ಅಂದು ....... ನಾನೂ ಮಂತ್ರಿಯಾಗಿದ್ದೆ
ನಾಲ್ಕನೆಯ ಕ್ಲಾಸಿನ ತನಕ ನಾನು ಓದಿದ್ದು ನಮ್ಮೂರು ದೊಡ್ಡಜಾಲದ ಪ್ರಾಥಮಿಕ ಶಾಲೆಯಲ್ಲಿ. ಮುಂದಿನ ಓದಿಗೆ
ಐದನೇ ಕ್ಲಾಸಿಗೆ ಅನಿವಾರ್ಯವಾಗಿ ನಾವು ಹೋಗಬೇಕಾಗಿದ್ದು ನಮಗೆ (ಮೂರು ಮೈಲಿ) ಹತ್ತಿರವಿದ್ದ
“ ವಿದ್ಯಾನಗರದ ಮಾಧ್ಯಮಿಕ ಶಾಲೆಗೆ. ಅಲ್ಲಿಗೆ ಹೋಗಿಬರುವುದೇ ಒಂದುಸಂಭ್ರಮ. ಶಾಲೆಗೆ ಹೋಗಲು ಶುರು ಮಾಡಿ ಮೂರು ನಾಲ್ಕು ತಿಂಗಳು ಆಗಿರಬಹುದು, ನಮ್ಮ ದೊಡ್ಡ ಜಾಲದ ಶಾಲೆಗೆ ಮಾಧ್ಯಮಿಕ ತರಗತಿಗಳನ್ನು ಶುರು ಮಾಡಲು ಅಪ್ಪಣೆ ಸಿಕ್ಕಿತು ಹಾಗಾಗಿ ಮತ್ತೆ ದೊಡ್ಡಜಾಲಕ್ಕೆ ಹಿಂತಿರುಗಿದೆವು.... ಮತ್ತೇನು ಕಾರಣವೋ ಪ್ರಾಯಶಃ ಏಳನೇ ತರಗತಿಗೆ ಮತ್ತೆ ವಿದ್ಯಾನಗರಕ್ಕೆ ಮರಳುವ ಪರಿಸ್ಥಿತಿ ಬಂತು. ವಿದ್ಯಾನಗರ ಮೊದಲು ಮಿಲಿಟರಿ ತಾಣವಾಗಿತ್ತು, ಹಾಗಾಗಿ ಅದು ವಿಶಾಲವಾಗಿಯೂ ಅಚ್ಚುಕಟ್ಟಾಗಿ ಕಟ್ಟಿದ ಕಟ್ಟಡಗಳು ಹಾಗೂ ಅದರ ಮಧ್ಯದಲ್ಲಿ ಹೂವು ಹಣ್ಣುಗಳ ಗಿಡಗಳು ಬೆಳೆದಿದ್ದವು. ನಲ್ಲಿಯ ನೀರಿನ ಸೌಕರ್ಯವೂ ಇತ್ತು , ಹಾಗಾಗಿ ನಮ್ಮ ಪಾಲಿಗೆ ಅದು ಸ್ವರ್ಗ.
