ಈಜು ಕಲಿಸಿದ ರಾಮಲಿಂಗಣ್ಣಯ್ಯ

  

”ಈಜಕ್ಕೆ ಬರಲ್ವಾ...?” ಅಂತ ಪ್ರಶ್ನೆ ಕೇಳಿದಾಗ ಇಲ್ಲ ಅನ್ನುವುದು ಅವಮಾನಕರ ಅನ್ನುವ ಪ್ರತೀತಿ ಇತ್ತು- ನಾನು ಹಳ್ಳಿಯಲ್ಲಿದ್ದಾಗ. ಹಾಗಾಗಿ ನಾನು ಈಜು ಕಲಿಯಲು ಶುರುಮಾಡಿದ್ದು ಪ್ರಾಯಶಃ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾಗ. ಬೇಸಿಗೆಯ ರಜಾ ಇನ್ನೇನು ಶುರು ಅಂದಾಗ, ನಮ್ಮಪ್ಪ ಹೇಳಿದ್ದು ಅವರ ಸ್ನೇಹಿತ ರಾಮಲಿಂಗಾಚಾರ್ಯ ಅವರ ಹೆಸರು...... ನಮಗೆಲ್ಲಾ ಅವರು "ರಾಮಲಿಂಗಣ್ಣಯ್ಯ" ಎಂದೆ ಪರಿಚಿತರು.
ರಾಮಲಿಂಗಣ್ಣಯ್ಯ ಇದ್ದದ್ದು ನಮ್ಮ ಮನೆಯ ಮುಂದೆ.. ಬಹಳ ಸಲ ಬೆಳ್ಳಂಬೆಳಗ್ಗೆಯೇ ಅವರ ಹಾಡು ಶುರು... ಅದಕ್ಕೆ ನಮ್ಮಪ್ಪನ ವ್ಯಾಖ್ಯಾನ.... ಉದಯರಾಗ ಶುರುವಾಯಿತು ಎಂದು.
ರಾಮಲಿಂಗಣ್ಣಯ್ಯ ವೃತ್ತಿಯಲ್ಲಿ ಅಕ್ಕಸಾಲಿಗರು- ಚಿನ್ನ ಬೆಳ್ಳಿಯ ಕೆಲಸಗಾರರು. ತಮ್ಮದೇ ಹೊಲಗದ್ದೆಗಳನ್ನು ಹೊಂದಿದ್ದವರು. 
ಸರಿ, ನಮ್ಮ ಪಟಾಲಮ್ಮು ( ನಾನು ನನ್ನಣ್ಣ ಸತ್ತಿ, ಮುಕುಂದ, ಮೂರ್ತಿ ಹಾಗೂ ಇತರರು) ರಾಮಲಿಂಗಣ್ಣಯ್ಯನ ಹಿಂದೆ ಬಿದ್ದೆವು. ದಿನ ಬೆಳಗ್ಗೆ ಸಾಯಂಕಾಲ ಅವರನ್ನು  ಕಾಡಿಸುವುದು ಪೀಡಿಸುವುದು.. ಅವರು ಕೆಲಸ ಮಾಡುತ್ತಿದ್ದರೆ ಸಣ್ಣಪುಟ್ಟ ಸಹಾಯ ಮಾಡುವುದು, ತಿದಿ ಒತ್ತುವುದು, ಅವರಿಗೆ ಬೀಡಿ ತಂದು ಕೊಡುವುದು, ಹೀಗೆ ಅವರ ಮನಮೆಚ್ಚಿಸಲು ಮಾಡುತ್ತಿದ್ದ ಕೆಲಸಗಳು. ತುಂಬಾ ಕಾಡಿಸಿದಾಗ " ಅಸ್ಸಿಸ್ಸಿ.... ಹೋಗಯ್ಯ ಅತ್ತಾಗೆ" ಅಂತ ಬೈಸಿಕೊಂಡದ್ದು ಉಂಟು. ಏನೇ ಆದರೂ ನಮ್ಮ ಉತ್ಸಾಹಕ್ಕೆ ಭಂಗ ಬರಲಿಲ್ಲ. ಅಂತೂ ಕೊನೆಗೊಂದು ದಿನ  " ತೊಗೊಳ್ರಯ್ಯ ಹಗ್ಗ" ಅಂತ ಹೇಳಿದ್ದೆ ತಡ ನಮ್ಮ ಉತ್ಸಾಹ ಹೇಳ ತೀರದು. ನೀರು ಸೇರುವ ಹಗ್ಗವನ್ನು ಹೆಗಲಿಗೇರಿಸಿ ರಾಮಲಿಂಗಣ್ಣಯ್ಯನ ಹಿಂದೆ (ಅವರು ಪಂಚೆ ಮೇಲೆ ಕಟ್ಟಿ ಹೊರಟ ಚಿತ್ರಣ ನನ್ನ ಕಣ್ಣ ಮುಂದಿದೆ) ನಡೆದೆವು ಭಾವಿಯ ಕಡೆಗೆ.
