್ಟ ಎಂದು ನನ್ನ ಅನಿಸಿಕೆ.
ಕಣ್ಣಲ್ಲಿ ಹೂವರಳಿದೆ ಎಂದು ಹೇಳುವುದನ್ನು ನಾನು ಕೇಳಿದ್ದೇನೆ ಹಾಗೂ ನೋಡಿದ್ದೇನೆ... ಕಣ್ಣಿನ ಪೊರೆ ಬಲಿತು ಅದು ಒಡೆದರೆ ಕಣ್ಣಿನ ಗುಡ್ಡೆಯ ಮೇಲೆ ಹೂವಿನಂತೆ ಕಾಣುತ್ತದೆ.. ಇದು ನಾನು ಚಿಕ್ಕಂದಿನಲ್ಲಿ ನಮ್ಮ ಸಂಬಂಧಿಕರು ಒಬ್ಬರ ಕಣ್ಣಲ್ಲಿ ನೋಡಿದ್ದೇನೆ.
ಪಾಪ ಮಾಡಿ ನರಕಕ್ಕೆ ಹೋದರೆ ನರಕದಲ್ಲಿ ಕೆಂಪಗೆ ಕಾದ ಕಬ್ಬಿಣದ ಸಲಾಕೆಯಿಂದ ಕಣ್ಣು ತಿವಿಯುತ್ತಾರೆ ಎನ್ನುವ ಹೇಳಿಕೆ.. ಯಾರು ಹೋಗಿ ಅನುಭವಿಸಿ ಬಂದು ಹೇಳಿದರೋ ತಿಳಿಯದು.
ಕಣ್ಣಿದ್ದೂ ಕುರುಡು, ಕಣ್ ಕಾಣಲ್ವಾ... ಅನ್ನುವುದು ಒಂತರಾ ಬೈಗುಳ.
ನೋಡುವ ವಿಷಯಕ್ಕೆ ಬಂದರೆ ದೃಷ್ಟಿಕೋನ ಎನ್ನುವ ಪದ ಬಳಕೆಯಲ್ಲಿದೆ... ನನ್ನ ದೃಷ್ಟಿಕೋನವೇ ಬೇರೆ... ಅದು ನನಗೆ ಕಂಡಂತೆ.. ಸರಿ ಇರಬಹುದು, ಇಲ್ಲದಿರಬಹುದು ಆದರೆ ಇನ್ನೊಬ್ಬರ ದೃಷ್ಟಿಕೋನವನ್ನು ನಾವು ಗುರುತಿಸಿ ಗೌರವಿಸಬಹುದಾದರೆ... ಎಷ್ಟೊಂದು ಅಭಿಪ್ರಾಯ ಭೇದಗಳನ್ನು ನಿವಾರಿಸಬಹುದು. ಇದಕ್ಕೆ 6 ಮತ್ತು 9 ರ ಉದಾಹರಣೆ ಸಾಕ್ಷಿ. ವಿರುದ್ಧ ದಿಕ್ಕಿನಲ್ಲಿ ನೋಡಿದಾಗ ಆರು ಒಂಬತ್ತಾಗಿ , ಒಂಭತ್ತು 6 ಆಗಿ ಕಾಣಿಸಿ ಅದನ್ನೇ ಪ್ರತಿಪಾದಿಸಿದರೆ ಭಿನ್ನಾಭಿಪ್ರಾಯ . ಆದರೆ ಸ್ಥಳ ಬದಲಾಯಿಸಿ ನೋಡಿದರೆ ಅಭಿಪ್ರಾಯವೂ ಬದಲಾಗುತ್ತದೆ.
