ನನ್ನಮ್ಮ...


ಇವತ್ತು ನನ್ನ ಆತ್ಮೀಯ ಪದ್ಮನಾಭ ಅವರ ಮೊಮ್ಮಗನ ಮದುವೆಯ ಮನೆಯ ಊಟ. ಪಾಯಸದ ವಿಚಾರಣೆ ಸಮಯ. ನಾನು ಪಾಯಸವನ್ನು ಸ್ವಲ್ಪವೇ ಹಾಕಿ ಅಂತ ಕೇಳಿದೆ... ಅದಕ್ಕೆ ಬಡಿಸುವವರು  ಎರಡೇ ತೊಟ್ಟು ಬೀಳುವಂತೆ ಬಡಿಸಿ ತಮಾಷೆಯಾಗಿ ಸಾಕ ಸರ್ ಅಂದರು... ತುಂಬಾ ಖುಷಿಯಾಯಿತು ಅವರ ಹಾಸ್ಯ ಪ್ರಜ್ಞೆಯಿಂದ. ಪಕ್ಕದ ಸ್ನೇಹಿತ ಕೇಳಿದ ಅಷ್ಟೇ ಹಾಕಿಸಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ? ಅದಕ್ಕೆ ನನ್ನ ಉತ್ತರ  "ಅಮ್ಮ " . 

ಹೌದು ನಾನು ಎಲ್ಲೇ  ಊಟ ಮಾಡಲಿ, ಪಾಯಸ ಬಂದಾಗ ಬೇಡ ಅನ್ನುವುದೇ ಇಲ್ಲ... ಇದಕ್ಕೆ ಕಾರಣ ನನ್ನಮ್ಮ.  ಯಾವ ಸಮಯದಲ್ಲಿ ಹೇಳಿದ್ದೋ ಗೊತ್ತಿಲ್ಲ ಆದರೆ ಅದು ನನ್ನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ. " ಪಾಯಸ ಬೇಡ್ವಾ , ಅಮ್ಮನ ಮೇಲೆ ಪ್ರೀತಿ ಇಲ್ವಾ, ಪಾಯಸ ಬೇಡ ಅಂದ್ರೆ ನಿಮ್ಮಮ್ಮ ಸತ್ತೋಗ್ತಾಳೆ" ಯಾಕೆ ಹಾಗೆ ಹೇಳಿದಳೋ... ಪ್ರಾಯಶಃ ಮಗ ಪಾಯಸ ತಿನ್ನಲಿ ಎಂದಿರಬೇಕು.... ನನಗೆ ಕೋಪ ಬಂದಿತ್ತು, ದುಃಖ ಆಗಿತ್ತು, ಪಾಯಸ ಹಾಕಿಸಿಕೊಂಡು ತಿಂದದ್ದು ನೆನಪಿದೆ. ಕೋಪ ಮತ್ತು ದುಃಖ ಅಳುವಿನ ರೂಪದಲ್ಲಿ ಅಮ್ಮನ ಮುಂದೆ ಹೊರಹಾಕಿದ್ದು, ಅಮ್ಮ ಮುದ್ದು ಮಾಡಿದ್ದು ಸಹ ನೆನಪಿದೆ... ಇದು ಪಾಯಸದ ಹಿಂದಿನ ಪ್ರಸಂಗ.

ಮಾತು ಮುಂದುವರಿದು ಇವತ್ತು mother's day ಅನ್ನುವ ವಿಚಾರ ಹೊರಕ್ಕೆ ಬಂತು. ನನಗೆ ವರ್ಷಕ್ಕೊಮ್ಮೆ ಆಚರಣೆ ಮಾಡುವ ಇಂತಹ ದಿನಗಳು ಅಷ್ಟೇನೂ ಪ್ರಭಾವ ಬೀರಿಲ್ಲ. ಹಾಗಂತ ನಾನು ವಿರೋಧಿಯಲ್ಲ. ಹಾಗಾಗಿ ಅಮ್ಮನ ನೆನಪುಗಳ ಈ ಲೇಖನ.

