ಒಡಪು - ವೈಯಾರ- ಹೆಸರು
ಇದೇನಿದು ಶೀರ್ಷಿಕೆಯೇ ಒಂದಕ್ಕೊಂದು ಸಂಬಂಧವಿಲ್ಲದಂಗೆ ಇದೆಯೆಂದು ಯೋಚಿಸುತ್ತಿದ್ದೀರಾ? ಬನ್ನಿ ನೋಡೋಣ.
ಒಡಪು ಎಂದರೆ ಒಗಟು ಸಹ, ಸಮಸ್ಯೆ ಎಂಬ ಅರ್ಥವೂ ಇದೆ. ಇನ್ನು ವೈಯಾರಕ್ಕೆ ಬಂದರೆ.. ಹಾವ ಭಾವಗಳು, ನಡೆ ನುಡಿ, ಮಾತಿನ ಶೈಲಿ ಎಲ್ಲವೂ ಮಿಳಿತವಾದ ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗ ಉಪಯೋಗಿಸುವ ಪದ ವಯ್ಯಾರ.. ಹಾಗಾಗಿ ವೈಯಾರಗಿತ್ತಿ / ಬಿನ್ನಾಣಗಿತ್ತಿ ಎಂದು ಹೇಳುವ ವಾಡಿಕೆ. ಇನ್ನು ಹೆಸರಿನ ಬಗ್ಗೆ ನಾನು ಹೇಳುವುದು ಏನೂ ಇಲ್ಲ... ನಿಮಗೆಲ್ಲ ತಿಳಿದಿರುವಂತೆ ಗುರುತಿಸಲು ಉಪಯೋಗಿಸುವ ಒಂದು ಪದ, ನಾಮಪದ.
ಬಹು ಪಾಲು ಉತ್ತರ ಕರ್ನಾಟಕದ ಹೆಂಗಸರು ಸಂತೋಷ ಸಮಾರಂಭಗಳಲ್ಲಿ ಅದರಲ್ಲೂ ಮದುವೆಯಂತಹ ಕಾರ್ಯಕ್ರಮಗಳಲ್ಲಿ, ಗಂಡನ ಹೆಸರು ಹೇಳುವಾಗ ಪದ ವಯ್ಯಾರದಿಂದ, ಪ್ರಾಸ ಬದ್ಧವಾಗಿ, ಪ್ರಾಸಂಗಿಕವಾಗಿ, ಹಾಸ್ಯ ರೂಪದಲ್ಲಿ, ಬಹು ಪಾಲು ಸೂಚ್ಯವಾಗಿ ಹೇಳುವ ವಿಧಾನವನ್ನು ವಡಪು ಎಂದು ಹೇಳುತ್ತಾರೆ. ಪದಗಳ ಉಪಯೋಗ ಅವರೋಹಣ ಕ್ರಮದಲ್ಲಿ ಇದೆ ಬಿಟ್ಟರೆ ಎಲ್ಲವನ್ನು ಹೇಳಿದ್ದೇನೆ ಎನ್ನುವ ನಂಬಿಕೆ ನನ್ನದು.
ಹಾಯ್.. ದಿಸ್ ಇಸ್ ಮುಳ್ (ಮುಳ್ಳು?) ಎಂದುತನ್ನ ಭಾವೀ ಪತಿ ಮುರಳಿಧರನನ್ನು ಪರಿಚಯಿಸುವ ಅತ್ಯಾಧುನಿಕ ಹುಡುಗಿಯೂ ಸಹ ಮದುವೆ ಮನೆಯಲ್ಲಿ ನಾಚಿಕೊಂಡು ಹೀಗೆ ಹೇಳಬಹುದೇನೋ...
