ಹಣ್ಣುಗಳ ರಾಜ - ಮಾವು
ಹಣ್ಣುಗಳ ರಾಜ - ಮಾವು
ಇದು ಮಾವಿನ ಹಣ್ಣಿನ ಕಾಲ... ಎಲ್ಲಿ ನೋಡಿದರೂ ರಾಶಿ ರಾಶಿ ವಿಧವಿಧವಾದ ಮಾವಿನ ಹಣ್ಣುಗಳು. ನೋಡಲು ಚೆನ್ನ ತಿನ್ನಲ್ಲಂತೂ ಬಹು ಚೆನ್ನ. ಮಾವಿನ ಹಣ್ಣನ್ನ ಹಣ್ಣುಗಳ ರಾಜ ಅಂತ ಹೇಳ್ತಾರೆ. ಎಲ್ಲ ಹಣ್ಣುಗಳು ತಿನ್ನಲು ಅದರದೇ ಆದ ವಿಶೇಷ ರುಚಿಯನ್ನು ಹೊಂದಿದ್ದರೂ, ನನಗೆ ಅನ್ನಿಸಿದ ಹಾಗೆ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳಲ್ಲಿ ಮಾಡುವ ವೈವಿಧ್ಯ ತಿನಿಸುಗಳು ಮಾವಿನ ಹಣ್ಣಿನ ಸ್ಥಾನಕ್ಕೆ ಒಂದು ಮೆಟ್ಟಿಲು ಮೇಲೆ ಕೊಟ್ಟಿರಬಹುದು.
ಈ ವೈವಿಧ್ಯ ಹೇಳಲು ಒಂದು ಆರು ಸಾಲಿನ ಪದ್ಯ ನನಗೆ ತೋಚಿದ್ದು... ಗೀಚಿದ್ದು.. (ಬೀchiಯವರ ಮಾತಿನಂತೆ ತೋಚಿದ್ದು ಬೀಚಿದ್ದು) ನಿಮಗಾಗಿ..
ಚಿತ್ರಾನ್ನದ ಜೊತೆ ಹಣ್ಣಿನ ಪಾಯಸ,
ರುಚಿ ರುಚಿ ಹಣ್ಣು ಅದರದ್ದೇ ರಸ
ಅಪ್ಪೆಸಾರು ಉಪ್ಪಿನಕಾಯಿ
ಕೋಸಂಬರಿಗೆ ಮಾವಿನಕಾಯಿ
ಚಟ್ಣೀ ಗೊಜ್ಜು ಸಿಕರಣೆ
ದೇವರೇ ನಿನಗೆ ಆರೋಗಣೆ
ನಾನು ಹಳ್ಳಿಯಲ್ಲಿ ತಿಂದಂಥ ಒಂದೆರಡು ವಿಧವಾದ ಮಾವಿನ ಹಣ್ಣು ಹೊರತುಪಡಿಸಿದರೆ, ಈಗಿರುವ ವೈವಿಧ್ಯ ಮಾವಿನ ಹಣ್ಣಿನ ತಳಿಗಳು ನಿಜವಾಗಲೂ ಗೊತ್ತಾದದ್ದು ಬಹಳ ತಡವಾಗಿ, ಕೆಲವಂತೂ ಈಚೀಚೆಗೆ.... ಯಾವುದರ ರುಚಿ ಹೇಗೆ ಎನ್ನುವ ಸಂಪೂರ್ಣ ಅರಿವಿಲ್ಲ.