ಮಾತೃದೇವೋಭವ - ಇದು ನಾವು ಚಿಕ್ಕಂದಿನಿಂದ ಕೇಳಿದ, ಒಪ್ಪಿದ ವಿಷಯ. ದೇವರು ಎಲ್ಲ ಕಡೆಯೂ ಇರಲಾಗದ ಕಾರಣ ಅಮ್ಮನನ್ನು ಸೃಷ್ಟಿಸಿದ ಎಂಬುದೂ ಒಂದು ನಂಬಿಕೆ. ಅಮ್ಮನ ಆಸರೆಯಿಂದ ವಂಚಿತರಾದ ಮಕ್ಕಳು ಎಂಥ ದುರದೃಷ್ಟವಂತರು ಎಂದು ನಾನು ಬಹಳ ಸಲ ಯೋಚಿಸಿದ್ದೇನೆ. 

ನಮ್ಮ ಜನಪದರು ಅಮ್ಮನನ್ನು ಚಿತ್ರಿಸುತ್ತಾ ಹೇಳಿದ ಹಾಡುಗಳು.. ಯಾಕಳುವೆ ಎಲೆ ಕಂದ ಬೇಕಾದ್ದು ನಿನಗೀವೆ,.. ಎಂದಾಗ ಮಕ್ಕಳಿಗಾಗಿ ಎಲ್ಲವನ್ನು ಮಾಡುವ,    ಅತ್ತು ಕಾಡುವಳಲ್ಲ, ರಚ್ಚೆ ಮಾಡುವಳಲ್ಲ, ಎತ್ತಿಕೋ ಎಂಬ ಹಟವಿಲ್ಲ... ತನ್ನ ಮಗುವಿನ ಬಗ್ಗೆ ಇರುವ ಹೆಮ್ಮೆ, ಹಾಗೆ ಅತ್ತರೆ ಅಳಲವ್ವ ಅಳುವ ಕೂಸಿರಲ್ಲವ, ಕೆಟ್ಟರೇ ಕೆಡಲಿ ಮನೆಗೆಲಸ... ಇದು ಹೇಗಿದ್ದರೂ ಒಪ್ಪಿಕೊಳ್ಳುವ ಮನೋಭಾವ.. ಅಮ್ಮನ ಚಿತ್ರಣವನ್ನು ಎಷ್ಟು ಚೆನ್ನಾಗಿ ಕೊಟ್ಟಿದ್ದಾರೆ ಅಲ್ಲವಾ?

ಅಮ್ಮ ಎನ್ನುವುದು ಒಂದು ವ್ಯಕ್ತಿಯಷ್ಟೇ ಅಲ್ಲ ಅದೊಂದು ಶಕ್ತಿ, ಸಂಸ್ಥೆ ಇದ್ದ ಹಾಗೆ. ಸಾಮಾನ್ಯವಾಗಿ ಅಮ್ಮ ಕೆಲ ಸಮಯ ಅಪ್ಪ ಇಲ್ಲದಿದ್ದಾಗ,  ಅಪ್ಪನೂ ಆಗಬಹುದು. ಆದರೆ ಅಮ್ಮ ಇಲ್ಲದಿದ್ದಾಗ ಮಕ್ಕಳು ತಬ್ಬಲಿ. ಅಮ್ಮ ನಾಲ್ಕು ಮನೆಯ ಬಚ್ಚಲನ್ನು ತೊಳೆದಾದರೂ ತನ್ನ ಮಕ್ಕಳನ್ನು ಸಲಹುತ್ತಾಳೆ, ಆದರೆ ತಾಯಿ ಸತ್ತರೆ ತಂದೆ ಮಕ್ಕಳಿಗೆ ಚಿಕ್ಕಪ್ಪನಾಗುತ್ತಾನೆ ಎನ್ನುವ ಮಾತು ಉತ್ಪ್ರೇಕ್ಷೆಯಾದರೂ, ಸತ್ಯಕ್ಕೆ ಹತ್ತಿರವಿದೆ.  ಈಗೀಗ ವೃದ್ಧಾಶ್ರಮಗಳು ಹೆಚ್ಚಾದಂತೆ, ಮತ್ತೊಂದು ಮಾತು .. ಅದೇನೆಂದರೆ ಅಪ್ಪ ಅಮ್ಮ 10 ಮಕ್ಕಳಾದರೂ ಹೇಗೋ ಸಾಕಿಸಲಹುತ್ತಾರೆ, ಆದರೆ 10 ಮಕ್ಕಳು ಸೇರಿ ಒಬ್ಬ ತಂದೆ ತಾಯಿಯನ್ನು ಸಾಕಲಾರದ ಸ್ಥಿತಿಗೆ ಬಂದು ಸೇರಿದ್ದೇವೆ.

ಇನ್ನು ನನ್ನಮ್ಮನ ನೆನಪಿಗೆ ಮರಳುತ್ತೇನೆ....

ನನ್ನಮ್ಮ ನನಗೆ ಇಂದೂ ಮಾದರಿಯೆ... ಅವಳಲ್ಲಿದ್ದ leadership quality, ಯಾವುದೇ ಕೆಲಸಕ್ಕೂ ಮುಂದೆ ಹೋಗುವ ಗುಣ, ತೆಗೆದುಕೊಳ್ಳುತ್ತಿದ್ದ ನಿರ್ಧಾರ ಹಾಗೂ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದ ಶೈಲಿ ನನಗೆ ತುಂಬಾ ಅಚ್ಚು ಮೆಚ್ಚು.  ಬಡತನ ಅವಳ ಧೈರ್ಯವನ್ನು ಎಂದೂ ಕುಗ್ಗಿಸಲಿಲ್ಲ.  ಇನ್ನೊಬ್ಬರ ಕಷ್ಟಗಳನ್ನು, ಮನಸ್ಸಿನ ನೋವುಗಳನ್ನು ಸಮಾಧಾನದಿಂದ ಕೇಳಿ ಅದಕ್ಕೆ ತನಗೆ ತಿಳಿದಂತಹ ಸೂಕ್ತ ಪರಿಹಾರವನ್ನು ಕೊಡುವ ಅವಳ ಗುಣ, ನನಗೆ ಪ್ರೇರೇಪಣೆ ನೀಡಿ ನಾನೊಬ್ಬ ಆಪ್ತ ಸಮಾಲೋಚಕನಾಗುವ ಹಾದಿಯಲ್ಲಿ ಮುಂದುವರೆಯಲು ಸಹಾಯ ಮಾಡಿದೆ.

ಕಷ್ಟಗಳ ಸರಮಾಲೆ ಯನ್ನು ಅನುಭವಿಸುತ್ತಿದ್ದರು ಅದನ್ನು ತನ್ನ ಭಂಧು ಬಾಂಧವರಿಗೆ ಅದರ ಸೂಚನೆಯನ್ನು ತಿಳಿಸದೆ ನಿಭಾಯಿಸುತ್ತಿದ್ದ ಅವಳ ರೀತಿ. ಕಾಡಿಗೆ ಹೋಗಿ ಸೌದೆ ತಂದು ಮನೆಯಲ್ಲಿ ಒಲೆ ಉರಿಯುವ ಹಾಗೆ ನೋಡಿಕೊಳ್ಳುತ್ತಿದ್ದ ಅವಳ  ಮಾನಸಿಕ ಶಕ್ತಿ, ಈಗಲೂ ನನಗೆ ಅಚ್ಚರಿಯೆನಿಸುತ್ತದೆ. ಕಾಡಿನಿಂದ ಸೌದೆ ಹೊರೆಹೊತ್ತು ಬರುವ ದಾರಿಯಲ್ಲಿ... ಚಿಕ್ಕಬಳ್ಳಾಪುರದಿಂದ ಬರುತ್ತಿದ್ದ ರೈಲಿನಲ್ಲಿ, ತನ್ನ ತಮ್ಮಂದಿರು ಓಡಾಡುತ್ತಾರೆ, ಅವರು ನೋಡಬಹುದು, ನೋಯಬಹುದು ಎಂದು ತನ್ನ ಮುಖಕ್ಕೆ ಸೆರಗು ಮುಚ್ಚಿಕೊಂಡು ನಡೆಯುತ್ತಿದ್ದದ್ದು ನೆನಪಿದೆ. ಇಲ್ಲಿ ನನ್ನ ಸೋದರ ಮಾವಂದಿರು ಅದರಲ್ಲೂ ರಂಗಣ್ಣಯ್ಯ, ಸುಬ್ಬಣ್ಣಯ್ಯ ಇವರನ್ನು ನೆನೆಯಲೇಬೇಕು. ಅವರ ಅಕ್ಕನ ಕಷ್ಟಗಳನ್ನು ಸೂಕ್ಷ್ಮವಾಗಿ ಅರಿತು, ಅದನ್ನು ಅಕ್ಕನಿಗೆ ತೋರ್ಪಡಿಸದೆ, ಸಹಜವಾಗಿ ಸಹಾಯ ಮಾಡುತ್ತಿದ್ದ ಅವರ ಗುಣ ನನಗೆ ತುಂಬಾ ಇಷ್ಟ. ಯಾವುದೋ ಒಂದು ಸಮಯದಲ್ಲಿ ನನ್ನಮ್ಮ ಅವರ ತಮ್ಮಂದಿರ ಮೇಲೆ ಕೋಪ ಮಾಡಿಕೊಂಡು ತನ್ನ ಅಸಹಾಯಕತೆಯ ಬಗ್ಗೆ ಮಾತನಾಡಿದಾಗ, ಅವರು ಸಮಾಧಾನ ಮಾಡಿದ ರೀತಿ ನನ್ನ ನೆನಪಿನಲ್ಲಿದೆ.

ಅಮ್ಮ ಸೌದೆ ತರಲು ಕಾಡಿಗೆ ಹೋಗುತ್ತಿದ್ದದ್ದು ಬೆಳಕು ಹರಿಯುವ ಸಮಯ, ಅದು ನನಗೆ ಸಿಹಿ ನಿದ್ದೆಯ ಸಮಯ. ಆದರೂ ಉತ್ಸಾಹದಿಂದ ಅಮ್ಮನ ಜೊತೆಯಲ್ಲಿ ಹೋಗಿ ನನ್ನ ಕೈಲಾದ ಮಟ್ಟಿಗೆ ಸೌದೆ ಹೊರೆಯನ್ನು ತರುತ್ತಿದ್ದೆ (ಆಗ ನನ್ನ ವಯಸ್ಸು ಎಂಟರಿಂದ 12 ವರ್ಷ).  ಹೀಗೊಂದು ದಿನ ಬೆಳಿಗ್ಗೆ ಅಮ್ಮ ನನ್ನನ್ನು ಎಬ್ಬಿಸಿದಾಗ ನಿದ್ದೆ ನಟನೆ ಮಾಡಿ ತಪ್ಪಿಸಿಕೊಂಡದ್ದು ಇದೆ. ಆಗಿನ ನನ್ನಮ್ಮನ ಸ್ವಗತ.... "ಬೆಳೆಯೋ ಮಗು, ನಿದ್ದೆ ಮಾಡಲಿ".  ಈಗ ಮನಸ್ಸಿಗೆ ಪಿಚ್ಚೆನಿಸುತ್ತದೆ. 

S L ಭೈರಪ್ಪನವರ ಗೃಹಭಂಗ ಕಾದಂಬರಿಯ ನಂಜಮ್ಮನ ಪಾತ್ರ ಓದಿದಾಗ ನನಗೆ ನನ್ನಮ್ಮನ ಮುಖವೇ ನಂಜಮ್ಮನಲ್ಲಿ ಕಾಣುತ್ತಿತ್ತು.

