ನಾಟಕದ ಪ್ರಸಂಗಗಳು....
ನಾಲ್ಕಾರು ದಿನಗಳ ಹಿಂದೆ ನನ್ನ ಮಗಳು ಹಳೆಯ ಫೋಟೋ ಆಲ್ಬಮ್ ಹರಡಿಕೊಂಡು ಖುಷಿಪಡುತ್ತಿದ್ದಳು, ನನ್ನನ್ನು ಕರೆದು ಒಂದು ವಿಶೇಷ ಆಲ್ಬಮ್ ಅನ್ನು ಕೊಟ್ಟಳು.... ಅದು ಸುಮಾರು ಹತ್ತು ವರ್ಷಕ್ಕೂ ಹಿಂದಿನದು, ನಾವು ಮಾಡಿದ ಒಂದು ನಾಟಕದ ಚಿತ್ರಗಳು. ನನ್ನ ಗೆಳೆಯ ವಾಸುವಿನ "ಮಾವಿನಕೆರೆ ಬಬ್ಬೂರು ಕಮ್ಮೆ ಅಸೋಸಿಯೇಷನ್" ಅವರ ಒಂದು ಮಿಲನದ ಸಂದರ್ಭ. ಅಮೆರಿಕದಲ್ಲಿ ವಾಸವಾಗಿರುವ ಶ್ರೀ ಶಂಕರನಾರಾಯಣ್, ಶ್ರೀ ಪ್ರಸಾದ್ ಹಾಗೂ ನಮ್ಮ ವಾಕಿಂಗ್ ಗೆಳೆಯರು ಸೇರಿ ಮಾಡಿದ ಒಂದು ನಾಟಕ "ಶ್ರೀಕೃಷ್ಣ ಸಂಧಾನ". ಆ ದಿನಗಳು ತುಂಬಾ ಸಂತೋಷದಾಯಕವಾಗಿತ್ತು.
ಆ ಫೋಟೋಗಳನ್ನು ನೋಡುತ್ತಾ ನನ್ನ ಮನಸ್ಸು ಹಳೆಯ ಕಾಲದ ನಾಟಕಗಳ ಸಂದರ್ಭಗಳನ್ನು ನೆನೆಸಿಕೊಳ್ಳಲು ಪೂರಕವಾಗಿತ್ತು... ಮುದ ಕೊಟ್ಟಿತ್ತು. ಆ ನೆನಪುಗಳ ಸರಮಾಲೆಯನ್ನು ಅಕ್ಷರ ರೂಪದಲ್ಲಿ ಇಳಿಸುವ ಪ್ರಯತ್ನ ನನ್ನದು.
" ಮೂರುವರೆ ನಾಟಕದ ಕಲಾವಿದರು" ಎಂಬ ಹೆಸರು ಪಡೆದ ನಮ್ಮ ಶಹಾಬಾದ್ ಬ್ರಹ್ಮಚಾರಿಗಳ ತಂಡ. ನಮ್ಮ ತಂಡ ಶಹಾಬಾದಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ ಪ್ರತಿ ವರ್ಷ ನಾಟಕ ಮತ್ತಿತರ ಮನರಂಜನೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಹೀಗಿದ್ದಾಗ ಶಹಾಬಾದಿನ ಪಟ್ಟಣದ ನಾಡಹಬ್ಬದ ಕಾರ್ಯಕ್ರಮದಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಹೇಗೋ ಒಂದು ಅವಕಾಶ ಸಿಕ್ಕಿತ್ತು. ನಮಗೆ ಅತಿ ಉತ್ಸಾಹ, ಜನಸ್ತೋಮ ನೋಡಿ ಆ ಉತ್ಸಾಹಕ್ಕೆ ಮತ್ತಷ್ಟು ಇಂಬು ಕೊಟ್ಟಿತ್ತು. ನಮ್ಮ ಕಾರ್ಯಕ್ರಮ ಹಾಡುಗಳಿಂದ ಪ್ರಾರಂಭವಾಯಿತು.. ಕಾಳಿಂಗರಾಯರು ಹಾಡಿದ " ಬ್ರಮ್ಮಾ ನಿಂಗೆ ಜೋಡಿಸ್ತೀನಿ ಎಂಬ ಮುಟ್ಟಿದ್ ಕೈನಾ"..ಚಪ್ಪಾಳೆ ಜೊತೆಗೆ ಸ್ಟೇಜ್ ಪಕ್ಕದಿಂದ ಬಂದ ಒಂದು ಟಿಪ್ಪಣಿ " ಮಗ ಸಕ್ಕತ್ ಏರಿಸ್ಯಾನೆ.. ಅದಕ್ಕೆ ಅಂಗೆ.. ಇನ್ನ ಎಷ್ಟೊತ್ತೋ ಇವರದು" ಬಹುಶಃ ಅವರು ಮುಂದಿನ ಕಾರ್ಯಕ್ರಮದ ಕಲಾವಿದರುಗಳು.