ಹೆಸರಾಗೇನದೇ ಬರೀ ಐದಕ್ಷರ
ಕೂಗಿದ ಕೂಡಲೇ ಓ ಅಂತಾರಾ
ಕಡೆಗಣ್ಣಲ್ಲೇ ಹುಡುಗೀರ್ನ ನೋಡ್ತಾರ
ನನ್ನವ ಕೃಷ್ಣನ ಅಪರಾವತಾರ
ಕಲ್ಪನೆಗೆ, ಕ್ರಿಯಾಶೀಲತ್ವಕ್ಕೆ, ಪ್ರಾಸಕ್ಕೆ ಯಾವ ನಿರ್ಬಂಧವೂ ಇಲ್ಲ.. ಅದು ಆ ಸಮಯಕ್ಕೆ ಸರಿ ಹೊಂದಿದರೆ ಆಯ್ತು.
ರಾಜ್ಯದ ಯಾವುದೇ ಭಾಗ ಇರಲಿ, ಜಾತಿ ಭಾಷೆ ಯಾವುದೇ ಇರಲಿ, ನಮ್ಮ ಹಳೆಯ ಸಂಪ್ರದಾಯಗಳು, ಜನರೆಲ್ಲ ಕೂಡಿ ಸಂತೋಷದಿಂದ ಕಾಲ ಕಳೆಯುವ ವ್ಯವಧಾನವಾಗಿತ್ತು. ಅದರಲ್ಲೂ ಮದುವೆಯಂಥ ಸಮಾರಂಭಗಳು ವಾರದವರೆಗೂ ನಡೆಯುತ್ತಿದ್ದ ದಿನಗಳಲ್ಲಿ, ಸಾಕಷ್ಟು ಅವಕಾಶಗಳನ್ನು ಹೊಂದಿಸಿಕೊಳ್ಳುತ್ತಿದ್ದರು ಹಾಗೂ ಅದರ ಮೂಲಕ ಒಂದು ಸಂದೇಶವೂ ಸಹ ಇರುತ್ತಿತ್ತು ಅಂತ ನನ್ನ ಅನಿಸಿಕೆ.
ನಾಗೋಲಿ , ಉರುಟಣೆ, ಬೊಂಬೆ ಆಟ, ಹೂ ಚೆಂಡಿನ ಆಟ, ಚಿಕ್ಕ ಬಾಯಿರುವ ತಂಬಿಗೆಯಲ್ಲಿ ಉಂಗುರ ಹಾಕಿ ಗಂಡು ಹೆಣ್ಣು ಇಬ್ಬರೂ ಒಂದೇ ಸಲ ಕೈಯಿಟ್ಟು ಉಂಗುರವನ್ನು ತೆಗೆದುಕೊಳ್ಳುವುದು, ಬಾಗಿಲು ಅಡ್ಡಗಟ್ಟಿ ತಮಾಷೆ ಮಾಡುವುದು, ಭೂಮದ ಊಟದ ಸಮಯದಲ್ಲಿ, ಮದುವೆಯ ಗಂಡು ಎಂಜಲು ಕೈಯಲ್ಲಿ ತನ್ನತ್ತೆಯ ಕೈಯನ್ನು ಹಿಡಿದು ಗಂಡನ ಹೆಸರು ಹೇಳಲು ಒತ್ತಾಯಿಸುವುದು, ಬೀಗರನ್ನುಛೇಡಿಸುವ ತಮಾಷೆ ಹಾಡು, ಓಕಳಿ ಆಟ ಹೀಗೆ ಹತ್ತು ಹಲವಾರು ಪ್ರಸಂಗಗಳು ನಡೆಯುತ್ತಿದ್ದವು.
ಬೀಗರನ್ನು ಜರಿಯುವ ಹಾಡು ಅಂದಾಗ ನಮ್ಮಮ್ಮ ಹೇಳುತ್ತಿದ್ದ ಒಂದು ಹಾಡು ನೆನಪಿಗೆ ಬರುತ್ತದೆ. ಸ್ವಲ್ಪ ಕಡಿಮೆ ಅಭಿರುಚಿ ಎನ್ನಬಹುದೇನೋ ಈಗಿನ ಸುಸಂಸ್ಕೃತ ಜನರು. ಆದರೆ ಜನಪದರ ಬಾಯಲ್ಲಿ ಇವೆಲ್ಲಾ ಬಹುಸಾಮಾನ್ಯ... ಇದೋ ನಿಮ್ಮ ಮುಂದೆ..
