ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ

 ಪ್ರಕೃತಿಯ ಕೋಪ - ಮನುಷ್ಯನಿಗೆ ಶಾಪ

ಈ ಕೆಳಗಿರುವ ವಿಡಿಯೋ ಲಿಂಕ್ ಅನ್ನು ಓಪನ್ ಮಾಡಿ ನೋಡಿ. ಇದು ವಾಟ್ಸಪ್ ಮೂಲಕ ಬಂದ ಒಂದು ವಿಡಿಯೋ ತುಣುಕು.

https://drive.google.com/file/d/19oncxtl8jndBDDrjkXBbzYss06nW-kxD/view?usp=drivesdk

    ಇದು ಇಂಡೋನೇಷ್ಯಾದಲ್ಲಿ ಆದ ಭೂಕಂಪವನ್ನು ಸ್ಯಾಟಿಲೈಟ್ ಮೂಲಕ ತೆಗೆದ ಚಿತ್ರಣ. ಇದರಲ್ಲಿ ಸಾಲು ಸಾಲು ಮನೆಗಳು ಕೊಚ್ಚಿಕೊಂಡು ಹೋಗುವ ದೃಶ್ಯ ಮನ ಕಲಕುವಂತಿದೆ. ವಿಡಿಯೋ ಚಿತ್ರಣ ತುಂಬಾ ಸ್ಪಷ್ಟವಾಗಿ ಕಾಣುತ್ತದೆ.

ಇಲ್ಲಿ ನನಗೆ ಕಂಡದ್ದು ಪ್ರಕೃತಿಯ ಕೋಪದ ಒಂದು ಮುಖ ಹಾಗೂ ಮನುಷ್ಯನು ಸಾಧಿಸಿರುವ ಟೆಕ್ನಾಲಜಿಯ ಆವಿಷ್ಕಾರದ ಇನ್ನೊಂದು ಮುಖ. ವಿಪರ್ಯಾಸ ಎಂದರೆ ಈ ಪ್ರಕೃತಿಯ ಕೋಪಕ್ಕೆ ಕಾರಣ ಬಹುತೇಕ ಮನುಷ್ಯನ ದುರಾಸೆ... ಹಾಗೂ ಅವನು ಪ್ರಕೃತಿಯ ಮೇಲೆ ಮಾಡುತ್ತಿರುವ ಹಲ್ಲೆ.. ಹಾಗೆ ಮನುಷ್ಯನು ತನ್ನ ಜ್ಞಾನ/ ವಿಜ್ಞಾನ ಬೆಳವಣಿಗೆಯ ಸಹಾಯದಿಂದ ತನ್ನಿಂದಾದ ಅನಾಹುತವನ್ನು ತಾನೇ ಚಿತ್ರಣ ಮಾಡಿ ಜಗತ್ತಿಗೆ ತೋರಿಸುತ್ತಿರುವ ಪರಿ.

ಮನುಷ್ಯನ ಜೀವನವು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಜೊತೆಗೆ ಬೆಸೆದುಕೊಂಡಿದೆ. ನೀರು, ಗಾಳಿ, ಕಾಡುಗಳು, ಭೂಗರ್ಭದಲ್ಲಿರುವ ಖನಿಜಗಳು, ಇವೆಲ್ಲವೂ ಮನುಷ್ಯನ ಬೆಳವಣಿಗೆಗೆ ಪೂರಕವಾಗಿವೆ. ಮನುಷ್ಯ ಇದನ್ನು ಅತಿಯಾಗಿ ಬಳಸಿ ಸಮತೋಲನವನ್ನು ಹಾಳು ಮಾಡಿ ತನ್ನ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ.

ಕಾಡನ್ನು ಕಡಿದು ನಾಡನ್ನು ಮಾಡುವ ಕೆಲಸ ಇಂದು ನೆನ್ನೆಯದಲ್ಲ.. ಮಹಾಭಾರತದ ಕಾಲದಿಂದಲೂ ಬಂದದ್ದು. ಪಾಂಡವರು  ಖಾಂಡವ ವನವನ್ನು ಸುಟ್ಟು ಅಲ್ಲಿ ತಮ್ಮ ಇಂದ್ರಪ್ರಸ್ಥ ನಗರವನ್ನು ಕಟ್ಟಿದರು. ಅಸಂಖ್ಯಾತ ಜೀವ ಪ್ರಭೇದಗಳು ಹಾಗೂ ನಾಗಗಳು ತಮ್ಮ ಜೀವವನ್ನು ಹಾಗೂ ವಾಸಸ್ಥಾನವನ್ನು ಕಳೆದುಕೊಂಡವು. ಇದು ಈಗಲೂ ಮುಂದುವರೆದಿದೆ. ಕೈಗಾರಿಕೀಕರಣ ಪರಿಸರದ ಮೇಲಿನ ಹಲ್ಲೆಯನ್ನು ಜಾಸ್ತಿ ಮಾಡಿದೆ.