ಅಮ್ಮನ ಇನ್ನೊಂದು ವಿಶೇಷ ಗುಣ, ಮನೆಯಲ್ಲಿ ಇರುವುದನ್ನೇ ಒಪ್ಪ ಮಾಡಿ, ಅದರಲ್ಲೇ ಸಾಧ್ಯವಾದಷ್ಟು ರುಚಿಕರವಾಗಿ ಮಾಡುತ್ತಿದ್ದ ಅಡುಗೆ ಹಾಗೂ ಬಡಿಸುತ್ತಿದ್ದ ರೀತಿ. ಹೇಗೋ ಸಮಯಕ್ಕಂತೂ ಏನಾದರೂ ಮಕ್ಕಳ ಹೊಟ್ಟೆ  ತುಂಬಿಸುತ್ತಿದ್ದ ಅವಳ ಚಾಕಚಕ್ಯತೆ.  ಮನೆಗೆ ನೆಂಟರು ಬಂದಾಗ ಅದರಲ್ಲೂ ಅಳಿಯಂದಿರು ಬಂದಾಗ, ಎಲ್ಲರೂ ಜೊತೆಯಲ್ಲಿ ಕೂತು ಊಟ ಮಾಡಬೇಕು, ಆದರೆ ಅಡಿಗೆ ಮನೆಯಲ್ಲಿನ ಸ್ಥಿತಿ ಅದಕ್ಕೆ ಪೂರಕವಾಗಿರದಿದ್ದಾಗ, ಅಮ್ಮ ಬಡಿಸುವ ಶೈಲಿಯಲ್ಲಿ ನಮಗೆ ಸೂಚನೆ ಸಿಕ್ಕುತ್ತಿತ್ತು, ಯಾವುದರ ಕೊರತೆ ಇದೆ ಎಂದು, ಅದಕ್ಕೆ ತಕ್ಕಂತೆ ನಮ್ಮ ಸ್ಪಂದನೆ ರೂಪಿಸುತ್ತಿದ್ದ ಅವಳ ಪರಿ ನಿಜಕ್ಕೂ ಶ್ಲಾಘನೀಯ.

ನನ್ನಮ್ಮನಿಗೆ ತನ್ನ ಸುತ್ತು ಮುತ್ತಿನವರಲ್ಲಿ ಸಿಗುತ್ತಿದ್ದ ಸ್ಥಾನಮಾನ ಮತ್ತು ಗೌರವ ಅದರ ಜೊತೆಯಲ್ಲೇ ಅನುಭವಿಸುತ್ತಿದ್ದ ಕಷ್ಟಕೋಟಲೆಗಳು ಇದರ ಬಗ್ಗೆ ಮಾತಾಡುವಾಗ ಅವಳು ಹೇಳುತ್ತಿದ್ದದ್ದು ತನಗೆ ಇರುವುದು..." ರಾಜಯೋಗ ಆದರೆ ದರಿದ್ರ ರಾಶಿ".

ನನ್ನ ಮದುವೆಯ ಸಮಯದಲ್ಲಿ, ಅವಳು ತೆಗೆದುಕೊಂಡ ನಿರ್ಧಾರ -  ಜಾತಕದ ಪ್ರಕಾರ ಮೂಲಾ ನಕ್ಷತ್ರ ತನ್ನ ಮಾಂಗಲ್ಯ ಭಾಗ್ಯಕ್ಕೆ ಕುತ್ತು ತರಬಹುದು ಎಂಬ ಸೂಚನೆಯಿದ್ದರೂ ಸಹ - ತನ್ನ ಮಗನ ಭವಿಷ್ಯಕ್ಕಾಗಿ ಮಾಡಿದ ಅವಳ ದೃಢ ಮನಸ್ಸು ನನ್ನನ್ನು ಮೂಕ ವಿಸ್ಮಿತನಾಗಿ ಮಾಡಿದೆ.. ಹಾಗೆಯೇ ನಾನೆಷ್ಟು ಸ್ವಾರ್ಥಿ ಎಂದು ಮನಸ್ಸಿಗೆ ಕೆಲ ಸಲ ಮೂಡಿದೆ.

ಇನ್ನು ನನ್ನಮ್ಮನನ್ನು, ತಮ್ಮ ಇಲ್ಲದ  ಅಮ್ಮನಷ್ಟೇ ಪ್ರೀತಿಸಿ ಆದರದಿಂದ ಕಂಡ ನನ್ನ ಚಿಕ್ಕಪ್ಪ ನಂಜಣ್ಣಯ್ಯ ಹಾಗೂ ಸೋದರ ಸಂಬಂಧಿ ಅಪ್ಪಯ್ಯ, ಇವರನ್ನು ನೆನೆದಾಗ ನನ್ನಮ್ಮನ ವಿಶಾಲ ಹೃದಯ ಎದ್ದು ಕಾಣುತ್ತದೆ.