ಬೇಸಿಗೆಯ ರಜ, ನಮಗೆಲ್ಲ ಈಜುವ, ಆಟವಾಡುವ ಹಾಗೂ ಸಿಕ್ಕಸಿಕ್ಕ ಹಣ್ಣುಗಳನ್ನು( ಕಾಯಿ, ಪಿಂದೆ, ದೊರೆಗಾಯಿ, ಹಣ್ಣು ಎಲ್ಲವೂ ಸೇರಿ) ತಿನ್ನುವುದೇ ಒಂದು ಮೋಜು. ಯಾವಾಗಲೂ ನಮ್ಮ ಚಡ್ಡಿಯ ಜೇಬಿನಲ್ಲಿ ಉಪ್ಪು ಮೆಣಸಿನ ಪುಡಿಯ ಮಿಶ್ರಣದ ಪೊಟ್ಟಣ ಇರುತ್ತಿತ್ತು. ಮಾವಿನಕಾಯಿ, ಹುಣ್ಸೆಕಾಯಿಯನ್ನು ಉಪ್ಪು ಮೆಣಸಿನ ಪುಡಿ ಸೇರಿಸಿ ಕಲ್ಲಿನ ಮೇಲೆ ಚೆನ್ನಾಗಿ ಜಜ್ಜಿ ( ಈಗಾಗಲೇ ನನ್ನ ಬಾಯಲ್ಲಿ ಲಾಲಾರಸ ತುಂಬುತ್ತಿದೆ) ತಿನ್ನಲು ನಮಗೆಲ್ಲ ಎಲ್ಲಿಲ್ಲದ ಆತುರ ಉತ್ಸಾಹ. ಕೆಲಸಲ ಅದನ್ನು ಕಲ್ಲಿನ ಮೇಲೆ ಅರೆದು ತಯಾರಾದ ಚಟ್ನಿ ಅಂತ ಮಿಶ್ರಣವನ್ನು ಕಲ್ಲಿಂದಲೇ ನಾಲಿಗೆಯಿಂದ ನೆಕ್ಕಿ ಆಸ್ವಾದಿಸಿದ್ದುಂಟು. ಇನ್ನು ಈ ಎಲ್ಲ ಹುಳಿ ಹಣ್ಣುಗಳನ್ನು/ ಕಾಯಿಗಳನ್ನು ಚೀಪಿ ತಿಂದು ನಾಲಿಗೆಯ ಚರ್ಮ ಕಿತ್ತು,, ಅಂಗಳು ಗಾಯ ಆಗಿ, ನೀರು ಕುಡಿದಾಗ ಸಹ ನಾಲಿಗೆ ಉರಿ ಹಾಗೂ ಹಲ್ಲು ಚುಳ್ಳೆನ್ನುವುದು ಸಾಮಾನ್ಯವಾಗಿತ್ತು. ಈ ವಿಚಾರ ಅಪ್ಪನಿಗೆ ತಿಳಿಯದಂತೆ ಮರೆಮಾಚಿ, ಅಮ್ಮನ ಕೈಲಿ ಬೈಸಿಕೊಂಡು ಹೇಗೋ ಊಟ ಮಾಡಿ ಜಾಗ ಖಾಲಿ ಮಾಡಿದರೆ ಗೆದ್ದಂತೆ.
ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು ಅನ್ನುವುದು ಒಂದು ಹೇಳಿಕೆ.... ಅದನ್ನು ಹಿಸಿದು ಹಲಸು ತಿನ್ನು ಉಂಡೆ ಮಾವು ತಿನ್ನು ಎಂದು ಹೇಳುವುದನ್ನೂ ಕೇಳಿದ್ದೇನೆ. ಉಂಡೆ ಮಾವು ಅಂದಾಗ ಅದನ್ನು ಕತ್ತರಿಸದೆ ಹಾಗೆ ತಿನ್ನುವುದು. ನಿಜವಾಗಿಯೂ ನಮ್ಮಪ್ಪ ಮಾವಿನ ಹಣ್ಣನ್ನು ಕತ್ತರಿಸದೆ ತೊಟ್ಟಿನ ಭಾಗದಲ್ಲಿ ಸಣ್ಣಗೆ ತೂತು ಮಾಡಿ ಆ ತೂತಿನಿಂದಲೇ ಮಾವಿನ ಹಣ್ಣಿನ ಎಲ್ಲ ತಿರುಳನ್ನು ರಸ ಮಾಡಿ ಹೀರಿ ಸಿಪ್ಪೆ, ವಾಟೆಯನ್ನು ಬಿಸಾಕುತ್ತಿದ್ದ ರೀತಿ ಇಂದಿಗೂ ನನಗೆ ಅಚ್ಚರಿ. ನಾನು ಪ್ರಯತ್ನಪಟ್ಟಾಗ, ಸಣ್ಣ ತೂತು, ಓಟೆ ಈಚೆಗೆ ಬರುವಷ್ಟು ದೊಡ್ಡದಾಗಿ, ರಸವೆಲ್ಲ ಚೆಲ್ಲಿ ರಂಪ ಮಾಡಿ ಮುಗಿಸಿದ್ದನ್ನು ನೆನೆದರೆ ಈಗಲೂ ನನ್ನ ಪೆದ್ದತನ ಎದ್ದು ಕಾಣುತ್ತದೆ. ಇದೀಗ ಹಾಗೆ ಮಾಡುವುದು ಒಳ್ಳೆಯದಲ್ಲ ಎನಿಸಲು ಕಾರಣ , ಹಣ್ಣು ಆಗಿನಷ್ಟು ನೈಸರ್ಗಿಕವಾಗಿ ಬೆಳೆದಿರುವುದಿಲ್ಲ. ಹಾಗಾಗಿ ಹಣ್ಣೊಳಗೆ ಹುಳ ಇರುವ ಸಂಭವ ಜಾಸ್ತಿ... ನಾನಂತೂ ಹಣ್ಣನ್ನು ಕುಯ್ದೇ ತಿನ್ನುವುದು.