ನಮ್ಮ ನಾಟಕ ಪ್ರಾರಂಭವಾಯಿತು, ಜೊತೆಗೆ ಹಿಂದಿದ್ದ ಜನಗಳ( ಕಲಾವಿದರ?) ಗುಜುಗುಜು ಶುರುವಾಯಿತು. ನಾಟಕದ ಒಂದು ಹಂತ ಮುಂದಿನ ಜನಗಳಿಂದ ಚಪ್ಪಾಳೆ ಜೊತೆ ಜೊತೆಗೆ ಹಿಂದಿನ ಜನಗಳಿಂದ ಒಂದೆರಡು ಕಲ್ಲು ಮತ್ತು ಶಿಲ್ಲೆಗಳು... ಜಾಣತನದಿಂದ ನಾಟಕವನ್ನು ಅರ್ಧದಲ್ಲಿ ಮುಗಿಸಿ ಹೊರ ಬಂದೆವು. ಈ ಸಮಯದಲ್ಲೇ ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದ, ನಾಟಕ ನೋಡಲು ಬಂದಿದ್ದ CVK ಕೊಟ್ಟ ಹೆಸರು " ಮೂರುವರೆ ನಾಟಕದ ಕಲಾವಿದರು"
ಇನ್ನು ನನ್ನ ಹಳ್ಳಿಯ ನಾಟಕದ ನೆನಪು.... ನಮಗೆ ನಾಟಕದ ಗುರುಗಳು ನಾವು ಪ್ರೀತಿಯಿಂದ ಸುಬ್ಬಣ್ಣಯ್ಯ ಎಂದು ಕರೆಯುತ್ತಿದ್ದ ಸುಬ್ಬರಾಯಾಚಾರ್... ಇವರೊಬ್ಬ ಸಕಲಕಲಾವಲ್ಲಭ... ಚಿನ್ನ ಬೆಳ್ಳಿಯ ಕೆಲಸ, ಹಾರ್ಮೋನಿಯಂ, ಪಿಟೀಲು ಹಾಗೂ ತಬಲವಾದನ, ನಾಟಕ ಕಲಿಸುವುದು, ಮಣ್ಣಿನ ಗಣೇಶ ಮಾಡುವುದು, ಶಾಸ್ತ್ರ ಹೇಳುವುದು, ವಿಗ್ರಹಗಳ ಎರಕ ಹೊಯ್ಯುವುದು, ಹಿತ್ತಾಳೆ ತಗಡಿನ ಮೇಲೆ ಪ್ರಭಾವಳಿ ಕೆತ್ತುವುದು, ಮೇಲಾಗಿ ವ್ಯವಸಾಯ, ದನ ಕರುಗಳ ಸಾಕಣೆ ಹೀಗೆ ಅತಿ ಪ್ರತಿಭಾವಂತ ಅಷ್ಟೇ ಕೋಪಿಷ್ಟ... ನಮ್ಮೂರಿನ ಜನಗಳಿಗೆ ನಾಟಕ ಕಲಿಸಿ, ಅಂದು ನಾಟಕ ಪ್ರದರ್ಶನ. ಬಸವಣ್ಣನ ದೇವಸ್ಥಾನದ ಮುಂದೆ ನಾಟಕ ರಂಗ ತಯಾರಿಯಾಗಿದೆ. ನಮಗೆಲ್ಲಾ ನಾಟಕ ನೋಡುವ ಆಸೆ, ಸುಬ್ಬಣ್ಣಯ್ಯನ ಹಿಂದೆಯೇ ಕುಳಿತುಕೊಳ್ಳಲು ನಮಗೆ ಅವಕಾಶ. ಹಾರ್ಮೋನಿಯಂ, ತಬಲ, ಪಿಟೀಲು ಎಲ್ಲದರ ಸಮಾಗಮದೊಂದಿಗೆ ಪ್ರಾರ್ಥನೆ ಮುಗಿಯಿತು... ನಾಟಕ ಹಾಡಿನೊಂದಿಗೆ ಮುಂದುವರೆದಿದೆ... ಮಧ್ಯದಲ್ಲಿ ಸುಬ್ಬಣ್ಣಯನ ಸಿಡಿಸಿಡಿ... ಇದ್ದಕ್ಕಿದ್ದಂತೆ ಪರದೆಯನ್ನು ಇಳಿಸಿದರು, ರಂಗದೊಳಕ್ಕೆ ಹೋದರು... ನಾನು ಪರದೆಯ ಸಂಧಿಯಿಂದ ಇಣುಕಿ ನೋಡುತ್ತಿದ್ದೆ... ಒಳಗೆ ಹೋದ ಸುಬ್ಬಣ್ಣಯ್ಯ ಹಾಡುತ್ತಿದ್ದ ಪಾತ್ರಧಾರಿಗೆ ಕೆನ್ನೆಗೆ ಬಾರಿಸಿದರು ಏನೋ ಹೇಳಿ ಬೈಯುತ್ತಿದ್ದರು... ಬೆರಳು ಸನ್ನೆಯಿಂದ ಎಚ್ಚರಿಕೆ ಕೊಟ್ಟು ಮತ್ತೆ ಬಂದು ಪರದೆಯನ್ನು ಎತ್ತಿಸಿ ಹಾಡಿನೊಂದಿಗೆ ನಾಟಕ ಮುಂದುವರಿಸಿದರು. ಇಂದ್ರನಿಗೇ (ಪಾತ್ರಧಾರಿ) ಕಪಾಳ ಮೋಕ್ಷ....ಬಹುಶಃ ಕಂದಪದ್ಯ ಹೇಳುವಾಗ ತಪ್ಪಿರಬೇಕು.
ದಾನ ಶೂರ ಕರ್ಣ ನಾಟಕ.... ಕರ್ಣ ಪರಶುರಾಮರಲ್ಲಿ ಬಂದು ವಿದ್ಯೆ ಕಲಿಯುವ ಸಂದರ್ಭ... ಪರಶುರಾಮನ ಪಾತ್ರಧಾರಿ ಕರ್ಣನ ತೊಡೆಯ ಮೇಲೆ ಮಲಗಿರುವ ಸನ್ನಿವೇಶ. ...ದುಂಬಿ ಬಂದು ಕಚ್ಚಬೇಕು.....
ಝಗಝಗಿಸುತ್ತಿದ್ದ ರಂಗಸಜ್ಜಿಕೆ ಕತ್ತಲಲ್ಲಿ ಮುಳುಗಿತು...ಕರೆಂಟ್ ಹೋಗಿದೆಯೆಂದು ಜನಗಳ ಕೂಗಾಟ....ಇದ್ದಕ್ಕಿದ್ದಂತೆ ಒಂದು ಸಣ್ಣ ಬೆಳಕು ಓಡಾಡುವ ಹಾಗೂ ಅದರೊಡನೆ ದುಂಬಿ ಹಾರುವ ಸದ್ದು. ಜನಸ್ತೋಮ ನಿಃಶಬ್ದ... ನೋಡು ನೋಡುತ್ತಿದ್ದಂತೆ ಆ ಬೆಳಕು ರಂಗದ ಎಲ್ಲೆಡೆ ದುಂಬಿ ಹಾರಿದಂತೆ ಓಡಾಡುತ್ತಿತ್ತು... ಹಿನ್ನೆಲೆಯಲ್ಲಿ ಕರ್ಣನ ಪಾತ್ರಧಾರಿಯ ಸ್ವಗತ... ದುಂಬಿ ಬರುತ್ತಿದೆ ಏನು ಮಾಡಲಿ... ಈಗ ಬೆಳಕು ಕರ್ಣ ಕೂತಿದ್ದ ಕಡೆಗೆ ಹೋಗಿ ನಿಂತಿತು... ರಂಗವೆಲ್ಲ ಮತ್ತೆ ಬೆಳಕು... ಆ ಕ್ಷಣದ ಪುಳಕ, ರೋಮಾಂಚನ ಮರೆಯಲಾಗದ ಘಟನೆ.
