ಅನ್ನಂ ನ ನಿಂದ್ಯಾತ್..ತದ್ ವ್ರತಂ

 


ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಹೇಳಿದ್ದಾರೆ ದಾಸ ವರೇಣ್ಯ ಪುರಂದರ ದಾಸರು. ಹೊಟ್ಟೆಗೆ ಮೊದಲ ಆದ್ಯತೆ.. ಹೊಟ್ಟೆ ತುಂಬಲು ಬೇಕು ಅನ್ನ / ಆಹಾರ. 

ಅಗುಳು, ಅಗುಳಿನ ಮೇಲು ತಿನ್ನುವವನ ಹೆಸರು ಬರೆದಿದೆ ಎನ್ನುವುದು ಒಂದು ಜಾಣ್ನುಡಿ. 

ಅನ್ನಂ ಪರಬ್ರಹ್ಮ ಎಂದು ಹೇಳಿದ್ದಾರೆ ಹಿರಿಯರು.. ಅನ್ನ ನಮ್ಮ ಜೀವನಕ್ಕೆ ಬೇಕಾದ ಶಕ್ತಿಯನ್ನು ಕೊಡುವ ಮೂಲವಸ್ತು ಹಾಗಾಗಿ ಅದನ್ನು ದೇವರಿಗೆ ಹೋಲಿಸಿದ್ದಾರೆ.  ಜೊತೆಗೆ ಅನ್ನಂ  ನ ನಿಂದ್ಯಾತ್..ತದ್ ವ್ರತಂ... ಅಂತಲೂ ಹೇಳಿದ್ದಾರೆ... ಅಂದರೆ ಅನ್ನಕ್ಕೆ       ಅಗೌರವ ತೋರಿಸಬೇಡ, ಹಾಳು ಮಾಡಬೇಡ... ಅದೊಂದು ವ್ರತ.

ನಾನು ಚಿಕ್ಕವನಿದ್ದಾಗ ಊಟ ಮಾಡುವಾಗ ತಟ್ಟೆಯಲ್ಲಿ ಅನ್ನವನ್ನು/ ತಿನ್ನುವ ಪದಾರ್ಥವನ್ನು ಬಿಟ್ಟರೆ ಅದನ್ನು ನನ್ನ ತಲೆಗೆ ಕಟ್ಟುತ್ತೇನೆ ಎಂದು ನಮ್ಮಪ್ಪ ಹೇಳುತ್ತಿದ್ದರು ... ಹಾಗಾಗಿ ನನಗೆ ಆಹಾರ ಪದಾರ್ಥವನ್ನು ಚೆಲ್ಲಬಾರದು ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿ ಮೂಡಿದೆ.

ಅಕ್ಕಿಗೆ ಕಷ್ಟವಾಗಿದ್ದ ಕಾಲ.. ಆಗ ಮನೆಯಲ್ಲಿ ಹೇಳುತ್ತಿದ್ದ ಒಂದು ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯಿ ತುಂಬಾ ಅನ್ನ" .

ಅಂದಿನ ದಿನಗಳಲ್ಲಿ, ಯಾವ ಕಾರಣಕ್ಕೂ ಅನ್ನವನ್ನು ಬೀದಿಗೆ ಎಸೆಯುತ್ತಿರಲಿಲ್ಲ.... ಕಲಗಚ್ಚಿನ ಬಾನಿಯಲ್ಲಿ ಹಾಕಿದರೆ ಅದನ್ನು ಹಸು ಎಮ್ಮೆಗಳು ಕುಡಿಯುತ್ತಿದ್ದವು.

ಭತ್ತಕುಟ್ಟಿದಾಗ, ಹೊಟ್ಟನ್ನು ಜರಡಿ ಮಾಡಿ ಉಳಿದ ಚರಟವನ್ನು.. ಅದರಲ್ಲಿರಬಹುದಾದ ಸಣ್ಣ ಸಣ್ಣ ಅಕ್ಕಿಯ ಚೂರುಗಳನ್ನೂ ಸಹ ಇರುವೆ ಗೂಡಿನ ಸುತ್ತ ಹಾಕುತ್ತಿದ್ದದ್ದು ನನಗಿನ್ನೂ ನೆನಪಿದೆ.

ನಮ್ಮೂರಿನ ನೇಯಿಗೆ ಅಜ್ಜ, ಊಟ ಮಾಡಿದ ನಂತರ ತನ್ನ ಕಂಚಿನ ತಟ್ಟೆಯನ್ನು ಸ್ವಲ್ಪ ನೀರಿನಲ್ಲಿ ತೊಳೆದಂತೆ ಮಾಡಿ, ಅದನ್ನು ಕುಡಿಯುತ್ತಿದ್ದುದ್ದನ್ನು ನಾನು ನೋಡಿದ್ದೇನೆ... ಕೇಳಿದಾಗ, ಮರೀ... ಒಂದಗಳೂ ಹಾಳುಮಾಡಬಾರದು ಎಂಬ ಮಾತು. 