ಮನೆ ತುಂಬಾ ಮಕ್ಕಳು, ಹಣ್ಣನ್ನು ಎಲ್ಲರಿಗೂ ಹೆಚ್ಚಿ ಕೊಡುವುದು ವಾಡಿಕೆ. ಅಮ್ಮ ಹಣ್ಣನ್ನು ಹೆಚ್ಚಲು ಕೂತರೆ ನಾವೆಲ್ಲ ಅವಳ ಸುತ್ತು. ಮಾವಿನ ಹಣ್ಣು ಹೆಚ್ಚುವಾಗ ವಾಟೆ, ಕೆನ್ನೆ ಎಂಬ ಎರಡು ಭಾಗ. ವಾಟೆ ನಂದು ಕೆನ್ನೆ ನಿಂದು ಎನ್ನುವ ಮಾತುಕತೆ ನಡೆಯುತ್ತಿತ್ತು. ನಾನು ವಾಟೆಯನ್ನು ಹೆಚ್ಚು ಇಷ್ಟಪಡುತ್ತಿದ್ದೆ, ಕಾರಣ ಅದನ್ನು ತುಂಬ ಹೊತ್ತು ಚೀಪಬಹುದು , ಹಾಗಾಗಿ ಅದರಲ್ಲಿ ಹಣ್ಣಿನ ಭಾಗ ಜಾಸ್ತಿ ಇದೆ ಎಂಬ ನಂಬಿಕೆ ನನ್ನದು. ಒಂದು ಹಂತದಲ್ಲಿ ಅದು ಸರಿ ಇಲ್ಲ ಅನಿಸಿದಾಗ ಕೆನ್ನೆಗೆ ನನ್ನ ದುಂಬಾಲು. ನಾನು ಮನೆಯಲ್ಲಿ ಚಿಕ್ಕವನು ಹಾಗಾಗಿ ಸ್ವಲ್ಪ ಅಮ್ಮ ನನ್ನ ಪರ ಇರುತ್ತಿದ್ದಳು. ಈ ಜಗಳದಲ್ಲಿ ಅಮ್ಮ ನನಗೆ ವಾಟೆಯಲ್ಲಿ ಸ್ವಲ್ಪ ಜಾಸ್ತಿ ಹಣ್ಣಿನ ಭಾಗವನ್ನು ಸೇರಿಸಿ ಕೊಟ್ಟದ್ದಿದೆ. ಆಗೆಲ್ಲ ನನಗಿಂತ ದೊಡ್ಡವರಿಗೆಲ್ಲ ನನ್ನ ಮೇಲೆ ಕೋಪ ಬಂದಿರಬಹುದು.
ಮಾವಿನ ವಿಶೇಷತೆ ನನಗನಿಸಿದಂತೆ, ಅದರಲ್ಲಿ ಸಿಹಿ ಖಾರ, ಹುಳಿ, ಒಗರು ಎಲ್ಲದರ ಮಿಶ್ರಣ. ಸಿಹಿಯಲ್ಲಿ ಸೀಕರಣೆ, ಕಾರದಲ್ಲಿ ಉಪ್ಪಿನಕಾಯಿ, ಹುಳಿಯಲ್ಲಿ ಚಿತ್ರಾನ್ನ, ಈಗ ನನಗೆ ಇಷ್ಟ. ಇನ್ನು ಕಾಯಿ ಇದ್ದಾಗ ಅದನ್ನು ಮೆಣಸಿನ ಪುಡಿ ಉಪ್ಪು ಬೆರೆಸಿ ತಿನ್ನುತ್ತಿದ್ದ ಹುಳಿ ಮತ್ತು ಒಗರಿನ ಮಿಶ್ರಣ ಈಗ ತಿನ್ನಲು ಇಷ್ಟವಾದರೂ ಕಷ್ಟ.