ಈಗಿನ ಕಾಲಮಾನದಲ್ಲಿ ಎಲ್ಲ ಸಂಸ್ಥೆಗಳು ಐಎಸ್ಒ ಮಾನ್ಯತೆ ಪಡೆಯಬೇಕಾದರೆ ಮೊದಲು ಅವರು ತಮ್ಮ ದೃಷ್ಟಿ ( Vision) ಅನ್ನು ಪ್ರಕಟಪಡಿಸಬೇಕಾಗುತ್ತದೆ..ಅದಕ್ಕೇ ಇರಬಹುದು ದೃಷ್ಟಿಯಂತೆ ಸೃಷ್ಟಿ ಎಂದು ಹೇಳಿರುವುದು
ನೋಡುವ ಬಗೆಯನ್ನು ಪ್ರಾಸಬದ್ಧವಾಗಿ ಹೇಳಿದವರು ನಮ್ ಕೈಲಾಸಂ.." ಬೀದಿಲಿ ಬಿಡಿಗಾಸು ಬಿದ್ದಿದೆ ಅಂತ ಬಗ್ ಬಗ್ಗೀ ನೋಡ್ತಿದಿಯೇನೋ ಬಕವೇ..." ಎಂಥಾ ಪದ ಪ್ರಯೋಗ.
ಕಣ್ಣುಗಳ ವರ್ಣನೆ ಯಲ್ಲಿ ಮೀನ್ ಕಣ್ಣು, ಇರುಳುಗಣ್ಣು, ಮೆಳ್ಳಗಣ್ಣು, ವಂಡರ್ ಗಣ್ಣು ಹೀಗೆ..
ವಂಡರ್ ಗಣ್ಣು ಅಂತ ಬಂದಾಗ ನನಗೆ ನೆನಪಾಗೋದು ವೈಯನ್ಕೆ ( ವೈಎನ್ ಕೃಷ್ಣಮೂರ್ತಿ) ಅವರು ಬರೆಯುತ್ತಿದ್ದ ಹಾಸ್ಯಮಯವಾದ ಒಂದು ಅಂಕಣ. ಬಹುಶಃ ಅವರು ಬರೆದಿದ್ದೇ ಇರಬೇಕು.. ಕಿವಿಯೇ ಇಲ್ಲದ ಮನುಷ್ಯನಿಗೆ ಕಣ್ಣು ರಿಪೇರಿ ಮಾಡಕ್ಕೆ ಆಗಲ್ಲ.. ಯಾಕಂದ್ರೆ ಕನ್ನಡಕಾನ ಯಾವುದರ ಮೇಲೆ ಇಡೋದು? ಈಗ ಬಿಡಿ ಅದಕ್ಕೂ ಪರಿಹಾರ ಬಂದಿದೆ.
" ಮದ್ರಾಸ್ ಐ" ಎನ್ನುವ ಕಣ್ಣಿನ ಕಾಯಿಲೆಯಿಂದ ನರಳಿದವರು ಬಹಳ ಜನ. ಆಗ ನಾವೆಲ್ಲ ಅಂತಹವರಿಂದ ಬಹು ದೂರ ಕಾಯ್ದುಕೊಳ್ಳುತ್ತಿದ್ದೆವು. ಕಣ್ಣಿನ ಪೊರೆ ಮತ್ತೊಂದು ಸಾಮಾನ್ಯ ಕಣ್ಣಿನ ತೊಂದರೆ...ಸಾಮಾನ್ಯವಾಗಿ, 60 ವರ್ಷಗಳ ಮೇಲೆ ಬರುವುದು. ಅದಕ್ಕೆ ಈಗ ಅತ್ಯಾಧುನಿಕವಾದ opearation and lens ಲಭ್ಯವಿದೆ..