ಶಾಲೆಯಲ್ಲಿ ಗಾಂಧಿ ಪ್ರಣೀತ ಶಿಸ್ತು. ದಿನದ ಕಾರ್ಯಕ್ರಮ ಶುರುವಾಗುವುದು " ಸಫಾಯಿ" ಯಿಂದ. ಶಾಲೆಯ ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬೇಕು. ಅದು ಪೊರಕೆ ಹಿಡಿದು ಕಸ ಗುಡಿಸುವುದಾಗಲಿ, ಗಿಡಗಳಿಗೆ ಪಾತಿ ಮಾಡುವುದಾಗಲಿ, ಬಿದ್ದಿರುವ ಕಸ ಕಡ್ಡಿಗಳನ್ನು ಕೈಯಿಂದ ಹೆಕ್ಕುವುದಾಗಲಿ, ಕೊನೆಗೆ ಇಬ್ಬರು ಮಂಕರಿಯನ್ನು ಹಿಡಿದು ಕಸ ಕಡ್ಡಿಗಳನ್ನು ತೆಗೆದುಕೊಂಡು ಹೋಗಿ ತಿಪ್ಪೆಗೆ ಹಾಕುವುದಾಗಲಿ ಮಾಡಬೇಕು. ಇದರ ಮೇಲುಸ್ತುವಾರಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಯದು. ಎಲ್ಲ ಪರಿಕರಗಳನ್ನು ಯಾರ್ಯಾರಿಗೆ ಕೊಡಬೇಕು ಎಂದು ನಿರ್ಧಾರ ಮಾಡುವುದು ಮುಖ್ಯಮಂತ್ರಿ. ಹಾಗಾಗಿ ಅಲ್ಲಿ ಸ್ವಲ್ಪ ಪಕ್ಷಪಾತ ಇರುತ್ತಿತ್ತು ಅಂತ ನನ್ನ ಅನಿಸಿಕೆ. ಯಾಕಂದ್ರೆ ನನಗೆ ಚೆನ್ನಾಗಿ ನೆನಪಿದೆ ಒಂದು ಮುದ್ದು ಹುಡುಗಿ ಒಂದನೇ ಕ್ಲಾಸಿನದಿರಬಹುದು, ಹೆಸರು ಉಮಾ.. ಅದು ಬಂದು ನನಗೆ ಗುಟ್ಟಾಗಿ ಕೇಳಿ ಪೊರಕೆಯನ್ನು ತೆಗೆದುಕೊಂಡದ್ದು. ಆ ಚಿಕ್ಕ ಮಗು ವರಾಂಡವನ್ನು ಗುಡಿಸುತ್ತಿದ್ದ ಚಿತ್ರ ಈಗಲೂ ನನ್ನ ಕಣ್ಮುಂದಿದೆ.
ಇದಾದ ನಂತರ ಎಲ್ಲರೂ ಕೈ ಕಾಲು ತೊಳೆದು ಪ್ರಾರ್ಥನೆಗೆ ಸೇರಬೇಕು. ಪ್ರಾರ್ಥನಾ ಮಂತ್ರಿಯ ನೇತೃತ್ವದಲ್ಲಿ ಈ ಕಾರ್ಯಕ್ರಮ. ಪ್ರಾರ್ಥನಾ ಮಂತ್ರಿಗೆ ಮಾತ್ರ ಒಬ್ಬ ಉಪ ಮಂತ್ರಿ. ಇಬ್ಬರೂ ಬಾಗಿಲಲ್ಲಿ ನಿಂತು ಒಳಗೆ ಹೋಗುವ ವಿದ್ಯಾರ್ಥಿಗಳ ಶುಚಿತ್ವ, ಚಾಪೆ ತಂದಿದ್ದಾರಾ ಎಂಬ ತನಿಖೆ ಮಾಡಿ ಒಳಗೆ ಬಿಡುವುದು. ಇಲ್ಲದಿದ್ದರೆ ಮುಖ್ಯೋಪಾಧ್ಯಾಯರ ಕೊಠಡಿಯ ಬಳಿ ಇಟ್ಟಿರುವ ಎಣ್ಣೆ ಬಾಚಣಿಗೆ ಉಪಯೋಗಿಸಿ ಸರಿ ಮಾಡಿಕೊಂಡು ಬರಬೇಕು. ಚಾಪೆ ಇಲ್ಲದಿದ್ದರೆ ಒಳಗೆ ಹೋಗುವಂತಿಲ್ಲ.
ಎಲ್ಲರನ್ನೂ ಸಾಲಾಗಿ ಕೂಡಿಸುವ ಜವಾಬ್ದಾರಿ ಗೃಹಮಂತ್ರಿಯದ್ದು. ಇದಾದ ನಂತರ ಸಮಯ ನೋಡಿ ಗಂಟೆ ಬಾರಿಸುವ ಕೆಲಸವೂ ಅವನದೇ. ಈ ಸಮಯದಲ್ಲಿ ಮುಖ್ಯಮಂತ್ರಿ ಎಲ್ಲಾ ಅಧ್ಯಾಪಕರಿಗೂ ಪ್ರಾರ್ಥನೆಗೆ ಬರಲು ತಿಳಿಸಬೇಕು.
ಎಲ್ಲರೂ ಸೇರಿದ ಮೇಲೆ ಪ್ರಾರ್ಥನಾ ಮಂತ್ರಿ ಮತ್ತು ಉಪ ಮಂತ್ರಿ ಇಬ್ಬರೂ ಪ್ರಾರ್ಥನೆಯನ್ನು ಹೇಳಿಕೊಡಬೇಕು.