ಗರ್ಭಿಣಿ ಹೆಂಗಸರು ಸಾಮಾನ್ಯವಾಗಿ ತಮ್ಮ ಬಯಕೆಯ ದಿನಗಳಲ್ಲಿ ಇಷ್ಟಪಡುವುದು ಹುಳಿ ಮಾವಿನಕಾಯಿ. ಹುಳಿ ಮಾವಿನಕಾಯಿ ತಿನ್ನುವ ಸ್ವಲ್ಪ ವಯಸ್ಸಾದ ಹೆಂಗಸರನ್ನು.... ಏನಮ್ಮಾ... ಈ ವಯಸ್ಸಲ್ಲಿ ಹುಳಿ ಮಾವಿನಕಾಯಿ ಅಂತ ತಮಾಷೆ ಮಾಡುವುದನ್ನು ನಾನು ನೋಡಿದ್ದೇನೆ.
ಮಾವಿನ ಹಣ್ಣಿನ ಸೀಕರಣೆ ಎಂದಾಗ ನನ್ನ ಮನಸ್ಸಿಗೆ ತಕ್ಷಣ ಬರುವುದು..... ಕೊಲ್ಲಾಪುರ. ಕೊಲ್ಲಾಪುರದಲ್ಲಿ ನನ್ನ ಅಣ್ಣನ ಮಗಳ ಮಗನ ಉಪನಯನ ಕಾರ್ಯಕ್ರಮಕ್ಕೆ ನಾವೆಲ್ಲ ಹೋಗಿದ್ದಾಗ , ಉಪನಯನದ ಮಾರನೆಯ ದಿನ ನಮಗಾಗಿ ಮಾಡಿಸಿದ್ದ ಸಿಕರಣೆ... ಅದನ್ನು ಮಾಡುತ್ತಿದ್ದ ವಿಧಾನ... ನಾಲ್ಕಾರು ಜನ ಹೆಂಗಸರು ಬುಟ್ಟಿಯಲ್ಲಿದ್ದ ಮಾವಿನ ಹಣ್ಣನ್ನು ಒಂದು ದೊಡ್ಡ ಪಾತ್ರೆಗೆ ಹಿಂಡುತ್ತಿದ್ದ ರೀತಿ.... ವ್ಹಾ... ಅದರ ರುಚಿ... ಬಲ್ಲವನೇ ಬಲ್ಲ.
ನನ್ನ ಮೊಮ್ಮಗಳಿಗೂ ಸೀಕರಣೆ ಇಷ್ಟ... ಅವಳು ಎರಡು ವರ್ಷದಷ್ಟು ಚಿಕ್ಕವಳಿದ್ದಾಗ ಮಾವಿನ ಹಣ್ಣಿನ ವಾಟೆಯನ್ನು ಒಂದು ಮೂಲೆಯಲ್ಲಿ ಒಂಟಿಯಾಗಿ ಕೂತು ಸವಿಯುತ್ತಿದ್ದ ದೃಶ್ಯ ನನ್ನ ಕಣ್ಣಮುಂದಿದೆ.
ಇನ್ನು ತೋತಾಪುರಿ ಮಾವಿನ ಹಣ್ಣು ಅಂದಾಗ ನನಗೆ ಜ್ಞಾಪಕ ಬರುವುದು ನನ್ನ ಹೈಸ್ಕೂಲ್ ಜೀವನ. ನ್ಯಾಷನಲ್ ಹೈಸ್ಕೂಲ್ ಬಳಿ ಒಬ್ಬ ಕಾಕಾ ಇರುತ್ತಿದ್ದ, ಆತ ತೋತಾಪುರಿ ಮಾವಿನ ಹಣ್ಣಿನ ಸಣ್ಣ ಸಣ್ಣ ಚೂರುಗಳನ್ನು ವಿಶೇಷ ವ್ಯಂಜನದೊಂದಿಗೆ ಬೆರೆಸಿ ಮಾಡಿಕೊಡುತ್ತಿದ್ದ ಒಂದು ತಿನಿಸು.. ಅದೇನು ರುಚಿ... ಅದೇನು ಜನಸಂದಣಿ... ಎಲ್ಲರೂ ಕಾಕಾ... ಕಾಕಾ ..ನನಗೆ ಕೊಡಿ, ನನಗೆ ಕೊಡಿ... ಎಂದು ಅಂಗಲಾಚುತ್ತಿದ್ದವರೇ(?)... ದುಡ್ಡು ಕೊಟ್ಟು ತೆಗೆದುಕೊಂಡರು ಸಹ.