ನೀರಿಗೆ ಬೀಳಲು ತಯಾರಿಯಾಗಿ ಬಟ್ಟೆಗಳನ್ನು ಬಿಚ್ಚಿ ನಿಂತಾಯಿತು..." ಏನಯ್ಯಾ.. ಬರಿ ಮೈಯಲ್ಲಿ ನಿಂತೆ, ಲಂಗೋಟಿ ಹಾಕ್ಕೋಬೇಕು ಗೊತ್ತಾಯ್ತಾ" ಇದು ರಾಮಲಿಂಗಣ್ಣಯ್ಯನ ಉವಾಚ. ಈಗ ಯೋಚಿಸಿದಾಗ ನಗೆ ಬರುತ್ತೆ... ಆಗ ನನ್ನ ವಯಸ್ಸು.. ಅಲ್ಲಿನ ಪರಿಸರ ಬರೀ ಮೈಯಲ್ಲಿ ನಿಲ್ಲಲು ಯಾವುದೇ ಸಂಕೋಚ ಇರಲಿಲ್ಲ. ಹಗ್ಗವನ್ನು ಹೊಟ್ಟೆಯ ಸುತ್ತ ಕಟ್ಟಿ.. ನೀರಿಗೆ ಬೀಳಲು ಹೇಳಿದಾಗ ನನಗೆ ಎಲ್ಲಿಲ್ಲದ ಭಯ... ಎಷ್ಟು ಪುಸಲಾಯಿಸಿದರೂ... ನೀರಿಗೆ ಬೀಳಲು ಮುಂದಾಗಲಿಲ್ಲ.. ನನ್ನಷ್ಟಕ್ಕೆ ನನ್ನನ್ನು ಬಿಟ್ಟು ಸುಮ್ಮನಿದ್ದ ರಾಮಲಿಂಗಣ್ಣಯ್ಯ ಯಾವುದೋ ಮಾಯೆಯಲ್ಲಿ ನನ್ನನ್ನು ಎತ್ತಿ ಭಾವಿಗೆ ಎಸೆದರು... ನನಗೆ ತಿಳಿಯುವಷ್ಟರಲ್ಲಿ ನೀರಲ್ಲಿ ಮುಳುಗಿದ್ದೆ... ಹಗ್ಗ ಎಳೆದರು ನಾನು ಮೇಲಿದ್ದೆ... ನನಗೆ ಅಳು...( ಕೋಪವೂ ಇತ್ತ ?).. ಹೀಗೆ ಹಗ್ಗವನ್ನು ಬಿಡುವುದು ಮುಳುಗಿದಾಗ ಮೇಲೆ ಎಳೆಯುವುದು...ಕೈಕಾಲು ಝಾಡಿಸುವುದು... ನಂತರ ಹೇಗೋ ಅಂದಿನ ಕಲಿಕೆ ಮುಗಿಯಿತು. ಮುಂದಿನ ದಿನಗಳಲ್ಲಿ ರಾಮಲಿಂಗಣ್ಣಯ್ಯ ನಮಗೆ ಈಜಲು ಕಲಿಸಿದರು.
   " ಗುರುದಕ್ಷಿಣೆ ತಗೊಂಬನ್ರಯ್ಯಾ" ಅಂತ ಹೇಳಿದ್ದು ಗೊತ್ತು.. ಕೊಟ್ಟಿದ್ದೇನೂ ನೆನಪಿಲ್ಲ.
ನಂತರದ ದಿನಗಳಲ್ಲಿ ನಾವುಗಳೇ ಹೋಗಲು ಮನೆಯಲ್ಲಿ ಅನುಮತಿ ಸಿಕ್ಕಿ, ಬೇಸಿಗೆ ರಜದ ದಿನಗಳು ಬಹಳಷ್ಟು ಸಮಯ ಭಾವಿಯ ಬಳಿಯೇ ಕಳೆಯುತ್ತಿತ್ತು.
ಭಾವಿ ಸಮೀಪಿಸುತ್ತಿದ್ದಂತೆ  ಚಡ್ಡಿ ಶರ್ಟ್ ಅನ್ನು ಕಿತ್ತೊಗೆದು ಅಲ್ಲಿಯೇ ಇದ್ದ ಯಾವುದೋ ಬಟ್ಟೆಯ ತುಂಡನ್ನು ಲಂಗೋಟಿಯಂತೆ ಕಟ್ಟಿ ನೀರಿಗೆ ಬೀಳುವುದು... ಕೆಲಸಲ ಬಟ್ಟೆಯ ತುಂಡು ಸಿಗದಿದ್ದರೆ ಗೊಮ್ಮಟೇಶ್ವರನ ಈಜು. 