ಪ್ರಾರ್ಥನೆಯ ನಂತರ ಸುಬ್ಬ ರಾವ್ ಮೇಷ್ಟ್ರು ಅಂದಿನ ದಿನಪತ್ರಿಕೆಯ ಮುಖ್ಯಾಂಶಗಳನ್ನು ಓದಿ ಹೇಳಬೇಕು ನಂತರ ಪ್ರಚಾರ ಮಂತ್ರಿ ತನ್ನ ವಿಷಯಗಳನ್ನು ಹೇಳಬೇಕು. ಇದರಲ್ಲಿ ಸುತ್ತಮುತ್ತ ಹಳ್ಳಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿಸಬೇಕು. ಯಾವುದಾದರೂ ಸಿಕ್ಕಿದ ವಸ್ತುಗಳನ್ನು ಪ್ರದರ್ಶಿಸಿ ಅವರ ವಾರಸುದಾರರಿಗೆ ತಲುಪಿಸಬೇಕು. ಎಷ್ಟೋ ಸಲ ಯಾವುದೋ ಪುಸ್ತಕವನ್ನು ತಂದು ಪ್ರದರ್ಶಿಸಿದ್ದೂ ಇದೆ.
ನಾನು ಪ್ರಚಾರ ಮಂತ್ರಿಯಾಗಿದ್ದಾಗ ಯಾವ ವಿಷಯವೂ ಸಿಗದಿದ್ದಾಗ ಹೇಳಿದ ಒಂದು ವಿಷಯ " ವಿದ್ಯಾರ್ಥಿಗಳು ಕಾರೆ ಹಣ್ಣಿನ ಆಸೆಗಾಗಿ ಗಿಡಗಂಟೆಗಳ ಮಧ್ಯೆ ನುಸುಳಿ ಕಾರೆ ಹಣ್ಣನ್ನು ಕೀಳುವುದು ಅಪಾಯಕಾರಿ, ಯಾಕೆಂದರೆ ಅಲ್ಲಿ ಹಾವುಗಳು ಇರುವ ಸಾಧ್ಯತೆ ಇದೆ.. ಎಚ್ಚರವಿರಲಿ" .
ಇದನ್ನು ಕೇಳಿದ ಪುಟ್ಟರಾಜು ಮೇಷ್ಟ್ರು ನನಗೆ ಹೇಳಿದ್ದು"ಲೋ ರಂಗನಾಥ ನೀನು ಮೊದಲು ಆ ಕೆಲಸ ಮಾಡೋದ್ ಬಿಡು" .... ನನಗೇ ತಿರುಗುಬಾಣವಾಯಿತು.
ಪ್ರತಿ ಅವಧಿಯ ನಂತರ ಘಂಟೆ ಬಾರಿಸುವುದು ಗೃಹಮಂತ್ರಿಯ ಕೆಲಸ.
ದಿನದ ಕೊನೆಯಲ್ಲಿ ಎಲ್ಲ ತರಗತಿಗಳ ಕೊಠಡಿಗಳನ್ನು ಪರಿಶೀಲಿಸಿ ಅಲ್ಲಿ ಯಾವುದಾದರೂ ವಸ್ತುಗಳು ಬಿಟ್ಟಿದ್ದರೆ ಅದನ್ನು ತಂದು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿಟ್ಟು ಮಾರನೇ ದಿನ ಪ್ರಾರ್ಥನಾ ಸಭೆಯಲ್ಲಿ ಅದನ್ನು ಅದರ ವಾರಿಸುದಾರರಿಗೆ ತಲುಪಿಸಬೇಕು. ಇದಲ್ಲದೆ ಎಲ್ಲ ಕೊಠಡಿ ಗಳಿಗೂ ಬೀಗ ಹಾಕಿ, ಎಲ್ಲಾ ಬೀಗದ ಕೈಗಳನ್ನು ಮುಖ್ಯೋಪಾಧ್ಯಾಯರ ಕೊಠಡಿಯ ಸೂಕ್ತ ಜಾಗದಲ್ಲಿ ಇಡುವುದು ಮುಖ್ಯಮಂತ್ರಿಯ ಕೆಲಸ.