ಆಹಾರ ಧಾನ್ಯಗಳನ್ನು, ಹಣ್ಣು ಹಂಪಲುಗಳನ್ನು, ತರಕಾರಿಗಳನ್ನು ಬೆಳೆಸಲು ರೈತ ತನ್ನ ಶ್ರಮ, ಸಮಯ, ಹಣ ಜೊತೆಗೆ ಪ್ರಕೃತಿಯ ಕೊಡುಗೆ ನೀರು ಗಾಳಿ ಬಿಸಿಲು ಎಲ್ಲವನ್ನೂ ಸಂಯೋಜಿಸಿ ಕಷ್ಟಪಟ್ಟು ಬೆಳೆಸಿರುತ್ತಾನೆ. ಧಾನ್ಯದ ಒಂದೊಂದು ಕಾಳನ್ನು ಪೋಲಾಗದಂತೆ ಎಚ್ಚರ ವಹಿಸುತ್ತಾನೆ. 

ಅಜ್ಜನ ಮಾತು ಎಷ್ಟು ಸಮಂಜಸ ಅಲ್ಲವೇ?

ಬೆಂಗಳೂರಿಗೆ ಬಂದ ಹೊಸದರಲ್ಲಿ, ಬೀದಿಯಲ್ಲಿ ಬಿಸಾಕಿದ ಎಂಜಲೆಲೆಯಲ್ಲಿ ಬಿಟ್ಟಿದ್ದ ಆಹಾರವನ್ನು ಹುಡುಕಿ ತಿನ್ನುವ ಮಕ್ಕಳನ್ನು ನೋಡಿ ಸಂಕಟ ಪಟ್ಟಿದ್ದಿದೆ.  ಬೆಳಗಿನ ಹೊತ್ತು      " ಅಮ್ಮಾ.. ಕವಳ.. ತಾಯೀ.." ಎಂದು ಕೂಗುತ್ತಾ ಬರುತ್ತಿದ್ದ ಜನಗಳನ್ನು ನೋಡಿದ್ದೇನೆ.... ಅನ್ನಕ್ಕಾಗಿ ಎಂತೆಂಥಹ ಕಷ್ಟಪಡುವ ಜನಗಳು ಉಂಟು.

ಇದೆಲ್ಲಾ ನೆನಪಿಗೆ ಬರಲು ನಾನು ಕೆಲ ದಿನಗಳ ಹಿಂದೆ ಒಂದು ಉಪನಯನಕ್ಕೆ ಹೋದಾಗ, ಊಟದ ನಂತರ ಕಂಡ ದೃಶ್ಯ... ಮೇಲಿನ ಚಿತ್ರಗಳನ್ನು ನೋಡಿದಾಗ ಆಹಾರ ತುಂಬಿದ ಎಲೆಯನ್ನು ಬಿಟ್ಟು ಹೋಗಿರುವ ವ್ಯಕ್ತಿಯ ಮನೋಭಾವ, ಜೊತೆ ಜೊತೆಗೆ ಅನ್ನವನ್ನು ಸಂಪೂರ್ಣವಾಗಿ ಗೌರವಿಸಿ, ಹಾಕಿಸಿಕೊಂಡ ಎಲ್ಲವನ್ನೂ ತಿಂದು ಹೋದ ವ್ಯಕ್ತಿಯ ಬಗ್ಗೆ ಬಂದ ಗೌರವ. ಹೇಗೆ ಊಟ ಮಾಡಬೇಕು ಎಂಬುದನ್ನು ತೋರಿಸಿದ ಆ ಅಪರಿಚಿತ ವ್ಯಕ್ತಿಗೆ ನನ್ನ ನಮನ.

" ಎಷ್ಟು ಬೇಕಾದರೂ ಹಾಕಿಸಿಕೊ... ಆದರೆ ಹಾಕಿಸಿಕೊಂಡಷ್ಟನ್ನು ಸ್ವಲ್ಪವೂ ಬಿಡದೆ ತಿನ್ನು" ಎಂಬ ಘೋಷವಾಕ್ಯ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾದರೆ ಎಷ್ಟು ಚೆನ್ನ ಅಲ್ಲವೇ.

ಹಿತ ಭುಕ್, ಮಿತ ಭುಕ್, ಋತ ಭುಕ್, ಅಂದರೆ ಹಿತವಾಗಿ ಮಿತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ತಿನ್ನು ಎಂದು ಹೇಳಿದ್ದಾರೆ...