ಹಣ್ಣು ಹಂಚಿ ತಿನ್ನು ಎನ್ನುವುದು ಪಾಂಡವರ ಕಾಲದಿಂದಲೇ ಇದೆ ಎನ್ನುವ ಸತ್ಯ.... ಕುಂತಿ ತನ್ನ ಮಕ್ಕಳಿಗೆ( ದ್ರೌಪದಿ ಎಂಬ ಹಣ್ಣನ್ನು) ಹಂಚಿಕೊಂಡು ತಿನ್ನಿ ಎಂದು ಹೇಳಿದ ಪ್ರಸಂಗ ನೆನಪಿಸುತ್ತದೆ.
ವಟ ಸಾವಿತ್ರಿ ಹುಣ್ಣಿಮೆಯ ದಿನ ಮಾವಿನ ಹಣ್ಣನ್ನು ದಾನವಾಗಿ ಕೊಟ್ಟರೆ ಮುತ್ತೈದೆತನ ಪ್ರಾಪ್ತಿಯಾಗುತ್ತದೆ ಎನ್ನುವ ಒಂದು ನಂಬಿಕೆ ಹಾಗಾಗಿ ಅಂದು ಮಾವಿನ ಹಣ್ಣನ್ನು ಕೊಡುವ ಸಂಭ್ರಮ ಮುಗಿಲು ಮುಟ್ಟಿರುತ್ತದೆ.
ಒಂದು ಪ್ರಸಂಗ ನಿಮಗೆ ಹೇಳಲೇಬೇಕು.... ಹಳ್ಳಿಯಲ್ಲಿ ತಿನ್ನಬಹುದಾದ ಯಾವುದೇ ಹಣ್ಣು ಕಾಯಿ ಎಂಬ ಭೇದವಿಲ್ಲದೆ, ಅದರ ಬೇಟೆಗಾಗಿ ಹೊರಡುತ್ತಿದ್ದದ್ದು ನಮ್ಮ ಒಂದು ಪಟಾಲಮ್ಮು.... ಒಂದು ಸಂದರ್ಭದಲ್ಲಿ ಯಾವುದೋ ಒಂದು ತೋಟದಲ್ಲಿ ಮರಕ್ಕೆ ಕಲ್ಲು ಹೊಡೆಯುತ್ತಿದ್ದಾಗ.... ತೋಟದ ಯಜಮಾನ/ ಕಾವಲುಗಾರ ಇರಬಹುದು.. ಬಂದು ನನ್ನನ್ನು ಹಿಡಿದುಕೊಂಡ ... ಮಿಕ್ಕೆಲ್ಲ ಜೊತೆಗಾರರು ತಪ್ಪಿಸಿಕೊಂಡು ಓಡಿದರು, ನಾನು ಮಾತ್ರ ಮಿಕವಾಗಿದ್ದೆ. ನಡಿ ನಿಮ್ಮಪ್ಪನಿಗೆ ಹೇಳುತ್ತೇನೆ ಎಂದು ನನಗೆ ಭಯಪಡಿಸಿದ್ದು... ಅಪ್ಪನ ಮುಖ ನೆನೆಸಿಕೊಂಡು ಭಯದಿಂದ ಚೆಡ್ಡಿ ಯಲ್ಲಿಯೇ ಉಚ್ಚೆ ಮಾಡಿಕೊಂಡಿದ್ದು.... ಈಗ ನಮಗೆ ಬರುತ್ತದೆ... ಆಗಿನ ಪರಿಸ್ಥಿತಿ... ಅಯ್ಯೋ ಅನ್ನಿಸುವಂಥದ್ದು.
ಇನ್ನು ಹಬ್ಬ ಹರಿದಿನಗಳಲ್ಲಿ ಮಾವಿನ ಸೊಪ್ಪಿನ ತೋರಣ ಕಟ್ಟುವುದು ಒಂದು ಸಂಪ್ರದಾಯವೇ ಆಗಿದೆ. ತೋರಣ ಅಂದ ತಕ್ಷಣ ನನಗೆ ಜ್ಞಾಪಕ ಬರುವುದು ಮಾವಿನ ಎಲೆಯೇ.... ಮಾವಿನ ಎಲೆಗಳ ತುದಿಯನ್ನು ಜೋಡಿಸಿ ಒಂದೇ ಉದ್ದ ಬರುವಂತೆ ತೊಟ್ಟಿನ ಭಾಗವನ್ನು ಕತ್ತರಿಸಿ ಪೊರಕೆ ಕಡ್ಡಿಯ ಸೀಳಿನಿಂದ ಅದನ್ನು ಹೆಣೆಯುತ್ತಿದ್ದ ನಮ್ಮಪ್ಪನ ಕೌಶಲ ನೆನಪಿದೆ. ಈಗ ಅದು stapler pin ಗೆ ಬಂದು ನಿಂತಿದೆ.