ಎಂಥಾ ಹೂಸನು ಹೂಸಿದೆ ...
ಪುಣ್ಯಾತ್ಗಿತ್ತಿ ಎಂಥಾ ಹೂಸನು ಹೂಸಿದೆ
ಒಂದು ಹೂಸು ಹೂಸಿದಾರೆ
ಮಂಗಳೂರು ಮಾಯವಾಯ್ತು
ತುಮಕೂರು ತೂತುಬಿತ್ತು
ಯನಕಸಂದ್ರದ ಕೆರೆಯಲ್ಲಿ
ತಿರುಗಿ ನೋಡಿಕೊಂಡು ಹೋಗುತೀದೆ..
ಎಂಥ ಹೂಸನು ಹೂಸಿದೆ...
ಒಂದು ಸಣ್ಣ ವಿಷಯವನ್ನು ಎಷ್ಟು ಸುಂದರವಾಗಿ ಹೆಣೆದಿದ್ದಾರೆ. ಜನಪದರ ಜಾಣ್ಮಿಗೆ.....ವ್ಹಾ...ವ್ಹಾ
ಈಗಿನ ಕಾಲಮಾನದಲ್ಲೂ ಸಹ, ತಾಳಿ ಕಟ್ಟುವ - ಧಾರೆ ಎರೆಯುವ ಕಾರ್ಯಕ್ರಮ ಮುಗಿದ ಮೇಲೆ ನಡೆಯುವ ನಾಗೋಲಿ, ಉರುಟಣೆಗಳು ಶಾಸ್ತ್ರಗಳ ರೂಪದಲ್ಲಿ ಚಾಲ್ತಿಯಲ್ಲಿವೆ.
ಹಿಂದೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುತ್ತಿದ್ದರು. ಹೊಸ ಜನ, ಹೊಸಮುಖ ಹಾಗಾಗಿ ಸಂಕೋಚ, ನಾಚಿಕೆ ಇರುತ್ತಿದ್ದವು. ಅದನ್ನು ಹೋಗಲಾಡಿಸಲು ಹಾಗೂ ಎಲ್ಲರ ಸಂಬಂಧಗಳನ್ನು ಗಟ್ಟಿಯಾಗಿಸಲು ಈ ವಿನೋದ ಪ್ರಸಂಗಗಳು ಅವಕಾಶ ಮಾಡಿಕೊಡುತ್ತಿದ್ದವು.
ಕೆಲ ಸಂಪ್ರದಾಯಗಳಲ್ಲಿ ಅಕ್ಕಿ ಮತ್ತು ಉಪ್ಪಿನಲ್ಲಿ ಆನೆಯ ಚಿತ್ರಗಳನ್ನು ಬರೆದು ಅದರ ಮೇಲೆ ನವದಂಪತಿಗಳನ್ನು ನಿಲ್ಲಿಸಿ ಮಾಡುವ ಒಂದು ಶಾಸ್ತ್ರವಿದೆ. ಶಾಸ್ತ್ರಿಗಳು ಸ್ವಲ್ಪ ಹಾಸ್ಯ ಮನೋಭಾವದವರಾಗಿದ್ದರೆ, ಅದು ಹೇಳಿ ಕೊಡುವ ಎನ್ನರಸ, ಚನ್ನರಸ, ಪಟ್ಟದರಸ, ಪ್ರಾಣ ಕಾಂತ, ಎನಾಜಿ ರನ್ನ, ಗುಣಸಂಪನ್ನ, ಕೀರ್ತಿ ಸಂಪನ್ನ, ಅಷ್ಟೈಶ್ವರ್ಯ ಸಂಪನ್ನ ಹೇಳಿಕೊಟ್ಟು ಮತ್ತೊಮ್ಮೆ ಹೇಳುವಾಗ ಪ್ರಾಸ ಬದ್ಧವಾಗಿ ಎಡವರಸ, ಮುಗ್ಗರಸ ಅಂತ ಮಧ್ಯ ಸೇರಿಸಿ, ಯಾವುದೇ ಯೋಚನೆ ಇಲ್ಲದೆ ಹೇಳಿಕೊಟ್ಟದ್ದನ್ನು ಹೇಳುವಾಗ, ಸುತ್ತಮುತ್ತಲಿನವರೆಲ್ಲ ನಕ್ಕು, ಗಂಡು ಹೆಣ್ಣು... ಸಹ ಅದರಲ್ಲಿ ಭಾಗಿಯಾಗುವ ಸನ್ನಿವೇಶ ಸೊಗಸು. ಇದು ನನ್ನ ಅನುಭವ ಕೂಡ. (ನನ್ನ ಮದುವೆಯಲ್ಲಿ ನಮ್ಮ ಮದುವೆ ಮಾಡಿಸಿದ ಈಗ ಅಮೆರಿಕದಲ್ಲಿರುವ ಸತ್ಯನಾರಾಯಣ ಶಾಸ್ತ್ರಿಗಳು .. ನಮ್ಮ ಪ್ರೀತಿಯ ಗುಂಡಣ್ಣ ಇದನ್ನು ನಮ್ಮ ಮೇಲೆ ಪ್ರಯೋಗ ಮಾಡಿದ್ದರು.. ನಾನು ಬಲಿಪಶುವಾದದ್ದು ಸತ್ಯ) ಈ ಅಕ್ಕಿ ಆನೆ , ಉಪ್ಪಿನ ಆನೆ ಆಟದ ಹಿಂದಿನ ಒಂದು ಸಂದೇಶ ಹೀಗಿರಬಹುದೆಂದು ನನ್ನ ಅನಿಸಿಕೆ. ಇಬ್ಬರು ವ್ಯಕ್ತಿಗಳು, ಬೇರೆ ಬೇರೆ ಪರಿಸರದಲ್ಲಿ ಬೆಳೆದವರು, ಅವರದೇ ಆದ ಅಭಿಪ್ರಾಯಗಳನ್ನು ಉಳ್ಳವರು ಒಟ್ಟಿಗೆ ಜೀವಿಸಬೇಕಾದಾಗ ತಮ್ಮ ಅಭಿಪ್ರಾಯಕ್ಕೆ ಅಂಟಿಕೊಂಡರೆ, ಸಾಮರಸ್ಯ ಬರುವುದು ಹೇಗೆ? ಹಾಗಾಗಿ ಸ್ಥಳ ಬದಲಾವಣೆಯಾದಾಗ ನೋಡುವ ನೋಟವೂ ಬದಲಾಗಿ, ಇನ್ನೊಬ್ಬರ ದೃಷ್ಟಿಕೋನವನ್ನು ಅರಿತುಕೊಳ್ಳುವ ಒಂದು ಪ್ರಯೋಗ. ಅದೂ ಅಲ್ಲದೆ ಉಪ್ಪಿಲ್ಲದೆ ಅನ್ನಕ್ಕೆ ರುಚಿ ಇಲ್ಲ, ಬರೀ ಉಪ್ಪನ್ನು ತಿನ್ನಲಾಗದು... ಅನ್ನದ ಜೊತೆಗೆ ಉಪ್ಪು ಸೇರಿದರೆ ಅಡುಗೆ ರುಚಿ. ಇಬ್ಬರೂ ಹೊಂದಿಕೊಂಡು ಹೋದರೆ ಜೀವನ ಸೊಗಸು... ಅಲ್ಲವೇ?