ನನ್ನ ಭಾವ ಒಬ್ಬರು ತುಂಬಾ ಹಾಸ್ಯ ಮನೋಭಾವದ ವ್ಯಕ್ತಿ. ಒಂದು ದಿನ ಶಾಲೆಯ ವಿಚಾರ ಮಾತನಾಡುತ್ತಾ ಮಂತ್ರಿಗಳ ಕೆಲಸ ವಿವರಿಸುತ್ತಾ ಇದ್ದಾಗ ಗೃಹ ಮಂತ್ರಿಯ ಕೆಲಸ ಗಂಟೆ ಬಾರಿಸುವುದು ಎಂದಾಗ ಅವರು ಹೇಳಿದ್ದು ಗೃಹಮಂತ್ರಿಯನ್ನು "ಘಂಟಾಮಂತ್ರಿ" ಎಂದು .....
ಇನ್ನು ಮಂತ್ರಿಗಳ ಆಯ್ಕೆಯ ವಿಚಾರಕ್ಕೆ ಬಂದಾಗ, ಅಲ್ಲಿಯೂ ಚುನಾವಣೆ ನಡೆಯುತ್ತಿತ್ತು. ಅದು ಶನಿವಾರದ ಪ್ರಾರ್ಥನಾ ಸಭೆಯಲ್ಲಿ (ಎಷ್ಟು ತಿಂಗಳಿಗೊಮ್ಮೆ ನನಗೆ ನೆನಪಿಲ್ಲ). ಮಂತ್ರಿ ಪದವಿಯ ಹೆಸರನ್ನು ಉಪಾಧ್ಯಾಯರು ಹೇಳಿದಾಗ ಒಂದು ಹೆಸರನ್ನು ವಿದ್ಯಾರ್ಥಿಗಳು ಹೇಳಬೇಕು ಅದನ್ನು ಇನ್ನೊಬ್ಬ ವಿದ್ಯಾರ್ಥಿ ಅನುಮೋದಿಸಬೇಕು. ಹೀಗೆ ಹೇಳಿದ ಹೆಸರುಗಳ ಪೈಕಿ ಹೆಚ್ಚು ಮತ ಗಳಿಸಿದವರು ಆಯ್ಕೆಯಾಗುತ್ತಾರೆ. ಮತ ಹಾಕುವುದು ಕೈ ಎತ್ತುವ ಮೂಲಕ, ನನಗೆ ನೆನಪಿರುವಂತೆ ಸುಬ್ಬರಾವ್ ಮೇಷ್ಟ್ರು ಮಣಮಣ ಎಣಿಸಿ ಬಂದ ಮತ ಗಳ ಸಂಖ್ಯೆಯನ್ನು ಹೇಳಿ ವಿಜಯಿಯನ್ನು ಘೋಷಿಸುತ್ತಿದ್ದರು.
ಸಾಮಾನ್ಯವಾಗಿ ಮುಖ್ಯಮಂತ್ರಿ ಎಂಟನೇ ತರಗತಿಯಿಂದ ಆಯ್ಕೆಯಾಗುತ್ತಿದ್ದದ್ದು... ಕಾರಣ ಶಾಲೆಗೆ ಎಂಟನೇ ತರಗತಿಯ ಮಕ್ಕಳೇ ದೊಡ್ಡವರು. ನನ್ನ ತರಗತಿಯಲ್ಲಿ ಪರಿಮಳ(ಮ್ಮ) ಗಿರಿಜ(ಮ್ಮ) ಎಂಬ ಇಬ್ಬರು ಅಕ್ಕತಂಗಿಯರು. (ಹೆಣ್ಣು ಮಕ್ಕಳನ್ನು ಸಂಭೋದಿಸುವಾಗ ಪರಿಮಳಮ್ಮ ಗಿರಿಜಮ್ಮ ಎಂದೇ ಸಂಭೋದಿಸಬೇಕು... ಅದು ಗೌರವ ಪೂರ್ವಕ ಎಂದು ನಮಗೆಲ್ಲಾ ತಿಳುವಳಿಕೆಯನ್ನು ಕೊಟ್ಟಿದ್ದರು.) ಚುನಾವಣೆ ಶುರುವಾದಾಗ ತತ್ ಕ್ಷಣ ನನ್ನ ಹೆಸರನ್ನು ಹೇಳುತ್ತಿದ್ದದ್ದು ಪರಿಮಳಮ್ಮ ಮತ್ತು ಅದನ್ನು ಅನುಮೋದಿಸುತ್ತಿದ್ದದ್ದು ಗಿರಿಜಮ್ಮ... ಯಾವ ಅನುಮಾನವೂ ಇಲ್ಲದೆ ನಾನು ಆಯ್ಕೆಯಾಗುತ್ತಿದ್ದೆ. ಪರಿಮಳಮ್ಮ , ಗಿರಿಜಮ್ಮ ಎಲ್ಲಿದ್ದಾರೋ ಗೊತ್ತಿಲ್ಲ ಆದರೆ ಅವರು ತೋರಿಸಿದ ಅಭಿಮಾನ ಇಂದೂ ನನಗೆ ಸ್ಪೂರ್ತಿ.