ನಮ್ಮ ಸಂಸ್ಕೃತಿಯಲ್ಲಿ.. ಅತಿಥಿಗಳಿಗೆ ಒಂದು ಒಳ್ಳೆಯ ಸ್ಥಾನ, ಹಳ್ಳಿಗಳಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿ ಯಾರಾದರೂ ಬಂದಿದ್ದಾರಾ ಎಂದು ಖಚಿತಪಡಿಸಿಕೊಂಡು, ಅವರಿಗೂ ಊಟ ಹಾಕಿ ಸತ್ಕಾರ ಮಾಡುತ್ತಿದ್ದರು.  ಊಟ ಮಾಡಿದವರು ಸಹ " ಅನ್ನದಾತ ಸುಖೀ ಭವ" ಎಂದು ಹರಸುತ್ತಿದ್ದರು. ಅನ್ನಕ್ಕೆ ಅಷ್ಟು ಗೌರವ.

ಈಗೀಗ ಕೆಲ ಅಮ್ಮಂದಿರು ಮಕ್ಕಳಿಗೆ ಅತೀ ಕಾಳಜಿಯಿಂದ, ಬಲವಂತ ಮಾಡಿ ಊಟವನ್ನು ಮಾಡಿಸುವುದನ್ನು ನೋಡಿದ್ದೇನೆ... ಜಾಸ್ತಿಯಾದಾಗ ಮಕ್ಕಳು ಬೇಡ ಎಂದು ಹಠ  ಮಾಡುವುದನ್ನು ಕಂಡಿದ್ದೇನೆ. ಆಗ ಕಲಸಿದ ಅನ್ನವನ್ನು ಎಸೆಯುವುದು ನೋಡಿದ ಮಕ್ಕಳು, ತನಗೆ ಬೇಡವಾದಾಗ ಎಸೆಯುವುದು ಸಹಜ ಎಂಬ ಅಭಿಪ್ರಾಯ / ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದೇ ಮುಂದೆ ಆಹಾರವನ್ನು ಚೆಲ್ಲುವಾಗ ಯಾವುದೇ ನೋವಾಗದಂತೆ ಮನಸ್ಸು ಒಪ್ಪುತ್ತದೆ.

ಇತ್ತೀಚೆಗೆ ಹೆಚ್ಚಿನ ಕಾರ್ಯಕ್ರಮಗಳಲ್ಲಿ ವಿಶೇಷ ಅಡಿಗೆಗಳು, ಸಿಹಿ ತಿಂಡಿಗಳು ಮಾಡಿಸುವುದು ಒಂದು ಪ್ರತಿಷ್ಠೆಯ ವಿಷಯವಾಗಿದೆ. ಜೊತೆ ಜೊತೆಗೆ ತಟ್ಟೆಗೆ ಹಾಕಿಸಿಕೊಂಡ ಎಲ್ಲವನ್ನೂ ತಿಂದರೆ ನೋಡಿದವರು ಏನೆಂದುಕೊಳ್ಳುತ್ತಾರೋ (ಎಂದೂ ಕಾಣದವನೇನೋ) ಎಂಬುವ ಒಣ ಪ್ರತಿಷ್ಠೆ ಸಹ ನಮ್ಮಗಳ ಮನಸ್ಸಿನಲ್ಲಿ ಮೂಡಿದೆ. ಇದು ಸಹ ಆಹಾರವನ್ನು ಬಿಸಾಕಲು ಒಂದು ಕಾರಣ. ಇನ್ನು ಊಟಕ್ಕೆ ಕೂತಾಗ, ಬಡಿಸುವವರೂ ಸಹ ಕೆಲಸದ ರೂಪದಲ್ಲಿ ತಮ್ಮಲ್ಲಿರುವ ವಸ್ತುವನ್ನು ಎಲ್ಲರ ಎಲೆಗೂ ಹಾಕುತ್ತಾ ಹೋಗುತ್ತಾರೆ... ಅದು ಅವರ ಕರ್ತವ್ಯ... ಊಟಕ್ಕೆ ಕೂತಾಗ ನಾವು ನಮ್ಮ ಎಲೆಯ ಮೇಲೆ ಗಮನ ಇಟ್ಟುಕೊಂಡಿದ್ದರೆ ನಮಗೆ ಬೇಕಾದ ವಸ್ತುವನ್ನು ಬೇಕಷ್ಟು ಹಾಕಿಸಿಕೊಂಡು ತಿನ್ನಬಹುದು. ಇದು ನಾವು ಮಾಡಬೇಕಾದ ಆಹಾರದ ಪೂಜೆ.