ಮದುವೆ - ಗಂಡು ಹೆಣ್ಣಿನ ಜೀವನದಲ್ಲಿ ಬಹು ಮುಖ್ಯವಾದ ಘಟ್ಟ... ಈ ಹಂತದಲ್ಲಿ ಮನಸ್ಸುಗಳು ಒಂದಾಗಿ, ಹೊಂದಿಕೊಂಡು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುತ್ತಾ ನಡೆದಾಗ ಜೀವನಕ್ಕೆ ಅದರದೇ ಆದ ವಿಶೇಷ ಅರ್ಥ ಬರುತ್ತದೆ. ಇಲ್ಲದಿದ್ದರೆ ಈಗಿನ ಬಹು ಪಾಲು ಯುವ ಜನತೆಯ ಮನೋಭಾವ ದಂತೆ... ಸ್ವಪ್ರತಿಷ್ಠೆ, ಸ್ವಾರ್ಥ, ಅಹಂಕಾರ, ತಾನೆ ಮೇಲು ಎಂಬುವ, ವಿಷಯಗಳು ಸಾಮರಸ್ಯಕ್ಕೆ ಅಡ್ಡಿಯಾಗಿ ಬಹುಬೇಗ ವಿಚ್ಛೇದನದ ಹಂತ ಮುಟ್ಟುತ್ತಾರೆ. ಇದು ಆಪ್ತ ಸಮಾಲೋಚಕನಾಗಿ ನನ್ನ ಅನಿಸಿಕೆ.
ಒಡಪಿನಿಂದ ಶುರುವಾದ ನನ್ನ ಚಿಂತನೆ ನೆನಪಿನ ಸುರುಳಿಯಾಗಿ ಇಲ್ಲಿಗೆ ಬಂದು ನಿಂತಿತು.... ಇದಕ್ಕೆ ಕಾರಣ ನನ್ನ ಮೊಮ್ಮಗಳು ಸಹನಾ ( ಅಣ್ಣನ ಮಗನ ಮಗಳು). ಅವಳ ಮದುವೆ ಇದೇ ಜೂನ್ 25 ರಂದು . ಹುಡುಗನ ಮನೆಯವರು ಗುಲ್ಬರ್ಗದ ವಾಸಿಗಳು. ಹಾಗಾಗಿ ಮದುವೆಯಲ್ಲಿ ವಡಪಿನ ಮೂಲಕ ಹೆಸರು ಹೇಳಬೇಕು ನನಗೆ ಬರೆದು ಕೊಡಿ ಎಂದು ಕೇಳಿದಳು... ಬರೆದೆ ಅವಳಿಗೆ ಕೊಟ್ಟೆ ಅದರ ಜೊತೆಗೆ ನನ್ನ ಯೋಚನೆ ಲಹರಿಯನ್ನು ಹರಿಬಿಟ್ಟೆ. ನಾನು ಬರೆದುಕೊಟ್ಟ ವಡಪನ್ನು ಇಲ್ಲಿ ಬರೆಯಲು ನನಗೆ ಒಪ್ಪಿಗೆ ಇಲ್ಲ.. ಕಾರಣವನ್ನು ಒಂದು ಒಡಪಿನ ರೂಪದಲ್ಲಿ ಹೇಳಲೇ..
ನಾ ಬರೆದ ಒಡಪು ಈಗ್ಲೇ ಹೇಳಂಗಿಲ್ಲ
ಯಾಕಂದ್ರೆ ಮದುವೆ ಇನ್ನೂ ಆಗಿಲ್ಲ
ಈಗಲೇ ಹೇಳಿದರೆ ಅದಕ್ಕೆ ಹೊಸತನ ಇರಂಗಿಲ್ಲ
ಅದರ ಸ್ವಾರಸ್ಯನೂ ಉಳಿಯಂಗಿಲ್ಲ...
ಮುಂದೆ ಯಾವಾಗ್ಲಾದ್ರೂ ಸಮಯ ಬಂದರೆ ಅದನ್ನ ಬರೀತೀನಿ ಅಲ್ಲಿವರೆಗೂ ಎಲ್ಲರಿಗೂ ನಮಸ್ಕಾರ...
😊😊
ReplyDeleteಸರಸ ಹಾಗೂ ಸ್ವಾರಸ್ಯಕರ ಮತ್ತು ವಿಚಾರ ಗಳ ಮೂಲಕ ranjiside ಈ ಲೇಖನ ರಂಗ
ReplyDelete