ನೆನಪುಗಳ ಮೆರವಣಿಗೆ ಹೀಗೇ ಹೋಗುತ್ತಿರುತ್ತದೆ ಎಲ್ಲಾದರೂ ನಿಲ್ಲಲೇ ಬೇಕಲ್ಲ..... ಈ ಮೆರವಣಿಗೆಗೆ ಕಾರಣ ನಮ್ಮ ಮನೆಗೆ ಬಂದ ಮಾವಿನ ಹಣ್ಣು/ ಕಾಯಿಗಳ ಜಾತ್ರೆ... ನನ್ನ ಅಳಿಯ ಪ್ರದೀಪ್ ಹಳ್ಳಿಯಿಂದ ತಂದು ಕೊಟ್ಟ ಮಾವಿನ ಹಣ್ಣು.... ಮಗನಷ್ಟೇ ಪ್ರೀತಿಯ.. ನಾದಿನಿಯ ಮಗ ಸಾರ್ಥಕ ಕಳಿಸಿದ ಮಾವಿನ ಕಾಯಿ ಹಾಗೂ ನನ್ನ ಆತ್ಮೀಯರು ಗಣಪತ್ ಅವರು ಕಳಿಸಿದ ಮಾವಿನ ಹಣ್ಣು.
ಹಣ್ಣು ಕೊಟ್ಟ ಎಲ್ಲರ ಜೀವನವು ಮಾವಿನ ಹಣ್ಣಿನಷ್ಟೇ ರಸಭರಿತವಾಗಿ ಇರಲಿ ಎಂದು ಆಶಿಸುತ್ತಾ...
ಬರಲೇ ಮಾವಿನ ಹಣ್ಣು ಕರೆಯುತ್ತಿದೆ.. ಬಾ ನನ್ನನ್ನು ಸವಿ ಎಂದು.
ನಾವೂ ಸವಿದೆವು ನಿಮ್ಮ ರಸಬರಿತ (ರಸಪುರಿ) ಮಾವಿನ ಸವಿ ನೆನಪು...
ReplyDeleteಮಾವಿನ ಹಣ್ಣು ಇಷ್ಟ ಪಡದವರು ಯಾರಿದ್ದಾರು? ಮೂರ್ಕಣ್ಣಪ್ಪನ ತೋಟದ ಮಾವಿನ ಕಾಯಿಗಳನ್ನು ಕಿತ್ತು ಎರಡೂ ಕೈಗಳಲ್ಲಿ ಹಿಡಿದು ಇಳಿಯಲಾಗದೆ ಧುಮುಕಿ ಮೈಕೈ ಗಾಯ ಮಾಡಿಕೊಂಡು,ಗೆಳೆಯರ ಜೊತೆ ಓಡಿ ,ಅಟ್ಟಿಸಿಕೊಂಡು ಬಂದ ರಂಗೇಗೌಡನನಿಂದ ತಪ್ಪಿಸಿಕೊಂಡ ಬಾಲ್ಯದ ನೆನಪೊಂದು ಸುಳಿದು ಹೋಯಿತು.
ReplyDeleteಅಂದ ಹಾಗೆ ಮೂರ್ಕಣ್ಣಪ್ಪ ನಮ್ಮಪ್ಪನ ಸ್ನೇಹಿತ. ಕೇಳಿದ್ದರೆ ಎಷ್ಟು ಬೇಕಾದರೂ ಕೊಡುತ್ತಿದ್ದ. ಅವನ ಮಗ ರಂಗೇಗೌಡ ನಮ್ಮ ಕ್ಲಾಸ್ ಮೇಟೇ. ಅದ್ಯಾಕೆ ಹಾಗೆ ಅಟ್ಟಿಸಿಕೊಂಡು ಬಂದನೋ!!
ಹಣ್ಣುಗಳ ರಾಜ ಮಾವಿನಹಣ್ಣು, ಅದರ ಸವಿ ಕಹಿಯ ಅನುಭವ ಕಥನ ರಸ ಭರಿತ ವಾಗಿದೆ
ReplyDelete