ನನಗೊಂದು ಸಣ್ಣ ನೋವಿದೆ. ಅಮ್ಮ ಅಷ್ಟು ಕಷ್ಟಗಳನ್ನ ಅನುಭವಿಸಿ ನಮ್ಮನ್ನು ದೊಡ್ಡವರಾಗಿ ಮಾಡಿ, ನಾನು ಒಂದು ಹಂತಕ್ಕೆ ಬಂದು ಸುಖಪಡುವ ಸಮಯದಲ್ಲಿ ನಮ್ಮನ್ನು ಬಿಟ್ಟು ಹೋದಳು, ಆ ಸುಖ ಅವಳಿಗೆ ನಾನು ಕೊಡಲಿಲ್ಲ ಎಂಬುದು. ಮತ್ತೆ ಅದೇ ರಾಜಯೋಗ ದರಿದ್ರ ರಾಶಿ... ನನ್ನಮ್ಮನದು.

ಕೊನೆಯದಾಗಿ ನನ್ನಮ್ಮ ಹೇಳಿದ ಇನ್ನೊಂದು ಮಾತು... "ನನಗೆ ತಿಥಿ ಮಾಡದಿದ್ದರೂ ಪರವಾಗಿಲ್ಲ, ನಿಮ್ಮಪ್ಪನನ್ನು ಸರಿಯಾಗಿ ನೋಡಿಕೊಳ್ಳಿ" ಎಂದು. ಇದನ್ನು ನಿಷ್ಠೆಯಿಂದ ಮಾಡಿದ್ದೇನೆ, ಅದು ನಮ್ಮಮ್ಮನಿಗೆ ಸಂತೋಷ ಕೊಟ್ಟಿದೆ ಎಂಬ ನಂಬಿಕೆ ನನ್ನದು.

ಅಮ್ಮನನ್ನು ನೆನೆಯಲು ವರ್ಷಕ್ಕೊಂದು ದಿನ ಸಾಕೆ? ಅವಳು ದಿನ ದಿನವೂ ನೆನೆಸಿಕೊಳ್ಳುವಂತವಳು ಅಲ್ಲವೇ?

ಎಲ್ಲ ಅಮ್ಮಂದಿರಿಗೆ, ಮಾತೃ ಹೃದಯ ಇರುವ ಎಲ್ಲಾ ಅಪ್ಪಂದಿರಿಗೆ, ಅಮ್ಮನಷ್ಟೇ ಪ್ರೀತಿಯನ್ನು ತೋರಿದ, ತೋರಿಸುತ್ತಿರುವ ನನ್ನ ಅಕ್ಕಂದಿರಿಗೆ ನನ್ನ ನಮನಗಳು..


Comments

  1. Sooperb chikkappa

    ReplyDelete
  2. Sooperb chikkappa

    ReplyDelete
  3. 🙏🙏🙏

    ReplyDelete
  4. ಓದುತ್ತಾ ಅಮ್ಮನ ಮಾತುಗಳು ನಿಮ್ಮ ಹಾಗೂ ನಮ್ಮ, ಕಿವಿಯಲ್ಲಿ ಪಿಸುಗುಟ್ಟಿ ಹೃದಯದಲ್ಲಿ ನಿಂತಿದ್ದು ಸತ್ಯ. ಧನ್ಯವಾದಗಳು ರಂಗ

    ReplyDelete
  5. Excellent 👌🙏

    ReplyDelete
  6. ನಿಮ್ಮ ಅಮ್ಮನ ನೆನಪುಗಳು ನನಗೆ ಕಣ್ಣಂಚಿನಲ್ಲಿ ನೀರು ತರಿಸಿತು. ಅಮ್ಮ ಬಡಿಸುವ ಶೈಲಿಯಲ್ಲಿ ನಮಗೆ ಸೂಚನೆ ಸಿಕ್ಕುತಿತ್ತು ಈ ವಾಕ್ಯವಂತೂ ನಮ್ಮ ಹಳೆಯ ನೆನಪುಗಳ ಮರುಕಳಿಸಿತು.

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