ವಿದ್ಯಾನಗರ ಶಾಲೆಗೆ ಸುತ್ತಮುತ್ತಲಿನ ಚಿಕ್ಕಜಾಲ, ದೊಡ್ಡಜಾಲ, ಹುತ್ತನಹಳ್ಳಿ, ಕೋಳಿಪುರ ಮುಂತಾದ ಹಳ್ಳಿಗಳಿಂದ ಮಕ್ಕಳು ಬರುತ್ತಿದ್ದರು.
ಅಲ್ಲಿದ್ದ ವಸ್ತು ಸಂಗ್ರಹಾಲಯವನ್ನು ನಾವು ಬಹಳಷ್ಟು ಸಲ ನೋಡಿದ್ದು ಕಿಟಕಿಯ ಮೂಲಕ. ಎರಡು ಕೈಗಳನ್ನು ಕಣ್ಣಿನ ಪಕ್ಕದಲ್ಲಿ ಅಡ್ಡವಿಟ್ಟು, ಇಣುಕಿ ನೋಡಿದಾಗ ಕಂಡಿದ್ದನ್ನು ಸಂಭ್ರಮಿಸಿದ್ದು ನೆನಪಿದೆ.
ಎಲ್ಲ ಕಾರ್ಯಕ್ರಮಗಳು ನಡೆಯುತ್ತಿದ್ದದ್ದು ನಾವು ಪ್ರಾರ್ಥನೆ ಮಾಡುತ್ತಿದ್ದ ಚಿಕ್ಕ ಹಾಲಿನಲ್ಲಿ.... ಅಲ್ಲಿ ಕಳೆದ ಎಷ್ಟು ಕ್ಷಣಗಳು ನನ್ನ ನೆನಪಿನಲ್ಲಿ ಹಸಿರಾಗಿದೆ.
ವಿದ್ಯಾನಗರದಲ್ಲಿ Teachers Training Centre (TTC) ಇತ್ತು. ಅದರ ಸಭಾಂಗಣ - ದೊಡ್ಡ ಹಾಲ್.... ಅಲ್ಲಿ training ಗಾಗಿ ಬರುತ್ತಿದ್ದ ನೂರಾರು ಉಪಾಧ್ಯಾಯರ ಮುಂದೆ (ದೊಡ್ಡ ಹಾಲಿನಲ್ಲಿ ಮಾಡುವುದು ಹೆಮ್ಮೆಯ ವಿಷಯ) ನಾವು ಮಾಡಿದ ನಾಟಕದಲ್ಲಿ ಭಾಗವಹಿಸಿದ ನೆನಪು ಈಗಲೂ ಪುಳಕಗೊಳಿಸುತ್ತದೆ.
ಎಲ್ಲ ಚಟುವಟಿಕೆಗಳಲ್ಲೂ ಭಾಗವಹಿಸಿ ಮುನ್ನಡೆಯುವ ಅವಕಾಶವನ್ನು ಕಲ್ಪಿಸಿಕೊಟ್ಟವರು ಅಲ್ಲಿನ ಉಪಾಧ್ಯಯರುಗಳು, ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀನಿವಾಸರಾವ್ ಮೇಷ್ಟ್ರು.
ಅವರು ಅಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಕಾರಣವೇ ಇಂದು ಯಾವುದೇ ಹಿಂಜರಿಕೆ ಇಲ್ಲದೆ ....ಮುನ್ನುಗ್ಗುವ ಮನೋಭಾವ.
ಎಲ್ಲ ಉಪಾಧ್ಯಾಯರಿಗೂ ನನ್ನ ಮನದಾಳದಿಂದ ನಮಸ್ಕಾರಗಳು.
Super
ReplyDeleteನಿಮ್ಮ ಮಂತ್ರಿ ಪದವಿ ಕತೆ ಸ್ವಾರಸ್ಯಕರವಾಗಿದೆ
ReplyDelete