ಮಾನವನ ಉಪಯೋಗಕ್ಕಾಗಿ ನದಿಗೆ ಅಡ್ಡಲಾಗಿ ಕಟ್ಟಿದ ದೊಡ್ಡ ದೊಡ್ಡ ಅಣೆಕಟ್ಟುಗಳು ಲಕ್ಷಾಂತರ ಎಕರೆ ಜಾಗವನ್ನು ಮುಳುಗಡೆ ಮಾಡಿ ಅಲ್ಲಿನ ಜೀವ ವೈವಿಧ್ಯ, ಸಸ್ಯ ವೈವಿಧ್ಯ ವನ್ನು ನಾಶ ಮಾಡಿದೆ. ಹೀಗಾಗಿ ಭೂಮಿಯ ಪದರದ ಮೇಲಿನ ಒತ್ತಡಗಳು ಬದಲಾವಣೆಯಾಗಿ ಭೂಕಂಪಗಳು ಸಂಭವಿಸಿದ ಉದಾಹರಣೆಗಳು ಇವೆ. ಮಾನವನ ಯಾವ ಮಟ್ಟದ ಜಾಣ್ಮೆಯಿಂದಲೂ, ಅವನು ಪ್ರಕೃತಿಯನ್ನು ನಿಯಂತ್ರಿಸಲಾರ. ಪ್ರಕೃತಿ ತನ್ನ ಶಕ್ತಿ  ಯನ್ನು ತೋರಿಸಿಯೇ ಬಿಡುತ್ತದೆ. ಅದನ್ನು ನಾವುಗಳು ಅನುಭವಿಸಿಯೇ ತೀರಬೇಕು.

ಇಂತಹ ಸಂದರ್ಭಗಳಲ್ಲಿ ಹಾಗೂ ವರ್ಷಕ್ಕೊಮ್ಮೆ ಆಚರಿಸುವ ಕೆಲ ಕಾರ್ಯಕ್ರಮಗಳಲ್ಲಿ ನಾವು ಪರಿಸರದ ಕಾಳಜಿಯನ್ನು ಪ್ರದರ್ಶಿಸುತ್ತೇವೆ ಹಾಗೂ ಪ್ರಮಾಣ ಸ್ವೀಕರಿಸುತ್ತೇವೆ.

ಮುಂದಿನ ಜೀವನ ಹಾಗೂ ಕೆಲಸ ಕಾರ್ಯಗಳು ಎಂದಿನಂತೆ ಪರಿಸರಕ್ಕೆ ಮಾರಕವಾಗಿಯೇ ಇರುತ್ತವೆ.

" ಈ ಭೂಮಿ ನಮ್ಮದಲ್ಲ ನಮ್ಮ ಮುಂದಿನ ಪೀಳಿಗೆಯದು ನಾವು ಅದರ ಪಾಲಕರು ಮಾತ್ರ" ಇದು ನಾವು ಆಗಾಗ್ಗೆ ಕೇಳುವ ಮಾತು ಆದರೆ ನಾವು ಪಾಲಕರ ಹೊಣೆಯನ್ನು ಮರೆತು ಭಂಜಕರಾಗುತ್ತಿದ್ದೇವೆ.

ಈಗೀಗ ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿಯನ್ನು ಹೇಳಿಕೊಡುತ್ತಿದ್ದೇವೆ ಆದರೆ ನಾವುಗಳು ಮಾದರಿಯಾಗಿಲ್ಲ.. ಇದು ಅವರ ಮೇಲೆ ಹೇಗೆ ಸರಿಯಾದ ಪರಿಣಾಮ ಬೀರಬಲ್ಲದು?

ಬದಲಾವಣೆ ಜಗದ ನಿಯಮ.. ನಾವು ಬದಲಾಗಬೇಕು... ಮುಂದಿನ ಪೀಳಿಗೆಗೆ ಮಾದರಿಯಾಗಬೇಕು... ಪ್ರಯತ್ನಿಸೋಣವೇ?



Comments

Popular posts from this blog

ಹಿಂದು ಮುಂದಾದರೂ ಒಂದಾಗಬೇಕು

ಅಪಘಾತ- ಸಾವು- ನೋವು

ಅಜ್ಜಿ ತಾತ - ಪ್ರೀತಿಯ ಸ್ರೋತ