ನಾವೆಲ್ಲ ಮಕ್ಕಳು ಸೇರಿ " ರುಕ್ಮಿಣಿ ಸ್ವಯಂವರ" ನಾಟಕದ ತಾಲಿಮು ಶುರು ಮಾಡಿದ್ದೆವು... ನಾನು ರುಕ್ಮಿಣಿಯ ಪಾತ್ರಧಾರಿ, ನನ್ನಣ್ಣ ಸತ್ತಿ ಕೃಷ್ಣ.... ಶ್ರೀನಿವಾಸಾಚಾರಿ, ಬಹುಶಃ ಜರಾಸಂಧನ ಪಾತ್ರಧಾರಿ. ಇದ್ದಕ್ಕಿದ್ದಂತೆ ಅವನು ಬಂದು ನನ್ನನ್ನು ಭದ್ರವಾಗಿ ಹಿಡಿದು " ಏ ರುಕ್ಮಿಣಿ ನನ್ನ ಮದುವೆಯಾಗೇ....." ಅಂತ ಹೇಳಿದಾಗ ಅಲ್ಲಿನ ವಾತಾವರಣವೇ ಬದಲಾಯಿತು... ನಗು ಕೇಕೆ ಚಪ್ಪಾಳೆ... ಸರಿ ಸುಬ್ಬಣ್ಣಯ್ಯನ ಬೈಗುಳ.... ಮತ್ತೆ ತಾಲಿಮು ಮುಂದುವರಿಕೆ.... ಹೀಗಿತ್ತು ನಮ್ಮ ಆಟಗಳು.
ಪಕ್ಕದ ಬೆಟ್ಟಹಲಸೂರಿನಲ್ಲಿ ಸಂಪೂರ್ಣ ರಾಮಾಯಣ ನಾಟಕ.... ನಮ್ಮ ಸಂಬಂಧಿ ಒಬ್ಬರು ಆ ಊರಿನಲ್ಲಿ ಇದ್ದ ಕಾರಣ ನಮಗೂ ನಾಟಕಕ್ಕೆ ವಿಶೇಷ ಆಹ್ವಾನ... ನಾಟಕ ರಾತ್ರಿಯೆಲ್ಲಾ ನಡೆಯುವಂತದ್ದು... ನನಗೆ ನಾಟಕ ನೋಡುವ ಆಸೆ , ಜೊತೆಗೆ ನಿದ್ದೆಯ ಸೆಳೆತ... ಒಂದು ಹೊತ್ತಿನಲ್ಲಿ ಎಚ್ಚರವಾದಾಗ ಕಂಡ ನೋಟ ಆಂಜನೇಯನ ಪಾತ್ರಧಾರಿ ಸುಮಾರು 60 ರಿಂದ 70 ಅಡಿ ಎತ್ತರದ ಅಟ್ಟಣಿಗೆ ಮೇಲಕ್ಕೆ ಹತ್ತುತ್ತಿದ್ದಾನೆ.. ಜನವೆಲ್ಲಾ ಚಪ್ಪಾಳೆ ಶಿಲ್ಲೆಗಳಿಂದ ಹುರಿದುಂಬಿಸುತ್ತಿದ್ದಾರೆ... ಆಂಜನೇಯ ತುದಿಗೆ ಮುಟ್ಟಿ, ಅಲ್ಲಿಂದ ನೆಲಕ್ಕೆ... ಸುಮಾರು ದೂರಕ್ಕೆ ಕಟ್ಟಿದ್ದ ಒಂದು ದಪ್ಪ ಹಗ್ಗದ ಮೇಲೆ ಕುಳಿತು.. ಜೈ ಶ್ರೀ ರಾಮ್ ಎಂದು ಜೋರಾಗಿ ಕೂಗಿ ಚಪ್ಪಾಳೆ ತಟ್ಟಿ, ಗದೆಯನ್ನು ಬಿಸಿ ಅಲ್ಲಿಂದ..... ನಿಧಾನವಾಗಿ ಹಗ್ಗದ ಮೇಲೆ ಜಾರಿ ನೆಲಕ್ಕೆ ಬಂದು ನಿಲ್ಲುವ ತನಕ ನನಗೆ ಆಂಜನೇಯ ಕೆಳಗೆ ಬೀಳುತ್ತಾನೇನೋ ಎಂಬ ಭಯ, ಹಾಗೂ ಕುತೂಹಲ..... ಎಂಥಾ ಸಾಹಸ... ಇದು ಸಮುದ್ರವನ್ನು ಹಾರಿ ಲಂಕೆಗೆ ಪ್ರವೇಶ ಮಾಡುವ ಸನ್ನಿವೇಶ. ಹಗ್ಗದಿಂದ ಜಾರಿದ ಆಂಜನೇಯ ರಂಗಕ್ಕೆ ಬರುವ ವೇಳೆಗೆ ಅಲ್ಲಿ ಲಂಕೆಯ ರಂಗಸಜ್ಜಿಕೆ ತಯಾರಾಗಿತ್ತು... ಆಂಜನೇಯ ಲಂಕೆಗೆ ಬಂದ ಎಂಬ ಭಾವ... ಸೊಗಸು.