ಕಣ್ಣಿನ ಡಾಕ್ಟರ್ ಅಂದರೆ ಮೊದಲ ಹೆಸರು ಡಾ. ಎಂ ಸಿ ಮೋದಿಯವರದು. ಇವರು ಆಯುರ್ವೇದ ಡಾಕ್ಟರ್. ಸಣ್ಣ ಸಣ್ಣ ಹಳ್ಳಿಗಳಲ್ಲೂ ಕಣ್ಣಿನ ಕ್ಯಾಂಪ್ ಮಾಡಿ, ಲಕ್ಷಾಂತರ ಕಣ್ಣಿನ ಆಪರೇಷನ್ ಗಳನ್ನು ಮಾಡಿದ್ದಾರೆ. ಇವರ ಹೆಸರು, ಒಂದು ದಿನದಲ್ಲಿ ಅತಿ ಹೆಚ್ಚು ಕಣ್ಣಿನ ಆಪರೇಷನ್ ಮಾಡಿದ ದಾಖಲೆ, ಗಿನ್ನಿಸ್ ಬುಕ್ ವರ್ಲ್ಡ್ ರೆಕಾರ್ಡ್ ನಲ್ಲಿ ಇದೆ. ಶಹಬಾದ್ ನಲ್ಲಿ ಅವರು ನಡೆಸಿದ ಒಂದು ಕ್ಯಾಂಪ್ ನಲ್ಲಿ, ಅವರ ಕಾರ್ಯ ಶೈಲಿ ಹಾಗೂ ನೈಪುಣ್ಯದ ಬಗ್ಗೆ ನನಗೊಂದಿಷ್ಟು ಅರಿವಾಯಿತು. ಅಂಥಹ ಮೋದಿಯವರಿಗೆ ನನ್ನ ನಮನ.
ನನ್ನಣ್ಣ ಸತ್ತಿ ಸರ್ , ದೆಹಲಿಯಲ್ಲಿ ಇದ್ದಾಗ ಇರಬಹುದು , ಒಂದು ಕಾಗದದಲ್ಲಿ ನನಗೆ ಬರೆದ ವಿಷಯ ಹೀಗಿತ್ತು "ನನ್ನ ಜೊತೆಗೆ ಈಗ ಒಬ್ಬ ಸಂಗಾತಿ ಸುಲೋಚನ ಬಂದಿದ್ದಾಳೆ... (ನಂ ಸತ್ತಿ ಸಾರ್ ಅಂತ ಒಳ್ಳೆಯ ಮನುಷ್ಯ ನಮ್ಮತ್ತಿಗೆಗೆ ಒಬ್ಬ ಸವತಿಯನ್ನು ತಂದನೇ..? ಹ ಹ್ಹ ಹ್ಹಾ.. ) ಓದಲು ಕನ್ನಡಕದ ಅವಶ್ಯಕತೆ ಇತ್ತು. ಕನ್ನಡಕದ ಇನ್ನೊಂದು ಹೆಸರು ಸುಲೋಚನ ಅಲ್ಲವೇ... ಅದು ಸ್ತ್ರೀ ಲಿಂಗ.
ಮೊದಲ ಕಾಲಕ್ಕೆ ಕನ್ನಡಕ ಹಾಕಿಕೊಳ್ಳುತ್ತಾರೆ ಅಂದಾಗ ಅದು ಒಂದು ಊನವನ್ನು ಎತ್ತಿ ತೋರಿಸುತ್ತಿದ್ದ ಮಾತು.. ಆದರೆ ಈಗ ಕನ್ನಡಕ ಹಾಕಿಕೊಳ್ಳುವುದು ಒಂದು ಫ್ಯಾಶನ್.. ಎಷ್ಟು ತರದ, ವಿವಿಧ ವಿನ್ಯಾಸಗಳ ಕನ್ನಡಕಗಳು ಈಗ ಸಿಗುತ್ತೆ.