ಇನ್ನು ಹೋಟೆಲ್ಗಳಿಗೆ ಹೋದಾಗ, ನಾವು ಬಿಡುವ ಆಹಾರ ಪದಾರ್ಥಗಳು ಎಷ್ಟೋ... ಅದಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ ಎನ್ನುವ ಸಮಜಾಯಿಷಿ.... ಆದರೆ ಆಹಾರ ದೇಶದ ಸಂಪತ್ತು ಮತ್ತು ರೈತನ ಶ್ರಮ... ಇದನ್ನು ವ್ಯರ್ಥ ಮಾಡುವ ಹಕ್ಕು ಖಂಡಿತ ನಮ್ಮದಲ್ಲ.

ಊಟ ತನ್ನಿಚ್ಛೆ ಎಂಬ ಮಾತು ಸರಿ... ನಮ್ಮಿಷ್ಟದಂತೆ ನಮಗೆ ಬೇಕಾದ್ದನ್ನು ತಿನ್ನೋಣ.... ಹಾಳು ಮಾಡದಿರೋಣ..

ಈಗೀಗ ಕೆಲ ಸಂಘ ಸಂಸ್ಥೆಗಳು, ಉಳಿದಿರುವ ಆಹಾರವನ್ನು ಶೇಖರಿಸಿ ಅದನ್ನು ಸದ್ವಿನಿಯೋಗ   ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ... ನಾವು ಸಹ ಅದಕ್ಕೆ ಪೂರಕವಾಗಿ ನಡೆದುಕೊಳ್ಳಬಹುದು.

ಬದಲಾವಣೆ ಜಗದ ನಿಯಮ ಅಂತ ಶ್ರೀ ಕೃಷ್ಣ ಹೇಳಿದ್ದಾನೆ.. ಆಹಾರ ಪದಾರ್ಥವನ್ನು ಹಾಳು ಮಾಡುವುದಿಲ್ಲ ಎಂಬ ಶಪಥ ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬದಲಾವಣೆ ನಮ್ಮಿಂದಲೇ ಶುರುವಾಗಲಿ... ಈಗಿಂದಲೇ ಶುರುವಾಗಲಿ ಎಂದು ಆಶಿಸುತ್ತಾ...

ಅನ್ನ ದೇವರಿಗಿಂತ ಇನ್ನು ದೇವರ ಉಂಟೆ... ಎಂಬ ವಚನವನ್ನು ನೆನೆಸುತ್ತಾ... ಸಕಲ ಜೀವರಾಶಿಗಳಿಗೂ ಅನ್ನವನ್ನು ಕೊಡುವ ಆ ದೇವರಿಗೆ ನನ್ನ ನಮಸ್ಕಾರ..



 

Comments

  1. Sooperb chikkappa

    ReplyDelete
  2. ಗೆರ್ಟಿಗೆ (ತೆಂಗಿನ ಚಿಪ್ಪು) ಹಾಕಿ ಕುತಿಗ್(ಕುತ್ತಿಗೆಗೆ)ಕಟ್ ತೆ ಕಾಣ್ ಅಂತ ನನ್ನ ಅಮ್ಮ ಆಹಾರ ತಟ್ಟೆಯಲ್ಲಿ ಬಿಟ್ಟರೆ
    ಹೇಳುತ್ತಿದ್ದ ಮಾತು..
    ಇನ್ನು ಕೆಲವು ತಾಯಂದಿರು ಸಮಾರಂಭಗಳಲ್ಲಿ ಮಕ್ಕಳಿಗೆ ಬಾಳೆ ಎಲೆ ಹಾಕಿಸಿ ಎಲ್ಲವನ್ನೂ ಬಡಿಸಿ ನಂತರ ಬಿಸಾಡುತ್ತಾರೆ.ಮಕ್ಕಳಿಗೆ ಏನು ಬೇಕು ಎಷ್ಟು ಬೇಕು ಅನ್ನುವುದನ್ನು ಹಾಗೂ ಬಡಿಸಿದ್ದನ್ನು ತಿನ್ನಲೆ ಬೇಕು ಎಂಬುದನ್ನು ಕಲಿಸಬೇಕು.ಆಹಾರದ ಬೆಲೆ ಯನ್ನು ಸನ್ನವಯಸ್ಸಲ್ಲೆ ಕಲಿಸಬೇಕು.

    ReplyDelete
  3. Replies
    1. ಎಲೆಯ ಮೇಲೆ anna, ಸಿಹಿ, ಎಲ್ಲವನ್ನೂ ಹಾಕಿಸಿಕೊಂಡು ಎಲೆಯ ಮೇಲೆ ಬಿಟ್ಟು ಹೋಗುವ ಪದ್ದತಿಯು ಈ ಲೇಖನ ಓದಿದ ಮೇಲೆ ಆದರು ಕೆಲವರು ಬದಲಾದರೆ ಈ ಲೇಖನಕ್ಕೆ ಸಾರ್ಥಕತೆ.

      Delete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