ಇದೇ ನಾಟಕದ ಒಂದು ದುಃಖದ ಪ್ರಸಂಗ ಹೇಳಲೇಬೇಕು... ನಾಟಕ ಮುಂದುವರಿದು ರಾಮ ರಾವಣರ ಯುದ್ಧ ಶುರುವಾಗಿದೆ.... ರಾಮ ಬಿಟ್ಟ ಬಾಣ ರಾವಣನಿಗೆ ತಗಲಿತೋ ಇಲ್ಲವೋ... ರಾವಣನಂತೂ ಕೆಳಗೆ ಬಿದ್ದ.... ಕೆಲವೇ ಕ್ಷಣಗಳಲ್ಲಿ ಏನೋ ಗುಜುಗುಜು... ಜನ ಎದ್ದು ರಂಗಸ್ಥಳಕ್ಕೆ ಮುನ್ನುಗುತ್ತಿದ್ದಾರೆ.... ಹಾಗೆ ರಾವಣನ ಪಾತ್ರಧಾರಿಯನ್ನು ನಾಲ್ಕಾರು ಜನ ಹೊತ್ತು ಓಡಿದರು.... ಮುಂದೆ ತಿಳಿದ ವಿಷಯ ರಾವಣ ಪಾತ್ರಧಾರಿ ನಿಜವಾಗಲೂ ಸತ್ತಿದ್ದು.... ನಾಟಕದ ಕೊನೆ ನೋವಿನಿಂದ ಮುಗಿಯಿತು....... ಎಂಥಾ ವಿಧಿ.
ಜೀವನವು ಒಂದು ನಾಟಕ ಎಂದು ಹೇಳಿದವರಿದ್ದಾರೆ, ಆದರೆ ಆ ಜೀವನದಲ್ಲಿ ನಡೆದ ನಾಟಕದ ಪಾತ್ರಧಾರಿಯು ಸಾವನ್ನಪ್ಪಿದ್ದು.... ಜೀವನ ಎಷ್ಟು ಅನಿಶ್ಚಿತ ಎಂದು ಈಗ ಅನಿಸುತ್ತದೆ...
ಜೀವನ ನಾಟಕ ರಂಗದ ಎಲ್ಲ ಪಾತ್ರಧಾರಿಗಳಿಗೂ ಆ ದೇವರು ಒಳ್ಳೆಯದು ಮಾಡಲಿ.
ನಿಜಕ್ಕೂ ಸಿಹಿ ಕಹಿ ನೆನಪೇ. Sir Rukmini photo ಎಲ್ಲಿ
ReplyDeleteಇಂತಹ ಅನುಭವಗಳು ಹಲವು ಜನರಿಗೆ ಆಗಿರಬಹುದು, ಆದರೆ ಜೋಡಣೆ, ಒಕ್ಕಣೆ ಮಾಡಿರುವ ನಿಮ್ಮ ರೀತಿ ವಿಶೇಷ.
ReplyDeleteನಿಮ್ಮ ನಾಟಕಗಳ ಪ್ರಸಂಗ,ನಿಜ ಜೀವನದಂತೆ ಸುಖ ದುಃಖಗಳ ಸಮ್ಮಿಶ್ರಣ
ReplyDeleteನಾವು ಚಿಕ್ಕಂದಿನಲ್ಲಿ ಕೆಲವು ನಾಟಕ ನೋಡಿದ ನೆನಪು ಬಂದಿತು.
ReplyDeleteಸರಳ ಸುಂದರ ಬರಹ sir