ಈಜಿನ ಮಧ್ಯದಲ್ಲಿ ಸುಸ್ತು ಆದಾಗ.. ಭಾವಿಯ ಬಳಿಯ ಕಲ್ಲು ಚಪ್ಪಡಿಯ ಮೇಲೆ ಬೋರಲು ಮಲಗಿಕೊಂಡು ಬೇರೆಯವರು ಈಜುವುದನ್ನು ನೋಡುವುದು ಹಾಗೆ ಬಿಸಿಲು ಕಾಯಿಸುವುದು.
ಈಜಾಟದ ಸಮಯದಲ್ಲಿ... ಒಂದು ನಾಣ್ಯವನ್ನು ಎಸೆದು ಅದರ ಜೊತೆ ಮೇಲಿಂದ ಧುಮುಕಿ ಅದನ್ನು ಹಿಡಿದು ಮೇಲೆ ತರುವುದು ಒಂದು ಆಟ. ಹಾಗೆ ಭಾವಿಯ ತಳದಿಂದ ಮಣ್ಣನ್ನು ತರುವುದೂ ಒಂದು ಸಾಹಸ. ಕೆಲ ಗಟ್ಟಿಗರು ನನ್ನಂತಹ ಚಿಕ್ಕವರನ್ನು ನೀರೊಳಗೆ ಅದುಮಿ ಖುಷಿ ಪಟ್ಟವರೂ ಉಂಟು. ಇನ್ನು ದೊಡ್ಡವರಾಟ.. ನೀರೊಳಗೆ ಅದುಮಿ ಅವರ ಹೆಗಲ ಮೇಲೆ ತಮ್ಮ ಕಾಲನಿಟ್ಟು ಒತ್ತಿ ಮುಳುಗಿಸುವುದು. ಮತ್ತೊಂದು ಆಟ ನೀರಲ್ಲಿ ಯಾರು ಜಾಸ್ತಿ ಹೊತ್ತು ಮುಳುಗುತ್ತಾರೆ ಎನ್ನುವ ಲೆಕ್ಕ.. ಇದರಲ್ಲಿ ತಮಗೆ ಬೇಕಾದವರ ಪರವಾಗಿ ತಪ್ಪು ಎಣಿಸುವುದೂ ಒಂದು ಪ್ರಯೋಗವಾಗಿತ್ತು.
ಈಜಿನ ಮಧ್ಯೆ ಮಾವಿನ ಗಿಡದಿಂದ ಕಾಯಿಗಳನ್ನು ಕಿತ್ತು ಕಲ್ಲಿನಿಂದ ಜಜ್ಜಿ, ಮೆಣಸಿನಕಾಯಿ ಪುಡಿ ಉಪ್ಪು ಬೆರೆಸಿ ತಿನ್ನುವುದು ಒಂದು ಮೋಜು. ( ಈಗಲೂ ಬಾಯಲ್ಲಿ ನೀರೂರುತ್ತಿದೆ).
ಇನ್ನು ಕೆಲ ಎಚ್ಚರಿಕೆಗಳು ನಮಗಿತ್ತು... ಮೊದಲು ಬಾವಿಗೆ ಧುಮುಕಬಾರದು... ಕಲ್ಲೆಸೆದು ನಂತರ ಧುಮುಕಬೇಕು.. ಯಾಕೆಂದರೆ ಹಾವುಗಳು ಇದ್ದರೆ ಅವು ಆಚೆ ಸುಳಿಯುವುದಿಲ್ಲ. ಎರಡನೆಯದು ಅಪರಿಚಿತ ಭಾವಿಯಲ್ಲಿ ಈಜುವಾಗ ಪರೀಕ್ಷಿಸಿ, ಯಾವುದೇ ಬಿದಿರಿನ ಬೊಂಬುಗಳು ಅಥವಾ ಮರದ ತುಂಡುಗಳು ಇಲ್ಲ ಎಂದು ಖಚಿತಪಡಿಸಿಕೊಂಡು ಧುಮುಕಬೇಕು... ಇಲ್ಲವಾದರೆ ಅದು ನಮ್ಮ ಶರೀರಕ್ಕೆ ಚುಚ್ಚಿ ಅಪಾಯವಾಗಬಹುದು... ನಿಜಕ್ಕೂ ಇದು ಅನುಭವದಿಂದ ಬಂದ ಎಚ್ಚರಿಕೆಗಳು.

ಈಜು ಎನ್ನುವುದು ನಮ್ಮ ಜೀವನದುದ್ದಕ್ಕೂ ಉಪಯೋಗಕ್ಕೆ ಬರುವ ಒಂದು ವಿದ್ಯೆ... ಅದು ಮರೆಯದ ವಿದ್ಯೆಯೂ ಹೌದು.. ಅಂತಹ ವಿದ್ಯೆಯನ್ನು ಕಲಿಸಿದ ರಾಮಲಿಂಗಣ್ಣಯನಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು....

ನನ್ನ ಜೀವನದ ಸ್ಪೂರ್ತಿದಾಯಕರು ತುಂಬಾ ಜನ...
ಎಂದರೋ ಮಹಾನುಭಾವಲು... ಅಂದರಿಕಿ.. ವಂದನ ಮುಲು......

Comments

  1. Ramalingannaiah ge jai

    ReplyDelete
  2. ಓದ್ತಾ ಇದ್ದರೆ ನಮ್ಮ ಬಾಲ್ಯದ ದಿನಗಳ ನೆನಪಾಯಿತು

    ReplyDelete

Post a Comment

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