ಕಣ್ಣಿನ ಬಗ್ಗೆ ಯೋಚಿಸಲು ಪ್ರೇರೇಪಿಸಿದವಳು ನನ್ನ ಮೊಮ್ಮಗಳು ವಿಸ್ಮಯ. ಸೋಮವಾರದಂದು ನನ್ನ ಮಡದಿಗೆ ಎಡಗಣ್ಣಿನ ಪೊರೆಯನ್ನು ತೆಗೆಯಲು ಒಂದು ಸಣ್ಣ ಆಪರೇಷನ್ ಮಾಡಿಸಿದ್ದು, ವಿಸ್ಮಯ ತನ್ನ ಮೇಲೆ ಎಲ್ಲಾ ಜವಾಬ್ದಾರಿ ಇದೆಯೇನೋ ಎನ್ನುವಷ್ಟು ಮುತುವರ್ಜಿಯಿಂದ, ತನ್ನಜ್ಜಿಯನ್ನು ಗಮನಿಸುತ್ತಿದ್ದಳು. ಸಿರಪ್ (ಕಣ್ಣಿಗೆ ಹಾಕಬೇಕಾದ ಔಷಧ..ಅವಳ ಪರಿಭಾಷೆಯಲ್ಲಿ) ಹಾಕ್ಕೊಂಡೆಯ, ಕನ್ನಡಕ ತೆಗೀಬೇಡ, ನೋವ್ತಾ ಇದೆಯಾ? ಏನಾದ್ರೂ ಹಚ್ಚಲಾ ಎಂದು ಕೇಳುವುದು, ಕೈ ಹಿಡಿದು ನಡೆದಾಡಿಸುವುದು, ಊಟ ತಿನ್ನಿಸಲಾ ಅಂತ ಕೇಳುವುದು, ಮಲಗಿದಾಗ ಹೊದ್ದಿಸುವುದು... ಇದೆಲ್ಲ ನೋಡಿ ನನ್ನ ಕಣ್ಣಿನಲ್ಲಿ ಆನಂದ ಭಾಷ್ಪ.
ReplyDeleteವಿಸ್ಮಯ ಬಂಗಾರ 👌👌👌❤️
ನಮ್ಮ ಕಣ್ಣಿಗಳನ್ನು ಜೀವನದ ಆಗುಹೋಗಳಿಗೆ ೩೬೦° ಸುತ್ತಿಸಿದ್ದೀರಿ. ಆಡುಮುಟ್ಟದ ಸೊಪ್ಪಿಲ್ಲ ನಿಮ್ಮ ಈ ಲೇಖನದ ಕಣ್ಣುಗಳು ತಲುಪದ ಜಾಗವಿಲ್ಲ.
Deleteಕಣ್ಣುಗಳಿಗೆ (ಮನಕ್ಕೂ)ಆಯಾಸವಾಗದ ಹಾಗೆ ಓದಿಸಿಕೊಂಡು ಹೋಯಿತು.
ಬಾಹ್ಯ ಕಣ್ಣುಗಳಿಗೂ,
ಅಂತಚಕ್ಷುವಿಗೂ ಸಹಾ ಆರೈಕೆ
ಆಯಿತು.
ವಂದನೆಗಳು.
Thumba sundaravaagi barediddiri sir, thank you
ReplyDeleteಕನ್ನಡ ಭಾಷೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಕಣ್ಣುಗಳ ಬಗ್ಗೆ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿ ಮೂಡಿಬಂದಿದೆ.🙏🙏
ReplyDeleteತುಂಬಾ ಚೆನ್ನಾಗಿದೆ ನಯನದ ವಿವರ....👌👌👌
ReplyDeleteನಯನಾವಳಿ ಅದ್ಭುತವಾಗಿದೆ ನಯನಾವಳಿ ಅದ್ಭುತವಾಗಿದೆ
ReplyDeleteಸುದೀರ್ಘ ಲೇಖನ. ಅಂತೂ ಓದಿದೆ. ವಿಚಾರಗಳು ಓದಿಸಿಕೊಂಡು ಹೋಯಿತು. ಕಣ್ಣಿನ ಪ್ರಾಮುಖ್ಯತೆ ಹಂತ ಹಂತವಾಗಿ ಅನಾವರಣ ವಾಗಿದೆ. ಬರವಣಿಗೆ ಹಾಗೂ ಅದರಲ್ಲಿನ ಕೆಲವು ಅನುಭವಗಳು ಇಷ್ಟವಾಯಿತು.
ReplyDeleteನಿನ್ನ ಬರವಣಿಗೆ ಪ್ರೌಢವಾಗಿದೆ ಅಣ್ಣ. ಯಾರ ಕೆಟ್ಟ ಕಣ್ಣು ನಿನ್ನ ಮೇಲೆ ಬೀಳದಿರಲಿ.
ReplyDelete